Homeಕರ್ನಾಟಕಹಿಂಗಿದ್ದ ನಮ್ಮ ರಾಮಣ್ಣ-10: "ನನ್ನ ವರ್ಗಾವಣೆ ಹಿಂದೆ ಮಸಲತ್ತದೆ. ನನಿಗೆ ತೊಂದ್ರೆ ಕೊಡ್ಲೇಬೇಕು ಅಂತ ಹಿಂಗೆ...

ಹಿಂಗಿದ್ದ ನಮ್ಮ ರಾಮಣ್ಣ-10: “ನನ್ನ ವರ್ಗಾವಣೆ ಹಿಂದೆ ಮಸಲತ್ತದೆ. ನನಿಗೆ ತೊಂದ್ರೆ ಕೊಡ್ಲೇಬೇಕು ಅಂತ ಹಿಂಗೆ ಮಾಡವುರೆ”

- Advertisement -
- Advertisement -

ರಾಮಣ್ಣ ಕೊಡಿಯಾಲದ ಪಿ.ಹೆಚ್.ಯು ಸೆಂಟರ್‌ಗೆ ವರ್ಗಾವಣೆ ಅದಾಗ ನಮಗ್ಯಲ್ಲ ಒಂಥರ ಬೇಜಾರಾಯ್ತು. ಅವನಲ್ಲಿಗೋಗಿ ಸೇರಿಕಂಡ ಮ್ಯಾಲೆ ನಾನೋದೆ. ಗದ್ದದ ಮ್ಯಾಲೆ ಕೈಯ್ಯಾಕ್ಕಂಡ್ ಸುಮ್ಮನೆ ಕೂತಿದ್ದ. ನನ್ನೋಡಿ “ಬಾಲ” ಅಂದ. “ನೀನೋದ ಕಡಿಕ್ಯಲ್ಲ ಬತ್ತಿನಿ ಅಂದ್ರೆ ಬಾಲವೆಯ ಬುಡು” ಅಂತ ನಗಾಡಿದೆ. ಕೊಡಿಯಾಲ ಅಪರಿಚಿತ ಜಾಗೇನು ಆಗಿರಲಿಲ್ಲ. ಅವುನೆಲ್ಲೆ ಹೋಗ್ಲಿ ವಸಬನಂಗೆ ಕಾಣ್ತಿರಲಿಲ್ಲ. ಅವುನಿಗೆ ಸಾಮಾಜಿಕವಾಗಿ ಒಳ್ಳೆ ಹೆಸರಿದ್ದದ್ದರಿಂದ ಯಲ್ಲ ಗೌರವಿಸೋರು. ಡಾಕ್ಟರ್ ಕೆಲಸದ ಜೊತೆಗೆ, ಆಸುಪತ್ರೆ ಸುತ್ತ ಮರಗಿಡ ನೆಟ್ಟಗಂಡು ಕೃಷಿ ಕೆಲಸನೂ ಶುರುಮಾಡಿದ. ಅವುನೊಬ್ಬ ಪರಿಸರ ಪ್ರೇಮಿ. ನಾನು ಹೋದಾಗ್ಯಲ್ಲ ಅವುನು ನೆಟ್ಟ ಗಿಡ ನೋಡದೆ ಆಗದು. ಮನುಸುನ ಕಾಯ್ಲೆಗೆ ಔಷಧೋಪಚಾರ ಯಂಗೊ ಪರಿಸರಕ್ಕೆ ಗಿಡಗ್ಯಂಟೆ ನೆಡದು ಅಷ್ಟೇ ಮುಖ್ಯ ಅಂತಿದ್ದ. ಅದ ಕೊಡಿಯಾಲದ ಆಸುಪತ್ರೆ ಆವರಣದಲ್ಲಿ ಮಾಡಿ ತೋರಿಸಿದ. ಇವತ್ತು ಕೊಡಿಯಾಲಕ್ಕೆ ಹೋಗಿ ನೋಡಿದ್ರೆ ಆಸುಪತ್ರೆ ಆವರಣ ನಾನಾ ಜಾತಿ ಮರಗಿಡಗಳಿಂದ ತುಂಬಿದೆ. ವಾತಾವರಣವೆ ತಂಪಗ್ಯದೆ. ರಾಮಣ್ಣ ಕೊಡಿಯಾಲದ ಆಸುಪತ್ರೆ ಆವರಣದಲ್ಲಿ ಗಿಡಗ್ಯಂಟೆ ನೆಡತ ಹೆಂಡತಿ ಮಕ್ಕಳ ಜೊತೆ ಆರಾಮಾಗಿರುವಾಗ, ಆಗಿನ ಸರಕಾರದ ಪಿತೂರಿಗಾರರು ಅವುನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ರು. ಅದು ಎಮರ್ಜೆನ್ಸಿ ಕಾಲ. ರಾಮಣ್ಣ ಈ ಹಿಂದೆ ಲೋಹಿಯ, ಜೆ.ಪಿ ಬಗ್ಗೆ ಮಾತಾಡಿದ್ದು ಇದೆ. ಕಾಂಗ್ರೆಸ್‌ನ ಟೀಕಿಸಿದ್ದೂ ಇದೆ. ಜೆ.ಪಿ ಚಳವಳಿ ಜೋರಾಗಿದ್ದಾಗ್ಲೆ ಅಲಹಾಬಾದ್ ಹೈಕೋರ್ಟು ತೀರ್ಪು ಇಂದಿರಾಗಾಂಧಿ ವಿರುದ್ಧ ಬಂತು. ಇಂದಿರಾಗಾಂಧಿ ಎಮರ್ಜೆನ್ಸಿ ಹೇರಿದ್ಲು. ರಾಮಣ್ಣ ಜೆ.ಪಿ ಅನುಯಾಯಿ ಆಗಿದ್ರಿಂದ ಆಗಿನ ಜನತಾ ಮಾಧ್ಯಮ ಪತ್ರಿಕೆಲಿ ಏನು ಬರೆದ್ನೋ ಏನೊ. ಬೋರೆಗೌಡರ ಹೆಂಡತಿ ದಮಯಂತಿ ರಾಮಣ್ಣನ ಮ್ಯಾಲೆ ಕ್ಯಂಗಣ್ಣು ಬೀರಿದ್ಲು. ಪರಿಣಾಮ ಏನಪ್ಪ ಅಂದ್ರೆ ರಾಮಣ್ಣನ್ನ ಹಳೇಬೀಡಿಗೆ ವರ್ಗ ಮಾಡ್ತು ಸರಕಾರ. ರಾಮಣ್ಣ ವರ್ಗಾವಣೆಗೆ ಹೆದರೋನಲ್ಲ. ಆದ್ರೆ ಅವುನ ವರ್ಗ ನ್ಯಾಯವಾದದ್ದಲ್ಲ. ಅದ್ಕೆ ಅವುನಿಗೆ ಸಿಟ್ಟು ಬಂದಿತ್ತು. ಅದರಲ್ಲೂ ಅವುನು ವಿರೋಧಿಸೋ ಸರಕಾರ ಅವುನ ಮ್ಯಾಲೆ ಸೇಡು ತೀರಿಸಿಗೊಂಡಿತ್ತು.

ನಾನಾಗ ನಿರುದ್ಯೋಗಿ. ಎಲ್ಲಿ ಅಂದ್ರಲ್ಲಿ ತಿರುಗಕ್ಕೆ ನನಿಗ್ಯಾವ ನಿಬಂಧನೂ ಇರಲಿಲ್ಲ. ಆದ್ರಿಂದ ರಾಮಣ್ಣನ್ನ ನೋಡಕ್ಕೆ ಹಳೆಬೀಡಿಗೋದೆ. ಅಲ್ಲವುನು ಮಂಕಾಗಿದ್ದ. ಹಳೆಬೀಡು ಶಿಲ್ಪಕಲೆ ಪ್ರವಾಸಿತಾಣ. ಅಂತ ಜಾಗದಲ್ಲಿದ್ರು ಡಲ್ಲಾಗಿರಕ್ಕೆ ಕಾರಣ ಸರಕಾರದ ಸೇಡಿನ ಕ್ರಮ ಅನ್ನದು ಗೊತ್ತಾಯ್ತು. ರಾಮಣ್ಣ ಅಂಗಿರದ ನಾನು ನೋಡಿದ್ದು ಅದೇ ಮೊದ್ಲು. ನಮ್ಮ ಮಾತುಕತೆಲಿ ಯಾವ ಉತ್ಸಾಹನೂ ಇರಲಿಲ್ಲ. ಏನೇ ಆಗ್ಲಿ ರಾಮಣ್ಣನಿಗೆ ನಮ್ಮ ಕಾಡೆ ಸರಿ ಅನ್ನಸ್ತು. ಊರಿಗೆ ಬಂದೆ. ಚುನಾವಣೆ ಘೋಷಣೆ ಆಯ್ತು. ನಮ್ಮಣ್ಣ ಆಗ್ಲೆ ಅರಸು ಜೊತೆ ಸೇರಿಕಂಡಿದ್ರು. ನಿರುದ್ಯೋಗಿಯಾದ ನಾನು ಚುನಾವಣೆ ಪ್ರಚಾರಕ್ಕೋದೆ. ಚುನಾವಣೆ ಮುಗಿದು ನಮ್ಮಣ್ಣ ಗೆದ್ದ. ಶ್ರೀಕಂಠಯ್ಯನೋರು ಗೆದ್ದಿದ್ರು. ಅವರಿಗೆ ನನ್ನ ನಿರುದ್ಯೋಗ ಗೊತ್ತಿತ್ತು. ಆದ್ರಿಂದ ಏನಾದ್ರು ಮಾಡಿ ಕಾರ್ಪೊರೇಷನ್ ಆರೋಗ್ಯಾಧಿಕಾರಿಯಾಗನ ಅಂತ ಪ್ಲಾನು ಮಾಡಿದ್ದೆ. ಅಣ್ಣ ಆಗ್ಲೆ ಜನರಲ್ ಹಾಸ್ಟಲಲ್ಲಿ ಇದ್ದಿದ್ರಿಂದ ನಾನು ಅಲ್ಲೆ ಇರಕ್ಕೆ ಶುರು ಮಾಡಿದೆ. ಆಗ ಮಾದಪ್ಪನ ಮುದ್ದೆ ಹೋಟ್ಲು ಭಾಳ ಪೇಮಸ್ಸು. ಯರಡು ರೂಪಾಯಿಗೆ ಮುದ್ದೆ ಊಟ ಕೊಡೋನು. ಸಾಯಂಕಾಲಾಯ್ತು ಅಂದ್ರೆ ಜನರಲ್ ಹಾಸ್ಟೆಲ್ ಉಸ್ತುವಾರಿಲಿದ್ದ ನಾಗರಾಜನಿಗೆ 20 ರುಪಾಯಿ ಕೊಟ್ರೆ ರೂಮು ಕೊಡೋನು. ನಮ್ಮಣ್ಣನ ರೂಮಲ್ಲಿ ಸಿ.ಎಂ ಇಬ್ರಾಹಿಮನೂ ಇದ್ದ. ಆಗವುನಿಗೆ ನಮ್ಮಣ್ಣನ ರೂಮು ಬುಟ್ರೆ ಬೇರೆ ಜಾಗವೇ ಇರಲಿಲ್ಲ. ಅವುನ ಅಣ್ಣನ ಜೊತೆ ಇದ್ದಿದ್ರಿಂದ ನಾನು ಬ್ಯಾರೆ ರೂಮು ಮಾಡಬೇಕಿತ್ತು. ಭಾಳ ದಿನ ಹಿಂಗೆ ಇದ್ದೆ. ಯಾರಾದ್ರು ಅಣ್ಣನಿಗೆ ಊಟ ತರೋರು. ಆ ಊಟ ಬಾಡಿನೆಸರಾದಗಿರಬೇಕಿತ್ತು. ಜತೆಗೆ ಯಣ್ಣೆ ಇರಲೇಬೇಕಿತ್ತು. ಅಣ್ಣನಿಗೆ ಈ ತರ ಆಂಜನೇಯನ ತಳಗೆ ಬಂದಾಗ ನಾನೂ ಪಾಲ್ದಾರಾಯ್ತಿದ್ದೆ. ಅದು ನನ್ನ ಅನಿವಾರ್ಯ ಸ್ಥಿತಿ. ಎಲ್ಯಾರ ಪೋಸ್ಟಿಂಗ್ ಸಿಗಗಂಟ ಅಲ್ಲೇ ಇರಬೇಕಾಗಿತ್ತು. ಈತರ ಯೋಚನೆ ಮಾಡ್ತಯಿದ್ದಾಗ, ಅಲ್ಲಿ ರಾಮಣ್ಣ ಕಾಣಿಸಿಗಂಡ.

“ಏನಪ್ಪ ಹಳೆಬೀಡು ವಿಶೇಷ” ಅಂದೆ.

“ಸುಮ್ಮನೆ ಕೂತಗಲ ಅಮಿಕ್ಕಂಡು. ಬೆಂಗಳೂರಿಗೆ ಬಂದು ಬ್ಯಣೆ ಪೆಟ್ಟಿಗಂದು ಕುಂತಿದ್ದಿಯಲ್ಲ. ನಿನಿಗೇನು ಗೊತ್ಲ ನಮ್ಮ ಕಷ್ಟ” ಅಂದ.

“ಅದೇನೇಳಪ್ಪ ನಿನ್ನ ಕಷ್ಟ” ಅಂದೆ.

“ವರ್ಗಾ ಮಾಡಿಸಬೇಕು ಕಲ. ನಾನಲ್ಲಿರದಿಲ್ಲ. ನಿಮ್ಮಣ್ಣನ ಕೇಳು” ಅಂದ.

“ಬರಹಗಾರ ನೀನು. ಕರ್ನಾಟಕದ ಯಾವ ಮೂಲೆಗಾಕಿದ್ರು ಹೋಗಬೇಕು ಅನುಭವ ಪಡ್ಕೊಬೇಕು. ಇದ್ದ ಜಾಗದಲ್ಲೆ ಇರಬಾರ್ದು” ಅಂದೆ.

“ಅದು ನನಿಗೂ ಗೊತ್ತು ಕಲ. ನನ್ನ ವರ್ಗಾವಣೆ ಹಿಂದೆ ಮಸಲತ್ತದೆ. ನನಿಗೆ ತೊಂದ್ರೆ ಕೊಡ್ಲೇಬೇಕು ಅಂತ ಹಿಂಗೆ ಮಾಡವುರೆ. ಅದಕೆ ಉತ್ತರ ಕೊಡಬೇಕು ಕಲ” ಅಂದ.

ಆದ್ರೆ ರಾಮಣ್ಣ ಸ್ವಾಭಿಮಾನಿ. ತನ್ನ ಸಮಸ್ಯೆಗೆ ಯಾವ ರಾಜಕಾರಣಿ ಹತ್ರನೂ ಹೇಳಿಕೊಳ್ಳೋಕೆ ಆಗದೆ ನನ್ನತ್ರಕೆ ಬಂದಿದ್ದ.

“ಸರಿಯಪ್ಪ ಸಿಚುಯೇಶನ್ ಅಂಗಿದಿಯಾ, ನಿಂದು ಗೆಜೆಟೆಡ್ ಪೋಸ್ಟು. ವರುಸಕ್ಕೆ ಮುಂಚೆಗೆ ವರ್ಗಮಾಡದಿಲ್ಲ. ಅಂಗೇನಾದ್ರು ಮಾಡಬೇಕಾದ್ರೆ ಮುಖ್ಯಮಂತ್ರಿಗೆ ಸಿಫಾರಸ್ ಮಾಡಬೇಕು. ನಿನಿಗೆಲ್ಲಿ ಬೇಕು ಹೇಳು” ಅಂದೆ.

“ನೀನೆ ವರ್ಗ ಮಾಡೋನಂಗೆ ಕೇಳ್ತಿಯಲ್ಲಾ. ಬೆಳ್ಳೂರಿಗೆ ಬೇಕು ಮಾಡುಸ್ತಿಯಾ” ಅಂದ. ಬೆಳ್ಳೂರು ಅಂದ್ರೆ ನಮ್ ತಾಲೂಕು. ಅಲ್ಲಿಗೆ ಮಾಡಿಸಬೇಕು ಅಂದ್ರೆ ನಮ್ಣಣ್ಣನ್ನೆ ಹಿಡಿಬೇಕು. ನಮ್ಮಣ್ಣನ ವಿಶೇಷ ಅಂದ್ರೆ ಅವುನು ಮನೆಲಿದ್ರು ಇಲ್ಲ ಅನ್ನಕಾಯ್ತಿರಲಿಲ್ಲ. ರೂಮಿನ ಗೊರಕೆ ನಡುಮನಿಗೆ ಕೇಳದು. ಅವುನು ಮಂತ್ರಿಯಾದಾಗ್ಲು ಗೊರಕೆ ಸೌಂಡ್ ನಿಲ್ಲೊಗಂಟ ಅಧಿಕಾರಿಗಳು ಕೂತಿರೋರು. ಈಗ್ಲು ಅಂಗೆ ಆಯ್ತು. ಅಣ್ಣನ ಗೊರಕೆ ನಿಂತ ಮ್ಯಾಲೆ ವಳಿಕೋಗಿ, “ಬೆಸಗರಳ್ಳಿ ರಾಮಣ್ಣ ಬಂದವುನೆ” ಅಂದೆ. “ವಳ್ಳೆದು ಭಾಳ ದಿನಾಗಿತ್ತು ನೋಡಿ” ಅಂದ್ರು. “ಅವುನದೊಂದು ಸಮಸ್ಯೆ ತಂದವುನೆ” ಅಂದೆ.

“ಏನಂತೆ” ಅಂದ್ರು.

“ಅವುನು ಹಳೆಬೀಡಲ್ಲಿರಕ್ಕಾಗಲ್ಲ ಟ್ರಾನ್ಸ್‌ಫರ್ ಆಗಬೇಕಂತೆ” ಅಂದೆ.

“ಎಲ್ಲಿಗೆ ಬೇಕಂತೆ” ಅಂದ್ರು.

“ಬೆಳ್ಳೂರಿಗೆ ಬೇಕಂತೆ” ಅಂದೆ.

“ಅಲ್ಯಾರವುರೆ?”

“ಜಿ ಮಾದೇಗೌಡ್ರ ಸಮಂದಿ ಅವುನೆ” ಅಂದ ನಾನು, ಇದೇ ಸರಿಯಾದ ಟೈಮು ಅಂತ, “ಆ ಹುಡುಗ ಪೇಶಂಟ್ ಸರಿಯಾಗಿ ನೋಡದಿಲ್ಲ. ಒಂಥರ ಉಡಾಫೆ. ಡಾಕ್ಟರಾದೋನು ಸಮಾಧಾನದಿಂದ ರೋಗಿ ನೋಡ್ಬೇಕು. ಸಾಂತ್ವನದ ಮಾತಾಡಬೇಕು. ಇದವುನಿಗಿಲ್ಲ. ರಾಮಣ್ಣ ನಮ್ಮ ಜನಗಳ ಜೊತೆ ಇದ್ದೋನು ಅವುನೆ ಸರಿ ಬೆಳ್ಳೂರಿಗೆ” ಅಂದೆ.

ಕೂಡ್ಲೆ “ಲೆಟರ್ ತಗೊ” ಅಂದ್ರು. ನಮಣ್ಣ ಡಿಕ್ಟೇಷನ್ ಹೇಳದ್ರಲ್ಲಿ ನಿಸ್ಸೀಮರು. ಅವರು ಭಾಷೆ ವಿನಂತಿಯಲ್ಲ. ಪರಿಣಾಮ ಬೀರಂಗೆ ಲೆಟರ್ ಬರಸತಿದ್ರು. ಅವತ್ತು ಮುಖ್ಯಮಂತ್ರಿ ದೇವರಾಜ ಅರಸುಗೆ ಬರಸಿದ್ರು. ಲೆಟರ್‌ನ ನಾನೆ ಮಡಿಕಂಡಿದ್ದೆ.

ಸಾಯಂಕಾಲಾಯ್ತಿದ್ದಂಗೆ ಹೆಚ್.ಎಲ್ ಕೇಶವಮೂರ್ತಿ ಅವುರ ಬ್ರದರು ರಾಮಣ್ಣನ ಫ್ರೆಂಡ್ಯಲ್ಲ ಬಂದ್ರು. ರಾಮಣ್ಣನ ನೋಡಿ ಓ ರಾಮಣ್ಣ ಬಂದವುನೆ ಅಂತ ಯಲ್ಲ ಖುಷಿಯಾದ್ರು. “ರಾಮಣ್ಣನಿಗೆ ಟ್ರಾನ್ಸ್‌ಫರ್ ಬೇಕಂತೆ ಹಳೆಬೀಡಿಂದ” ಅಂದೆ. ಕೇಶವಮೂರ್ತಿಯವರು ನಮ್ಮ ರಾಮಣ್ಣನಿಗೆ ಹಳೇಬೀಡಿಗಿಂತ ಬೇಲೂರಾಗಿದ್ರೆ ಶಿಲಾಬಾಲಿಕೆರು ನೋಡಿಕಂಡು ಕತೆ ಬರಿಯನು ಅಂದ್ರು.

“ಸುಮ್ಮನಿರಯ್ಯ ನಂದೆ ನನಿಗಾಗದೆ, ನೀವು ಸುಮಾನ ಆಡಬ್ಯಾಡಿ” ಅಂದ. ಯಲ್ರೂ ಅಲ್ಲೇ ಉಳುದ್ರು. ನಾಕು ರೂಮು ಮಾಡಿದೆ. “ರಾಮಣ್ಣ ಏನ್ನೊ ನ್ಯನಿಸಿಗಂಡೋನಂಗೆ ಹ್ವಂಟ. ವಾಕೊಯ್ತ ಯಿದ್ದಾಗ ಯಸ್ಕೇಪಾಗದ, ಜೊತೆಲಿದ್ದಾಗ ತಪ್ಪಿಸಿಗಳದು ಹ್ವಸದೇನಲ್ಲ ಅವನ್ಗೆ. ಅಂಗೆ ಹೋದೊನು ವಾಪಸು ಬಂದಾಗ ಡಲ್ಲಾಗಿದ್ದ. ಆಗ ಯಲ್ರು ಖುಷಿಯಾಗಿರಕ್ಕೆ ಏನು ಮಾಡಬೇಕೊ ಅದನ್ನ ಮಾಡಿದೊ!

ಅದು ದೇವರಾಜ ಅರಸು ಕಾಲ. ಅರಸು ನಿಜವಾಗ್ಲು ರಾಜನಂಗೆ ಮ್ಯರಿತಿದ್ರು. ಕರ್ನಾಟಕದ ಯರಡು ಪ್ರಬಲ ಜಾತಿ ಪ್ರಭಾವ ಹತ್ತಿಕ್ಕೆ ಹಿಂದುಳಿದ ವರ್ಗನ ಎತ್ತಿಕಟ್ಟಿದ್ರು. ಇಂದಿರಾಗಾಂಧಿ ಬೆಂಬಲ ಇತ್ತವುರಿಗೆ. ಮಂಡ್ಯ ಜಿಲ್ಲೆ ಲೀಡ್ರಗಳ ಪೈಕಿ ನಮ್ಮಣ್ಣನ ಕಂಡ್ರೆ ತುಂಬ ಅಭಿಮಾನ. “ಕೃಷ್ಣಪ್ಪಗೌಡ್ರೆ” ಅಂತ ಪ್ರೀತಿಯಿಂದ ಕರಿತಿದ್ರು. ನಮಿಗೆ ಮುಖ್ಯಮಂತ್ರಿ ಹತ್ರ ಹೋಗಕ್ಕೆ ಯಾವ ಅಂಜಿಕೆನೂ ಇರಲಿಲ್ಲ. ಆದ್ರು ಅರಸು ನೋಡಕೋಗದೆ, ಸಿಎಂ ಕಚೆರಿ ಸೆಕ್ರೆಟರಿ ಹತ್ರ ಹೋದೊ. ಆ ಸೆಕ್ರೆಟ್ರಿ ನಮ್ಮ ತಾಲೂಕಿನ ಹುಡುಗ. ನಿನಿಗಿನ್ನೊಂದು ವಿಷಯ ಗೊತ್ತಾ. ವಿಧಾನಸೌಧ ಮತ್ತೆ ಕೋರ್ಟು ಬಾಗಲಲ್ಲಿದ್ದೊರ್ಯಲ್ಲ ನಮ್ಮ ನಾಗಮಂಗಲದೋರೆಯ. ಮುಖ್ಯಮಂತ್ರಿ ಕಚೇರಿ ಬೀಗದ ಕೈ ಕೂಡ ನಾಗಮಂಗಲದೊರತ್ರ ಇತ್ತು. ಯಾಕೆ ಅಂದ್ರೆ ಆಗ ನಮ್ಮ ಜನಕೆ ವಿದ್ಯೆ ಇರಲಿಲ್ಲ, ಆದ್ದರಿಂದ ಕೋರ್ಟು ವಿಧಾನಸೌದ ಕಾಯೋ ಕ್ಯಲಸ ಸಿಕ್ಕಿದ್ವು. ಅದ್ನೆ ನಂಬಿಕೆಯಿಂದ ಮಾಡತಿದ್ವು. ಅಂಗಾಗಿ ನಮ್ಮಣ್ಣ ಕೊಟ್ಟ ಲ್ಯಟ್ರು ನಮ್ಮ ಹುಡುಗನಿಗೆ ಕೊಟ್ಟೊ. ಆ ಲೆಟ್ರು ಕ್ಯಲಸ ಮಾಡದ್ರಲ್ಲಿ ಯಾವ ಅನುಮಾನಾನೂ ಇರಲಿಲ್ಲ. ಆದ್ರು ಲೆಟ್ರು ಊರ್ಜಿತವಾಗಿ ಆರ್ಡರಾಗಬೇಕಾದ್ರೆ ನಾವೆಲ್ಲ ಇದ್ದು ಮೂವ್ ಮಾಡಿಸಬೇಕಾಗಿತ್ತು. ಇದನ್ನ ಚರ್ಚೆ ಮಾಡಿದ ಕೇಶವಮೂರ್ತಿ ಟೀಮು “ರಾಮಣ್ಣ ನೀನು ಹಳೆಬೀಡಿಂದ ಬಂದು ಹೋಗಿ ಲೆಟರ್ ಮೂವ್ ಮಾಡಸದಕ್ಕಿಂತ ಕಮಲಾಕ್ಷನೆ ಇಲ್ಲಿದ್ದು ಮಾಡ್ತನೆ ಬುಡು” ಅಂದ್ರು.

“ಮಾಡ್ಲಿ ಬುಡಿ. ಇಲ್ಲಿದ್ದಕಂಡು ಅವುನಿಗಿನ್ನೇನು ಕ್ಯಲಸ” ಅಂದ.

“ಅವುನು ಲೆಟ್ರು ಮೂವ್ ಮಾಡಸೊ ವಿಷಯದಲ್ಲಿ ಓಡಾಡಬೇಕಾದ್ರೆ ಖರ್ಚು ಬತ್ತದೆ ಅದ್ಕೆ ಒಂದ್ಯರಡು ಸಾವುರ ಕೊಡವುನ ಕೈಗೆ” ಅಂದ್ರು.

ರಾಮಣ್ಣ ಬಾಡು ಒಳ್ಳೆ ಡ್ರಿಂಕ್ಸ್ ವಿಷಯದಲ್ಲಿ ಸಡನ್ನಂತ ಜೇಬಿಗೆ ಕೈಯಾಕತಿದ್ದವ್ನು, ಈಗ್ಯಾಕೊ ತಡಮಾಡಿ ತಗಲ ಅಂತ ನೂರ್ರುಪಾಯಿ ನೋಟಗಳ ಎಣಿಸಿಕೊಟ್ಟ. ಯಲ್ಲ ವಾಪಸ್ ಹೋದ್ರು ನಾನು ಅಲ್ಲಿದ್ದಕಂಡು ಓಡಾಡಿದೆ. ಒಂದು ವಾರದಲ್ಲಿ ಆರ್ಡರ್ ಬಂತು. ದೇವರಾಜ ಅರಸು ಕೃಷ್ಣಪ್ಪನವರ ಮ್ಯಾಲಿಟ್ಟಿದ್ದ ನಂಬುಕೆ, ಆರ್ಡರ್ ನೋಡಿದ ಕೂಡ್ಲೆ ನಮಗೆ ಮನವರಕೆ ಆಯ್ತು.

ಹೇಳ್ದವ್ರು: ಡಾ. ಕಮಲಾಕ್ಷಣ್ಣ
ಬರ್ಕಂಡವ್ರು: ಬಿ ಚಂದ್ರೇಗೌಡ


ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ-9; “ಉರುಬಾಡು ಮಾಡಿಕಂಡು ತಿಂತಿವಿಕಲ, ಬೇಕಿದ್ರೆ ಬಾ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...