ಕೇಂದ್ರ ಸರ್ಕಾರದ ’ಸರ್ಕಾರಿ ಆಸ್ತಿ ನಗದೀಕರಣ’ (ನ್ಯಾಷನಲ್ ಮಾನಿಟೈಸೆಶನ್ ಪೈಪ್‌ಲೈನ್ – NMP) ಯೋಜನೆ ವಿರುದ್ದ ಅಸಾಮಾಧಾನವನ್ನು ವ್ಯಕ್ತಪಡಿಸಿರುವ ಕಾಂಗ್ರೆಸ್ ವಿರುದ್ಧ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಿಡಿ ಕಾರಿದ್ದಾರೆ.
ಬಿಜೆಪಿಯು ದೇಶದ ಸಾರ್ವಜನಿಕ ಆಸ್ತಿಯನ್ನು ಮಾರಾಟ ಮಾಡುತ್ತಿದೆ ಎಂದು ಕಾಂಗ್ರೆಸ್ ಹೇಳಿದ್ದು ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ಪಕ್ಷದ ಡಿಎನ್ಎಯಲ್ಲಿಯೇ “ಲೂಟಿ” ಇದೆ ಎಂದು ಆರೋಪಿಸಿದ್ದಾರೆ.
ಛತ್ತೀಸ್‌ಗಢ ರಾಜಧಾನಿ ರಾಯ್ಪುರದಲ್ಲಿ ಮಾತನಾಡುತ್ತಿದ್ದ ಸೀತಾರಾಮನ್ , “ಲೂಟಿಯು ಕಾಂಗ್ರೆಸ್‌ನ ಮನಸ್ಸಿನಿಂದ ಹೊರಹೋಗುವುದಿಲ್ಲ. ಅವರ ಆಳ್ವಿಕೆಯಲ್ಲಿ ಸ್ಪೆಕ್ಟ್ರಮ್, ಗಣಿ, ನೀರು ಮತ್ತು ಎಲ್ಲಾ ವಲಯದಲ್ಲೂ ಲೂಟಿ ಹರಡಿಕೊಂಡಿತ್ತು” ಎಂದು ಹೇಳಿದ್ದಾರೆ.
ಇದುವರೆಗೂ ಉಪಯೋಗವಾಗಿಲ್ಲದ ಅಥವಾ ಹೆಚ್ಚು ಉಪಯೋಗಕ್ಕೆ ಬಂದಿಲ್ಲದ ಸರ್ಕಾರದ ಆಸ್ತಿಗಳ ನಿರ್ವಹಣೆಯನ್ನು ಖಾಸಗಿಯವರಿಗೆ ಕೊಟ್ಟು, ಅವರಿಂದ ಮುಂದಿನ ನಾಲ್ಕು ವರ್ಷಗಳಲ್ಲಿ 6 ಲಕ್ಷ ಕೋಟಿ ರೂ ಶುಲ್ಕ ಸಂಗ್ರಹಿಸುತ್ತೇವೆ ಎಂದು ಈವರ್ಷದ ಆಗಸ್ಟ್‌ನಲ್ಲಿ ನ್ಯಾಷನಲ್ ಮಾನಿಟೈಸೆಶನ್ ಪೈಪ್‌ಲೈನ್ ಯೋಜನೆಯನ್ನು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಇದನ್ನೂ ಓದಿ: ಭಾರತ ಮಾರಾಟಕ್ಕಿದೆ: ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣದ ಕುರಿತು ಗಮನ ಸೆಳೆದ ಕಾರ್ಟೂನ್‌ಗಳು
ಈ ಯೋಜನೆ ಬಗ್ಗೆ ಟೀಕೆ ವ್ಯಕ್ತಪಡಿಸಿರುವ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ವಿತ್ತ ಸಚಿವೆ, “ಜನರಿಗೆ ಸೇವೆ ಮಾಡವ ಹೊರತಾಗಿಯೂ, ಕಾಂಗ್ರೆಸ್ ನಾಯಕ ಕೇವಲ ಅಧಿಕಾರದಲ್ಲಿ ಉಳಿಯುವತ್ತ ಗಮನ ಹರಿಸಿದ್ದಾರೆ. ಕಾಂಗ್ರೆಸ್ ಜನರ ಆಶೀರ್ವಾದದಿಂದ ಪಡೆಯುವ ಬಹುಮತವನ್ನು ನಿಭಾಯಿಸಲು ಸಾಧ್ಯವಾಗಿಲ್ಲ. ಅವರ ಶಾಸಕರು ದೆಹಲಿಗೆ ಭೇಟಿ ನೀಡುತ್ತಿದ್ದಾರೆ. ಆದರೆ, ಮುಖ್ಯಮಂತ್ರಿಗಳು ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳುತ್ತಿದ್ದಾರೆ” ಎಂದು ಕೇಂದ್ರ ಸಚಿವೆ ವ್ಯಂಗ್ಯವಾಡಿದ್ದಾರೆ.
ಮಂಗಳವಾರ ಕೂಡ ಇಂಧನ ಬೆಲೆಗಳು ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದು, ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಅಂತರಾಷ್ಟ್ರೀಯ ತೈಲ ದರಗಳ ಮೇಲೆ ಅವಲಂಬಿತವಾಗಿವೆ ಎಂದು ಸೀತಾರಾಮನ್ ಹೇಳಿದ್ದಾರೆ.
“ದೇಶವು ತನಗೆ ಅಗಶ್ಯವಿರುವ ಪೆಟ್ರೋಲ್ ಮತ್ತು ಡೀಸೆಲ್‌ನ ಶೇ.99 ರಷ್ಟು ಭಾಗವನ್ನು ಆಮದು ಮಾಡಿಕೊಳ್ಳಬೇಕಾಗಿತ್ತು. ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಹೆಚ್ಚುತ್ತಿರುವ ವೆಚ್ಚದ ಸಮಸ್ಯೆಯನ್ನು ನಿಭಾಯಿಸಬೇಕಾಗಿದೆ” ಎಂದು ಹೇಳಿದ್ದಾರೆ. ಜೊತೆಗೆ ಏರುತ್ತಿರುವ ಇಂಧನ ಬೆಲೆಗಳು ಸಾಮಾನ್ಯ ಜನರ ಮೇಲೆ ಆರ್ಥಿಕ ಹೊರೆ ಹೆಚ್ಚಿಸಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಬಡ – ಮಧ್ಯಮ ವರ್ಗವನ್ನು ಮತ್ತಷ್ಟು ಹಿಂಡಲಿರುವ ನ್ಯಾಷನಲ್ ಮಾನಿಟೈಸೇಶನ್ ಪೈಪ್‌ಲೈನ್ – NMP ಯೋಜನೆ


