ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಗುರುವಾರ ಲಖಿಂಪುರ್ ಖೇರಿಗೆ ಪಾದಯಾತ್ರೆ ಆರಂಭಿಸಿದ್ದಾರೆ. ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ತೇನಿ ಅವರ ಮಗನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಅಜಯ್ ಮಿಶ್ರಾ ತೇನಿ ಮಗ ಆಶಿಶ್ ಮಿತ್ರಾನನ್ನು ಬಂಧಿಸದಿದ್ದರೆ ನಾಳೆಯಿಂದ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಉತ್ತರಪ್ರದೇಶದ ಲಖಿಂಪುರ್‌ಗೆ ಪಾದಯಾತ್ರೆ ನಡೆಸುತ್ತಿರುವಾಗ ಕಾಂಗ್ರೆಸ್ ನಾಯಕ, “ಆರೋಪಿಗಳನ್ನು ಬಂಧಿಸದಿದ್ದರೆ, ಅಜಯ್ ಮಿಶ್ರಾ ತೇನಿ ಅವರ ಮಗ ನಾಳೆಯೊಳಗೆ ತನಿಖೆಗೆ ಸಹಕರಿಸದಿದ್ದರೆ, ನಾನು ಉಪವಾಸ ಸತ್ಯಾಗ್ರಹ ಮಾಡುತ್ತೇನೆ” ಎಂದು ಹೇಳಿದ್ದಾರೆ.
ಭಾನುವಾರ ನಡೆದ ಲಖಿಂಪುರ್ ಖೇರಿ ಹತ್ಯಾಕಾಂಡದಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಜೈಲಿನಲ್ಲಿ ಇರಬೇಕಾದವರು ಕಾರ್ಯಕ್ರಮ ಉದ್ಘಾಟಿಸುತ್ತಿದ್ದಾರೆ: ಯೋಗೇಂದ್ರ ಯಾದವ್
#KisanMazdoorEktaZindabad #JittegaKisan pic.twitter.com/LJeyW5FThX
— Navjot Singh Sidhu (@sherryontopp) October 7, 2021
ಲಖಿಂಪುರ್ ಖೇರಿಯ ಮಾರ್ಗದಲ್ಲಿದ್ದ ನವಜೋತ್ ಸಿಂಗ್ ಸಿಧು ನೇತೃತ್ವದ ಮೆರವಣಿಗೆಯನ್ನು ಯಮುನಾ ನಗರ (ಹರಿಯಾಣ)-ಸಹರನ್ ಪುರ್ (ಉತ್ತರ ಪ್ರದೇಶ) ಗಡಿಯಲ್ಲಿ ನಿಲ್ಲಿಸಲಾಗಿದೆ.
ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಮತ್ತು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಲಖಿಂಪುರ್ ಘಟನೆಯಲ್ಲಿ ಮೃತಪಟ್ಟ ನಾಲ್ಕು ರೈತರ ಕುಟುಂಬಕ್ಕೆ ಪ್ರತ್ಯೇಕವಾಗಿ 50 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಹತ್ಯಾಕಾಂಡದಲ್ಲಿ ನಾಲ್ಕು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ ಎರಡು ದಿನಗಳ ನಂತರ ಗಾಯಾಳು ರೈತ ಮುಖಂಡ ಹೇಳಿಕೆ ನೀಡಿದ್ದು, ಪ್ರತಿಭಟನಾಕಾರರ ಮೇಲೆ ಹರಿದ ಕಾರನ್ನು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಚಾಲನೆ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಆದರೆ, ಆಶಿಶ್ ಮಿಶ್ರಾ ರೈತ ಮುಖಂಡರ, ರೈತ ಸಂಘಟನೆಗಳ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ತಾನು ಇರಲಿಲ್ಲ ಎಂದು ವಾದಿಸಿದ್ದಾರೆ. ಸಚಿವ ಅಜಯ್ ಮಿಶ್ರಾ ತೇನಿ ಕೂಡ ತನ್ನ ಮಗ ಸ್ಥಳದಲ್ಲಿ ಇರಲಿಲ್ಲ ಎಂದು ಹೇಳಿದ್ದು, ಕೆಲವರು ಪ್ರತಿಭಟನಾ ನಿರತ ರೈತರೊಂದಿಗೆ ಘರ್ಷಣೆ ಉಂಟಾಗಿ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದು ‘ದುರದೃಷ್ಟಕರ ಘಟನೆ’ಗೆ ಕಾರಣವಾಯಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡ: ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ತನಿಖೆ


