ಕೊರೊನಾ ಸಾಂಕ್ರಾಮಿಕ ವೈರಸ್‌ಗೆ ಲಸಿಕೆ ನೀಡಲು, ಚಿಕಿತ್ಸೆಗೆ ದಾಖಲಿಸುವುದು ಸೇರಿದಂತೆ ಯಾವುದೇ ಕೊರೊನಾ ಸಂಬಂಧಿತ ಸೇವೆಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಶನಿವಾರ ಸ್ಪಷ್ಟಪಡಿಸಿದೆ.
ಕೊರೊನಾ ಲಸಿಕೆಗಳು ಮತ್ತು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ ಎಂದು ಆಸ್ಪತ್ರೆಗೆಗಳು ಚಿಕಿತ್ಸೆ ನೀಡಲು ನಿರಾಕರಿಸಿರುವ ಬಗ್ಗೆ ಕೆಲವು ಮಾಧ್ಯಮಗಳ ವರದಿ ನಂತರ ಪ್ರಾಧಿಕಾರ ಈ ಕುರಿತು ಸ್ಪಷ್ಟನೆ ನೀಡಿದೆ.
“ಒಬ್ಬರ ಬಳಿ ಆಧಾರ್ ಕಾರ್ಡ್ ಇಲ್ಲದಿದ್ದರೆ ಅಥವಾ ಕೆಲವು ಕಾರಣಗಳಿಂದಾಗಿ ಆಧಾರ್ ಆನ್‌ಲೈನ್ ಪರಿಶೀಲನೆ ಯಶಸ್ವಿಯಾಗದಿದ್ದರೆ, ಸಂಬಂಧಪಟ್ಟ ಸಂಸ್ಥೆಗಳು ’ಆಧಾರ್ ಕಾಯ್ದೆ, 2016 ರ ಸೆಕ್ಷನ್ 7’ ಮತ್ತು 19 ಡಿಸೆಂಬರ್ 2017 ರ ಕ್ಯಾಬಿನೆಟ್ ಸೆಕ್ರೆಟರಿಯಟ್ OM ಪ್ರಕಾರ ಸೇವೆಯನ್ನು ಒದಗಿಸಬೇಕಾಗುತ್ತದೆ ” ಎಂದು ಯುಐಡಿಎಐ ಹೇಳಿಕೆ ನೀಡಿದೆ.
ಇದನ್ನೂ ಓದಿ: ಮೋದಿಯವರೇ ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳಿಸಿದಿರಿ? ಎಂದು ಪ್ರಶ್ನಿಸಿ ಪೋಸ್ಟರ್, 17 FIR, 15 ಮಂದಿ ಬಂಧನ
ಲಸಿಕೆ ನೋಂದಣಿಗೆ ಅಗತ್ಯವಾದ ಫೋಟೋ-ಗುರುತಿನ ಚೀಟಿಗಳಲ್ಲಿ ಆಧಾರ್ ಕಾರ್ಡ್ ಕೂಡ ಒಂದು. ಆದರೆ ಆಧಾರ್ ಕಾರ್ಡ್ ಇಲ್ಲದಿದ್ದರೆ ಇನ್ನೂ ಹಲವಾರು ದಾಖಲೆಗಳಿವೆ. ಲಸಿಕೆ ನೋಂದಣಿಗೆ ಪ್ಯಾನ್ ಕಾರ್ಡ್, ಚಾಲನಾ ಪರವಾನಗಿ, ಸರ್ಕಾರದ ಆರೋಗ್ಯ ವಿಮೆ ಕಾರ್ಡ್, ಪಿಂಚಣಿ ದಾಖಲೆ ಸಹ ಮಾನ್ಯವೆಂದು ಪರಿಗಣಿಸಲಾಗಿದೆ.
ಆಧಾರ್ ಕಾರ್ಡ್ ಸೇರಿದಂತೆ ಯಾವುದೇ ನಿಗದಿತ ಗುರುತಿನ ಚೀಟಿಗಳನ್ನು ಹೊಂದಿರದವರಿಗೂ ಲಸಿಕೆ ನೀಡುವ ಬಗ್ಗೆ ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳಲ್ಲಿಯೂ ಸಹ ಒಪ್ಪಿಗೆ ನೀಡಲಾಗಿದೆ.
ಯಾವುದೇ ಅಗತ್ಯ ಸೇವೆಯನ್ನು ನಿರಾಕರಿಸುವ ನೆಪವಾಗಿ ಆಧಾರ್ ಅನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಯುಐಡಿಎಐ ಹೇಳಿಕೆ ನೀಡಿದೆ.
“ಆಧಾರ್‌ಗಾಗಿ ಸುಸ್ಥಾಪಿತ exception handling mechanism (EHM) ಇದೆ. ಆಧಾರ್ ಇಲ್ಲದೆಯೂ ಪ್ರಯೋಜನಗಳು ಮತ್ತು ಸೇವೆಗಳನ್ನು ತಲುಪಿಸುವುದಕ್ಕೆ ಇದನ್ನು ಅನುಸರಿಸಬೇಕು. ಒಬ್ಬ ವ್ಯಕ್ತಿಯು ಕೆಲವು ಕಾರಣಗಳಿಗಾಗಿ ಆಧಾರ್ ಹೊಂದಿಲ್ಲದಿದ್ದರೆ, ಆಧಾರ್ ಕಾಯ್ದೆಯ ಪ್ರಕಾರ ಅಗತ್ಯ ಸೇವೆಗಳನ್ನು ಆತನಿಗೆ ನಿರಾಕರಿಸುವಂತಿಲ್ಲ “ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ರೈತ ಹೋರಾಟಕ್ಕೆ 6 ತಿಂಗಳು: ಮೇ 26 ರಂದು ಕಪ್ಪು ದಿನ ಆಚರಿಸಲು ರೈತರ ನಿರ್ಧಾರ


