Homeಮುಖಪುಟಉತ್ತರ ಪ್ರದೇಶ: ಜೈ ಶ್ರೀರಾಮ್‌ ಘೋಷಣೆ ಕೂಗದ ಬೀದಿ ವ್ಯಾಪಾರಿ ಮೇಲೆ ಹಲ್ಲೆ - ಮತೀಯ...

ಉತ್ತರ ಪ್ರದೇಶ: ಜೈ ಶ್ರೀರಾಮ್‌ ಘೋಷಣೆ ಕೂಗದ ಬೀದಿ ವ್ಯಾಪಾರಿ ಮೇಲೆ ಹಲ್ಲೆ – ಮತೀಯ ಗೂಂಡಾಗಿರಿ

ಈ ಘಟನೆ ನಡೆಯುತ್ತಿದ್ದಾಗ ಸ್ಥಳೀಯ ಮಹಿಳಾ ನಿವಾಸಿಗಳು ಅಮೀರ್‌ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದರೂ ಬಜರಂಗದಳದ ಗೂಂಡಾಗಳನ್ನು ತಡೆಯಲು ಸಾಧ್ಯವಾಗಿಲ್ಲ.

- Advertisement -
- Advertisement -

ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ, ಬಟ್ಟೆ ಮಾರುತ್ತಿದ್ದ ವ್ಯಕ್ತಿಯೊಬ್ಬ ‘ಜೈ ಶ್ರೀರಾಮ್‌’ ಎಂದು ಘೋಷಣೆ ಕೂಗಲು ನಿರಾಕರಿಸಿದ್ದಕ್ಕಾಗಿ ಅವರನ್ನು, ಬಜರಂಗದಳದ ಕಾರ್ಯಕರ್ತರಿಬ್ಬರು ಲಾಠಿಯಿಂದ ತಳಿಸಿ, ಮತೀಯ ಗೂಂಡಾಗಿರಿ ನಡೆಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಆಲಿಗಡದಲ್ಲಿ ಭಾನುವಾರ ಸಂಜೆ ನಡೆದಿದೆ.

ಅಮೀರ್‌ ಖಾನ್‌ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಜೆ.ಎನ್. ವೈದ್ಯಕೀಯ ಕಾಲೇಜಿಗೆ ಸೇರಿಸಲಾಗಿದೆ. ಘಟನೆ ನಂತರ ಆರೋಪಿಗಳಾದ ಬಜರಂಗದಳದ ಕಾರ್ಯಕರ್ತರಾದ ತಂದೆ ಮತ್ತು ಮಗ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ವಾಸ್ತವವಾಗಿ ನಡೆದಿದ್ದೇನು?

ಆಲಿಗಡದ ಹರ್ದುವಾಗಂಜ್‌ನ ನಿವಾಸಿ ಅಮೀರ್‌ ಖಾನ್‌ ಬೀದಿ ಬದಿ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದು, ಭಾನುವಾರ ಸಂಜೆ  ಮನೆಗೆ ಹೋಗುವ ದಾರಿಯಲ್ಲಿ ನಾಗ್ಲಾ ಖೇಮ್‌ ಪ್ರದೇಶದಲ್ಲಿ ಗ್ರಾಹಕರಿಗೆ ಬಟ್ಟೆ ತೋರಿಸುತ್ತಿದ್ದರು.

ಆ ಸ್ಥಳಕ್ಕೆ ಧಾವಿಸಿದ ಆರೋಪಿಗಳಿಬ್ಬರು, ವ್ಯಾಪಾರಿಯ ಬಳಿ ಹೋಗಿ ಅವರ ಹೆಸರು ಕೇಳಿದ್ದಾರೆ. ಅಮೀರ್‌ ಮುಸ್ಲಿಂ ಎಂದು ತಿಳಿದ ನಂತರ, ಇಬ್ಬರು ಅಮೀರ್‌ ಅವರನ್ನು ‘ಜೈ ಶ್ರೀರಾಮ್‌’ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿದ್ದಾರೆ.

ಸಂತ್ರಸ್ತ ಹೇಳುವಂತೆ, ಆರೋಪಿಗಳಿಬ್ಬರು ಕ್ಯಾಲೆಂಡರ್‌ ಒಂದನ್ನು ಕೈಯಲ್ಲಿ ಹಿಡಿದು, ಅದರಲ್ಲಿರುವ ದೇವರ ಫೋಟೊದ ಪಾದಗಳನ್ನು ಮುಟ್ಟುವಂತೆ ಹೇಳಿದ್ದಾರೆ. ಇದಲ್ಲದೇ ಆರೋಪಿಗಳು ಅಮೀರ್‌ ಅವರ ಬೈಕ್‌ಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾರೆ ಎಂದು ದಿ ಕ್ವಿಂಟ್‌ ವರದಿ ಮಾಡಿದೆ.

ಈ ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಸ್ಥಳೀಯ ಮಹಿಳಾ ನಿವಾಸಿಗಳು ಅಮೀರ್‌ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದರೂ, ಗೂಂಡಾಗಳನ್ನು ತಡೆಯಲು ಸಾಧ್ಯವಾಗಿಲ್ಲ.

‘ನನ್ನ ಸೋದರಳಿಯ ಅಮೀರ್‌ ಬಟ್ಟೆ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದಾನೆ. ನಾಗ್ಲಾ ಖೇಮ್‌ನಲ್ಲಿ ಗೂಂಡಾಗಳು ಆತನನ್ನು ಥಳಿಸಿದ್ದಾರೆ. ಘಟನೆ ಸಮಯದಲ್ಲಿ ಆ ಗ್ರಾಮದಲ್ಲಿ ಜನಸಂದಣಿ ಇತ್ತು. ಗ್ರಾಮಸ್ಥರ ಪ್ರಕಾರ, ಅಮೀರ್‌ ಮೇಲೆ ದಾಳಿ ಮಾಡಿದ ಗೂಂಡಾಗಳು ಬಜರಂಗದಳಕ್ಕೆ ಸೇರಿದವರು’ ಎಂದು ಅಮೀರ್‌ ಅವರ ಸಂಬಂಧಿಯೊಬ್ಬರು ತಿಳಿಸಿದ್ದಾರೆ.

ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್‌ 223 ಮತ್ತು 307 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅಮೀರ್‌ ಮಾರುತ್ತಿದ್ದ ಬಟ್ಟೆಗಳ ಬೆಲೆಯ ವಿವಾದದಿಂದಾಗಿ ನಡೆದ ಜಗಳ ಪರಿಣಾಮವಾಗಿ ಈ ಘಟನೆ ನಡೆದಿದೆ ಎಂದು ಆಲಿಗಡ ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಾಗಿದ್ದು ಆರೋಪಿಗಳಾದ ರಾಜು ಮತ್ತವರ ಮಗ ದೇವೇಶ್‌ ಅವರನ್ನು ಬಂಧಿಸಲಾಗಿದೆ ಎಂದಿದ್ದಾರೆ.

ಉತ್ತರ ಪ್ರದೇಶದಲ್ಲಿ ದಲಿತ, ಶೋಷಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ದೌರ್ಜನ್ಯಗಳು ಎಗ್ಗಿಲ್ಲದೇ ನಡೆಯುತ್ತಿವೆ. ಜಾತಿ, ಧರ್ಮದ ಹೆಸರಿನಲ್ಲಿ ಶೋಷಿತರನ್ನು, ಅಲ್ಪಸಂಖ್ಯಾತ ಸಮುದಾಯದವರನ್ನು ಹಲ್ಲೆಗೈಯ್ಯುವಂತಹ ಅಮಾನವೀಯ ಘಟನೆಗಳು ದೇಶದೆಲ್ಲೆಡೆ ದಿನದಿಂದ ದಿನಕ್ಕೆ ಹೆಚ್ಚುತಲಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೌನವಾಗಿರುವುದು ಬೇಸರದ ಸಂಗತಿ. ಸರ್ಕಾರಗಳು ಈ ಬಗ್ಗೆ ಗಮನ ಹರಿಸಬೇಕು.


ಇದನ್ನು ಓದಿ: ಮಂಗಳೂರಿನಲ್ಲಿ ಮತ್ತೊಂದು ಮತೀಯ ಗೂಂಡಾಗಿರಿ: ಹೋಟೆಲ್‌ಗೆ ನುಗ್ಗಿ ಜೋಡಿಗೆ ತೊಂದರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...