ದೇಶದ ರಾಜಧಾನಿ ದೆಹಲಿಯಲ್ಲಿ ಪ್ರತಿ ವರ್ಷವು ಕಾಡುವ ವಾಯುಮಾಲಿನ್ಯ ಸಮಸ್ಯೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಸುಗ್ರೀವಾಜ್ಞೆ ಹೊರಡಿಸಿದೆ.
ವಾಯುಮಾಲಿನ್ಯಕ್ಕೆ ಕಾರಣವಾಗುವವರಿಗೆ, ಕಾನೂನಿನಲ್ಲಿರುವ ನಿಯಮಗಳನ್ನು ಉಲ್ಲಂಘಿಸಿದರೆ 5 ವರ್ಷ ಜೈಲು ಶಿಕ್ಷೆ ಹಾಗೂ 1 ಕೋಟಿ ದಂಡ ವಿಧಿಸಲಾಗುತ್ತದೆ ಎಂದು ಕಾನೂನು ಸಚಿವಾಲಯ ಸುಗ್ರೀವಾಜ್ಞೆ ಹೊರಡಿಸಿದೆ.
ಈ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನುಮೋದನೆ ನೀಡಿದ್ದಾರೆ. ಸುಗ್ರೀವಾಜ್ಞೆಯು ಪಂಜಾಬ್, ಹರಿಯಾಣ, ರಾಜಸ್ಥಾನ ಹಾಗೂ ಉತ್ತರ ಪ್ರದೇಶ, ದೆಹಲಿ–ಎನ್‌ಸಿಆರ್‌ನ ಸುತ್ತಮುತ್ತಲಿನ ಪ್ರದೇಶಗಳನ್ನು ಒಳಗೊಂಡಿದೆ. ರಾಜ್ಯಗಳಲ್ಲಿ ವಾಯುಮಾಲಿನ್ಯ ತಡೆಗಟ್ಟಲು ಆಯೋಗ ರಚಿಸುವಂತೆ ಆದೇಶಿಸಲಾಗಿದೆ.
ಈ ಆಯೋಗ 18 ಸದಸ್ಯರುಗಳನ್ನು ಒಳಗೊಂಡಿದ್ದು, ಕಾನೂನಿನ ಸೂಕ್ತ ಅನುಷ್ಠಾನದ ಜವಾಬ್ದಾರಿ ಇವರ ಮೇಲಿರಲಿದೆ. 18 ಸದಸ್ಯರ ಪೈಕಿ 10 ಮಂದಿ ಅಧಿಕಾರಿಗಳಿರಲಿದ್ದಾರೆ. ಉಳಿದಂತೆ ತಜ್ಞರು ಮತ್ತು ಹೋರಾಟಗಾರರನ್ನು ಒಳಗೊಂಡಿರುತ್ತದೆ. ಇದಕ್ಕೆ ಎನ್‌ಸಿಆರ್ ಪ್ರದೇಶ ಹಾಗೂ ಸುತ್ತಮುತ್ತ ವಾಯುಮಾಲಿನ್ಯಕ್ಕೆ ಕಾರಣವಾಗುವ ಚಟುವಟಿಕೆಗಳನ್ನು ನಿರ್ಬಂಧಿಸುವ ಅಧಿಕಾರ, ಸ್ವಯಂಪ್ರೇರಿತವಾಗಿ ಆದೇಶಗಳನ್ನು ಹೊರಡಿಸುವ ಅಧಿಕಾರ ನೀಡಲಾಗಿದೆ.
ಇದನ್ನೂ ಓದಿ: ಪ್ರವಾಹ: ತೆಲಂಗಾಣ ರಾಜ್ಯಕ್ಕೆ 15 ಕೋಟಿ ರೂ ದೇಣಿಗೆ ನೀಡಲು ಮುಂದಾದ ದೆಹಲಿ ಸರ್ಕಾರ!
ಮೂರು ವರ್ಷಗಳ ಕಾಲಕ್ಕೆ ಸದಸ್ಯರನ್ನು ನೇಮಿಸಲಾಗುತ್ತದೆ. ಈ ಸದಸ್ಯರನ್ನು ಕೇಂದ್ರ ಪರಿಸರ ಸಚಿವರು ಮತ್ತು ಇತರೆ ಮೂರು ಸಚಿವರು ಹಾಗೂ ಕ್ಯಾಬಿನೆಟ್ನ ಕಾರ್ಯದರ್ಶಿಗಳು ಆಯ್ಕೆ ಮಾಡುತ್ತಾರೆ. ಆಯೋಗದ ಮುಖ್ಯಸ್ಥರಾಗಿ ಕೇಂದ್ರ ಸರ್ಕಾರದಲ್ಲಿ ಕಾರ್ಯದರ್ಶಿಯಾಗಿ ಅಥವಾ ರಾಜ್ಯವೊಂದರ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದವರು ನಿಭಾಯಿಸಲಿದ್ದಾರೆ.
ದೆಹಲಿಯಲ್ಲಿ ಮಾಲಿನ್ಯಕ್ಕೆ ಕಡಿವಾಣ ಹಾಕಲು ಸುಗ್ರೀವಾಜ್ಞೆಯೊಂದನ್ನು ಸಿದ್ಧಪಡಿಸಿರುವುದಾಗಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಗುರುವಾರ ತಿಳಿಸಿದೆ. ಸುಪ್ರೀಂ ಕೋರ್ಟ್ ನಾಳೆಗೆ ವಿಚಾರಣೆ ಮುಂದೂಡಿದೆ.
ಆಯೋಗದ ಆದೇಶಗಳನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮುಂದೆ ಮಾತ್ರ ಪ್ರಶ್ನಿಸಬಹುದು ಮತ್ತು ಯಾವುದೇ ಸಿವಿಲ್ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ.
ಈ ಹಿಂದೆ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿನ ಕೃಷಿ ತ್ಯಾಜ್ಯ ಸುಡುವುದನ್ನು ನಿಯಂತ್ರಿಸಲು ಹಾಗೂ ಅಗತ್ಯ ಕ್ರಮಗಳ ಕುರಿತು ಅಧ್ಯಯನ ನಡೆಸಲು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮದನ್ಬಿ.ಲೋಕೂರ್ ನೇತೃತ್ವದಲ್ಲಿ ಸಮಿತಿ ರಚಿಸಿದೆ.


