Homeಮುಖಪುಟನಾವಾಡುವ ಮಾತು ನಮ್ಮ ಸಂಸ್ಕೃತಿಯನ್ನು ಸೂಚಿಸುತ್ತದೆ. ಅಂದರೆ ಸಂಸ್ಕೃತಿ ಎಂದರೇನು?

ನಾವಾಡುವ ಮಾತು ನಮ್ಮ ಸಂಸ್ಕೃತಿಯನ್ನು ಸೂಚಿಸುತ್ತದೆ. ಅಂದರೆ ಸಂಸ್ಕೃತಿ ಎಂದರೇನು?

ಈ ಕೈ ಸಂಜ್ಞೆ ಅಮೇರಿಕಾದಲ್ಲಿ ಓಕೆ ಎಂಬುದನ್ನು ಸೂಚಿಸಿದರೆ, ಜಪಾನಿನಲ್ಲಿ “ಹಣ” ವನ್ನು, ಫ್ರಾನ್ಸಿನಲ್ಲಿ ಶೂನ್ಯವನ್ನು, ಟ್ಯುನಿಸಿಯಾ ದೇಶದಲ್ಲಿ “ನಾನು ನಿನ್ನನ್ನು ಕೊಲ್ಲುತ್ತೇನೆ” ಎಂಬುದನ್ನು ಸೂಚಿಸುತ್ತದೆ ಮತ್ತು ಬ್ರಾಸಿಲ್ ದೇಶದಲ್ಲಿ ಇದನ್ನು ಅವಮಾನಕರ ಎಂದು ಭಾವಿಸಲಾಗುತ್ತದೆ.

- Advertisement -
- Advertisement -

ಜೀವನ ಕಲೆಗಳು: ಅಂಕಣ -15

ಸಂಸ್ಕೃತಿ ಮತ್ತು ಸಂವಹನ

ಸಂಸ್ಕೃತಿ ಎಂದರೆ ಒಂದು ಜನಾಂಗದ, ಗುಂಪಿನ, ತಲೆಮಾರಿನಿಂದ ಬಂದಂತಹ ನಡತೆ ಎಂದು ಹೇಳಬಹುದು. ಈ ನಡತೆಯಲ್ಲಿ ಅವರ ಬದುಕಿನ ರೀತಿ-ನೀತಿ, ಹುಟ್ಟು-ಸಾವು, ಸುಖ-ದುಃಖ, ಮದುವೆ ಸಮಾರಂಭ ಸನ್ನಿವೇಶಗಳಲ್ಲಿ ಆಚರಣೆಗಳು, ವೇಷ-ಭೂಷ, ಆಹಾರ ಪದ್ಧತಿ, ನಂಬಿಕೆಗಳು, ಸಾಮಾಜಿಕ ಕಾನೂನುಗಳು, ಯೋಚನಾ ಲಹರಿ, ಸಾಮುದಾಯಿಕ ಸಂಸ್ಥೆಗಳು, ಕಟ್ಟು ಕತೆಗಳು, ಜಾನಪದ, ವಿವೇಕ, ಮೌಲ್ಯಗಳು, ಕಟ್ಟುಪಾಡು, ಆಕಾಂಕ್ಷೆಗಳು, ಇತ್ಯಾದಿ ಇನ್ನೂ ಹತ್ತು ಹಲವಾರು ಅಂಶಗಳು ಸೇರಿರುತ್ತವೆ.

ಇವನ್ನು ಒಂದು ಪೀಳಿಗೆ ತನ್ನ ಮುಂದಿನ ಪೀಳಿಗೆಗೆ ನೀಡುತ್ತಾ ಹೋಗುತ್ತದೆ. ಇದರಿಂದ ಅವರಿಗೆ ತಮ್ಮದೇ ಆದ ಒಂದು ಜನಾಂಗೀಯ ಪರಿಚಯ ಸಿಗುತ್ತದೆ. ಅದೇ ರೀತಿ ಸಂಸ್ಥೆಗಳಿಗೂ, ವಾಣಿಜ್ಯ ಕಂಪನಿಗಳಿಗೂ ತಮ್ಮದೇ ಆದ ಒಂದು ಸಂಸ್ಕೃತಿ ಎನ್ನುವುದು ಇರುತ್ತದೆ. ಇದು ಯಾವ ಕಾಲದಲ್ಲಿ, ಯಾರಿಂದ, ಯಾವ ದೇಶದಲ್ಲಿ ಮತ್ತು ಪರಿಸ್ಥಿತಿಯಲ್ಲಿ ಸ್ಥಾಪಿತವಾಯಿತು ಎಂಬುದನ್ನು ಅವಲಂಬಿಸಿರುತ್ತದೆ. ಈ ಸಂಸ್ಕೃತಿಯಿಂದಾಗಿ ಅದರಲ್ಲಿರುವ ಜನರು ತಮ್ಮ ನಡತೆಯನ್ನು ಆ  ಸಮುದಾಯ/ಸಂಸ್ಥೆ/ಕಂಪನಿಯ ಸಂಸ್ಕೃತಿಗೆ ಹೊಂದಿಸಿಕೊಂಡಿರುತ್ತಾರೆ. ಈ ಸಂಸ್ಕೃತಿಯ ಕಟ್ಟುಪಾಡುಗಳಿಂದಾಗಿ ಇವರಿಗೆ ಇತರ ಗುಂಪಿನ ಜೊತೆ ಸಂವಹನಕ್ಕೆ ಸಮಸ್ಯೆಗಳು ಬರಬಹುದು. ಈ ಸಮಸ್ಯೆ ಭಾಷೆಗಷ್ಟೇ ಸೀಮಿತವಾಗಿರುವುದಿಲ್ಲ. ಮಾತನಾಡುವ ಭಾಷೆಯ ಜೊತೆಗೆ ಸಂಜ್ಞೆಗಳು, ದೈಹಿಕ ಭಾಷೆ, ಮೌಲ್ಯಗಳಿಗೂ ಅನ್ವಯಿಸುತ್ತವೆ. ಆದ್ದರಿಂದ ಸಮರ್ಪಕ ಸಂವಹನ ನಡೆಸಲು ಭಾಷೆಯ ಜೊತೆಗೆ ನಾವು ಆ ಜನಾಂಗದ ಸಂಸ್ಕೃತಿಯನ್ನೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ವಿಭಿನ್ನ ಪ್ರಾಂತ್ಯ, ರಾಜ್ಯ, ದೇಶದ ಜನರ ಜೊತೆ ನಾವು ಸಂವಹಿಸುವ ಸಂದರ್ಭಗಳಲ್ಲಿ ಈ ವ್ಯತ್ಯಾಸಗಳು ಬಹಳ ಮಹತ್ವಪೂರ್ಣವಾಗುತ್ತವೆ. ಹಲವಾರು ದೇಶಗಳಲ್ಲಿ ಕೆಲಸ ಮಾಡುವಾಗ ನನಗೆ ವೈಯುಕ್ತಿಕವಾಗಿ ಆದ ಅನುಭವಗಳ ಆಧಾರದ ಮೇಲೆ ಹೇಳುತೇನೆ.

ಫಿಲಿಪ್ಪೀನ್ಸ್ ಜನರ ಜೊತೆಯ ಅನುಭವ: ಅಮೇರಿಕದ ಸಂಸ್ಕೃತಿಯಿಂದ ಪ್ರಭಾವಿತರಾದ ಅವರು ಬಹಳ ಸರಳ ಸ್ವಭಾವದ ಜನ. ಅವರಿಗೆ ಸ್ವಲ್ಪ ಮಟ್ಟಿಗೆ ಇಂಗ್ಲಿಷ್ ಭಾಷೆಯ ಜ್ಞಾನವಿದೆ. ಆದ್ದರಿಂದ ಭಾಷೆಯ ಸಮಸ್ಯೆ ಇಲ್ಲವೆನ್ನಬಹುದು. ನನ್ನ ಜೊತೆ ಕೆಲಸ ಮಾಡುತ್ತಿದ್ದ ಕೆಲಸಗಾರರ ಮುಖ್ಯಸ್ಥನನ್ನು ನಾನು ಬೆಳಿಗ್ಗೆ ಕರೆದು ಇಡೀ ದಿನದಲ್ಲಿ ಮಾಡಬೇಕಾದ ನಾಲ್ಕೈದು ಕೆಲಸ ಒಟ್ಟಿಗೆ ವಿವರಿಸುತ್ತಿದ್ದೆ; ಆತ ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದ, ಕೊನೆಗೆ ನಾನು “ನಿನಗೆ ಸರಿಯಾಗಿ ಅರ್ಥವಾಯಿತೇ?” ಎಂದು ಕೇಳಿದಾಗ ಹೂಂಗುಟ್ಟುತ್ತಿದ್ದ. “ಸರಿ, ಹೋಗು” ಎಂದು ಕಳುಹಿಸಿದರೆ ಸುಮ್ಮನೇ ಹೋಗುತ್ತಿದ್ದ, ಏನೂ ಕೆಲಸ ಮಾಡುತ್ತಿರಲಿಲ್ಲ ಅಥವಾ ಮಾಡಿಸುತ್ತಿರಲಿಲ್ಲ”.

ನನಗೆ ನಂತರ ತಿಳಿಯಿತು ಅವರಿಗೆ ಒಂದೊಂದೇ ಕೆಲಸವನ್ನು ಕೊಟ್ಟು, “ಇದನ್ನು ಮಾಡಿ, ಮುಗಿಸಿ, ಬಂದು ನನಗೆ ಹೇಳು” ಎಂದು ಸರಳವಾದ ಆದೇಶ ಕೊಡಬೇಕು ಎಂದು. ನನ್ನ ಸಹಾಯಕನನ್ನು “ನನಗೆ ಕುಡಿಯಲು ಒಂದು ಲೋಟ ನೀರು ತರಲು ಸಾಧ್ಯವೇ?” ಎಂದು ಕೇಳಿದೆ. ಅವನೂ ಸಹ ಹೂಂಗುಟ್ಟಿದ, ನೀರು ತರಲಿಲ್ಲ. ನಂತರ ತಿಳಿಯಿತು “ಅವನಿಗೆ ಒಂದು ಲೋಟ ಕುಡಿಯುವ ನೀರು ತಂದುಕೊಡು” ಎಂಬ ನಿರ್ದೇಶನ ನೀಡಬೇಕಾಗಿತ್ತು ಎಂದು. ಅದೇ ರೀತಿ ಆ ಮುಖ್ಯಸ್ಥನಿಗೆ ನಾನು ನಮ್ಮ ಸ್ಟೋರ್ ರೂಂ ವೀಕ್ಷಿಸಲು ಬರುವುದಾಗಿ ತಿಳಿಸಿ ಅವನಿಗೆ ಬರಹೇಳಿದ, ಬಂದ ಕೂಡಲೇ ಅವನ ಜೊತೆಗೆ ಸ್ಟೋರ್ ರೂಂಗೆ ಹೋದೆ, ಅದಕ್ಕೆ ಬೀಗ ಹಾಕಲಾಗಿತ್ತು. ಇಬ್ಬರೂ ಅದರ ಮುಂದೆ ಸುಮ್ಮನೆ ನಿಂತುಕೊಂಡೆವು. ಕೊನೆಗೆ ನಾನೇ ಅವನಿಗೆ ಅದರ “ಬೀಗದ ಕೈ ನಿನ್ನ ಬಳಿ ಇದೆಯೇ” ಎಂದು ಕೇಳಿದೆ, “ಹೌದು” ಎಂದ. “ಹಾಗಾದರೆ ಬಾಗಿಲು ತೆಗೆ” ಎಂದೆ, ನಂತರವೇ ಬಾಗಿಲು ತೆಗೆದ.

ಹೀಗೆ ಸಣ್ಣ ಪುಟ್ಟ ಅಂಶಗಳು ಸಂವಹನದಲ್ಲಿ ಅತೀವ ಪರಿಣಾಮ ಬೀರುತ್ತವೆ. ಇವು ಸಂಸ್ಕೃತಿಯ ಪರಿಣಾಮ ಎಂದ ಮಾತ್ರಕ್ಕೆ ಅವರು ನಮಗಿಂತ ಕಡಿಮೆ ತಿಳಿದವರು ಎಂದರ್ಥವಲ್ಲ; ನಮಗಿಂತ ವಿಭಿನ್ನ ಅಷ್ಟೇ. ನಮ್ಮವರಾಗಿದ್ದರೆ ನನಗೆ ಕೇಳಿದ ಕೂಡಲೇ ಕುಡಿಯಲು ನೀರು ಸಿಗುತ್ತಿತ್ತು. ನಾನು ಸ್ಟೋರ್ ರೂಂ ತಲುಪುವ ಮುನ್ನ ಅದರ ಬೀಗ ತೆಗೆದು ವೀಕ್ಷಣೆಗೆ ಎಲ್ಲವೂ ಸಿದ್ಧವಾಗಿರುತ್ತಿತ್ತು. ಆದರೆ ಫಿಲಿಪ್ಪೀನ್ಸ್ ಜನ ಸಾಮೂಹಿಕವಾಗಿ ಹೀಗೆ ಎಂದು ನನ್ನ ಒಬ್ಬನ ಅಭಿಪ್ರಾಯ ವ್ಯಕ್ತಪಡಿಸಿದಲ್ಲಿ ಅದು ತಪ್ಪಾಗುತ್ತದೆ. ಎಲ್ಲರೂ ಪಡಿಯಚ್ಚಲ್ಲ, ನನಗೆ ಆಗಿದ್ದು ನನ್ನ ವೈಯುಕ್ತಿಕ ಅನುಭವ.

ನಮ್ಮಲ್ಲಿ ಏನಾದರೂ ಗಾಜಿನ, ಅಥವಾ ಸುಲಭವಾಗಿ ಒಡೆಯುವ ವಸ್ತು, ಇದ್ದು ನನ್ನ ಸಂಬಂಧಿಕರ ಕೈಯಿಂದ ಜಾರಿ ಬಿದ್ದು ಒಡೆದುಹೋದಲ್ಲಿ, ಯಾರಾದರೂ ನನಗೆ ಅದರ ಬಗ್ಗೆ ವಿಚಾರಿಸಿದಲ್ಲಿ, ಅದನ್ನು ಇಂತಹವರು ಒಡೆದು ಹಾಕಿದರು ಎಂದು ಮುಲಾಜಿಲ್ಲದೆ ಸಾರುತ್ತೇನೆ. ಅದೇ ಜಪಾನ್ ದೇಶದ ಜನ, ಅದರ ಬಗ್ಗೆ ಮಾತನಾಡ ಬೇಕಾದ ಸಂದರ್ಭದಲ್ಲಿ, “ಅದು ಒಂದು ಅಪಘಾತದಲ್ಲಿ ಒಡೆದು ಹೋಯಿತು” ಎಂದಷ್ಟೇ ಹೇಳುತ್ತಾರೆಯೇ ವಿನಃ ಅದರ ನಷ್ಟಕ್ಕೆ ಯಾರನ್ನೂ ಎಂದೂ ದೂರುವುದಿಲ್ಲ. ಇದೂ ಸಹ ಸಂಸ್ಕೃತಿಯ ಪ್ರಭಾವ.

ನಾನು ಅಮೇರಿಕಾ ದೇಶದಲ್ಲಿ ಕೆಲಸ ಪ್ರಾರಂಭಿಸಿದ ಹೊಸತರಲ್ಲಿ ನನ್ನ ಮೇಲಧಿಕಾರಿಯ (ಬಾಸ್) ಜೊತೆ ಮಾತನಾಡುವಾಗ ಅವರನ್ನು “ಸರ್” ಎಂದು ಸಂಬೋಧಿಸುತ್ತಿದ್ದೆ ಮತ್ತು ಇ-ಮೇಲ್ ಇತ್ಯಾದಿ ಕಳುಹಿಸುವಾಗ “ಮಿಸ್ಟರ್ ಆಂಡರ್ಸನ್” ಎಂದು. ಒಂದು ವಾರದ ಒಳಗೆ ಅವರೇ ನನಗೆ ಕರೆ ಮಾಡಿ “ಕಾಲ್ ಮಿ ಗ್ಯಾರಿ” ಎಂದು ಸ್ಪಷ್ಟ ನಿರ್ದೇಶನ ನೀಡಿದರು. ಇದೂ ಸಹ ಸಂಸ್ಕೃತಿಯ ಪ್ರಭಾವ. ಹೀಗೆ ದೇಶ ಮಾತ್ರವಲ್ಲ, ರಾಜ್ಯಕ್ಕೂ, ಪ್ರಾಂತ್ಯಕ್ಕೂ ನಡತೆಯ ವ್ಯತ್ಯಾಸವಿರುತ್ತದೆ.

ಕೈಯಿಂದ ಮಾಡುವ ಸಂಜ್ಞೆಗಳೂ ಸಹ ಅತ್ಯಂತ ಮಹತ್ವದಿಂದ ಕೂಡಿರುತ್ತವೆ. ಉದಾ: ಕೆಳಗಿನ ಕೈ ಸಂಜ್ಞೆ

ಇದು ಅಮೇರಿಕಾದಲ್ಲಿ ಓಕೆ ಎಂಬುದನ್ನು ಸೂಚಿಸಿದರೆ, ಜಪಾನಿನಲ್ಲಿ “ಹಣ” ವನ್ನು, ಫ್ರಾನ್ಸಿನಲ್ಲಿ ಶೂನ್ಯವನ್ನು, ಟ್ಯುನಿಸಿಯಾ ದೇಶದಲ್ಲಿ “ನಾನು ನಿನ್ನನ್ನು ಕೊಲ್ಲುತ್ತೇನೆ” ಎಂಬುದನ್ನು ಸೂಚಿಸುತ್ತದೆ ಮತ್ತು ಬ್ರಾಸಿಲ್ ದೇಶದಲ್ಲಿ ಇದನ್ನು ಅವಮಾನಕರ ಎಂದು ಭಾವಿಸಲಾಗುತ್ತದೆ. ಅದೇ ರೀತಿ ಮೂಗು ಮುಟ್ಟಿಕೊಳ್ಳುವುದು, ಕೈಗಳ ಹಾವಭಾವ, ಕಣ್ಣು ಸಂಜ್ಞೆಗಳು, ದೈಹಿಕ ಸಾಮೀಪ್ಯ ಅಥವಾ ಪರಸ್ಪರ ಭಾವನೆಗಳನ್ನು ಸಾರ್ವಜನಿಕವಾಗಿ ವ್ಯಕ್ತ ಪಡಿಸುವುದು ಅಪಾರ್ಥಕ್ಕೆ ಅಥವಾ ತೊಂದರೆಗೆ ಕಾರಣವಾಗಬಲ್ಲವು. ಅದರ ಬಗ್ಗೆ ಜಾಗರೂಕರಾಗಿರುವುದು ಮೇಲು.

ಲೇಖಕರ ಪರಿಚಯ

ಜಿ. ಆರ್. ವಿದ್ಯಾರಣ್ಯ ಅವರು ಶ್ರೀಮತಿ ಶಾಂತ ಮತ್ತು ದಿ. ಜಿ.ವಿ.ರಂಗಸ್ವಾಮಿಯವರ ಜ್ಯೇಷ್ಠ ಪುತ್ರರಾಗಿ 1951ರಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಜನಿಸಿ, ದೂರದ ಮುಂಬಯಿ ನಗರದಲ್ಲಿ ಬೆಳೆದವರು. ಶಾಲಾ ಕಾಲೇಜು ಶಿಕ್ಷಣ ಮುಂಬಯಿಯಲ್ಲಿ ನಡೆಯಿತು. ತಮ್ಮ 18ನೆಯ ವಯಸ್ಸಿನಲ್ಲಿ, 1969ರಲ್ಲಿ ಐ.ಬಿ.ಎಂ. 1401 ಆಟೋಕೋಡರ್ ಕಂಪ್ಯೂಟರ್ ಪ್ರೊಗ್ರಾಮಿಂಗ್ ಡಿಪ್ಲೊಮಾ ಪಡೆದ ನಂತರ, ಕೆಲಸ ಸಿಗದೆ, ಮರೀನ್ ಕಮ್ಯುನಿಕೇಷನ್ ಕ್ಲಾಸ್ 1 ಲೈಸೆನ್ಸ್ ಪಡೆದು ಸುಮಾರು ಇಪ್ಪತ್ತೈದು ವರ್ಷ ವಾಣಿಜ್ಯ ಹಡಗುಗಳಲ್ಲಿ ಕಮ್ಯುನಿಕೇಷನ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಜೊತೆಗೆ ಇಂಗ್ಲೆಂಡಿನ ಲಿವರ್ಪೂಲ್ ನಗರದ ರಿವರ್ಸ್ಡೇಲ್ ಕಾಲೇಜಿನಲ್ಲಿ ಓದಿ, ಮರೀನ್ ರೇಡಾರ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಕಂಪ್ಯೂಟರ್ ಆಸಕ್ತಿ ಮುಂದುವರೆಸಿ, ಮೈಕ್ರೋಸಾಫ್ಟ್ ಕಂಪನಿಯ ಸಿಸ್ಟಮ್ ಇಂಜಿನಿಯರ್, ಸಿಸ್ಟಮ್ ಅಡ್ಮಿನಿಸ್ಟ್ರೇಟರ್, ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ ಮುಂತಾದ ಡಿಪ್ಲೊಮಾಗಳನ್ನೂ ಪಡೆದಿದ್ದಾರೆ. ಇದಲ್ಲದೆ ಕಂಪ್ಯೂಟರ್ ನೆಟವರ್ಕ್ ರೇಡಿಯೋ ಸುಪರಿಂಟೆಂಡೆಂಟ್ ಆಗಿ ಅಮೇರಿಕಾ, ಸಿಂಗಾಪುರ್, ಚೈನಾ, ಜಪಾನ್, ದೇಶಗಳಲ್ಲಿ ಕೆಲಸ ಮಾಡಿದ್ದಾರೆ. ನೂರಕ್ಕೂ ಹೆಚ್ಚು ದೇಶಗಳನ್ನು ಸುತ್ತಿ ಬಂದಿರುತ್ತಾರೆ.

ಸಾಮಾಜಿಕ ಕಳಕಳಿಯುಳ್ಳ ಅವರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಹಂಬಲದಿಂದ 2001 ರಲ್ಲಿ ಮುಂಬಯಿ ಬಿಟ್ಟು, ಮೈಸೂರಿನಲ್ಲಿ ನೆಲೆಸಿ, ತಮ್ಮ ಕೈಯಲ್ಲಾದ ಸಮಾಜ ಸೇವೆ ಮಾಡುತ್ತಿದ್ದಾರೆ. ಹಲವಾರು ಎನ್.ಜಿ.ಒ. ಗಳೊಂದಿಗೆ ಸುಮಾರು 75 ಶಾಲೆಗಳಲ್ಲಿ ಮತ್ತು 15 ಕಾಲೇಜುಗಳಲ್ಲಿ ಮಕ್ಕಳಿಗೆ ಪೌರಪ್ರಜ್ಞೆಯ ಪಾಠ ಹೇಳಿಕೊಟ್ಟಿದ್ದಾರೆ. ಮಾಹಿತಿ ಹಕ್ಕು ಕಾಯಿದೆಯ ಸಕ್ರಿಯ ಕಾರ್ಯಕರ್ತರಾಗಿ ಹಾಗೂ ಜಿಲ್ಲಾ ಮಟ್ಟದ ತರಬೇತುದಾರರಾಗಿ, ಅರ್.ಟಿ.ಐ. ಇಂಡಿಯಾ ಜಾಲತಾಣದಲ್ಲಿ ಕಮ್ಯುನಿಟಿ ಬಿಲ್ಡರ್ ಆಗಿ, ಜನರಿಗೆ ಉಚಿತ ಮಾರ್ಗದರ್ಶನ ಮಾಡುತ್ತಿದ್ದಾರೆ. ಮೈಸೂರಿನ ಕೊಳಗೇರಿಗಳಲ್ಲಿ ಬಡ ಮಕ್ಕಳಿಗೆ, ಎನ್.ಜಿ.ಒ. ಜೊತೆ ಸೇರಿ, ಜೀವನಾವಶ್ಯಕ ಕಲೆಗಳ ಮತ್ತು ನಾಯಕತ್ವದ ತರಬೇತಿಯನ್ನೂ ನೀಡುತ್ತಿದ್ದಾರೆ. ಬರಹದಲ್ಲಿ ತಮ್ಮ ಆಸಕ್ತಿಯಿಂದ ಮೈಸೂರಿನ ರೋಟರಿ ವೆಸ್ಟ್ ಕ್ಲಬ್ಬಿನ ಬೃಂದಾವನ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ವಿಷಯಗಳ ಬಗ್ಗೆ ಪತ್ರಿಕೆಗಳಲ್ಲಿ/ಜಾಲತಾಣಗಳಲ್ಲಿ ಲೇಖನ ಪ್ರಕಟಿಸಿದ್ದಾರೆ. ಶ್ರೀಯುತರ ಪತ್ನಿ, ಶ್ರೀಮತಿ ಸ್ವರ್ಣಗೌರಿ, ನಿವೃತ್ತ ಶಾಲಾ ಶಿಕ್ಷಕಿ. ಇಬ್ಬರು ಪುತ್ರಿಯರು ವಿದೇಶದಲ್ಲಿ ನೆಲೆಸಿದ್ದಾರೆ.

ನಾನುಗೌರಿ. ಕಾಂ ಗೆ ಈಗಾಗಲೇ ಹತ್ತಾರು ಸಕಾಲಿಕ ಲೇಖನಗಳನ್ನು ಬರೆದಿರುವು ಅವರು ಇನ್ನು ಮುಂದೆ ಜೀವನ ಕಲೆಗಳು, ವ್ಯಕ್ತಿತ್ವ ವಿಕಸನದ ಕುರಿತು ನಿರಂತರವಾಗಿ ಅಂಕಣ ಬರೆಯುತ್ತಿದ್ದಾರೆ. ಎಲ್ಲಾ ವಯೋಮಾನದವರಿಗೂ ಗೊತ್ತಿದ್ದರೂ ಸಹ ಒತ್ತಡದಲ್ಲಿ ಮರೆತುಬಿಡಬಹುದಾದ ಹಲವು ಬಹುಮುಖ್ಯ ಅಂಶಗಳು ಕುರಿತು ಅವರು ಬೆಳಕು ಚೆಲ್ಲಲ್ಲಿದ್ದಾರೆ. ಹಾಗಾಗಿ ತಪ್ಪದೇ ಓದಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪನ್ನೂನ್‌ ಹತ್ಯೆ ಸಂಚು: ವಾಷಿಂಗ್ಟನ್ ಪೋಸ್ಟ್ ವರದಿಗೆ ಅಮೆರಿಕ ಪ್ರತಿಕ್ರಿಯೆ

0
ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂನ್‌ ಹತ್ಯೆಯ ಸಂಚಿಗೆ ಸಂಬಂಧಿಸಿದ 'ದಿ ವಾಷಿಂಗ್ಟನ್ ಪೋಸ್ಟ್ ವರದಿ' ಬೆನ್ನಲ್ಲಿ ಆರೋಪಗಳ ಬಗ್ಗೆ ತನಿಖೆಗೆ ಭಾರತ ಸರ್ಕಾರದೊಂದಿಗೆ ನಿಯಮಿತವಾಗಿ ಕೆಲಸ ಮಾಡುತ್ತಿದೆ ಎಂದು ಅಮೆರಿಕ...