Homeಮುಖಪುಟಬಾಬಾಸಾಹೇಬ್ ಅಂಬೇಡ್ಕರ್: ಜೀವನಚರಿತ್ರೆಗಳ ಕತೆ

ಬಾಬಾಸಾಹೇಬ್ ಅಂಬೇಡ್ಕರ್: ಜೀವನಚರಿತ್ರೆಗಳ ಕತೆ

ಮೊದಮೊದಲು ಅಂಬೇಡ್ಕರ್‌ರನ್ನು ಸಂವಿಧಾನ ಶಿಲ್ಪಿಯನ್ನಾಗಿ, ದಲಿತ ಸಮುದಾಯಗಳ ವಿಮೋಚಕನಾಗಿ, ಹಿಂದೂ ಧರ್ಮದ ಭಂಜಕನಾಗಿ ನೋಡಲಾಗುತ್ತಿತ್ತು. ಈಗ ಅವರನ್ನು ಆಧುನಿಕ ಭಾರತದ ನಿರ್ಮಾಪಕರಲ್ಲಿ ಪ್ರಮುಖರೆಂದು ಒಪ್ಪಿಕೊಳ್ಳಲಾಗಿದೆ.

- Advertisement -
- Advertisement -

ಮೊದಮೊದಲು ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿಯನ್ನಾಗಿಯಷ್ಟೇ ನೋಡುವ ಚಾಳಿಯಿತ್ತು. ಅವರನ್ನು ಭಾರತದಲ್ಲಿ ದಲಿತ ಸಮುದಾಯಗಳ ವಿಮೋಚಕನಾಗಿಯೂ ಹಾಗೂ ದಲಿತರ ನಾಯಕನಾಗಿಯೂ ಸೀಮಿತವಾಗಿಯೇ ಗ್ರಹಿಸಲಾಗಿತ್ತು. ಅಂಬೇಡ್ಕರರನ್ನು ಹಿಂದೂ ಧರ್ಮದ ಭಂಜಕನೆಂದು ಅವಹೇಳನ ಮಾಡಲಾಯಿತು. ಈಗ ಅವರನ್ನು ಆಧುನಿಕ ಭಾರತದ ನಿರ್ಮಾಪಕರಲ್ಲಿ ಪ್ರಮುಖರೆಂದು ಒಪ್ಪಿಕೊಳ್ಳಲಾಗಿದೆ. ಗಾಂಧೀಜಿ ಅವರಷ್ಟೇ ಪ್ರಭಾವಿ ನಾಯಕರೆಂಬುದೂ ಮನದಟ್ಟಾಗಿದೆ. ಅವರು ಶ್ರೇಷ್ಠ ಮಾನವತಾವಾದಿಯಾಗಿದ್ದರು; ದಾರ್ಶನಿಕ ಚಿಂತಕರು, ಮಾನವ ಹಕ್ಕುಗಳ ಪ್ರತಿಪಾದಕರು; ಭಾರತದಲ್ಲಿ ಜಾತಿವಿನಾಶದ ಪ್ರವರ್ತಕರು; ಹಲವು ಜ್ಞಾನ ಶಾಖೆಗಳಲ್ಲಿ ಅಪಾರ ವಿದ್ವತ್ತನ್ನು ಪಡೆದಿದ್ದ ಮಹಾ ಮೇಧಾವಿಯಾಗಿದ್ದಾರೆ. ಅವರಿಗೆ ಒಂಬತ್ತು ಭಾಷೆಗಳಲ್ಲಿ ಪ್ರಾವೀಣ್ಯತೆ ಇತ್ತು.

PC: Kobo

ಕಾಲದಿಂದ ಕಾಲಕ್ಕೆ ಅಂಬೇಡ್ಕರ್ ಅವರನ್ನು ನೋಡುವ ದೃಷ್ಟಿಕೋನ ಬದಲಾಗುತ್ತಲೇ ಇದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ ಹಾಗೂ ಚಿಂತನೆಗಳನ್ನು ಅರಿಯಲು ಹಲವು ಮಾರ್ಗಗಳಿವೆ. ಅವುಗಳಲ್ಲಿ ಮುಖ್ಯವಾಗಿ ಅಂಬೇಡ್ಕರ್ ಬರೆದಿರುವ ಸಂಶೋಧನ ಕೃತಿಗಳು, ಲೇಖನಗಳು, ಪತ್ರಗಳು ಹಾಗೂ ಭಾಷಣಗಳಿವೆ. ಅವರು ‘ವೇಟಿಂಗ್ ಫಾರ್ ದಿ ವೀಸಾ’ ಎಂದು ತಮ್ಮ ಆತ್ಮಕತೆಯ ಸಣ್ಣ ಭಾಗವನ್ನು ಬರೆದುಕೊಂಡಿದ್ದಾರೆ. ಅಂಬೇಡ್ಕರರ ಜೀವನ ಚರಿತ್ರೆಯನ್ನು ಅನೇಕರು ಬರೆದಿದ್ದಾರೆ. ಅಂಬೇಡ್ಕರ್ ಅವರೊಂದಿಗೆ ಒಡನಾಟವನ್ನು ಹೊಂದಿದ್ದವರು ತಮ್ಮ ನೆನಪುಗಳನ್ನು ಬಳಸಿಕೊಂಡು ಬರೆದಿದ್ದಾರೆ. ನೇರವಾಗಿ ಅವರ ಸಂದರ್ಶನಗಳನ್ನು ಮಾಡಿ ಬರೆದಿದ್ದಾರೆ. ಅವರ ಬರಹಗಳನ್ನು ಅನುಸಂಧಾನ ಮಾಡಿ ಬರೆದಿರುವ ಸಂಶೋಧನ ಕೃತಿಗಳು ಹಾಗೂ ಲೇಖನಗಳಿವೆ. ಸದರಿ ಲೇಖನದಲ್ಲಿ ಅಂಬೇಡ್ಕರ್ ಅವರ ಜೀವನಚರಿತ್ರೆಯನ್ನು ಬರೆದು, ಮುಂದಿನ ತಲೆಮಾರುಗಳಿಗೆ ದಾಟಿಸಲು ನಡೆದಿರುವ ಪ್ರಯತ್ನಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ಮರಾಠಿ ಭಾಷೆಯಲ್ಲಿ ಚಾಂಗದೇವ ಭಾವನರಾವ್ ಖೈರಮೋಡೆ ಅವರದ್ದು ಜೀವನ ಚರಿತ್ರೆಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರಾಗಿದೆ. ಖೈರಮೋಡೆಯವರು ‘ಡಾ. ಭೀಮರಾವ ರಾಮಜಿ ಅಂಬೇಡ್ಕರ್ ಚರಿತ್ರ’ ಎಂಬ ಶೀರ್ಷಿಕೆಯಲ್ಲಿ ಅಂಬೇಡ್ಕರರ ಜೀವನ ಚರಿತ್ರೆಯನ್ನು ಹದಿನೈದು ಸಂಪುಟಗಳಲ್ಲಿ ಬರೆದಿದ್ದಾರೆ. ಈ ಬೃಹತ್ ಯೋಜನೆಗೆ ಅವರು ಕೈಹಾಕಿದ್ದು 1923ರಲ್ಲಿ. ಇದರ ಮೊದಲ ಸಂಪುಟವು ಅಂಬೇಡ್ಕರ್ ಬದುಕಿದ್ದಾಗಲೇ 1952ರಲ್ಲಿ ಪ್ರಕಟವಾಯಿತು. ಹದಿನೈದನೆಯ ಸಂಪುಟವು 1971ರಲ್ಲಿ ಹೊರಬಂದಿತು. ಇದರ ಮರುವರ್ಷವೇ ಖೈರಮೋಡೆಯವರು 1972ರಲ್ಲಿ ಹೃದಯಾಘಾತದಿಂದ ತೀರಿಕೊಂಡರು. ಅವರು ಈ ಸಂಪುಟಗಳಲ್ಲಿ ಅಂಬೇಡ್ಕರರ ಜೀವನ ಮತ್ತು ಹೋರಾಟವನ್ನು ಅತ್ಯಂತ ವಿಶಾಲವಾದ ಭಿತ್ತಿಯಲ್ಲಿ ಆಮೂಲಾಗ್ರವಾಗಿ ಕಟ್ಟಿಕೊಟ್ಟಿದ್ದಾರೆ.

ಖೈರಮೋಡೆಯವರಿಗೆ ಆಂಗ್ಲ ಸಾಹಿತ್ಯದ ಮಹಾನ್ ಸಾಹಿತಿಯಾಗಿದ್ದ ಸ್ಯಾಮ್ಯುಯೆಲ್ ಜಾನ್ಸನ್‍ನ ಜೀವನ ಚರಿತ್ರೆಯು ಅತ್ಯಂತ ಪ್ರಿಯವಾಗಿತ್ತು. ಅದನ್ನು ಬರೆದು ಪ್ರಖ್ಯಾತನಾದವನು ಜೇಮ್ಸ್ ಬಾಸ್ವೆಲ್. ಖೈರಮೋಡೆಯವರಿಗೆ ತಾನು ಕೂಡ ಬಾಸ್ವೆಲ್‍ನಂತೆಯೇ ಮಹಾನ್ ಜೀವನ ಚರಿತ್ರೆಯನ್ನು ಬರೆಯುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು. ಅಂಬೇಡ್ಕರರ ಜೀವನ ಚರಿತ್ರೆಯನ್ನು ಪೂರೈಸಲು ಖೈರಮೋಡೆಯವರು ಐದು ದಶಕಗಳ ಕಾಲ ಅವಿಶ್ರಾಂತರಾಗಿ ಶ್ರಮಿಸಿದರು. ಖೈರಮೋಡೆಯವರು ತಮ್ಮ ವಿದ್ಯಾರ್ಥಿ ಜೀವನದ ಕಾಲದಿಂದಲೇ ಅಂಬೇಡ್ಕರರ ಬಹುಮುಖ ವ್ಯಕ್ತಿತ್ವ ಹಾಗೂ ಪ್ರಖರ ವೈಚಾರಿಕ ಚಿಂತನೆಗಳಿಂದ ಆಕರ್ಷಿತರಾಗಿದ್ದರು. ಅಂಬೇಡ್ಕರರು ಆರಂಭಿಸಿದ ‘ಬಹಿಷ್ಕೃತ ಭಾರತ’ ಪತ್ರಿಕೆಯ ಕೆಲಸಗಳು ಖೈರಮೋಡೆಯವರ ಹೆಗಲಿಗೆ ಬಿದ್ದಿತ್ತು. ಆಗಲೇ ಅಂಬೇಡ್ಕರರು ಖೈರಮೋಡೆಯವರ ಕಾರ್ಯಕ್ಷಮತೆಯನ್ನು ಹಾಗೂ ಬದ್ಧತೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿದ್ದರು.

ಖೈರಮೋಡೆಯವರಿಂದ ರಚನೆಯಾದ ಅಂಬೇಡ್ಕರರ ಜೀವನ ಚರಿತ್ರೆಯ ಹದಿನೈದು ಸಂಪುಟಗಳು ಮರಾಠಿ ಜೀವನ ಚರಿತ್ರೆಯ ಸಾಹಿತ್ಯಕ್ಕೆ ಅಪೂರ್ವ ಕೊಡುಗೆಯಾಗಿವೆ. ಇಡೀ ಜಗತ್ತಿನ ಚರಿತ್ರೆಯಲ್ಲಿಯೇ ಒಬ್ಬ ವ್ಯಕ್ತಿಯ ಜೀವನ ಚರಿತ್ರೆಯು ಇಷ್ಟೊಂದು ದೀರ್ಘವಾಗಿ ಬರೆಯಲ್ಪಟ್ಟಿಲ್ಲ. ಇವು ಕನ್ನಡಕ್ಕೆ ಯಾವಾಗಲೋ ಅನುವಾದವಾಗಬೇಕಿತ್ತು. ಅನುವಾದಕರಾದ ಡಾ.ಜೆ.ಪಿ. ದೊಡಮನಿಯವರು ಈಗ ಕೈಹಾಕಿದ್ದಾರೆ ಎಂಬುದು ಸಂತೋಷದ ವಿಷಯ.

ಅಂಬೇಡ್ಕರರ ಜೀವನ ಚರಿತ್ರೆಯನ್ನು ಬರೆದವರಲ್ಲಿ ಧನಂಜಯ್ ಕೀರ್ ಅವರು ಕೂಡ ಮುಖ್ಯರಾಗಿದ್ದಾರೆ. ಅವರು ಬರೆದಿರುವ ‘ಡಾ. ಬಾಬಾಸಾಹೇಬ್ ಅಂಬೇಡ್ಕರ್: ಲೈಫ್ ಅಂಡ್ ಮಿಷನ್’ ಜೀವನ ಚರಿತ್ರೆಯು ಹೆಚ್ಚು ಅಧಿಕೃತತೆಯನ್ನು ಪಡೆದುಕೊಂಡಿದೆ. ಯಾಕೆಂದರೆ ಅವರು ಇದನ್ನು ಬರೆಯಲು ಅಂಬೇಡ್ಕರ್ ಅವರೊಂದಿಗೆ ಅನೇಕ ಬಾರಿ ಸಂದರ್ಶನಗಳನ್ನು ಮಾಡಿದರು. ಅಂಬೇಡ್ಕರ್ ಅವರು ಈ ಜೀವನಚರಿತ್ರೆಯನ್ನು ಓದಿ ಪ್ರಕಟಿಸಲು ಅನುಮತಿಯನ್ನು ನೀಡಿದ್ದರು. ಈ ಕೃತಿಯು ಮುಂಬಯಿಯ ‘ಪಾಪ್ಯುಲರ್ ಪ್ರಕಾಶನ’ದಿಂದ ಅಂಬೇಡ್ಕರರು ಬದುಕಿದ್ದಾಗಲೇ 1954ರಲ್ಲಿ ಪ್ರಕಟವಾಯಿತು. ಅಂಬೇಡ್ಕರ್, ಮಹಾತ್ಮ ಜ್ಯೋತಿಬಾ ಫುಲೆಯವರ ಜೀವನ ಚರಿತ್ರೆಯನ್ನು ಬರೆಯುವ ಮಹದಾಸೆಯನ್ನು ಹೊಂದಿದ್ದರು. ಆದರೆ ತಮ್ಮ ಕೊನೆಯ ದಿನಗಳಲ್ಲಿ ಬುದ್ಧನ ಜೀವನವನ್ನು ಕುರಿತ ಬರವಣಿಗೆಯಲ್ಲಿ ತೊಡಗಿಕೊಂಡರು. ಈ ವಿಚಾರವನ್ನು ಅವರು ಧನಂಜಯ್ ಕೀರ್ ಅವರೊಂದಿಗೆ ಹಂಚಿಕೊಂಡರು. ಆಗವರು ಜ್ಯೋತಿಬಾ ಫುಲೆಯವರ ಜೀವನ ಚರಿತ್ರೆಯನ್ನು ತಾನು ಬರೆಯುವುದಾಗಿ ಅಂಬೇಡ್ಕರರಿಗೆ ವಾಗ್ದಾನವನ್ನು ನೀಡುತ್ತಾರೆ. ಕೊಟ್ಟ ಮಾತಿನಂತೆಯೇ ಧನಂಜಯ್ ಕೀರ್, ಫುಲೆಯವರ ಜೀವನ ಚರಿತ್ರೆಯನ್ನು ಬರೆಯುತ್ತಾರೆ. ಇದರ ಜೊತೆಯಲ್ಲಿ ಛತ್ರಪತಿ ಶಾಹು ಮಹಾರಾಜರ ಜೀವನ ಚರಿತ್ರೆಯನ್ನು ಕೂಡ ಬರೆಯುತ್ತಾರೆ. ಈ ಹಿನ್ನೆಲೆಯಲ್ಲಿ ಧನಂಜಯ್ ಕೀರ್ ಬರೆದಿರುವ ಜ್ಯೋತಿಬಾ ಫುಲೆ, ಛತ್ರಪತಿ ಶಾಹು ಮಹಾರಾಜ ಹಾಗೂ ಅಂಬೇಡ್ಕರ್-ಈ ತ್ರಿವಳಿ (ಟ್ರಯಾಲಜಿ) ಜೀವನ ಚರಿತ್ರೆಗಳು ಭಾರತೀಯ ಸಾಮಾಜಿಕ ಹೋರಾಟದ ಚರಿತ್ರೆಗೆ ಅತ್ಯಂತ ಮಹತ್ವಪೂರ್ಣ ಕೊಡುಗೆಗಳಾಗಿವೆ.

ಧನಂಜಯ್ ಕೀರ್ ಅವರ ಕೃತಿಯನ್ನು ಕನ್ನಡದಲ್ಲಿ ಎಂ.ಎಸ್. ಮಾಧವರಾವ್ ಅವರು ‘ಡಾ. ಬಾಬಾಸಾಹೇಬ್ ಅಂಬೇಡ್ಕರ್: ಜೀವನ ಮತ್ತು ಜೀವನ ಧ್ಯೇಯ’ ಎಂದು ಅನುವಾದಿಸಿದ್ದಾರೆ. ಧನಂಜಯ್ ಕೀರ್ ಅವರ ಇದೇ ಪುಸ್ತಕವನ್ನು ಮಂಗ್ಳೂರು ವಿಜಯ ‘ಸಂಘರ್ಷ’ ಎಂದು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಆದರೆ ಭಾಷಾಂತರ ಎಂದು ಹೇಳಿಕೊಂಡಿಲ್ಲ. ಛತ್ರಪತಿ ಶಾಹು ಮಹಾರಾಜ ಹಾಗೂ ಜ್ಯೋತಿಬಾ ಫುಲೆಯವರ ಜೀವನ ಚರಿತ್ರೆಗಳನ್ನು ಜೆ.ಪಿ. ದೊಡಮನಿಯವರು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದ್ದಾರೆ.

ಮಹಾರಾಷ್ಟ್ರದ ನಾಗಪುರದವರಾದ ವಸಂತ ಮೂನ್ ಅವರು ತಮ್ಮ ವಿದ್ಯಾರ್ಥಿ ದಿನಗಳಿಂದಲೇ ಅಂಬೇಡ್ಕರರ ಕಟ್ಟಾ ಅಭಿಮಾನಿ ಹಾಗೂ ಅನುಯಾಯಿಗಳಾಗಿದ್ದರು. ನಾಗಪುರದಲ್ಲಿ ಅಂಬೇಡ್ಕರರ ಹೆಸರಿನಲ್ಲಿ ಬೃಹತ್ ಗ್ರಂಥಾಲಯವನ್ನು ಕಟ್ಟಿಸಿದ್ದಾರೆ. ಅಂಬೇಡ್ಕರರು ಇಂಗ್ಲಿಷಿನಲ್ಲಿ ಬರೆದಿರುವ ಹಲವು ಕೃತಿಗಳನ್ನು ವಸಂತ ಮೂನ್‍ರವರು ಮರಾಠಿಗೆ ಅನುವಾದಿಸಿದ್ದಾರೆ. ಅಂಬೇಡ್ಕರರ ಜೀವನ ಚರಿತ್ರೆಯನ್ನೂ ಬರೆದಿದ್ದಾರೆ. ‘ನ್ಯಾಶನಲ್ ಬುಕ್ ಟ್ರಸ್ಟ್’ನಿಂದ ಬಂದಿರುವ ಈ ಪುಸ್ತಕವನ್ನು ಬಿ.ಎ. ಸನದಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಭಾರತೀಯ ನಾಗರಿಕ ಸೇವಾ ಅಧಿಕಾರಿಯಾಗಿದ್ದ ವಸಂತ ಮೂನ್‍ರವರು ಅಂಬೇಡ್ಕರರ ಬರಹಗಳನ್ನು ಹಾಗೂ ಭಾಷಣಗಳನ್ನು ಇಂಗ್ಲಿಷಿನಲ್ಲಿ ಇಪ್ಪತ್ತು ಸಂಪುಟಗಳಲ್ಲಿ ಪ್ರಕಟವಾಗಲು ಪ್ರಧಾನ ಸಂಪಾದಕರಾಗಿ ಅಹರ್ನಿಶಿಯಾಗಿ ಶ್ರಮಿಸಿದ್ದಾರೆ. ಈ ಬೃಹತ್ ಯೋಜನೆಯನ್ನು ಅತ್ಯಂತ ಸಮರ್ಪಣ ಮನೋಭಾವದಿಂದ ನಿಭಾಯಿಸಿದ್ದಾರೆ. ತಮ್ಮ ಕೊನೆಯುಸಿರು ಇರುವತನಕ ಈ ಕೆಲಸದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವು ಮಹಾರಷ್ಟ್ರ ಸರ್ಕಾರದ ಶಿಕ್ಷಣ ಇಲಾಖೆಯ ಮೂಲಕ ಪ್ರಕಟಗೊಳ್ಳುವುದರ ಮುಖಾಂತರ ಎಲ್ಲರಿಗೂ ತಲುಪುವಂತಾಯಿತು. ಕೆಲವು ಸಂಪುಟಗಳು ಕರ್ನಾಟಕದಲ್ಲಿ ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ’ಯಿಂದ 1990ರ ದಶಕದಲ್ಲಿ ಅನುವಾದಗೊಂಡು ಕಡಿಮೆ ಬೆಲೆಯಲ್ಲಿ ಜನಸಾಮಾನ್ಯರಿಗೆ ದೊರಕುವಂತಾಯಿತು.

ಅನುವಾದ ಕಾರ್ಯಕ್ಕಾಗಿಯೇ ‘ಕುವೆಂಪು ಭಾಷಾ ಭಾರತಿ ಪ್ರಾಧಿಕಾರ’ 2006ರಲ್ಲಿ ಸ್ಥಾಪನೆಯಾದಾಗ ಅಂಬೇಡ್ಕರರ ಬರಹ ಮತ್ತು ಭಾಷಣಗಳನ್ನು ಪುನರ್ ಮುದ್ರಣ ಮಾಡುವ ಯೋಜನೆಯನ್ನು ಹಾಕಿಕೊಳ್ಳಲಾಯಿತು. ಈಗ ಸದ್ಯಕ್ಕೆ ಕನ್ನಡದಲ್ಲಿ ಅಂಬೇಡ್ಕರರ ಬರಹ ಮತ್ತು ಭಾಷಣಗಳನ್ನು 24 ಸಂಪುಟಗಳಲ್ಲಿ ಅನುವಾದಿಸಿ ಪ್ರಕಟಿಸಲಾಗಿದೆ.

ಅಂಬೇಡ್ಕರರ ಜೀವನ ಚರಿತ್ರೆ ಹಾಗೂ ಇತರ ಕೃತಿಗಳು ಅನುವಾದಗಳ ಮೂಲಕ ಕನ್ನಡದಲ್ಲಿ ಪ್ರವೇಶಿಸಿದವು. ಅಂಬೇಡ್ಕರರ ಒಂದೊಂದು ಕೃತಿಗಳು ಬಂದಾಗಲೂ ದೇಶದಲ್ಲಿ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದವು. ಅಂಬೇಡ್ಕರರು 1946ರಲ್ಲಿ ಬರೆದ ‘ಹೂ ವರ್ ದಿ ಶೂದ್ರಾಸ್?’ ಎಂಬ ಕೃತಿಯನ್ನು ಕುಮಾರ ವೆಂಕಣ್ಣನವರು 1963ರಲ್ಲಿ ಕನ್ನಡಕ್ಕೆ ಅನುವಾದಿಸಿದಾಗ ಮೇಲ್ಜಾತಿಯವರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಇದಕ್ಕಾಗಿಯೇ ಕುಮಾರ ವೆಂಕಣ್ಣನವರು ಪಟ್ಟ ಪಾಡನ್ನು ಹೀಗೆ ತೋಡಿಕೊಂಡಿದ್ದಾರೆ: “ಈ ಪುಸ್ತಕ ಅನುವಾದಿಸಿ ಪ್ರಕಟಿಸಿದ ಲೇಖಕರನ್ನು ನಿಂದಿಸಿ ಮೂದಲಿಸಿದವರು ಕೆಲವರು. ಇದರಲ್ಲಿ ‘ಬಸವಣ್ಣ’ನವರ ವಿಚಾರ ಇಲ್ಲ ಎಂದು ಒಬ್ಬರು, ‘ಬ್ರಾಹ್ಮಣರ ವಿರೋಧ ವಿಚಾರವಿದೆ’ ಎಂದು ಇನ್ನೊಬ್ಬರು ಟೀಕೆ ಬರೆದು, ಸಮಾಜ ಕಲ್ಯಾಣ ಹಾಗೂ ಪಠ್ಯಪುಸ್ತಕ ಸಮಿತಿಗಳು ಈ ಪುಸ್ತಕ ಕೊಳ್ಳದಂತೆ ಮಾಡಲಾಯಿತು. ಅಂದಿನ ಸಮಾಜ ಕಲ್ಯಾಣ ಸಚಿವರು ‘ಹರಿಜನರಿಗೆ ಬೇಕಾದುದು ಅನ್ನ-ಪುಸ್ತಕವಲ್ಲ’ ಎಂದು ವಾದಿಸಿ ಈ ಪುಸ್ತಕಕ್ಕೆ ಅಡ್ಡಿ ತಂದಿದ್ದರು.” ಅಂದು ಅಂಬೇಡ್ಕರ್ ಅವರ ಚಿಂತನೆ ಹಾಗೂ ಕೃತಿಗಳಿಗೆ ವ್ಯಕ್ತವಾದ ಜಾತಿಪೀಡಿತ ಮನಸ್ಥಿತಿಯನ್ನು ಇದು ತೋರಿಸುತ್ತದೆ. ದಲಿತ ಬಂಡಾಯ ಚಳವಳಿಯ ಕಾಲಘಟ್ಟದಿಂದ ಇಂತಹ ಪೂರ್ವಗ್ರಹಪೀಡಿತ ಮನೋಧರ್ಮದಲ್ಲಿ ಅಲ್ಪ ಸ್ವಲ್ಪವಾದರೂ ಬದಲಾಯಿತು.

ಅಂಬೇಡ್ಕರರು ಸ್ಥಾಪಿಸಿದ್ದ ‘ಪೀಪಲ್ಸ್ ಎಜ್ಯುಕೇಶನ್ ಸೊಸೈಟಿ’ಯಿಂದ ನಡೆಯುತ್ತಿದ್ದ ಔರಂಗಾಬಾದಿನಲ್ಲಿರುವ ಮಿಲಿಂದ್ ಕಲಾ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ.ಜಿ.ಎಸ್. ಲೋಖಂಡೆಯವರು ‘ಭೀಮರಾವ್ ರಾಮಜೀ ಅಂಬೇಡ್ಕರ್: ಎ ಸ್ಟಡಿ ಇನ್ ಸೋಶಿಯಲ್ ಡೆಮಾಕ್ರಸಿ’ ಎಂಬ ಕೃತಿಯನ್ನು ಬರೆದಿದ್ದಾರೆ. ಇದು ಮರಾಠವಾಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದ ಪಿಎಚ್.ಡಿ. ಸಂಶೋಧನ ಮಹಾಪ್ರಬಂಧವಾಗಿದೆ. ಲೋಖಂಡೆಯವರು ತಮ್ಮ ಸಂಶೋಧನೆಯಲ್ಲಿ ಅಂಬೇಡ್ಕರರ ಅಭಿಪ್ರಾಯಗಳನ್ನು ಹಾಗೂ ಅವರ ಜೀವನದ ಸಾಧನೆಗಳನ್ನು ನಿಷ್ಠುರವಾದ ವಿಮರ್ಶೆಗೆ ಗುರಿಪಡಿಸಿದ್ದಾರೆ. ಕರ್ನಾಟಕದಲ್ಲಿ ಸಮಾಜ ಕಲ್ಯಾಣ ಉಪ ನಿರ್ದೇಶಕರಾಗಿದ್ದ ಸಿ.ಎಚ್. ಜಾಕೋಬ್ ಲೋಬೊ ಅವರು ಈ ಕೃತಿಯನ್ನು ‘ಭೀಮರಾವ್ ರಾಮಜೀ ಅಂಬೇಡ್ಕರ್: ಸಾಮಾಜಿಕ ಪ್ರಜಾಪ್ರಭುತ್ವದ ಒಂದು ಅಧ್ಯಯನ’ ಎಂಬ ಶೀರ್ಷಿಕೆಯಲ್ಲಿ 1979ರಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಇದು ಬೆಂಗಳೂರಿನ ಗಂಗಾರಾಮ್ಸ್ ಪಬ್ಲಿಕೇಷನ್ಸ್‌ದಿಂದ ಪ್ರಕಟವಾಗಿದೆ.

ಆಂಗ್ಲ ಪ್ರಾಧ್ಯಾಪಕರು, ಕಾದಂಬರಿಕಾರರು, ಅನುವಾದಕರು ಹಾಗೂ ವಿಮರ್ಶಕರಾಗಿದ್ದ ವಿ.ಎಂ. ಇನಾಂದಾರ್ ಅವರು ಅಂಬೇಡ್ಕರರ ಜೀವನ ಚರಿತ್ರೆಯನ್ನು ಬರೆದಿದ್ದಾರೆ. ‘ಅಂಬೇಡ್ಕರ್: ವ್ಯಕ್ತಿ ಮತ್ತು ವಿಚಾರ’ (1981) ಕೃತಿಯು ಕನ್ನಡದಲ್ಲಿ ಬಂದಿರುವ ಅತ್ಯುತ್ತಮ ಜೀವನ ಚರಿತ್ರೆಗಳಲ್ಲಿ ಒಂದಾಗಿದೆ. ಇನಾಂದಾರರು ಇಬ್ಬರು ವ್ಯಕ್ತಿಗಳ ಜೀವನ ಚರಿತ್ರೆಯನ್ನು ಬರೆಯುವ ಉದ್ದೇಶ ಹೊಂದಿದ್ದನ್ನು ಹೇಳಿಕೊಂಡಿದ್ದಾರೆ. 1. ಪ್ರಪಂಚದಲ್ಲಿ ಧರ್ಮಬುದ್ಧಿಯನ್ನು ಜಾಗೃತವಾಗಿಸಿ ಲೋಕಕ್ಕೆ ಕ್ಷೇಮಕಾರಿಯಾದ ಮಾರ್ಗವನ್ನು ತೋರಿದ ಮಹನೀಯರೊಬ್ಬರು. ಈ ವ್ಯಕ್ತಿಯೇ ಏಸು ಕ್ರಿಸ್ತರಾಗಿದ್ದರು.

2. ಆಧುನಿಕ ಭಾರತದ ಚರಿತ್ರೆಯಲ್ಲಿ ನಾಡಿನ ಸಾಮಾಜಿಕ ಜೀವನ ಸಮಾನತೆಯ ಆಧಾರದ ಮೇಲೆ ಪುನರ್ವ್ಯವಸ್ಥೆಗೊಳಗಾಗಬೇಕು ಎಂದು ಏಕಾಗ್ರನಿಷ್ಠೆಯಿಂದ ಶ್ರಮಿಸಿದ ಮೇಧಾವಿಯಾದ ರಾಜಕೀಯಸ್ಥರು ಇನ್ನೊಬ್ಬರು. ಈ ವ್ಯಕ್ತಿಯು ಅಂಬೇಡ್ಕರ್ ಆಗಿದ್ದರು. ಇನಾಂದಾರರು ಮೊದಲು ಅಂಬೇಡ್ಕರರ ಜೀವನ ಚರಿತ್ರೆಯನ್ನು ಬರೆಯಲು ನಿರ್ಧರಿಸಿದರು.

ಇನಾಂದಾರರು 1947ರಲ್ಲಿ ಮುಂಬಯಿಯ ಸಿಡೆನ್‍ಹ್ಯಾಮ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ಆಗವರು ಆಕಸ್ಮಿಕವಾಗಿ ಅಂಬೇಡ್ಕರರನ್ನು ಖುದ್ದಾಗಿ ಭೇಟಿಯಾಗುವ ಅವಕಾಶ ಒದಗಿ ಬಂದಿತು. ಅಂಬೇಡ್ಕರರು ಸ್ಥಾಪಿಸಿದ್ದ ಸಿದ್ಧಾರ್ಥ ಕಾಲೇಜು ಆರಂಭವಾಗಿ ಒಂದು ವರ್ಷವಾಗಿತ್ತು. ಆ ಕಾಲೇಜಿನ ಪ್ರಾಚಾರ್ಯರಾಗಿದ್ದ ಪ್ರೊ. ಅಶ್ವತ್ಥಾಮಾಚಾರ್ಯ ಗಜೇಂದ್ರಗಡಕರ ಅವರು ಇನಾಂದಾರರ ಗುರುಗಳಾಗಿದ್ದರು. ಒಂದು ದಿನ ಗಜೇಂದ್ರಗಡಕರ ಸಿಕ್ಕಾಗ ತಮ್ಮ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರ ಹುದ್ದೆ ಖಾಲಿಯಿದೆ, ತಾವು ಬರಬಹುದೆಂದು ಹೇಳುತ್ತಾರೆ. ಆಗ ಇನಾಂದಾರರು ಅವರನ್ನು ಭೇಟಿಯಾಗಲು ಹೋದಾಗ ಅವರ ಕೋಣೆಯಲ್ಲಿ ಅಂಬೇಡ್ಕರ್ ಇದ್ದರು.

ಆಗ ಅಂಬೇಡ್ಕರರು ತುಂಬಾ ಅನೌಪಚಾರಿಕವಾಗಿ ಮಾತಾಡಿದ್ದನ್ನು ಇನಾಂದಾರರು ಮೆಚ್ಚಿಕೊಳ್ಳುತ್ತಾರೆ. ಅಂಬೇಡ್ಕರರು ಇನಾಂದಾರರನ್ನು ತಮ್ಮ ಕಾಲೇಜಿಗೆ ಬರುವ ಮನಸ್ಸಿದೆಯೇ ಎಂದು ನೇರವಾಗಿಯೇ ಕೇಳುತ್ತಾರೆ. ಆದರೆ ಇನಾಂದಾರರು ಕೆಲಸ ಮಾಡುತ್ತಿದ್ದ ಕಾಲೇಜು ಸರ್ಕಾರಿ ಸಂಸ್ಥೆಯಾಗಿತ್ತು. ಇನಾಂದಾರರು ಅದನ್ನು ಮನಸ್ಸು ಬಿಚ್ಚಿ ಹೇಳುವುದು ಹೇಗೆಂದು ಸಂಕೋಚ ಪಡುತ್ತಿರುವಾಗ ಅಂಬೇಡ್ಕರರು “ನಿಮಗೆ ಇದು ಅರೆಭರವಸೆ ಎನಿಸುವುದು ಸಹಜವೇ. ಆದರೆ ಒಂದು ಮಾತು. ನಮ್ಮ ಕಾಲೇಜಿಗೆ ಬೇಕಾಗಿರುವುದು ಒಳ್ಳೆಯ ಶಿಕ್ಷಕರು. ಆ ವಿಷಯದಲ್ಲಿ ನಮ್ಮ ಪ್ರಿನ್ಸಿಪಾಲರು ಹೇಳಿದ ಮಾತೇ ಕೊನೆಯ ಮಾತು. ಸಂಸ್ಥೆಯ ಅಧ್ಯಕ್ಷನಾದ ನಾನಾಗಲಿ, ವ್ಯವಸ್ಥಾಪಕ ಮಂಡಳಿಯ ಸದಸ್ಯರಾಗಲಿ, ಕಾಲೇಜಿನ ವ್ಯಾಸಂಗ ವ್ಯವಸ್ಥೆಯಲ್ಲಿ ಎಂದಿಗೂ ಕೈಹಾಕುವುದಿಲ್ಲ. ನಮ್ಮ ಪ್ರಿನ್ಸಿಪಾಲರನ್ನು ಬೇಕಾದರೆ ಕೇಳಿ ನೋಡಿ” ಎಂದು ಮುಚ್ಚುಮರೆ ಇಲ್ಲದೆ ಹೇಳುತ್ತಾರೆ. ಅಂಬೇಡ್ಕರರ ಈ ಮಾತುಗಳು ಇಂದಿಗೂ ಮುಖ್ಯವಾಗಿವೆ. ಆದರೆ ಕಾರಣಾಂತರಗಳಿಂದ ಇನಾಂದಾರರಿಗೆ ಒಂದೇ ತಿಂಗಳಲ್ಲಿ ಧಾರವಾಡದ ಕರ್ನಾಟಕ ಕಾಲೇಜಿಗೆ ವರ್ಗವಾಗುತ್ತದೆ.

ಇನಾಂದಾರರು ಮುಂಬಯಿಯ ಅನೇಕ ಸಭೆಗಳಲ್ಲಿ ಅಂಬೇಡ್ಕರರ ಭಾಷಣಗಳನ್ನು ಕೇಳಿದ್ದರು ಹಾಗೂ ಅವರಿಂದ ಪ್ರಭಾವಿತರಾಗಿದ್ದರು. ಇನಾಂದಾರರು ಬರೆದ ಅಂಬೇಡ್ಕರರ ಜೀವನ ಚರಿತ್ರೆಯು ಮೈಸೂರು ಮಹಾರಾಜ ಕಾಲೇಜಿನ ಪದವಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವಾಗಿತ್ತು. ಇನಾಂದಾರರು ಮರಾಠಿಯ ವಿ.ಸ. ಖಾಂಡೇಕರರ ‘ಯಯಾತಿ’ ಕಾದಂಬರಿಯನ್ನು ಅದ್ಭುತವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಇದು ಕೂಡ ಮೈಸೂರು ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕವಾಗಿತ್ತು. ಇದು ಕನ್ನಡದ ಅತ್ಯುತ್ತಮ ಅನುವಾದಗಳಲ್ಲಿ ಒಂದಾಗಿದೆ.

ಕನ್ನಡ ಸಾಹಿತ್ಯಲೋಕದಲ್ಲಿ ತಮ್ಮನ್ನು ಜೆ.ಸು.ನಾ. ಎಂದೇ ಗುರುತಿಸಿಕೊಂಡಿರುವ ಕೋಲಾರ ಜಿಲ್ಲೆಯ ಜೆ.ಸು. ನಾರಾಯಣರಾವ್ ಅವರು ಅಂಬೇಡ್ಕರರ ಜೀವನ ಚರಿತ್ರೆಯನ್ನು ಬರೆದಿದ್ದಾರೆ. ‘ಭೀಮವಾಣಿ’ ಪತ್ರಿಕೆಯ ಸಂಪಾದಕರಾಗಿದ್ದ ಡಿ.ಆರ್. ನಂಜಯ್ಯನವರು ಅಂಬೇಡ್ಕರರ ಜೀವನ ಚರಿತ್ರೆಯನ್ನು ಬರೆದುಕೊಡಲು ಜೆ.ಸು.ನಾ. ಅವರನ್ನು ಕೇಳಿಕೊಳ್ಳುತ್ತಾರೆ. ಆಗ ಜೆ.ಸು.ನಾ. ಬರೆದದ್ದು ಪತ್ರಿಕೆಯಲ್ಲಿ ಪ್ರತಿ ಹದಿನೈದು ದಿನಕ್ಕೊಮ್ಮೆ ಧಾರಾವಾಹಿಯಾಗಿ ‘ಕ್ರಾಂತಿ ಪುರುಷ’ ಎಂಬ ಹೆಸರಿನಲ್ಲಿ ಪ್ರಕಟವಾಗುತ್ತದೆ. ಪುಸ್ತಕ ರೂಪದಲ್ಲಿ ಮೊದಲ ಮುದ್ರಣವಾಗಿ ಹೊರ ಬಂದಾಗಲೂ ಇದಕ್ಕೆ ‘ಕ್ರಾಂತಿ ಪುರುಷ’ (1982) ಎಂಬ ಹೆಸರಿತ್ತು. ಇದರ ಎರಡನೇ ಪರಿಷ್ಕೃತ ಮುದ್ರಣಗೊಂಡಾಗ ಶೀರ್ಷಿಕೆಯನ್ನು ‘ಅಂಬೇಡ್ಕರ್ ಮಹಾಶಯ’ (2007) ಎಂದು ಬದಲಿಸಲಾಗಿದೆ.

ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಮ.ನ. ಜವರಯ್ಯ ಅವರು ಅಂಬೇಡ್ಕರರ ಹಲವು ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮ.ನ.ಜ. ಅವರು ಅಂಬೇಡ್ಕರರನ್ನು ಗಂಭೀರವಾಗಿ ಹಾಗೂ ಆಳವಾಗಿ ಅಧ್ಯಯನ ಮಾಡಿದವರಲ್ಲಿ ಮುಖ್ಯರಾಗಿದ್ದಾರೆ. ಅವರು ಕನ್ನಡದಲ್ಲಿ ಬರೆದ ಅಂಬೇಡ್ಕರರ ಕುರಿತು ಬರೆದ ಪುಸ್ತಕವು ಅಂಬೇಡ್ಕರ್ ಜೀವನ ಹಾಗೂ ಸಾಧನೆಗಳನ್ನು ವರ್ತಮಾನದ ಹಿನ್ನೆಲೆಯಲ್ಲಿ ಚರ್ಚಿಸುತ್ತದೆ. ಜವರಯ್ಯನವರು ಗಾಂಧಿ ಹಾಗೂ ಅಂಬೇಡ್ಕರರ ಚಿಂತನೆಗಳನ್ನು ತೌಲನಿಕವಾಗಿ ವಿಶ್ಲೇಷಿಸಿದ್ದಾರೆ. ಇದೇ ಬಗೆಯಲ್ಲಿ ಇತಿಹಾಸ ಪ್ರಾಧ್ಯಾಪಕರಾದ ಎಸ್. ಚಂದ್ರಶೇಖರ್ ಅವರು ಕೂಡ ಗಾಂಧಿ ಹಾಗೂ ಅಂಬೇಡ್ಕರರ ವಿಚಾರಗಳನ್ನು ಚರ್ಚಿಸಿದ್ದಾರೆ.

ಮೂಲತಃ ಅಮೆರಿಕಾದವರಾದ, ಈಗ ಭಾರತದ ಪ್ರಜೆಯಾಗಿರುವ ಗೇಲ್ ಆಮ್‍ವೆಡ್ಟ್ ಅವರು ಅಂಬೇಡ್ಕರರ ಬಗ್ಗೆ ಆಳವಾದ ಅಧ್ಯಯನವನ್ನು ಮಾಡಿದ ವಿಶ್ವವಿಖ್ಯಾತ ವಿದ್ವಾಂಸರಾಗಿದ್ದಾರೆ. ಗೇಲ್ ಆಮ್‍ವೆಡ್ಟ್‌ರವರ ‘ಅಂಬೇಡ್ಕರ್: ಟುವರ್ಡ್ಸ್‌ ಆ್ಯನ್ ಎನ್‍ಲೈಟನ್ಡ್ ಇಂಡಿಯಾ’ ಕೃತಿಯು ಅಪೂರ್ವ ಒಳನೋಟಗಳನ್ನು ಹೊಂದಿದೆ. ಇದನ್ನು ಅತ್ಯುತ್ತಮ ಅನುವಾದಕರಾದ ರಾಹು (ಆರ್.ಕೆ. ಹುಡಗಿ) ಅವರು ‘ಅಂಬೇಡ್ಕರ್: ಪ್ರಬುದ್ಧ ಭಾರತದ ದ್ರಷ್ಟಾರ’ (2010) ಎಂದು ಕನ್ನಡಕ್ಕೆ ಅನುವಾದಿಸಿದ್ದಾರೆ. ಅಂಬೇಡ್ಕರರ ಕಾರ್ಯದರ್ಶಿಯಾಗಿದ್ದ ನಾನಕಚಂದ್ ರತ್ತು ಅವರು ಬರೆದಿರುವ ‘ರೆಮಿನ್‍ಸೆನ್ಸಸ್ ಅಂಡ್ ರಿಮೆಂಬರೆನ್ಸಸ್ ಆಫ್ ಅಂಬೇಡ್ಕರ್’ ಎಂಬ ಕೃತಿಯನ್ನು ಕೂಡ ರಾಹು ಅವರು ‘ಅಂಬೇಡ್ಕರ್: ಸ್ಮೃತಿ-ಸಂಸ್ಮೃತಿ’ (2015) ಎನ್ನುವ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಇವು ಗುಲ್ಬರ್ಗದ ಸುಮೇಧ ಪ್ರಕಾಶನದಿಂದ ಪ್ರಕಟವಾಗಿವೆ. ಗೇಲ್ ಆಮ್‍ವೆಡ್ಟ್‌ರ ‘ದಲಿತ್ ವಿಷನ್ಸ್’ ಕೃತಿಯನ್ನು ಕವಿಗಳಾದ ಮೂಡ್ನಾಕೂಡು ಚಿನ್ನಸ್ವಾಮಿಯವರು ‘ದಲಿತ ದರ್ಶನ’ ಎಂದು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.

ಅಂಬೇಡ್ಕರರ ಹಲವು ಲೇಖನಗಳನ್ನು ಕನ್ನಡಕ್ಕೆ ತಂದಿರುವ ಎಚ್.ಎಸ್. ಅನುಪಮಾ ಅವರು ಇತ್ತೀಚೆಗೆ ಅಂಬೇಡ್ಕರರ ಜೀವನ ಚರಿತ್ರೆಯನ್ನು ಬರೆದು ಲಡಾಯಿ ಪ್ರಕಾಶನದ ಮೂಲಕ ಪ್ರಕಟಿಸಿದ್ದಾರೆ. ಕನ್ನಡದಲ್ಲಿ ಈಗಲೂ ಅಂಬೇಡ್ಕರರ ಜೀವನ-ಸಾಧನೆಗಳನ್ನು ವಿವರಿಸುವ ಪುಸ್ತಕಗಳು ಬರುತ್ತಿವೆ. ಕಾಲಾನುಕ್ರಮದಲ್ಲಿ ಅವರ ಜೀವನದ ಘಟನೆಗಳನ್ನು ವಿವರಿಸುವ ಅನೇಕ ಪುಸ್ತಕಗಳು ಬಂದಿವೆ. ಅಂಬೇಡ್ಕರರ ಅಪರೂಪದ ಭಾವಚಿತ್ರಗಳನ್ನು ಒಳಗೊಂಡಿರುವ ಕೆಲವು ಪುಸ್ತಕಗಳು ಕೂಡ ಪ್ರಕಟವಾಗಿವೆ.

ಅಂಬೇಡ್ಕರರ ಜೀವನ ಹಾಗೂ ಸಾಧನೆಯು ವ್ಯಕ್ತಿಗತವಾದುದಲ್ಲ. ಅದು ಭಾರತದ ಎಲ್ಲ ದಮನಿತ ಸಮುದಾಯಗಳೊಂದಿಗೆ ಸಂಬಂಧವನ್ನು ಪಡೆದುಕೊಂಡಿದೆ. ಆಧುನಿಕ ಭಾರತದಲ್ಲಿ ಅವರು ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿ ಇಟ್ಟ ಹೆಜ್ಜೆಗಳು ಇಂದಿಗೂ ಪ್ರಸ್ತುತವಾಗಿವೆ; ಮುಂದಿನ ತಲೆಮಾರುಗಳ ಹೋರಾಟಗಾರರಿಗೆ ದಾರಿದೀಪಗಳಾಗಿವೆ; ಅಂಬೇಡ್ಕರರ ಜೀವನ-ಸಾಧನೆ-ಚಿಂತನೆಗಳು ಸ್ವಾಭಿಮಾನದ ಬದುಕಿಗೆ ಸ್ಪೂರ್ತಿಯಾಗಿವೆ.

  • ಡಾ. ಸುಭಾಷ್ ರಾಜಮಾನೆ

ಬೆಂಗಳೂರಿನ ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಕನ್ನಡ, ಇಂಗ್ಲಿಷ್, ಮರಾಠಿ ಭಾಷೆಗಳನ್ನು ಬಲ್ಲ ಇವರು, ಸಿನಿಮಾ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ತೊಡಗಿಸಿಕೊಂಡಿದ್ದಾರೆ


ಇದನ್ನೂ ಓದಿ: ಪರಿನಿಬ್ಬಾಣ ದಿನ ವಿಶೇಷ: ಅಂಬೇಡ್ಕರ್ ಅವರಿಗೂ ಬೇಕಿರುವ ವಿಮೋಚನೆ – ವಿ.ಎಲ್ ನರಸಿಂಹಮೂರ್ತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...