ಉತ್ತರ ಪ್ರದೇಶದ ಲಖಿಂಪುರ್ ಖೇರಿ ಹತ್ಯಾಕಾಂಡದ ಪ್ರಮುಖ ಆರೋಪಿಯಾಗಿರುವ ಒಕ್ಕೂಟ ಸರ್ಕಾರದ ಸಚಿವರ ಪುತ್ರ ಆಶಿಶ್ ಮಿಶ್ರಾರನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಉತ್ತರ ಪ್ರದೇಶದ ನ್ಯಾಯಾಲಯ ಆದೇಶಿಸಿದೆ.
ರೈತರ ಮೇಲೆ ಕಾರು ಹರಿಸಿ ರೈತರ ಹತ್ಯೆಗೆ ಕಾರಣರಾಗಿ, ಬಳಿಕ ನಡೆದ ಹಿಂಸಾಚಾರವೂ ಸೇರಿ ಒಟ್ಟು 8 ಜನರ ಸಾವಿಗೆ ಕಾರಣರಾಗಿರುವ ಆರೋಪದ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಘಟನೆ ನಡೆದು 5 ದಿನಗಳ ಬಳಿಕ ಲಖಿಂಪುರ್ ಖೇರಿಯಲ್ಲಿ 12 ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ , “ಆತ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ, ವಿಚಾರಣೆಗೆ ಸಹಕರಿಸುತ್ತಿಲ್ಲ” ಎಂದು ಹೇಳಿ ಬಂಧಿಸಿದ್ದರು. ಬಳಿಕ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.
ಇದನ್ನೂ ಓದಿ: ಲಿಖಿಂಪುರ್: 2 ನೇ FIR ನಲ್ಲಿ ರೈತರ ಮೇಲೆಯೇ ಆರೋಪ; ರೈತರ ಸಾವಿನ ಬಗ್ಗೆ ಉಲ್ಲೇಖವಿಲ್ಲ!
“ಕಳೆದ ಭಾನುವಾರ ನಡೆದ ಘಟನೆಯ ವೇಳೆ ಸಚಿವರ ಮಗ ಸ್ಥಳದಲ್ಲಿ ಇದ್ದ ಕುರಿತು ಹಲವು ಅಂಶಗಳನ್ನು ವಿವರಿಸಲು ಸಾಧ್ಯವಾಗಿಲ್ಲ. ಆತ ಅಂದು ಮಧ್ಯಾಹ್ನ 2ರಿಂದ 4 ಗಂಟೆಗಳ ನಡುವೆ ಘಟನಾ ಸ್ಥಳದಲ್ಲಿ ಇದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆತನ ಫೋನ್ ಸಿಗ್ನಲ್ ಕೂಡ ಘಟನಾ ಸ್ಥಳದ ಹತ್ತಿರಕ್ಕೆ ತೋರಿಸಿದೆ. ರೈತರನ್ನು ಮೇಲೆ ಹತ್ತಿದ ಎಸ್‌ಯುವಿ ಚಾಲನೆ ಕುರಿತು ಆತ ಹೇಳುತ್ತಿರುವ ವಿವರಣೆಗಳು ಹೊಂದಿಕೆಯಾಗುತ್ತಿಲ್ಲ” ಎಂದು ಉತ್ತರ ಪ್ರದೇಶ ಪೊಲೀಸ್ ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿತ್ತು.
ಅಕ್ಟೋಬರ್ 03 ರಂದು ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಪ್ರತಿಭಟನೆ ಮುಗಿಸಿ ಹಿಂತಿರುಗುತ್ತಿದ್ದ ರೈತರ ಮೇಲೆ, ಒಕ್ಕೂಟ ಸರ್ಕಾರದ ಸಚಿವ ಅಜಯ್ ಮಿಶ್ರಾ ತೇನಿ ಅವರ ಪುತ್ರ ಆಶಿಶ್ ಮಿಶ್ರಾ ಕಾರು ಹರಿಸಿ 4 ರೈತರನ್ನು ಹತ್ಯೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಶಿಶ್ ಮಿಶ್ರಾರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಲಿಖಿಂಪುರ್: ಪ್ರಧಾನ ಆರೋಪಿ ಆಶಿಶ್ ಮಿಶ್ರಾನಿಗೆ 14 ದಿನಗಳ ನ್ಯಾಯಾಂಗ ಬಂಧನ


