Homeಮುಖಪುಟಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಜನಾರೋಗ್ಯ ವ್ಯವಸ್ಥೆ

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಜನಾರೋಗ್ಯ ವ್ಯವಸ್ಥೆ

- Advertisement -
- Advertisement -

ಕಳೆದ ಒಂದು ದಶಕದಿಂದ ನಾವೆಲ್ಲರೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಥವಾ ಕೃತಕ ಮತಿ ಎಂಬುದರ ಬಗ್ಗೆ ಹೆಚ್ಚಾಗಿ ಕೇಳುತ್ತಿದ್ದೇವೆ ಮತ್ತು ಓದುತ್ತಿದ್ದೇವೆ. ಈ ಚರ್ಚೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಇನ್ನಷ್ಟು ಚುರುಕು ಪಡೆದಿರುವುದೂ ನಿಜ. ವಿಜ್ಞಾನ ಮತ್ತು ತಂತ್ರಜ್ಞಾನ ಯಾವೆಲ್ಲ ರೀತಿ ಮಾನವನ ಜೀವನ ಸುಗಮಗೊಳಿಸಬಹುದು ಮತ್ತು ಅದ್ಭುತಗಳನ್ನು ಸೃಸ್ಟಿಸಬಹುದು ಎಂಬುದು ಬಹು ಚರ್ಚಿತ ವಿಷಯವಾಗಿಯೇ ಉಳಿದಿದೆ. ಮನುಷ್ಯರಲ್ಲಿ ಮತ್ತು ಪ್ರಾಣಿಗಳಲ್ಲಿ ನೈಸರ್ಗಿಕವಾಗಿ ಕಾಣಸಿಗುವ ಮತಿ ಅಥವಾ ಬುದ್ಧಿಮತ್ತೆ ಯಂತ್ರಗಳಲ್ಲಿ ಇರುವುದಿಲ್ಲ ಎಂಬುದು ಈಗ ಸಾಮಾನ್ಯ ನಂಬಿಕೆಯಾಗಿ ಉಳಿದಿಲ್ಲ. ಮಾನವ ಯಂತ್ರಗಳಿಗೂ ತನ್ನದೇ ಆದ ಕೃತಕ ಮತಿ ಸೃಷ್ಟಿಸುವಲ್ಲಿ ಸಫಲವಾಗಿದ್ದಾನೆ ಮತ್ತು ಇದನ್ನೇ ಜನಪ್ರಿಯ ಮಾತುಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಥವಾ ಎಐ ಎನ್ನುತ್ತಾರೆ. ಇಂದು ಎಷ್ಟೋ ಸಾಮಾನ್ಯ ನಾಗರಿಕರು ಬಳಸುವ ಸಲಕರಣಗಳಲ್ಲಿ ಎಐ ಹಾಸುಹೊಕ್ಕಿದೆ. ಇದರಿಂದ ಸಮಾಜದಲ್ಲಿರುವ ಪ್ರತಿಯೊಬ್ಬ ನಾಗರಿಕನಿಗೂ ಪ್ರಯೋಜನವಿದೆಯೇ? ಅಥವಾ ಪ್ರತಿ ನಾಗರಿಕನ ಗೌಪ್ಯತೆಗೆ ಯಾವುದೇ ಬೆಲೆ ಕೊಡದೆ, ಮಾಹಿತಿ ತಂತ್ರಜ್ಞಾನ ಸೃಷ್ಟಿಸುತ್ತಿರುವ ಡಿಜಿಟಲ್ ಕಣ್ಗಾವಲಿನ ಡಿಸ್ಟೋಪಿಯಾದ ಮುಂದುವರೆದ ಅಧ್ಯಾಯವೇ? ಸದ್ಯದ ಪರಿಸ್ಥಿತಿಯಲ್ಲಿ ಇದರ ಪ್ರಯೋಜನ ಆರೋಗ್ಯ ಕ್ಷೇತ್ರದಲ್ಲಿ ಎಷ್ಟಿದೆ ಮತ್ತು ಈ ಕೃತಕ ಮತಿಯ ಮಿತಿಗಳೇನು ಎಂಬ ಪ್ರಶ್ನೆಗಳು ಎದ್ದಿರುವಾಗ ಇದರ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಹಿಂದಿಗಿಂತಲೂ ಈಗ ಹೆಚ್ಚಿದೆ.

ಜಾನ್ ಮಕ್ಕಾರ್ತಿ

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಂಬ ಪದವನ್ನು ಮೊದಲು ಜಾನ್ ಮಕ್ಕಾರ್ತಿ ಎಂಬುವವರು 1956ರಲ್ಲಿ ಬಳಸಿದ್ದಾದರೂ ಇದನ್ನು ಮೊದಲು ಜಗತ್ತಿಗೆ ಪರಿಚಯಿಸಿದ್ದು ಅಲನ್ ಟ್ಯೂರಿಂಗ್ ಎಂಬ ಗಣಿತಜ್ಞ ಮತ್ತು ಕಂಪ್ಯೂಟರ್ ತರ್ಕವನ್ನು ಪರಿಚಯಿಸಿದ ವಿಜ್ಞಾನಿ. ಇಲ್ಲಿಂದ ಮನುಷ್ಯನ ಮತಿಯ ಮಿತಿಗಳನ್ನು ಕೃತಕ ಮಿತಿ ಒಂದೊಂದಾಗಿ ಮೀರುತ್ತಾ ಸಾಗಿದೆ. ವಿಜ್ಞಾನ ಜಗತ್ತಿನ ಹೊಸಹೊಸ ಆವಿಷ್ಕಾರಗಳು ತಾನು ನೀಡುತ್ತಿರುವ ತಿರುವುಗಳಿಂದ ಮಾನವ ಸಮಾಜವನ್ನು ಮುನ್ನಡೆಸುತ್ತಿದೆ. ಅದರ ಮುಂದುವರಿದ ಭಾಗವಾಗಿ ಕೃತಕ ಮತಿ ಎಂಬ ಹೊಸ ಆಯಾಮದ ವಿಜ್ಞಾನ ಕಳೆದ ಏಳೆಂಟು ದಶಕಗಳಿಂದ ಬೃಹತ್ತಾಗಿ ಬೆಳೆಯುತ್ತಾ ಇಂದು ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಆರೋಗ್ಯ ಕ್ಷೇತ್ರದಲ್ಲೂ ಆವರಿಸಿಕೊಂಡಿರುವುದಷ್ಟೇ ಅಲ್ಲದೆ ನಮ್ಮ ಜೀವನದ ಒಂದು ಭಾಗವಾಗಿ ಬೆಳೆದು ನಿಂತಿದೆ. ಮೊದಲಿಗೆ ಬಹಳ ಸರಳವಾದ ಕೆಲಸಗಳನ್ನು ಮಾಡುತ್ತಿದ್ದ ತಂತ್ರಜ್ಞಾನ ಈಗ ಮುಖ ಗುರುತಿಸುವಿಕೆ, ಕಂಪ್ಯೂಟರ್ ದೃಷ್ಟಿ, ಬಯೋಮೆಟ್ರಿಕ್ಸ್, ನಿಗಾವಹಿಸುವುದು, ಮುಂದೆ ನಡೆಯುವುದನ್ನು ಮೊದಲೇ ಪ್ರೆಡಿಕ್ಟ್ ಮಾಡುವುದು ಮತ್ತು ನಿರ್ಧಾರ ತೆಗೆದುಕೊಳ್ಳುವಂತಹ ಅಪ್ಲಿಕೇಶನ್‌ಗಳಿಗೆ ಕೃತಕ ಮತಿಯನ್ನು ಅನ್ವಯಿಸುವುದರಿಂದ ದೂರಗಾಮಿ ಬೆಳವಣಿಗೆಗಳನ್ನು ನಿರೀಕ್ಷಿಸಲಾಗಿದೆ. ಹಣಕಾಸು, ಔಷಧ, ಆರೋಗ್ಯ, ಇ-ಕಾಮರ್ಸ್, ಸಂಚಾರ, ಉತ್ಪಾದನೆ, ನಿರ್ವಹಣೆ ಮತ್ತು ಸಾರ್ವಜನಿಕ ಭದ್ರತೆ ಸೇರಿದಂತೆ ಇತರೆ ಅನೇಕ ಕ್ಷೇತ್ರಗಳಲ್ಲಿ ಉಪಯೋಗಿಸಲಾಗುತ್ತಿದೆ.

ಕಳೆದ ಒಂದೂವರೆ ದಶಕದಿಂದಲೂ ಈ ಕೃತಕ ಮತಿ ತಂತ್ರಜ್ಞಾನ ಆರೋಗ್ಯ ಕ್ಷೇತ್ರದಲ್ಲಿ ತನ್ನ ಪ್ರಭಾವವನ್ನು ಗಣನೀಯವಾಗಿ ಬೆಳೆಸಿಕೊಳ್ಳುತ್ತಾ ಬಂದಿದೆ. ಅದಕ್ಕೆ ಅಮೆರಿಕ ಮತ್ತು ಯೂರೋಪ್ ಖಂಡಗಳಲ್ಲಿ ಆಗುತ್ತಿರುವ ಡಿಜಿಟಲ್ ರೂಪಾಂತರದ ಬೆಳವಣಿಗೆಗಳೂ ಒಂದು ಬಹುಮುಖ್ಯ ಕಾರಣ. ಕೋವಿಡ್ ನಂತರದ ಕಾಲಘಟ್ಟದಲ್ಲಿ ಇದರ ವಿಸ್ತಾರ ಇನ್ನಷ್ಟು ಹೆಚ್ಚುತ್ತಾ ಸಾಗಿದೆ. ಇದರ ಬಗೆಗಿನ ಭರವಸೆಗಳು, ಸುರಕ್ಷತೆ, ಪ್ರಗತಿ, ಫಲಿತಾಂಶಗಳು, ಅಪಾಯ, ಮಿತಿಗಳು, ಜವಾಬ್ದಾರಿ ಹಾಗು ತಾಂತ್ರಿಕ ಮತ್ತು ನೈತಿಕ ಪರಿಣಾಮಗಳನ್ನು ಸಮಗ್ರವಾಗಿ ಪರಿಶೀಲಿಸಿದರೆ ಮಾತ್ರ ಕೃತಕ ಮತಿಯನ್ನು ಸರಿಯಾಗಿ ಬಳಸಬಹುದಾಗಿದೆ. ಈಗಿರುವ ಅಸಮಾನ ವ್ಯವಸ್ಥೆಯಲ್ಲಿ ಉಳ್ಳವರ ಸುಳ್ಳುಗಳು ಯಾವುದೇ ಪ್ರತಿರೋಧವಿಲ್ಲದ ಸಾಮಾನ್ಯ ಜ್ಞಾನವಾಗುತ್ತಿರುವಾಗ ಈಗ ಸೃಷ್ಟಿಯಾಗುತ್ತಿರುವ ವಿಜ್ಞಾನ-ತಂತ್ರಜ್ಞಾನದ ಈ ಆಯಾಮದ ಬಗ್ಗೆ ಎಚ್ಚರಿಕೆಯಿಂದಲೇ ಮುಂದಿನ ಹೆಜ್ಜೆ ಇಡಬೇಕಾಗಿದೆ.

ಅಲನ್ ಟ್ಯೂರಿಂಗ್

ಕೃತಕ ಮತಿಯ ಈಗಿನ ಸಾಮರ್ಥ್ಯದಲ್ಲಿ ಅರೋಗ್ಯ ವ್ಯವಸ್ಥೆಯಲ್ಲಿ ರೋಗನಿರ್ಣಯ ಇಮೇಜ್ ಮತ್ತು ಸ್ಕ್ಯಾನಿಂಗ್, ಜೆನೆಟಿಕ್ ಅನಾಲಿಸಿಸ್, ಎಲೆಕ್ಟ್ರೋ ರೋಗನಿರ್ಣಯ, ರೋಗದ ನಿಖರ ಊಹೆ, ಔಷಧ ಉತ್ಪಾದನಾ ಪ್ರೋಸೆಸ್‌ನಲ್ಲಿ ಹೆಚ್ಚಾಗಿ ಉಪಯೋಗಿಸಲಾಗುತ್ತಿದೆ. ಈಗಿನ ಕೋವಿಡ್ ಸ್ಥಿತಿಯಲ್ಲಿ ಸಾಂಕ್ರಾಮಿಕ ರೋಗಗಳನ್ನು ಪತ್ತೆ ಮತ್ತು ಪ್ರೆಡಿಕ್ಷನ್ ಮಾಡುವ ಕ್ಷೇತ್ರದಲ್ಲಿ, ಔಷಧ ತಯಾರಿಕಾ ಕ್ಷೇತ್ರದಲ್ಲಿ ಬಹಳ ಹೆಚ್ಚಾಗಿ ಇದರಲ್ಲಿ ಹೂಡಿಕೆ ಮಾಡಲಾಗುತ್ತಿದೆ. ಇನ್ನೂ ಕೆಲವು ಮುಖ್ಯ ಕ್ಷೇತ್ರಗಳೆಂದರೆ ಕ್ಯಾನ್ಸರ್, ಹೃದಯಾಘಾತ ಮತ್ತು ಕ್ಷಯ ರೋಗದ ಪ್ರೆಡಿಕ್ಷನ್. ಡಾಕ್ಟರ್ ಅಥವಾ ತಜ್ಞರಿಗಿಂತಲೂ ಹೆಚ್ಚು ಕರಾರುವಾಕ್ಕಾಗಿ, ನಿಖರವಾಗಿ ರೋಗದ ಆರಂಭಿಕ ಹಂತದಲ್ಲೇ ಪ್ರೆಡಿಕ್ಟ್ ಮಾಡಬಲ್ಲ ಸಾಮರ್ಥ್ಯವನ್ನು ಎಐ ಗಳಿಸಿಕೊಂಡಿದೆ. ಯಂತ್ರ-ಕಲಿಕೆ ಮತ್ತು deep learning ಕ್ರಮಾವಳಿಗಳು ಈಗಾಗಲೇ ಎಲೆಕ್ಟ್ರೋಕಾರ್ಡಿಯೋಗ್ರಾಮ್ ಮತ್ತು ಕ್ಯಾನ್ಸರ್‌ಗಾಗಿ ಮ್ಯಾಮೋಗ್ರಾಮ್‌ಗಳನ್ನು ಸ್ಕ್ರೀನಿಂಗ್ ಮಾಡಲು ನುರಿತು, ವೈದ್ಯರಿಗಿಂತ ರೋಗ ಸ್ಥಿತಿಗಳನ್ನು ಉತ್ತಮವಾಗಿ ಊಹಿಸುತ್ತವೆ ಎಂದು ತೋರಿಸಲಾಗಿದೆ. ಅಮೆರಿಕ ಎಫ್‌ಡಿಎ (ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್) ಈಗಾಗಲೇ ವೆಬ್ ಆಧಾರಿತ ಕೃತಕ ಮತಿಯ ವ್ಯವಸ್ಥೆಯನ್ನು ಅನುಮೋದಿಸಿದೆ. ಅದು ನವಜಾತ ಶಿಶುಗಳಲ್ಲಿ ಜನ್ಮಜಾತ ಹೃದಯ ವೈಪರೀತ್ಯಗಳ ನಿಖರವಾದ ಸ್ಥಳಗಳನ್ನು ಸುಮಾರು 10 ನಿಮಿಷಗಳಲ್ಲಿ ಪತ್ತೆ ಹಚ್ಚುತ್ತದೆ ಎನ್ನುತ್ತವೆ ಅಧ್ಯಯನಗಳು.

ಇದು ಮೂಡಿಸುತ್ತಿರುವ ಭರವಸೆ ಮತ್ತು ಸಾಮರ್ಥ್ಯ ಎಷ್ಟೇ ಇದ್ದರೂ ಸಾಮಾನ್ಯ ಜನರಿಗೆ ನಿರೀಕ್ಷಿತ ಮಟ್ಟದಲ್ಲಿ ಸಕಾರಣವಾಗಿ ಸ್ಪಂದಿಸುತ್ತಿಲ್ಲ. ಕಳೆದ ದಶಕದಿಂದ ಇರುವ ’ಆರೋಗ್ಯ ವ್ಯವಸ್ಥೆಯನ್ನು ಬದಲಾಯಿಸಿಬಿಡುತ್ತದೆ’ ಎನ್ನುವ ಹೈಪ್ ಒಂದು ಕಡೆಯಾದರೆ, ಒಂದೆರಡು ಕ್ಷೇತ್ರಗಳಲ್ಲಾದರೂ ಎಐ ತಂತ್ರಜ್ಞಾನ ಸಾಮಾನ್ಯ ಜನರನ್ನು ಇನ್ನೂ ತಲುಪಿಲ್ಲ ಎಂಬುದು ಕೂಡ ನಿಜ. ಅಥವಾ ಈ ಎಲ್ಲಾ ಭರವಸೆಗಳು ಅಮೆರಿಕ ಅಥವಾ ಯೂರೋಪಿನ ಲ್ಯಾಬ್ ಮತ್ತು ಸಂಶೋಧನೆಗೆ ಮಾತ್ರ ಸೀಮಿತವೇ? ಇಲ್ಲವೇ ಉಳ್ಳವರಿಗಾಗಿ ಮಾಡುತ್ತಿರುವ ವ್ಯವಸ್ಥೆಯೇ? ಅಷ್ಟೇ ಅಲ್ಲದೆ ದತ್ತಾಂಶ ಹಕ್ಕುಗಳು ಮತ್ತು ದತ್ತಾಂಶ ಗೌಪ್ಯತೆಯ ಬಗ್ಗೆ ಯಾವುದೇ ತಿಳಿವಳಿಕೆ ಇನ್ನೂ ಸರಿಯಾಗಿ ಮೂಡಿಲ್ಲ. ಆ ನಿಟ್ಟಿನಲ್ಲಿ ಎಐ ಕ್ಷೇತ್ರದಲ್ಲಿ ಹೂಡಿಕೆ ಮಾಡಿರುವ ಸಂಸ್ಥೆಗಳು ಹಾಕುತ್ತಿರುವ ಎಫರ್ಟ್ ಬಗ್ಗೆ ಸದ್ದೇ ಇಲ್ಲ ಎನ್ನುವಂತಾಗಿದೆ. ಕೃತಕ ಮತಿಗೆ ಬೆರೆಯಬೇಕಾದ ಅಲ್ಗೊರಿಥಮ್ ಯಾರು ಬರೆಯುತ್ತಾರೆ ಮತ್ತು ಅದರಲ್ಲಿನ ಸೇರಿ ಹೋಗುವ ಮನುಷ್ಯನಲ್ಲಿರುವ ಪಕ್ಷಪಾತ/ತಾರತಮ್ಯ ಧೋರಣೆಯನ್ನು ಹೇಗೆ ಸರಿ ಮಾಡುತ್ತಾರೆ? ಇದರ ನಿಯಂತ್ರಣ ಯಾರ ಕೈಯಲ್ಲಿರುತ್ತದೆ? ಇದರ ಪರಿಣಾಮ ಮತ್ತು ದುಷ್ಪರಿಣಾಮಗಳ ಜವಾಬ್ದಾರಿ ಯಾರು ಹೊರುತ್ತಾರೆ? ಸಾಮಾಜಿಕ, ಆರ್ಥಿಕ ಮತ್ತು ಜನಾಂಗೀಯ ಪಕ್ಷಪಾತವನ್ನು ವ್ಯವಸ್ಥೆಯಲ್ಲಿ ಸಂಯೋಜಿಸಲಾಗಿದೆಯೆಂದರೆ ಅದಕ್ಕೆ ಯಾರು ಹೊಣೆ ಹೊರುತ್ತಾರೆ ಮತ್ತು ಅದಕ್ಕೆ ಪರಿಹಾರವೇನು? ಇವೆಲ್ಲದ್ದಕ್ಕಾಗಿ ಒಂದು ವಿಧಾನವನ್ನು ಖಾತ್ರಿಪಡಿಸಲಾಗದೆ ಹೋದರೆ ಎಷ್ಟರಮಟ್ಟಿಗೆ ಅದರ ದತ್ತಾಂಶ ಪಾರದರ್ಶಕವಾಗಿರುತ್ತದೆಯೇ? ಇವೆಲ್ಲದರ ಮೇಲೆ ಪ್ರಶ್ನೆಗಳು ಎದ್ದಿವೆಯಾದರು ಅದಕ್ಕೆ ಪೂರಕವಾದ ವಿಮರ್ಶೆ ಚರ್ಚೆಗಳು ಕಡಿಮೆ ಪ್ರಮಾಣದಲ್ಲಿ ನಡೆದಿದೆ. ಈ ಚರ್ಚೆಗಳಲ್ಲಿ ಜನಸಾಮಾನ್ಯರು ಭಾಗಿಯಾಗಿರುವುದಂತೂ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.

ಭವಿಷ್ಯದ ಪರಿಣಾಮವು ನಕಾರಾತ್ಮಕಕ್ಕಿಂತ ಹೆಚ್ಚು ಧನಾತ್ಮಕವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಎಐ ಸಂಶೋಧಕರ ಜವಾಬ್ದಾರಿಯಾಗಿದ್ದರೂ, ನೀತಿಶಾಸ್ತ್ರಜ್ಞರು, ಆಡಳಿತ ವ್ಯವಸ್ಥೆಗಳ ನೀತಿ ನಿರೂಪಕರು ಮತ್ತು ತತ್ವಜ್ಞಾನಿಗಳು ಮೊದಲಿನಿಂದಲೂ ಅಂತಹ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಆಳವಾಗಿ ತೊಡಗಿಸಿಕೊಳ್ಳಬೇಕು. ಇದಲ್ಲದೆ ಎಐ ಸಂಶೋಧನೆಯಲ್ಲಿ ಹೆಚ್ಚಾಗಿ ಹೂಡಿಕೆ ಮಾಡಿರುವುದು ದೊಡ್ಡ ದೊಡ್ಡ ಕಾರ್ಪೊರೆಟ್ ಕುಳಗಳು. ಮೈಕ್ರೋಸಾಫ್ಟ್, ಗೂಗಲ್, ಅಮೆಜಾನ್, ಟೆಸ್ಲಾ, ಆಪಲ್, ಫೇಸ್ಬುಕ್, ನ್ಯೂರಲಿಂಕ್, ಇಂಟೆಲ್ ಇನ್ನು ಇತ್ಯಾದಿ ದೈತ್ಯ ಕಂಪನಿಗಳು. ಇವುಗಳೆಲ್ಲವೂ ಮಾನವೀಯತೆಯ ನೆಲೆಯಲ್ಲಿ ಕೆಲಸ ಮಾಡುತ್ತವೆ ಮತ್ತು ಎಲ್ಲರಿಗೂ ಎಟುಕುವಂತಹ ಆರೋಗ್ಯವ್ಯವಸ್ಥೆ ರೂಪಿಸಲು ಪೂರಕವಾಗಿರುತ್ತವೆ ಎಂದು ಖಂಡಿತ ಹೇಳಲಾಗುವುದಿಲ್ಲ, ಬದಲಾಗಿ ತಮ್ಮ ಲಾಭಕೋರತನಕ್ಕಾಗಿ ಏನನ್ನಾದರೂ ಮಾಡಲು ಹಿಂಜರಿಯದ ಕಂಪನಿಗಳಿವು. ಇನ್ನು ಡೇಟಾ ಗೌಪ್ಯತೆ, ನೈತಿಕ ಪ್ರಶ್ನೆಗಳನ್ನು ಬಗೆಹರಿಸುವುದು ಹೇಗೆ?

ಸಾಮಾಜಿಕ ಮತ್ತು ಆರೋಗ್ಯ ಸಮಸ್ಯೆಗಳಿಗೆ ಟೆಕ್ನಾಕ್ರಟಿಕ್ ಪರಿಹಾರ ಹುಡುಕುವುದರಲ್ಲೇ ಒಂದು ದೊಡ್ಡ ಸಮಸ್ಯೆ ಇದೆ. ಇನ್ನು, ಯಾವುದೇ ಒಂದು ಖಾಯಿಲೆಯ ಬೆಳವಣಿಗೆಯಲ್ಲಿ, ಸಾಮಾಜಿಕ, ರೋಗಶಾಸ್ತ್ರ, ಪ್ರಾದೇಶಿಕ, ಹವಾಮಾನ ಇನ್ನೂ ಹಲವು ಬಗೆಯ ಆಯಾಮಗಳಿರುತ್ತವೆ. ಇವೆಲ್ಲವನ್ನೂ ಈಗ ಎಐನಡಿ ಒಂದು ರೀತಿಯ ಸಾರ್ವತ್ರೀಕರಣ (homogenization) ಮಾಡಲು ಹೊರಟಿದ್ದಾರೆ. ಪ್ರತಿಯೊಬ್ಬ ರೋಗಿಯ ಗುಣಲಕ್ಷಣಗಳು ಬಹಳ ನಿರ್ದಿಷ್ಟವಾಗಿರುತ್ತವೆ ಅಂದುಕೊಂಡರೆ ಪ್ರತಿಯೊಬ್ಬರಿಗೂ ಬೇಕಾಗಿರುವುದು ಪರ್ಸನಲ್ ಕೇರ್. ಒಟ್ಟಾರೆಯಾಗಿ ಮಾನವತಾವಾದಿ ದೃಷ್ಟಿಯಿಂದ ನೋಡಿದರೆ ಎಐಗೆ ಅಪಾರ ಸಾಮರ್ಥ್ಯ ಇರುವುದಂತೂ ಹೌದು ಮತ್ತು ಆರೋಗ್ಯ ಕ್ಷೇತ್ರವನ್ನು ಬದಲಾಯಿಸಲು ಶಕ್ತಿ ಹೊಂದಿದೆ. ಆದರೆ ನಮಗೆ ತೋರಿಸುತ್ತಿರುವ ಮತ್ತು ಪರಿಚಯಿಸಲಾಗುತ್ತಿರುವ ಎಐ ಬಂಡವಾಳಶಾಹಿ ಉತ್ಪಾದನೆ ತರ್ಕದ “ಮಾಸ್ ಪ್ರೊಡಕ್ಷನ್” ಈಗಿರುವ ಸಿದ್ಧ ಮಾದರಿಯ ಮತ್ತೊಂದು ಬಗೆಯಷ್ಟೇ. ಇದನ್ನು ನಾವು ಪ್ರಶ್ನಿಸುತ್ತಲೇ ಇರಬೇಕು ಮತ್ತು ಡೆಮಾಕ್ರಟೈಸ್ ಮಾಡುವತ್ತ ದಾಪುಗಾಲು ಇಡಬೇಕಿದೆ. ಈಗಾಗಲೇ ನಮಗೆ ನಂಬಿಸಲಾಗಿರುವ ಸಿದ್ಧ ಮಾದರಿಯ ಖಾಸಗಿ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಕೋವಿಡ್ ಸಮಯದಲ್ಲಿ ವಿಫಲವಾಗಿದ್ದು ನಮ್ಮ ಕಣ್ಮುಂದೆಯೇ ಇದೆ. ಇಡೀ ವ್ಯವಸ್ಥೆಯ ಊಹೆ, ನಂಬಿಕೆ ಮತ್ತು ಭರವಸೆಯನ್ನೇ ಸುಳ್ಳು ಎಂದು ಸಾಬೀತುಪಡಿಸಿತು ಈ ಸಾಂಕ್ರಾಮಿಕ ರೋಗ. ಅದೇ ರೀತಿ ಎಐ ಕೂಡ ಮುಂದೊಂದು ದಿನ, ಈ ಅಸಮಾನ ವ್ಯವಸ್ಥೆಯಲ್ಲಿ ಯಾವೆಲ್ಲ ಸತ್ಯಗಳನ್ನು ಮತ್ತು ಲೋಪದೋಷಗಳನ್ನೂ ಮುಚ್ಚಿಡಲಾಗಿತ್ತೋ ಅವೆಲ್ಲ ಖುಲ್ಲಂಖುಲ್ಲಾ ಆಗಿ ಗಂಗಾ ನದಿಯಲ್ಲಿ ಕೋವಿಡ್ ಶವಗಳ ರೂಪದಲ್ಲಿ ತೇಲಿದ ಹಾಗೆ ಸಮಾಜದ ಮುಂದೆ ಅನಾವರಣಗೊಳ್ಳಲಿದೆ. ಅಲ್ಲಿಯವರೆಗೂ ಕಾಯದೆ ಎಐ ತಂತ್ರಜ್ಞಾನವನ್ನು ಪ್ರಜಾಸತ್ತಾತ್ಮಕಗೊಳಿಸುವ ನಿಟ್ಟಿನಲ್ಲಿ ನಾವೆಲ್ಲಾ ಚಿಂತಿಸಬೇಕಿದೆ.

ಭರತ್ ಹೆಬ್ಬಾಳ

ಭರತ್ ಹೆಬ್ಬಾಳ
ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ಭರತ್ ಸಾಮಾಜಿಕ ಚಳವಳಿಗಳ ಜೊತೆಗೆ ನಂಟು ಬೆಳೆಸಿಕೊಂಡವರು. ತಂತ್ರಜ್ಞಾನದ ಸಾಧ್ಯತೆಗಳು ಮತ್ತು ಜಾಗತಿಕ ಭೌಗೋಳಿಕ ರಾಜಕೀಯದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು ಸಕ್ರಿಯವಾಗಿ ಲೇಖನಗಳನ್ನು ಬರೆಯುತ್ತಾರೆ.


ಇದನ್ನೂ ಓದಿ: ಸ್ವಾಭಾವಿಕವೆನಿಸುವಂತೆ ಮುನ್ನುಗ್ಗಿರುವ ಕೃತಕ ಬದ್ಧಿಮತ್ತೆ; ಸಾರ್ವಜನಿಕರ ಒಳತಿನ ಪ್ರಶ್ನೆ ಕೇಳುವವರಾರು?

ಇದನ್ನೂ ಓದಿ: ಕೃತಕ ಬುದ್ಧಿಮತ್ತೆ (AI) ಎತ್ತ ಸಾಗುತ್ತಿದೆ?

ಇದನ್ನೂ ಓದಿ: ಒಮೈಕ್ರಾನ್ ಆತಂಕ; ಲಭ್ಯವಿರುವ ಸಾಕ್ಷ್ಯಗಳಿಂದ ಸಾರ್ವಜನಿಕ ಆರೋಗ್ಯದ ಕಣ್ಣೋಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...