Homeಮುಖಪುಟತಮಿಳುನಾಡಿನಲ್ಲಿ ಕೈಕೊಟ್ಟ ’ಸೆಂಗೋಲ್' ಡ್ರಾಮಾ; ರೈಡ್ ರಾಜಕಾರಣಕ್ಕೆ ಮೊರೆಹೋದ ಬಿಜೆಪಿ!

ತಮಿಳುನಾಡಿನಲ್ಲಿ ಕೈಕೊಟ್ಟ ’ಸೆಂಗೋಲ್’ ಡ್ರಾಮಾ; ರೈಡ್ ರಾಜಕಾರಣಕ್ಕೆ ಮೊರೆಹೋದ ಬಿಜೆಪಿ!

- Advertisement -
- Advertisement -

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಪ್ರಭಾವಿ ಸಚಿವ ಸೆಂಥಿಲ್ ಬಾಲಾಜಿ ಅವರ ದಿಢೀರ್ ಬಂಧನ ರಾಷ್ಟ್ರ ರಾಜಕಾರಣದಲ್ಲಿ ಪ್ರಸ್ತುತ ಭಾರೀ ಸದ್ದು ಮಾಡುತ್ತಿದೆ. ದೆಹಲಿ ಡಿಸಿಎಂ ಮನೀಶ್ ಸಿಸೋಡಿಯ ಬಂಧನದ ಬೆನ್ನಿಗೇ, ಕೇಂದ್ರ ಬಿಜೆಪಿ ಸರ್ಕಾರದ ಸೇಡಿನ ರಾಜಕಾರಣದ ಮತ್ತೊಂದು ಅಧ್ಯಾಯ ಅನಾವರಣಗೊಂಡಿದೆಯೇ? ಎಂಬ ಚರ್ಚೆಯೂ ಮುನ್ನಲೆಗೆ ಬಂದಿದೆ.

ಮಮತಾ ಬ್ಯಾನರ್ಜಿ, ಚಂದ್ರಶೇಖರ್ ರಾವ್, ಅರವಿಂದ ಕೇಜ್ರಿವಾಲ್ ಆದಿಯಾಗಿ ಅನೇಕ ರಾಜಕೀಯ ಮುಖಂಡರು ಈ ಬಂಧನವನ್ನು ಖಂಡಿಸಿದ್ದಾರೆ. ಬಿಜೆಪಿ ಸರ್ಕಾರಗಳಿರುವ ರಾಜ್ಯಗಳಲ್ಲಿ ಗಾಢ ನಿದ್ರೆಗೆ ಜಾರಿರುವ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ, ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳಲ್ಲಿ ಮಾತ್ರ ವಿರೋಧ ಪಕ್ಷಗಳ ನಾಯಕರ ಮೇಲೆ ಹೀಗೆ ಸಾಲುಸಾಲು ದಾಳಿಗಳನ್ನು ನಡೆಸುತ್ತಿರುವುದು ಸಹ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿರುವುದು ಸುಳ್ಳಲ್ಲ. ಈ ನಡುವೆ ತಮಿಳುನಾಡಿನ ಸಚಿವ ಸೆಂಥಿಲ್ ಬಾಲಾಜಿ ಬಂಧನವೂ ರಾಜಕೀಯ ಪ್ರೇರಿತವೇ? ಎಂಬ ಪ್ರಶ್ನೆ ಎಲ್ಲೆಡೆ ಮೂಡಿದೆ. ಈ ಸಂಶಯಗಳಿಗೆ ಕಾರಣಗಳಿಲ್ಲದೆ ಏನಿಲ್ಲ.

ಸಚಿವರ ಬಂಧನಕ್ಕೆ ಕಾರಣವೇನು?

ಸೆಂಥಿಲ್ ಬಾಲಾಜಿ ಮೂಲತಃ ಎಡಿಎಂಕೆ ಪಕ್ಷದ ನಾಯಕ. ಮಾಜಿ ಸಿಎಂ ಜೆ. ಜಯಲಲಿತ ಅವರ ಅವಧಿಯಲ್ಲಿ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಜಯಲಲಿತ ಸಾವಿನ ನಂತರ ಡಿಎಂಕೆ ಸೇರಿದ ಬಾಲಾಜಿ ಸೆಂಥಿಲ್ ಪ್ರಸ್ತುತ ಇಕ್ಕಟ್ಟಿಗೆ ಸಿಲುಕಲು ಕಾರಣ ಜಯಲಲಿತ ಸಿಎಂ ಆಗಿದ್ದ ಕಾಲದಲ್ಲಿ ಸಾರಿಗೆ ಸಚಿವರು ಹಗರಣ ನಡೆಸಿದ್ದಾರೆನ್ನುವ ಆರೋಪ.

ಜಯಲಲಿತಾ

2011ರಿಂದ 2014ರ ಅವಧಿಯಲ್ಲಿ ಸಾರಿಗೆ ಸಚಿವರಾಗಿದ್ದಾಗ ಸೆಂಥಿಲ್ ಕೆಲಸ ಕೊಡಿಸುವ ಭರವಸೆ ನೀಡಿ ಅನೇಕ ಯುವಕರ ಬಳಿ ಅಕ್ರಮವಾಗಿ ಹಣ ಪಡೆದಿದ್ದಾರೆ ಎಂಬ ಆರೋಪವಿದೆ. ಹಣ ನೀಡಿಯೂ ಕೆಲಸ ಸಿಗದ ಕಾರಣ ನೂರಾರು ಯುವಕರು ಬೀದಿಗಿಳಿದು ಹೋರಾಟ ನಡೆಸಿದ್ದರು. ಆ ಕಾಲದಲ್ಲಿ ಈ ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು. ಪರಿಣಾಮ ಒಂದು ದಶಕದ ಹಿಂದೆಯೇ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮನಿ ಲಾಂಡರಿಂಗ್ ಆರೋಪದ ಅಡಿಯಲ್ಲಿ ಸಚಿವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಸ್ತುತ ಸಚಿವ ಸೆಂಥಿಲ್ ಬಾಲಾಜಿ ಬಂಧನವಾಗಿರುವುದು ಒಂದು ದಶಕದ ಹಿಂದಿನ ಇದೇ ಪ್ರಕರಣದ ಅಡಿಯಲ್ಲಿ ಎಂಬುದು ಗಮನಾರ್ಹ.

ಬಂಧನ ವಿವಾದವಾಗಿದ್ದು ಏಕೆ?

ಅಸಲಿಗೆ ಆರೋಪಿತ ಸಚಿವ ಸೆಂಥಿಲ್ ಬಾಲಾಜಿ ಬಂಧನಕ್ಕೆ ರಾಜಕೀಯ ವಲಯದಲ್ಲಿ ಯಾರ ತಕರಾರು ಇಲ್ಲ. ಬದಲಾಗಿ ಬಂಧನವಾಗಿರುವ ಸಮಯ ಮತ್ತು ಬಂಧಿತ ವ್ಯಕ್ತಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸಿಕೊಂಡಿರುವ ರೀತಿ ದೊಡ್ಡ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೆ, ಅಧಿಕಾರಿಗಳ ಈ ಕ್ರಮ ಸೇಡಿನ ರಾಜಕಾರಣದ ಆರೋಪಕ್ಕೂ ಪುಷ್ಠಿ ನೀಡುವಂತಿದೆ.

ಏಕೆಂದರೆ ಸಚಿವ ಸೆಂಥಿಲ್ ಬಂಧನವಾಗಿರುವುದು 2014ರಲ್ಲಿ ದಾಖಲಾದ ಪ್ರಕರಣದಲ್ಲಿ. ನಿಜವಾಗಿಯೂ ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕು, ಸಂತ್ರಸ್ತರಿಗೆ ನ್ಯಾಯ ಸಿಗಬೇಕೆಂಬ ಉದ್ದೇಶ ಇದ್ದಿದ್ದರೆ, ಜಾರಿ ನಿರ್ದೇಶನಾಲಯ ಅಧಿಕಾರಿಗಳು ಆ ಕೆಲಸವನ್ನು ದಶಕಗಳ ಹಿಂದೆಯೇ ಮಾಡಬಹುದಿತ್ತಲ್ಲ? ಈಗ ದಿಢೀರ್ ಎಂದು ತುರ್ತು ಬಂಧನ ಉದ್ಭವಿಸಿದ್ದು ಏಕೆ? ಎಂಬುದು ಹಲವು ನಾಯಕರ ಪ್ರಶ್ನೆ.

ಈ ಕುರಿತು ಖಂಡನಾರ್ಹ ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ಸಿಎಂ ಸ್ಟಾಲಿನ್ ಕೂಡ ಇಂತಹದ್ದೇ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. “ಸೆಂಥಿಲ್ ಬಾಲಾಜಿ ವಿರುದ್ಧ ಪ್ರಕರಣ ದಾಖಲಾಗಿದ್ದರೆ, ಅವರ ವಿರುದ್ಧ ನ್ಯಾಯಾಲಯದ ತೀರ್ಪಿದ್ದರೆ ಅಧಿಕಾರಿಗಳು ಧಾರಾಳವಾಗಿ ಅವರ ವಿಚಾರಣೆ ನಡೆಸಲಿ. ನಾನು ಅದನ್ನು ಯಾವತ್ತೂ ಬೇಡವೆನ್ನುವುದಿಲ್ಲ. ಆದರೆ, ಅಧಿಕಾರಿಗಳು ದಾಳಿ ನಡೆಸಿದಾಗ, ವಿಚಾರಣೆಗೆ ಸೆಂಥಿಲ್ ಬಾಲಾಜಿ ಎಲ್ಲ ಸಹಕಾರ ನೀಡಿದ್ದರೂ, ದಾಖಲೆಗಳಿಗೆ ಸಂಬಂಧಿಸಿದಂತಹ ಯಾವುದೇ ಪ್ರಶ್ನೆಗಳಿಗೆ ವಿವರಣೆಯನ್ನ ನೀಡಿದ್ದರೂ, ಅವರನ್ನೇಕೆ 18 ಗಂಟೆಗಳ ಕಾಲ ಕೂಡಿಹಾಕಿ ಕಿರುಕುಳ ನೀಡಲಾಗಿತ್ತು? ಇಂತಹ ನಡವಳಿಕೆಗಳ ಹಿಂದಿನ ಉದ್ದೇಶವೇನು? ಇದು ದ್ವೇಷದ ರಾಜಕಾರಣವಲ್ಲದೆ ಮತ್ತೇನು?” ಎಂಬುದು ಮುಖ್ಯಮಂತ್ರಿ ಸ್ಟಾಲಿನ್ ಅವರ ಪ್ರಶ್ನೆ.

ಇದು ದ್ವೇಷ ರಾಜಕಾರಣ ಹೌದೇ?

ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸಿಕೊಂಡಿರುವ ರೀತಿಯನ್ನು ಗಮನಿಸಿದರೆ, ಇದು ಕೇಂದ್ರ ಬಿಜೆಪಿ ಸರ್ಕಾರದ ದ್ವೇಷದ ರಾಜಕಾರಣದ ಮತ್ತೊಂದು ಅಧ್ಯಾಯ ಎಂಬುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ.

ಎಡಪ್ಪಾಡಿ ಪಳನಿಸ್ವಾಮಿ

ಏಕೆಂದರೆ ಸಚಿವ ಸೆಂಥಿಲ್ ಅವರನ್ನು ಬಂಧಿಸಿ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಬರೋಬ್ಬರಿ ಒಂದು ದಶಕಗಳ ಕಾಲ ಅವಕಾಶವಿತ್ತು. ಆದರೆ, ಈ ಅವಧಿಯಲ್ಲಿ ಅಧಿಕಾರಿಗಳು ಏಕೆ ಆರೋಪಿಯನ್ನು ಬಂಧಿಸಿರಲಿಲ್ಲ ಎಂಬುದು ಮೊದಲ ಪ್ರಶ್ನೆ.

ಈ ಪ್ರಶ್ನೆಗೆ ಉತ್ತರ ಇಲ್ಲದೇ ಏನಿಲ್ಲ. ಏಕೆಂದರೆ 2016ರವರೆಗೆ ಅಂದಿನ ಸಿಎಂ ಜಯಲಲಿತ ಬಿಜೆಪಿ ಪಕ್ಷವನ್ನು ಹತ್ತಿರಕ್ಕೂ ಬಿಟ್ಟುಕೊಂಡಿರಲಿಲ್ಲ. ಆ ಕಾಲದಲ್ಲಿ ದೇಶದಾದ್ಯಂತ ಮೋದಿ ಮೇನಿಯಾದ ಅಬ್ಬರವಿದ್ದರೂ ತಮಿಳುನಾಡಿನಲ್ಲಿ ಬಿಜೆಪಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲಾಗಿರಲಿಲ್ಲ. ಅದಕ್ಕೆ ಕಾರಣ ಜಯಲಲಿತಾ ಎಂಬ ಗಟ್ಟಿಗಿತ್ತಿ. ಇದೇ ಕಾಲದಲ್ಲಿ “ದೆಹಲಿಗೆ ಮೋದಿಯಾದರೆ, ತಮಿಳುನಾಡಿಗೆ ಲೇಡಿ” ಎಂಬ ರಾಜಕೀಯ ಮಾತು ಭಾರೀ ಸದ್ದು ಮಾಡಿತ್ತು.

ಆದರೆ, ಜಯಲಲಿತಾ ಮರಣದ ಬೆನ್ನಿಗೆ ಎಡಿಎಂಕೆ ಪಕ್ಷದ ಎರಡನೇ ಸಾಲಿನ ನಾಯಕರ ಮನೆ ಮತ್ತು ಕಚೇರಿಗಳ ಮೇಲೆ ಸಿಬಿಐ-ಇಡಿ ಅಧಿಕಾರಿಗಳು ಸರಣಿ ದಾಳಿ ನಡೆಸಿದ್ದರು. ಈ ದಾಳಿಗಳಿಗೆ ಅಂದಿನ ಎಡಿಎಂಕೆ ಸರ್ಕಾರವೇ ತಲ್ಲಣಿಸಿಹೋಗಿತ್ತು. ಈ ದಾಳಿಯನ್ನು ಆಯೋಜಿಸಿದ್ದೂ ಸಹ ಕೇಂದ್ರ ಬಿಜೆಪಿ ಸರ್ಕಾರವೇ ಎಂಬುದು ಗುಟ್ಟಾಗೇನು ಉಳಿದಿಲ್ಲ.

ಈ ಸರಣಿ ದಾಳಿಗಳಿಗೆ ಹೆದರಿದ್ದ ಎಡಿಎಂಕೆ ನಾಯಕರು ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಕೊನೆಗೂ ಬಿಜೆಪಿ ಜೊತೆಗೆ ಒತ್ತಾಯದ ಮೈತ್ರಿಗೆ ಕೈಜೋಡಿಸಿದ್ದರು. ಪರಿಣಾಮ ಮಾಜಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಓ ಪನ್ನೀರ್ ಸೆಲ್ವಂ ಸೇರಿದಂತೆ ಹಲವರ ಮೇಲಿನ ಪ್ರಕರಣಗಳನ್ನು ಕೈಬಿಡಲಾಗಿತ್ತು. ಸೆಂಥಿಲ್ ಬಾಲಾಜಿ ಅವರ ಪ್ರಕರಣದ ಫೈಲ್‌ಗಳನ್ನೂ ಮೂಲೆಗೆ ಎಸೆಯಲಾಗಿತ್ತು.

ಇದನ್ನೂ ಓದಿ: ನಮ್ಮನ್ನು ಎದುರು ಹಾಕಿಕೊಂಡರೆ ದಕ್ಕಿಸಿಕೊಳ್ಳುವುದು ನಿಮ್ಮಿಂದ ಸಾಧ್ಯವಿಲ್ಲ: ಸೆಂಥಿಲ್ ಬಾಲಾಜಿ ಬಂಧನದ ಕುರಿತು ಬಿಜೆಪಿಗೆ ತಮಿಳುನಾಡು ಸಿಎಂ ಸ್ಟಾಲಿನ್…

ಆದರೆ, ಯಾವಾಗ ಸೆಂಥಿಲ್ ಬಾಲಾಜಿ ಡಿಎಂಕೆಗೆ ಪಕ್ಷಾಂತರ ಮಾಡಿದರೋ, ಇಂಧನ ಮತ್ತು ಅಬಕಾರಿ ಸಚಿವರಾಗಿ ನೇಮಕಗೊಂಡು ಪ್ರಭಾವಿಯಾಗಿ ಬೆಳೆಯಲು ಆರಂಭಿಸಿದರೋ ಆಗಲೇ ಇಡಿ ಅಧಿಕಾರಿಗಳು ಮತ್ತೆ ಅವರ ಫೈಲ್ ಓಪನ್ ಮಾಡಿದ್ದಾರೆ. ಇನ್ನೂ ಫೆಬ್ರವರಿ ತಿಂಗಳಲ್ಲಿ ಈರೋಡ್ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸೋಲಿಗೆ ಸೆಂಥಿಲ್ ಬಾಲಾಜಿ ಪ್ರಮುಖ ಕಾರಣರಾಗಿದ್ದರು. ಈ ಬೆಳವಣಿಗೆ ಸಾಮಾನ್ಯವಾಗಿ ಕೇಂದ್ರ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು.

ಸೆಂಥಿಲ್ ಬಾಲಾಜಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ ಅಧಿಕಾರಿಗಳು ನೊಟಿಸ್ ನೀಡಿದ್ದೂ ಸಹ ಇದೇ ಕಾಲಘಟ್ಟದಲ್ಲಿ. ಸೆಂಥಿಲ್ ಬಾಲಾಜಿ ಇ.ಡಿ ಅಧಿಕಾರಿಗಳು ಯಾವಾಗ ವಿಚಾರಣೆಗೆ ಕರೆದರೂ ಹಾಜರಾಗಿದ್ದಾರೆ. ಅವರ ಎಲ್ಲ ಪ್ರಶ್ನೆಗಳಿಗೆ ವಿವರಣೆ ನೀಡಿದ್ದಾರೆ. ಈ ನಡುವೆ ತನ್ನ ಮೇಲಿನ ವಿಚಾರಣೆಗೆ ಹೈಕೋರ್ಟ್‌ನಿಂದ ಒಮ್ಮೆ ತಡೆಯಾಜ್ಞೆಯನ್ನೂ ತಂದಿದ್ದಾರೆ. ವಿಚಾರಣೆಗೆ ಸಹಕರಿಸಿಯೂ ನಡುರಾತ್ರಿ ಬಂಧಿಸುವ ಅಗತ್ಯವೇನಿತ್ತು? ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇದೆ ಎಂಬ ಮಾಹಿತಿ ಇದ್ದಾಗ್ಯೂ ಸತತ 18 ಗಂಟೆಗಳ ಕಾಲ ಕೂಡಿಹಾಕಿ ವಿಚಾರಣೆ ನಡೆಸುವ ಔಚಿತ್ಯ ಏನಿತ್ತು? ಅವರೇನು ಉಗ್ರಗಾಮಿಯೇ? ಎಂಬುದು ಮುಖ್ಯಮಂತ್ರಿ ಸ್ಟಾಲಿನ್ ಅವರ ಪ್ರಶ್ನೆ. ಆದರೆ, ಈ ಯಾವ ಪ್ರಶ್ನೆಗಳಿಗೂ ಕೇಂದ್ರ ಸರ್ಕಾರವಾಗಲಿ, ಜಾರಿ ನಿರ್ದೇಶನಾಲಯದ ಅಧಿಕಾರಿಗಳಾಗಲಿ ಉತ್ತರಿಸುವ ಗೋಜಿಗೆ ಹೋಗಿಲ್ಲ.

ಕೈಕೊಟ್ಟ ಸೆಂಗೋಲ್ ಡ್ರಾಮಾ, ರೈಡ್ ಪಾಲಿಟಿಕ್ಸ್ ಮೊರೆ?

ತಮಿಳುನಾಡಿನ ಸ್ಟಾಲಿನ್ ನೇತೃತ್ವದ ದ್ರಾವಿಡ ಮಾಡೆಲ್ ಸರ್ಕಾರ ಮತ್ತು ಕೇಂದ್ರದ ಬಿಜೆಪಿ ನಡುವಿನ ಸಂಬಂಧ ಎಣ್ಣೆಸೀಗೆಕಾಯಿಯಂತದ್ದು ಎಂಬುದು ರಾಷ್ಟ್ರ ರಾಜಕಾರಣದಲ್ಲಿ ಎಲ್ಲರಿಗೂ ತಿಳಿದಿರುವ ವಿಚಾರವೇ. ಅದಕ್ಕೆ ಕಾರಣ ತಮಿಳುನಾಡಿನಲ್ಲಿ ಎಲ್ಲ ಕಾಲದಲ್ಲೂ ಪ್ರಸ್ತುತವಾಗಿರುವ ಹಾಗೂ ಬಲಿಷ್ಠವಾಗಿರುವ ಪೆರಿಯಾರ್ ಚಿಂತನೆ.

ಎಂ ಕೆ ಸ್ಟಾಲಿನ್

ಪೆರಿಯಾರ್ ಕಾಲದಿಂದಲೂ ಬಲಪಂಥೀಯ ವಾದಕ್ಕೆ ಬೆನ್ನುತೋರಿಸುತ್ತಲೇ ಇರುವ ಡಿಎಂಕೆ ತಮಿಳುನಾಡಿನಲ್ಲಿ ಖಾತೆ ತೆರೆಯುವ ಬಿಜೆಪಿ ಕನಸಿಗೆ ಮಗ್ಗುಲಮುಳ್ಳಾಗಿದೆ. ಅಲ್ಲದೆ, ಪ್ರಧಾನಿ ಮೋದಿ ಯಾವಾಗ ತಮಿಳುನಾಡಿಗೆ ಹೋದರೂ #gobackmodi ಎಂಬ ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗುತ್ತದೆ. ಈ ಬಿಜೆಪಿ ವಿರೋಧಿ ಸಾಮಾಜಿಕ ಮಾಧ್ಯಮ ಅಭಿಯಾನ ಕೇಂದ್ರ ಬಿಜೆಪಿ ನಾಯಕರ ಪಾಲಿಗೆ ನುಂಗಲಾಗದ ತುತ್ತಾಗಿರುವುದು ಸುಳ್ಳಲ್ಲ.

ತಮಿಳುನಾಡನ್ನು ಹೇಗಾದರೂ ಗೆಲ್ಲಲೇಬೇಕು ಎಂಬ ಕಾರಣಕ್ಕಾಗಿಯೇ ಆರ್‌ಎಸ್‌ಎಸ್ ನಾಯಕರು, ಅಪ್ರಸ್ತುತವಾಗಿದ್ದ “ಸೆಂಗೋಲ್” ಪ್ರತಿಷ್ಠಾಪನೆ ಡ್ರಾಮಾವನ್ನು ನೂತನ ಸಂಸತ್ ಭವನದಲ್ಲಿ ಮೋದಿ ಮೂಲಕ ಮಾಡಿಸಿದ್ದರು. ಆದರೆ, ಅದೂ ನಿರೀಕ್ಷಿತ ಮೈಲೇಜ್ ನೀಡದ ಕಾರಣ ಇದೀಗ ಡಿಎಂಕೆ ಪಕ್ಷವನ್ನು ಮಣಿಸಲು, ಈ ಹಿಂದೆ ಎಡಿಎಂಕೆ ವಿರುದ್ಧ ಯಶಸ್ವಿಯಾಗಿದ್ದ ಸಿಬಿಐ-ಇಡಿ ರೈಡ್ ರಾಜಕಾರಣವನ್ನು ಬಿಜೆಪಿ ನಡೆಸುತ್ತಿದೆ. ಲೋಕಸಭಾ ಚುನಾವಣೆಗೆ ಕೇವಲ ಒಂದು ವರ್ಷ ಮಾತ್ರ ಇದ್ದು, ಬಿಜೆಪಿ ನಾಯಕರ ಪಾಲಿಗೆ ಈ ಕ್ರಮ ಅನಿವಾರ್ಯವಾಗಿದೆ ಎಂದು ತಮಿಳುನಾಡಿನ ಅನೇಕ ಪತ್ರಕರ್ತರು ಚಿಂತಕರು ವ್ಯಾಖ್ಯಾನಿಸುತ್ತಿದ್ದಾರೆ.

ನಮ್ಮನ್ನು ಸುಮ್ಮನೆ ಕೆಣಕಬೇಡಿ: ಸ್ಟಾಲಿನ್

ಬಿಜೆಪಿ ಅಧಿಕಾರಕ್ಕೆ ಬರುವ ಮುಂಚಿನ 10 ವರ್ಷದಲ್ಲಿ ಜಾರಿ ನಿರ್ದೇಶನಾಲಯ ಒಟ್ಟಾರೆ ಮಾಡಿದ ರೈಡುಗಳ ಸಂಖ್ಯೆ ಕೇವಲ 112 ಮಾತ್ರ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇದೇ ಸಂಸ್ಥೆ ವಿರೋಧ ಪಕ್ಷಗಳ ನಾಯಕರ ವಿರುದ್ಧ ಕನಿಷ್ಟ 3000 ರೈಡ್ ಮಾಡಿದೆ. ಬಿಜೆಪಿಯ ದ್ವೇಷದ ರಾಜಕಾರಣಕ್ಕೆ ಇದು ಸ್ಪಷ್ಟ ಉದಾಹರಣೆ. ಆದರೆ, ಸುಮ್ಮನೆ ನಮ್ಮನ್ನು ಕೆಣಕಬೇಡಿ. ನಮ್ಮನ್ನು ಕೆಣಕಿ ದಕ್ಕಿಸಿಕೊಳ್ಳುವುದು ನಿಮ್ಮಿಂದ ಸಾಧ್ಯವಿಲ್ಲ. ನಮಗೂ ಎಲ್ಲ ರೀತಿಯ ರಾಜಕಾರಣ ಗೊತ್ತು. ಇದು ಬೆದರಿಕೆ ಅಲ್ಲ, ಎಚ್ಚರಿಕೆ!
ಎಂ.ಕೆ ಸ್ಟಾಲಿನ್, ಮುಖ್ಯಮಂತ್ರಿ, ತಮಿಳುನಾಡು ಸರ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...