ಬಿಜೆಪಿ ಪರವಾಗಿ ಪ್ರೊಪಗಾಂಡ ಸೃಷ್ಟಿಸುವ ಮತ್ತು ಫೇಕ್‌‌ ಫ್ಯಾಕ್ಟರಿ ಎಂದೇ ಕುಖ್ಯಾತಿ ಹೊಂದಿರುವ ‘ಪೋಸ್ಟ್‌ಕಾರ್ಡ್ ಕನ್ನಡ’ ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಇತ್ತೀಚೆಗೆ ಮೃತಪಟ್ಟ ಲಾವಣ್ಯ ಎಂಬ ವಿದ್ಯಾರ್ಥಿನಿಯ ಸಾವನ್ನು ಕೋಮುದ್ವೇಷಕ್ಕೆ ಬಳಸಿಕೊಳ್ಳುತ್ತಿದೆ.

ವಿದ್ಯಾರ್ಥಿನಿಯ ಸಾವನ್ನು ಬಳಸಿಕೊಂಡು ಕೋಮುದ್ವೇಷ ಮತ್ತು ಸುಳ್ಳು ಸುದ್ದಿಗಳನ್ನು ಪೋಸ್ಟ್‌ಕಾರ್ಡ್ ಹರಡುತ್ತಿದೆ. ಪೋಸ್ಟ್‌ಕಾರ್ಡ್‌ ಕನ್ನಡ ತನ್ನ ಪೋಸ್ಟರ್‌ನಲ್ಲಿ, “ಮಕ್ಕಳನ್ನೂ ಬಿಡಲಿಲ್ಲ ಕುತಂತ್ರಿ ಮಿಷನರಿಗಳು”, “ಧರ್ಮಕ್ಕಾಗಿ ತನ್ನ ಜೀವನವನ್ನೇ ಕಳೆದುಕೊಂಡಳು ಲಾವಣ್ಯ” ಎಂಬ ಪೋಸ್ಟರ್‌ ಅನ್ನು ಜನವರಿ 25 ರಂದು ತನ್ನ ಪೇಜ್‌ನಲ್ಲಿ ಅಪ್ಲೋಡ್ ಮಾಡಿತ್ತು. ಮತ್ತೊಂದು ಪೋಸ್ಟರ್‌ನಲ್ಲಿ “ಮಿಷನರಿಗಳ ಪಾಲಿಕೆ ಹಿಂದೂಗಳೇ ಸುಲಭ ಗುರಿ, ಯಾಕೆಂದರೆ ನಾವು ಅನ್ಯಾಯವನ್ನು ಗಟ್ಟಿಧ್ವನಿಯಲ್ಲಿ ವಿರೋಧಿಸುವುದಿಲ್ಲ. ಈ ಮೃದು ಧೋರಣೆ ಸಾಕು, ಬಲವಂತದ ಮತಾಂತರಕ್ಕೆ ಕಡಿವಾಣ ಬೀಳಬೇಕು” ಎಂದು ಹೇಳಿದೆ.

ಇಷ್ಟೇ ಅಲ್ಲದೆ, ಯೋಗಿ ರಾಕ್ಸ್‌ ಎಂಬ ಫೇಸ್‌ಬುಕ್‌ ಪೇಜ್‌ನಲ್ಲಿ ‘ಪೋಸ್ಟ್‌ಕಾರ್ಡ್‌’ ನ ಇಂಗ್ಲಿಷ್‌ ಪೋಸ್ಟರ್‌ ಒಂದು ಹಂಚಿಕೊಳ್ಳಲಾಗಿದೆ. ಈ ಪೋಸ್ಟರ್‌, “ 17 ವರ್ಷದ ಬಾಲಕಿ ಮತಾಂತರವಾಗಿ ಸನಾತನ ಧರ್ಮ ತೊರೆಯುವುದಕ್ಕಿಂತ ಸಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಒಂದು ಚೀಲ ಅಕ್ಕಿ ಮತ್ತು ಬಾಟಲ್‌ ಮದ್ಯಕ್ಕಾಗಿ ನಾವು ತುಂಬಾ ಜನರನ್ನು ಕಳೆದುಕೊಂಡಿದ್ದೇವೆ” ಎಂದು ಹೇಳಿಕೊಂಡಿದೆ.

ಇದೇ ತರಹದ ಹಲವು ಪೋಸ್ಟರ್‌ಗಳನ್ನು, ಪೋಸ್ಟ್‌ಕಾರ್ಡ್ ಕನ್ನಡ ಮಾಡಿದೆ. ಅದನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಒಟ್ಟಿನಲ್ಲಿ ಪೋಸ್ಟ್‌ಕಾರ್ಡ್ ತನ್ನ ಹಲವು ಪೋಸ್ಟ್‌ಗಳ ಮೂಲಕ, ‘ಬಾಲಕಿಯು ಬಲವಂತದ ಮತಾಂತರಕ್ಕೆ ಬದಲಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಬಿಂಬಿಸುತ್ತಾ, ಮಿಷನರಿಗಳು ನಡೆಸುವ ಶಾಲೆಗಳನ್ನು ಗುರಿಯಾಗಿಸಿ ಕ್ರಿಶ್ಚಿಯನ್ನರ ಮೇಲೆ ಕೋಮುದ್ವೇಷ ಹರಡುತ್ತಿದೆ.

ಏನಿದು ಲಾವಣ್ಯ ಪ್ರಕರಣ?

ತಮಿಳುನಾಡಿನ ತಂಜಾವೂರು ಜಿಲ್ಲೆಯ ಮೈಕಲ್‌ಪಟ್ಟಿಯಲ್ಲಿರುವ ಸೇಕ್ರೆಡ್ ಹಾರ್ಟ್ಸ್ ಹೈಯರ್ ಸೆಕೆಂಡರಿ ಸ್ಕೂಲ್ ಎಂಬ ಬೋರ್ಡಿಂಗ್‌ ಶಾಲೆಯ 12 ನೇ ತರಗತಿಯಲ್ಲಿ ಕಲಿಯುತ್ತಿದ್ದ ಲಾವಣ್ಯ ಎಂಬ 17 ವರ್ಷದ ವಿದ್ಯಾರ್ಥಿನಿ, ಜನವರಿ 9 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಇದರ ನಂತರ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ, ಜನವರಿ 19 ರಂದು ಮೃತಪಟ್ಟಿದ್ದರು.

ತನ್ನ ಮಗಳ ಸಾವಿನ ಬಗ್ಗೆ ಸಿಬಿಐ-ಸಿಐಡಿ ತನಿಖೆಗೆ ಕೋರಿ ಲಾವಣ್ಯ ತಂದೆ ಸಲ್ಲಿಸಿದ್ದ ಮನವಿಯನ್ನು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ವಿಚಾರಣೆ ನಡೆಸುತ್ತಿದೆ. ಬಾಲಕಿಯ ಪೋಷಕರಿಗೆ ತಂಜಾವೂರು ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ, ಅವರ ಹೇಳಿಕೆಯನ್ನು ದಾಖಲಿಸಲು ಸೂಚಿಸಲಾಗಿದ್ದು, ಅದನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಜನವರಿ 28 ರ ಶುಕ್ರವಾರದಂದು ನ್ಯಾಯಾಲಯವು ಈ ಪ್ರಕರಣದ ಮುಂದಿನ ವಿಚಾರಣೆ ನಡೆಸಲಿದೆ.

ಪೋಸ್ಟ್‌ಕಾರ್ಡ್‌ ಹೇಳುತ್ತಿರುವ ‘ಬಲವಂತದ ಮತಾಂತರ’ ನಿಜವೇ?

ಜನವರಿ 20 ರಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದ ವಿಡಿಯೊ ಆಧಾರದಲ್ಲಿ ಇಡೀ ಪ್ರಕರಣದಲ್ಲಿ ಪೋಸ್ಟ್‌ಕಾರ್ಡ್ ಕಟ್ಟಿಕೊಡುತ್ತಿದೆ. ಅಣ್ಣಾಮಲೈ ಅವರು ಈ ವಿಡಿಯೊ ಪೋಸ್ಟ್‌ ಮಾಡಿದ್ದಾಗ ವಿದ್ಯಾರ್ಥಿನಿಯು ಮೃತಪಟ್ಟು ಒಂದು ದಿನವಾಗಿತ್ತು.

ವಿಡಿಯೊದಲ್ಲಿ ಏನಿದೆ?

ಅಣ್ಣಾಮಲೈ ಅವರು ಪೋಸ್ಟ್‌ ಮಾಡಿದ್ದ 44 ಸೆಕೆಂಡಿನ ಈ ವಿಡಿಯೊದಲ್ಲಿ, “ಎರಡು ವರ್ಷಗಳ ಹಿಂದೆ ರಾಖಿಲ್‌‌ ಮೇರಿ ಎಂಬವರು, ನಿಮ್ಮ ಮಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲೇ, ಅವಳನ್ನು ನಾವೇ ಓದಿಸುತ್ತೇವೆ ಎಂದು ನನ್ನ ಪೋಷಕರೊಂದಿಗೆ ಕೇಳಿದ್ದರು” ಎಂದು ವಿದ್ಯಾರ್ಥಿನಿಯು ಹೇಳುತ್ತಾರೆ.

ಈ ವೇಳೆ ವಿಡಿಯೊ ರೆಕಾರ್ಡ್ ಮಾಡುವ ವ್ಯಕ್ತಿ “ಹಾಗಾಗಿ ನೀನು ಮತಾಂತರ ಆಗದ ಕಾರಣಕ್ಕೆ ನಿನಗೆ ತೊಂದರೆ ನೀಡುತ್ತಿದ್ದಾರೆಯೆ?” ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ವಿದ್ಯಾರ್ಥಿನಿಯೂ, “ಇರಬಹುದು” ಎಂದಷ್ಟೇ ಹೇಳುತ್ತಾರೆ. ಇಷ್ಟಕ್ಕೆ ಈ ವಿಡಿಯೊ ಮುಗಿಯುತ್ತದೆ. ಗಮನಿಸಬೇಕಾದ ವಿಷಯವೇನೆಂದರೆ, ಅಣ್ಣಾಮಲೈ ಅವರು ಈ ವಿಡಿಯೊವನ್ನು ವಿದ್ಯಾರ್ಥಿನಿಯು ಮೃತಪಟ್ಟ ಮರುದಿನ ಟ್ವೀಟ್ ಮಾಡುತ್ತಾರೆ.

 

ವಾಸ್ತವದಲ್ಲಿ, ಬಾಲಕಿಯು ತನ್ನನ್ನು ಬಲವಂತವಾಗಿ ಮತಾಂತರ ಮಾಡಿರುವುದರಿಂದ ತಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ನೇರವಾಗಿ ಹೇಳಿಕೊಂಡಿಲ್ಲ. ವಿಡಿಯೊ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ ಈ ಬಗ್ಗೆ ಕೆದಕಿ ಕೇಳಿದಾಗ ಅಷ್ಟೇ ‘ಇರಬಹುದು’ ಎಂದಷ್ಟೇ ಹೇಳಿಕೊಂಡಿದ್ದಾರೆ.

ಹೊಸ ವಿಡಿಯೊ ವೈರಲ್‌!

ಈ ವಿಡಿಯೊವನ್ನು ತಂಜಾವೂರಿನ ವಿಎಚ್‌ಪಿ ನಾಯಕ ಜನವರಿ 17 ರಂದು ಆಸ್ಪತ್ರೆಗೆ ತೆರಳಿ ತಮ್ಮ ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ ಎಂದು ಟಿಎನ್‌ಎಂ ವರದಿ ಮಾಡಿದೆ. ಅವರು ಅಂದು ಇದೇ ರೀತಿಯ ನಾಲ್ಕು ವಿಡಿಯೊವನ್ನು ರೆಕಾರ್ಡ್ ಮಾಡಿದ್ದರು ಎಂದು TNM ತನ್ನ ವರದಿಯಲ್ಲಿ ಹೇಳಿದೆ.

ಇದೀಗ ಮುತ್ತುವೇಲ್‌ ರೆಕಾರ್ಡ್ ಮಾಡಿರುವ ಮತ್ತೊಂದು ಹೊಸ ವಿಡಿಯೊ ಗುರುವಾರ ಲೀಕ್ ಆಗಿದೆ. ಈ ವಿಡಿಯೊದಲ್ಲಿ ಬಾಲಕಿಯು, ತನಗೆ ಹಾಸ್ಟೆಲ್‌ನಲ್ಲಿ ಕೆಲಸ ಮಾಡುವಂತೆ ವಾರ್ಡನ್‌‌ ಒತ್ತಾಯ ಮಾಡುತ್ತಿದ್ದರು. ಈ ಕೆಲಸದಿಂದಾಗಿ ನನಗೆ ಓದಿ ತೊಂದರೆಯಾಗುತ್ತದೆ ಎಂದು ಭಾವಿಸಿ ನಾನು ಆತ್ಮಹತ್ಯೆ ಪ್ರಯತ್ನ ಮಾಡಿದ್ದೇನೆ ಎಂದು ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ.

ಹೊಸ ವಿಡಿಯೊದಲ್ಲಿ ಅವರು, “ಅವರು ಯಾವಾಗಲೂ ಲೆಕ್ಕಗಳನ್ನು ಮಾಡಲು ನನ್ನನ್ನು ಕೇಳುತ್ತಿದ್ದರು. ‘ಇಲ್ಲ ನಾನು ಲೇಟಾಗಿ ಬಂದೆ, ಇದು ನನಗೆ ಏನೂ ಅರ್ಥ ಆಗ್ತಿಲ್ಲ, ಆಮೇಲೆ ಮಾಡ್ತೀನಿ’ ಅಂತ ಹೇಳಿದರೂ ಕೇಳುತ್ತಿರಲಿಲ್ಲ. ‘ಪರವಾಗಿಲ್ಲ ನೀನು ಮೊದಲು ಅಕೌಂಟ್ಸ್ ಮಾಡಿ ಕೊಡು ಆಮೇಲೆ ನಿನ್ನ ಕೆಲಸ ಮಾಡು’ ಎನ್ನುತ್ತಿದ್ದರು. ಅವರು ನನ್ನನ್ನು ಲೆಕ್ಕಗಳನ್ನು ಮಾಡುವಂತೆ ಒತ್ತಾಯಿಸುತ್ತಾರೆ. ನಾನು ಲೆಕ್ಕ ಮಾಡಿದರೂ ಇದು ತಪ್ಪಾಗಿದೆ ಎಂದು ಹೇಳುತ್ತಲೇ, ಒಂದು ಗಂಟೆಯವರೆಗೂ, ಅಲ್ಲಿಯೆ ಕೂರಿಸುತ್ತಾರೆ. 10 ನೇ ತರಗತಿಯಲ್ಲಿ ನಾನು ಫಸ್ಟ್‌ರ್‍ಯಾಂಕ್‌ ಪಡೆದಿದ್ದೇನೆ. ನನಗೆ ನನ್ನ ಓದಿನ ಮೇಲೆ ಸರಿಯಾಗಿ ಗಮನಹರಿಸಲು ಸಾಧ್ಯವಾಗಲಿಲ್ಲ. ನಾನು ಕಡಿಮೆ ಅಂಕಗಳನ್ನು ಪಡೆಯುತ್ತಿದ್ದೆ. ಇದೇ ರೀತಿ ಮುಂದುವರಿದರೆ ನನಗೆ ಓದಲು ಸಾಧ್ಯವಾಗುವುದಿಲ್ಲ ಎಂದು ಭಾವಿಸಿ ನಾನು ವಿಷ ಸೇವಿಸಿದೆ” ಎಂದು ಲಾವಣ್ಯ ವಿಡಿಯೋದಲ್ಲಿ ಹೇಳಿದ್ದಾರೆ.

“ಎಲ್ಲರೂ ಎದ್ದೇಳುವ ಸಮಯಕ್ಕೆ, ನಾನು ಗೇಟ್ ತೆರೆಯಬೇಕು, ನೀರಿನ ಮೋಟಾರು ಆನ್ ಮಾಡಬೇಕು, ಎಲ್ಲರೂ ಊಟ ಮಾಡಿದ ನಂತರ, ಮೋಟಾರ್ ಸರಿಯಾಗಿ ಚಾಲನೆಯಲ್ಲಿದೆಯೇ ಎಂದು ಪರೀಕ್ಷಿಸಬೇಕು, ವಾರ್ಡನ್ ನನಗೊಬ್ಬರಿಗೆ ಎಲ್ಲಾ ಕೆಲಸವನ್ನು ನೀಡುತ್ತಾರೆ….ಕೇಳಿದರೆ, ನೀನು ಜವಾಬ್ದಾರಿಯಿಂದ ಇರುತ್ತಿ ಎಂದು ಹೇಳುತ್ತಾರೆ” ಎಂದು ನೋವು ತೋಡಿಕೊಂಡಿದ್ದಾರೆ.

ಜೊತೆಗೆ ಈ ಹೊಸ ವೀಡಿಯೊವನ್ನು ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ, “ಹಾಸ್ಟೆಲ್‌ನಲ್ಲಿ ಬಿಂದಿ ಅಥವಾ ಬೊಟ್ಟು ಧರಿಸಬೇಡಿ ಎಂದು ಹೇಳಿದ್ದಾರಾ” ಎಂದು ಪ್ರಶ್ನಿಸುತ್ತಾರೆ. ಈ ಪ್ರಶ್ನೆಗೆ ಲಾವಣ್ಯ, ‘‘ಹಾಗೇನೂ ಇಲ್ಲ” ಎಂದು ಉತ್ತರಿಸುತ್ತಾರೆ.

 

ಮುತ್ತುವೇಲ್‌ ರೆಕಾರ್ಡ್ ಮಾಡಿರುವ ನಾಲ್ಕು ವೀಡಿಯೊಗಳಲ್ಲಿ ಕೇವಲ ಒಂದು ವೀಡಿಯೊದಲ್ಲಿ ಮಾತ್ರ ಮತಾಂತರದ ಬಗ್ಗೆಗಿನ ಪ್ರಶ್ನೆಗೆ ವಿದ್ಯಾರ್ಥಿನಿ ‘ಆಗಿರಬಹುದು’ ಉತ್ತರಿಸುತ್ತಾರೆ. ಉಳಿದದರಲ್ಲಿ ಮತಾಂತರದ ಬಗ್ಗೆ ಯಾವುದೆ ಉಲ್ಲೇಖವಿಲ್ಲ ಎಂದು TNM ಹೇಳಿದೆ.

ಮುತ್ತುವೇಲ್ ರೆಕಾರ್ಡ್ ಮಾಡಿರುವ ಮೊದಲ ವೀಡಿಯೊ ವಿದ್ಯಾರ್ಥಿನಿಯ ವೈಯಕ್ತಿಕ ವಿವರಗಳ ಬಗ್ಗೆ ಹೇಳುತ್ತದೆ. ಎರಡನೇ ವಿಡಿಯೋ ಹೊಸದಾಗಿ ಲೀಕ್ ಆಗಿರುವುದಾಗಿದೆ. ಮೂರನೇ ವಿಡಿಯೋ ಈಗಾಗಲೇ ವೈರಲ್ ಆಗಿರುವುದಾಗಿದ್ದು, ಅವರಲ್ಲಿ ಲಾವಣ್ಯ ಎರಡು ವರ್ಷಗಳ ಹಿಂದೆ ಮತಾಂತರ ಪ್ರಸ್ತಾಪದ ಘಟನೆ ಬಗ್ಗೆ ವಿವರಿಸುತ್ತಾರೆ. ನಾಲ್ಕನೇ ವೀಡಿಯೋ ಆಕೆಯ ಮಲತಾಯಿಯದ್ದಾಗಿದೆ.

ಲಾವಣ್ಯ ಅವರ ಹೆತ್ತತಾಯಿ ಸುಮಾರು ಹತ್ತು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇದರ ನಂತರ ಅವರ ತಂದೆ ಮತ್ತೊಂದು ಮದುವೆ ಆಗಿದ್ದರು. ವಿದ್ಯಾರ್ಥಿನಿಗೆ ತೊನ್ನು ರೋಗ ಇತ್ತು ಎನ್ನಲಾಗಿದೆ. ಇದು ಅಂಟುರೋಗ ಅಲ್ಲದಿದ್ದರೂ, ಇದು ಅಂಟುರೋಗ ಎಂದು ನಂಬಿರುವ ಅವರ ಮಲತಾಯಿ ವಿದ್ಯಾರ್ಥಿನಿಗೆ ಮಾನಸಿಕೆ ಕಿರುಕುಳ ನೀಡುತ್ತಿದ್ದರು. ಮನೆಯಲ್ಲಿ ವಿದ್ಯಾರ್ಥಿನಿಗೆ ಬೇರೆಯೆ ಊಟದ ತಟ್ಟೆ, ಚಾಪೆ ನೀಡುತ್ತಿದ್ದರು ಎಂದು ತಿಳಿದು ಬಂದಿದೆ. ಹಾಗಾಗಿ ವಿದ್ಯಾರ್ಥಿನಿ ಮನೆಗೆ ಹೋಗಲು ಒಪ್ಪದೆ ಬೋರ್ಡಿಂಗ್ ಶಾಲೆಯಲ್ಲಿಯೇ ಉಳಿದಿದ್ದಳು ಎನ್ನಲಾಗಿದೆ. ಅಲ್ಲದೆ, ವಿದ್ಯಾರ್ಥಿನಿಯು ಎರಡು ವರ್ಷಗಳ ಹಿಂದ ಚೈಲ್ಡ್‌ ಲೈನ್‌ಗೆ ಕರೆ ಮಾಡಿ ಮನೆಯಲ್ಲಿನ ಕಿರುಕುಳಗಳ ಬಗ್ಗೆ ದೂರು ನೀಡಿದ್ದರು ಎಂದು ಕೂಡಾ ಹೇಳಲಾಗಿದೆ. ಇಡೀ ಘಟನೆಯ ಕುರಿತು ರೆಡ್‌ ಫಿಕ್ಸ್ ಎಂಬು ಯೂಟ್ಯೂಬ್ ಚಾನೆಲ್ ಗ್ರೌಂಡ್ ರಿಪೋರ್ಟ್ ಮಾಡಿದೆ. ಅದನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದು.

ಈ ನಡುವೆ, ಜನವರಿ 20 ರಂದು, “ವಿದ್ಯಾರ್ಥಿನಿಯನ್ನು ಬಲವಂತವಾಗಿ ಮತಾಂತರ ಮಾಡಿದ ಬಗ್ಗೆ ಮಾಹಿತಿ ಇಲ್ಲ” ಎಂದು ತಂಜಾವೂರು ಎಸ್‌ಪಿ ಹೇಳಿದ್ದಾಗಿ ವರದಿಯಾಗಿದೆ.

ಇಷ್ಟೇ ಅಲ್ಲದೆ, ತಂಜಾವೂರ್‌ ಜಿಲ್ಲಾ ಬಿಜೆಪಿ ನಾಯಕ ಕೂಡಾ, ಪ್ರಕರಣವು ಬಲವಂತದ ಮತಾಂತರದ ಕಿರುಕುಳ ಅಲ್ಲ ಎಂದು ಹೇಳಿದ್ದಾರೆ.

“ಇದು 100 ವರ್ಷ ಹಳೆಯ ಶಾಲೆಯಾಗಿದ್ದು, ಇಲ್ಲಿ ಕಲಿಯುತ್ತಿರುವ 65% ವಿದ್ಯಾರ್ಥಿಗಳು ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದಾರೆ. ಶಾಲೆಯ ನೂರು ವರ್ಷಗಳ ಇತಿಹಾಸದಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿ ಮತಾಂತರವಾದ ದಾಖಲೆ ತೋರಿಸಲಿ. ನೂರು ವರ್ಷಗಳಲ್ಲಿ ಒಬ್ಬನನ್ನಾದರೂ ಮತಾಂತರ ಮಾಡಬಹುದಿತ್ತಲ್ಲವೇ? ಈ ಒಬ್ಬ ವಿದ್ಯಾರ್ಥಿಯ ಮತಾಂತರದಿಂದ ಧಾರ್ಮಿಕ ಸಭೆಗಾಗುವ ಲಾಭಗಳಾದರೂ ಏನು?” ಎಂದು ಪ್ರಶ್ನಿಸಿದ್ದಾರೆ.

“ವಿದ್ಯಾರ್ಥಿನಿಗೆ ಮನೆಯಲ್ಲಿ ಮಲತಾಯಿ ಚಿತ್ರಹಿಂಸೆ ನೀಡುತ್ತಿದ್ದರಿಂದ ಮನೆಗೆ ಹೋಗಲು ಹೆದರುತ್ತಿದ್ದರು. ಈ ಬಗ್ಗೆ ನಾವು ಸಂತ್ರಸ್ತೆ ಬಾಲಕಿಯ ಮನೆಗೆ ತೆರಳಿ ಪರಿಶೀಲನೆಯನ್ನೂ ನಡೆಸಿದ್ದೇವೆ” ಎಂದು mirrornow ವರದಿ ಉಲ್ಲೇಖಿಸಿದೆ.

ಪ್ರಕರಣದ ತನಿಖೆ ನಡೆಯುತ್ತಿದೆ, ಇನ್ನೂ ಯಾವುದೆ ತೀರ್ಪು ಹೊರಬಿದ್ದಿಲ್ಲ. ಆದರೆ ಈವರೆಗಿನ ಮತ್ತು ಗುರುವಾರ ಲೀಕ್ ಆಗಿರುವ ವಿಡಿಯೊ ಆಧಾರದಲ್ಲಿ ಹೇಳಬಹುದಾದರೆ, SSLC ಪರೀಕ್ಷೆಯಲ್ಲಿ ಫಸ್ಟ್ ರ್‍ಯಾಂಕ್ ಪಡೆದಿದ್ದೇನೆ ಎಂದು ಹೇಳುವ ಪ್ರತಿಭಾನ್ವಿತ ವಿದ್ಯಾರ್ಥಿನಿಯು, ಹಾಸ್ಟೆಲ್ ವಾರ್ಡನ್ ಕಿರುಕುಳಕ್ಕೆ ಬೇಸತ್ತು, ತನ್ನ ಓದಿಗೆ ತೊಂದರೆಯಾಗುತ್ತದೆ ಎಂಬ ಭಯದಿಂದ ಜನವರಿ 09 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಈ ಹಿಂದೆ ವೈರಲ್ ಆಗಿದ್ದ ವಿಡಿಯೊದಲ್ಲಿ ಮತಾಂತರ ಆಗದೆ ಇರುವುದಕ್ಕೆ ತೊಂದರೆ ಕೊಡುತ್ತಿದ್ದಾರೆಯೆ ವಿಡಿಯೊ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿಯ ಪ್ರಶ್ನೆಗೆ, ವಿದ್ಯಾರ್ಥಿನಿಯು ಇರಬಹುದು ಎಂದಷ್ಟೇ ಹೇಳಿದ್ದಾರೆ. ಆದರೆ ಗುರುವಾಗ ವೈರಲ್ ಆಗಿರುವ ವಿಡಿಯೊದಲ್ಲಿ ತಾನು ಹಾಸ್ಟೆಲ್ ವಾರ್ಡನ್‌ ಕೊಡುತ್ತಿದ್ದ ಮನೆಗೆಲಸದಿಂದ ಬೇಸೆತ್ತು, ಓದಿನಲ್ಲಿ ಕಡಿಮೆ ಅಂಕ ಬರಬಹುದು ಎಂಬ ಭಯಪಟ್ಟು ವಿಷ ಸೇವಿಸಿದ್ದೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಜೊತೆಗೆ ಪೋಸ್ಟ್‌ಕಾರ್ಡ್ ಪ್ರತಿಪಾದಿಸುವಂತೆ, ‘ಧರ್ಮಕ್ಕಾಗಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆ’ ಎಂದು ಅವರು ಎಲ್ಲೂ ಹೇಳಿಕೊಂಡಿಲ್ಲ.

ಹೀಗಾಗಿ, ಪೋಸ್ಟ್‌ಕಾರ್ಡ್ ಹರಿಯಬಿಟ್ಟಿರುವ ಈ ಪೋಸ್ಟರುಗಳಿಗೆ ಯಾವುದೇ ತಳಹದಿ, ಸೂಕ್ತ ಆಧಾರಗಳು ಇಲ್ಲ, ಇದು ಕೇವಲ ಕೋಮುದ್ವೇಷ ಮತ್ತು ಸುಳ್ಳು ಹರಡುವ ಒಂದು ತಂತ್ರವಾಗಿದೆ.


ಇದನ್ನೂ ಓದಿ: ವಿದ್ಯಾರ್ಥಿನಿಯ ಸಾವು ಬಳಸಿಕೊಂಡು ದ್ವೇಷ ರಾಜಕೀಯದ ಆರೋಪ: ಅಣ್ಣಾಮಲೈ ಬಂಧನಕ್ಕೆ ಆಗ್ರಹ

1 COMMENT

  1. ಹಾಗಾದರೆ ನಿಜವಾಗಿಯು ಮತಾಂತರದ ಪ್ರಯತ್ನವೆ ಆಗಿಲ್ಲವೆ? ವಾರ್ಡನ್ ಯಾಕೆ‌ಕಿರುಕುಳ ಕೊಡಬೇಕು? ವಾರ್ಡನ್‌ಕೂಡ ಕ್ರಿಶ್ಚಿಯನ್‌ ಅಲ್ಲವೆ? ದೇವರ ಹೆಸರಿನಲ್ಲಿ ಆ ಹುಡುಗಿಗೆ ಕನಿಕರ‌ತೋರಬಹುದಿತ್ತಲ್ಲವೆ?

LEAVE A REPLY

Please enter your comment!
Please enter your name here