ಎಲ್ಲಾ ಭಾರತೀಯರ ಡಿಎನ್‌ಎ ಒಂದೇ, ಆದರೆ ಅದರಲ್ಲಿ ಗೋಮಾಂಸ ತಿನ್ನುವವರನ್ನು ಹೊರತುಪಡಿಸಬೇಕು. ಗೋಮಾಂಸ ತಿನ್ನುವವರ ಡಿಎನ್‌ಎ ನಮ್ಮಲಿಲ್ಲ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸದಸ್ಯೆ ಸಾಧ್ವಿ ಪ್ರಾಚಿ ವಿವಾದಿತ ಹೇಳಿಕೆ ನೀಡಿದ್ದಾರೆ.
ಧರ್ಮಗಳನ್ನು ಹೊರತು ಪಡಿಸಿ ಎಲ್ಲಾ ಭಾರತೀಯರ ಡಿಎನ್‌ಎ ಒಂದೇ ಎಂದು ಇತ್ತಿಚೇಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿದ್ದರು. ಅವರ ಹೇಳಿಕೆಗೆ ಪ್ರತಿಯಾಗಿ ಸಾಧ್ವಿ ಪ್ರಾಚಿ ತಿರುಗೇಟು ನೀಡಿದ್ದಾರೆ.
ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ’ಭಾರತೀಯರ ಎಲ್ಲರ ಡಿಎನ್‌ಎ ಒಂದೇ ಆಗಿರಬಹುದು. ಆದರೆ, ಗೋಮಾಂಸವನ್ನು ತಿನ್ನುವವರನ್ನು ಹೊರತುಪಡಿಸಿ’ ಎಂದು ಸಾಧ್ವಿ ಪ್ರಾಚಿ ಹೇಳಿದ್ದಾರೆ.
ಇದನ್ನೂ ಓದಿ: ಹಿಂದುತ್ವ ವಿಚಾರ: RSS ಮುಖ್ಯಸ್ಥ ಮೋಹನ್ ಭಾಗವತ್‌ಗೆ ಓವೈಸಿ ತಿರುಗೇಟು
ರಾಜಸ್ಥಾನದಲ್ಲಿ ಲವ್ ಜಿಹಾದ್ನ ಹೆಸರಲ್ಲಿ ಹಿಂದೂ ಹುಡುಗಿಯರನ್ನು ಮೋಸಗೊಳಿಸಿ ಮತಾಂತರಗೊಳಿಸಲಾಗುತ್ತಿದೆ ಎಂದು ಆರೋಪಿಸಿರುವ ಅವರು, ರಾಜಸ್ಥಾನ ಸರ್ಕಾರವು ರಾಜಕೀಯವನ್ನು ಬಿಟ್ಟು ಧಾರ್ಮಿಕ ಮತಾಂತರಕ್ಕೆ ಅಂತ್ಯ ಹಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಜೊತೆಗೆ ಒಕ್ಕೂಟ ಸರ್ಕಾರವು ಜನಸಂಖ್ಯಾ ನಿಯಂತ್ರಣವನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ. “ಎರಡು ಮಕ್ಕಳಿಗಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವ ಜನರಿಗೆ ನೀಡುವ ಸರ್ಕಾರದ ಸೌಲಭ್ಯಗಳ ಬಗ್ಗೆ ಸಂಸತ್ತಿನಲ್ಲಿ ಕಾನೂನು ಜಾರಿಗೆ ತರಬೇಕು ಮತ್ತು ಮತದಾನದ ಹಕ್ಕನ್ನು ಸಹ ಕಿತ್ತುಕೊಳ್ಳಬೇಕು. ಎಷ್ಟು ಹೆಂಡತಿಯರಿದ್ದರೂ ಪರವಾಗಿಲ್ಲ, ಇಬ್ಬರು ಮಕ್ಕಳು ಮಾತ್ರ ಇರಬೇಕು” ಎಂದು ವಿಎಚ್‌ಪಿ ಸದಸ್ಯೆ ಸಾಧ್ವಿ ಆಗ್ರಹಿಸಿದ್ದಾರೆ.
ಗಾಜಿಯಾಬಾದ್‌ನಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮಾತನಾಡಿದ್ದರು. ಎಲ್ಲ ಭಾರತೀಯರ ಡಿಎನ್‌ಎ ಒಂದೇ ಮತ್ತು ಮುಸ್ಲಿಮರನ್ನು ದೇಶ ತೊರೆಯುವಂತೆ ಕೇಳುವವರನ್ನು ಹಿಂದೂಗಳೆಂದು ಕರೆಯಲು ಸಾಧ್ಯವಿಲ್ಲ. ಭಾರತದಲ್ಲಿ ಇಸ್ಲಾಂ ಅಪಾಯದಲ್ಲಿದೆ. ನೀವು ಭಯದ ಚಕ್ರದಲ್ಲಿ ಸಿಲುಕಿಕಬೇಡಿ ಎಂದು ಅವರು ಮುಸ್ಲಿಮರನ್ನು ಒತ್ತಾಯಿಸಿದ್ದರು. ಜೊತೆಗೆ ಗುಂಪು ಹತ್ಯೆ ಬಗ್ಗೆಯೂ ಮಾತನಾಡಿ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಯ ವಾಗ್ದಾಳಿಗೆ ಕಾರಣವಾಗಿದ್ದರು.
ಇದನ್ನೂ ಓದಿ: ತಮಿಳುನಾಡಿನಲ್ಲಿ ಪ್ರತ್ಯೇಕತೆಯ ಕಿಡಿ ಹಚ್ಚಿದ ಬಿಜೆಪಿ: ಮುನ್ನೆಲೆಗೆ ಬಂದ ಪ್ರತ್ಯೇಕ ರಾಜ್ಯದ ಕೂಗು


