ಬಾಲಿವುಡ್ ನಟ ಮತ್ತು ಕೊರೊನಾ ಸಂಕಷ್ಟದಲ್ಲಿ ಜನರ ಸೇವೆ ಮಾಡುವ ಮೂಲಕ ರಿಯಲ್ ಹೀರೊ ಎನಿಸಿಕೊಂಡಿರುವ ಸೋನು ಸೂದ್ ಅವರ ಸಹಾಯ ಕೋರಿ ಸೇನಾ ಅಧಿಕಾರಿಯೊಬ್ಬರು ಪತ್ರ ಬರೆದಿದ್ದರು. ಇದರ ಪರಿಣಾಮವಾಗಿ ಸೇನೆಯ ಹಿರಿಯ ಅಧಿಕಾರಿಗಳು ಪತ್ರ ಬರೆದ ಕಮಾಂಡಿಂಗ್ ಆಫೀಸರ್ ವಿರುದ್ದ ಕೋಪಗೊಂಡಿದ್ದಾರೆ.
ಸಹಾಯ ಕೋರಿ ಜೈಸಲ್ಮೇರ್‌ನಲ್ಲಿ ಬೀಡುಬಿಟ್ಟಿರುವ ಇನ್‌ಫ್ಯಾಂಟ್ರಿ ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರ್ ಬರೆದ ಪತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು, ಸೇನೆ ಆರಂಭಿಸುತ್ತಿರುವ ಕೊರೊನಾ ಮಿಲಿಟರಿ ಕೇಂದ್ರದ ಸೌಲಭ್ಯಕ್ಕಾಗಿ ಉಪಕರಣಗಳನ್ನು ಖರೀದಿಸಲು ಸಹಾಯ ಮಾಡಲು ಕೋರಿದ್ದರು.
“ಇದು ಅಧಿಕಾರಿಯ ಅತಿಯಾದ ಉತ್ಸಾಹಭರಿತ ನಡವಳಿಕೆಯಾಗಿದೆ. ಅವರ ಉದ್ದೇಶಗಳು ಸರಿಯಾಗಿವೆ. ಕೊರೊನಾ ಕೇಂದ್ರದಲ್ಲಿ ಸೌಲಭ್ಯವನ್ನು ಶೀಘ್ರದಲ್ಲಿಯೇ ಪ್ರಾರಂಭಿಸುವ ಗುರಿಯಿಂದ ಅವರು ಪತ್ರ ಬರೆದಿದ್ದಾರೆ. ಆದರೆ ಇದು ಸರಿಯಾದ ರೀತಿಯಲ್ಲ. ಇಂತಹ ಕೆಲಸ ಮಾಡಬಾರದಾಗಿತ್ತು. ಅವರು ಸರ್ಕಾರದ ನಿಧಿಯ ಮೂಲಕ ಹಣ ಸಂಗ್ರಹಣೆಗಾಗಿ ಕಾಯಬೇಕಾಗಿತ್ತು. ಸಾರ್ವಜನಿಕ ನಿಧಿಯಲ್ಲಿ ಯಾವುದೇ ಕೊರತೆಯಿಲ್ಲ” ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಇದು ಕೊರೊನಾ ಲಸಿಕೆ ಪಡೆದ ವ್ಯಕ್ತಿಯ ಶ್ವಾಸಕೋಶದ ಸಿಟಿ ಸ್ಕ್ಯಾನ್ ಚಿತ್ರವಲ್ಲ

ಜೈಸಲ್ಮೇರ್‌ನಲ್ಲಿ ಇರುವ ಮಿಲಿಟರಿ ಕಮಾಂಡರ್, ಸೋನು ಸೂದ್‌ಗೆ ಬರೆದ ಪತ್ರದಲ್ಲಿ, “ನಮ್ಮೊಂದಿಗೆ ಲಭ್ಯವಿರುವ ಸೀಮಿತ ಸಂಪನ್ಮೂಲಗಳೊಂದಿಗೆ, ಹೆಚ್ಚುವರಿ ಸಲಕರಣೆಗಳ ಅವಶ್ಯಕತೆಯಿದೆ. ಪತ್ರದಲ್ಲಿ ಉಲ್ಲೇಖಿಸಲಾದ ಉಪಕರಣಗಳು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಅಡಿಯಲ್ಲಿ, 04 ಐಸಿಯು ಹಾಸಿಗೆಗಳು, 10 ಆಮ್ಲಜನಕ ಸಾಂದ್ರಕಗಳು, 10 ಜಂಬೊ ಆಮ್ಲಜನಕ ಸಿಲಿಂಡರ್‌ಗಳು (7000 ಲೀಟರ್), 01 ಎಕ್ಸ್-ರೇ ಯಂತ್ರ ಮತ್ತು 02 ಜನರೇಟರ್ ಸೆಟ್‌ಗಳು ಮತ್ತು 1 ಕೆವಿಎ ಸೇರಿವೆ” ಎಂದು ಬರೆಯಲಾಗಿದೆ.
“ಅಧಿಕಾರಿಯು ಸೈನ್ಯದಲ್ಲಿನ ಸಂಪ್ರದಾಯಗಳಿಗೆ ಅನುಗುಣವಾಗಿರದ ಒಂದು ವಿಧಾನವನ್ನು ಅನುಸರಿಸಿದ್ದಾರೆ. ಸಾಮಾನ್ಯವಾಗಿ ಅಂತಹ ಅವಶ್ಯಕತೆಗಳಿಗೆ ಸಂಪನ್ಮೂಲಗಳ ಕೊರತೆಯಿಲ್ಲ” ಆದರೆ, ಕಮಾಂಡರ್ ಅವರ ಉದ್ದೇಶಗಳು ಉದಾತ್ತವಾಗಿದ್ದವು ಎಂದು ರಕ್ಷಣಾ ವಿಶ್ಲೇಷಕರ ಮೇಜರ್ ಜನರಲ್ ಎಸ್.ಬಿ.ಅಸ್ತಾನಾ (ನಿವೃತ್ತ) ಹೇಳಿದ್ದಾರೆ.
“ಇಂತಹ ನಡವಳಿಕೆಗಳು ದೀರ್ಘಾವಧಿಯ ಪರಿಣಾಮವನ್ನು ಬೀರುತ್ತವೆ. ನಾಳೆ ರಾಜಕೀಯ ವ್ಯಕ್ತಿಗಳಿಗೆ ಪತ್ರ ಬರೆಯಬಹುದು ಅಥವಾ ಪ್ರಚಾರ ಪಡೆಯುವ ಉದ್ದೇಶ ಹೊಂದಿರಬಹುದು. ಸಾಮಾನ್ಯವಾಗಿ ನಾವು, ಶ್ರೇಣಿಯಲ್ಲಿರುವ ಹಿರಿಯ ಅಧಿಕಾರಿಗಳನ್ನು ಹೆಚ್ಚುವರಿ ಸಂಪನ್ಮೂಲಗಳಿಗಾಗಿ ಸಂಪರ್ಕಿಸುತ್ತೇವೆ ಅವರಿಗೆ ತುರ್ತು ಅವಶ್ಯಕತೆಗಳನ್ನು ಪೂರೈಸಲು ತುರ್ತು ಆರ್ಥಿಕ ಅಧಿಕಾರಗಳು ಇರುತ್ತವೆ” ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಸೋನು ಸೂದ್‌ಗೆ ಸೇನಾ ಅಧಿಕಾರಿ ಬರೆದಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿತ್ತು. ಸೇನೆಗೂ ಕೂಡ ನೆರವು ನೀಡುತ್ತಿಲ್ಲ ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಅನೇಕ ಮಂದಿ ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಸೇನೆಯ ಹಿರಿಯ ಅಧಿಕಾರಿಗಳು ಪತ್ರ ಬರೆದಿದ್ದ ಕಮಾಂಡರ್ ವಿರುದ್ಧ ಕೋಪಗೊಂಡಿದ್ದಾರೆ.
ಇದನ್ನೂ ಓದಿ: ‘ಇಂಡಿಯನ್ ವೇರಿಯೆಂಟ್’ ಪದವಿರುವ ಪೋಸ್ಟ್‌ಗಳನ್ನು ಕಿತ್ತು ಹಾಕಿ: ಸಾಮಾಜಿಕ ಮಾಧ್ಯಮಗಳಿಗೆ ಕೇಂದ್ರ ನೋಟಿಸ್


