ಭಾರಿ ಕುತೂಹಲ ಮೂಡಿಸಿದ್ದ ಕರ್ನಾಟಕದ ಉಪಚುನಾವಣೆಯಲ್ಲಿ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಮತ ಎಣಿಕೆ ಆರಂಭವಾದಾಗಿನಿಂದ ಮುನ್ನಡೆ ಸಾಧಿಸಿದ್ದ ಬಿಜೆಪಿ 22ನೇ ಸುತ್ತಿನಲ್ಲಿ 31,088 ಮತಗಳ ಅಂತರ ಕಾಯ್ದುಕೊಂಡಿತ್ತು.
ವಿಜಯಪುರದ ಸಿಂದಗಿಯ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು 93,380 ಮತಗಳು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ 62,292 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಕೇವಲ 4,321 ಮತಗಳನ್ನು ಪಡೆದಿದ್ದಾರೆ.
ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು 20ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಅವರಿಂದ 28,462 ಮತಗಳ ಅಂತರ ಕಾಯ್ದುಕೊಂಡಿದ್ದರು.
ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ, ಪಕ್ಷದ ನಾಯಕರು ಮತ್ತು ಕಾರ್ಯರ್ತರು ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಚುನಾವಣೆಯ ಉಸ್ತುವಾರಿ ವಹಿಸಿದ್ದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸಿಂದಗಿಗೆ ಬಂದಿದ್ದು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದಾರೆ.
’ಸಿಂದಗಿಯಲ್ಲಿ ಜನ ಅಭಿವೃದ್ಧಿ ಬಯಸಿದ್ದಾರೆ. ಹಾಗಾಗಿ ಜನ ಮತ ಹಾಕಿದ್ದಾರೆ. ನಾವು ಕೂಡ ಭರವಸೆಯನ್ನು ನೀಡಿದ್ದೇವು. ಇದನ್ನು ಜನ ನಂಬಿಕೆ ಇಟ್ಟು ಆಡಳಿತ ಪಕ್ಷಕ್ಕೆ ಮತ ಹಾಕಿದ್ದಾರೆ’ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ಸಿಂದಗಿ ಉಪಚುನಾವಣೆಯಲ್ಲಿ ಉತ್ತಮ ಅಂತರದಲ್ಲಿ ವಿಜಯ ಸಾಧಿಸಿದ ಪಕ್ಷದ ಅಭ್ಯರ್ಥಿ ರಮೇಶ್ ಭೂಸನೂರ್ ಅವರಿಗೆ ಅಭಿನಂದನೆಗಳು. ಪ್ರಧಾನಿ ಶ್ರೀ @narendramodi ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳು, ರಾಜ್ಯ ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಜನ ಮೆಚ್ಚಿದ್ದಾರೆ ಎನ್ನುವುದಕ್ಕೆ ಈ ಕ್ಷೇತ್ರದಲ್ಲಿ ಪಕ್ಷದ ಗೆಲುವು ಸಂಕೇತವಾಗಿದೆ.
— B.S. Yediyurappa (@BSYBJP) November 2, 2021
“ಸಿಂದಗಿ ಉಪಚುನಾವಣೆಯಲ್ಲಿ ಉತ್ತಮ ಅಂತರದಲ್ಲಿ ವಿಜಯ ಸಾಧಿಸಿದ ಪಕ್ಷದ ಅಭ್ಯರ್ಥಿ ರಮೇಶ್ ಭೂಸನೂರ್ ಅವರಿಗೆ ಅಭಿನಂದನೆಗಳು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳು, ರಾಜ್ಯ ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಜನ ಮೆಚ್ಚಿದ್ದಾರೆ ಎನ್ನುವುದಕ್ಕೆ ಈ ಕ್ಷೇತ್ರದಲ್ಲಿ ಪಕ್ಷದ ಗೆಲುವು ಸಂಕೇತವಾಗಿದೆ” ಎಂದು ಮಾಜಿ ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಸಿಂದಗಿ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, “ಸಿಂದಗಿಯಲ್ಲಿ ನಾವು 3ನೇ ಸ್ಥಾನದಲ್ಲಿದ್ದೇವು. ಕಾಂಗ್ರೆಸ್‌ಗೆ ಬರಬೇಕು ಅಂತ ಮನಗೊಳಿ ಅವರು ಆಸೆ ಪಟ್ಟು ಬಂದರು. ಹಾಗಾಗಿ ಅವರಿಗೆ ಟಿಕೆಟ್ ನೀಡಿದ್ದೇವು. ಅಲ್ಲಿ ಗೆಲುವು ದಾಖಲಿಸುವ ವಿಶ್ವಾಸವಿತ್ತು. ಜನ ಕಾಂಗ್ರೆಸ್‌ಗೆ ನೀಡಿರುವ ಮತ ನನಗೆ ಸಮಾಧಾನ ತಂದಿದೆ. ಸಿಂದಗಿಯಲ್ಲಿ ಸೋತಿದ್ದರು ಸಮಾಧಾನ ತಂದಿದೆ” ಎಂದಿದ್ದಾರೆ.
“ಒಳ್ಳೆ ಬೆಳವಣಿಗೆ ಆಗ್ತಿದೆ. 2 ಕ್ಷೇತ್ರದ ಚುನಾವಣೆ ಫಲಿತಾಂಶ ನೋಡಿದರೆ, ಜನ ರಾಜ್ಯದಲ್ಲಿ ಬದಲಾವಣೆ ಬಯಸುತ್ತಿದ್ದಾರೆ. ಎರಡು ಕ್ಷೇತ್ರದಲ್ಲಿ ಒಂದು ದಳ ಮತ್ತು ಒಂದು ಬಿಜೆಪಿ ಸೀಟ್ ಇದ್ದವು . ದಳದ ಸೀಟ್ ಬಿಜೆಪಿ ಕಿತ್ತುಕೊಂಡಿದೆ. ಬಿಜೆಪಿ ಸೀಟ್ ಕಾಂಗ್ರೆಸ್ ಕಿತ್ತುಕಂಡಿದೆ. ಇದು ದೇಶಕ್ಕೆ ದೊಡ್ಡ ಸಂದೇಶ. ಮತದಾರ ಕಾಂಗ್ರೆಸ್ ಕಡೆ ನೋಡುತ್ತಿದ್ದಾರೆ. ಅವರ ನಂಬಿಕೆ, ವಿಶ್ವಾಸ, ಪ್ರೀತಿ ಇಟ್ಟುಕೊಂಡು ಮುಂದೆ ಮತ್ತಷ್ಟು ಉತ್ತಮ ಕೆಲಸ ಮಾಡುತ್ತೇವೆ” ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಅಪ್ಪು ಅಗಲಿಕೆ: ಎಲ್ಲಾ ನಟರ ಅಭಿಮಾನಿಗಳಿಂದ ’ಸ್ಟಾಪ್ ಫ್ಯಾನ್ಸ್ ವಾರ್’ ಅಭಿಯಾನ

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ “ಚುನಾವಣೆ ಫಲಿತಾಂಶ ನಿರಾಸೆ ತಂದಿದೆ. ಎಂ. ಸಿ.ಮನಗೊಳಿ ಅವರ ಮಗನನ್ನು ಹೈಜಾಕ್ ಮಾಡಲಾಯಿತು. ನಮ್ಮ ಸಂಘಟನೆಯ ಕೊರತೆಯಿಂದ ಹಿನ್ನೆಡೆ ಆಯಿತು. ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಗುರುತಿಸುವದು ಕಷ್ಟ ಆಗಿದೆ. ಚುನಾವಣಾ ಫಲಿತಾಂಶ ಆಘಾತ ತಂದಿಲ್ಲ. ನಾನು ಉಪ ಚುನಾವಣೆಗೆ ಒತ್ತು ಕೊಡುವುದಿಲ್ಲ. ನನ್ನ ಗಮನ ಇರುವದು 2023ಕ್ಕೆ ಪಕ್ಷವನ್ನು ಸ್ವತಂತ್ರವಾಗಿ ಆಡಳಿತಕ್ಕೆ ತರುವುದು ನಮ್ಮ ಗುರಿ. ನಮ್ಮ ಗಮನ ಇರುವುದು ಆ ಕಡೆಗೆ” ಎಂದು ಹೇಳಿದ್ದಾರೆ.
ಸಿಂದಗಿ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿತ್ತು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಎಂಬ ಧ್ಯೇಯ ಇಟ್ಟುಕೊಂಡು ಮತಯಾಚಿಸಿತ್ತು. ಕ್ಷೇತ್ರ ಅಭಿವೃದ್ಧಿಯಾಗಲು ಬಿಜೆಪಿಗೆ ಮತ ನೀಡಬೇಕು ಎಂದು ಪ್ರಚಾರ ನಡೆಸಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ವಸತಿ ಸಚಿವ ವಿ.ಸೋಮಣ್ಣ, ಸಚಿವ ಲಕ್ಷ್ಮಣ್ ಸವದಿ ಆದಿಯಾಗಿ ಬಿಜೆಪಿ ನಾಯಕರು ಕಣದಲ್ಲಿ ತೊಡಗಿಸಿಕೊಂಡಿದ್ದರು.
ದಿವಂಗತ ಎಂ.ಸಿ.ಮನಗೊಳಿ ಅವರ ಪುತ್ರ ಅಶೋಕ್ ಮಲ್ಲಪ್ಪ ಮನಗೊಳಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿ, ಅನುಕಂಪದ ಮತಗಳ ಮೇಲೆ ಕಣ್ಣಿಟ್ಟಿತ್ತು. ಬಿಜೆಪಿಯು ಈ ಹಿಂದೆ ಎರಡು ಬಾರಿ ಶಾಸಕರಾಗಿದ್ದ, ಕಳೆದ ಚುನಾವಣೆಯಲ್ಲಿ ಎಂ.ಸಿ.ಮನಗೊಳಿ ಎದುರು 9 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದ ರಮೇಶ್ ಭೂಸನೂರ್ ಅವರನ್ನು ಕಣಕ್ಕಿಳಿಸಿತ್ತು. ಈಗ ಭರ್ಜರಿ 31,088 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.
ಜೆಡಿಎಸ್ ನಾಜಿಯಾ ಅಂಗಡಿಯವರನ್ನು ಕಣಕ್ಕಿಳಿಸಿತ್ತು. ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಜೆಡಿಎಸ್, ಮತ ವಿಭಜನೆಗೆ ಮುನ್ನುಡಿ ಹಾಡಲು ಯತ್ನಿಸಿದೆ ಎಂಬ ಆರೋಪವನ್ನು ಎದುರಿಸಿತ್ತು.
ಇದನ್ನೂ ಓದಿ: 29 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ: ಬಿಜೆಪಿ- ಕಾಂಗ್ರೆಸ್ ನಡುವೆ ಭಾರೀ ಫೈಟ್


