Homeಚಳವಳಿ'ಕೃಷಿ ಸುಧಾರಣೆಯಲ್ಲಿ ಜಾತಿ ವಿನಾಶದ ಬೀಜಗಳಿವೆ' - ಕೃಷಿ ಕುರಿತ ಅಂಬೇಡ್ಕರ್ ಚಿಂತನೆಗಳು

‘ಕೃಷಿ ಸುಧಾರಣೆಯಲ್ಲಿ ಜಾತಿ ವಿನಾಶದ ಬೀಜಗಳಿವೆ’ – ಕೃಷಿ ಕುರಿತ ಅಂಬೇಡ್ಕರ್ ಚಿಂತನೆಗಳು

"ಸಾವಿರಾರು ಎಕರೆ ಭೂಮಿ ಹೊಂದಿರುವ ಭೂ ಮಾಲೀಕರ ದರ್ಪ ಮತ್ತು ಒಂದಿಂಚ್ಚೂ ಭೂಮಿ ಇಲ್ಲದ ಭೂಹೀನರ ದೈನ್ಯ' ಇವೆರಡಕ್ಕೂ ಕಾರಣ ಭೂ ಒಡೆತನ"

- Advertisement -
- Advertisement -

ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಕೃಷಿ ಬಿಕ್ಕಟ್ಟುಗಳ ಹಿನ್ನೆಲೆಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿದೃಷ್ಟಿಯಲ್ಲಿ ಕೃಷಿ ಕುರಿತ ಚಿಂತನೆಗಳ ಕುರಿತ ವೆಬಿನಾರ್‌ನಲ್ಲಿ ಮಾತನಾಡಿದ ಚಿಂತಕರು ಮತ್ತು ವಿಮರ್ಶಕರಾದ ಶಿವಸುಂದರ್, “ಕೃಷಿ ಸುಧಾರಣೆಯಲ್ಲಿ ಜಾತಿ ವಿನಾಶದ ಬೀಜಗಳಿವೆ ಎಂಬುದನ್ನು ಅಂಬೇಡ್ಕರ್ ಕಂಡುಕೊಂಡಿದ್ದರು” ಎಂದು ಹೇಳಿದರು.

ಬೆಂಗಳೂರಿನ ಲೊಯೊಲಾ ಪದವಿ ಕಾಲೇಜಿನ ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಅಂಬೇಡ್ಕರ್ ಅವರ ಕೃಷಿ ಚಿಂತನೆಗಳು ಮತ್ತು ವರ್ತಮಾನದ ಕೃಷಿಕರ ಬಿಕ್ಕಟ್ಟುಗಳು” ವಿಷಯದ ಕುರಿತ ವೆಬಿನಾರ್‌ನಲ್ಲಿ ಹೋರಾಟಗಾರರಾದ ವಡ್ಡಗೆರೆ ನಾಗರಾಜಯ್ಯ, ಅಂಕಣಕಾರರು ಮತ್ತು ಪತ್ರಕರ್ತರಾದ ಡಿ.ಉಮಾಪತಿ, ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕರಾದ ಡಿ.ಎಂ.ಪುಟ್ಟಯ್ಯ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಕುಮಾರಸ್ವಾಮಿ ಬೆಜ್ಜಿಹಳ್ಳಿ ನಡೆಸಿಕೊಟ್ಟರು.

ಇದನ್ನೂ ಓದಿ: ಬಾಬಾಸಾಹೇಬ್ ಅಂಬೇಡ್ಕರ್: ಜೀವನಚರಿತ್ರೆಗಳ ಕತೆ

ಕಾರ್ಯಕ್ರಮದಲ್ಲಿ ವಿಷಯ ಮಂಡನೆ ಮಾಡಿದ ಶಿವಸುಂದರ್, “ಇದುವರೆಗೂ ಅಂಬೇಡ್ಕರ್ ಅವರನ್ನು ಆರಾಧಿಸುವವರು ಅಥವಾ ಬೆಂಬಲಿಗರು ಅವರನ್ನು ಕೇವಲ ಸಂವಿಧಾನಕ್ಕೆ ಮಾತ್ರ ಸೀಮಿತಗೊಳಿಸಿ ಅವರ ಇತರ ಬಹುಮುಖ್ಯ ಚಿಂತನೆಗಳನ್ನ ಕಡೆಗಣಿಸಿದ್ದಾರೆ. ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ಕೃಷಿ ಕುರಿತ ಚಿಂತನೆಗಳು, ಇತಿಹಾಸ, ಆರ್ಥಿಕತೆ ಸೇರಿದಂತೆ ಇತರೆ ಶಾಖೆಗಳು ಎಲ್ಲಿಯೂ ಚರ್ಚೆಗೆ ಬರುವುದೇ ಇಲ್ಲ. ಅಂದರೆ ಅವರು ಹೇಳಿರುವುದನ್ನೆಲ್ಲಾ ಒಪ್ಪಬೇಕು ಎನ್ನುವುದಕ್ಕಿಂತ ಒಂದು ವಿದ್ವತ್ ಪೂರ್ಣ ಅಧ್ಯಯನವನ್ನು ವಿಮರ್ಶಾತ್ಮಕವಾಗಿಯಾದರೂ ನಾವು ಇಂದು ನೋಡಬೇಕಾದ ಅನಿವಾರ್ಯತೆಯಿದೆ. ಹಾಗಾಗಿ ಕೃಷಿ ಕುರಿತ ಅವರ ಚಿಂತನೆಗಳು ಮತ್ತು ಪ್ರಸ್ತುತ ಸಂದರ್ಭದಲ್ಲಿ ಅವುಗಳು ಹೇಗೆ ಸಹಕಾರಿಯಾಗಬಲ್ಲವು ಎಂಬುದನ್ನು ತಿಳಿದುಕೊಳ್ಳೋಣ” ಎಂದು ಹೇಳಿದರು.

“ಅಂಬೇಡ್ಕರ್ ಅವರ ಕೃಷಿ ಚಿಂತನೆಗಳನ್ನ ಅವರು ಬರೆದ ಪ್ರಬಂಧಗಳೂ ಸೇರಿದಂತೆ ಅವರ ಪ್ರಮುಖ ಬರಹಗಳಲ್ಲಿ ಕಾಣಬಹುದು. 1918 ರಲ್ಲಿ ಬರೆದ ‘The problem Of small land holdings in india (ಭಾರತದಲ್ಲಿನ ಸಣ್ಣ ಭೂ ಹಿಡುವಳಿಗಾರರ ಸಮಸ್ಯೆಗಳು)’ ಎನ್ನುವ ಪುಸ್ತಕದಲ್ಲಿ ಸಣ್ಣ ಭೂ ಹಿಡುವಳಿಗಾರರ ಸಮಸ್ಯೆಗಳ ಕುರಿತು ಚರ್ಚಿಸಿದ್ದು, 1955 ರಲ್ಲಿ ಸಂವಿಧಾನದ ಮೂರನೇ ತಿದ್ದುಪಡಿಯ ಸಂದರ್ಭದ ಭಾಷಣದವರೆಗೂ ಅವರ ಕೃಷಿ ಚಿಂತನೆಯ ವಿಕಸನಗೊಂಡಿದೆ ಮತ್ತು ಹರಡಿಕೊಂಡಿದೆ. ಅಂಬೇಡ್ಕರ್ ಅವರ ಅರ್ಥಿಕ ಚಿಂತನೆಗಳ ಒಳಗಡೆಯೇ ಅವರ ಕೃಷಿ ಚಿಂತನೆಗಳನ್ನೂ ನೋಡಬೇಕು” ಎಂದರು.

ಇದನ್ನೂ ಓದಿ: ಭಾರತವನ್ನು ತಾರತಮ್ಯಗಳಿಂದ ಮುಕ್ತಗೊಳಿಸುವುದೇ ಅಂಬೇಡ್ಕರ್‌ರಿಗೆ ಗೌರವ ಸಲ್ಲಿಸುವ ಏಕೈಕ ಮಾರ್ಗ: ರಾಹುಲ್ ಗಾಂಧಿ

“ಸುಮಾರು 102 ವರ್ಷಗಳ ಹಿಂದೆ ಅಂಬೇಡ್ಕರ್ ಅವರು ಕಂಡುಕೊಂಡ ವಿಷಯ; ಭಾರತದ ಕೃಷಿಯು ಸಣ್ಣ ಹಿಡುವಳಿಗಾರರಿಂದ ಭಾದಿಸಲ್ಪಡುತ್ತಿದೆ ಎಂದು ಹೇಳುತ್ತಾರೆ”

“ಅಂದಿನ ಪ್ರಮುಖ ಕೃಷಿ ಸಿದ್ಧಾಂತದ ಪ್ರಕಾರ, ಭೂ ಹಿಡುವಳಿ ದೊಡ್ಡಪ್ರಮಾಣದಲ್ಲಿದ್ದಾಗ ಅಲ್ಲಿ ಉತ್ಪಾದನೆ ಹೆಚ್ಚುತ್ತದೆ ಎನ್ನುವ ಸಾಂಪ್ರದಾಯಿಕ ಸಿದ್ಧಾಂತವನ್ನು ಅಂಬೇಡ್ಕರ್ ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ನಂತರ, ಒಂದು ಹಿಡುವಳಿ ಲಾಭದಾಯಕ ಉತ್ಪಾದಕವಾಗಬೇಕು ಎಂದಾಗ ‘ಎಕನಾಮಿಕ್ ಹೋಲ್ಡಿಂಗ್ ಎನ್ನುವ ಪರಿಕಲ್ಪನೆಯನ್ನು ಮುಂದಿಟ್ಟು ವಿವರಿಸುತ್ತಾರೆ. ಇದರ ಪ್ರಕಾರ, ಎಲ್ಲಾ ಕೃಷಿ ಖರ್ಚುಗಳೂ ಕಳೆದು ಅದರಿಂದ ಲಾಭ ಬಂದರೆ ಅದು ಎಕನಾಮಿಕ್ ಹೋಲ್ಡಿಂಗ್ ಆಗುತ್ತದೆ. ಇಲ್ಲವಾದರೆ ಅದು ಅನ್-ಎಕನಾಮಿಕ್ ಹೋಲ್ಡಿಂಗ್ ಆಗುತ್ತದೆ. ಇದನ್ನು ನಿರ್ಧರಿಸುವ ಅಂಶ ಕೇವಲ ಭೂಮಿ ಮಾತ್ರ ಆಗಿರುವುದಿಲ್ಲ. ಅದರಲ್ಲಿ ಬಂಡವಾಳ ಮತ್ತು ಶ್ರಮವೂ ಕೂಡ ಪ್ರಮುಖವಾಗಿರುತ್ತದೆ. ಇವೆರಡೂ ಕೂಡ ಸರಿಯಾಗಿ ಪೂರೈಕೆಯಾದರೆ ಮಾತ್ರ ಒಂದು ಹಿಡುವಳಿ ಉತ್ಪಾದಕವಾಗುತ್ತದೆ. ಹಾಗಾಗಿ ಹೆಚ್ಚು ಉತ್ಪಾದನೆಯಾದರೂ ಸಹ ಕಡಿಮೆ ಭೂಮಿಯ ಮೇಲಿನ ಹೆಚ್ಚು ಜನರ ಅವಲಂಬನೆಯಿಂದ ಬರುವ ಉತ್ಪಾದನೆ ಎಲ್ಲವೂ ಖರ್ಚಾಗಿ ಏನೂ ಉಳಿಯದ ಸ್ಥಿತಿ ನಿರ್ಮಾಣವಾಗುತ್ತದೆ. ಇಂದು ಕೃಷಿ ಭೂಮಿಯ ಮೇಲಿನ ಅವಲಂಬನೆ ಹೆಚ್ಚಿದ್ದು, ಸಣ್ಣ ಹಿಡುವಳಿಗಾರರು ಅದಕ್ಕೆ ಬಂಡವಾಳ ಮತ್ತು ಶ್ರಮವನ್ನೂ ಹೊಂದಿಸಲಾಗದೆ, ಇರುವ ತುಂಡು ಭೂಮಿಯನ್ನೂ ಮಾರಿಕೊಳ್ಳಬಹುದು. ಇದರಿಂದ ಬಂಡವಾಳ ಉತ್ಪತ್ತಿಯಾಗುವುದಿಲ್ಲ. ಹಾಗಾಗಿ ದೇಶದಲ್ಲಿ ಎಲ್ಲಿಯವರೆಗೆ ದೊಡ್ಡಮಟ್ಟದಲ್ಲಿ ಕೈಗಾರೀಕರಣ ಮತ್ತು ನಗರೀಕರಣ ಆಗುವುದಿಲ್ಲವೋ ಅಲ್ಲಿ ಕೃಷಿ ವಲಯ ಬೆಳವಣಿಗೆಯಾಗುವುದಿಲ್ಲ. ಕೈಗಾರೀಕರಣ ಮತ್ತು ನಗರೀಕರಣದಿಂದಾಗಿ ಹಳ್ಳಿಗರು ನಗರದ ಕಡೆ ವಲಸೆ ಬಂದು ಸಂಪಾದಿಸಿದ್ದರಿಂದ ಕೃಷಿಯಲ್ಲಿ ಬಂಡವಾಳ ಹೂಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.

ಶಿವ ಸುಂದರ್

“ಆದರೆ ಇಂದಿನ ಕೈಗಾರೀಕರಣ ಮತ್ತು ನಗರೀಕರಣಗಳು ಅಂಬೇಡ್ಕರ್ ಅವರ ಪರಿದೃಷ್ಟಿಯಲ್ಲಿಲ್ಲ. ಬದಲಿಗೆ ಇವು ಕೃಷಿಯನ್ನು ಮತ್ತಷ್ಟು ಬಿಕ್ಕಟ್ಟಿಗೆ ಸಿಲುಕಿಸಿವೆ” ಎಂದು ಶಿವಸುಂದರ್ ವಿವರಿಸಿದರು.

ಅಂಬೇಡ್ಕರ್ ಕಾಲಘಟ್ಟದಲ್ಲಿ ಇದ್ದ 30 ಕೋಟಿ ಜನಸಂಖ್ಯೆಯಲ್ಲಿ ಬಹುಪಾಲು ಜನರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಅಂತೆಯೇ ಕೃಷಿಯ ಮೇಲೆಯೇ ಅವಲಂಬಿತರಾಗಿದ್ದರು.

1700-1855 ರ ವರೆಗೆ ಬ್ರಿಟಿಷ್ ಕಂಪನಿಗೆ ಶೇ. 67 ರಷ್ಟು ಆದಾಯ ಕೃಷಿ ಕ್ಷೇತ್ರದಿಂದ ಬರುತ್ತಿತ್ತು. (ಆದರೆ ಇಂದು ಶೇ. 55 ರಷ್ಟು ಜನ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಇಂದು ಭಾರತದ ಜಿಡಿಪಿಗೆ ಕೃಷಿ ಕ್ಷೇತ್ರದ ಆದಾಯ ಕೇವಲ ಶೇ. 17 ರಷ್ಟು ಮಾತ್ರ ಇದೆ.) ಹಾಗಾಗಿ ಕೃಷಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಸಲುವಾಗಿ ದೇಶವು ಕೈಗಾರೀಕರಣದ ಮೋರೆ ಹೋಗಬೇಕು. ಆಗ ಮಾತ್ರ ಕೃಷಿ ಮತ್ತು ದೇಶ ಅಬಿವೃದ್ಧಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದರು.”

ಇದನ್ನೂ ಓದಿ: ಅಂಬೇಡ್ಕರ್ ಚಿಂತನೆಗಳನ್ನು ತಿರುಚುವ ಕುತ್ಸಿತ ಶಕ್ತಿಗಳು ಮತ್ತು ಅವರ ಆಶಯಗಳನ್ನು ಮಣ್ಣುಗೂಡಿಸುವ ಕಾನೂನುಗಳು

1925 ರಲ್ಲಿ, ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಹಣಕಾಸಿಗೆ ಸಂಬಂಧಿಸಿದಂತೆ ಪ್ರಬಂಧವೊಂದನ್ನು ಬರೆಯುತ್ತಾರೆ. ಅದರಲ್ಲಿ ತೆರಿಗೆ ವ್ಯವಸ್ಥೆಯ ಬಗ್ಗೆ ಚರ್ಚಿಸುತ್ತಾರೆ.

ಬ್ರಿಟಿಷರು ಭೂಮಿಯ ಪ್ರಮಾಣದ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತಿತ್ತು. ಇದರಿಂದ ಸಣ್ಣ ಹಿಡುವಳಿಗಳು ನಾಶವಾಗುತ್ತವೆ. ಹಾಗಾಗಿ ಇದನ್ನು ವಿರೋಧಿಸಿದ ಅಂಬೇಡ್ಕರ್ ಉತ್ಪಾದನಾ ಪ್ರಮಾಣದ ಮೇಲೆ ತೆರಿಗೆ ವಿಧಿಸಬೇಕು ಎಂದು ವಾದಿಸಿದ್ದರು. ಇದರಲ್ಲಿ ಜಮೀನ್ದಾರಿ ಪದ್ದತಿ ತೊಲಗಿ, ಮಧ್ಯವರ್ತಿಗಳ ಸಮಸ್ಯೆ ಬಗೆಹರಿದು ಎಲ್ಲರಿಗೂ ಸಮಾನವಾಗಿ ಭೂ ಹಂಚಿಕೆಯಾಗಬೇಕು ಎಂಬ ವಾದವನ್ನು ಮುಂದಿಡುತ್ತಾರೆ. ಆದರೆ ಅಷ್ಟಕ್ಕೆ ನಿಲ್ಲದೆ, ಸರ್ಕಾರ ಎಲ್ಲಾ ಭೂಮಿಯನ್ನೂ ತನ್ನ ಒಡೆತನದಲ್ಲಿಟ್ಟುಕೊಳ್ಳಬೇಕು. ರೈತರು ಮತ್ತು ಸರ್ಕಾರದ ನಡುವೆ ನೇರಾನೇರ ಸಂಬಂಧವಿರಬೇಕು. ಸರ್ಕಾರವು ಭೂಮಿಯ ಸಂಪೂರ್ಣ ಒಡೆತನವನ್ನು ರೈತರಿಗೇ ಕೊಡದೇ, ಕೃಷಿಗೆ ಸಹಕಾರಿಯಾಗುವ ಎಲ್ಲಾ ಕ್ರಮಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳುತ್ತಾ ಸಹಕಾರೀ ಕೃಷಿ ಪದ್ದತಿಯನ್ನು ಅನಿಸರಿಸಬೇಕು ಎನ್ನುವ ಮಹತ್ವದ ವಿಷಯವನ್ನು ಹೇಳುತ್ತಾರೆ. ಅಂದರೆ ಇದರಲ್ಲಿ ಸರ್ಕಾರದ ಜವಾಬ್ದಾರಿ ಹೆಚ್ಚಾಗಿರಬೇಕು ಎಂದು ಹೇಳಲಾಗಿದೆ.

“ಆದರೆ ಇಂದಿನ ಮೋದಿ ಸರ್ಕಾರ ಸಹಕಾರಿ ಕೃಷಿಯನ್ನ ಬದಿಗೊತ್ತಿ ಕಾಂಟ್ರಾಕ್ಟ್‌ ಕೃಷಿ ಪದ್ದತಿಯನ್ನು ತಂದು ರೈತರನ್ನು ಕಾರ್ಪೊರೇಟ್‌ಗಳ ಕಾಲಡಿಯಲ್ಲಿ ಬಿದ್ದಿರುವಂತೆ ಮಾಡುತ್ತಿದ್ದಾರೆ. ಜೊತೆಗೆ ಸರ್ಕಾರ ಎಲ್ಲವನ್ನೂ ಖಾಸಗಿಗೊಳಿಸುವ ಮೂಲಕ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಹಾಗಾಗಿ ಇಂದು ತಂದಿರುವ ಕೃಷಿ ಕಾನೂನುಗಳು ಅಂಬೇಡ್ಕರ್ ಚಿಂತನೆಗಳಿಗೆ ಸಂಪೂರ್ಣ ವಿರುದ್ಧವಾಗಿದೆ” ಎಂದು ಶಿವಸುಂದರ್ ಅಭಿಪ್ರಾಯಪಟ್ಟರು.

ಮುಂದುವರಿದು ತಮ್ಮ ಅನೇಕ ಹೋರಾಟ ಮತ್ತು ಭಾಷಣಗಳಲ್ಲಿ, ಕೃಷಿಕರು ಮತ್ತು ಭೂಹೀನರ ನಡುವಿನ ವ್ಯತ್ಯಾಸವನ್ನು ಗುರುತಿಸಿ, ಗೇಣಿ ಪದ್ಧತಿಯ ರದ್ದತಿಯಿಂದ ಭೂಹೀನರಿಗೆ ಯಾವುದೇ ಉಪಯೋಗವಿಲ್ಲ ಎಂದು ಹೇಳುತ್ತಾರೆ. ಅಥವಾ ಸರ್ಕಾರದ ಒತ್ತಾಯದಿಂದ ಭೂಮಿ ದಕ್ಕಿದರೂ ಸಹ ಸಮಾಜದಲ್ಲಿ ಅಥವಾ ಸಾಮಾಜಿಕ ರಚನೆಯಲ್ಲಿ ಸಮತೆಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಯಾಕೆಂದರೆ ಸಣ್ಣ ಹಿಡುವಳಿದಾರರಿಗೆ ಬಂಡವಾಳ ಮತ್ತು ಶ್ರಮದ ಕೊರತೆಯಿತ್ತು. ಹಾಗಾಗಿ ‘ಕೋ-ಅಪರೇಟಿವ್ ಕೃಷಿ’ಯ ಮೂಲಕ ಪ್ರಭುತ್ವ ಇವೆರಡನ್ನೂ ಒದಗಿಸಬೇಕು. ಹಾಗಾಗಿ ಪ್ರಭುತ್ವವು ಮಧ್ಯ ಪ್ರವೇಶಿಸಿ ‘ಪ್ರಭುತ್ವ ಸಮಾಜವಾದ’ದ ನೆಲೆಗಟ್ಟಿನಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಹೇಳುತ್ತಾರೆ.

ಇದನ್ನೂ ಓದಿ: ವಿಜಯವಾಡದಲ್ಲಿ ತಲೆಯೆತ್ತಲಿದೆ 125 ಅಡಿಯ ಅಂಬೇಡ್ಕರ್ ಕಂಚಿನ ಪ್ರತಿಮೆ!

ಅಂಬೇಡ್ಕರ್ ಅವರ ಕೃಷಿ ಚಿಂತನೆಗಳು ಇನ್ನೂ ಅದ್ಭುತವಾಗಿ ದಾಖಲಾಗಿರುವುದು 1947 ರ ಮಾರ್ಚ್‌ನಲ್ಲಿ ಅವರು ಬರೆದ ‘State and Minorities: their rights and how to achieve it in the united states of India” ಎನ್ನುವ ಪ್ರಬಂಧವನ್ನು ಬರೆಯುತ್ತಾರೆ. ಇದನ್ನು ಅಂಬೇಡ್ಕರ್ ಅವರ ನಿಜವಾದ ಸಂವಿಧಾನ ಎಂದು ಕರೆಯಬಹುದು.

ಇದರಲ್ಲಿ, ಸಂಪತ್ತನ್ನ ರಾಷ್ಟ್ರೀಕರಣ ಮಾಡಬೇಕು ಎನ್ನುವ ಪ್ರಮುಖ ವಿಷಯವನ್ನು ಮುಂದಿಡುತ್ತಾರೆ. ‘ಸಾವಿರಾರು ಎಕರೆ ಭೂಮಿ ಹೊಂದಿರುವ ಭೂ ಮಾಲೀಕರ ದರ್ಪ ಮತ್ತು ಒಂದಿಂಚೂ ಭೂಮಿ ಇಲ್ಲದ ಭೂಹೀನರ ದೈನ್ಯ’ ಇವೆರಡಕ್ಕೂ ಕಾರಣ ಭೂ ಒಡೆತನ ಎಂದು ಅಂಬೇಡ್ಕರ್ ಹೇಳುತ್ತಾರೆ. ಈ ಭೂ ಒಡೆತನ ಇಲ್ಲವಾದಾಗ ಮಾತ್ರ ಇವೆರಡೂ ವಿದ್ಯಮಾನಗಳು ನಾಶವಾಗುತ್ತವೆ. ಇದು ಘಟಿಸಬೇಕೆಂದರೆ ದೇಶದ ಇಡೀ ಸಂಪತ್ತು ರಾಷ್ಟ್ರೀಕರಣಗೊಳ್ಳಬೇಕು. ಇಡೀ ದೇಶದಲ್ಲಿರುವ ಭೂಮಿಯ ಒಡೆತನ ಸರ್ಕಾರದ ಬಳಿಯಿರಬೇಕು. ನಂತರ ಸರ್ಕಾರವೇ ಪ್ರತಿ ಹಳ್ಳಿಯಲ್ಲಿರುವ ಪ್ರತಿ ಕುಟುಂಬಗಳಿಗೆ 2-3 ಎಕರೆ ಭೂಮಿ ನೀಡಿ, ಕಡ್ಡಾಯವಾಗಿ ‘ಸಹಕಾರಿ ಕೃಷಿ’ ಪರಿಕಲ್ಪನೆಯ ಆಧಾರದಲ್ಲಿ, ಕೃಷಿಗೆ ಬೇಕಾಗುವ ನೀರು-ಗೊಬ್ಬರ ಸೇರಿದಂತೆ ಇತರೆ ಅಂಶಗಳನ್ನ ಉಚಿತವಾಗಿ ಸರ್ಕಾರವೇ ಸರಬರಾಜು ಮಾಡಬೇಕು. ಹೀಗಾದಾಗ ಜಾತಿಯಾಗಲಿ, ವರ್ಗವಾಗಲೀ ನಾಶವಾಗುತ್ತದೆ ಎಂದು ಅಂಬೇಡ್ಕರ್ ಹೇಳುತ್ತಾರೆ.

ಅಂಬೇಡ್ಕರ್ ಪರಿದೃಷ್ಟಿಯಲ್ಲಿ, “ವರ್ಗ ಜೀವಂತವಾಗಿರುವುದಕ್ಕೆ ಕಾರಣ ಒಡೆತನ; ಜಾತಿ ಜೀವಂತವಾಗಿರುವುದಕ್ಕೆ ಮೇಲ್ಜಾತಿ ಮತ್ತು ಕೆಳಜಾತಿಯವರ ಬೆವರು ಬೆಸೆಯದಿರುವುದೇ ಕಾರಣ. ಯಾಕೆಂದರೆ ಈ ದೇಶದಲ್ಲಿ ಒಂದೊಂದು ಕುಲಕ್ಕೂ ಒಂದೊಂದು ಕಸುಬಿದೆ. ಅವರು ಅವರವರ ಕಾಲೋನಿಗಳಲ್ಲಿ ವಾಸಿಸುತ್ತಾರೆ. ಹಾಗಾಗಿ ಕಷ್ಟ ಸುಖಗಳನ್ನು ಹಂಚಿಕೊಳ್ಳದ ಈ ಸಮಾಜದ ಪ್ರತಿ ಜಾತಿಯೂ ಸ್ವಾರ್ಥಿಯಾಗಿರುತ್ತದೆ. ಜೊತೆಗೆ ಪ್ರತೀ ಜಾತಿಯೂ ತನ್ನ ಹಿತವನ್ನು ಮಾತ್ರ ಕಾಯ್ದುಕೊಳ್ಳುವುದರಿಂದ, ಇಲ್ಲಿ ದೇಶದ ಹಿತವನ್ನು ಯಾರೂ ಬಯಸುವುದಿಲ್ಲ.

ಹಾಗಾಗಿ ಜಾತಿ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ದೇಶ ಅಭಿವೃದ್ಧಿಯಾಗುವುದಿಲ್ಲ. ಇದು ಆಗಬೇಕು ಎಂದರೆ ‘ಜಾತಿ ನಾಶವಾಗಿ ಬೆವರು ಬೆಸೆಯಬೇಕು’. ಅಂದರೆ ಬ್ರಾಹ್ಮಣ ಮತ್ತು ದಲಿತರು ಕೂಡಿ ದುಡಿಯಬೇಕು. ಇಲ್ಲಿ ಮಾಲೀಕ, ಒಡೆಯ ಎನ್ನುವ ಪರಿಕಲ್ಪನೆಯೇ ಇರುವುದಿಲ್ಲ. ಇದು ಸಾರ್ವರ್ತ್ರಿಕವಾದಾಗ ಈ ಎರಡೂ ಸಮುದಾಯಗಳ ನಡುವೆ ಪರಸ್ಪರ ವಿವಾಹ ಸಂಬಂಧಗಳು ಏರ್ಪಟ್ಟು ಅಂತರ್ಜಾತಿ ವಿವಾಹಗಳು ಸಾಮಾನ್ಯವಾಗುತ್ತದೆ. ಇದರಿಂದಲೂ ಜಾತಿ ಮತ್ತಷ್ಟು ತೊಲಗುತ್ತದೆ. ಹಾಗಾಗಿ “ಕೃಷಿ ಸುಧಾರಣೆಯಲ್ಲಿ ಜಾತಿ ವಿನಾಶದ ಬೀಜಗಳಿವೆ” ಎಂದು ಅಂಬೇಡ್ಕರ್ ಹೇಳುತ್ತಾರೆ.

ಇದನ್ನೂ ಓದಿ: ಹೊಸ ತಲೆಮಾರು ಅಂಬೇಡ್ಕರ್–ಗಾಂಧಿ ಸಮನ್ವಯದ ಬಗ್ಗೆ ಚಿಂತಿಸಲಿ: ದೊರೆಸ್ವಾಮಿ

1951 ರಲ್ಲಿ ಭೂ ಸುಧಾರಣೆಯ ಭಾಗವಾಗಿ ‘ಉಳುವವನೇ ಭೂಮಿಯ ಒಡೆಯ’ ಎನ್ನುವುದನ್ನ ಜಾರಿಗೊಳಿಸಿ ಗೇಣಿ ಪದ್ದತಿಯನ್ನ ರದ್ದುಮಾಡಲಾಯಿತು. ಆದರೆ ಇದರ ಬಗ್ಗೆ ಅಂಬೇಡ್ಕರ್ ಕಟು ವಿಮರ್ಶೆ ಮಾಡಿದ್ದರು.

“ಗೇಣಿ ಪದ್ಧತಿಯಲ್ಲಿದ್ದವರು ದಲಿತರಲ್ಲ. ಇವರನ್ನು ಹೊರತಾಗಿಯೂ ಸುಮಾರು 5 ಕೋಟಿ ಭೂ ಹೀನ ಅಸ್ಪೃಶ್ಯರಿದ್ದಾರೆ. ಇವರಿಗೆಲ್ಲಾ ಈ ಕಾಯ್ದೆಯಿಂದ ಭೂಮಿ ಸಿಗುವುದಿಲ್ಲ. ಹಾಗಾಗಿ ಇದರಿಂದ ಏನೂ ಪ್ರಯೋಜನವಿಲ್ಲ. ಯಾವುದೇ ಸವರ್ಣಿಯ ರೈತನೂ ಭೂಹೀನ ದಲಿತರಿಗೆ ಭೂಮಿ ಬಿಟ್ಟುಕೊಡಲು ಇಚ್ಚಿಸುವುದಿಲ್ಲ. ಅಂದಿನ ರಾಜ್ಯ ಸರ್ಕಾರಗಳನ್ನು ನಡೆಸುತ್ತಿದ್ದವರೆಲ್ಲರೂ ದೊಡ್ಡ ದೊಡ್ಡ ಭೂ ಮಾಲೀಕರೇ ಆಗಿದ್ದು, ಇವರು ಈ ಕಾಯ್ದೆಗಳನ್ನು ಜಾರಿಗೆ ತರಲು ಒಪ್ಪುತ್ತಾರೆಯೇ ಎಂಬ ಪ್ರಮುಖ ಪ್ರಶ್ನೆಯನ್ನು ಎತ್ತುತ್ತಾರೆ. ಅದಾಗ್ಯೂ ಇವರಿಗೆ ಭೂಮಿ ನೀಡಿದರೂ, ಸಣ್ಣ ಸಣ್ಣ ಹಿಡುವಳಿದಾರರನ್ನು ಸೃಷ್ಟಿಸಲಾಗುತ್ತದೆ. ಇದರಿಂದ ಕೃಷಿ ಭೂಮಿಯು ಇನ್ನಷ್ಟು ಸಣ್ಣ ಹಿಡುವಳಿಗಳಾಗಿ ಒಡೆಯುತ್ತದೆ. ಇದರಿಂದ ಅದರ ಉತ್ಪಾದಕತೆ ದಿನೇ ದಿನೇ ಕಡಿಮೆಯಾಗುತ್ತದೆ. ಹಾಗಾಗಿ ವಿನಾಶ ಕಾದಿದೆ” ಎಂದು ಕಟುವಾಗಿ ಹೇಳುತ್ತಾರೆ.

ಮುಂದುವರಿದು ಈ ಭೂ ಸುಧಾರಣೆ ಯಶಸ್ವಿಯಾಗಬೇಕಾದರೆ ಪ್ರಮುಖವಾಗಿ, ಕ್ರಾಂತಿಕಾರಿ ಕಾಯ್ದೆ, ಇದನ್ನು ಜಾರಿಗೊಳಿಸುವ ಇಚ್ಚಾಶಕ್ತಿ ಮತ್ತು ಚಳವಳಿ ಎನ್ನುವ ಮೂರು ಅಂಶಗಳು ಇರಬೇಕಾಗುತ್ತದೆ ಎಂದು ಅಂಬೇಡ್ಕರ್ ಹೇಳುತ್ತಾರೆ. ಜೊತೆಗೆ ಸಂಪತ್ತಿನ ರಾಷ್ಟ್ರೀಕರಣ ಪರಿಕಲ್ಪನೆಯನ್ನು ಮತ್ತೊಮ್ಮೆ ಪುನರುಚ್ಚರಿಸುತ್ತಾರೆ. ಈ ಮೂಲಕ “State Socialism, Welfare State, Co-Operative Farming” ಆಧಾರದಲ್ಲಿ ಕಾರ್ಯಪ್ರವೃತ್ತರಾದರೆ ಪರಿಣಾಮಕಾರಿ ಸುಧಾರಣೆ ಸಾಧ್ಯ ಎಂದು ಹೇಳುತ್ತಾರೆ.


ಇದನ್ನೂ ಓದಿ: ಒಳಮೀಸಲಾತಿಯ ಕುರಿತು ಡಾ. ಬಿ.ಆರ್. ಅಂಬೇಡ್ಕರ್‌ರವರ ಆಶಯ ಎನು? – ಡಾ.ನರಸಿಂಹ ಗುಂಜಹಳ್ಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿ ದಾರಿ ತಪ್ಪಿಸುವ ಜಾಹೀರಾತು ಪ್ರಕರಣ; ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ರಾಮ್‌ದೇವ್‌ಗೆ ಸುಪ್ರೀಂ ತಪರಾಕಿ

0
ಪತಂಜಲಿ ಉತ್ಪನ್ನಗಳ ದಾರಿತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ಸಾರ್ವಜನಿಕ ಕ್ಷಮೆಯಾಚಿಸುವಂತೆ ಯೋಗ ಗುರು ರಾಮ್‌ದೇವ್, ಅವರ ಸಹಾಯಕ ಬಾಲಕೃಷ್ಣ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಒಂದು ವಾರ ಕಾಲಾವಕಾಶ ನೀಡಿದೆ. ಆದರೆ, ಈಗ ಅವರನ್ನು...