ಕೊರೊನಾ ಎರಡನೇ ಅಲೆಯಲ್ಲಿ ಸಂಕಷ್ಟಕ್ಕೆ ಈಡಾಗಿರುವ ಜನರಿಗೆ ರಾಜ್ಯ ಸರ್ಕಾರ 1,250 ಕೋಟಿ ರೂ. ಗಾತ್ರದ ಪ್ಯಾಕೇಜ್ ಘೋಷಣೆ ಮಾಡಿದೆ. ಮೇ 24ರ ಬಳಿಕ ಲಾಕ್‌ಡೌನ್ ಮುಂದುವರೆಸುವ ಬಗ್ಗೆ ಮೇ 23ರಂದು ನಿರ್ಧಾರ ಮಾಡಿ, ಘೋಷಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಆದರೆ, ಕಳೆದ ಬಾರಿಗಿಂತ ಕೊರೊನಾ ಆರ್ಥಿಕ ಪ್ಯಾಕೇಜ್ ಪರಿಹಾರದ ಮೊತ್ತವನ್ನು ರಾಜ್ಯ ಸರ್ಕಾರ ಕಡಿತಗೊಳಿಸಿದೆ.
ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು 14 ದಿನಗಳು ಕಠಿಣ ಕ್ರಮ ವಿಧಿಸಿದ್ದ ರಾಜ್ಯ ಸರ್ಕಾರ ಕಾರ್ಮಿಕರಿಗೆ, ಶ್ರಮಿಕರಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಿಲ್ಲ ಎಂದು ಸಾರ್ವಜನಿಕ ವಲಯ, ಪ್ರತಿ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಲಾಕ್‌ಡೌನ್ ಎಂದು ಘೋಷಣೆ ಮಾಡಿ, ಆರ್ಥಿಕ ಪ್ಯಾಕೇಜ್ ನೀಡಿ ಎಂದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯು, ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದರು.
ಸಚಿವರು ಮತ್ತು ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಕೊರೊನಾ ಸಂಕಷ್ಟದಲ್ಲಿರುವ ಶ್ರಮಿಕರಿಗೆ, ಕಾರ್ಮಿಕರಿಗೆ, ಬೀದಿ ಬದಿಯ ವ್ಯಾಪಾರಿಗಳು, ಆಟೋ, ಟ್ಯಾಕ್ಸಿ, ಕ್ಯಾಬ್ ಚಾಲಕರು ಸೇರಿದಂತೆ ಬಹುತೇಕ ಎಲ್ಲರಿಗೂ ಪ್ಯಾಕೇಜ್ ಘೋಷಿಸಿದ್ದಾರೆ.ಇದರಿಂದ ಸುಮಾರು 30 ಲಕ್ಷ ಫಲಾನುಭವಿಗಳಿಗೆ ಸಹಾಯಕವಾಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಇದನ್ನೂ ಓದಿ: ಪಿಣರಾಯಿ 2.0 – ಸಿಪಿಐ(ಎಂ)ನಿಂದ ಹೊಸ ಮುಖಗಳಿಗೆ ಮಂತ್ರಿ ಸ್ಥಾನ; ಕೆ.ಕೆ. ಶೈಲಜಾ ಔಟ್!
ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ ಹೂವು ಹಾನಿಗೆ 10 ಸಾವಿರ ರೂ. ಮತ್ತು ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ನಷ್ಟ ಉಂಟಾಗಿದ್ದರೆ ಗರಿಷ್ಠ 1 ಹೆಕ್ಟೇರ್‌ಗೆ ಮಿತಿಗೊಳಿಸಿ ಪ್ರತಿ ಹೆಕ್ಟೇರ್‌ಗೆ 10,000 ರೂ.ನಂತೆ ಸಹಾಯ ಒದಗಿಸಲಾಗುತ್ತದೆ.
ಲೈಸೆನ್ಸ್ ಹೊಂದಿದ ಹಾಗೂ ನೋಂದಣಿ ಮಾಡಿಸಿದ ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ರೂ. 3000 ಪ್ರತಿ ಚಾಲಕರಿಗೆ ಪರಿಹಾರ ನೀಡಲಾಗುತ್ತದೆ. ಇದರ ಅಡಿ ಒಟ್ಟು 2.10 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದ್ದು, 63 ಕೋಟಿ ವೆಚ್ಚವಾಗಲಿದೆ ಎಂದಿದ್ದಾರೆ.
ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರದಂತೆ 490 ಕೋಟಿ ರೂ. ಪ್ಯಾಕೇಜ್ ಮೀಸಲಿಡಲಾಗಿದೆ. ಅಸಂಘಟಿತ ಕಾರ್ಮಿಕರಿಗೆ- 61 ಕೋಟಿ ರೂ, ರಸ್ತೆ ಬದಿ ವ್ಯಾಪಾರಸ್ಥರಿಗೆ 2 ಸಾವಿರ ರೂಪಾಯಿಯಂತೆ ಒಟ್ಟು 45 ಕೋಟಿ, ಕಲಾವಿದರಿಗೆ, ಕಲಾತಂಡಗಳಿಗೆ 2,000 ರೂ. ಇಡಲಾಗಿದೆ.
ಬಿಬಿಎಂಪಿ, ನಗರಾಭಿವೃದ್ಧಿ ಅಡಿಯಲ್ಲಿ ಇಂದಿರಾ ಕ್ಯಾಂಟೀನ್‌ಗಳಲ್ಲಿ 6 ಲಕ್ಷ ಜನರಿಗೆ ಊಟ ನೀಡಲಾಗುತ್ತಿದೆ. ಇದಕ್ಕೆ 25 ಕೋಟಿ ಖರ್ಚು ಆಗುತ್ತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೋವಿಡ್‌ನಿಂದ ಯುಪಿ ಸಚಿವ ನಿಧನ: 2ನೆ ಅಲೆಗೆ ಯುಪಿ ಬಿಜೆಪಿಯ 5 ಶಾಸಕರು ಬಲಿ
ಆದರೆ, ಕಳೆದ ವರ್ಷ ಲಾಕ್‌ಡೌನ್ ವೇಳೆ ತಲಾ ಕಾರ್ಮಿಕರಿಗೆ ರಾಜ್ಯ ಸರ್ಕಾರ 5 ಸಾವಿರ ರೂ. ಸಹಾಯಧನ ಘೋಷಿಸಿತ್ತು. ಈ ಬಾರಿ ಅದಕ್ಕಿಂತ ಕಡಿಮೆ ನೀಡಲಾಗಿದೆ.
ರಾಜ್ಯ ಸರ್ಕಾರ ಘೋಷಿಸಿರುವ ಪ್ಯಾಕೇಜ್‌ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, “ಇದ್ಯಾವುದೂ ಜನರಿಗೆ ತಲುಪುವುದಿಲ್ಲ. ಕಳೆದ ಬಾರಿಯೂ ಇಂತಹದ್ದೇ ಪ್ಯಾಕೇಜ್ ಘೋಷಣೆ ಮಾಡಿದ್ದರು. ಪಂಚಾಯಿತಿಗಳಿಗೆ ಪ್ಯಾಕೇಜ್ ನೀಡುವ ಜವಾಬ್ದಾರಿ ವಹಿಸಬೇಕು ಇಲ್ಲದಿದ್ದರೇ ಇದು ಬರಿ ಹಾಳೆಗೆ ಮಾತ್ರ ಸೀಮಿತವಾಗುತ್ತದೆ” ಎಂದಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ’ಇದು ಅತ್ಯಂತ ನಿರಾಶದಾಯಕ ಪ್ಯಾಕೇಜ್, ಕಳೆದ ಬಾರಿ ಮೊದಲ ಕಂತಿನಲ್ಲಿ 1, 200 ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಿಸಿ, ಹೂವಿನ ಬೆಳೆಗಾರರಿಗೆ ಹೆಕ್ಟೆರ್‌ಗೆ 25 ಸಾವಿರ ಘೋಷಿಸಿತ್ತು. ಆದರೆ ಅದನ್ನೂ ಈಗ 10 ಸಾವಿರಕ್ಕೆ ಇಳಿಸಿದೆ. ರಸಗೊಬ್ಬರ, ಬೆಲೆ ಹೆಚ್ಚಳದ ನಡುವೆ ಇದು ಯಾವ ರೀತಿ ರೈತರಿಗೆ ಸಹಕಾರಿ..? ಆಟೋ, ಕ್ಯಾಬ್, ಟ್ಯಾಕ್ಸಿ ಚಾಲಕರಿಗೆ ಕಳೆದ ಬಾರಿ 5000 ನೀಡಿ ಈಗ 3000 ಸಾವಿರ ಎಂದು ಘೋಷಣೆ ಮಾಡಿದ್ದಿರಿ ಇದು ನಿಜಕ್ಕೂ ಕೆಟ್ಟ ಪ್ಯಾಕೇಜ್” ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಗೋವಿನ ಸೆಗಣಿ, ಮೂತ್ರ ಕೊರೊನಾಗೆ ಮದ್ದಲ್ಲ ಎಂದ ಪತ್ರಕರ್ತರ ವಿರುದ್ದ NSA ಅಡಿ ಪ್ರಕರಣ ದಾಖಲು!



Send website