Homeಮುಖಪುಟಪರಿನಿಬ್ಬಾಣ ದಿನ ವಿಶೇಷ: ಅಂಬೇಡ್ಕರ್ ಅವರಿಗೂ ಬೇಕಿರುವ ವಿಮೋಚನೆ

ಪರಿನಿಬ್ಬಾಣ ದಿನ ವಿಶೇಷ: ಅಂಬೇಡ್ಕರ್ ಅವರಿಗೂ ಬೇಕಿರುವ ವಿಮೋಚನೆ

ಅಂಬೇಡ್ಕರ್ ಸಾಮಾನ್ಯ ಮನುಷ್ಯನಲ್ಲಿ ನಂಬಿಕೆ ಇಟ್ಟವರಾಗಿದ್ದು ಸಾಮಾನ್ಯ ಮನುಷ್ಯ ’ಮಹಾತ್ಮ’ನಾಗುವುದನ್ನು ವಿರೋಧಿಸುತ್ತಿದ್ದರು. ಯಾವ ಮನುಷ್ಯನೂ ಪರಿಪೂರ್ಣನಾಗುವುದಕ್ಕೆ ಸಾಧ್ಯವಿಲ್ಲದಿರುವಾಗ ಮಹಾತ್ಮನಾಗುವುದು ಹೇಗೆ ಸಾಧ್ಯ ಎನ್ನುವುದು ಅಂಬೇಡ್ಕರ್ ಅವರ ಪ್ರಶ್ನೆಯಾಗಿತ್ತು.

- Advertisement -
- Advertisement -

ಆಧುನಿಕ ಭಾರತದ ಚರಿತ್ರೆ ಅಂಬೇಡ್ಕರ್ ಅವರನ್ನು ಬಹಳ ಕಾಲ ಮರೆಸುವುದಕ್ಕೆ ಪ್ರಯತ್ನಪಟ್ಟಿತ್ತು. ಇದು ಇಂದಿಗೂ ಮುಂದುವರೆದಿದೆ. ಯಾಕೆಂದರೆ ಇವತ್ತು ಇಡೀ ಭಾರತವನ್ನು ತಲುಪಿರುವ ಏಕೈಕ ನಾಯಕರೆಂದರೆ ಅಂಬೇಡ್ಕರ್. ಕೇವಲ ದಲಿತರ ಐಕಾನ್ ಆಗಿ ಅಷ್ಟೆ ಅಲ್ಲದೆ ಅವರಿಗಿರುವ ರಾಜಕೀಯ ಮಹತ್ವದ ಕಾರಣದಿಂದಲೂ ಅಂಬೇಡ್ಕರ್ ಇವತ್ತು ಎಲ್ಲರಿಗೂ ಬೇಕಾಗಿರುವ ನಾಯಕರಾಗಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳೂ ಅಂಬೇಡ್ಕರ್ ಅವರನ್ನು ತಮಗೆ ಬೇಕಾದಷ್ಟು ಅಪ್ರಾಪ್ರಿಯೇಟ್ ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ. ತೀವ್ರ ಎಡಪಂಥೀಯರಿಂದ ಹಿಡಿದು ತೀವ್ರ ಬಲಪಂಥೀಯರಿಗೂ ಇವತ್ತು ಅಂಬೇಡ್ಕರ್ ಬೇಕಾದವರಾಗಿದ್ದಾರೆ. ಚರಿತ್ರೆಯ ಪುಟಗಳನ್ನು ತಿರುಗಿಸಿ ನೋಡಿದರೆ ಎಲ್ಲ ರಾಜಕೀಯ ಪಕ್ಷಗಳು ಅಂಬೇಡ್ಕರ್ ಅವರ ಬಗ್ಗೆ ಅಸಡ್ಡೆಯನ್ನು ತೋರಿರುವುದು ನಮ್ಮ ಕಣ್ಣ ಮುಂದಿದೆ. ಅಂಬೇಡ್ಕರ್ ಅವರನ್ನು ಬ್ರಿಟಿಷ್ ಸಾಮ್ರಾಜ್ಯಶಾಹಿಯ ಏಜೆಂಟ್ ಎಂದು ದೂರವಿಟ್ಟಿದ್ದ ಎಡಪಕ್ಷಗಳಿಗಾಗಲೀ, ಗಾಂಧಿ ಮತ್ತು ಕಾಂಗ್ರೆಸ್ ಬಗ್ಗೆ ಅಂಬೇಡ್ಕರ್ ಮಾಡಿದ ಟೀಕೆಗಳಿಂದಾಗಿ ಅವರ ಬಗ್ಗೆ ವಿಪರೀತ ಗುಮಾನಿ ಇಟ್ಟುಕೊಂಡಿದ್ದ ಕಾಂಗ್ರೆಸ್‌ಗಾಗಲಿ, ಅಂಬೇಡ್ಕರ್ ಅವರ ಒಟ್ಟು ಚಿಂತನೆಗೆ ಸಂಪೂರ್ಣ ವಿರುದ್ಧವಿರುವ ಹಿಂದುತ್ವವಾದಿ ಸಂಘ ಪರಿವಾರಕ್ಕಾಗಲಿ ಅಂಬೇಡ್ಕರ್ ಇವತ್ತು ಬೇಡವಾದ ವ್ಯಕ್ತಿತ್ವ ಅಲ್ಲ.

ಇದನ್ನೂ ಓದಿ: ಕೇಂದ್ರದೊಂದಿಗೆ ರೈತ ಮುಖಂಡರ ಸಭೆ: ಸಂಸತ್ ಅಧಿವೇಶನ ಕರೆದು ಕಾಯ್ದೆಗಳನ್ನು ಹಿಂತೆಗೆದುಕೊಳ್ಳಲು ರೈತರ ತಾಕೀತು

ಅಂಬೇಡ್ಕರ್ ಬಗೆಗಿನ ಇವರ ಇತ್ತೀಚಿನ ಒಲವು ಕೇವಲ ರಾಜಕೀಯ ತುರ್ತಿನದು ಎನ್ನುವುದನ್ನು ಅರ್ಥಮಾಡಿಕೊಳ್ಳಲು ನಾವು ಹೆಚ್ಚು ಕಷ್ಟಪಡಬೇಕಿಲ್ಲ. ಯಾಕೆಂದರೆ ಕಾರ್ಮಿಕರನ್ನು ಸಂಘಟಿಸಲು ಎಡಪಕ್ಷಗಳಿಗೆ, ದಲಿತ ಸಮುದಾಯಗಳನ್ನು ’ತನ್ನ ಕಾಯಂ’ ಓಟು ಬ್ಯಾಂಕ್ ಆಗಿ ಮಾಡಿಕೊಂಡಿದ್ದ ಕಾಂಗ್ರೆಸ್‌ಗೆ ಅಂಬೇಡ್ಕರ್ ಅನಿವಾರ್ಯ. ಇನ್ನು ಹಿಂದೂ ರಾಷ್ಟ್ರ ನಿರ್ಮಾಣದ ಕನಸು ಕಾಣುತ್ತಿರುವ ಸಂಘ ಪರಿವಾರಕ್ಕೆ ಇಷ್ಟವಿಲ್ಲದಿದ್ದರೂ ದಲಿತರ ಓಲೈಕೆಯ ಕಾರಣಕ್ಕೆ ಅಂಬೇಡ್ಕರ್ ಅನಿವಾರ್ಯ. ಈ ರಾಜಕೀಯ ಲೆಕ್ಕಾಚಾರದ ಆಚೆಗೆ ಅಂಬೇಡ್ಕರ್ ಅವರ ಚಿಂತನೆಯನ್ನು ಭಾರತವೂ ಸೇರಿದಂತೆ ವಿಶ್ವದ ಹಲವು ವಿದ್ವಾಂಸರು, ವಿಶ್ವವಿದ್ಯಾಲಯಗಳು ಗಂಭೀರವಾಗಿ ಅಧ್ಯಯನ ಮಾಡಲು ತೊಡಗಿರುವುದು ಸಂತೋಷದ ವಿಷಯ.

ಇದೆಲ್ಲ ಅಂಬೇಡ್ಕರ್ ಅವರನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವ ’ಹೊರಗಿ’ನವರ ಮಾತಾಯಿತು. ದಿನದಿಂದ ದಿನಕ್ಕೆ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿರುವ ಅಂಬೇಡ್ಕರ್ ಅವರನ್ನು ಒಬ್ಬ ’ಸಾಂಸ್ಕೃತಿಕ ನಾಯಕ’ನನ್ನಾಗಿ ದಲಿತ ಸಮುದಾಯ ಹೇಗೆ ಸ್ವೀಕರಿಸಿದೆ ಎನ್ನುವುದನ್ನು ಗಮನಿಸಬೇಕಾಗಿದೆ. ದಲಿತ ಸಮುದಾಯಗಳಿಗೆ ಅಂಬೇಡ್ಕರ್ ಅವರ ಬಗ್ಗೆ ಇರುವ ಗೌರವ ಅಪರಿಮಿತವಾದುದು ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ಅಂಬೇಡ್ಕರ್ ಅವರನ್ನು ದಲಿತ ಸಮುದಾಯ ಪರಿಭಾವಿಸಿಕೊಂಡಿರುವ ರೀತಿಯಲ್ಲಿ ಹಲವು ಭಿನ್ನತೆಗಳಿರುವುದನ್ನು ಗಮನಿಸಬಹುದು. ಪ್ರಮುಖ ರಾಜಕೀಯ ವಿಜ್ಞಾನಿ ಪ್ರೊ. ಗೋಪಾಲ್ ಗುರು ಅವರು ದಲಿತ ಸಮುದಾಯ ಅಂಬೇಡ್ಕರ್ ಅವರ ವ್ಯಕ್ತಿತ್ವವನ್ನು ಮೂರು ವಿಧಗಳಲ್ಲಿ
ಕಟ್ಟಿಕೊಂಡಿರುವುದನ್ನು/ಸ್ವೀಕರಿಸಿರುವುದನ್ನು ಗುರುತಿಸುತ್ತಾರೆ: ಮಹಾಮಾನವನಾಗಿ, ವಿಮೋಚಕನಾಗಿ ಮತ್ತು ಆಧುನಿಕತಾವಾದಿಯಾಗಿ.

ಈ ಪರಿಕಲ್ಪನೆಗಳನ್ನು ವಿವರಿಸಬಹುದಾದರೆ, ಅಂಬೇಡ್ಕರ್ ಅವರನ್ನು ’ಮಹಾಮಾನವ’ನನ್ನಾಗಿ ಸ್ವೀಕರಿಸಿರುವವರು ತೀರಾ ತಳಮಟ್ಟದಲ್ಲಿರುವ ದಲಿತ ಸಮುದಾಯಗಳು. ಇವರಿಗೆ ಅಂಬೇಡ್ಕರ್ ಅತ್ಯುನ್ನತ ನೈತಿಕ ಮತ್ತು ಬೌದ್ಧಿಕ ಮೌಲ್ಯಗಳನ್ನು ಹೊಂದಿರುವ ’ಮಹಾಮಾನವ’. ಅಂಬೇಡ್ಕರ್ ತಮ್ಮ ವೈಯಕ್ತಿಕ ಬದುಕಿನಲ್ಲಿ ಎಷ್ಟೇ ಕಷ್ಟ ಬಂದರೂ ಅವುಗಳೆಲ್ಲವನ್ನು ಮರೆತು ಸಮುದಾಯದ ಒಳಿತಿಗಾಗಿ ಹೋರಾಡಿದವರು. ತಮ್ಮ ರಾಜಕೀಯ ವಿರೋಧಿಗಳನ್ನು ದಿಟ್ಟವಾಗಿ ಎದುರಿಸಿದವರು. ದಲಿತ ಸಮುದಾಯದ ಬಹುತೇಕ ಜನರು ಅಂಬೇಡ್ಕರ್ ಅವರು ಪಡೆದ ಪದವಿಗಳ ಹೆಸರು ಹೇಳಬಲ್ಲರೆ ಹೊರತು ಇವರಿಗೆ ಅಂಬೇಡ್ಕರ್ ಅವರು ಬರೆದಿರುವ ಸಾವಿರಾರು ಪುಟಗಳ ಬರಹಗಳನ್ನ ಓದುವ ಅಥವಾ ಅವರ ಚಿಂತನೆಯನ್ನು ಬೌದ್ಧಿಕವಾಗಿ ಮುಖಾಮುಖಿಯಾಗುವ ಸಾಮರ್ಥ್ಯವಾಗಲಿ ಇಲ್ಲ. ಅಂಬೇಡ್ಕರ್ ಪ್ರತಿಭೆ ಸಾಮರ್ಥ್ಯಗಳಿಗೆ ತಕ್ಕ ಮನ್ನಣೆ ಸಿಗಲಿಲ್ಲ ಎನ್ನುವ ಕೊರಗು ಈ ಸಮುದಾಯಕ್ಕೆ ಯಾವತ್ತೂ ಇದೆ ಅದಕ್ಕಾಗಿಯೇ ಅಂಬೇಡ್ಕರ್ ಅವರನ್ನು ’ಮಹಾಮಾನವ’ನನ್ನಾಗಿಸಿ ಆರಾಧಿಸುತ್ತದೆ. ಅಂಬೇಡ್ಕರ್ ಅವರಲ್ಲಿ ಮಹಾತ್ಮನನ್ನು ಕಂಡುಕೊಂಡು ಸಮಾಧಾನಪಟ್ಟುಕೊಳ್ಳುತ್ತದೆ.

ಎರಡನೆಯದಾಗಿ ಅಂಬೇಡ್ಕರ್ ಅವರಲ್ಲಿ ವಿಮೋಚಕನನ್ನು ಕಾಣುವ ವರ್ಗ. ಇದು ದಲಿತ ಸಮುದಾಯಗಳಲ್ಲಿ ಇರುವ ಕೆಳ ಮಧ್ಯಮ ವರ್ಗ. ಯಾವ ಸಮಾಜ ಸುಧಾರಕನೂ ತರಲಾರದ ಬದಲಾವಣೆಗಳನ್ನು ಅಂಬೇಡ್ಕರ್ ತಮ್ಮ ಬಾಳಿನಲ್ಲಿ ತಂದರು ಎಂದು ನಂಬುವ ಈ ವರ್ಗ, ಅದೇ ಹೊತ್ತಿಗೆ ವರ್ತಮಾನದ ದಲಿತ ಚಳವಳಿ ಮತ್ತು ಮುಖ್ಯವಾಹಿನಿಯ ರಾಜಕಾರಣಿಗಳ ಬಗ್ಗೆ ತೀವ್ರ ಅಸಮಾಧಾನ ತೋರಿಸುತ್ತದೆ. ಯಾವ ಹಿಂದೂ ದೇವ-ದೇವತೆಗಳೂ ಮಾಡಲಾಗದ ಬದಲಾವಣೆಗಳನ್ನು ಅಂಬೇಡ್ಕರ್ ಮಾಡಿದರು ಎಂದು ನಂಬಿ ಹಿಂದೂ ದೇವರುಗಳ ಜಾಗದಲ್ಲಿ ಅಂಬೇಡ್ಕರ್ ಮತ್ತು ಬುದ್ಧನನ್ನು ಪ್ರತಿಷ್ಠಾಪಿಸಿ ದೇವರ ಬಗ್ಗೆ ತಮ್ಮ ಕಲ್ಪನೆಯನ್ನು ಈ ವರ್ಗ ಬದಲಾಯಸಿಕೊಂಡಿದೆ. ಇದೇ ಸಂದರ್ಭದಲ್ಲಿ ಈ ವರ್ಗಕ್ಕೆ ಸೇರುವ ಹೆಣ್ಣುಮಕ್ಕಳು ಅಂಬೇಡ್ಕರ್ ಅವರಲ್ಲಿ ಒಟ್ಟು ಹಿಂದೂ ಧರ್ಮದ ಹಿಡಿತದಿಂದ ಮತ್ತು ತಮ್ಮ ಕುಟುಂಬದ ಪುರುಷಪ್ರಾಧಾನ್ಯತೆಯಿಂದ ಬಿಡಿಸಿದ ವಿಮೋಚಕನನ್ನು ಕಾಣುತ್ತಾರೆ.

ಕೊನೆಯದಾಗಿ ಅಂಬೇಡ್ಕರ್ ಅವರಲ್ಲಿ ಆಧುನಿಕತಾವಾದಿಯನ್ನು ಕಾಣುವ ವರ್ಗ. ಇದು ದಲಿತ ಸಮುದಾಯಗಳ ಮಧ್ಯಮ ವರ್ಗ. ಇವರಿಗೆ ಅಂಬೇಡ್ಕರ್ ಪಕ್ಕಾ ಆಧುನಿಕತಾವಾದಿಯಾಗಿದ್ದರಿಂದಲೇ ದಲಿತ ಸಮುದಾಯಕ್ಕೆ ವಿಮೋಚನೆ ದೊರಕಿಸಲು ಸಾಧ್ಯವಾಗಿದ್ದು ಎನ್ನುವ ನಂಬಿಕೆ ಇದೆ. ಈ ಆಧುನಿಕತಾವಾದಿ ವ್ಯಕ್ತಿತ್ವವನ್ನು ಕಟ್ಟುವುದಕ್ಕಾಗಿ ಅಂಬೇಡ್ಕರ್ ಅವರ ಎದುರು ಬೇರೆ ನಾಯಕರ ವ್ಯಕ್ತಿತ್ವಗಳನ್ನು ಇಟ್ಟು ಹೋಲಿಸಿ ನೋಡುತ್ತಾರೆ. ಅಂಬೇಡ್ಕರ್ ಅವರ ಬೌದ್ಧಿಕ ಸಾಮರ್ಥ್ಯಕ್ಕೆ, ಸಾಮಾಜಿಕ ಬದ್ಧತೆಗೆ ಸರಿದೂಗಬಲ್ಲ ಇನ್ನೊಬ್ಬ ನಾಯಕ ಈ ದೇಶದಲ್ಲಿ ಇಲ್ಲವೆಂದು ಇವರು ಪ್ರತಿಪಾದಿಸುತ್ತಾರೆ. ಸಂವಿಧಾನ ರಚನೆಗೆ ಅಂಬೇಡ್ಕರ್ ಪಟ್ಟ ಪರಿಶ್ರಮ ಮತ್ತು ಅಂಬೇಡ್ಕರ್ ಅವರ ಸಾವಿರಾರು ಪುಟಗಳ ಬರಹಗಳ ಸಂಪುಟಗಳನ್ನು ಉದಾಹರಿಸುವ ಮೂಲಕ ಹೊಸ ತಲೆಮಾರಿನ ಯುವಕರನ್ನು ಅಂಬೇಡ್ಕರ್ ಅವರಂತೆ ಆಗಲು ಪ್ರೇರೇಪಿಸಲು ಯತ್ನಿಸುತ್ತಾರೆ. ಈ ವರ್ಗ ಅಂಬೇಡ್ಕರ್ ಅವರ ಬಗ್ಗೆ ಕಟ್ಟಿಕೊಂಡಿರುವ ಆಧುನಿಕತಾವಾದಿ ವ್ಯಕ್ತಿತ್ವಕ್ಕೆ ಇನ್ನೊಂದು ಉದಾಹರಣೆಯಾಗಿ ಒಂದು ಕೈಯಲ್ಲಿ ಪುಸ್ತಕ ಇನ್ನೊಂದು ಕೈ ಆಕಾಶದ ಕಡೆಗಿರುವ ಅಂಬೇಡ್ಕರ್ ಅವರ ಆಳೆತ್ತರದ ಪ್ರತಿಮೆಯನ್ನು ನೋಡಬಹುದು. ಅಂಬೇಡ್ಕರ್ ಕೈಯಲ್ಲಿರುವ ಪುಸ್ತಕ ವಿದ್ವತ್ತನ್ನು ಪ್ರತಿನಿಧಿಸಿದರೆ, ಆಕಾಶದ ಕಡೆ ತೋರಿಸುತ್ತಿರುವ ಕೈ ದಲಿತರಿಗಿರುವ ಬದಲಾವಣೆಯ ಅಪರಿಮಿತ ಸಾಧ್ಯತೆಗಳನ್ನು ಪ್ರತಿನಿಧಿಸುತ್ತದೆ.

ದಲಿತರ ಸಾಂಸ್ಕೃತಿಕ ಮತ್ತು ರಾಜಕೀಯ ಹೋರಾಟದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗೆ ಮುಖ್ಯ ಪಾತ್ರವಿದೆ. ಈ ದೇಶ ಹಲವು ದಶಕಗಳ ಕಾಲ ಅಂಬೇಡ್ಕರ್ ಅವರನ್ನು ಮರೆಸಲು ಪ್ರಯತ್ನಿಸಿದ್ದಕ್ಕೆ ಪ್ರತಿರೋಧವಾಗಿ ಕೂಡ ಈ ಪ್ರತಿಮೆಗಳು ಸಾಕ್ಷಿ. ದಲಿತ ಸಮುದಾಯಗಳ ಸಾಂಸ್ಕೃತಿಕ ಹೋರಾಟಕ್ಕೆ ಈ ಪ್ರತಿಮೆಗಳ ಅಗತ್ಯ ಉಂಟು. ಅಂಬೇಡ್ಕರ್ ಅವರ ವಿಚಾರಗಳನ್ನು ಆಧಾರವಾಗಿಟ್ಟುಕೊಂಡು ವಿಶ್ಲೇಷಣೆ, ವಾಗ್ವಾದ ಮಾಡುವ ಸಾಮರ್ಥ್ಯವಿಲ್ಲದ ತಳ ಹಂತದ ದಲಿತ ಸಮುದಾಯಗಳು ಮತ್ತು ಕೆಳ ಮದ್ಯಮವರ್ಗದ ದಲಿತರಿಗೆ ಈ ಪ್ರತಿಮಾರೂಪದ (iconographic) ವ್ಯಕ್ತಿತ್ವದ ಅಂಬೇಡ್ಕರ್ ರಕ್ಷಣೆ ಒದಗಿಸಬಲ್ಲರು- ಶೋಷಣೆಯ ವಿರುದ್ಧ ರಕ್ಷಾ ಕವಚದಂತೆ.

ಅಂಬೇಡ್ಕರ್ ಅವರ ಬಗ್ಗೆ ದಲಿತ ಸಮುದಾಯ ಕಟ್ಟಿಕೊಂಡಿರುವ ಈ ಮಹಾಮಾನವ ಐತಿಹಾಸಿಕ ಕಲ್ಪನೆಯ ಬಗ್ಗೆ ಸ್ವತಃ ಅಂಬೇಡ್ಕರ್ ಯಾವ ಅಭಿಪ್ರಾಯ ಹೊಂದಿದ್ದರು ಎನ್ನುವುದನ್ನು ಕೊಂಚ ಗಮನಿಸಿದರೆ, ದಲಿತ ಸಮುದಾಯ ಅಂಬೇಡ್ಕರ್ ಅವರನ್ನು ಪರಿಭಾವಿಸಿರುವ ಕ್ರಮದಲ್ಲಿರುವ ವೈರುಧ್ಯ ಗೊತ್ತಾಗುತ್ತದೆ. ಅಂಬೇಡ್ಕರ್ ಎಲ್ಲ ರೀತಿಯ ಮೂರ್ತೀಕರಣವನ್ನು (Image Construction) ಐತಿಹಾಸಿಕವಾಗಿ ವಿರೋಧಿಸಿದ್ದರು.

ತಮ್ಮ ಹೋರಾಟಕ್ಕೆ ಜನರನ್ನು ಒಗ್ಗೂಡಿಸಲು ಅಂಬೇಡ್ಕರ್ ದಲಿತರ ಬೇರಿನ ಮೂಲದ ಇತಿಹಾಸವನ್ನು ಒಂದು ಬೋಧನಾ ತತ್ವವಾಗಿ (pedagogy) ಬಳಸಿಕೊಂಡಿದ್ದರು. ಅದರಲ್ಲೂ ಅವರು ಆಯ್ಕೆ ಮಾಡಿಕೊಂಡಿದ್ದ ಐತಿಹಾಸಿಕ ವ್ಯಕ್ತಿಗಳು ವೈಚಾರಿಕತೆಯಲ್ಲಿ ನಂಬಿಕೆ ಇಟ್ಟವರಾಗಿದ್ದರು. ಯಾವುದೇ ಹೋರಾಟ ಸಮುದಾಯ ಕೇಂದ್ರಿತವಾಗಿರಬೇಕು ಎನ್ನುವುದು ಅವರ ನಂಬಿಕೆಯಾಗಿತ್ತು. ಅಂಬೇಡ್ಕರ್ ಪಾಶ್ಚಾತ್ಯ ಮತ್ತು ಭಾರತದ ವೈಚಾರಿಕ ಮಾರ್ಗಗಳೆರಡರಿಂದಲೂ ತಮ್ಮ ಹೋರಾಟಕ್ಕೆ ಬೇಕಾದ ಸಾಂಸ್ಕೃತಿಕ ಮತ್ತು ಬೌದ್ಧಿಕ ಅಂಶಗಳನ್ನು ತೆಗೆದುಕೊಂಡಿದ್ದರು. ಬುದ್ಧ, ಕಬೀರ, ತುಕಾರಾಮ, ಫುಲೆ, ಜಾನ್ ಡುಯಿ ಮತ್ತು ಸೆಲಿಗ್ಮನ್‌ರಂತಹ ಚಿಂತನಾ ಸೆಲೆಗಳ ಜೊತೆ ತಮ್ಮನ್ನು ಗುರುತಿಸಿಕೊಂಡಿದ್ದರು. ಮುಖ್ಯವಾಗಿ ಬೌದ್ಧ ಧರ್ಮದ ಬಗ್ಗೆ ಅವರಿಗಿದ್ದ ಒಲವಿಗೆ ಕಾರಣ ಬೌದ್ಧ ಧರ್ಮವು ಯಾವುದೇ ಬಗೆಯ ಮಹಾಮಾನವ ಪರಿಕಲ್ಪನೆಯನ್ನು ವಿರೋಧಿಸುತ್ತದೆ ಅನ್ನುವುದಾಗಿತ್ತು.

ಅಂಬೇಡ್ಕರ್ ಸಾಮಾನ್ಯ ಮನುಷ್ಯನಲ್ಲಿ ನಂಬಿಕೆ ಇಟ್ಟವರಾಗಿದ್ದು ಸಾಮನ್ಯ ಮನುಷ್ಯ ’ಮಹಾತ್ಮ’ನಾಗುವುದನ್ನು ವಿರೋಧಿಸುತ್ತಿದ್ದರು. ಯಾವ ಮನುಷ್ಯನೂ ಪರಿಪೂರ್ಣನಾಗುವುದಕ್ಕೆ ಸಾಧ್ಯವಿಲ್ಲದಿರುವಾಗ ಮಹಾತ್ಮನಾಗುವುದು ಹೇಗೆ ಸಾಧ್ಯ ಎನ್ನುವುದು ಅಂಬೇಡ್ಕರ್ ಅವರ ಪ್ರಶ್ನೆಯಾಗಿತ್ತು. ಅಂಬೇಡ್ಕರ್ ಅವರ ವ್ಯಕ್ತಿತ್ವದ ಪ್ರಮುಖ ಅಂಶವೇ ಈ ವೈಚಾರಿಕತೆ. ಇದು ಅಂಬೇಡ್ಕರ್ ಅವರ ಚಿಂತನೆ ಮತ್ತು ಕ್ರಿಯೆಯ ಪ್ರಮುಖ ಅಂಶವಾಗಿತ್ತು. ಆದರೆ ಕಾಲಕ್ರಮೇಣ ಅವರ ಅನುಯಾಯಿಗಳಲ್ಲಿ ಈ ವೈಚಾರಿಕತೆ ಕಡಿಮೆಯಾಗಿ ಅಂಬೇಡ್ಕರ್ ಬಗೆಗಿನ ಆರಾಧನೆ ಮತ್ತು ವ್ಯಕ್ತಿಪೂಜೆಯ ಭಾವಗಳೇ ಮೇಲುಗೈ ಸಾಧಿಸಿದವು. ಹಾಗಾಗಿಯೇ ಅಂಬೇಡ್ಕರ್ ಮಾನವನಿಂದ ’ಮಹಾಮಾನವ’ನಾಗಿ ಪರಿವರ್ತನೆಗೊಂಡಿದ್ದಾರೆ. ದಲಿತ ಸಮುದಾಯಗಳಲ್ಲಿ ಅಂಬೇಡ್ಕರ್ ಈಗ ಆಚರಣೆಗಿಂತ ಹೆಚ್ಚಾಗಿ ವಿಜೃಂಭಣೆಯಲ್ಲಿ ಕಳೆದುಹೋಗುತ್ತಿದ್ದಾರೆ.

ಅಂಬೇಡ್ಕರ್ ಕೆಲವರಿಗೆ ಐಕಾನ್ ಆಗಿರುವಂತೆ ಕೆಲವರಿಗೆ ಮುಜುಗರದ ವ್ಯಕ್ತಿತ್ವವೂ ಆಗಿದ್ದಾರೆ. ಅಂಬೇಡ್ಕರ್ ಜೊತೆಗೆ ಗುರುತಿಸಿಕೊಳ್ಳುವುದು ಕೆಲವು ’ಮುಂದುವರೆದ’ ದಲಿತರಿಗೆ ಕಷ್ಟದ ಕೆಲಸ. ಯಾಕೆಂದರೆ ಇದು ಅವರ ಜಾತಿ ಐಡೆಂಟಿಟಿಯನ್ನು ಬಯಲು ಮಾಡುತ್ತದೆ. ಅಂಬೇಡ್ಕರ್ ಅವರ ಫೋಟೋ ಇಟ್ಟುಕೊಳ್ಳಲು ಕೂಡ ಆಗದ ದಲಿತರು ಕೂಡ ಈ ವರ್ಗದಲ್ಲಿ ಬರುತ್ತಾರೆ. ಇದೇ ಸಂದರ್ಭದಲ್ಲಿ ದಲಿತ ಸಂಘಟನೆಗಳಿಗೆ, ಸಾಮಾಜಿಕ ಹೋರಾಟಗಾರರಿಗೆ ಅಂಬೇಡ್ಕರ್ ಅವರೇ ಮುಖ್ಯ ಗುರುತಾಗುತ್ತಾರೆ. ಇವರಿಗೆ ಅಂಬೇಡ್ಕರ್ ಜೊತೆಗೆ ಗುರುತಿಸಿಕೊಳ್ಳುವುದರಲ್ಲಿ ಯಾವ ಮುಜುಗರ, ಹಿಂಜರಿಕೆಯೂ ಇಲ್ಲ. ಸಾಮಾಜಿಕವಾಗಿ ಅರಿವು ಹೊಂದಿರುವ ದಲಿತ ಸಮುದಾಯಗಳಲ್ಲೇ ಅಂಬೇಡ್ಕರ್ ಬೇರೆ ಬೇರೆಯಾಗಿ ಕಾಣುವುದು ವಿಚಿತ್ರವೆನಿಸುತ್ತದೆ.

ಅಂಬೇಡ್ಕರ್ ಅವರ ಜನ್ಮದಿನ ಆಚರಣೆ, ಬೌದ್ಧ ಧರ್ಮ ಸ್ವೀಕಾರದ ದಿನ, ಸಂವಿಧಾನ ದಿನಾಚರಣೆ, ಪರಿನಿಬ್ಬಾಣ ದಿನ ಹೀಗೆ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಎಲ್ಲ ಆಚರಣೆಗಳಲ್ಲೂ ಸಾಮಾನ್ಯ ದಲಿತರು, ದಲಿತ ಹೋರಾಟಗಾರರು, ದಲಿತ ರಾಜಕಾರಣಿಗಳು ಬೇರೆ ಬೇರೆ ಬಗೆಯಲ್ಲಿ ಅಂಬೇಡ್ಕರ್ ಅವರನ್ನು ಸಂಭ್ರಮಿಸಿದರೂ ಅಂಬೇಡ್ಕರ್ ಅವರ ಪ್ರತಿಮೆ, ಭಾವಚಿತ್ರಕ್ಕೆ ಅಪಮಾನವಾದ ಸಂದರ್ಭಗಳಲ್ಲಿ ಇಡೀ ಸಮುದಾಯ ಒಂದೇ ಎನ್ನುವಂತೆ ಒಕ್ಕೊರಲಿನಿಂದ ಪ್ರತಿಕ್ರಿಯಿಸುವುದೂ ಪ್ರತಿಭಟಿಸುವುದೂ ಇದೆ.

ಅಂಬೇಡ್ಕರ್ ಅವರ ಪ್ರತಿಮೆಗಳ ಪ್ರತಿಷ್ಠಾಪನೆ, ಉತ್ಸವಗಳಿಗೆ ತೋರಿಸುತ್ತಿರುವ ಉತ್ಸಾಹವನ್ನು ದಲಿತರು ಅಂಬೇಡ್ಕರ್ ಅವರ ವಿಚಾರಗಳ ಅನುಷ್ಠಾನಕ್ಕೆ ತೋರಿಸುತ್ತಿಲ್ಲ. ಹಾಗಾಗಿಯೆ ಎಲ್ಲ ರಾಜಕಿಯ ಪಕ್ಷಗಳು ಮತ್ತು ಅವುಗಳ ಮೇಲ್ಜಾತಿಯ ನೇತಾರರು ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆಯನ್ನು, ಅವರ ಫೋಟೋಗಳಿಗೆ ಪುಷ್ಪಾರ್ಚನೆಯನ್ನು ಸಲೀಸಾಗಿ ಮಾಡುತ್ತಿದ್ದಾರೆ. ಆದರೆ ಈ ಮೇಲ್ಜಾತಿಯ ರಾಜಕಾರಣಿಗಳ ಮನಸ್ಸಿನ ಒಳಗಿರುವ ಅಂಬೇಡ್ಕರ್ ಚಿತ್ರ ಯಾವುದು? ಅವರಿಗೆ ನಿಜವಾಗಿಯೂ ಅಂಬೇಡ್ಕರ್ ಗೌರವಾನ್ವಿತ ವ್ಯಕ್ತಿತ್ವವಾಗಿದ್ದಾರೆಯೇ? ಖಂಡಿತವಾಗಿಯೂ ಇಲ್ಲ. ಕೇವಲ ರಾಜಕೀಯ ಲಾಭಕ್ಕಾಗಿ ಅಂಬೇಡ್ಕರ್ ಅವರನ್ನು ಗೌರವಿಸುವ ನಾಟಕವಾಡುವ ರಾಜಕಾರಣಿಗಳಿಂದ ಅಂಬೇಡ್ಕರ್ ಅವರನ್ನ ಬಿಡುಗಡೆಗೊಳಿಸಬೇಕಾದ ತುರ್ತು ಇವತ್ತು ದಲಿತರ ಮುಂದಿದೆ. ಅದಕ್ಕಿಂತ ಮುಂಚೆ ಕೇವಲ ಹುಟ್ಟಿನ ಕಾರಣಕ್ಕಾಗಿ ವಾರಸುದಾರಿಕೆಯನ್ನು ಹೊಂದಿರುವ ದಲಿತರು, ಕೇವಲ ಆರಾಧನೆಗೆ ಮಾತ್ರ ತಾವು ಸೀಮಿತಗೊಳಿಸಿಕೊಂಡಿರುವ ಅಂಬೇಡ್ಕರ್ ಅವರನ್ನು ಈ ಪ್ರಕ್ರಿಯೆಯಿಂದಲೂ ಬಿಡುಗಡೆಗೊಳಿಸಬೇಕಾಗಿದೆ.

  • ವಿ.ಎಲ್ ನರಸಿಂಹಮೂರ್ತಿ

(ಇಲ್ಲಿನ ಕೆಲವು ಅಂಶಗಳಿಗೆ ಪ್ರೊ. ಗೋಪಾಲಗುರು ಅವರ ’ಅಂಡರ್ ಸ್ಟ್ಯಾಂಡಿಗ್ ದ ಮಲ್ಟಿಪಲ್ ಇಮೇಜಸ್ ಆಫ್ ಅಂಬೇಡ್ಕರ್ ಲೇಖನಕ್ಕೆ ಋಣಿಯಾಗಿದ್ದೇನೆ.- ಲೇಖಕ)

ಇಂಗ್ಲಿಷ್ ಪ್ರಾಧ್ಯಾಪಕರಾಗಿರುವ ವಿ.ಎಲ್ ನರಸಿಂಹಮೂರ್ತಿ ಅವರು ವರ್ತಮಾನದ ತಲ್ಲಣಗಳನ್ನು ಗುರುತಿಸುವ ಮತ್ತು ಅವಕ್ಕೆ ಪ್ರತಿಕ್ರಿಯಿಸಿ ಚರ್ಚೆ ಜಾರಿಯಲ್ಲಿಡುವುದರಲ್ಲಿ ನಂಬಿಕೆ ಇರುವ ಹೊಸತಲೆಮಾರಿನ ಲೇಖಕ.


ಇದನ್ನೂ ಓದಿ: BJP ಐಟಿ ಸೆಲ್‌ ಹೇಳಿದ ಸುಳ್ಳು ಬಯಲು: ವೈರಲ್ ಆದ ಚಿತ್ರದ‌ ಸತ್ಯ ಹೇಳಿದ ರೈತ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...