Homeಕರ್ನಾಟಕಸಂಘಪರಿವಾರದ ವಿರೋಧದ ನಡುವೆಯು ‘ಇಮ್ರಾನ್ ಖಾನ್ ಒಂದು ಜೀವಂತ ದಂತಕತೆ’ ಪುಸ್ತಕ ಬಿಡುಗಡೆ

ಸಂಘಪರಿವಾರದ ವಿರೋಧದ ನಡುವೆಯು ‘ಇಮ್ರಾನ್ ಖಾನ್ ಒಂದು ಜೀವಂತ ದಂತಕತೆ’ ಪುಸ್ತಕ ಬಿಡುಗಡೆ

- Advertisement -
- Advertisement -

ಮಾಜಿ ಕ್ರಿಕೆಟಿಗ, ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರ ಬಗ್ಗೆಗಿನ, “ಇಮ್ರಾನ್ ಖಾನ್-ಒಂದು ಜೀವಂತ ದಂತಕಥೆ” ಪುಸ್ತಕವನ್ನು ಗುರುವಾರ ಬೆಂಗಳೂರಿನ ನಾಗರಬಾವಿಯಲ್ಲಿ ಬಿಡುಗಡೆ ಮಾಡಲಾಯಿತು. ಪುಸ್ತಕದ ಲೇಖಕರಾದ ಸುಧಾಕರ್‌ ಎಸ್‌.ಬಿ. ಅವರ ನಿವಾಸದಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌‌. ನಾಗಮೋಹನ ದಾಸ್‌ ಅವರು ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ.

ಪ್ರಥಮ ಪ್ರಕಾಶನ ಬೆಂಗಳೂರು ಪ್ರಕಟಿಸಿದ್ದ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ನಗರದ ಮಲ್ಲತಹಳ್ಳಿಯ ಕಲಾಗ್ರಾಮದಲ್ಲಿ ಯೋಜಿಸಲಾಗಿತ್ತು. ಆದರೆ ಸಂಘಪರಿವಾರದಿಂದ ವಿರೋಧ ವ್ಯಕ್ತವಾದ್ದರಿಂದ ನಿಗದಿಪಡಿಸಲಾಗಿದ್ದ ಸ್ಥಳ ಬದಲಾಯಿಸಿ, ಲೇಖಕರ ಮನೆಯಲ್ಲಿಯೇ ಗುರುವಾರ ಸಂಜೆ ಬಿಡುಗಡೆಗೊಳಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಐನಕೈ, ಮಾಜಿ ಸಚಿವರಾದ ಡಾ.ಲೀಲಾದೇವಿ ಆರ್ ಪ್ರಸಾದ್, ಪುಸ್ತಕದ ಲೇಖಕ ಸುಧಾಕರ್ ಎಸ್ ಬಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ. ಪ್ರಕಾಶ್ ಟಿ.ಎನ್. ಕಮ್ಮರಡಿ, ಪ್ರೊ. ರಾಜಪ್ಪ ದಳವಾಯಿ, ವಿ.ಎನ್. ವೀರನಾಗಪ್ಪ ಹಾಗೂ ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ ಅವರು ಉಪಸ್ಥಿತರಿದ್ದರು.

ಸಂಘಪರಿವಾದ ವಿರೋಧದ ಬಗ್ಗೆ ಮಾತನಾಡಿದ ಜಸ್ಟಿಸ್ ನಾಗಮೋಹನ್ ದಾಸ್ ಅವರು,“ಬಲಪಂಥೀಯರು ದೂರು ನೀಡಿದ್ದ ಹಿನ್ನಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಕಲಾಗ್ರಾಮಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ರದ್ದಾಗಿದೆ ಎಂದು ಬೋರ್ಡ್‌ ಹಾಕಿದ್ದರು. ಈ ನಂತರ ಆಯೋಜಕರು ಲೇಖಕರ ಮನೆಯ ಅಂಗಳಲ್ಲೇ ಪುಸ್ತಕ ಬಿಡುಗಡೆ ಮಾಡಲಾಗಿದೆ” ಎಂದು ಹೇಳಿದರು.

“ಯಾರೂ ಪುಸ್ತಕ ಓದದೇ, ಅದರಲ್ಲಿನ ವಿಚಾರಗಳನ್ನು ತಿಳಿದುಕೊಳ್ಳದೆ, ಇಮ್ರಾನ್ ಖಾನ್ ಒಬ್ಬ ಮುಸ್ಲಿಂ ಮತ್ತು ಪಾಕಿಸ್ತಾನಿ ಎಂಬ ಕಾರಣಕ್ಕೆ ವಿರೋಧ ಮಾಡುವಂತದ್ದು ಸರಿಯಲ್ಲ. ಇದು ಮೂರ್ಖರು ಮಾಡುವ ಕೆಲಸ. ಪುಸ್ತಕದಲ್ಲಿ ರಾಜಕೀಯದ ಬಗ್ಗೆ, ಧರ್ಮದ ಬಗ್ಗೆ ಯಾವುದೇ ವಿಚಾರವಿಲ್ಲ. ಇಮ್ರಾನ್ ಖಾನ್ ಅವರ ತಾಯಿಗೆ ಕ್ಯಾನ್ಸರ್‌ ಬಂದು ತೀರಿಹೋಗುತ್ತಾರೆ. ಅವರ ಊರಿನಲ್ಲಿ ಕ್ಯಾನ್ಸರ್‌ ಆಸ್ಪತ್ರೆ ಇಲ್ಲದಿದ್ದಕ್ಕೆ ಅವರು ಜಗತ್ತಿನ ಇರುವ ತನ್ನ ಎಲ್ಲಾ ಸ್ನೇಹಿತರಿಂದ ಹಣವನ್ನು ದೇಣಿಗೆ ಪಡೆದು ಆಸ್ಪತ್ರೆ ಕಟ್ಟಿದ್ದಾರೆ. ಈ ಆಸ್ಪತ್ರೆ ಕಟ್ಟಲು ಭಾರತೀಯ ಕ್ರಿಕೆಟಿಗರು ಸಹಾಯ ಮಾಡಿದ್ದಾರೆ. ಚಿತ್ರ ನಟ ಅಮಿತಾಬ್ ಬಚ್ಚನ್ ಕೂಡಾ ಆ ಆಸ್ಪತ್ರೆಗೆ ದೇಣಿಗೆ ನೀಡಿದ್ದಾರೆ. ಈ ಕತೆಯನ್ನು ಪುಸ್ತಕ ಹೇಳಿದೆ”

ಇದನ್ನೂ ಓದಿ: ದಲಿತ ಹಕ್ಕುಗಳ ಹೋರಾಟಗಾರ್ತಿ, ಲೇಖಕಿ ಮೀನಾ ಕಂದಸಾಮಿ ಅವರಿಗೆ PEN ಜರ್ಮನಿ ಪ್ರಶಸ್ತಿ

“ಇಮ್ರಾನ್ ಖಾನ್‌ ಅವರ ರಾಜಕೀಯ ವಿಚಾರಗಳು ಸೇರಿದಂತೆ ಅವರ ಹಲವಾರು ವಿಚಾರಗಳನ್ನು ನಾನು ಒಪ್ಪಲ್ಲ. ಅಷ್ಟಕ್ಕೆ ಅವರ ಮೇಲೆ ದ್ವೇಷ ಬೆಳೆಸಿಕೊಳ್ಳಬಹುದೆ? ನಮ್ಮ ದೇಶದಲ್ಲಿ ಧರ್ಮ, ಜಾತಿ, ಭಾಷೆ, ಆಹಾರ ಹೀಗೆ ಎಲ್ಲಾ ವಿಚಾರದಲ್ಲೂ ಅಸಹಿಷ್ಣುತೆ ಜಾಸ್ತಿಯಾಗುತ್ತಿದೆ. ಸಹಿಷ್ಣುತೆ ನಮ್ಮ ಸಂವಿಧಾನದ ಮೂಲ ಆಶಯವಾಗಿದೆ. ಸುಪ್ರಿಂಕೋರ್ಟ್‌‌ ನ್ಯಾಯಮೂರ್ತಿಗಳಾದ ಒ.ಚಿನ್ನಪ್ಪ ರೆಡ್ಡಿ 1993ರ ಒಂದು ತೀರ್ಪಿನಲ್ಲಿ, ‘ನಮ್ಮ ಸಂಪ್ರದಾಯ, ನಮ್ಮ ತತ್ವಗಳು, ನಮ್ಮ ಸಂವಿಧಾನ ಸಹಿಷ್ಣುತೆಯನ್ನು ಭೋಧಿಸುತ್ತದೆ ಮತ್ತು ಪಾಲಿಸುತ್ತದೆ, ಅದನ್ನು ದುರ್ಬಲಗೊಳಿಸಬಾರದು’ ಎಂದು ಬರೆಯುತ್ತಾರೆ”

“ಬೇಜವಾಬ್ದಾರಿ ಕೋಮುವಾದಿ, ಮೂಲಭೂತವಾದಿ ಶಕ್ತಿಗಳು, ‘ಅದು ಸರಿಯಿಲ್ಲ, ಇದು ಸರಿಯಿಲ್ಲ’ ಎಂದು ಹೇಳಿ, ಧಮ್ಕಿ ಹಾಕಿದ ಕೂಡಲೇ ಸರ್ಕಾರ ಅದಕ್ಕೆ ಬೆದರಿ ಕಾರ್ಯಕ್ರಮ ರದ್ದು ಮಾಡುವುದು ಅಂದರೆ ಏನರ್ಥ? ಸರ್ಕಾರ ಸಂವಿಧಾನದ ಪ್ರಕಾರ ನಡೆದುಕೊಳ್ಳಬೇಕೆ ಅಥವಾ ಇಂತಹ ಶಕ್ತಿಗಳಿಗೆ ಶರಣಾಗಬೇಕೆ? ಇದು ದುರದೃಷ್ಟಕರ ಘಟನೆ. ಇಂತಹ ಸರ್ಕಾರಗಳು ಅಧಿಕಾರದಲ್ಲಿ ಮುಂದುವರೆಯುವುದಕ್ಕೆ ಲಾಯಕ್ಕಿದೆಯೆ?”

“ನಾವು ಯಾವುದೇ ಕಾರಣಕ್ಕೂ ಇಂತಹ ಬೆದರಿಕೆಗೆ ಶರಣಾಗಬಾರದು. ಕೆಲವೇ ಜನರಿದ್ದರೂ ಸರಿ, ಇದರ ವಿರುದ್ಧ ನಾವು ಧ್ವನಿ ಎತ್ತಬೇಕು. ಇಂತಹದ್ದಕ್ಕೆಲ್ಲಾ ಶರಣಾಗುತ್ತಾ ಹೋದರೆ ನಮ್ಮ ಅಭಿವ್ಯಕ್ತಿ ಸ್ವಾತಂತ್ಯ್ರವನ್ನು ಕಳೆದುಕೊಳ್ಳುತ್ತೇವೆ. ಅಭಿವ್ಯಕ್ತಿ ಸ್ವಾತಂತ್ಯ್ರವನ್ನು ಕಳೆದುಕೊಂಡದರೆ ಪ್ರಜಾಪ್ರಭುತ್ವವನ್ನು ಕಳೆದುಕೊಳ್ಳುತ್ತೇವೆ. ಪ್ರಜಾಪ್ರಭುತ್ವ ಕಳೆದುಕೊಂಡರೆ ನಾವು ಸಂವಿಧಾನ ಕಳೆದುಕೊಳ್ಳುತ್ತೇವೆ. ಈ ಪರಿಸ್ಥಿತಿ ಬಂದರೆ ನಾವು ಎಲ್ಲರೂ ಬಾಯಿಗೆ ಬೀಗ ಹಾಕಿಕೊಂಡು ಗುಲಾಮರಂತೆ ಬದುಕಬೇಕಾಗುತ್ತದೆ”

ಇದನ್ನೂ ಓದಿ: ಅನುಪಮಾ ಪ್ರಸಾದ್ ಅವರ ಕಥೆ; ಮುಖವಿಲ್ಲದವರು

“ಇಮ್ರಾನ್ ಖಾನ್ ರಾಜಕೀಯ ನಿಲುವುಗಳ ಬಗ್ಗೆ ನನ್ನ ಗಟ್ಟಿ ವಿರೋಧವಿದೆ.  ಅಷ್ಟಕ್ಕೆ ಅವರ ವಿರುದ್ಧ ದ್ವೇಷ ಅಸೂಯೆ, ಅಸಹನೆಯನ್ನು ಬೆಳೆಸಿಕೊಳ್ಳಬೇಕೆ? ಇದು ಎಲ್ಲಿಗೆ ಕೊನೆಯಾಗುತ್ತದೆ?”

“ಅಮೆರಿಕಾದವರು ಪಾಕಿಸ್ತಾನಕ್ಕೆ ಆಹಾರ ಸರಬರಾಜು ಮಾಡುತ್ತದೆ. ಅಲ್ಲಿನ ಮಾಜಿ ಅಧ್ಯಕ್ಷ ಒಬಾಮ ಪುಸ್ತಕ ಭಾರತದಲ್ಲಿ ರಾರಾಜಿಸುತ್ತದೆ. ಟ್ರಂಪ್ ಬಗ್ಗೆಗಿನ ಪುಸ್ತಕಗಳು ಓಡಾಡುತ್ತಿದೆ. ಅವರಿಗೆ ಭಾರತದಲ್ಲಿ ದೇವಸ್ಥಾನವನ್ನೇ ಕಟ್ಟಿದ್ದಾರೆ. ಇವೆಲ್ಲಾ ಏನು? ಸಂಘಪರಿವಾರದ ಈ ನಡೆ ಸಪೂರ್ಣವಾಗಿ ಸರಿಯಲ್ಲ” ಎಂದು ಜಸ್ಟಿಸ್ ನಾಗಮೋಹನ್ ದಾಸ್ ಅವರು ತಿಳಿಸಿದರು.

ಘಟನೆ ಬಗ್ಗೆ ಚಿಂತಕ ವಡ್ಡಗೆರೆ ನಾಗರಾಜಯ್ಯ ಅವರು ಮಾತನಾಡಿ,“ಭಾರತ ಮತ್ತು ಪಾಕಿಸ್ತಾನ ಎರಡು ಕೂಡಾ ಘೋಷಿತ ಶತ್ರುಗಳು ಎಂಬಂತೆ ಬಿಂಬಿಸಲಾಗುತ್ತಿದೆ. ಅದರಲ್ಲೂ ಈ ಎರಡು ದೇಶಗಳನ್ನು ಧರ್ಮದ ನೆಲೆಯಲ್ಲಿ, ಮುಸ್ಲಿಮರು ಎ‌ನ್ನುವ ಕಾರಣಕ್ಕೆ ಘೋಷಿತ ಶತ್ರುಗಳು ಎಂಬಂತೆ ಬಿಂಬಿಸಲಾಗುತ್ತಿದೆ. ಹೀಗಾದರೆ ಉಳಿದ ಎಲ್ಲಾ ದೇಶಕ್ಕೂ ಈ ಧರ್ಮದ ನೆಲೆಯನ್ನೇ ಇವರು ಅನ್ವಯಿಸುತ್ತಾರೆ. ಹಿಂದೂ ಧರ್ಮವನ್ನು ಶ್ರೇಷ್ಠ ಎಂದು ನಂಬಿಸುತ್ತಾ, ಇಸ್ಲಾಂ ಧರ್ಮವನ್ನು ವೈರಿ ನೆಲೆಯಲ್ಲಿ ಕಂಡು ಬೇರೆ ರಾಷ್ಟ್ರಗಳನ್ನು ಕೂಡಾ ವೈರಿ ದೇಶಗಳಂತೆ ಕಾಣುತ್ತಾರೆ”

ಇದನ್ನೂ ಓದಿ: ಹಳತು-ವಿವೇಕ; ‘ಸಮನ್ವಯ ಮಾಡಿಕೊಳ್ಳದಿದ್ದರೆ ಕಾವ್ಯ ಹೇಗಾಗುತ್ತೆ?’ ಚೆನ್ನವೀರ ಕಣವಿ ಅವರ ಸಂದರ್ಶನ

“ವರ್ತಮಾನ ಭಾರತದ ಅಂತರಂಗದ ಒಳಗೆ ಕೂಡಾ ಹಿಂದೂ-ಮುಸ್ಲಿಂ ವೈರತ್ವ ಭಾರಿ ಜೋರಾಗಿ ಹೊಗೆಯಾಡುತ್ತಿದೆ. ಹೀಗಾಗಿ ಇದಕ್ಕೆ ಲಗಾಮು ಹಾಕುವುದು ತುಂಬಾ ಅಗತ್ಯವಿದೆ. ಈ ಹೊತ್ತು ಭಾರತ ಅಂತಾರಾಷ್ಟ್ರೀಯ ಸಂಬಂಧಗಳನ್ನು ಬೇರೆ ಬೇರೆ ದೇಶಗಳೊಂದಿಗೆ ದಕ್ಕಿಸಿಕೊಳ್ಳಬೇಕಾಗಿದೆ. ದೇಶದ ರಾಜತಾಂತ್ರಿಕದ ಮುಖ್ಯಗುರಿ ಈ ರೀತಿ ಅಂತಾರಾಷ್ಟ್ರೀಯ ಸಂಬಂಧಗಳನ್ನು ಬೆಸೆದುಕೊಳ್ಳುವುದು. ಭಾರತ-ಪಾಕಿಸ್ತಾನ ರಾಷ್ಟ್ರಗಳು ಬೇರೆ ಯಾವುದೆ ದೇಶಗಳಿಗಿಂತ ಹೆಚ್ಚಾಗಿ ಸೋದರ ಸಂಬಂಧವನ್ನು ಬೆಳೆಸಿಕೊಳ್ಳಬೇಕಿದೆ. ಯಾಕೆಂದರೆ ಈ ಎರಡು ದೇಶಗಳು ವಿಭಜನೆ ಪೂರ್ವದಲ್ಲಿ ಬ್ರಿಟೀಷರ ವಿರುದ್ಧ ಐಕ್ಯತೆಯಿಂದ ಹೋರಾಡಿ ದೇಶಗಳನ್ನು ಸ್ವಾತಂತ್ಯ್ರಗೊಳಿಸಿವೆ. ಆ ವೇಳೆ ಇದ್ದಂತಹ ಐಕ್ಯತೆ, ಆಗಿನ ಸೋದರ ಸಂಬಂಧಗಳನ್ನು ನೆನಪಿಸಿಕೊಂಡರೆ ಮುಸ್ಲಿಮರು ಮಾತ್ರವಲ್ಲ, ಪಾಕಿಸ್ತಾನದವರು ಕೂಡಾ ನಮ್ಮ ಸಹೋದರರೆ ಎಂಬ ಬಂಧುತ್ವ ಬಂದುಬಿಡುತ್ತದೆ”

“ಎರಡು ದೇಶಗಳ ಸ್ಥಿತಿ ಈಗ ದಾಯಾದಿ ಮತ್ಸರದ ತರ ಆಗಿಹೋಗಿದೆ. ಆದರೆ ಈ ದಾಯಾದಿಗಳು ತಮ್ಮ ಮತ್ಸರ ಮರೆತು ಸೋದರ ಭಾವದಿಂದ ಇರಬಾರದು ಎಂದೇನು ಇಲ್ಲವಲ್ಲ? ಒಡೆದುಹೋದ ಸಂಬಂಧಕ್ಕೆ ಅಕ್ಷರದ ಮೂಲಕ ಔಷಧಿ ಹುಡುಕಬೇಕು. ಇಲ್ಲಿವರೆಗೆ ನಡೆದಿರುವ ಚಳವಳಿಗಳಾಗಲಿ, ಮಾನವೀಯ ಚಿಂತನೆಗಳಾಗಲಿ ಹೀಗೆ ನಮ್ಮನ್ನೆಲ್ಲಾ ಬೆಸೆದಿರುವುದು ಅಕ್ಷರ ಮತ್ತು ಪುಸ್ತಕಗಳ ಮೂಲಕವಾಗಿವೆ”

“ವಚನ ಸಾಹಿತ್ಯ, ಬುದ್ಧನ ಬೋಧನೆಗಳು, ಮಹಾವೀರನ ಬೋಧನೆಗಳನ್ನೇ ನೋಡಿ, ಈ ಎಲ್ಲವು ನಮಗೆ ಸಾಹಿತ್ಯದ ಮೂಲಕ ಸಿಕ್ಕವುಗಾಳಾಗಿವೆ. ಯಾವ ಚಳವಳಿ ಮಾಡದೆ ಇರುವ ಕೆಲಸವನ್ನು ಒಂದು ಸಾಹಿತ್ಯ ಮಾಡುತ್ತವೆ. ಹಾದಿ ಬೀದಿ ಹೋರಾಟಕ್ಕಿಂತಲೂ ದೊಡ್ಡದಾದ ಕೂಡಿಸುವಿಕೆ, ಬೆಸೆಯುವಿಕೆ ಒಂದು ಪುಸ್ತಕದಿಂದ ಸಾಧ್ಯವಿದೆ. ಅಂತಹ ಪುಸ್ತಕಗಳನ್ನು ನಾವು ಅನ್ಯ ದೇಶದವನು, ವೈರಿ ಎಂದು ಹೇಳಿ ನೋಡಿದರೆ ಹೇಗೆ?”

ಇದನ್ನೂ ಓದಿ: ಎಷ್ಟು ಬೆಂಕಿ ಹಚ್ಚಬಲ್ಲಿರಿ ನೀವು?

“ಇಮ್ರನ್ ಖಾನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ ಕ್ರಿಕೆಟ್ ತಾರೆ. ನಮಗೆ ಅವರ ರಾಜಕೀಯ, ಧಾರ್ಮಿಕ ಚಿಂತನೆಗಳ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಅಂತಹ ಭಿನ್ನಮತಗಳನ್ನು ಇಟ್ಟುಕೊಂಡೆ ಒಬ್ಬ ವ್ಯಕ್ತಿಯ ಒಳಿತು, ವ್ಯಕ್ತಿತ್ವದ ಘನತೆ, ಅವರ ಸಾಧನೆಯನ್ನು ಗುರುತಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ‘ಇಮ್ರಾನ್ ಖಾನ್ ಒಂದು ಜೀವಂತ ದಂತಕತೆ’ ಪುಸ್ತಕ ತುಂಬಾ ಮುಖ್ಯವಾಗುತ್ತದೆ. ಎಲ್ಲಿಂದಲೇ ಆಗಲಿ, ನಮಗೆ ಹೊಸ ಬೆಳಕು, ನೀರು, ವಾತಾವರಣ, ಹೊಸತನ ಬೇಕಾಗಿದೆ. ಇವುಗಳನ್ನು ಸ್ವಾಗತಿಸೋಣ. ಮಾನವೀಯ ಆಲೋಚನೆಗಳು ಎಲ್ಲಿಂದ ಬಂದರೂ ಏನು ತಪ್ಪಿದೆ?”

“ಇಂಗ್ಲೀಷರು ನಮ್ಮನ್ನು ಗುಲಾಮಗಿರಿಗೆ ತಳ್ಳಿ ನಮ್ಮನ್ನು ಆಳ್ವಿಕೆ ನಡೆಸಿದವರಾಗಿದ್ದಾರೆ. ಇಂಗ್ಲಿಷ್‌‌ನವರ ಕೃತಿಗಳನ್ನು ಇಲ್ಲಿ ಯಾಕೆ ಓದುತ್ತೀರಿ ಎಂದು ಕೇಳಿದರೆ ಸರಿಯಾಗುತ್ತದೆಯೆ. ಆದರೆ ಅಲ್ಲಿನ ಸಾಹಿತ್ಯವೂ ನಮಗೆ ಬೇಕು, ಹಾಗೆಯೆ ಇಲ್ಲಿನ ಸಾಹಿತ್ಯವನ್ನೂ ನಾವು ಅಲ್ಲಿಗೆ ಕಳುಹಿಸಬೇಕು. ಕಾರ್ಲ್ ಮಾರ್ಕ್ಸ್‌ ಅನ್ನು ನಾವು ಓದುತ್ತೇವೆ ಎಂದರೆ, ಇಲ್ಲಿನ ಬಸವ, ಬುದ್ಧನನ್ನು ಅವರು ಓದುವುದು ಬೇಡವೆ? ಚೀನಾದ ಕ್ರಾಂತಿಕಾರಿ ಮಾವೋತ್ಸೆ ತುಂಗನನ್ನು ನಾವು ಓದುತ್ತೇವೆ ಎಂದರೆ, ಇಲ್ಲಿನ ಭಗತ್‌ ಸಿಂಗ್‌ನನ್ನು ಅವರು ತಿಳಿಯುವುದು ಬೇಡವೆ? ಟಾಲ್ಸ್‌ಟಾಯ್ ಅವರನ್ನು ನಾವು ಓದುತ್ತೇವೆ, ಕುವೆಂಪು ಅವರನ್ನು ಅವರು ಓದುವುದು ಬೇಡವೆ?”

“ಹೀಗೆ ಇದೊಂದು ಸಾಂಸ್ಕೃತಿಕ ಕೊಡುಕೊಳ್ಳುವಿಕೆ ಹಾಗೂ ಅನುಸಂಧಾನವಾಗಿದೆ. ಈ ಅನುಸಂಧಾನ ನಡೆದಾಗಲೆ ವ್ಯಕ್ತಿತ್ವ ವಿಕಸನ ಆಗುವುದು. ವೈರಿ ಎಂದು ಹೇಳಿಕೊಂಡು ಅಲ್ಲಿನ ಎಲ್ಲರಲ್ಲೂ ವೈರತ್ವವಿದೆ, ವಿಷವಿದೆ ಎನ್ನುತ್ತಾ ಹೋದರೆ ನಮ್ಮೊಳಗೆಯೆ ವಿಷವಿದೆ ಎಂದರ್ಥ. ಕೆಟ್ಟವನು ಯಾರು ಎಂದು ಹುಡುಕಿಕೊಂಡು ಹೋಗುವ ಗುಣವೇ ನಮ್ಮೊಳಗಿನ ಕೆಟ್ಟತನ”.

ಇದನ್ನೂ ಓದಿ: ತ್ಯಾಗ -ಸ್ಪೂರ್ತಿಯ ಸಂಕೇತ ಮಾತೆ ರಮಾಬಾಯಿ ಅಂಬೇಡ್ಕರ್

“ಬ್ರಿಟೀಷರ ವಿರುದ್ಧ ಹೋರಾಟ ಮಾಡುವಾಗ ನಾವು ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದವರಂತೆ ಬದುಕಿದ್ದವರು. ಹೀಗಿರುವಾಗ ಒಬ್ಬ ಕ್ರಿಕೆಟ್ ತಾರೆ, ಮಾಜಿ ಪ್ರಧಾನ ಮಂತ್ರಿಯ ಪುಸ್ತಕ ನಮ್ಮಲ್ಲಿ ಯಾಕೆ ಬಿಡುಗಡೆಯಾಗಬೇಕು ಎನ್ನುವುದು ಸರಿಯಲ್ಲ”

“ಪಾಕಿಸ್ತಾನ ಮತ್ತು ನಮ್ಮ ದೇಶದ ಶಿಕ್ಷಣ, ಬಡತನ, ಕೃಷಿ ಹೀಗೆ ಯಾವುದೇ ವಿಚಾವನ್ನು ತೆಗೆದುಕೊಳ್ಳಿ, ಹೆಚ್ಚು ಕಡಿಮೆ ನಾವು ಅವರು ಸಮಾನ ಮತ್ತು ಸಮಾನ ದುಃಖಿಗಳು. ಅವರ ಮತ್ತು ನಮ್ಮ ಬಾಳಾಟ, ಗೋಳಾಟ, ಜೀವನ ವಿಧಾನ, ಸಂಸ್ಕೃತಿ ವಿಧಾನ, ನೆಲೆ ಎಲ್ಲವೂ ಒಂದೆ ಆಗಿದೆ. ಹೀಗಿರುವಾಗ ಅವರ ಬಗ್ಗೆ ಓದಬಾರದು ಎಂದು ಹೇಗೆ ಹೇಳಲು ಸಾಧ್ಯ? ನಮ್ಮ ರಾಜಕೀಯ ಮತ್ತು ಧಾರ್ಮಿಕ ಭಿನ್ನಾಭಿಪ್ರಾಯಗಳು ಇರಲಿ, ಭಿನ್ನಮತಗಳು ಯಾವುತ್ತಿಗೂ ಸ್ವಾಗತಾರ್ಹ. ಆದರೆ ಸಂಪೂರ್ಣ ವೈರಿ ಎಂದು ಅವರನ್ನು ಆಚೆಕಡೆ ಎಸೆದುಬಿಟ್ಟ ನಾವು ಸಾಧಿಸುವುದು ಏನಿದೆ?”

“ಮುಂದಕ್ಕೂ ನಾವು ವೈರಿಗಳಾಗಿಯೆ ಬದುಕಬೇಕೆ? ಇನ್ನೆಷ್ಟು ಕಾಲ ವೈರಿಗಳಂತೆ ಬಾಳಿಕೊಂಡು ಹೋಗಬೇಕು? ಪುಲ್ವಾಮದಲ್ಲಿ ಭಾರತೀಯರನ್ನು ಕೊಂದಿದ್ದಕ್ಕೆ ಅವರು ಸಂಭ್ರಮಪಟ್ಟರು ಎಂಬುವುದು ಈಗ ವಿವಾದ. ಆದರೆ ಪಾಕಿಸ್ತಾನಿಗಳನ್ನು ಕೊಂದರೆ ನಮ್ಮ ದೇಶದಲ್ಲಿ ಸಂಭ್ರಮ ಪಡುವವರು ಇಲ್ಲವೆ?. ಅದಾಗ್ಯೂ ನಮ್ಮ ಧರ್ಮ, ನಮ್ಮ ಮೌಲ್ಯ, ಕೊಲ್ಲುವುದಲ್ಲ ಬದಲಾಗಿ ಅಹಿಂಸೆಯಾಗಿದೆ. ಮಾನವೀಯತೆ, ಪ್ರೀತಿಯಾಗಿದೆ ನಮ್ಮ ಮೌಲ್ಯ, ಧರ್ಮ” ಎಂದು ನಾಗರಾಜಯ್ಯ ಅವರು ಹೇಳಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ನಿವೃತ್ತ ಇಸ್ರೋ ಉದ್ಯೋಗಿ ಬಂಧನ

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ, 72 ವರ್ಷದ ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ವೈಟ್‌ಫೀಲ್ಡ್ ವಿಭಾಗದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ವರದಿಯಾಗಿದೆ.  ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಳಿಗ್ಗೆ...

ಮಧ್ಯಪ್ರದೇಶದಲ್ಲಿ ಶಾಸಕ ರಾಜಾ ಸಿಂಗ್‌ನಿಂದ ದ್ವೇಷ ಭಾಷಣ; ಪ್ರಚೋದನಕಾರಿ ‘ಶಿರಚ್ಛೇದನ’ ಹೇಳಿಕೆಗೆ ವಿರೋಧ

ತಮ್ಮ ಪ್ರಚೋದನಕಾರಿ ಹೇಳಿಕೆಗಳಿಂದಲೇ ಕುಖ್ಯಾತರಾಗಿರುವ ಹೈದರಾಬಾದ್‌ನ ಗೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಸಾರ್ವಜನಿಕ ರ‍್ಯಾಲಿಯಲ್ಲಿ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. "ಪ್ರತಿಯೊಬ್ಬ ಬಜರಂಗಿಗಳು...

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪ; ‘ಬಡ್ತಿ ವಿಳಂಬವಾಗಿದೆ..’; ಎಂದ ದಲಿತ ಪ್ರಾಧ್ಯಾಪಕ

ಪಂಜಾಬ್ ವಿಶ್ವವಿದ್ಯಾಲಯದ ದಲಿತ ಸಹಾಯಕ ಪ್ರಾಧ್ಯಾಪಕ ಹರ್‌ಪ್ರೀತ್ ಸಿಂಗ್ ಅವರು ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಇದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ತನ್ನ ಜಾತಿಯ ಕಾರಣದಿಂದಾಗಿ ಉದ್ದೇಶಪೂರ್ವಕವಾಗಿ ಬಡ್ತಿ ವಿಳಂಬ ಮಾಡಲಾಗಿದೆ...

ಮಹಾರಾಷ್ಟ್ರ: ತಾಯಿ, ಸಹೋದರನ ಕಣ್ಣಿಗೆ ಮೆಣಸಿನ ಪುಡಿ ಎರೆಚಿ ಮದುವೆ ಸಿದ್ಧತೆಯಲ್ಲಿದ್ದ 21 ವರ್ಷದ ಯುವತಿಯ ಅಪಹರಣ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸಿಲ್‌ನ ಭಿಗ್ವಾನ್‌ನಲ್ಲಿ 21 ವರ್ಷದ ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರನ ಮುಂದೆಯೇ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.ಮದುವೆ ಸಿದ್ಧತೆಯಲ್ಲಿದ್ದ ಯುವತಿ...

KERALA SIR | ಬಿಜೆಪಿ ಮುಖಂಡನ ದೂರು: ಪೌರತ್ವ ಸಾಬೀತುಪಡಿಸುವಂತೆ ಮುಸ್ಲಿಂ ವ್ಯಕ್ತಿಗೆ ನೋಟಿಸ್!

ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡಾ ಎಂಬಾತನ ದೂರಿನ ಮೇರೆಗೆ ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾರತೀಯ ಪೌರತ್ವ ಸಾಬೀತುಪಡಿಸುವಂತೆ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ನೋಟಿಸ್ ಜಾರಿ ಮಾಡಿದ್ದು, ಆ...

ಚೀನಾ ನಿರ್ಮಿತ ರೋಬೋ ಡಾಗ್ ತಾವೇ ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದ್ದ ಗ್ಯಾಲ್ಗೋಟಿಯಾ ವಿವಿ AI ಸಮ್ಮಿಟ್ ಎಕ್ಸ್‌ಪೋದಿಂದ ತೆರವು

ನವದೆಹಲಿ: ಚೀನಾ ನಿರ್ಮಿತ ರೋಬೋ ಡಾಗ್ ತಮ್ಮದೇ ಎಂದು ಪ್ರದರ್ಶಿಸಿದ್ದಕ್ಕಾಗಿ ಟೀಕೆಗೆ ಗುರಿಯಾದ ನಂತರ ಮತ್ತು ಕೇಂದ್ರ ಸರ್ಕಾರವು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾದ ನಂತರ ನೋಯ್ಡಾ ಮೂಲದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ಬುಧವಾರ...

ಉತ್ತರ ಪ್ರದೇಶ| ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಟಿಟಿಇಯಿಂದ ಸೇನಾ ಆಕಾಂಕ್ಷಿಯ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಟಿಕೆಟ್ ಪರೀಕ್ಷಕನೊಬ್ಬ (ಟಿಟಿಇ) ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿದ್ದ ಯುವತಿ ಆರೋಪಿಸಿದ್ದಾರೆ. ಇಂದಾರಾ ಮತ್ತು ಡಿಯೋರಿಯಾ ರೈಲು ನಿಲ್ದಾಣಗಳ ನಡುವೆ...

ನಾನು ಭಾರತಕ್ಕೆ ಯಾವಾಗ ಹಿಂತಿರುಗುತ್ತೇನೆಂದು ಹೇಳಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಮಲ್ಯ

ವಂಚನೆ ಮತ್ತು ಹಣ ವರ್ಗಾವಣೆಯ ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ, ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಯುಕೆ ತೊರೆಯುವುದನ್ನು ನನಗೆ ಕಾನೂನುಬದ್ಧವಾಗಿ ನಿಷೇಧಿಸಲಾಗಿರುವುದರಿಂದ ಯಾವಾಗ ಭಾರತಕ್ಕೆ ಹಿಂತಿರುಗುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ" ಎಂದು...

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿ ಆಗದಂತೆ ತಡೆದಿದ್ದು ರಾಹುಲ್ ಗಾಂಧಿ : ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿಯಾಗದಂತೆ ರಾಹುಲ್ ಗಾಂಧಿ ತಡೆದಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ (ಫೆ.17) ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "2014 ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ...

ಮಮತಾ ಬ್ಯಾನರ್ಜಿ ವಿರುದ್ಧ ಇಡಿ ಅರ್ಜಿ: ಮಾರ್ಚ್ 18ಕ್ಕೆ ವಿಚಾರಣೆ ಮುಂದೂಡಿಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಇತರರ ವಿರುದ್ಧದ ಐ-ಪ್ಯಾಕ್ ಕಚೇರಿ ಶೋಧಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಜಾರಿ ನಿರ್ದೇಶನಾಲಯದ (ಇಡಿ) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ...