ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸೆಪ್ಟಂಬರ್ ತಿಂಗಳಲ್ಲಿ ನಡೆಯಲಿರುವ ಗಣೇಶ ಚತುರ್ಥಿ, ಮೊಹರಂ, ದುರ್ಗಾಪೂಜೆ ಸೇರಿದಂತೆ ಧಾರ್ಮಿಕ ಹಬ್ಬಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆ ಮಾಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟ ಮಾಡಿದೆ.
ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸೋಂಕು ಹೆಚ್ಚಾಗಿ ಹರಡದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.
ಹಬ್ಬದ ಸಡಗರದಲ್ಲಿರುವ ಜನರು ಮೈಮರೆತು ಗುಂಪುಗೂಡುವುದರಿಂದ ಕೊರೊನಾ ಸೋಂಕು ಮತ್ತೊಮ್ಮೆ ತೀವ್ರವಾಗಿ ಹರಡುವ ಸಾಧ್ಯತೆ ಇದೆ. ಈ ಸೋಂಕಿನ ಸರಪಳಿ ಮುರಿಯಲು ಕ್ರಮ ಅಗತ್ಯ ಎಂದು ಹೇಳಿದೆ.
ಸೆಪ್ಟಂಬರ್, ಅಕ್ಟೋಬರ್ ತಿಂಗಳಲ್ಲಿ ಆಚರಣೆ ಮಾಡಲಾಗುವ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಮೊಹರಂ, ದುರ್ಗಾಪೂಜೆಯ ಧಾರ್ಮಿಕ ಆಚರಣೆಗಳಲ್ಲಿ ಜನ ಸೇರದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಜನರ ಒಗ್ಗೂಡುವಿಕೆ, ಬೃಹತ್ ಸಭೆ-ಸಮಾರಂಭಗಳನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: ದೇವರ ಕುರಿತ ‘ಅನಿಕೇತನ’ ಕಲ್ಪನೆಗಳು : ಶಿವ ತುಂಡಾಗಿಸಿದ ಗಣೇಶನ ರುಂಡವ ಆನೆಗೆ ಅಂಟಿಸಿದರೆ?

ಗಣೇಶ ಚತುರ್ಥಿಯಲ್ಲಿ ಸರಳವಾಗಿ ದೇವಾಲಯದ ಒಳಗಡೆ ಮತ್ತು ತಮ್ಮ ತಮ್ಮ ಮನೆಗಳಲ್ಲಿ ಆಚರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಟೆಂಟ್, ಶಾಮಿಯಾನ, ಪೆಂಡಾಲ್‌ಗಳನ್ನು ಹಾಕಿ ಸಾರ್ವಜನಿಕವಾಗಿ, ಹೊರಾಂಗಣದಲ್ಲಿ ಗೌರಿ, ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವಂತಿಲ್ಲ.
ಗಣೇಶ ಮೂರ್ತಿಯನ್ನು ತರುವಾಗ ಮತ್ತು ವಿಸರ್ಜಿಸುವಾಗ ಯಾವುದೇ ಮೆರವಣಿಗೆ, ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಗಣೇಶ ಮೂರ್ತಿಯನ್ನು ಮನೆಯಲ್ಲೇ ವಿಸರ್ಜಿಸುವುದು ಅಥವಾ ಸ್ಥಳೀಯ ಆಡಳಿತ ಸಂಸ್ಥೆ ಸೂಚಿಸುವ ಜಾಗದಲ್ಲಿ ವಿಸರ್ಜಿವುದು.
ಇದನ್ನೂ ಓದಿ: 5 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಕಡ್ಡಾಯವಲ್ಲ- ಹೊಸ ಮಾರ್ಗಸೂಚಿ ಪ್ರಕಟ
ಇನ್ನು ಮೊಹರಂ ಆಚರಣೆಗೂ ಮಾರ್ಗಸೂಚಿಯನ್ನು ಸರ್ಕಾರ ಹೊರಡಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಆಲಂಗಳನ್ನು/ ಪಂಜಾವನ್ನು ಸ್ಥಾಪಿಸುವುದನ್ನು ನಿರ್ಬಂಧಿಸಲಾಗಿದೆ. ಪ್ರಾರ್ಥನಾ ಸಭೆ, ಮೆರವಣಿಗೆಯನ್ನು ನಿಷೇಧಿಸಲಾಗಿದೆ. ಖಬರಸ್ಥಾನ ಸೇರಿದಂತೆ ಯಾವುದೇ ಖಾಲಿ ಸ್ಥಳದಲ್ಲಿ ಸಾರ್ವಜನಿಕ ಸಭೆ ನಡೆಸುವಂತಿಲ್ಲ.
ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ. 60 ವರ್ಷಕ್ಕಿಂತ ಮೇಲ್ಪಟ್ಟವರು 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮನೆಯಲ್ಲೇ ಪ್ರಾರ್ಥನೆ ಮಾಡಬೇಕು. ಕೋವಿಡ್ 19 ನಿಯಮಗಳನ್ನು ಪಾಲಿಸಿಕೊಂಡು ಮಸೀದಿಯಲ್ಲಿ ಪಾರ್ಥನೆ ಮಾಡಬಹುದು. ಹೆಚ್ಚಿನ ಜನರು ಆಗಮಿಸಿದ್ದಲ್ಲಿ ಪಾಳಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಬಹುದು. ಪಾರ್ಥನೆ ಮಾಡುವವರು ಪರಸ್ಪರ ಹಸ್ತಲಾಘವ ಮತ್ತು ಆಲಿಂಗನ ಮಾಡುವಂತಿಲ್ಲ.
ಇದನ್ನೂ ಓದಿ: ಬಹುಜನ ಭಾರತ; ಈ ಜಾತಿ ದಾಂಧಲೆ ತೆಂಡೂಲ್ಕರ್ ಮನೆ ಮುಂದೆ ನಡೆದಿದ್ದರೆ!


