ವಿಜಯದಶಮಿಯಂದು (ಅ.15) ಯಾವುದೇ ಉಡುಪಿಯಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ದುರ್ಗಾ ದೌಡ್, ತಲವಾರು, ಆಯುಧಗಳ ಪ್ರದರ್ಶನ ಆಯೋಜಿಸಲಾಗಿತ್ತು. ಅನುಮತಿ ಪಡೆಯದೇ, ಕೊರೊನಾ ನಿಯಮ ಉಲ್ಲಂಘಿಸಿ ಪಾದಯಾತ್ರೆ ನಡೆಸಿದಕ್ಕಾಗಿ ಸಂಘಟನೆಯ ಪ್ರಮುಖರ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಜಯದಶಮಿಯಂದು ಆಡಳಿತದ ಅನುಮತಿಯಿಲ್ಲದೆ ಹಿಂದೂ ಜಾಗರಣ ವೇದಿಕೆಯ ಮುಖಂಡರು ಕಾರ್ಯಕ್ರಮ ಆಯೋಜನೆ ಮಾಡಿದ್ದು, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕೊರೊನಾ ನಿಯಮ ಉಲ್ಲಂಘಿಸಿದ ಹಿನ್ನಲೆ ಎಪಿಡೆಮಿಕ್ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದೆ.
ಉಡುಪಿಯಲ್ಲಿ ಇದೇ ಮೊದಲ ಬಾರಿಗೆ ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ ದುರ್ಗಾ ದೌಡ್ ಕಾರ್ಯಕ್ರಮದಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಿಸಿದ್ದರು. ಕೊರೊನಾ ನಿಯಮ ಉಲ್ಲಂಘನೆ ಹಿನ್ನೆಲೆ ಉಡುಪಿ ನಗರದ ಪೌರಾಯುಕ್ತ ಡಾ.ಉದಯ್ ಕುಮಾರ್ ಶೆಟ್ಟಿ ದೂರಿನ ಮೇರೆಗೆ ನಗರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಪೊಲೀಸರ ಬದಲಾದ ಸಮವಸ್ತ್ರ: ತೀವ್ರ ಖಂಡನೆ, ಆತಂಕ
ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಿಂದ ಅಂಬಾಲಪಾಡಿ ಮಹಾಕಾಳಿ ದೇವಸ್ಥಾನದವರೆಗೆ ಮೆರವಣಿಗೆ ನಡೆಸಲಾಗಿತ್ತು. ಸರ್ಕಾರದ ಆದೇಶದಂತೆ ಒಂದು ಸ್ಥಳದಲ್ಲಿ 400 ಕ್ಕೂ ಅಧಿಕ ಮಂದಿ ಸೇರುವಂತಿಲ್ಲ. ಅಲ್ಲದೇ ಧ್ವನಿವರ್ಧಕ, ಮೆರವಣಿಗೆಗೂ ಅವಕಾಶವಿಲ್ಲ. ನಿಷೇಧಿತ ಸ್ಥಳದಲ್ಲಿ ಮೆರವಣಿಗೆ ಮಾಡುವಂತಿಲ್ಲ. ಆದರೆ, ಮೆರವಣಿಗೆಯಲ್ಲಿ ಸಾವಿರಾರೂ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
![]()
ಮೆರವಣಿಗೆಯಲ್ಲಿ ತಲವಾರ ಆಯುಧ ಪ್ರದರ್ಶನ ಮಾಡಲಾಗಿತ್ತು. ವಾಹನ ಸಂಚಾರಕ್ಕೂ ತಡೆಯೊಡ್ಡಲಾಗಿತ್ತು. ಈ ಕಾರ್ಯಕ್ರಮದ ಮೆರವಣಿಗೆಯಲ್ಲಿ ಇಂಧನ ಸಚಿವ ಸುನಿಲ್ ಕುಮಾರ್, ಶಾಸಕ ರಘುಪತಿ ಭಟ್, ಮಹೇಶ್ ಶೆಣೈ, ಪ್ರಕಾಶ್ ಕುಕ್ಕೆಹಳ್ಳಿ, ವಿಶು ಶೆಟ್ಟಿ ಅಂಬಲಪಾಡಿ ಸೇರಿ ಅನೇಕರು ಭಾಗವಹಿಸಿದ್ದರು.
ಇನ್ನು ನವರಾತ್ರಿಯ ಪೂಜೆಯ ದಿನದಂದು ‘ತ್ರಿಶೂಲ ದೀಕ್ಷೆ’ ಹೆಸರಲ್ಲಿ ಬಿಜೆಪಿ ಬೆಂಬಲಿತ ಸಂಘಟನೆಗಳು ತಮ್ಮ ಕಾರ್ಯಕರ್ತರಿಗೆ ಮಾರಕ ಶಸ್ತ್ರಗಳನ್ನು ಹಂಚಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಪುತ್ತೂರು ಮತ್ತು ಉಡುಪಿ ಜಿಲ್ಲೆಯ ಮಲ್ಪೆ, ಕುಂದಾಪುರದಲ್ಲಿ, ಬಿಜೆಪಿ ಬೆಂಬಲಿತ ಸಂಘಟನೆಗಳಾದ ಬಜರಂಗದಳ ಮತ್ತು ವಿಎಚ್‌ಪಿ ಯುವಕ-ಯುವತಿಯರ ಕೈಗೆ ತ್ರಿಶೂಲದಂತಹ ಶಸ್ತ್ರಗಳನ್ನು ಹಂಚಿದೆ. ಇದರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆಕ್ರೋಶ ವ್ಯಕ್ತವಾಗಿತ್ತು.
ವಿಶ್ವ ಹಿಂದು ಪರಿಷದ್ ಬಜರಂಗದಳ ಉಡುಪಿ ಜಿಲ್ಲೆ ನೇತೃತ್ವದಲ್ಲಿ ಶಸ್ತ್ರ ಪೂಜೆ ಮತ್ತು ತ್ರಿಶೂಲ ದೀಕ್ಷೆ ಕಾರ್ಯಕ್ರಮ ಮಲ್ಪೆ ವಡಭಾಂಡೇಶ್ವರ ಬಲರಾಮ ದೇವಸ್ಥಾನದಲ್ಲಿ ಜರಗಿತು pic.twitter.com/7UAXEIV5CE
— Jayaprakash Prabhu (@jpshirva) October 14, 2021
ಇದನ್ನೂ ಓದಿ: ಕರಾವಳಿ: ಯುವಜನರ ಕೈಗೆ ಶಸ್ತ್ರ ನೀಡಿದ ಬಿಜೆಪಿ ಬೆಂಬಲಿತ ಸಂಘಟನೆ ಬಜರಂಗದಳ


