Photo Courtesy: Lokmat.com

ಕಳೆದ ವರ್ಷ ಕೋವಿಡ್‍ನ ಆರಂಭದ ಬಿಕ್ಕಟ್ಟಿನ ಸಮಯ. ಆಗ ಮಧ್ಯಪ್ರದೇಶದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿತ್ತು. ವಿಮಾನ ಅಪಘಾತದಲ್ಲಿ ದುರ್ಮರಣ ಹೊಂದಿದ ಕಾಂಗ್ರೆಸ್‍ ನಾಯಕ ಮಾಧವರಾವ ಸಿಂಧಿಯಾ ಅವರ ಪುತ್ರ ಜ್ಯೋತಿರಾಧಿತ್ಯ ಸಿಂಧಿಯಾ 22 ಕಾಂಗ್ರೆಸ್‍ ಶಾಸಕರೊಂದಿಗೆ ಸೇರಿ ಕಾಂಗ್ರೆಸ್‍ನ ಕಮಲನಾಥ್‍ ನೇತೃತ್ವದ ಸರ್ಕಾರವನ್ನು ಉರುಳಿಸಿದ್ದರು. ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಬಂದಾದ ಮೇಲೆಯಷ್ಟೇ ಕೇಂದ್ರ ಸರ್ಕಾರ ಲಾಕ್‍ಡೌನ್‍ ಹೇರಿತು ಎಂಬ ಆರೋಪವಿದೆ.

ಈಗ ಕೋವಿಡ್‍ ಎರಡನೆ ಅಲೆ ಸಂದರ್ಭದಲ್ಲಿ ಇನ್ನೊಬ್ಬ ಯುವನಾಯಕ ಜಿತಿನ್‍ ಪ್ರಸಾದ್‍ ಕಾಂಗ್ರೆಸ್‍ ತೊರೆದು ಬಿಜೆಪಿ ಸೇರಿದ್ದಾರೆ. ಇದು ವರ್ಷದೊಳಗೆ ನಡೆಯಲಿರುವ ಉತ್ತರಪ್ರದೇಶ ಚುನಾವಣೆ ಗುರಿಯಾಗಿ ಇಟ್ಟುಕೊಂಡು ನಡೆದ ವಿದ್ಯಮಾನ.

ಈ ನಡುವೆ ರಾಜಸ್ತಾನದಲ್ಲಿ ಕಾಂಗ್ರೆಸ್‍ ಯುವ ನಾಯಕ ಸಚಿನ್‍ ಪೈಲಟ್‍ ಕೂಡ ಬಿಜೆಪಿಗೆ ಹೊರಟು ವಾಪಸ್‍ ಬಂದರು.

ಮೇಲಿನ ವಿದ್ಯಮಾನಗಳು ಏನನ್ನು ಸೂಚಿಸುತ್ತವೆ? ರಾಹುಲ್‍ ಗಾಂಧಿಯವರ ಇಬ್ಬರು ಆಪ್ತ ಯುವನಾಯಕರನ್ನು ಬಿಜೆಪಿ ಬೇಟೆಯಾಡಿದೆ. ಸಾಂಕ್ರಾಮಿಕವೋ ಇನ್ನೊಂದೋ, ಬಿಜೆಪಿಗೆ ರಾಜಕೀಯ ಅಧಿಕಾರ ಮುಖ್ಯ ಎಂಬುದನ್ನೂ, ಕಾಂಗ್ರೆಸ್‍ ಒಳಗಡೆ ಆಂತರಿಕ ಸಮಸ್ಯೆ ಇದೆ ಎಂಬುದನ್ನೂ ಈ ವಿದ್ಯಮಾನಗಳು ಸೂಚಿಸುತ್ತಿವೆ ಅಲ್ಲವೇ?

ವರ್ಷದ ಹಿಂದೆ ಕಾಂಗ್ರೆಸ್‍ನಿಂದ ಬಿಜೆಪಿಗೆ ಸೇರಿದ್ದ ಯುವನಾಯಕ ಜ್ಯೋತಿರಾದಿತ್ಯ ಸಿಂಧಿಯಾ, ಇಂದು ಕಾಂಗ್ರೆಸ್ ಯುವ ನಾಯಕ ಜಿತಿನ್ ಪ್ರಸಾದ ಬಿಜೆಪಿಗೆ ಸೇರ್ಪಡೆಗೊಂಡ  ಕೂಡಲೇ, ಅವರಿಗೆ ವಿಶೇಷ ಸ್ವಾಗತ ನೀಡಿದ್ದಾರೆ.

“ಅವರು ನನ್ನ ಕಿರಿಯ ಸಹೋದರನಂತೆ ಇದ್ದಾರೆ. ನಾನು ಅವರನ್ನು ಬಿಜೆಪಿಗೆ ಸ್ವಾಗತಿಸುತ್ತೇನೆ. ಅವರನ್ನು ಅಭಿನಂದಿಸುತ್ತೇನೆ” ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಜ್ಯೋತಿರಾದಿತ್ಯ ಸಿಂಧಿಯಾ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಕಾಂಗ್ರೆಸ್ಸಿನ ಪ್ರಮುಖ ಬ್ರಾಹ್ಮಣ ಮುಖವಾದ ಜಿತಿನ್ ಪ್ರಸಾದ,  ‘ಇಂದು ದೇಶದ ಏಕೈಕ ರಾಷ್ಟ್ರೀಯ ಪಕ್ಷ’ ಎಂದು ಬಿಜೆಪಿಯನ್ನು ಹೊಗಳುವ ಮೂಲಕ ಆ ಪಕ್ಷಕ್ಕೆ ಸೇರಿಕೊಂಡರು. “ನಿಮ್ಮ ಜನರನ್ನು ನೋಡಿಕೊಳ್ಳಲು ನೀವು ಅಸಮರ್ಥರಾಗಿದ್ದರೆ ಅದರಲ್ಲಿ ಯಾವುದೇ ಅರ್ಥವಿಲ್ಲ’ ಎಂದು ಬಿಜೆಪಿ ಸೇರ್ಪಡೆ ಸಂದರ್ಭದಲ್ಲಿ ಜಿತಿನ್‍ ಹೇಳಿದರು.

ಒಂದು ವರ್ಷ‍ಕ್ಕಿಂತ ಕಡಿಮೆ ಅವಧಿಯಲ್ಲಿ ಚುನಾವಣೆ ನಡೆಯಲಿರುವ ಉತ್ತರಪ್ರದೇಶದಲ್ಲಿ ಕಾಂಗ್ರೆಸ್‍ಗೆ  ಈ ವಿದ್ಯಮಾನ ತೊಂದರೆ ಮಾಡಬಹುದು. ಆದರೆ ಅದಕ್ಕಿಂತ ಹೆಚ್ಚಾಗಿ, ಯೋಗಿ ಆದಿತ್ಯನಾಥ್ ಸರ್ಕಾರವು ಟೀಕೆ, ಆಕ್ರೋಶಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಬಿಜೆಪಿಗೆ ಹೊಸ ನರೇಟಿವ್ ಕಟ್ಟಲು ಇದು ಸಹಾಯ ಮಾಡುತ್ತದೆ.

ಬಿಜೆಪಿಯೊಂದಿಗೆ ನೇರ ಮುಖಾಮುಖಿಯನ್ನು ಎದುರಿಸುತ್ತಿರುವ ರಾಜ್ಯಗಳಲ್ಲಿ ಈ ಉನ್ನತ ಮಟ್ಟದ ಪಕ್ಷಾಂತರಗಳು ಕಾಂಗ್ರೆಸ್‍ಗೆ ಬಿಕ್ಕಟ್ಟನ್ನು ಸೂಚಿಸುತ್ತವೆ ಎನ್ನಲಾಗಿದೆ.

ಜ್ಯೋತಿರಾದಿತ್ಯ ಸಿಂಧಿಯಾ 2020ರ ಮಾರ್ಚ್‍ನಲ್ಲಿ ಕಾಂಗ್ರೆಸ್ ತೊರೆದು 22 ಶಾಸಕರೊಂದಿಗೆ ಬಿಜೆಪಿಗೆ ಸೇರಿಕೊಂಡರು, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‍ ಪಕ್ಷದ ಸರ್ಕಾರವನ್ನು ಉರುಳಿಸಿದರು.

ಸಿಂಧಿಯಾ ಅಂದಿನ ತಮ್ಮ ಕಾಂಗ್ರೆಸ್‍ ಮುಖ್ಯಮಂತ್ರಿ ಕಮಲ್ ನಾಥ್ ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು. ಆ ಸಂದರ್ಭದಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್ ನಿರಂತರ ಆಂತರಿಕ ಕಿತ್ತಾಟವನ್ನು ಎದುರಿಸಬೇಕಾಗಿತ್ತು.

19 ವರ್ಷ ಕಾಂಗ್ರೆಸ್‍ನಲ್ಲಿದ್ದ ಸಿಂಧಿಯಾ ಪಕ್ಷವನ್ನು ತೊರೆಯುವ ಮೊದಲು, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ತಿಂಗಳುಗಟ್ಟಲೆ ಕಾಯ್ದು ವಿಫಲರಾದರು ಎಂದು ಅವರ ಆಪ್ತ ಮೂಲಗಳು ತಿಳಿಸಿದ್ದವು.

ಜ್ಯೋತಿರಾದಿತ್ಯ ಸಿಂಧಿಯಾ, ಜಿತಿನ್ ಪ್ರಸಾದ್‍ ಮತ್ತು ಕಾಂಗ್ರೆಸ್‍ನ ಮತ್ತೊಬ್ಬ ಬಂಡಾಯಗಾರ ಸಚಿನ್ ಪೈಲಟ್- ಈ ಮೂವರೂ ರಾಹುಲ್ ಗಾಂಧಿಯವರ ವಿಶ್ವಾಸಾರ್ಹ ವಲಯದ ಭಾಗವಾಗಿದ್ದರು.

ಆದರೆ 2014ರಿಂದ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡ ನಂತರ, ಕಾಂಗ್ರೆಸ್‍ ಪಕ್ಷವು ಹೆಚ್ಚಿನ ರಾಜ್ಯ ಚುನಾವಣೆಗಳಲ್ಲಿ ಸೋಲು ಕಂಡಿತು. ಇದರಿಂದ ರಾಹುಲ್ ಗಾಂಧಿಯವರ ನಾಯಕತ್ವದ  ಬಗ್ಗೆ  ಎದ್ದ ಪ್ರಶ್ನೆಗಳ ಮಧ್ಯೆ, ಅವರ ಆಪ್ತವಲಯದಲ್ಲಿದ್ದ ಯುವ ನಾಯಕರು ತಾವು ಸೈಡ್‍ಲೈನ್‍ಗೆ ತಳ್ಳಲ್ಪಟ್ಟೆವು ಎಂದು ಭಾವಿಸಿದರು.

ಇತ್ತೀಚೆಗೆ ರಾಹುಲ್‍ ಗಾಂಧಿಯವರು, “ಬಿಜೆಪಿಯಲ್ಲಿ ಕೊನೆ ಬೆಂಚ್‍ನವರಾಗುತ್ತಾರೆ’ ಎಂದು ಸಿಂಧಿಯಾ ಅವರನ್ನು ಕೆಣಕಿದಾಗ, “ನಾನು ಕಾಂಗ್ರೆಸ್‍ನಲ್ಲಿದ್ದಾಗ ರಾಹುಲ್ ಗಾಂಧಿಯವರು ಈಗಿರುವ ರೀತಿಯಲ್ಲಿಯೇ ಕಾಳಜಿ ವಹಿಸಿದ್ದರೆ ಪರಿಸ್ಥಿತಿ ಬೇರೆ ರೀತಿಯೇ ಇರುತ್ತಿತ್ತು’ ಎಂದು ಸಿಂಧಿಯಾ ಪ್ರತಿಕ್ರಿಯಿಸಿದ್ದರು.


ಇದನ್ನೂ ಓದಿ: ಉತ್ತರಪ್ರದೇಶ : ಜಿತಿನ್ ಪ್ರಸಾದ ಬಿಜೆಪಿ ಸೇರ್ಪಡೆ ಮತ್ತು ಬಿಜೆಪಿಯ ರಾಜಕೀಯ ಲೆಕ್ಕಾಚಾರ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here