ಸೇವಾ ಅಭದ್ರತೆ, ವೇತನ ತಾರತಮ್ಯ ಖಂಡಿಸಿ ಅತಿಥಿ ಉಪನ್ಯಾಸಕರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಅನಿರ್ದಿಷ್ಟಾವಧಿ ತರಗತಿ ಬಹಿಷ್ಕಾರ ಮಾಡಿದ್ದಾರೆ.
ಬೆಳಗಾವಿ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾವಿರಾರು ಅತಿಥಿ ಉಪನ್ಯಾಸಕರು ಬೆಳಗಾವಿಯಲ್ಲಿ ಸೇರಿ ಪ್ರತಿಭಟಿಸಿದ್ದಾರೆ. ಒಂದು ದಶಕದಿಂದ ಆಗುತ್ತಿರುವ ಅನ್ಯಾಯಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಅತಿಥಿ ಉಪನ್ಯಾಸಕರನ್ನು ಸರ್ಕಾರ ನೇಮಕ ಮಾಡಿಕೊಳ್ಳುತ್ತದೆ. ನಿಯಮದ ಪ್ರಕಾರ ಸರ್ಕಾರ ನಮಗೆ ಹತ್ತು ತಿಂಗಳು ಕೆಲಸ ಕೊಡಬೇಕು. ಆದರೆ ಸೆಮಿಸ್ಟರ್ ವ್ಯವಸ್ಥೆಯಿಂದಾಗಿ ನಮಗೆ ಮೂರು + ಮೂರು ತಿಂಗಳು ಕೆಲಸ ಸಿಗುತ್ತಿದೆ. ಅಂದರೆ ವರ್ಷಕ್ಕೆ ಆರು ತಿಂಗಳು ಮಾತ್ರ ಕೆಲಸ ನೀಡುತ್ತಾರೆ. ಬೇರೆ ರಾಜ್ಯಗಳಲ್ಲಿ ಯುಜಿಸಿ ನಿರ್ದೇಶನದಂತೆ ಅತಿಥಿ ಉಪನ್ಯಾಸಕರಿಗೆ ಉತ್ತಮ ಸಂಬಳ ನೀಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಕೇವಲ 11ರಿಂದ 13 ಸಾವಿರ ರೂ. ಸಂಬಳ ಕೊಡುತ್ತಿದ್ದಾರೆ ಎಂದು ಅತಿಥಿ ಉಪನ್ಯಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿನ 430 ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಸುಮಾರು 14,500ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದೇವೆ. ನಮಗೆ ಕಡಿಮೆ ಸಂಬಳ ಕೊಡುವುದಷ್ಟೇ ಅಲ್ಲದೇ ಮೂರು ತಿಂಗಳಾದರೂ ಸಂಬಳವನ್ನು ನೀಡುವುದಿಲ್ಲ. ನಮಗೆ ಯಾವುದೇ ಸೇವಾ ಭದ್ರತೆ ಕೂಡ ಇಲ್ಲ. ಖಾಯಂ ಉಪನ್ಯಾಸಕರು ಸೇವೆಗೆ ಬಂದಾಗ ಬೋಧನ ಕಾರ್ಯಭಾರ ಕಡಿಮೆಯಾಗಿ ನಮ್ಮನ್ನು ಕೆಲಸದಿಂದ ತೆರವು ಮಾಡಲಾಗುತ್ತದೆ. ಜೊತೆಗೆ ನಮಗೆ ಪಿ.ಎಫ್. ಆಗಲೀ, ಇಎಸ್‌ಐ ಸೌಲಭ್ಯವೂ ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ದೆಹಲಿ, ಪಶ್ಚಿಮ ಬಂಗಾಳ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಿದ್ದಾರೆ. ಕೆಲವು ಕಡೆ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಿದ್ದಾರೆ. ಕರ್ನಾಟಕ ಸರ್ಕಾರ ಈ ರೀತಿಯ ಉದಾರತೆ ಹಾಗೂ ಮಾನವೀಯತೆಯನ್ನು ತೋರಬೇಕಿದೆ. ಸಾಕಷ್ಟು ಅತಿಥಿ ಉಪನ್ಯಾಸಕರು ಆರೋಗ್ಯ ಸಮಸ್ಯೆಗಳಿಂದ ಮೃತಪಟ್ಟಿದ್ದಾರೆ. ಅನೇಕರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಕೆಲವರು ಆರ್ಥಿಕ ಪರಿಸ್ಥಿತಿ ಹದಗೆಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಡಿಸೆಂಬರ್ 10ರಿಂದ ಅನಿರ್ದಿಷ್ಟಾವತಿ ಹೋರಾಟ, ಉಪವಾಸ ಸತ್ಯಾಗ್ರಹ, ತರಗತಿ ಬಹಿಷ್ಕಾರ ಹಾಕಿದ್ದೇವೆ. ಬೆಳಗಾವಿ ಅಧಿವೇಶನದಲ್ಲೂ ಅತಿಥಿ ಉಪನ್ಯಾಸಕರ ಸಮಸ್ಯೆಗಳು ಚರ್ಚೆಗೆ ಕೂಡ ಬಂದಿವೆ. ನಮ್ಮ ಸಮಸ್ಯೆಗಳ ಅರಿವಿದ್ದರೂ ಉನ್ನತ ಶಿಕ್ಷಣ ಸಚಿವರು ನಮ್ಮ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ ಎಂಬುದು ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ಧರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟದ ಬೇಸರ.
ಮೊದಲೆಲ್ಲ ಶೈಕ್ಷಣಿಕ ವರ್ಷ ಆರಂಭವಾದಾಗಿನಿಂದ ಮುಗಿಯುವವರೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿತ್ತು. ಅಂದರೆ ವರ್ಷಕ್ಕೆ ಒಂದು ಬಾರಿ ಆದೇಶ ಹೊರಡಿಸಲಾಗುತ್ತಿತ್ತು. ಆದರೆ ಒಂದು ವರ್ಷದಿಂದೀಚೆಗೆ ಪ್ರತಿ ಸೆಮಿಸ್ಟರ್ ಬಳಿಕ ಆದೇಶ ನೀಡಲಾಗುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರವಾಗಿಸಿದೆ ಎಂದು ಆರೋಪಿಸಿದ್ದಾರೆ.
ಇತರೆ ಸರ್ಕಾರ ಉದ್ಯೋಗಕ್ಕಾಗಿ ಅರ್ಜಿಗಳನ್ನು ಸರ್ಕಾರ ಆಹ್ವಾನಿಸಿದರೂ ಅನೇಕ ಅತಿಥಿ ಉಪನ್ಯಾಸಕರು ವಯೋಮಿತಿಯನ್ನು ಮೀರಿದ್ದು, ಅರ್ಜಿ ಹಾಕಲೂ ಅವಕಾಶ ಇಲ್ಲ. ಅನೇಕ ಅತಿಥಿ ಉಪನ್ಯಾಸಕರು ನೆಟ್, ಸ್ಲೆಟ್ ಮಾಡಿಕೊಂಡಿದ್ದಾರೆ. ಇಷ್ಟು ಅರ್ಹತೆಗಳು ಇದ್ದರೂ ಸೇವಾ ಭದ್ರತೆ ನೀಡುತ್ತಿಲ್ಲ. ಖಾಯಂಗೊಳಿಸುತ್ತಿಲ್ಲ ಎನ್ನುತ್ತಾರೆ ಉಪನ್ಯಾಸಕರು.
ನಾನುಗೌರಿ.ಕಾಂ ಜೊತೆ ಮಾತನಾಡಿದ ಉಪನ್ಯಾಸಕರೊಬ್ಬರು, “ಎನ್‌ಇಪಿ ಜಾರಿಗೊಳಿಸಿದ ಬಳಿಕ ವರ್ಕ್‌ಲೋಡ್ ಹೆಚ್ಚಾಗಿದೆ. ಶೇ. 100ರಷ್ಟು ಪಿಯುಸಿ ಫಲಿತಾಂಶ ಬಂದಿದ್ದರಿಂದ ರಾಜ್ಯದ ಎಲ್ಲ 430 ಪ್ರಥಮದರ್ಜೆ ಕಾಲೇಜುಗಳಲ್ಲೂ ಪ್ರವೇಶಾತಿ ಹೆಚ್ಚಿದೆ. ಆದರೆ ಅತಿಥಿ ಉಪನ್ಯಾಸಕರ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅತಿಥಿ ಉಪನ್ಯಾಸಕರು ಕಡಿಮೆ ವೇತನವನ್ನೇ ಪಡೆಯುತ್ತಿದ್ದಾರೆ” ಎಂದರು.
“ಪರೀಕ್ಷೆ, ಮೌಲ್ಯಮಾಪನ ಕಾರ್ಯಗಳನ್ನೂ ಅತಿಥಿ ಉಪನ್ಯಾಸಕರು ಮಾಡುತ್ತೇವೆ. ಸುಮಾರು 7,500 ಖಾಯಂ ಉದ್ಯೋಗಗಳು ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇವೆ. ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಿಕೊಂಡರೆ ಬಹಳ ಅನುಕೂಲವಾಗುತ್ತದೆ” ಎಂದು ತಿಳಿಸಿದರು.