ದ್ವಿತೀಯ ಪಿಯುಸಿಯಲ್ಲಿ ತೆಲಂಗಾಣ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಿಂದ INSPIRE ವಿದ್ಯಾರ್ಥಿವೇತನ ಪಡೆದಿದ್ದ ವಿದ್ಯಾರ್ಥಿನಿ ಲಾಕ್‌ಡೌನ್ ಸಮಯದಲ್ಲಿ ವಿದ್ಯಾರ್ಥಿವೇತನ ನೀಡದ ವಿಳಂಬ ಕಾರಣಕ್ಕೆ ನೇಣಿಗೆ ಕೊರಳೊಡ್ಡಿರುವ ಆಘಾತಕಾರಿ ಘಟನೆ ಹೈದರಾಬಾದ್‌ನ ಶಾದ್‌ನಗರದಲ್ಲಿ ನಡೆದಿದೆ.
ದೆಹಲಿಯ ಲೇಡಿ ಶ್ರೀರಾಮ್ ಕಾಲೇಜ್ ಫಾರ್ ವುಮೆನ್‌ನ ವಿದ್ಯಾರ್ಥಿನಿ ಐಶ್ವರ್ಯಾ ರೆಡ್ಡಿ, ಗಣಿತಶಾಸ್ತ್ರದಲ್ಲಿ ತನ್ನ ಎರಡನೇ ವರ್ಷದ ಬಿಎಸ್ಸಿ (ಆನರ್ಸ್) ವ್ಯಾಸಂಗ ಮಾಡುತ್ತಿದ್ದರು. ಮಾರ್ಚ್‌ನಿಂದ ಆಕೆಗೆ ಯಾವುದೇ ವಿದ್ಯಾರ್ಥಿವೇತನದ ಹಣವು ದೊರೆತಿರಲಿಲ್ಲ.
ಕೊರೊನಾದಿಂದ ಲಾಕ್‌ಡೌನ್ ಹೇರಿದಾಗಿನಿಂದ ದರ್ಜಿ ಕೆಲಸ ಮಾಡುತ್ತಿದ್ದ ಆಕೆಯ ತಾಯಿ ಮತ್ತು ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿದ್ದ ತಂದೆ ತುಂಬಾ ಕಷ್ಟಪಡುತ್ತಿದ್ದರು. ವಿದ್ಯಾರ್ಥಿವೇತನದ ಹಣ ಇನ್ನೂ ಆಕೆಗೆ ದೊರೆಯದೇ ಬಾಕಿ ಉಳಿದಿದ್ದ ಕಾರಣ ಆಕೆಯ ಪೋಷಕರು ಮಗಳ ಶಿಕ್ಷಣಕ್ಕಾಗಿ ತಮ್ಮ ಮನೆಯನ್ನು ಅಡವಿಟ್ಟಿದ್ದಾರೆ.
ಮಗಳ ವಿದ್ಯಾಭ್ಯಾಸಕ್ಕಾಗಿ ಕುಟುಂಬವು ತಮ್ಮ ಮನೆಯನ್ನು 2 ಲಕ್ಷ ರೂ.ಗೆ ಅಡಮಾನ ಇಟ್ಟಿತ್ತು, ಚಿನ್ನದ ಆಭರಣಗಳನ್ನು ಮಾರಿದ್ದರು. ಅಕ್ಕ ಐಶ್ವರ್ಯಾ ಶಿಕ್ಷಣಕ್ಕಾಗಿ ಕಿರಿಯ ಸಹೋದರನನ್ನು ಶಾಲೆಯಿಂದ ಬಿಡಿಸಿದ್ದರು. ಆಕೆಯ ಹಾಸ್ಟೆಲ್ ವಸತಿ ಸೌಕರ್ಯಗಳಿಗೆ ಹಣ ವ್ಯವಸ್ಥೆ ಮಾಡಲು ಮತ್ತು ಅವಳನ್ನು ದೆಹಲಿಗೆ ವಾಪಸ್ ಕಳುಹಿಸಲು ರೈಲು ಟಿಕೆಟ್‌ಗಳಿಗೆ ಸಹ ಕುಟುಂಬವು ಹೆಣಗಾಡುತ್ತಿತ್ತು. ಈ ಎಲ್ಲಾ ಘಟನೆಗಳು 19 ವರ್ಷದ ಯುವತಿ ಐಶ್ವರ್ಯಾರನ್ನ ತೀವ್ರ ಒತ್ತಡಕ್ಕೆ ಸಿಲುಕಿಸಿದ್ದವು.
ಇದನ್ನೂ ಓದಿ: ನೆಟ್‌ವರ್ಕ್ ಸಮಸ್ಯೆ: ಆನ್‌ಲೈನ್ ತರಗತಿಗಾಗಿ 5 ಕಿಮೀ ನಡೆಯುವ ವಿದ್ಯಾರ್ಥಿಗಳು!
“ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಕಾರಣದಿಂದಾಗಿ ನನ್ನ ಕುಟುಂಬವು ಸಾಕಷ್ಟು ಖರ್ಚುಗಳನ್ನು ಭರಿಸಬೇಕಾಗಿದೆ. ನಾನು ಅವರಿಗೆ ಹೊರೆಯಾಗಿದ್ದೇನೆ, ನನ್ನ ಶಿಕ್ಷಣ ಅವರಿಗೆ ಹೊರೆಯಾಗಿದೆ. ನಾನು ಶಿಕ್ಷಣವಿಲ್ಲದೆ ಬದುಕಲು ಸಾಧ್ಯವಿಲ್ಲ. ನಾನು ಈ ಬಗ್ಗೆ ಹಲವು ದಿನಗಳಿಂದ ಯೋಚಿಸುತ್ತಿದ್ದೇನೆ. ಸಾವು ಮಾತ್ರ ನನಗೆ ಸರಿಯಾಗಿದೆ ಎಂದು ನಾನು ಭಾವಿಸಿದೆ” ಎಂದು ಐಶ್ವರ್ಯಾ ತನ್ನ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.
ಜೊತೆಗೆ “ಇನ್‌ಸ್ಪೈರ್ ವಿದ್ಯಾರ್ಥಿವೇತನವನ್ನು ಕನಿಷ್ಠ ಒಂದು ವರ್ಷದವರೆಗೆ ಬಿಡುಗಡೆ ಮಾಡಲಾಗಿದೆಯೆಂದು ನೋಡಿ. ಎಲ್ಲರೂ ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ಒಳ್ಳೆಯ ಮಗಳಲ್ಲ” ಎಂದು ಬರೆದಿದ್ದಾರೆ.
ಮೃತ ವಿದ್ಯಾರ್ಥಿನಿ ಐಶ್ವರ್ಯಾ ಐಎಎಸ್ ಅಧಿಕಾರಿಯಾಗಬೇಕೆಂಬ ಆಸೆ ಹೊಂದಿದ್ದರು ಎಂದು ಆಕೆಯ ಕುಟುಂಬ ತಿಳಿಸಿದೆ. ಎರಡು ವರ್ಷಗಳಲ್ಲಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ಸಿ) ಪರೀಕ್ಷೆಗೆ ಹಾಜರಾಗಲು ಅವರು ಸಿದ್ಧತೆ ನಡೆಸಿದ್ದರು ಎಂದು ತಿಳಿಸಿದೆ.
ಇದನ್ನೂ ಓದಿ: ಮೊಹರಂ ಮೆರವಣಿಗೆಯಲ್ಲಿ ಹಿಂಸಾಚಾರ: ಕಣ್ಣು ಕಳೆದುಕೊಂಡ ವಿದ್ಯಾರ್ಥಿಗಳು
ನವೆಂಬರ್ 2 ರಂದು ತೆಲಂಗಾಣ ಮೂಲದ 19 ವರ್ಷದ ಯುವತಿ ಹೈದರಾಬಾದ್‌ನ ಶಾದ್‌ನಗರದಲ್ಲಿರುವ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವರ ಸಾವು ದೆಹಲಿ ವಿಶ್ವವಿದ್ಯಾಲಯದಲ್ಲಿ ಭಾರಿ ಪ್ರತಿಭಟನೆಗೆ ಕಾರಣವಾಗಿದೆ.
ಸಚಿವಾಲಯ ಮತ್ತು ಕಾಲೇಜು ಆಡಳಿತಕ್ಕೆ ಹಲವಾರು ಬಾರಿ ಪತ್ರಗಳನ್ನು ಬರೆದಿದ್ದರೂ ಸಹ ಸಚಿವಾಲಯದಿಂದ ವಿದ್ಯಾರ್ಥಿವೇತನ ನೀಡಲು ವಿಳಂಬವಾಗಿದೆ. ಮಾರ್ಚ್‌ನಿಂದ ವಿದ್ಯಾರ್ಥಿನಿ ತನ್ನ ವಿದ್ಯಾರ್ಥಿವೇತನ ಹಣವನ್ನು ಸ್ವೀಕರಿಸಿಲ್ಲ ಎಂದು ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಐಶ್ವರ್ಯಾ ಅವರು ವಿದ್ಯಾಭ್ಯಾಸ ಮುಂದುವರೆಸಲು ನಡೆಸಿದ ಹೋರಾಟಗಳ ಬಗ್ಗೆ ಎಲ್ಎಸ್ಆರ್ ವಿದ್ಯಾರ್ಥಿಗಳ ಒಕ್ಕೂಟದ ಸಮಿತಿಯು ಕಾಲೇಜು ಆಡಳಿತಕ್ಕೆ ಇಮೇಲ್‌ಗಳನ್ನು ಕಳುಹಿಸಿತ್ತು. ಐಶ್ವರ್ಯಾ ಲ್ಯಾಪ್‌ಟಾಪ್ ಹೊಂದಿರಲಿಲ್ಲ, ಇಂಟರ್‌ನೆಟ್ ಸಂಪರ್ಕ ಕೂಡ ಆಕೆಗೆ ದುಬಾರಿಯಾಗಿತ್ತು. ಆಕೆಯ ಮೊಬೈಲ್ ಡಾಟಾ ಪ್ಯಾಕ್‌ಗಳು ಕೂಡ ಮೊದಲೇ ಆರ್ಥಿಕ ಸಮಸ್ಯೆಗಳಿದ್ದ ಕುಟುಂಬಕ್ಕೆ ಮತ್ತಷ್ಟು ಹೊರೆಯಾಗುತ್ತಿದ್ದವು ಎಂದು ಕಾಲೇಜು ಕಮಿಟಿ ತಿಳಿಸಿದೆ.
ಸಮಗ್ರ ಶಿಕ್ಷಣ ಸಮಿತಿ ನಡೆಸಿದ ಸಮೀಕ್ಷೆಯಲ್ಲೂ ಐಶ್ವರ್ಯಾ ತನ್ನ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ. ಇಂಟರ್‌ನೆಟ್ ಸಂಪರ್ಕ ತೊಂದರೆಯಿಂದಾಗಿ ಪ್ರತಿದಿನ ನಡೆಸಲಾಗುವ ಐದು ರಿಂದ ಎಂಟು ಗಂಟೆಗಳ ಆನ್‌ಲೈನ್ ತರಗತಿಗಳಲ್ಲಿ ಆಕೆ ಕೇವಲ ಮೂರು ಗಂಟೆಗಳಿಗಿಂತ ಕಡಿಮೆ ತರಗತಿಗಳಿಗೆ ಹಾಜರಾಗಬಹುದಿತ್ತು. ಅಗತ್ಯವಿರುವ ಎಲ್ಲ ಅಧ್ಯಯನ ಸಾಮಗ್ರಿಗಳನ್ನು ತಾನು ಸ್ವೀಕರಿಸಿಲ್ಲ ಎಂದು ಸಮಿತಿಗೆ ಆಕೆ ತಿಳಿಸಿದ್ದಳು.
ಇದನ್ನೂ ಓದಿ: ಪ್ರಶ್ನೆಪತ್ರಿಕೆ ಸೋರಿಕೆ: ಬೆಂಗಳೂರು ವಿವಿಯ 40,000 ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ ವಾಪಸ್!
ವಿದ್ಯಾರ್ಥಿನಿ ಐಶ್ವರ್ಯಾ ಮೆರಿಟ್ ಅರ್ಹತೆಯ ಮೇರೆಗೆ ದೆಹಲಿಯ ಎಲ್‌ಎಸ್‌ಆರ್‌ನಲ್ಲಿ ಸೀಟು ಪಡೆದಿದ್ದು, ಕಾಲೇಜು ಹಾಸ್ಟೆಲ್‌ನಲ್ಲಿ ವಾಸವಾಗಿದ್ದರು. ಕಾಲೇಜು ಆಡಳಿತವು ಎರಡನೇ ವರ್ಷಕ್ಕೆ ಪ್ರವೇಶಿಸುವ ವಿದ್ಯಾರ್ಥಿಗಳನ್ನು ನವೆಂಬರ್ 10 ರೊಳಗೆ ಹಾಸ್ಟೆಲ್ ಖಾಲಿ ಮಾಡುವಂತೆ ಹೇಳಿತ್ತು. ಇದು ಆಕೆಗೆ ಮತ್ತಷ್ಟು ಕಷ್ಟಕರವಾಗಿದೆ. ಐಶ್ವರ್ಯಾಗೆ ನವೆಂಬರ್ 7 ರೊಳಗೆ ಹಾಸ್ಟೆಲ್ ಖಾಲಿ ಮಾಡುವಂತೆ ಹಾಸ್ಟೆಲ್ ವಾರ್ಡನ್ ವಾಟ್ಸಾಪ್ ಸಂದೇಶವನ್ನು ಕಳುಹಿಸಿದ್ದಾರೆ ಎಂದು ವರದಿಯಾಗಿದೆ.
ఈ అత్యంత విచారకరమైన సమయంలో ఈ విద్యార్థిని కుటుంబ సభ్యులకు నా ప్రగాడ సంతాపం తెలుపుతున్నాను.
ఉద్దేశ పూర్వకంగా చేసిన నోట్ల రద్దు మరియు లాక్డౌన్ ద్వారా, బీజేపి ప్రభుత్వం లెక్కలేనన్ని కుటుంబాలను నాశనం చేసింది.
ఇది నిజం! ఇదే నిజం!! pic.twitter.com/mSszEES6ha
— Rahul Gandhi (@RahulGandhi) November 9, 2020
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ವಿದ್ಯಾರ್ಥಿಯ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದ್ದಾರೆ.
“ಉದ್ದೇಶಪೂರ್ವಕವಾಗಿ ನೋಟು ರದ್ದತಿ ಮತ್ತು ಲಾಕ್ ಡೌನ್ ಮೂಲಕ ಬಿಜೆಪಿ ಸರ್ಕಾರ ಅಸಂಖ್ಯಾತ ಕುಟುಂಬಗಳನ್ನು ನಾಶಪಡಿಸಿದೆ” ಇದು ಸತ್ಯ! ಇದೇ ಸತ್ಯ !! ಎಂದು ಆರೋಪಿಸಿದ್ದಾರೆ.
ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ: 104


