ಗುರುಗ್ರಾಮ್ ಆಡಳಿತವು ಮುಸ್ಲಿಮರಿಗೆ ನಮಾಜ್ ಮಾಡಲು ಗೊತ್ತುಪಡಿಸಿದ 37 ಸ್ಥಳಗಳ ಪೈಕಿ ಎಂಟರಲ್ಲಿ ಸ್ಥಳೀಯರ ವಿರೋಧದಿಂದ ಮಂಗಳವಾರ ಅನುಮತಿ ವಾಪಸ್ ಪಡೆದಿದೆ.
ಗುರುಗ್ರಾಮ್ ಜಿಲ್ಲಾಡಳಿತದ ಅಧಿಕೃತ ಹೇಳಿಕೆಯ ಪ್ರಕಾರ, ಸ್ಥಳೀಯ ಜನರು ಮತ್ತು ಆರ್‌ಡಬ್ಲ್ಯೂಎಯಿಂದ ಆಕ್ಷೇಪಣೆ ಬಂದಿರುವ ಕಾರಣ ಅನುಮತಿಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ.
ಸೆಕ್ಟರ್ 49 ರಲ್ಲಿ ಬೆಂಗಾಲಿ ಬಸ್ತಿ, ಡಿಎಲ್‌ಎಫ್ ಹಂತ -3 ರ ವಿ ಬ್ಲಾಕ್, ಸೂರತ್ ನಗರ ಹಂತ -1, ಖೇರ್ಕಿ ಮಜ್ರಾ ಗ್ರಾಮದ ಹೊರವಲಯ, ದ್ವಾರಕಾ ಎಕ್ಸ್‌ಪ್ರೆಸ್‌ವೇ ಬಳಿಯ ದೌಲತಾಬಾದ್ ಗ್ರಾಮದ ಹೊರವಲಯ, ಸೆಕ್ಟರ್ 68 ರ ರಾಮಗಢ ಗ್ರಾಮದ ಬಳಿ, ಡಿಎಲ್‌ಎಫ್ ಸ್ಕ್ವೇರ್ ಟವರ್ ಬಳಿ ಮತ್ತು ರಾಂಪುರ ಗ್ರಾಮದಿಂದ ನಖ್ರೋಲಾ ರಸ್ತೆ. ಈ ಎಂಟು ಸ್ಥಳಗಳಲ್ಲಿ ನಮಾಜ್ ಮಾಡುವಂತಿಲ್ಲ ಎಂದು ಆದೇಶಿಸಿದೆ.
ಇದನ್ನೂ ಓದಿ: ಬಂಗಾಳ ಉಪಚುನಾವಣೆ: 3 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡ BJP!
“ಯಾವುದೇ ಮಸೀದಿ, ಈದ್ಗಾ ಅಥವಾ ಖಾಸಗಿ ಅಥವಾ ಗೊತ್ತುಪಡಿಸಿದ ಸ್ಥಳದಲ್ಲಿ ನಮಾಜ್ ಮಾಡಬಹುದು. ಆದರೆ, ಯಾವುದೇ ಸಾರ್ವಜನಿಕ ಮತ್ತು ತೆರೆದ ಸ್ಥಳದಲ್ಲಿ ನಮಾಜ್ ಮಾಡಲು ಆಡಳಿತದ ಒಪ್ಪಿಗೆ ಅಗತ್ಯ. ಒಂದು ವೇಳೆ ಸ್ಥಳೀಯ ಜನರು ಇತರ ಸ್ಥಳಗಳಲ್ಲಿ ನಮಾಜ್ ಮಾಡಲು ಆಕ್ಷೇಪಣೆ ವ್ಯಕ್ತಪಡಿಸಿದರೆ, ಅಲ್ಲಿಯೂ ನಮಾಜ್ ಮಾಡಲು ಅನುಮತಿ ನೀಡಲಾಗುವುದಿಲ್ಲ” ಎಂದು ಆಡಳಿತ ಹೇಳಿದೆ.
ಈ ಕುರಿತು ಚರ್ಚೆ ನಡೆಸಲು ಮತ್ತು ಭವಿಷ್ಯದಲ್ಲಿ ನಮಾಜ್ ಮಾಡಲು ಸ್ಥಳಗಳನ್ನು ಗುರುತಿಸಲು ಉಪವಿಭಾಗೀಯ ಮ್ಯಾಜಿಸ್ಟ್ರೇಟ್, ಸಹಾಯಕ ಪೊಲೀಸ್ ಆಯುಕ್ತರು, ಧಾರ್ಮಿಕ ಸಂಘಟನೆಗಳು ಮತ್ತು ಸಿವಿಲ್ ಸೊಸೈಟಿ ಗುಂಪುಗಳ ಸದಸ್ಯರನ್ನೊಳಗೊಂಡ ಸಮಿತಿಯನ್ನು ಗುರುಗ್ರಾಮ್ ಡೆಪ್ಯುಟಿ ಕಮಿಷನರ್ ಯಶ್ ಗರ್ಗ್ ಅವರು ರಚಿಸಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಜಿಲ್ಲಾಡಳಿತವು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಧಾರ್ಮಿಕ ಸಮುದಾಯಗಳಿಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಗುರುಗ್ರಾಮ್ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಪೊಲೀಸರು ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದಾರೆ. ಈ ಹಿಂದೆ ಹಲವು ಬಾರಿ ಗುರುಗ್ರಾಮ್ ನಿವಾಸಿಗಳು ಸಾರ್ವಜನಿಕ ಮೈದಾನದಲ್ಲಿ ಶುಕ್ರವಾರದ ನಮಾಜ್ ಮಾಡುವ ಬಗ್ಗೆ ದೂರು ನೀಡಿದ್ದು, ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಪೊಲೀಸರ ಬದಲಾದ ಸಮವಸ್ತ್ರ: ತೀವ್ರ ಖಂಡನೆ, ಆತಂಕ


