ಲಖಿಂಪುರ್ ಖೇರಿಯಲ್ಲಿ ನಡೆದ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿಗೆ ವಕೀಲರು ಪತ್ರ ಬರೆದಿದ್ದಾರೆ.
ಭಾನುವಾರ ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ರೈತರು ಮತ್ತು ಸ್ಥಳೀಯ ಪತ್ರಕರ್ತರು ಸೇರಿದಂತೆ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ. ಕೇಂದ್ರ ಸಚಿವ ಅಜಯ್ ಮಿಶ್ರಾ ತೆನಿ ಅವರ ಮಗ ಆಶಿಶ್ ಮಿಶ್ರಾ ಕಾರು ಹರಿಸಿ ನಾಲ್ವರು ರೈತರನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಅವರ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ.
ಘಟನೆ ಸಂಬಂಧ ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಅವರಿಗೆ ಪತ್ರ ಬರೆದಿರುವ ಉತ್ತರ ಪ್ರದೇಶದ ವಕೀಲರು, ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡ: ಮೃತ ಪತ್ರಕರ್ತನನ್ನು ಬಿಜೆಪಿ ಕಾರ್ಯಕರ್ತ ಎಂದು ಪಟ್ಟಿ ಮಾಡಿದ್ದ ಸಚಿವ!
ಭಾನುವಾರ ನಡೆದ ಘಟನೆಯಲ್ಲಿ ಭಾಗಿಯಾದ ಸಚಿವರ ವಿರುದ್ಧ ಎಫ್‌ಐಆರ್ ಮತ್ತು ಶಿಕ್ಷೆ ನೀಡುವಂತೆ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ.
ರೈತ ಮುಖಂಡ ರಾಕೇಶ್ ಟಿಕಾಯತ್ ಮತ್ತು ರಾಜ್ಯ ಪೊಲೀಸರ ನಡುವೆ ನಡೆದ ಸಂಧಾನದ ನಂತರ ಘಟನೆಯಲ್ಲಿ ಮೃತಪಟ್ಟ ಮೂವರು ರೈತರ ಕುಟುಂಬಗಳು ಮೃತರ ಅಂತ್ಯಸಂಸ್ಕಾರ ನಡೆಸಿವೆ. ಗುಂಡೇಟಿನಿಂದ ಗಾಯಗೊಂಡು ಮೃತಪಟ್ಟ ನಾಲ್ಕನೇ ರೈತನ ಮೃತದೇಹವನ್ನು ಎರಡನೇ ಬಾರಿ ಮರಣೋತ್ತರ ಪರೀಕ್ಷೆಗೆ ಕಳುಹಿಸುವ ಸಾಧ್ಯತೆಯಿದ್ದು,, ಮರಣೋತ್ತರ ಪರೀಕ್ಷೆಯನ್ನು ದೆಹಲಿ ಆಸ್ಪತ್ರೆಯಲ್ಲಿ ಮಾಡಬೇಕೆಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.
ಮೃತ ಎಂಟು ರೈತರು ಗಂಭೀರ ಗಾಯಗಳು, ಆಘಾತ ಮತ್ತು ಮೆದುಳಿನ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಮತ್ತು ಪಕ್ಷದ ಸಹೋದ್ಯೋಗಿ ದೀಪೇಂದರ್ ಸಿಂಗ್ ಹೂಡಾ ಇನ್ನೂ ಬಂಧನದಲ್ಲಿದ್ದಾರೆ. ಅವರನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಆರೋಪಿಸಲಾಗಿದೆ.
“ರೈತರ ಮೇಲೆ ನಿರ್ದಯವಾಗಿ ಕಾರು ಹತ್ತಿಸಿದವರು ಆರಾಮಾವಾಗಿಓಡಾಡುತ್ತಿದ್ದಾರೆ. ಆದರೆ, ನಾವು 36 ಗಂಟೆಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದೇವೆ. ರೈತ ಕುಟುಂಬಗಳು ದುಖಃದಲ್ಲಿ ಶೋಕಿಸುತ್ತಿವೆ ಮತ್ತು ಲಕ್ನೋದಲ್ಲಿ ಸಂಭ್ರಮಾಚರಣೆಗಳಿವೆ” ಎಂದು ದೀಪೇಂದರ್ ಸಿಂಗ್ ಹೂಡಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಕೇಂದ್ರ ಸಚಿವನ ಮಗ ರೈತರ ಮೇಲೆ ಕಾರು ಹರಿಸಿ ನಾಲ್ವರನ್ನು ಕೊಂದ ಘಟನೆ ದೇಶಾದ್ಯಂತ ಆಕ್ರೋಶ ಹುಟ್ಟಿಸಿದೆ. ಅದು ವಿಡಿಯೋದಲ್ಲಿ ದಾಖಲಾಗಿದೆ ಎಂದು ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ..
ನಾನುಗೌರಿ.ಕಾಂ ಈ ವಿಡಿಯೋವನ್ನು ಪರಿಶೀಲಿಸಲು ಯತ್ನಿಸುತ್ತಿದೆ..#FarmersProtest #lakhimpurKheri pic.twitter.com/WzHafGKnWn
— Naanu Gauri (@naanugauri) October 5, 2021


