ರಾಹುಲ್ ಗಾಂಧಿ
PC: Deccan Chronicle

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವಿಟರ್‌ ಖಾತೆಯನ್ನು ಸ್ಥಗಿತಗೊಳಿಸಿರುವ ಕಂಪನಿ ವಿರುದ್ಧ ತಿರುಗಿ ಬಿದ್ದಿರುವ ಅವರು, ಇದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ದಾಳಿ ಎಂದು ಕಿಡಿ ಕಾರಿದ್ದಾರೆ.

ಕಳೆದ ವಾರ ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ 9 ವರ್ಷದ ದಲಿತ ಬಾಲಕಿಯ ಕುಟುಂಬದೊಂದಿಗೆ ರಾಹುಲ್ ಗಾಂಧಿ ಮಾತನಾಡುತ್ತಿರುವ ಫೋಟೋಗಳನ್ನು ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗಳನ್ನು ಹಂಚಿಕೊಂಡ ರಾಹುಲ್ ಗಾಂಧಿ ಮತ್ತು ಇತರ ಹಲವು ಕಾಂಗ್ರೆಸ್ ನಾಯಕರ ಟ್ವಿಟರ್ ಹ್ಯಾಂಡಲ್‌ಗಳನ್ನು ಸ್ಥಗಿತ ಮಾಡಲಾಗಿದೆ.

“ಟ್ವಿಟರ್‌ ಖಾತೆ ನಿರ್ಬಂಧ ರಾಹುಲ್ ಗಾಂಧಿಯ ಮೇಲಿನ ದಾಳಿ ಅಲ್ಲ. ನಾನು 19 ರಿಂದ 20 ಮಿಲಿಯನ್ ಫಾಲೋವರ್ಸ್ ಹೊಂದಿದ್ದೇನೆ. ನೀವು ಅವರ ಅಭಿಪ್ರಾಯದ ಹಕ್ಕನ್ನು ಕೂಡ ನಿರಾಕರಿಸುತ್ತಿದ್ದೀರಿ” ಎಂದು ರಾಹುಲ್ ಗಾಂಧಿ ಯೂಟ್ಯೂಬ್ ವಿಡಿಯೊ ಮೂಲಕ ಹೇಳಿದ್ದಾರೆ.

“ನಮ್ಮ ರಾಜಕೀಯವನ್ನು ವ್ಯಾಖ್ಯಾನಿಸಲು ಕಂಪನಿ ಪ್ರಯತ್ನಿಸುತ್ತಿದೆ. ರಾಜಕೀಯ ಪ್ರಕ್ರಿಯೆಯಲ್ಲಿ ಕಂಪನಿ ಹಸ್ತಕ್ಷೇಪ ಮಾಡುತ್ತಿದೆ. ಒಬ್ಬ ರಾಜಕಾರಣಿಯಾಗಿ ನಾನು ಅದನ್ನು ಇಷ್ಟಪಡುವುದಿಲ್ಲ. ಇದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ದಾಳಿ” ಎಂದು ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ದೆಹಲಿ ಅತ್ಯಾಚಾರ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಜೊತೆಯಲ್ಲಿರುತ್ತೇನೆ: ರಾಹುಲ್ ಗಾಂಧಿ

ಟ್ವಿಟ್ಟರ್ ಕಂಪನಿಯನ್ನು ಪಕ್ಷಪಾತಿ ಎಂದು ಕರೆದಿರುವ ರಾಹುಲ್ ಗಾಂಧಿ, “ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ದಾಳಿಯಾಗುತ್ತಿದೆ. ಸಂಸತ್ತಿನಲ್ಲಿ ನಮಗೆ ಮಾತನಾಡಲು ಅವಕಾಶವಿಲ್ಲ. ಮಾಧ್ಯಮವನ್ನು ನಿಯಂತ್ರಿಸಲಾಗುತ್ತಿದೆ. ಇಂತಹ ಸಮಯದಲ್ಲಿ ನಾವು ಟ್ವಿಟರ್‌ನಲ್ಲಿ ನಮ್ಮ ಆಲೋಚನೆಗಳನ್ನು ಹಾಕಬಹುದು ಎಂದು ನಾನು ಭಾವಿಸಿದೆ. ಆದರೆ ಅದು ಸಾಧ್ಯವಿಲ್ಲ. ಟ್ವಿಟರ್ ವಾಸ್ತವವಾಗಿ ತಟಸ್ಥ, ವಸ್ತುನಿಷ್ಠ ವೇದಿಕೆಯಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಅದು ಸರ್ಕಾರ ಹೇಳುವುದನ್ನು ಕೇಳುತ್ತದೆ” ಎಂದು ಆರೋಪಿಸಿದ್ದಾರೆ.

ಆದರೆ ಟ್ವಿಟರ್‌ ಮಾತ್ರ, ತಾನು ತನ್ನ ನಿಯಮಗಳನ್ನು “ಎಲ್ಲರಿಗೂ ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ಜಾರಿಗೊಳಿಸಿದೆ” ಎಂದು ಹೇಳಿದೆ.  “ನಮ್ಮ ನಿಯಮಗಳನ್ನು ಉಲ್ಲಂಘಿಸುವ ಚಿತ್ರವನ್ನು ಪೋಸ್ಟ್ ಮಾಡಿದ ನೂರಾರು ಟ್ವೀಟ್‌ಗಳ ಮೇಲೆ ಕ್ರಮವನ್ನು ತೆಗೆದುಕೊಳ್ಳಲಾಗಿದೆ” ಎಂದು ಸ್ಪಷ್ಟಪಡಿಸಿದೆ.

ಇತ್ತ ರಾಹುಲ್ ಗಾಂಧಿಗೆ ಬೆಂಬಲವಾಗಿ ಹಲವಾರು ಕಾಂಗ್ರೆಸ್ ನಾಯಕರು ತಮ್ಮ ಟ್ವಿಟರ್ ಹ್ಯಾಂಡಲ್‌ಗಳಲ್ಲಿ ಹೆಸರು ಮತ್ತು ಫೋಟೋವನ್ನು ಬದಲಿಸಿದ್ದಾರೆ. ತಮ್ಮ ಹೆಸರು ಮತ್ತು ಫೋಟೋ ಬದಲು ರಾಹುಲ್ ಗಾಂಧಿ ಫೋಟೋ ಹಾಕಿ ಬೆಂಬಲ ತೋರಿಸಿದ್ದಾರೆ.

ಕಾಂಗ್ರೆಸ್ ಯುವ ಘಟಕದ ಟ್ವಿಟರ್‌ ಖಾತೆಗಳಲ್ಲಿ ರಾಹುಲ್ ಗಾಂಧಿಯ ಪ್ರೋಫೈಲ್‌ ಚಿತ್ರವನ್ನು ಹಾಕಿಕೊಂಡಿರುವುದು.

ಟ್ವಿಟರ್‌ ಖಾತೆ ಸ್ಥಗಿತಗೊಳಿಸಿರುವ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತು

 

ಇದನ್ನೂ ಓದಿ: ದಲಿತರ ಮಗಳು ಕೂಡ ದೇಶದ ಮಗಳು: ದೆಹಲಿ ಅತ್ಯಾಚಾರ ಕೊಲೆಗೆ ರಾಹುಲ್ ಗಾಂಧಿ ಆಕ್ರೋಶ

LEAVE A REPLY

Please enter your comment!
Please enter your name here