ಅಖಿಲ ಭಾರತ ಕಿಸಾನ್ ಸಭಾ, ಕ್ರಾಂತಿಕಾರಿ ಕಿಸಾನ್ ಯೂನಿಯನ್, ಜಮ್ಹೂರಿ ಕಿಸಾನ್ ಸಭಾ ಮತ್ತು ಬಿಕೆಯು ಕಡಿಯನ್ ಸೇರಿದಂತೆ ವಿವಿಧ ರೈತ ಸಂಘಗಳ ಹಲವಾರು ದೊಡ್ಡ ದೊಡ್ಡ ಗುಂಪುಗಳು ಬುಧವಾರ ಪಂಜಾಬಿನಿಂದ ಬಂದು ದೆಹಲಿಯ ಪ್ರತಿಭಟನಾ ನಿರತ ಗಡಿಗಳಿಗೆ ಬಂದು ಸೇರಿಕೊಂಡಿದ್ದಾರೆ.
ಮಂಗಳವಾರ ಉದಮಸಿಂಗ್ ನಗರ ಮತ್ತು ಉತ್ತರಾಖಂಡದ ಇತರ ಪ್ರದೇಶಗಳಿಂದ ಘಾಜಿಪುರ ಪ್ರತಿಭಟನಾ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಬಂದಿದ್ದಾರೆ. ಕಿಸಾನ್ ಸಂಘರ್ಷ ಸಮಿತಿ ಹರಿಯಾಣದ ಗುಂಪಿನ ನೂರಾರು ಸದಸ್ಯರು ನಿನ್ನೆ ಪ್ರತಿಭಟನಾಕಾರರ ಜೊತೆಗೆ ಬಂದು ಸೇರಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಲಕ್ಷಾಂತರ ರೈತರು ಗಡಿಗಳಲ್ಲಿ ತಿಂಗಳುಗಟ್ಟಲೆ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರದ “ಎಂಎಸ್‌ಪಿ ಜುಮ್ಲಾ” ಮುಂದುವರಿಯುತ್ತಿದೆ ಎಂದಿರುವ ಎಸ್‌ಕೆಎಂ ಸರ್ಕಾರದ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಸರ್ಕಾರ ಸೂಚನೆ: ರೈತ ಹೋರಾಟ ಬೆಂಬಲಿಸಿದ ನಾಲ್ಕು ಟ್ವಿಟರ್ ಖಾತೆಗಳಿಗೆ ನಿರ್ಬಂಧ
ಇಂದು (ಜೂನ್ 9) ಪ್ರತಿಭಟನಾ ಸ್ಥಳಗಳಲ್ಲಿ ಸಿಖ್ ವಾರಿಯರ್ ಬಂಡಾ ಸಿಂಗ್ ಬಹದ್ದೂರ್ ಮತ್ತು ಬುಡಕಟ್ಟು ಮುಖಂಡ, ಹುತಾತ್ಮ ಬಿರ್ಸಾ ಮುಂಡಾ ಅವರಿಗೆ ಗೌರವ ಸಲ್ಲಿಸಲಾಯಿತು. ಹದಿನೆಂಟನೇ ಶತಮಾನದ ಆರಂಭದಲ್ಲಿ, ಮೊಘಲರು ದೇಶವನ್ನು ವಶಪಡಿಸಿಕೊಳ್ಳುವ ಮೊದಲು, ಜಮೀನ್ದಾರಿ ವ್ಯವಸ್ಥೆಯನ್ನು ರದ್ದುಗೊಳಿಸಲು ಮತ್ತು ಭೂಮಿಯನ್ನು ಉಳುಮೆ ಮಾಡುವವರಿಗೆ ಆಸ್ತಿ ಹಕ್ಕುಗಳನ್ನು ನೀಡುವಲ್ಲಿ ಬಂಡಾ ಸಿಂಗ್ ಬಹದ್ದೂರ್ ಹೆಸರುವಾಸಿಯಾಗಿದ್ದಾರೆ. ಇವರು 1716 ರ ಜೂನ್ 9 ರಂದು ಹುತಾತ್ಮರಾಗಿದ್ದಾರೆ ಎಂದು ಎಸ್‌ಕೆಎಂ ತಿಳಿಸಿದೆ.
ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರನ್ನು ಆದಿವಾಸಿಗಳು ಮತ್ತು ಹಲವು ಮಂದಿ ಪೂಜಿಸುತ್ತಾರೆ. ಭಾರತದ ಕಾಡುಗಳು ಮತ್ತು ಭೂಮಿಯ ಮೇಲಿನ ಆದಿವಾಸಿ ಹಕ್ಕುಗಳನ್ನು ರಕ್ಷಿಸಲು ಬ್ರಿಟಿಷ್ ಆಡಳಿತಗಾರರ ವಿರುದ್ಧ ಹೋರಾಟ ನಡೆಸಿ ಅವರ ಹಕ್ಕುಗಳನ್ನು ರಕ್ಷಿಸಿದ್ದಾರೆ. ಜೊತೆಗೆ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಕೊಡುಗೆಗಳಿಗಾಗಿ ಗೌರವಿಸಲ್ಪಟ್ಟಿದ್ದಾರೆ. ಕೇವಲ ತಮ್ಮ 25 ವರ್ಷ ವಯಸ್ಸಿನಲ್ಲೇ ಜೂನ್ 9, 1900 ರಂದು ಬ್ರಿಟಿಷ್ ಜೈಲಿನಲ್ಲಿ ಬಿರ್ಸಾ ಮುಂಡಾ ಹುತಾತ್ಮರಾಗಿದ್ದಾರೆ.
ಪ್ರತಿಭಟನಾಕಾರರು ಈ ಇಬ್ಬರು ಹುತಾತ್ಮರ ಜೀವನ ಕಥೆಗಳು ಮತ್ತು ಹೋರಾಟಗಳಿಂದ ಸ್ಫೂರ್ತಿ ಪಡೆದು, ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಪ್ರಸ್ತುತ ಹೋರಾಟವನ್ನು ಮುಂದುವರೆಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ನಟ, ಹೋರಾಟಗಾರ ಚೇತನ್ ವಿರುದ್ಧ ದೂರು: IStandWithChetanAhimsa ಎಂದ ನೆಟ್ಟಿಗರು


