Homeಮುಖಪುಟಟ್ರ್ಯಾಕ್ಟರ್ ರ್‍ಯಾಲಿಯಲ್ಲಿ ಮಿಂದೆದ್ದ ರೈತ ಗಣರಾಜ್ಯೋತ್ಸವ: ವಿಶೇಷ ವರದಿ

ಟ್ರ್ಯಾಕ್ಟರ್ ರ್‍ಯಾಲಿಯಲ್ಲಿ ಮಿಂದೆದ್ದ ರೈತ ಗಣರಾಜ್ಯೋತ್ಸವ: ವಿಶೇಷ ವರದಿ

"ಈ ಮಟ್ಟಿನ ದೊಡ್ಡ ಜನಸಮೂಹ ನಮ್ಮನ್ನು ಮತ್ತೆ ನಮ್ಮ ಸಭೆಗಳನ್ನು ಸೇರುತ್ತಿದೆ. ಇಂತಹ ಪರಿಸ್ಥಿತಿ ನಮಗೆ ಖುಷಿ ಮತ್ತು ಆತಂಕವನ್ನು ಉಂಟು ಮಾಡಿದೆ. ಲಕ್ಷಾಂತರ ಜನರನ್ನು ತಡೆಹಿಡಿಯುವುದು ಕಷ್ಟ. ಆದ್ದರಿಂದ ರೈತ ಮುಖಂಡರ ಜವಾಬ್ದಾರಿ ಹೆಚ್ಚಾಗಿದೆ. ಆದರೆ ಟ್ರ್ಯಾಕ್ಟರ್ ರ್‍ಯಾಲಿಯಲ್ಲಿ ನಾವು ಏನು ಮಾಡಬೇಕು ಎಂಬುದರ ಬಗ್ಗೆ ನಮಗೆ ಸಂಪೂರ್ಣ ಅರಿವಿದೆ’ ಎಂದು ತಿಳಿಸಿದ್ದರು.

- Advertisement -
- Advertisement -

(ಕಳೆದ 20 ದಿನಗಳಿಂದ ದೆಹಲಿಯಲ್ಲಿ ರೈತ ಹೋರಾಟವನ್ನು ಪ್ರತ್ಯಕ್ಷವಾಗಿ ವರದಿ ಮಾಡುತ್ತಿರುವ ನ್ಯಾಯಪಥ-ನಾನುಗೌರಿ ತಂಡದ ಭಾಗವಾಗಿ ಹೋಗಿರುವ ಮಮತಾ ತಾವು ಕಂಡ ರೈತ ಗಣರಾಜ್ಯೋತ್ಸವದ ಬಗ್ಗೆ ಬರೆದಿದ್ದಾರೆ.)

ಈ ಬಾರಿಯ ಗಣರಾಜ್ಯೋತ್ಸವ ಐತಿಹಾಸಿಕ ರೈತ ಹೋರಾಟದೊಂದಿಗೆ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಕಿಸಾನ್ ಗಣರಾಜ್ಯೋತ್ಸವ ಎಂದು ಕರೆಯಲಾದ ಸಂವಿಧಾನಿಕ ಮಹತ್ವದ ಈ ದಿನ ನಡೆದ ಕಾರ್ಯಕ್ರಮ ಮೊದಲ ಬಾರಿಗೆ ಇಡೀ ದೇಶಕ್ಕೆ ರೈತ ಹೋರಾಟದ ಶಕ್ತಿಯನ್ನು ತಿಳಿಸಿದೆ. ರೈತರ ಚಾರಿತ್ರಿಕ ಹೋರಾಟ ಶೇ.99 ರಷ್ಟು ಯಶಸ್ವಿಯಾಗಿದೆ ಎಂಬ ಮಾತು ದೇಶದಾದ್ಯಂತ ಹಬ್ಬಿರುವುದು ವಿಶೇಷ.

ದೇಶದ ವಿವಿಧ ಬಾಗಗಳಿಂದ ಬೃಹತ್ ಸಂಖ್ಯೆಯಲ್ಲಿ ಬಂದಿದ್ದ ಟ್ರ್ಯಾಕ್ಟರ್‌ಗಳ ಜೊತೆಗೆ ಲಕ್ಷಾಂತರ ಮಂದಿ ರೈತರು ಮತ್ತು ಪ್ರತಿಭಟನೆಯನ್ನು ಬೆಂಬಲಿಸಲು ಬಂದಿದ್ದ ಜನಸಾಮಾನ್ಯರು ಕಿಸಾನ್ ಗಣರಾಜ್ಯೋತ್ಸವವನ್ನು ಅದ್ದೂರಿಯಿಂದ ಆಚರಿಸಿದ್ದಾರೆ. ದೆಹಲಿಯ ಗಡಿಗಳಲ್ಲಿ ಕಳೆದ ನವೆಂಬರ್ 26ರಿಂದ ಪ್ರತಿಭಟನೆ ನಡೆಸುತ್ತಿರುವ ರೈತರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

ರೈತ ಮುಖಂಡರು ಮತ್ತು ಕೇಂದ್ರ ಸರ್ಕಾರದ ನಡುವೆ ಇದುವರೆಗೆ 11 ಸುತ್ತಿನ ಮಾತುಕತೆ ನಡೆದಿದ್ದರೂ ಯಾವುದೇ ಸಭೆ ಸಫಲವಾಗಿಲ್ಲ. ಕೇಂದ್ರ ಸರ್ಕಾರ ಪ್ರಾರಂಭದಲ್ಲಿ ಕಾನೂನುಗಳನ್ನು ರದ್ದುಗೊಳಿಸುವುದಿಲ್ಲ ಎಂದು ಪಟ್ಟು ಹಿಡಿದಿತ್ತು. ಕೊನೆಯ ಸಭೆಯಲ್ಲಿ ಕೆಲವು ವರ್ಷಗಳ ಕಾಲ ಈ ಕಾಯ್ದೆಗಳನ್ನು ತಡೆಹಿಡಿಯುವ ಸಂಧಾನವನ್ನು ಮುಂದುಮಾಡಿತ್ತು. ಇದು ಯಾವುದಕ್ಕೂ ಒಪ್ಪದ ರೈತರು ಕಾನೂನುಗಳನ್ನು ವಾಪಸ್ ತೆಗೆದುಕೊಳ್ಳದೆ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಬಿಗಿ ಪಟ್ಟು ಹಿಡಿದು ಕುಳಿತಿದ್ದಾರೆ.

ಈ ಬೆಳವಣಿಗೆಗಳ ನಡುವೆಯೇ ಈ ಬಾರಿಯ ಲೋಹ್ರಿಯನ್ನು ಕಿಸಾನ್ ಲೋಹ್ರಿ ಆಚರಿಸಲಾಗಿತ್ತು. ಅಲ್ಲಿ ಸಾಂಪ್ರದಾಯಿಕವಾಗಿ ಹಾಕುವ ಕೊಂಡದಲ್ಲಿ ಕೃಷಿ ಕಾಯ್ದೆಗಳ ಪ್ರತಿಗಳನ್ನು ಸುಟ್ಟು ರೈತರು ಪ್ರತಿಭಟಿಸಿದ್ದರು. ಈಗ ಐತಿಹಾಸಿಕ ಟ್ರ್ಯಾಕ್ಟರ್ ರ್‍ಯಾಲಿಯೊಂದಿಗೆ ಕಿಸಾನ್ ಗಣರಾಜ್ಯೋತ್ಸವವನ್ನು ಆಚರಿಸಿದ್ದಾರೆ.

ಬೆಳಗುವ ದೀಪಗಳು ಮತ್ತು ರೈತ ಧ್ವಜಗಳಿಂದ ಸಾವಿರಾರು ಟ್ರ್ಯಾಕ್ಟರ್‌ಗಳನ್ನು ಅಲಂಕರಿಸಲಾಗಿತ್ತು. ಕೆಲವೊಂದು ಟ್ರ್ಯಾಕ್ಟರ್‌ಗಳಿಗೆ ರಕ್ಷಣಾತ್ಮಕ ಕಂಬಿಗಳು, ಕಬ್ಬಿಣದ ತಂತಿಗಳು ಮತ್ತು ಫೈಬರ್ ಶೀಟ್‌ಗಳನ್ನೂ ಹಾಕಲಾಗಿತ್ತು. ಕಳೆದ ಜನವರಿ 7ರಂದು ನಡೆದಿದ್ದ ಟ್ರ್ಯಾಕ್ಟರ್ ರ್‍ಯಾಲಿಯ ಪೂರ್ವಾಭ್ಯಾಸದಂತೆ ಈ ಬಾರಿ ಟ್ರ್ಯಾಲಿಗಳನ್ನು ತೆಗೆದುಕೊಂಡು ಹೋಗುಗುವಂತಿರಲಿಲ್ಲ. ಕೇವಲ ಟ್ರ್ಯಾಕ್ಟರ್‌ಗಳಿಗೆ ಮಾತ್ರ ಅನುಮತಿ ನೀಡಲಾಗಿತ್ತು.

ಸಂಯುಕ್ತ ಕಿಸಾನ್ ಮೋರ್ಚಾ ಈ ಬಾರಿ ಟ್ರ್ಯಾಕ್ಟರ್ ರ್‍ಯಾಲಿಗಾಗಿ ಮಾರ್ಗಸೂಚಿಯನ್ನು ನೀಡಿತ್ತು. ಗಣರಾಜ್ಯೋತ್ಸವದ ಪರೇಡ್‌ಗೆ ಸಿದ್ಧತೆ ಹೇಗಿರಬೇಕು ಎಂಬ ಅಂಶಗಳಿಂದ ಹಿಡಿದು, ಯಾವ ಮಾರ್ಗಗಳಲ್ಲಿ ಚಲಿಸಬೇಕು, ತಾವು ಯಾವುದಕ್ಕಾಗಿ ಈ ರ್‍ಯಾಲಿ ನಡೆಸುತ್ತಿದ್ದೇವೆ, ಎಂಬೆಲ್ಲಾ ವಿಚಾರಗಳ ಬಗ್ಗೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿತ್ತು.

ಕೆಂಪುಕೋಟೆಯ ಮೇಲೆ ರೈತರ ಧ್ವಜವನ್ನು ಹಾರಿಸುವ ರೈತರ ಆಸೆಗೆ ಸರ್ಕಾರ ಮತ್ತು ದೆಹಲಿ ಪೊಲೀಸರು ಅನುಮತಿ ನೀಡಿರಲಿಲ್ಲ. ರೈತರು ನೀಡಿದ್ದ ಪರೇಡ್ ಮಾರ್ಗಕ್ಕೂ ಪೊಲೀಸರಿಂದ ಉತ್ತಮ ಸ್ಪಂದನೆ ಸಿಕ್ಕಿರಲಿಲ್ಲ. ನಂತರ ದೆಹಲಿಯ ಸುತ್ತ ಪರೇಡ್ ನಡೆಸಲು ಅನುಮತಿ ನೀಡಿದ್ದರು. ಈ ಮಾರ್ಗಗಳನ್ನು ರೈತ ಮುಖಂಡರು ಅನುಸರಿಸಿ, ಎಲ್ಲಾ ಗಡಿಗಳಿಂದ ಹೊರಡುವಂತೆ ಹೊಸ ರೀತಿಯಲ್ಲಿ ಮಾರ್ಗಗಳ ರೂಟ್ ಮ್ಯಾಪ್ ಸಿದ್ಧಪಡಿಸಿ ನೀಡಲಾಗಿತ್ತು.

ರೈತ ಸಂಘಟನೆಗಳು, ರೈತ ಮುಖಂಡರ ಇಷ್ಟು ಮುನ್ನೆಚ್ಚರಿಕೆ ಮತ್ತು ಯೋಜನೆಯ ಹೊರತಾಗಿಯೂ ಜನವರಿ 25ರ ತಡ ರಾತ್ರಿಯವರೆಗೂ ಟ್ರ್ಯಾಕ್ಟರ್ ಪರೇಡ್ ಒಂದು ದೊಡ್ಡ ಚಿಂತೆಯಾಗಿಯೇ ಉಳಿದಿತ್ತು. ಇದಕ್ಕೆ ಕಾರಣ ಲಕ್ಷಾಂತರ ಜನರು. ಜನರು ಈ ದೊಡ್ಡ ಮಟ್ಟಕ್ಕೆ ಆಗಮಿಸಿ ಸ್ಪಂದಿಸಿದ್ದು ಎಲ್ಲ ರೈತ ಮುಖಂಡರಲ್ಲಿ ಒಂದು ಆತಂಕ ಸೃಷ್ಟಿಸಿತ್ತು.

ಟಿಕ್ರಿ ಗಡಿಯಲ್ಲಿ ರೈತ ಹೋರಾಟದ ಮುನ್ನಲೆಯಲ್ಲಿರುವ ಭಾರತೀಯ ಕಿಸಾನ್ ಯೂನಿಯನ್ ಮುಖಂಡರಾದ ಸುರೀಂಧರ್ ಸಿಂಗ್ ಅವರು ಹೇಳುವಂತೆ “ಈ ಮಟ್ಟಿನ ದೊಡ್ಡ ಜನಸಮೂಹ ನಮ್ಮನ್ನು ಮತ್ತೆ ನಮ್ಮ ಸಭೆಗಳನ್ನು ಸೇರುತ್ತಿದೆ. ಇಂತಹ ಪರಿಸ್ಥಿತಿ ನಮಗೆ ಖುಷಿ ಮತ್ತು ಆತಂಕವನ್ನು ಉಂಟುಮಾಡಿದೆ. ಲಕ್ಷಾಂತರ ಜನರನ್ನು ತಡೆಹಿಡಿಯುವುದು ಕಷ್ಟ. ಆದ್ದರಿಂದ ರೈತ ಮುಖಂಡರ ಜವಾಬ್ದಾರಿ ಹೆಚ್ಚಾಗಿದೆ. ಆದರೆ ಟ್ರ್ಯಾಕ್ಟರ್ ರ್‍ಯಾಲಿಯಲ್ಲಿ ನಾವು ಏನು ಮಾಡಬೇಕು ಎಂಬುದರ ಬಗ್ಗೆ ನಮಗೆ ಸಂಪೂರ್ಣ ಅರಿವಿದೆ’ ಎಂದು ತಿಳಿಸಿದ್ದರು.

“ಈ ಟ್ರ್ಯಾಕ್ಟರ್ ಪರೇಡ್ ಮೂಲಕ ನಾವು ಸರ್ಕಾರಕ್ಕೆ ಮೂರು ಮುಖ್ಯ ವಿಷಯಗಳನ್ನು ತಿಳಿಸಲು ಬಯಸುತ್ತೇವೆ” ಎಂದಿದ್ದ ಅವರು “ಮೊದನೆಯದು ಸ್ವತಂತ್ರ ರಾಷ್ಟ್ರ ಎನ್ನುವ ಪರಿಕಲ್ಪನೆಯಲ್ಲಿಯೂ ಹೇಗೆ ನಾವು ಕಾರ್ಪೊರೇಟ್ ಕೈಯಲ್ಲಿ ಸಿಕ್ಕು ಗುಲಾಮರಾಗುತ್ತ್ತಿದ್ದೇವೆ, ಎರಡನೆಯದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರ ಸಬ್ ಕಾ ವಿಕಾಸ್ ಎನ್ನುವ ಮೂಲಕ ಅಧಿಕಾರಕ್ಕೆ ಬಂದು ಸಬ್ ಕಾ ವಿನಾಶ್ ಹೇಗೆ ಮಾಡುತ್ತಿದೆ ಎಂಬುದು. ಇನ್ನು ಕೊನೆಯದಾಗಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಕಾನೂನುಗಳನ್ನು ಹೇಗೆ ಸರ್ಕಾರ ತಿದ್ದುಪಡಿಗಳ ಮೂಲಕ ಬದಲಾಯಿಸಿ, ಸಂವಿಧಾನದ ಮೂಲ ಆಶಯಗಳಂತೆ ನಡೆದುಕೊಳ್ಳದೆ ಹಲವು ಪರಿಚ್ಛೇದಗಳನ್ನು ಬಳಸಿಕೊಂಡು ಜನರನ್ನು ತುಳಿಯುತ್ತಿದೆ ಎಂಬುವು” ಎಂದಿದ್ದರು.

ರೈತ ಮುಖಂಡರು ಈ ಮೊದಲೇ ತಿಳಿಸಿದ್ದಂತೆ, ನಮಗೆ ಯಾವ ಮಾರ್ಗದಲ್ಲಿ ರ್‍ಯಾಲಿ ಮಾಡುತ್ತೇವೆ ಎಂಬುದು ಮುಖ್ಯವಲ್ಲ ಬದಲಾಗಿ ಎಲ್ಲರೂ ಒಟ್ಟಾಗಿ ಸೇರುವುದು ಮತ್ತು ಈ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಹೋರಾಡುವುದು ಮುಖ್ಯ ಎನ್ನುವುದನ್ನು ಕಿಸಾನ್ ಗಣರಾಜ್ಯೋತ್ಸವದಂದು ತೋರಿಸಿದ್ದಾರೆ.

ಬೆಳಗಿನ 5 ಗಂಟೆಯಿಂದಲೇ ನಡೆದ ಟ್ರ್ಯಾಕ್ಟರ್ ಪರೇಡ್ ತಯಾರಿ 8 ಗಂಟೆಗೆ ಆರಂಭವಾಯಿತು. ಪೊಲೀಸ್ ಇಲಾಖೆ 12 ಗಂಟೆಗೆ ಪರೇಡ್ ನಡೆಸಲು ಅನುಮತಿ ನೀಡಿತ್ತು. ಬ್ಯಾರಿಕೇಡ್, ಟ್ರ್ಯಾಕ್‌ಗಳನ್ನೂ ಬದಿಗೆ ಸರಿಸಿ ಟ್ರ್ಯಾಕ್ಟರ್ ಪರೇಡ್‌ಗೆ ಚಾಲನೆ ನೀಡಲಾಯಿತು.

ಪ್ರತಿಭಟನೆಯಲ್ಲಿ ಕೇವಲ ಅರ್ಧದಷ್ಟು ಟ್ರ್ಯಾಕರ್‌ಗಳು ಮಾತ್ರ ಪರೇಡ್‌ನಲ್ಲಿ ಭಾಗವಹಿಸಿದ್ದರೆ ಇನ್ನು ಸಾವಿರಾರು ಟ್ರಾಲಿಗಳು ಗಡಿ ಭಾಗದಲ್ಲಿ ಹಾಗೆಯೇ ಉಳಿದಿದ್ದವು. ಟ್ರ್ಯಾಕ್ಟರ್‌ಗಳು ದೆಹಲಿ ಪ್ರವೇಶಿಸಿದೊಡನೆಯ ದೆಹಲಿ ಜನರು ಫ್ಲೈಓವರ್‌ಗಳಿಂದ, ಬ್ರಿಡ್ಜ್‌ಗಳ ಮೇಲಿನಿಂದ ಹೂವು ಸುರಿಸುವ ಮೂಲಕ ರೈತರಿಗೆ ಪ್ರೀತಿಯ ಸ್ವಾಗತ ಕೋರಿದರು. ಇದರ ಜೊತೆಗೆ ರಸ್ತೆಯ ಇಕ್ಕೆಲಗಳಲ್ಲಿ ರೈತರ ಐತಿಹಾಸಿಕ ಪರೇಡ್ ನೋಡಲು ಸಾವಿರಾರು ಜನ ಸೇರಿ ರೈತರಿಗೆ ಹುಮ್ಮಸ್ಸು ತುಂಬಿ, ರೈತಪರ ಘೋಷಣೆಗಳನ್ನು ಕೂಗಿದರು. ಇದರ ಜೊತೆಗೆ ನೀರು, ಬಾಳೆಹಣ್ಣು, ಕಿತ್ತಳೆ ಹಣ್ಣು, ಊಟ ನೀಡುವ ಮೂಲಕ ರ್‍ಯಾಲಿಗೆ ಬೆಂಬಲ ನೀಡಿದರು.

ದೆಹಲಿ ಸುತ್ತ ಪರೇಡ್ ನಡೆಸಲು ಅನುಮತಿ ನೀಡಲಾಗಿತ್ತು. ಆದರೆ ರೈತರು ದೆಹಲಿಯ ಒಳಗೆ ನುಗ್ಗಿ ಕೆಂಪು ಕೋಟೆ ಮೇಲೆ ಕಿಸಾನ್ ಧ್ವಜ ಹರಿಸಿದ್ದಾರೆ. ಸಿಂಘು ಗಡಿಯಿಂದ ಹೊರಟಿದ್ದ ನಮಗೆ ಒಟ್ಟು 5 ಕಡೆಯಲ್ಲಿ ಹೊಸದಾದ ಬ್ಯಾರಿಕೇಡ್‌ಗಳು ಕಾಣಿಸಿದವು. ಆದರೆ ಪ್ರತಿಭಟನಕಾರಾರು ಜೆಸಿಬಿಗಳ ಮೂಲಕ ಬ್ಯಾರಿಕೇಡ್‌ಗಳನ್ನು ತಳ್ಳುವ ಅನಿವಾರ್ಯಕ್ಕೆ ಬಿದ್ದರು.

ಕೆಲವು ಬಾರ್ಡರ್‌ಗಳಲ್ಲಿ ಪೊಲೀಸರು ಅಶ್ರುವಾಯು, ಟಿಯರ್ ಗ್ಯಾಸ್ ಸಿಡಿಸಿದ್ದರು. ಮತ್ತೆ ಕೆಲವೆಡೆ ರೈತರನ್ನು ತಡೆಯುವ ಕೆಲಸ ಮಾಡಿದ್ದಾರೆ. ಈ ಸುದ್ದಿ ಹಲವು ರೈತರ ಗುಂಪುಗಳಲ್ಲಿ ಹರಿದಾಡಿ ಸಿಂಘು ಗಡಿಯಲ್ಲಿ ಉಳಿದಿದ್ದ ರೈತರು ಕೂಡ ಕೆಲ ಕಾಲ ತಬ್ಬಿಬ್ಬುಗೊಂಡಿದ್ದೂ ನಿಜ.

ಗಾಜಿಪುರ ಮತ್ತು ಸಿಂಘು ಭಾಗದ ರೈತರ ಗುಂಪುಗಳು ಕೆಂಪುಕೋಟೆಯಲ್ಲಿ ರೈತರ ಧ್ವಜವನ್ನು ಹಾರಿಸಿ, ನಂತರ ಅಲ್ಲಿಂದ ವಾಪಾಸ್ ಸಿಂಘುಗೆ ತೆರಳಿದರು. ಇಷ್ಟರಲ್ಲಿ ಕೆಲವು ಮಾಧ್ಯಮಗಳು ಬಿತ್ತರಿಸಿದ ಸುದ್ದಿಯಿಂದ ರೈತರು ಏನಾಗುತ್ತಿದೆ ಎಂಬ ಕಳವಳ ವ್ಯಕ್ತಪಡಿಸಿದರು. ಟ್ರ್ಯಾಕ್ಟರ್ ಮತ್ತು ಪೊಲೀಸರ ಘರ್ಷಣೆಯಲ್ಲಿ ಒಬ್ಬ ರೈತ ಮೃತಪಟ್ಟಿದ್ದಾರೆ. ಈ ಕುರಿತು ಸಂಯುಕ್ತ ಕಿಸಾನ್ ಮೋರ್ಚಾ ಪತ್ರಿಕಾ ಹೇಳಿಕೆ ನೀಡಿ ಖಂಡಿಸಿದೆ.

ಎಲ್ಲೋ ಕೆಲವೇ ಕೆಲವು ಅಹಿತಕರ ಘಟನೆಗಳನ್ನು ಹೊರತುಪಡಿಸಿ ರೈತರು ಬಹಳ ಶಾಂತಿಯುತವಾಗಿ ನಡೆಸಿದ ರ್‍ಯಾಲಿ ಮತ್ತು ಪ್ರತಿಭಟನೆ ಇಡೀ ದೇಶ ಮತ್ತು ವಿಶ್ವದ ಗಮನ ಸೆಳೆದಿದೆ. ಸಂಪೂರ್ಣವಾಗಿ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವವರೆಗೂ ಪ್ರತಿಭಟನೆಯಿಂದ ಕದಲುವುದಿಲ್ಲ ಎಂದು ರೈತರು ಮತ್ತೆ ಪುನರುಚ್ಚರಿಸಿದ್ದು, ಕೇಂದ್ರ ಸರ್ಕಾರದ ಮುಂದಿನ ಹೆಜ್ಜೆ ಏನಾಗಲಿದೆ ಕಾದು ನೋಡಬೇಕಿದೆ.


ಇದನ್ನೂ ಓದಿ: ಕೃಷಿ ಕಾಯ್ದೆಗಳ ಕರಾಳತೆ ಹೆಚ್ಚಿನ ರೈತರಿಗೆ ಅರ್ಥವಾದರೆ ಬೆಂಕಿ ಹೊತ್ತಿಕೊಳ್ಳುತ್ತದೆ: ರಾಹುಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...