ಮಾಜಿ ರಕ್ಷಣಾ ಸಚಿವ ದಿವಂಗತ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಪಣಜಿ ವಿಧಾನಸಭಾ ಕ್ಷೇತ್ರದಿಂದ 800 ಮತಗಳಿಂದ ಸೋಲು ಅನುಭವಿಸಿದ್ದಾರೆ. ಉತ್ಪಲ್ ಪರಿಕ್ಕರ್ 2022 ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಪಣಜಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಈ ಕ್ಷೇತ್ರದಿಂದ ಬಿಜೆಪಿಯ ಅಟಾನಾಸಿಯೊ ಮಾನ್ಸೆರೇಟ್ (ಬಾಬುಶ್) ಗೆದ್ದಿದ್ದಾರೆ. ಆದರೆ, ಕಡಿಮೆ ಅಂತರದಿಂದ ಗೆದ್ದಿರುವ ಕಾರಣ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿಲ್ಲ. ಬಿಜೆಪಿ ಬೆಂಬಲಿಗರು ತನಗೆ ಮತ ಹಾಕಲಿಲ್ಲ ಎಂದು ಆರೋಪ ವ್ಯಕ್ತಪಡಿಸಿದ್ದಾರೆ.
ಉತ್ಪಲ್ ಪರಿಕ್ಕರ್ ಅವರು ಭಾರತದ ಮಾಜಿ ರಕ್ಷಣಾ ಸಚಿವ ಮತ್ತು ಗೋವಾ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕ್ಕರ್ ಅವರ ಪುತ್ರರಾಗಿದ್ದಾರೆ. ಉತ್ಪಲ್ ತಮ್ಮ ತಂದೆಯ ಸಾಂಪ್ರದಾಯಿಕ ವಿಧಾನಸಭಾ ಕ್ಷೇತ್ರ ಪಣಜಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಪಣಜಿಯಲ್ಲಿ ಟಿಕೆಟ್ ನೀಡದ ಕಾರಣ ಈ ಹಿಂದೆ ಬಿಜೆಪಿಯಿಂದ ಹೊರ ಬಂದಿದ್ದರು.
ಮೂರು ಬಾರಿ ಗೋವಾದ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಅವರು 25 ವರ್ಷಗಳ ಕಾಲ ಪಣಜಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2019 ರಲ್ಲಿ ಅವರ ಮರಣದ ನಂತರ ನಡೆದ ಉಪಚುನಾವಣೆಯಲ್ಲಿ, ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಅವರ ಬಹುಕಾಲದ ಪ್ರತಿಸ್ಪರ್ಧಿ ಮಾನ್ಸೆರೇಟ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದರು. ಬಳಿಕ ಮಾನ್ಸೆರೇಟ್ ಬಿಜೆಪಿಗೆ ಪಕ್ಷಾಂತರವಾದರು.
ಶಿವಸೇನೆ ಮತ್ತು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ) ಉತ್ಪಲ್ ಪರಿಕ್ಕರ್ ಅವರನ್ನು ಬಹಿರಂಗವಾಗಿ ಬೆಂಬಲಿಸಿತ್ತು. ಶಿವಸೇನೆಯ ಸಂಜಯ್ ರಾವುತ್ ಅವರು ಉತ್ಪಲ್ ಪರಿಕ್ಕರ್ ಅವರ ತಂದೆಗೆ ಗೌರವ ಸಲ್ಲಿಸುವ ಸಲುವಾಗಿ ಬಿಜೆಪಿಯೇತರ ಪಕ್ಷಗಳಿಗೆ ಅಭ್ಯರ್ಥಿಯನ್ನು ಕಣಕ್ಕಿಳಿಸದಂತೆ ಮನವಿ ಮಾಡಿದ್ದರು.
ಬಿಜೆಪಿಯು ಗೋವಾದ 40 ಸ್ಥಾನಗಳಲ್ಲಿ 20 ಸ್ಥಾನಗಳಲ್ಲಿ ಮುನ್ನಡೆಯೊಂದಿಗೆ ಗೆಲುವಿನತ್ತ ಸಾಗುತ್ತಿದೆ. ಈಗಾಗಲೇ ವಿಜೇತರಾಗಿ ಹೊರಹೊಮ್ಮಿದ ಮೂವರು ಸ್ವತಂತ್ರ ಅಭ್ಯರ್ಥಿಗಳು ಬಿಜೆಪಿಗೆ ಬೆಂಬಲ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಇದನ್ನೂ ಓದಿ: ಅತಂತ್ರ ವಿಧಾನಸಭೆಯತ್ತ ಗೋವಾ: ಯಾರಿಗೂ ಬಹುಮತವಿಲ್ಲದಿದ್ದರೂ ಬಿಜೆಪಿ ಮೇಲುಗೈ


