ಇಸ್ರೇಲ್ ಮೂಲದ NSO ಸಂಸ್ಥೆಯ ಗೂಢಚಾರ ತಂತ್ರಾಂಶವಾದ ಪೆಗಾಸಸ್ ಅನ್ನು ಬಳಸಿಕೊಂಡು ಭಾರತದ ಗಣ್ಯ ವ್ಯಕ್ತಿಗಳು, ರಾಜಕಾರಣಿಗಳು ಮತ್ತು ಪತ್ರಕರ್ತರ ಮೇಲೆ ಕಣ್ಗಾವಲು ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಬುಧವಾರ ತಜ್ಞರ ಸಮಿತಿಯನ್ನು ನೇಮಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಆದೇಶ ಹೊರಡಿಸಿದೆ.
ನಿವೃತ್ತ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಅವರ ಮೇಲ್ವಿಚಾರಣೆಯ ತ್ರಿಸದಸ್ಯ ಸಮಿತಿಯು ಪೆಗಾಸಸ್ ಕುರಿತಾದ ಆರೋಪಗಳನ್ನು ಕೂಲಂಕುಷವಾಗಿ ಮತ್ತು ತ್ವರಿತವಾಗಿ ಪರಿಶೀಲಿಸಿ ನ್ಯಾಯಾಲಯದ ಮುಂದೆ ವರದಿ ಸಲ್ಲಿಸುವಂತೆ ಕೇಳಿದೆ. ಎಂಟು ವಾರಗಳ ನಂತರ ನ್ಯಾಯಾಲಯವು ಪ್ರಕರಣವನ್ನು ಮತ್ತೊಮ್ಮೆ ವಿಚಾರಣೆ ನಡೆಸಲಿದೆ.
ಈ ಕುರಿತು ನಡೆಯುತ್ತಿರುವ ವಿಚಾರಣೆ ವೇಳೆ, “ಪ್ರಕರಣದಲ್ಲಿ ಸರ್ಕಾರದಿಂದ ಅಸ್ಪಷ್ಟ ನಿರಾಕರಣೆ ಸಾಕಾಗುವುದಿಲ್ಲ. ಹೀಗಾಗಿ ಆರೋಪಗಳ ಬಗ್ಗೆ ತನಿಖೆಯಾಗಬೇಕು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತಜ್ಞರ ಸಮಿತಿಯನ್ನು ನೇಮಿಸಲಾಗುತ್ತದೆ” ಎಂದು ಸುಪ್ರೀಂಕೋರ್ಟ್ ಪೀಠ ಹೇಳಿದೆ.
ಇದನ್ನೂ ಓದಿ: ಪೆಗಾಸಸ್ ಹಗರಣ ತನಿಖೆಗೆ ಸಮಿತಿ ರಚನೆ: ಸುಪ್ರೀಂ ಹೇಳಿಕೆ
ಜೊತೆಗೆ ಈ ಆರೋಪಗಳ ಸ್ವರೂಪ ನೋಡಿದರೆ ಇದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ತಿಳಿಸುತ್ತದೆ ಎಂದು ಹೇಳಿದೆ.
“ಪದೇ ಪದೇ ಅವಕಾಶ ನೀಡಿದರೂ ಸರ್ಕಾರ ಸ್ಪಷ್ಟತೆ ನೀಡದ ಸೀಮಿತ ಅಫಿಡವಿಟ್ ನೀಡುತ್ತಿದ್ದಾರೆ. ಅವರು ಸ್ಪಷ್ಟನೆ ನೀಡಿದ್ದರೆ ನಮ್ಮ ಮೇಲಿನ ಹೊರೆ ಕಡಿಮೆಯಾಗುತ್ತಿತ್ತು. ನ್ಯಾಯಾಲಯವು ರಾಷ್ಟ್ರೀಯ ಭದ್ರತೆಯನ್ನು ಅತಿಕ್ರಮಿಸುವುದಿಲ್ಲ. ಆದರೆ, ನ್ಯಾಯಾಲಯ ಮೂಕ ಪ್ರೇಕ್ಷಕರಂತೆ ಇರುವುದಿಲ್ಲ’ ಎಂದು ನ್ಯಾಯಪೀಠ ಹೇಳಿದೆ.
ಪೆಗಾಸಸ್ ಸ್ಪೈವೇರ್ ಪ್ರಕರಣದಲ್ಲಿ ಸ್ವತಂತ್ರ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಕೋರಿ ಅನೇಕ ಮನವಿಗಳನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿತ್ತು.
ರಾಜಕಾರಣಿಗಳು, ಸಾಮಾಜಿಕ ಹೋರಾಟಗಾರರು ಮತ್ತು ಪತ್ರಕರ್ತರ ಮೇಲೆ ಕಣ್ಣಿಡಲು ಸರ್ಕಾರವು ಇಸ್ರೇಲಿ ಸಾಫ್ಟ್‌ವೇರ್ ಪೆಗಾಸಸ್ ಅನ್ನು ಬಳಸುತ್ತಿದೆ ಎಂದು ಆರೋಪಿಸಿರುವ ವರದಿಗಳ ಕುರಿತು ತನಿಖೆ ನಡೆಸಲು ತಜ್ಞರ ಸಮಿತಿಯನ್ನು ರಚಿಸುವ ಉದ್ದೇಶವಿದೆ ಎಂದು ಪೀಠವು ಸೆಪ್ಟಂಬರ್ 23 ರಂದು ಹೇಳಿತ್ತು.
“ಕಳೆದ ವಾರವೇ ಪೆಗಾಸಸ್ ತನಿಖಾ ಸಮಿತಿ ಕುರಿತು ಆದೇಶ ಹೊರಡಿಸಲು ಬಯಸಿದ್ದೆವು. ಆದರೆ ನಾವು ಪರಿಗಣಿಸಿದ್ದ ಕೆಲವು ಸದಸ್ಯರು ವೈಯಕ್ತಿಕ ಕಾರಣಗಳಿಂದಾಗಿ ಈ ಸಮಿತಿಯ ಭಾಗವಾಗಿರಲು ನಿರಾಕರಿಸಿದರು. ಆದ್ದರಿಂದ ವಿಳಂಬವಾಗಿದೆ. ನಾವು ಮುಂದಿನ ವಾರ ಆದೇಶ ರವಾನಿಸಲು ಪ್ರಯತ್ನಿಸುತ್ತೇವೆ” ಎಂದು ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಸೆಪ್ಟಂಬರ್ 23 ರಂದು ಹೇಳಿದ್ದರು.
ಪೆಗಾಸಸ್ ಗೂಢಚಾರ ಹಗರಣದ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಸುಪ್ರಿಂಕೊರ್ಟ್‌ಗೆ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ವಿವರವಾದ ಅಫಿಡವಿಟ್‌ಗಳನ್ನು ಸಲ್ಲಿಸುವುದಿಲ್ಲ ಎಂದು ಒಕ್ಕೂಟ ಸರ್ಕಾರ ಸೆಪ್ಟಂಬರ್ 13 ರಂದು ಹೇಳಿದೆ.
ಇದನ್ನೂ ಓದಿ: ಪೆಗಾಸಸ್ ಹಗರಣ – ಸುಪ್ರೀಂನಲ್ಲಿ ಅಫಿಡವಿಟ್‌ಗಳನ್ನು ಸಲ್ಲಿಸುವುದಿಲ್ಲ ಎಂದ ಒಕ್ಕೂಟ ಸರ್ಕಾರ!


