Homeಮುಖಪುಟತ್ಯಾಗ -ಸ್ಪೂರ್ತಿಯ ಸಂಕೇತ ಮಾತೆ ರಮಾಬಾಯಿ ಅಂಬೇಡ್ಕರ್

ತ್ಯಾಗ -ಸ್ಪೂರ್ತಿಯ ಸಂಕೇತ ಮಾತೆ ರಮಾಬಾಯಿ ಅಂಬೇಡ್ಕರ್

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪತ್ನಿ ರಮಾಬಾಯಿಯವರ ಜನ್ಮದಿನ ಇಂದು.

- Advertisement -
- Advertisement -

ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆಯ ಬೆಂಬಲ ಇದ್ದೇ ಇರುತ್ತದೆ. ಈ ಸಾಲು ಹಳೆಯದಾದರೂ ತಾತ್ಪರ್ಯ ಮಾತ್ರ ನಿತ್ಯ ನೂತನ. ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ, ಸಹೋದರಿಯಾಗಿ, ಗೆಳತಿಯಾಗಿ, ಹಿತೈಷಿಯಾಗಿ ಮಹಿಳೆ ಪುರುಷನ ಹಿಂದೆ ಇದ್ದೇ ಇರುತ್ತಾಳೆ. ಆಕೆ ಪುರುಷನ ಹಿಂದೆ ಆ ರೀತಿ ಇರುವುದು ಸೇವಕಿಯ ಮಾದರಿಯಲ್ಲಲ್ಲ‌. ಬದಲಿಗೆ ಸಮಾನತೆಯ ಮಾದರಿಯಲ್ಲಿ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರರ ಬದುಕಿನಲ್ಲಿ ಅವರ ಪತ್ನಿ ರಮಾಬಾಯಿ ಅಂಬೇಡ್ಕರ್ ಅಂತಹ ಬೆನ್ನುಲುಬಾಗಿ ನಿಲ್ಲುತ್ತಾರೆ. ಅಂಬೇಡ್ಕರ್‌ರವರ ಓದು-ಬರಹಗಳನ್ನು ಪೋಷಿಸಿದವರು ರಮಾಬಾಯಿ ಅಂಬೇಡ್ಕರ್‌.

ರಮಾಬಾಯಿಯವರು ಹುಟ್ಟಿದ್ದು 1898 ಫೆಬ್ರವರಿ 7ರಂದು. ತಂದೆ ಭಿಕು ವಳಗಂಕರ್ ಮತ್ತು ತಾಯಿ ರುಕ್ಮಿಣಿ. ತಂದೆಯ ವೃತ್ತಿ ಮುಂಬಯಿಯ ಬಂದರಿನಲ್ಲಿ ಹಡಗುಗಳಿಗೆ ಮೀನು ತುಂಬುವುದು. ಆ ಕಾರಣಕ್ಕೆ 1906ರಲ್ಲಿ ಭೀಮರಾವ್ ರ ಜೊತೆ ರಮಾಬಾಯಿಯವರ ವಿವಾಹ ನಡೆದಾಗ ಅದು ನಡೆದದ್ದು ಮುಂಬಯಿಯ ಬೈಕುಲ್ಲ ಎಂಬ ಮೀನು ಮಾರುಕಟ್ಟೆಯಲ್ಲಿ. ಮಾರುಕಟ್ಟೆಯ ವ್ಯವಹಾರಗಳು ಮುಗಿದಾಗ ಸಂಜೆ ಭೀಮರಾವ್ ಮತ್ತು ರಮಾಬಾಯಿಯವರ ಎರಡೂ ಕುಟುಂಬಗಳು ಮಾರುಕಟ್ಟೆಯಲ್ಲಿ ಹಾಕಲ್ಪಟ್ಟ ಚಪ್ಪರದ ಎರಡು ಮೂಲೆಗಳಲ್ಲಿ ತಮ್ಮ ವಾಸ್ತವ್ಯ ಹೂಡಿ ವಿವಾಹ ಕಾರ್ಯಕ್ರಮ ನೆರವೇರಿಸಿಕೊಂಡವು. ಆ ಕಾಲದ ಪದ್ಧತಿಯಂತೆ ವಿವಾಹ ನಡೆದಾಗ ಭೀಮರಾವ್‌ಗೆ 14 ವರ್ಷ ಮತ್ತು ರಮಾಬಾಯಿಯವರಿಗೆ 9 ವರ್ಷ.

ಅಂಬೇಡ್ಕರರ ಶಿಕ್ಷಣಕ್ಕೆ ಬೆನ್ನೆಲುಬಾದ ರಮಾಬಾಯಿಯವರು: ವಿವಾಹದ ನಂತರ 1907ರಲ್ಲಿ ಭೀಮರಾವ್ ಅಂಬೇಡ್ಕರರ ಮೆಟ್ರಿಕ್ಯುಲೇಷನ್ ಪರೀಕ್ಷೆ ಪೂರ್ಣಗೊಂಡಿತು. ಪ್ರತಿ ತಿಂಗಳು 25 ರೂ. ವಿದ್ಯಾರ್ಥಿ ವೇತನದ ಮೂಲಕ 1912ರಲ್ಲಿ ಅವರು ಬಿ.ಎ. ಪರೀಕ್ಷೆಯಲ್ಲಿ ಕೂಡ ತೇರ್ಗಡೆ ಹೊಂದಿದರು. ಈ ಸಂದರ್ಭದಲ್ಲಿ ಅಂಬೇಡ್ಕರರ ಶಿಕ್ಷಣಕ್ಕೆ ಅವರ ತಂದೆ ರಾಮ್ ಜಿ ಸಕ್ಪಾಲ್‌ರಷ್ಟೆ ಜೊತೆಜೊತೆಯಾಗಿ ನಿಂತದ್ದು ರಮಾಬಾಯಿಯವರು. ಅಂದಹಾಗೆ ಅಂಬೇಡ್ಕರರ ಶಿಕ್ಷಣದ ಪ್ರೀತಿ ಎಲ್ಲರಿಗೂ ತಿಳಿದಿದೆ. ಅಂತಹ ಪ್ರೀತಿಯನ್ನು ರಮಾಬಾಯಿಯವರೂ ಪಡೆದು ತಾವು ಕೂಡ ಪತಿಯ ಆಸೆಯಂತೆ ಓದು ಬರಹ ಕಲಿತರು. ಈ ಬಗ್ಗೆ ದೂರದ ಅಮೆರಿಕದಿಂದ ಒಮ್ಮೆ ಪತ್ರ ಬರೆಯುವ ಅಂಬೇಡ್ಕರರು, “ರಾಮು, (ತಮ್ಮ ಪತ್ನಿಯನ್ನು ಅಂಬೇಡ್ಕರರು ಪ್ರೀತಿಯಿಂದ ರಾಮು ಎಂದು ಕರೆಯುತ್ತಿದ್ದರು) ನಿನ್ನ ಓದು ಬರಹ ಹೇಗಿದೆ” ಎಂದು ವಿಚಾರಿಸುತ್ತಾರೆ.

ಇದನ್ನೂ ಓದಿರಿ: ರಾಯಚೂರು ಮುಖ್ಯ ನ್ಯಾಯಾಧೀಶರ ಛೇಂಬರ್‌ನಲ್ಲಿ ನಡೆದದ್ದೇನು? ಒಂದು ಪ್ರತ್ಯಕ್ಷದರ್ಶಿ ವರದಿ

ಸಂಸಾರದ ಹೊಣೆಹೊತ್ತುಕೊಂಡ ರಮಾಬಾಯಿಯವರು: ಅಂಬೇಡ್ಕರ್‌‌ರವರು 1913ರ ಜೂನ್ ನಲ್ಲಿ ಅಮೆರಿಕದ ನ್ಯೂಯಾರ್ಕ್ ನಗರದ ಕೊಲಂಬಿಯಾ ವಿವಿಗೆ ಉನ್ನತ ವ್ಯಾಸಂಗಕ್ಕೆ ತೆರಳುವ ಕೆಲವೇ ದಿನಗಳ ಮೊದಲು ತಮ್ಮ ತಂದೆಯವರನ್ನು ಕಳೆದುಕೊಳ್ಳುತ್ತಾರೆ. ಈ ಸಂದರ್ಭ ಇಡೀ ಸಂಸಾರದ ಭಾರ ರಮಾಬಾಯಿಯವರ ಮೇಲೆ ಬಿದ್ದಿತು. ಅಂಬೇಡ್ಕರರು ದೂರದ ಅಮೆರಿಕಕ್ಕೆ ತೆರಳದಂತೆ ಆ ಸಮಯದಲ್ಲಿ ಕುಟುಂಬದ ಕೆಲ ಸದಸ್ಯರು ತಡೆಯುವಂತೆ ರಮಾಬಾಯಿಯವರಿಗೆ ಸಲಹೆ ಕೂಡ ನೀಡುತ್ತಾರೆ. ಆದರೆ ತನ್ನ ಪತಿಯ ಶಿಕ್ಷಣದ ಅಗಾಧ ಹಂಬಲ ಅರಿತಿದ್ದ ರಮಾಬಾಯಿಯವರು ಅಮೆರಿಕಕ್ಕೆ ಅಂಬೇಡ್ಕರರನ್ನು ಭರವಸೆಯೊಡನೆ ಬೀಳ್ಕೊಡುತ್ತಾರೆ. ಈ ಸಮಯದಲ್ಲಿ ಬಹಳ ದೃಢ ಚಿತ್ತದಿಂದ ತನ್ನ ಸಹೋದರ ಶಂಕರ ಧಾತ್ರೆ ಮತ್ತು ಅತ್ತೆ ಮೀರಾ ರವರ ನೆರವಿನ ಮೂಲಕ ಸಂಸಾರದ ಹೊಣೆ ಹೊತ್ತುಕೊಳ್ಳುವ ಅವರು, ಅವರಿಬ್ಬರು ತರುತ್ತಿದ್ದ ನಿತ್ಯದ 8ರಿಂದ 10 ಆಣೆ(50 ರಿಂದ 70 ಪೈಸೆ) ಕೂಲಿ ಹಣದಲ್ಲೇ ಕುಟುಂಬವನ್ನು ಮುನ್ನಡೆಸುತ್ತಾರೆ. ಇದನ್ನು ಉಲ್ಲೇಖಿಸುತ್ತಾ ಸ್ವತಃ ಅಂಬೇಡ್ಕರ್ ರವರು ಮುಂದೊಂದು ದಿನ ತಮ್ಮ ಸಂಪಾದಕತ್ವದ “ಬಹಿಷ್ಕೃತ ಭಾರತ” ಪತ್ರಿಕೆಯಲ್ಲಿ ಸಂಪಾದಕೀಯ ಪುಟದಲ್ಲಿ ಬರೆಯುತ್ತಾ, “ಶಿಕ್ಷಣ ಪಡೆಯುವ ಆ ದಿನಗಳಲ್ಲಿ ಸುಖ, ಸಂತೋಷ, ನೆಮ್ಮದಿ ಯಾವುದರ ಬಗ್ಗೆಯೂ ತಾನು ತಲೆಕೆಡಿಸಿಕೊಳ್ಳದ ಆ ಸಮಯದಲ್ಲಿ, ಸಂಸಾರದ ನೋವು ಕೊಂಚವೂ ತಿಳಿಯದಂತೆ ತನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದ್ದು ರಮಾಬಾಯಿ” ಎನ್ನುತ್ತಾರೆ.

ದುರಂತದ ಬದುಕು: ಅಂಬೇಡ್ಕರರು ಅಮೆರಿಕಕ್ಕೆ ತೆರಳಿದ ಕೆಲವೇ ದಿನಗಳಲ್ಲಿ ಅವರ ಮೊದಲ ಮಗ ಗಂಗಾಧರ ಜನಿಸುತ್ತಾನೆ. ದುರಂತ ಎಂದರೆ ಜನಿಸಿದ ಕೆಲವೇ ದಿನಗಳಲ್ಲಿ ಆತ ತೀರಿಕೊಳ್ಳುತ್ತಾನೆ. ಈ ಸಂದರ್ಭದಲ್ಲಿ
ಅದರ ನೋವು ಕೂಡ ಕೊಂಚವೂ ಅಂಬೇಡ್ಕರರಿಗೆ ತಲುಪುದ ಹಾಗೆ ನೋಡಿಕೊಳ್ಳುತ್ತಾರೆ ತ್ಯಾಗಮಯಿ ರಮಾಬಾಯಿಯವರು.

ರಮಾಬಾಯಿಯವರು ಅಂಬೇಡ್ಕರರು ಅಮೆರಿಕದಿಂದ ವಾಪಸ್ ಬಂದ ನಂತರವಾದರೂ (1917) ತನ್ನ ಕುಟುಂಬದ ಕಷ್ಟ ಪರಿಹಾರಗೊಳ್ಳಬಹುದು ಎಂದು ನಿರೀಕ್ಷಿಸಿದ್ದರು. ಅದು ನೆರವೇರಿತು ಕೂಡ. ಆದರೆ ಸಾಮಾಜಿಕ ಹೋರಾಟಗಳಲ್ಲಿ ಬಾಬಾಸಾಹೇಬರು ಅದಾಗಲೇ ತೊಡಗಿಸಿಕೊಂಡಿದ್ದರಿಂದ ಸಂಸಾರದ ಹೊಣೆ ರಮಾಬಾಯಿಯವರ ಮೇಲೆಯೇ ಬಿದ್ದಿತು. ಇದನ್ನೂ ಬರೆಯುತ್ತ ಅಂಬೇಡ್ಕರರು, “ತಾನು ವಿದೇಶಕ್ಕೆ ತೆರಳಿದ ಸಂದರ್ಭದಲ್ಲಿ ರಾಮು ಇಡೀ ಕುಟುಂಬದ ಭಾರ ಹೊತ್ತುಕೊಂಡಳು. ವಿದೇಶದಿಂದ ಹಿಂದಿರುಗಿದ ನಂತರವೂ ಹಣಕಾಸು ತೊಂದರೆಯಾದಾಗ ಆಗಲು ಅಷ್ಟೇ ಆಕೆ ತನ್ನ ತಲೆಯ ಮೇಲೆ ಸೆಗಣಿಯ ಬುಟ್ಟಿ ಹೊತ್ತು ಸಂಸಾರ ನಡೆಸಲು ಹಿಂದೆ ಬೀಳಲಿಲ್ಲ” ಎನ್ನುತ್ತಾರೆ.

ಇದನ್ನೂ ಓದಿರಿ: ನ್ಯಾಯಾಲಯಗಳ ಕಾರ್ಯಕ್ರಮಗಳಲ್ಲಿ ಅಂಬೇಡ್ಕರ್‌ ಚಿತ್ರ ಇರಿಸುವಂತೆ ಹೈಕೋರ್ಟ್‌ ಆದೇಶ

ಈ ಸಂದರ್ಭದಲ್ಲಿಯೇ ರಮಾಬಾಯಿ ಮತ್ತು ಅಂಬೇಡ್ಕರ್ ದಂಪತಿಗಳಿಗೆ ಅವರ ಎರಡನೇ ಮಗ ಯಶವಂತ ರಾವ್ ಜನಿಸುತ್ತಾನೆ. ಬಹುಶಃ ಯಶವಂತ ರಾವ್ ಅಷ್ಟೇ ಅವರಿಗೆ ಉಳಿಯುವ ಏಕೈಕ ಮಗ. ಮಗ ಹುಟ್ಟಿದ ಈ ಸಮಯದಲ್ಲೂ ಸಮಾಜದ ಪುಣ್ಯವೋ ಅಥವಾ ರಮಾಬಾಯಿಯವರ ತ್ಯಾಗವೋ ಮತ್ತೆ ಅಂಬೇಡ್ಕರರು ಲಂಡನ್‌ಗೆ ತಮ್ಮ ಉನ್ನತ ಶಿಕ್ಷಣ ಪೂರೈಸಲು ತೆರಳುತ್ತಾರೆ. ಈಗಲೂ ಅಷ್ಟೇ ರಮಾಬಾಯಿಯವರು ಮತ್ತೆ ತಮ್ಮ ಪತಿಯನ್ನು ಬೀಳ್ಕೊಟ್ಟು ಸಂಸಾರದ ಭಾರ ಹೊತ್ತುಕೊಳ್ಳುತ್ತಾರೆ. ಮುಂದೆಯೂ ಅಷ್ಟೇ ಲಂಡನ್‌‌ನಿಂದ ಡಿಎಸ್ಸಿ ಮತ್ತು ಬಾರ್- ಅಟ್-ಲಾ ಮುಗಿಸಿ ಅಂಬೇಡ್ಕರರು ವಾಪಸ್ ಬಂದಾಗ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಕೊಂಡ ಅವರಿಗೆ ಕೊಂಚವೂ ಹಿನ್ನಡೆಯಾಗದಂತೆ ರಮಾಬಾಯಿಯವರು ಜೊತೆಜೊತೆಯಾಗಿ ನಿಲ್ಲುತ್ತಾರೆ. ಇದನ್ನೂ ನೆನೆಸಿಕೊಳ್ಳುತ್ತ ಅಂಬೇಡ್ಕರರು ತನ್ನ ಹೋರಾಟದ ಕಾರಣ ತಾನು ದಿನದ 24 ಗಂಟೆಗಳಲ್ಲಿ ಅರ್ಧ ಗಂಟೆ ಕೂಡ ಆಕೆಯ ಜೊತೆ ಕಳೆಯಲಾಗುತ್ತಿರಲಿಲ್ಲ. ಆದರೂ ಹೊಂದಿಕೊಂಡು ಹೋಗುತ್ತಿದ್ದ, ತನ್ನನ್ನು ಅತಿಯಾಗಿ ಪ್ರೀತಿಸುತ್ತಿದ್ದ, ಗೌರವಿಸುತ್ತಿದ್ದ ರಮಾ” ಎನ್ನುತ್ತಾರೆ.

ಮಕ್ಕಳ ಅಗಲಿಕೆಯ ದುಃಖ: ಯಶವಂತ ರಾವ್ ನಂತರ ಅಂಬೇಡ್ಕರ್ – ರಮಾಬಾಯಿ ದಂಪತಿಗೆ ರಮೇಶ್, ಇಂದು, ರಾಜರತ್ನ ಎಂಬ ಮೂವರು ಮಕ್ಕಳು ಜನಿಸುತ್ತಾರೆ. ದುರಂತ ಆ ಮೂವರು ಮಕ್ಕಳು ಕೂಡ ಹೆಚ್ಚು ದಿನ ಬದುಕುವುದಿಲ್ಲ. ಅದರಲ್ಲೂ ಕೊನೆಯ ಮಗ ರಾಜರತ್ನನನಂತೂ ರಮಾಬಾಯಿ ಮತ್ತು ಅಂಬೇಡ್ಕರ್ ದಂಪತಿಗಳು ಬಹಳ ಹಚ್ಚಿಕೊಂಡಿದ್ದರು. ಹೇಗೆಂದರೆ ರಾಜರತ್ನನ ಸಾವಿನ ಸಂದರ್ಭದಲ್ಲಿ ತಮ್ಮ ಸ್ನೇಹಿತರಿಗೆ ಪತ್ರದ ಮೂಲಕ ಅಂಬೇಡ್ಕರರು ಹೇಳುವುದು: “ನಾನು ಮತ್ತು ರಾಮು ನಮ್ಮ ಕೊನೆಯ ಮಗನ ಸಾವಿನ ಈ ಸಂಕಟದಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಈ ನಮ್ಮ ಕೈಗಳು ಮೂರು ಗಂಡು ಮತ್ತು ಒಂದು ಹೆಣ್ಣು ಮಗುವಿನ ಶವ ಸಂಸ್ಕಾರ ಮಾಡಿವೆ. ಅವರ ಸಾವುಗಳನ್ನು ನೆನಪಿಸಿಕೊಂಡಾಗ ನಮ್ಮ ಹೃದಯ ನೋವಿನಿಂದ ಚೀರುತ್ತದೆ. ಅವರ ಭವಿಷ್ಯದ ಬಗ್ಗೆ ನಾವು ಕಟ್ಟಿಕೊಂಡಿದ್ದ ಕನಸುಗಳು! ಆದರೆ ಈಗ? ವಿಷಾದದ ಮೋಡ ನಮ್ಮ ಬದುಕಲ್ಲಿ ಕವಿದಿದೆ. ಉಪ್ಪಿಲ್ಲದ ಊಟದಂತಾಗಿದೆ ನಮ್ಮ ಜೀವನ. ಅದರಲ್ಲೂ ನನ್ನ ಕೊನೆಯ ಮಗ ಆತ ತುಂಬಾ ವಿಶೇಷವಾಗಿದ್ದ. ಅಂತಹ ಮಗನನ್ನು ನಾವು ಮತ್ತೆ ಪಡೆಯಲು ಸಾಧ್ಯವೇ? ಆತನ ಸಾವು ನಮ್ಮ ಬದುಕನ್ನು ಮುಳ್ಳಿನ ತೋಟವಾಗಿಸಿದೆ”.

ಅಂತಿಮ ವಿದಾಯ: ಇಂತೆಲ್ಲ ಮಕ್ಕಳ ಸಾವಿನ ನಂತರ ರಮಾಬಾಯಿಯವರು ವಯಕ್ತಿಕವಾಗಿ ಮಾನಸಿಕವಾಗಿ ಜರ್ಝರಿತರಾಗುತ್ತಾರೆ. ಯಾವ ಮಟ್ಟಿಗೆಂದರೆ ಅವರ ಆರೋಗ್ಯ ತೀರಾ ಹದಗೆಡುತ್ತದೆ. ಈ ಸಂದರ್ಭದಲ್ಲಿ ಅಂಬೇಡ್ಕರರು ವಾತಾವರಣ ಬದಲಾದರೆ ರಮಾಬಾಯಿಯವರ ಆರೋಗ್ಯ ಸುಧಾರಿಸಬಹುದು ಎಂದು ಅವರನ್ನು ನಮ್ಮ ಕರ್ನಾಟಕದ ಧಾರವಾಡದಲ್ಲಿ ತಾವೇ ಕಟ್ಟಿದ್ದ ಅನಾಥಾಶ್ರಮಕ್ಕೆ ಕರೆದುಕೊಂಡು ಬರುತ್ತಾರೆ. ತಿಂಗಳುಗಳ ಕಾಲ ಇಲ್ಲಿರುತ್ತಾರೆ. ಈ ಸಂದರ್ಭದಲ್ಲಿ ರಮಾಬಾಯಿಯವರು ಅಲ್ಲಿದ್ದ ಅನಾಥ ಮಕ್ಕಳಿಗೆ ಅಡುಗೆ ಮಾಡಲು ಆಹಾರದ ಕೊರತೆಯಾದಾಗ ತಮ್ಮ ಒಡವೆ ಮಾರಿ ಆಹಾರ ಪದಾರ್ಥಗಳನ್ನು ಖರೀದಿಸಿ ಊಟ ಹಾಕುತ್ತಾರೆ. ಆದರೆ ಮಾತೆ ರಮಾಬಾಯಿಯವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣುವುದಿಲ್ಲ. ಅಂತಿಮವಾಗಿ 1935 ಮೇ 7 ರಂದು ಮಾತೆ ರಮಾಬಾಯಿಯವರು ಬಾಬಾಸಾಹೇಬರನ್ನು ಬಿಟ್ಟು ಅಗಲುತ್ತಾರೆ. (ರಮಾಬಾಯಿಯವರು ಬಾಬಾಸಾಹೇಬರನ್ನು ಕರೆಯುತ್ತಿದ್ದದ್ದು ಸದಾ “ಸಾಹೇಬ್” ಎಂದೇ!)

ರಮಾಬಾಯಿಯವರ ನಿಧನದ ಆ ದಿನ ಅತೀವ ದುಃಖಕ್ಕೊಳಗಾಗುವ ಅಂಬೇಡ್ಕರ್ ಅವರು ಶವ ಸಂಸ್ಕಾರ ಮೆರವಣಿಗೆ ಮುಗಿಸಿ ಮನೆಗೆ ಬಂದು ಕೊಠಡಿಯೊಂದರಲ್ಲಿ ತಮ್ಮನ್ನೆ ತಾವು ಬಂಧಿಯಾಗಿಸಿಕೊಳ್ಳುತ್ತಾರೆ. ಪುಟ್ಟ ಮಗುವಿನ ರೀತಿ ಸತತ ಒಂದು ವಾರಗಳ ಕಾಲ ಅಳುತ್ತಾರೆ.

ಬಾಬಾಸಾಹೇಬರು ಅಳುವುದಷ್ಟೆ ಅಲ್ಲ ತಮ್ಮ ಪ್ರೀತಿಯನ್ನು 1940ರಲ್ಲಿ ಪ್ರಕಟಿತ ತಮ್ಮ ಮಹತ್ವದ “ಪಾಕಿಸ್ತಾನ್ ಆರ್ ಪಾರ್ಟಿಷನ್ ಆಫ್ ಇಂಡಿಯಾ” ಕೃತಿಯನ್ನು ರಮಾಬಾಯಿಯವರಿಗೆ ಅರ್ಪಿಸುವುದರ ಮೂಲಕ ತಮ್ಮ ಮತ್ತು ಅವರ ನಡುವಿನ ಬದುಕು ಎಂತಹದ್ದು ಎಂದು ತಮ್ಮ ಅರ್ಪಣಾ ನುಡಿಗಳಲ್ಲಿ ದಾಖಲಿಸುತ್ತಾರೆ. ಆ ಅರ್ಪಣಾ ನುಡಿಗಳಲ್ಲಿ, “ಆಕೆಯ ಹೃದಯದ ಒಳ್ಳೆಯತನ, ಆಕೆಯ ಮನಸ್ಸಿನ ಶ್ರೇಷ್ಠತೆ, ಗುಣದ ನಿಷ್ಕಲ್ಮಶ ಪರಿಶುದ್ಧತೆ, ಅವಳ ಮನೋಸ್ಥೈರ್ಯ, ಎಲ್ಲ ಕಷ್ಟ ಸುಖಗಳನ್ನು ನನ್ನ ಜೊತೆ ಅನುಭವಿಸಲು ಆಕೆಗಿದ್ದ ಸಿದ್ಧತೆ, ಇದನ್ನು ಸ್ನೇಹದ ಆ ದಿನಗಳ ಅಗತ್ಯದಲ್ಲಿ ನನಗೆ ಧಾರೆಯೆರೆದದ್ದು ಮತ್ತು ನಮ್ಮ ನಡುವೆ ಒದಗಿಬಂದ ಅಪಾರ ದುಃಖದ ಸಂದರ್ಭಗಳು… ಇದೆಲ್ಲದರ ನೆನಪಿಗಾಗಿ ಕೃತಜ್ಞತೆಯಾಗಿ ಗೌರವಪೂರ್ವಕವಾಗಿ ನನ್ನ ರಾಮುಳ ನೆನಪಿಗೆ ನಾನು ಈ ಪದಗಳ ಕೆತ್ತನೆಯನ್ನು ಆಕೆಗೆ ಅರ್ಪಿಸುತ್ತಿದ್ದೇನೆ” ಎಂದು ಉಲ್ಲೇಖಿಸಿದ್ದಾರೆ.

ಬಹುಶಃ ಬಾಬಾಸಾಹೇಬರಿಗಿಂತ ಮಿಗಿಲಾದ ಪದಗಳಲ್ಲಿ ಮಾತೆ ರಮಾಬಾಯಿಯವರ ಬದುಕನ್ನು ವಿವರಿಸಲು ಸಾಧ್ಯವೇ ಇಲ್ಲ. ಖಂಡಿತ, ಅಂತಹ ತ್ಯಾಗಮಯಿ ತಾಯಿಯ ಬದುಕು ಪ್ರತಿಯೊಬ್ಬರಿಗೂ ಆದರ್ಶ. ಮಹಿಳೆಯರಿಗೂ… ಪುರುಷರಿಗೂ…


ಇದನ್ನೂ ಓದಿರಿ: ಅಂಬೇಡ್ಕರ್‌ ಭಾವಚಿತ್ರ ತೆರವು ವಿವಾದ: ಮೈಸೂರು ಬಂದ್ ಯಶಸ್ವಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಿಯಾಂಕ ಗಾಂಧಿ

ಗಾಜಾದಲ್ಲಿ ಇಸ್ರೇಲ್‌ನ ‘ಜನಾಂಗೀಯ ಕೃತ್ಯಗಳು’ ನಿಲ್ಲಬೇಕು: ಪ್ರಿಯಾಂಕಾ ಗಾಂಧಿ

0
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸ್ವೀಕಾರಾರ್ಹವಲ್ಲ ಮತ್ತು ಹತ್ಯಾಕಾಂಡ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದನ್ನು ಜಗತ್ತಿನ ಪ್ರತಿಯೊಂದು ಸರ್ಕಾರ ಖಂಡಿಸಬೇಕು ಎಂದು ಶುಕ್ರವಾರ ಕರೆ...