Homeಮುಖಪುಟ’ಮಿಶನರೀಸ್ ಆಫ್ ಚಾರಿಟಿ’ಗೆ FCRA ಲೈಸೆನ್ಸ್ ರದ್ದು ಮಾಡಿದ್ದು, ಮರುಸ್ಥಾಪಿಸಿದ್ದು…

’ಮಿಶನರೀಸ್ ಆಫ್ ಚಾರಿಟಿ’ಗೆ FCRA ಲೈಸೆನ್ಸ್ ರದ್ದು ಮಾಡಿದ್ದು, ಮರುಸ್ಥಾಪಿಸಿದ್ದು…

- Advertisement -
- Advertisement -

ಕೇಂದ್ರದ ಗೃಹ ಸಚಿವಾಲಯವು ದೇಶದ 5968 ಸರ್ಕಾರೇತರ ಸಂಸ್ಥೆ(ಎನ್‌ಜಿಓ)ಗಳ, ಅದರಲ್ಲೂ ವಿಶೇಷವಾಗಿ ಮದರ್ ತೆರೇಸಾ ಅವರ ’ಮಿಶನರೀಸ್ ಆಫ್ ಚಾರಿಟಿ’ ಸಂಸ್ಥೆಯ ವಿದೇಶಿ ದೇಣಿಗೆ ಲೈಸೆನ್ಸನ್ನು ರದ್ದು ಮಾಡಿದ ಸುದ್ದಿಯೊಂದಿಗೆ 2022ನೇ ವರ್ಷ ಆರಂಭವಾಯಿತು.

ಇವುಗಳಲ್ಲಿ ಅನೇಕವು ದಾನಧರ್ಮ (ಸೇವಾ ಕಾರ್ಯ – ಚಾರಿಟಿ), ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಸಂಸ್ಥೆಗಳು. ಐಐಟಿ ದೆಹಲಿ, ಜಾಮಿಯಾ ಮಿಲಿಯ ಇಸ್ಲಾಮಿಯಾ, ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿ, ಆಕ್ಸ್‌ಫ್ಯಾಮ್ ಇಂಡಿಯ, ಇಂಡಿಯ ಇಸ್ಲಾಮಿಕ್ ಕಲ್ಚರಲ್ ಸೆಂಟರ್, ಇಂಡಿಯ ಹ್ಯಾಬಿಟೆಟ್ ಸೆಂಟರ್ ಹಾಗೂ ಲೇಡಿ ಶ್ರೀರಾಮ್ ಮಹಿಳಾ ಕಾಲೇಜು… ಹೀಗೆ ಸಾವಿರಾರು ಇತರ ಸಂಘಟನೆಗಳು ಇದರಲ್ಲಿ ಸೇರಿವೆ.

ವಿದೇಶಿ ದೇಣಿಗೆ ಸ್ವೀಕರಿಸುವ ಪರವಾನಗಿಯನ್ನು ರದ್ದು ಮಾಡಿರುವುದರಲ್ಲಿ ಸಾಂವಿಧಾನಿಕ ಪರಿಣಾಮಗಳಿವೆ. ಸಂಘಸಂಸ್ಥೆಗಳನ್ನು ಸ್ಥಾಪಿಸುವ ಹಕ್ಕನ್ನು ನಮ್ಮ ಸಂವಿಧಾನ ಮಾನ್ಯ ಮಾಡಿದೆ. ಒಂದು ಸಂಸ್ಥೆ ಮಾಡಬಯಸುವ ಕೆಲಸಗಳಿಗಾಗಿ ಹಣಕಾಸಿನ ಸಂಪನ್ಮೂಲಗಳನ್ನು ದೊರಕಿಸಿಕೊಳ್ಳುವುದೂ ಈ ಹಕ್ಕಿನ ಒಂದು ಮುಖ್ಯ ಭಾಗವಾಗಿದೆ. ಸಂಘಟನೆಯ ಹಣಕಾಸಿನ ಸಂಪನ್ಮೂಲಗಳನ್ನು ನಿರ್ಬಂಧಿಸಿದರೆ ಸಂಘಟನೆ ಕಟ್ಟಿಕೊಳ್ಳುವ ಹಕ್ಕಿಗೆ ಅರ್ಥವೇ ಇಲ್ಲವಾಗುತ್ತದೆ.

’ಮಾನವ ಹಕ್ಕುಗಳನ್ನು ಮತ್ತು ಮೂಲಭೂತ ಸ್ವಾತಂತ್ರ್ಯಗಳನ್ನು ಶಾಂತಿಯುತ ವಿಧಾನಗಳ ಮೂಲಕ ಪ್ರೋತ್ಸಾಹಿಸುವ, ರಕ್ಷಣೆ ಮಾಡುವ ಸ್ಪಷ್ಟ ಉದ್ದೇಶಕೊಸ್ಕರ ಸಂಪನ್ಮೂಲಗಳನ್ನು ಕೋರುವ, ಪಡೆಯುವ ಹಾಗೂ ಬಳಕೆ ಮಾಡುವ’ ಹಕ್ಕು ವ್ಯಕ್ತಿಗಳಿಗೂ ಸಂಘಟನೆಗಳಿಗೂ ಇದೆ ಎಂಬುದಾಗಿ ವಿಶ್ವಸಂಸ್ಥೆಯ ’ಮಾನವ ಹಕ್ಕುಗಳ ಸಂರಕ್ಷಕರ ಘೋಷಣೆ’ಯ ಆರ್ಟಿಕಲ್ 13 ಘೋಷಿಸುತ್ತದೆ. ವಿದೇಶಗಳಿಂದ ಹಣಕಾಸು ಪಡೆಯುವ ಹಕ್ಕನ್ನು ’ರಾಷ್ಟ್ರೀಯ ಸಾರ್ವಭೌಮತೆ’ ಮುಂತಾದ ಸಾಂವಿಧಾನಿಕವಾಗಿ ಮಾನ್ಯ ಮಾಡಲ್ಪಟ್ಟ ಕಾರಣಗಳಿಗಾಗಿ ನ್ಯಾಯಸಮ್ಮತವಾದ ನಿಯಂತ್ರಣಗಳಿಗೆ ಒಳಪಡಿಸುವುದು ತಪ್ಪಲ್ಲವಾದರೂ, ಅದು ಈ ಹಕ್ಕಿನ ಬೇಕಾಬಿಟ್ಟಿ ನಿರ್ಬಂಧವಾಗಕೂಡದು.

ಅಂತರರಾಷ್ಟ್ರೀಯವಾಗಿ ಗೌರವಿಸಲ್ಪಡುವ ’ಮಿಶನರೀಸ್ ಆಫ್ ಚಾರಿಟಿ’ಯ ಲೈಸೆನ್ಸನ್ನು ರದ್ದುಪಡಿಸಲು ಅದರ ’ಒಂದು ಕೇಂದ್ರದ ನಿರ್ದೇಶಕರು ಮತಾಂತರ ಕೆಲಸದಲ್ಲಿ ನಿರತರಾಗಿದ್ದಾರೆ’ ಎಂಬ ’ಪ್ರತಿಕೂಲ ಮಾಹಿತಿ’ ಸರ್ಕಾರಕ್ಕೆ ಬಂದಿದ್ದು ಕಾರಣ ಎಂದು ಮಾಧ್ಯಮ ವರದಿಗಳು ತಿಳಿಸುತ್ತವೆ. ಈ ಆರೋಪದ ಸತ್ಯಾಸತ್ಯತೆ ಒತ್ತಟ್ಟಿಗಿರಲಿ; ದೇಶಾದ್ಯಂತ 60ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿರುವ ಈ ಸಂಸ್ಥೆಯ ಪರವಾನಗಿಯನ್ನು ರದ್ದುಪಡಿಸಿದ್ದನ್ನು ಸಂವಿಧಾನದ ಪ್ರಕಾರ ಸಂಘ ಸ್ಥಾಪಿಸುವ ಅದರ ಹಕ್ಕಿನ ಮೇಲಿನ ’ನ್ಯಾಯಸಮ್ಮತವಾದ ನಿರ್ಬಂಧ’ ಎಂಬುದಾಗಿ ಸಮರ್ಥಿಸಲು ಸಾಧ್ಯವಿಲ್ಲ.

ಭಾರತ ಸರ್ಕಾರದ ಈ ಕ್ರಮದ ವಿರುದ್ಧ ಅಂತಾರಾಷ್ಟ್ರೀಯವಾಗಿ ಅನೇಕ ಪ್ರತಿಕೂಲ ಪ್ರತಿಕ್ರಿಯೆಗಳು ಬಂದವು; ಆ ಪೈಕಿ ಬ್ರಿಟಿಷ್ ಸಂಸತ್ತಿನಲ್ಲಿ ಬಂದ ತೀಕ್ಷ್ಣ ವಿಮರ್ಶೆಯೂ ಒಂದು. ಬಹುಶಃ ಗೃಹ ಸಚಿವಾಲಯವು ತನ್ನ ಕ್ರಮವನ್ನು ತಣ್ಣಗೆ ಹಿಂತೆಗೆದುಕೊಂಡು, ಮಿಶನರೀಸ್ ಆಫ್ ಚಾರಿಟಿಯ ಪರವಾನಗಿಯನ್ನು ಮರುಸ್ಥಾಪಿಸಲು ಇದೂ ಕಾರಣವಿರಬೇಕು. ಇತರ ಸಂಸ್ಥೆಗಳ ಲೈಸೆನ್ಸನ್ನು ಹಿಂದಿರುಗಿಸದಿರುವ ತನ್ನ ನಿಲುವನ್ನು ಕೂಡ ಸಚಿವಾಲಯವು ಮರುವಿಮರ್ಶಿಸಲೆಂದು ಆಶಿಸೋಣ.

ಗೃಹ ಸಚಿವಾಲಯವು ಸೇವಾ ಕಾರ್ಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಗುರಿ ಮಾಡಿರುವುದು ಬಹಳ ಕಳವಳದ ವಿಷಯವಾಗಿದೆ. ಮಿಶನರೀಸ್ ಆಫ್ ಚಾರಿಟೀಸ್ ಸಂಸ್ಥೆಯ ಲೈಸೆನ್ಸನ್ನು ರದ್ದು ಮಾಡುವ ಮೂಲಕ ಗೃಹ ಸಚಿವಾಲಯವು ವಸತಿರಹಿತರು, ವಯೋವೃದ್ಧರು, ಕುಷ್ಠ ರೋಗಿಗಳು ಹಾಗೂ ಮರಣಾಸನ್ನ ವ್ಯಕ್ತಿಗಳಂತಹ ’ಬಡವರಲ್ಲಿ ಬಡವ’ರಾದ ನಿರ್ಗತಿಕರ ಸೇವೆಯ ವಿರುದ್ಧ ಖಡ್ಗ ಝಳಪಿಸಿದಂತಾಗಿದೆ. ಇಂಡಿಯ ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಉದ್ದೇಶ ’ಇಸ್ಲಾಂ ಧರ್ಮದ ಸಹಿಷ್ಣುತೆ, ಉದಾರತೆ, ಪ್ರಗತಿಪರತೆ ಮತ್ತು ವೈಚಾರಿಕತೆಯ ಧೋರಣೆಯನ್ನು ಪ್ರೋತ್ಸಾಹಿಸುವುದು’, ’ಈ ದೇಶದ ಜನರ ನಡುವೆ ಪರಸ್ಪರ ಸದ್ಭಾವನೆ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುವುದು’. ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿಯು ವಸಾಹತು ಮತ್ತು ಆಧುನಿಕ ಭಾರತ ಕುರಿತ ಸಂಶೋಧಕರ ಪಾಲಿಗೆ ಶ್ರೇಷ್ಠ ಆಕರ ಸಂಸ್ಥೆಯಾಗಿದೆ.

ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸೇವಾಕ್ಷೇತ್ರಗಳಲ್ಲಿ ಕಾರ್ಯನಿರತವಾಗಿರುವ ಈ ಸಂಸ್ಥೆಗಳನ್ನು ಗುರಿ ಮಾಡುವ ಮೂಲಕ ಗೃಹ ಸಚಿವಾಲಯವು ಭಾರತವನ್ನು ಅಕ್ಷರಶಃ ಬಡವಾಗಿಸುತ್ತಿದೆ; ಈ ಮಾತು ಒಂದು ರೂಪಕವಾಗಿಯೂ ನಿಜ. ಭಾರತದ ಪ್ರಭುತ್ವವು ಯಾವತ್ತೂ ಒಂದು ನಿಜವಾದ ಕಲ್ಯಾಣ ರಾಜ್ಯವಾಗದೆ ಇದ್ದ ಕಾರಣ ಅತ್ಯಂತ ಸಂಕಷ್ಟಕ್ಕೆ ಒಳಗಾಗಿರುವವರಿಗೆ ನೆರವಿನ ಹಸ್ತ ಚಾಚುವ ಕೆಲಸವನ್ನು ಸೇವಾ ಸಂಸ್ಥೆಗಳೇ ಚರಿತ್ರೆಯುದ್ದಕ್ಕೂ ಮಾಡುತ್ತ ಬಂದಿವೆ. ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಬಿಕ್ಕಟ್ಟು ನಿರ್ವಹಣೆಯ ಮುಂಚೂಣಿಯಲ್ಲಿದ್ದುದು ಮುಸ್ಲಿಂ ಮತ್ತು ಕ್ರೈಸ್ತ ಸೇವಾ ಸಂಸ್ಥೆಗಳೇ. ಇಂತಹ ಸೇವಾ ಕಾರ್ಯಗಳಿಗೆ ಮತ್ತಷ್ಟು ಸಂಪನ್ಮೂಲಗಳನ್ನು ಒದಗಿಸಬೇಕೇ ಹೊರತು ಅವರ ಬಳಿ ಇದ್ದುದನ್ನೂ ಇಲ್ಲದಂತೆ ಮಾಡಬಾರದು. ವಾಸ್ತವವಾಗಿ ಮೊದಲ ಕೊರೊನಾ ಅಲೆಯಲ್ಲಿ ಪೂರ್ವಸಿದ್ಧತೆ ಇಲ್ಲದೆ ಅವೈಜ್ಞಾನಿಕವಾಗಿ ಲಾಕ್‌ಡೌನ್ ಮಾಡಿದಾಗ ಬಡಜನರು ದೊಡ್ಡ ಸಂಖ್ಯೆಯಲ್ಲಿ ಹಸಿವಿನಿಂದ ಸಾಯದಂತೆ ತಡೆದಿದ್ದು ಜನಸಾಮಾನ್ಯರ ಮತ್ತು ಸಂಘಟನೆಗಳ ಸೇವಾಕಾರ್ಯಗಳೇ. ಸಾವಿರಾರು ಮಂದಿ ಸಾಮಾನ್ಯ ವ್ಯಕ್ತಿಗಳು ಹಾಗೂ ಸಂಘಟನೆಗಳು ತೋರ್ಪಡಿಸಿದ ಅಮೋಘವಾದ ಸೇವಾ ಸ್ಫೂರ್ತಿಯಿಂದಾಗಿಯೇ ಭಾರತವು ಪೂರ್ಣ ಪ್ರಮಾಣದ ಬಿಕ್ಕಟ್ಟನ್ನು ಎದುರಿಸದೆ ಉಳಿದುಕೊಂಡಿತು ಎಂಬುದನ್ನು ಭಾರತ ಸರ್ಕಾರ ಅರ್ಥಮಾಡಿಕೊಳ್ಳಬೇಕಿದೆ.

ಇಂಡಿಯಾ ಇಸ್ಲಾಮಿಕ್ ಸೆಂಟರ್‌ಅನ್ನು ಗುರಿ ಮಾಡಿರುವುದೂ ಸಹ ಇಂಥದ್ದೇ ದೂರದೃಷ್ಟಿ ರಹಿತ ನಡೆಯಾಗಿದೆ. ಇಸ್ಲಾಮನ್ನು ಪ್ರಗತಿಪರವಾಗಿ ವ್ಯಾಖ್ಯಾನಿಸುವ ಗುರಿ ಹೊಂದಿರುವ ಈ ಪ್ರಗತಿಪರ ಗುಂಪಿಗೆ ತನ್ನ ಚಟುವಟಿಕೆಗಳನ್ನು ನಡೆಸಲು ಅಗತ್ಯವಿರುವ ಹಣಕಾಸನ್ನು ಒಗ್ಗೂಡಿಸಿಕೊಳ್ಳುವ ಹಕ್ಕನ್ನು ನಿರಾಕರಿಸಲಾಗಿದೆ. ಇಸ್ಲಾಮಿನ ಒಳಗಿನಿಂದಲೇ ಪ್ರಗತಿಪರ ಅಭಿಪ್ರಾಯ ರೂಪಿಸುವ ಒಂದು ಗುಂಪನ್ನು ಬಾಯಿ ಮುಚ್ಚಿಸುವ ಪ್ರಯತ್ನ ಇದಾಗಿದೆ. ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿಯನ್ನು ಗುರಿ ಮಾಡಿರುವುದು ಒಂದು ಜನಸಮುದಾಯದ ಬದುಕಿನಲ್ಲಿ ಚರಿತ್ರೆಯ ಪಾತ್ರವನ್ನು ಹಾಗೂ ಚರಿತ್ರೆಯ ಬಗೆಗಿನ ಸಂಶೋಧನೆಗೆ ಉತ್ತೇಜನ ನೀಡುವುದರ ಮಹತ್ವವನ್ನು ಅರ್ಥ ಮಾಡಿಕೊಳ್ಳಲಾರದ ಸಂಕುಚಿತತೆಯಾಗಿದೆ.

ಯಾವುದೇ ರೂಪದ ವಿದೇಶಿ ನೆರವು ಆ ದೇಶದ ಅಜೆಂಡಾವನ್ನು ಈಡೇರಿಸುವುದರಿಂದ ಅದು ಒಳ್ಳೆಯದಲ್ಲ ಎಂದು ರ್‍ಯಾಡಿಕಲ್ ಬದಿಯ ಹಲವು ಗುಂಪುಗಳು ವಾದಿಸಬಹುದು. ಇದಕ್ಕೆ ಎರಡು ರೀತಿಯ ಪ್ರತಿಕ್ರಿಯೆಗಳನ್ನು ನೀಡಬಹುದು.

ಮೊದಲನೆಯದಾಗಿ, ವಿದೇಶಿ ನೆರವನ್ನು ನಿರ್ಬಂಧಿಸುವುದು ಸಾಂವಿಧಾನಿಕ ನೆಲೆಯಲ್ಲಿರಬೇಕೇ ಹೊರತು ’ಅಜೆಂಡಾವನ್ನು ನಿಯಂತ್ರಿಸುವುದು’ ಮುಂತಾದ ಬರಿಯ ಊಹೆ-ಆತಂಕಗಳ ನೆಲೆಯಲ್ಲಲ್ಲ. ಆಧಾರರಹಿತ ಪೂರ್ವಗ್ರಹಗಳು ಮತ್ತು ಪಕ್ಷಪಾತಿ ಧೋರಣೆಗಳ ಕಾರಣಕ್ಕೆ (ಒಂದು ಕೇಂದ್ರದಲ್ಲಿ ಮತಾಂತರ ನಡೆಯುತ್ತಿದೆಯೆಂಬ ಆರೋಪದ ಮೇಲೆ ಮಿಶನರೀಸ್ ಆಫ್ ಚಾರಿಟೀಸ್‌ನ ಸಂಸ್ಥೆಯ ವಿರುದ್ಧ ಮಾಡಿದಂತೆ) ಹಣಕಾಸನ್ನು ನಿರಾಕರಿಸಿದರೆ ಅದು ಅಸಾಂವಿಧಾನಿಕವಾಗುತ್ತದೆ. ಇಂಥ ಯಾವುದೇ ನಿಷೇಧದ ಕಾರಣವು ಆರ್ಟಿಕಲ್ 19(4)ರಲ್ಲಿ ಹೇಳಿರುವ ’ನ್ಯಾಯಸಮ್ಮತವಾದ ನಿರ್ಬಂಧ’ದ ವ್ಯಾಪ್ತಿಯೊಳಗಿರಬೇಕು.

ಎರಡನೆಯದಾಗಿ, ಭಾರತದಲ್ಲಿ ಒಂದು ಜಾತ್ಯತೀತ/ಧರ್ಮನಿರಪೇಕ್ಷ ಸೇವಾ ಪರಂಪರೆ ಉತ್ತಮವಾಗಿ ಬೆಳೆದೇ ಇಲ್ಲ. ಇಲ್ಲಿ ಚಾರಿಟಿ ಎನ್ನುವುದು ಧರ್ಮ ಮತ್ತು ಜಾತಿಯನ್ನು ಅವಲಂಬಿಸಿದೆ. ಈಗಲೂ ಅತಿ ಹೆಚ್ಚಿನ ದೇಣಿಗೆಗಳು ದೇವಸ್ಥಾನಗಳಿಗೆ ಹರಿದುಬರುತ್ತವೆ; ’ಸಾಂಸ್ಕೃತಿಕ’, ’ಶೈಕ್ಷಣಿಕ’ ಅಥವಾ ’ಸೇವಾಸಂಸ್ಥೆ’ಯಲ್ಲದೆ, ಕೇವಲ ಧಾರ್ಮಿಕ ಕಾರಣಕ್ಕೆ ದೇಣಿಗೆ ಪಡೆಯುವುದರಲ್ಲಿ ತಿರುಪತಿ ದೇವಸ್ಥಾನವು ಮೊದಲನೆಯದಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಭಾರತದಲ್ಲಿ ’ಸಾರ್ವಜನಿಕ ಸಾಕ್ಷಿಪ್ರಜ್ಞೆ’ ಇಲ್ಲದಿರುವುದರ ಬಗ್ಗೆ ವ್ಯಥೆಪಟ್ಟಿದ್ದರು; ’ಯಾವುದೇ ತಪ್ಪಿನಿಂದ ಸಂಕಷ್ಟಕ್ಕೆ ಒಳಗಾಗುವವರು ಯಾರು ಬೇಕಾದರೂ ಆಗಿರಲಿ, ಪ್ರತಿಯೊಂದು ತಪ್ಪಿನ ಕುರಿತೂ ತಳಮಳಗೊಳ್ಳುವ ಸಾಕ್ಷಿಪ್ರಜ್ಞೆ’ಯನ್ನು ಅವರು ’ಸಾರ್ವಜನಿಕ ಸಾಕ್ಷಿಪ್ರಜ್ಞೆ’ ಎಂದು ಹೆಸರಿಸಿದ್ದರು. ಭಾರತದಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸೇವಾ ಚಟುವಟಿಕೆಗಳಿಗೆ ಧಾರ್ಮಿಕ ಅಥವಾ ಜಾತಿಯ ಪರಿಗಣನೆಯನ್ನು ಬದಿಗಿಟ್ಟು ಹಣಕಾಸಿನ ನೆರವು ನೀಡುವಂತಹ ’ಸಾರ್ವಜನಿಕ ಸಾಕ್ಷಿಪ್ರಜ್ಞೆ’ ಮೂಡುವವರೆಗೂ ಜಾತ್ಯತೀತ/ಧರ್ಮನಿರಪೇಕ್ಷ ಸಂಘಟನೆಗಳು ವಿದೇಶಿ ದೇಣಿಗೆಗಳತ್ತ ನೋಡದೆ ಬೇರೆ ದಾರಿಯಿರುವುದಿಲ್ಲ.

ಅನುವಾದ: ಸಿರಿಮನೆ ನಾಗರಾಜ್

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಆಲ್ಟರ್‌ನೇಟಿವ್ ಲಾ ಫೋರಂನ ಸ್ಥಾಪಕ ಸದಸ್ಯರು. ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಕಾನೂನು ಹೋರಾಟಗಳ ಹಿಂದಿರುವ ವ್ಯಕ್ತಿ. ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಕೋಮು ಸಂಘರ್ಷಗಳ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನು ನೆರವು ಒದಗಿಸುತ್ತಾ ಬಂದಿದ್ದಾರೆ.


ಇದನ್ನೂ ಓದಿ: ದ್ವೇಷ ಭಾಷಣ ಕೇಸ್: ’ನೀವೆಲ್ಲರೂ ಸಾಯುತ್ತೀರಿ’ ಎಂದು ಪೊಲೀಸರಿಗೆ ಯತಿ ನರಸಿಂಗಾನಂದ ಬೆದರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...