ಕೊರೊನಾ ಎರಡನೇ ಅಲೆ ದೇಶದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ಈ ನಡುವೆಯೇ ಲಕ್ಷಾಂತರ ಜನ ಒಂದೆಡೆ ಸೇರಿದ್ದ ಕುಂಭಮೇಳದ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಇದರಿಂದ ಉತ್ತರಾಖಂಡ ಸರ್ಕಾರ ಮತ್ತು ಧಾರ್ಮಿಕ ಮುಖಂಡರ ನಡುವೆ ಚರ್ಚೆ ನಡೆದಿದ್ದು, ಎರಡು ವಾರಗಳ ಮುಂಚೆಯೇ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳವು ಕೊನೆಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಗಂಗಾ ನದಿಯ ದಡದಲ್ಲಿ ನಡೆಯುತ್ತಿರುವ ಕುಂಭಮೇಳದ ಶಾಹಿ ಸ್ನಾನದಲ್ಲಿ ಲಕ್ಷಾಂತರ ಜನರು ಒಟ್ಟುಗೂಡುತ್ತಿದ್ದಾರೆ, ದೇಶಾದ್ಯಂತ ಸೋಂಕುಗಳು ಹೆಚ್ಚುತ್ತಿರುವ ಮಧ್ಯೆ ಹರಿದ್ವಾರ ಕೊರೊನಾ ಹಾಟ್‌ಸ್ಫಾಟ್ ಆಗಲಿದೆ ಎಂಬ ಆತಂಕ ಹೆಚ್ಚಾಗುತ್ತಿತ್ತು.
ಇದಲ್ಲದೆ, ಕುಂಭಮೇಳದಲ್ಲಿ ಪರಸ್ಪರ ಅಂತರ ಕಾಪಾಡಿಕೊಳ್ಳುವುದು ತುಂಬಾ ಕಷ್ಟ. ಅದನ್ನು ಜಾರಿ ಮಾಡಲು ಹೋದರೆ ಕಾಲ್ತುಳಿತದಂತಹ ಘಟನೆಗಳು ಸಂಭವಿಸಬಹುದು. ಆದ್ದರಿಂದ ಇಲ್ಲಿ ದೈಹಿಕ ಅಂತರವನ್ನು ಜಾರಿಗೊಳಿಸಲು ನಮಗೆ ಸಾಧ್ಯವಾಗುವುದಿಲ್ಲ ಎಂದು ಕುಂಭಮೇಳದ ಉಸ್ತುವಾರಿ ಇನ್ಸ್‌ಪೆಕ್ಟರ್ ಜನರಲ್ ಸಂಜಯ್ ಗುಂಜ್ಯಾಲ್ ಹೇಳಿದ್ದರು.
ಇದನ್ನೂ ಓದಿ: ಕುಂಭಮೇಳದ ’ಶಾಹಿ ಸ್ನಾನ’ದಲ್ಲಿ ದೈಹಿಕ ಅಂತರ ಅಸಾಧ್ಯ ಎಂದ ಅಧಿಕಾರಿಗಳು
ಬುಧವಾರ ಮುಂಜಾನೆ ಕುಂಭಮೇಳದ ಮೂರನೇ ಮತ್ತು ಅತಿದೊಡ್ಡ ‘ಶಾಹಿ ಸ್ನಾನ’ದ ಸಂದರ್ಭದಲ್ಲಿ ಸಾವಿರಾರು ಭಕ್ತರು ಹರಿದ್ವಾರದ ಗಂಗಾದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಪ್ರಮುಖ ಘಟನೆಗಳ ವೇಳಾಪಟ್ಟಿ ಪ್ರಕಾರ, ನಾಲ್ಕು ‘ಶಾಹಿ ಸ್ನಾನ’ ಮತ್ತು ಒಂಬತ್ತು ‘ಗಂಗಾ ಸ್ನಾನ’ಗಳು ಈ ವರ್ಷ ಹರಿದ್ವಾರದಲ್ಲಿ ನಡೆಯಲಿದ್ದವು. ಈಗ ಇವುಗಳನ್ನು ನಡೆಸದಿರಲು ಮತ್ತು ಇಂದಿಗೆ ಕುಂಭಮೇಳಕ್ಕೆ ತೆರೆ ಎಳೆಯಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಕುಂಭದ ಅತ್ಯಂತ ಶುಭ ದಿನಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಶಾಹಿ ಸ್ನಾನದ ಸಂದರ್ಭದಲ್ಲಿ ಮಧ್ಯಾಹ್ನ 2 ಗಂಟೆಯವರೆ 9,43,452 ಭಕ್ತರು ಪಾಲ್ಗೊಂಡಿದ್ದರು ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಮಧ್ಯಾಹ್ನದ ಹೊತ್ತಿಗೆ ಸುಮಾರು 10 ಲಕ್ಷ ಜನರು ನದಿಯಲ್ಲಿ ಸ್ನಾನ ಮಾಡಿದ್ದಾರೆ ಎಂದು ಹರಿದ್ವಾರದಲ್ಲಿ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿದ್ದ ಉತ್ತರಾಖಂಡ ಪೊಲೀಸ್ ಮುಖ್ಯಸ್ಥ ಅಶೋಕ್ ಕುಮಾರ್ ತಿಳಿಸಿದ್ದಾರೆ.
ಮುಂದಿನ ಮಹತ್ವದ ಕುಂಭವೇಳದ ದಿನವನ್ನು ಏಪ್ರಿಲ್ 27 ಕ್ಕೆ ನಿಗದಿಪಡಿಸಲಾಗಿತ್ತು.
ಇದನ್ನೂ ಓದಿ: ಎಲ್ಲಾ ಹಿಂದೂಗಳು ಮುಸ್ಲಿಮರ ಕ್ಷಮೆ ಯಾಚಿಸಬೇಕಾಗಿದೆ: ಕುಂಭಮೇಳದ ಬಗ್ಗೆ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ


