ನೇತ್ರದಾನ ಮಾಡಿ ನಾಲ್ವರ ಬಾಳಿಗೆ ಬೆಳಕಾಗಿರುವ ನಟ ಪುನೀತ್ ರಾಜ್‌ಕುಮಾರ್ ಅವರ ಹಾದಿಯಲ್ಲಿ ನಡೆಯಲು ನಿರ್ಧರಿಸಿರುವ ಅವರ ಅಭಿಮಾನಿ ಬಳಗ ತಾವು ಕೂಡ ನೇತ್ರದಾನ ಮಾಡಲು ಮುಂದಾಗಿದ್ದಾರೆ. ಕಳೆದ ಎರಡು ದಿನಗಳಿಂದ ಬಳ್ಳಾರಿಯಲ್ಲಿ ಸರತಿ ಸಾಲಿನಲ್ಲಿ ನಿಂತು ನೇತ್ರದಾನಕ್ಕೆ ನೋಂದಣಿ ಮಾಡಿಸುತ್ತಿದ್ದಾರೆ.
ತಮ್ಮ ಕಣ್ಣುಗಳನ್ನು ದಾನ ಮಾಡಿದ್ದ ಅಪ್ಪು ಅವರಿಂದ ಸ್ಪೂರ್ತಿ ಪಡೆದ ಬಳಿಕ, ಅವರ ಅಭಿಮಾನಿಗಳ ಸಂಖ್ಯೆಯನ್ನು ನೋಡಿ ಬಳ್ಳಾರಿ ಜಿಲ್ಲೆಯ ಆರೋಗ್ಯ ಅಧಿಕಾರಿಗಳು ಅಚ್ಚರಿಗೊಂಡಿದ್ದಾರೆ. ತಮ್ಮ ಸಾವಿನ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡವ ಪ್ರತಿಜ್ಞೆಗೆ ಮುಂದಾಗಿದ್ದಾರೆ.
ಹಲವರು ಆಸ್ಪತ್ರೆಗಳಿಗೆ ತೆರಳಿ ತಮ್ಮ ಕಣ್ಣುಗಳನ್ನು ದಾನ ಮಾಡುವುದಾಗಿ ಬರೆದುಕೊಡುತ್ತಿದ್ದಾರೆ. ಅದಕ್ಕಾಗಿ ಆಸ್ಪತ್ರೆ ಮತ್ತು ಖಾಸಗಿ ವೈದ್ಯರಿಗೆ ಕರೆ ಮಾಡಿ, ನೇತ್ರದಾನದ ವಿಧಾನಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಪುನೀತ್ ಅವರ ತಂದೆ ಡಾ. ರಾಜ್‌ಕುಮಾರ್ ನಿಧನರಾದಾಗ ಅವರ ಕಣ್ಣುಗಳನ್ನು ದಾನ ಮಾಡಿದ್ದರು. ಆಗಲೂ ಇದೇ ರೀತಿಯ ವಾತಾವರಣ ಕಂಡುಬಂದಿತ್ತು.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಪುನೀತ್ ರಾಜ್‌ಕುಮಾರ್ ಅವರು ಹಲವಾರು ಸಿನಿಮಾಗಳನ್ನು ಚಿತ್ರೀಕರಿಸಿದ್ದಾರೆ. ಹೀಗಾಗಿ, ಈ ಎರಡೂ ಜಿಲ್ಲೆಗಳಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ತಮ್ಮ ನೆಚ್ಚಿನ ನಟನನ್ನು ಕಳೆದುಕೊಂಡ ಅಭಿಮಾನಿಗಳು, ಪುನೀತ್ ಅವರ ಹಾದಿಯಲ್ಲಿ ಸಾಗಿ ಶ್ರದ್ಧಾಂಜಲಿ ಅರ್ಪಿಸುವ ನಿಟ್ಟಿನಲ್ಲಿ ನೇತ್ರದಾನದ ವಾಗ್ದಾನ ಕೈಗೊಳ್ಳುತ್ತಿರುವುದು ಹೆಚ್ಚಾಗಿದೆ.
ಇದನ್ನೂ ಓದಿ: ಕನ್ನಡ ನಟರ ಅಭಿಮಾನಿಗಳಿಂದ ’ಫ್ಯಾನ್ಸ್ ವಾರ್’ಗೆ ಫುಲ್ ಸ್ಟಾಪ್!
ಇನ್ನು ಅಪ್ಪು ಅಭಿಮಾನಿಗಳ ಆಶಯದಂತೆ ಹೊಸಪೇಟೆಯಲ್ಲಿ ಪುನೀತ್ ರಾಜ್ ಕುಮಾರ್ ಪ್ರತಿಮೆ ಸ್ಥಾಪಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಈಗಾಗಲೇ ಹೇಳಿದ್ದಾರೆ. ಬಳ್ಳಾರಿ ಮತ್ತು ವಿಜಯನಗರದ ಅಭಿಮಾನಿಗಳು ದೇಣಿಗೆ ನೀಡಲು ಮುಂದಾಗಿದ್ದಾರೆ.
ಅಪ್ಪು ಅವರ ಕಣ್ಣುಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಕಸಿ ಮಾಡಿ ನಾಲ್ಕು ಜನರಿಗೆ ಕಣ್ಣುಗಳನ್ನು ದಾನ ಮಾಡಿರುವುದು ಹಲವು ಜನರ ಮೇಲೆ ಪರಿಣಾಮ ಬೀರಿದೆ. ಹಲವರು ತಮ್ಮ ಕಣ್ಣುಗಳನ್ನೂ ತಾವು ನಿಧನ ಹೊಂದಿದ ಬಳಿಕ ಅದೇ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಹೇಳುತ್ತಿದ್ದಾರೆ.
ಬಳ್ಳಾರಿ ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮದ ಅಧಿಕಾರಿ ಡಾ.ಸಿ.ರಾಜಶೇಖರ್ ರೆಡ್ಡಿ, “ಕಳೆದ ಎರಡು ದಿನಗಳಿಂದ ಅನೇಕರು ನೇತ್ರದಾನ ಮಾಡುವ ಬಗ್ಗೆ ವಿಚಾರಿಸುತ್ತಿದ್ದಾರೆ. ಇದು ಸರಳ ಪ್ರಕ್ರಿಯೆಯಾಗಿದ್ದು, ಫಾರ್ಮ್ ಅನ್ನು ಭರ್ತಿ ಮಾಡಬೇಕು. ಫಾರ್ಮ್‌ನಲ್ಲಿ ವೈಯಕ್ತಿಕ ವಿವರಗಳನ್ನು ನೀಡಬೇಕು. ದಾನಕ್ಕಾಗಿ ತಮ್ಮ ಕಣ್ಣುಗಳನ್ನು ಒತ್ತೆ ಇಟ್ಟಿರುವ ವ್ಯಕ್ತಿಯು ಸತ್ತರೆ ಹತ್ತಿರದ ಕುಟುಂಬದ ಸದಸ್ಯರು ವೈದ್ಯಕೀಯ ತಂಡಕ್ಕೆ ತಿಳಿಸುತ್ತಾರೆ. ದಾನಿಯ ಮರಣದ ಆರು ಗಂಟೆಗಳ ಒಳಗೆ ನಾವು ಅವರ ಕಣ್ಣುಗಳನ್ನು ತೆಗೆದುಕೊಳ್ಳುತ್ತೇವೆ. ಅಲ್ಲದೆ, ನಾವು ನೇತ್ರದಾನ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲು ಯೋಜಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾಲ್ವರಿಗೆ ಬೆಳಕಾದ ನಟ ಪುನೀತ್ ಕಣ್ಣುಗಳು: ರಾಜ್ಯದಲ್ಲಿ ಮೊದಲ ಬಾರಿಗೆ ಹೊಸ ತಂತ್ರ ಬಳಕೆ


