Homeಮುಖಪುಟ‘ಹೆಡ್‌ ಬುಷ್‌’ ವಿಮರ್ಶೆ: ಜಯರಾಜ್‌ ದಾದಾಗಿರಿಯ ದಿನಗಳ ದರ್ಶನ

‘ಹೆಡ್‌ ಬುಷ್‌’ ವಿಮರ್ಶೆ: ಜಯರಾಜ್‌ ದಾದಾಗಿರಿಯ ದಿನಗಳ ದರ್ಶನ

- Advertisement -
- Advertisement -

ಇತ್ತೀಚಿನ ದಿನಗಳಲ್ಲಿ ರೌಡಿಸಂ ಕಥೆಗಳು ಕನ್ನಡ ಚಿತ್ರರಂಗದಿಂದ ಸ್ವಲ್ಪ ಹಿಂದಕ್ಕೆ ಸರಿದಂತೆ ಕಾಣುತ್ತಿದ್ದವು. ದುನಿಯಾ ಸೂರಿ ನಿರ್ದೇಶನದ ‘ಪಾಪ್‌ ಕಾರ್ನ್‌ ಮಂಕಿ ಟೈಗರ್‌’, ‘ಕೆಜಿಎಫ್‌’ ನಂತರದಲ್ಲಿ ರೌಡಿಸಂ ಸಿನಿಮಾಗಳು ಇಳಿಮುಖವಾದಂತೆ ಕಾಣುತ್ತಿದ್ದವು. ಆದರೆ ಡಾಲಿ ಧನಂಜಯ್‌ ಅಭಿನಯದ ‘ಹೆಡ್‌ ಬುಷ್‌’ ಇಂತಹ ಸಿನಿಮಾಗಳಿಗೆ ಮರುಜೀವ ನೀಡಿದೆ.

‘ಆ ದಿನಗಳು’, ‘ಎದೆಗಾರಿಕೆ’, ‘ತಮಸ್ಸು’, ‘ಕಳ್ಳರ ಸಂತೆ’ ಸಿನಿಮಾಗಳ ಮೂಲಕ ರಾಜಕೀಯ, ರೌಡಿಸಂ ಆಧಾರಿತ ಚಿತ್ರಕಥೆಗಳಿಗೆ ಬೇರೊಂದು ಆಯಾಮ ನೀಡಿದವರು ಅಗ್ನಿ ಶ್ರೀಧರ್‌. ಅವರ ‘ದಾದಾಗಿರಿಯ ದಿನಗಳು’ ಕೃತಿಯು ರಾಜ್ಯ ಕಂಡ ಭೂಗತ ಜಗತ್ತಿನ ದಾಖಲೆಯಾಗಿಯೂ ಗುರುತಿಸಿಕೊಂಡಿದೆ. ಈ ಕೃತಿಯನ್ನು ಆಧಾರಿಸಿಯೇ ‘ಆ ದಿನಗಳು’ ತೆರೆಗೆ ಬಂದಿತ್ತು. ಇದೇ ಪುಸ್ತಕವನ್ನು ಆಧರಿಸಿ ‘ಹೆಡ್‌ ಬುಷ್‌’ ನಿರ್ದೇಶಿಸಿದ್ದಾರೆ ‘ಶೂನ್ಯ’.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬೆಂಗಳೂರಿನ ಭೂಗತ ಪಾತಕಿ ಡಾನ್ ಜಯರಾಜ್‌ ಜೀವನದ ಸುತ್ತ ಸಾಗುವ ಶ್ರೀಧರ್‌ ಅವರ ಚಿತ್ರಕಥೆಯು, ಆ ಕಾಲದ ರಾಜಕಾರಣ, ರೌಡಿಸಂ, ಪಾತಕಿಗಳ ಪುಂಡಾಟ, ಪುಡಾರಿಗಳ ಒಳರಾಜಕಾರಣ, ಜನಜೀವನ ಒಂದರೊಳಗೊಂದು ಬೆಸೆದುಕೊಂಡಿರುವುದನ್ನು ಸರಳು ಸರಳಾಗಿ ಬಿಚ್ಚುತ್ತಾ ಹೋಗುತ್ತದೆ.

ರಾಜ್ಯದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದ ಮುಖ್ಯಮಂತ್ರಿ ದೇವರಾಜ ಅರಸು ಅವರ ಕಾಲದಲ್ಲಿನ ಬೆಂಗಳೂರು, ರಾಷ್ಟ್ರ ರಾಜಕಾರಣದ ಬಿಕ್ಕಟ್ಟುಗಳ ನಡುವೆ ಇಂದಿರಾ ಕಾಂಗ್ರೆಸ್‌ನ ಭಾಗವಾಗಿ ಹುಟ್ಟಿಕೊಂಡ ಇಂದಿರಾ ಬ್ರಿಗೇಡ್‌, ಅರಸು ಅವರ ಅಳಿಯ ಎಂ.ಡಿ.ನಟರಾಜ್‌ ಹಾಗೂ ಮಗಳಾದ ನಾಗರತ್ನ (ಸಿನಿಮಾದಲ್ಲಿ ರತ್ನಪ್ರಭಾ) ಅವರ ಒಡನಾಟಕ್ಕೆ ಬಂದ ಡಾನ್ ಜಯರಾಜ್‌, ರೌಡಿಗಳಿಗೆ ಸಿಕ್ಕ ಪ್ರಭುತ್ವದ ಪೋಷಣೆ, ಆ ಕಾಲದ ಬಡ್ಡಿ ದಂಧೆ, ಸೇಟುಗಳ ವ್ಯವಹಾರ, ಕಾಂಗ್ರೆಸ್‌ನೊಳಗಿನ ಒಳರಾಜಕಾರಣ ಇತ್ಯಾದಿಗಳೆಲ್ಲ ಕಥೆಯೊಳಗೆ ಬರುತ್ತವೆ. ಪಾತಕಿಗಳಿಗೆ ಪ್ರಭುತ್ವದ ಪೋಷಣೆ ಸಿಕ್ಕರೆ ಏನೆಲ್ಲ ಅನಾಹುತಗಳಾಗುತ್ತವೆ ಎಂಬುದನ್ನು ಇಲ್ಲಿ ಕಾಣಬಹುದು.

“ರಾಜಕೀಯ ಅಂದರೆ ಉಪಾಯವಾಗಿ ಇರೋರ್‌ ಅತ್ರ ತಗೊಂಡು ಇಲ್ಲದೆ ಇರೋರಿಗೆ ಕೊಡೋದು” ಎನ್ನುತ್ತಾರೆ ಅರಸು. ಈ ಪಾಲಿಸಿಯನ್ನು ಪಾಲಿಸುವ ಜಯರಾಜ್‌ ಗ್ಯಾಂಗ್‌ನ ಗೂಂಡಾಗಿರಿಗೆ ಮಾನವೀಯ ಸ್ಪರ್ಶ ನೀಡಲು ಯತ್ನಿಸಲಾಗಿದೆ. ರೌಡಿಗಳ ಅಟ್ಟಹಾಸದ ಹಿಂದೆ ಬಡವರ ಪರ ಕಾಳಜಿಯೂ ಇತ್ತು ಎಂಬ ನಿರೂಪಣೆಯನ್ನು ಆರಂಭದಲ್ಲಿ ನೀಡಲಾಗಿದೆ. ಆದರೆ ಭೂಗತ ಸಾಮ್ರಾಜ್ಯದಲ್ಲಿ ಮೇಲುಗೈ ಸಾಧಿಸಬೇಕೆಂದು ನಡೆಸುವ ಗ್ಯಾಂಗ್‌ವಾರ್‌, ಅದರೊಳಗಿನ ಪಿತೂರಿಗಳು, ಸನ್ನಿವೇಶಗಳು ಉಂಟು ಮಾಡುವ ವೈಷಮ್ಯ, ಪಾತಕಿಗಳಿಗೆ ಪ್ರಭುತ್ವದ ಬೆಂ‘ಬಲ’ ಸಿಕ್ಕರೆ ಆಗಬಹುದಾದ ಅನಾಹುತಗಳೆಲ್ಲ ಕಥೆಯೊಳಗೆ ಮುಖ್ಯಸ್ಥಾನ ಪಡೆದಿವೆ. ರೌಡಿಗಳ ವೈಯಕ್ತಿಕ ದ್ವೇಷ, ಅಸೂಯೆ, ಸೇಡು ತೀರಿಸಿಕೊಳ್ಳುವ ಹಪಾಹಪಿ, ರಾಜಕೀಯ, ಪೊಲೀಸ್ ವ್ಯವಸ್ಥೆ- ಇವುಗಳೇ ಮುಖ್ಯವಾಗುವುದನ್ನು ‘ಹೆಡ್‌ ಬುಷ್‌’ನಲ್ಲಿ ಕಾಣಬಹುದು.

‘ಹೆಡ್‌ಬುಷ್‌’ ಎಂಬ ಟೈಟಲ್‌ ಇಟ್ಟು, ಅದಕ್ಕೆ ಸಮರ್ಥನೆ ನೀಡಲೆಂದೇ ಎರಡು ದೃಶ್ಯಗಳನ್ನು ತರುಕಿದಂತಿದೆ. ಜಯರಾಜ್‌, ಗಂಗಾ ಹಾಗೂ ಇತರ ಸ್ನೇಹಿತರ ಬಾಲ್ಯವನ್ನು ತೋರಿಸುವಾಗ ‘ಹೆಡ್‌- ಬುಷ್‌’ (ಹೆಡ್‌ ಅಥವಾ ಟೈಲ್‌) ಜೂಜಿನ ಒಂದು ದೃಶ್ಯ ಬರುತ್ತದೆ. ಜಯರಾಜ್ ಗ್ಯಾಂಗ್ ಬಾರ್‌ನಲ್ಲಿ ಹೆಡ್‌ ಬುಷ್‌ ಆಡುತ್ತಿರುವ ಮತ್ತೊಂದು ದೃಶ್ಯ ಬರುತ್ತದೆ. ಈ ಸಂದರ್ಭದಲ್ಲಿ ಬರುವ ಪ್ರೊಫೆಸರ್‌ (ವಿ.ರವಿಚಂದ್ರನ್‌) ಹೆಡ್‌- ಬುಷ್‌ ಬಗ್ಗೆ ತತ್ವಜ್ಞಾನ ಹೊಡೆದು ಹೋಗುತ್ತಾರೆ. ಆ ಮೂಲಕ ಟೈಟಲ್‌ಗೊಂದು ಮಾನ್ಯತೆ ಕೊಡಲು ಶ್ರೀಧರ್‌ ಯತ್ನಿಸಿದ್ದಾರೆ.

ಅರಸು, ಎಂ.ಡಿ.ನಟರಾಜ್‌, ಜಯರಾ‌ಜ್‌, ಗಂಗಾ, ಖಾನ್‌, ಅರಸು, ರತ್ನಪ್ರಭಾ, ಕೊತ್ವಾಲ್‌ ರಾಮಚಂದ್ರ ರಾವ್, ಸಾಮ್ಸನ್‌, ಪೊಲೀಸ್ ಅಧಿಕಾರಿ ಗರುಡಾಚಾರ್‌ ಮೊದಲಾದ ಪಾತ್ರಗಳ ಸುತ್ತ ಸಾಗುವ ಹೆಡ್‌ಬುಷ್‌- ದಾದಾಗಿರಿಯ ದಿನಗಳನ್ನು ಢಾಳಾಗಿ ಚಿತ್ರಿಸಿದೆ.

ಈವರೆಗೆ ಬಂದಿರುವ ರೌಡಿಸಂ ಸಿನಿಮಾಗಳಿಗೆ ಹೋಲಿಸಿದರೆ ಇಲ್ಲಿನ ಕಾಸ್ಟ್ಯೂಮ್‌, ಮೇಕಿಂಗ್‌ ವಿಶಿಷ್ಟವಾಗಿದೆ. ಚರಣ್‌ ರಾಜ್‌ ಸಂಗೀತ ಇಷ್ಟವಾಗುತ್ತದೆ. ಆ ದಿನಗಳು, ಎದೆಗಾರಿಕೆಗಿಂತ ಹೆಚ್ಚಿನ ಸಿನಿಮೀಯತೆ ಹೆಡ್‌ಬುಷ್‌ನಲ್ಲಿದೆ. ಜಯರಾಜ್‌ನನ್ನು ವೈಭವೀಕರಿಸುವ ಹೊಡೆದಾಟದ ದೃಶ್ಯಗಳಿವೆ. ಎಪ್ಪತ್ತರ ದಶಕದ ಪಾತಕ ಲೋಕವನ್ನು ತೆರೆದಿಡಲಾಗಿದೆ. ತಾಂತ್ರಿಕವಾಗಿ ಸಿನಿಮಾ ಉತ್ತಮವಾಗಿದೆ. ಆದರೆ ‘ಎದೆಗಾರಿಕೆ’, ‘ಆ ದಿನಗಳು’ ಸಿನಿಮಾ ಕಥೆಯಲ್ಲಿ ಕಾಣುವಷ್ಟು ಕಲಾತ್ಮಕತೆ, ತೀವ್ರತೆ ಈ ಸಿನಿಮಾದಲ್ಲಿ ಇಲ್ಲ. ಮೊದಲೆರಡು ಸಿನಿಮಾಗಳಲ್ಲಿ ಪಾತಕ ಲೋಕದೊಳಗಿನ ತಲ್ಲಣಗಳಿಗೆ ಮಾನವೀಯ ಸ್ಪರ್ಶವನ್ನು ನೀಡಲಾಗಿದೆ. ಆದರೆ ಇಲ್ಲಿ ಗಂಡಸರ ತೋಳ್ಬಲ ಪ್ರದರ್ಶನ ರಾರಾಜಿಸಿದೆ.

ಇದನ್ನೂ ಓದಿರಿ: ‘ಕಾಂತಾರ’ ದೈವಕ್ಕೂ ‘ಕರ್ಣನ್‌’ ದೈವಕ್ಕೂ ಎಷ್ಟೊಂದು ವ್ಯತ್ಯಾಸ!

‘ಎ’ ಸರ್ಟಿಫಿಕೇಟ್‌ ಪಡೆದಿರುವ ಈ ಸಿನಿಮಾದಲ್ಲಿ ರೌಡಿಗಳ ಭಾಷೆಯನ್ನು ಹಸಿಹಸಿಯಾಗಿ ಬಳಸಲಾಗಿದೆ. ಗತಕಾಲದ ಕತೆಯ ನೆಪದಲ್ಲಿ ಲಿಂಗ ಸೂಕ್ಷ್ಮತೆಗಳನ್ನು ಅಣಕಿಸುವ ಸಂಭಾಷಣೆಗಳು ಸೇರಿಕೊಂಡಿವೆ. ಮೊದಲಾರ್ಧ ಜಯರಾಜ್ ಗ್ಯಾಂಗ್‌ನ ಪಾತಕಗಳ ವೈಭವೀಕರಣಕ್ಕೆ ಮೀಸಲಾದರೆ, ದ್ವಿತೀಯಾರ್ಧ ರೌಡಿಸಂ ಜಗತ್ತಿನ ಒಳ ಹೂರಣವನ್ನು ತೆರೆದಿಡುತ್ತದೆ.

ಭೂಗತ ಜಗತ್ತಿಗೆ ಇದ್ದವರಿಗೆ ಬಡವರ ಪರ ಕಾಳಜಿಯೂ ಇತ್ತು ಎಂದು ತೋರಿಸಲು ಯತ್ನಿಸಿರುವುದು ಅಸ್ವೀಕೃತ ಸಂಗತಿ. ಜಯರಾಜ್‌ ಥರದ ರೌಡಿಗಳು ಬಡವರಿಗೆ ತೊಂದರೆ ಕೊಡುತ್ತಿರಲಿಲ್ಲ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಇಂತಹ ನಿರೂಪಣೆಯು ರೌಡಿಸಂಗೆ ಜನಪ್ರಿಯತೆಯನ್ನು ತಂದುಕೊಡುವ ಅಪಾಯವಿರುತ್ತದೆ. ಹೀಗಾಗಿ ನಾಯಕ ಪಾತ್ರವನ್ನು ವೈಭವೀಕರಿಸುವ ಭರದಲ್ಲಿ ಯಾವ ವಿಚಾರಕ್ಕೆ ಒತ್ತು ನೀಡುತ್ತಿದ್ದೇವೆ ಎಂಬ ಎಚ್ಚರಿಕೆಯೂ ಇರಬೇಕಾಗುತ್ತದೆ.

‘ಹಿಂದಿ ಹೇರಿಕೆ’ಯನ್ನು ಪ್ರಶ್ನಿಸುವ ಈ ಕಾಲದ ತುರ್ತಿನ ಭಾಗವಾಗಿ ದೃಶ್ಯವೊಂದನ್ನು ಸಿನಿಮಾದಲ್ಲಿ ಸೇರಿಸಲಾಗಿದೆ. ಹಿಂದಿಯನ್ನು ಗೌರವಿಸುತ್ತೇವೆ, ಆದರೆ ಕನ್ನಡ ನಮ್ಮ ಹೃದಯದ ಭಾಷೆ. ಹಿಂದಿ ಹೇರಿಕೆಯನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ಹೆಡ್‌ಬುಷ್ ಚಿತ್ರ ತಂಡ ನೀಡಿದೆ.

ಜಯರಾಜ್‌ ಹೆಂಡತಿಯ ಪಾತ್ರದಲ್ಲಿ ಪಾಯಲ್‌ ರಜಪೂತ್ ಅಭಿನಯಿಸಿದ್ದಾರೆ. ಆದರೆ ಈ ಪಾತ್ರದ ಮಹತ್ವ ಅರ್ಥವಾಗುವುದಿಲ್ಲ. ಹೀಗೆ ಬಂದು, ಹಾಗೆ ಹೋದದಷ್ಟೇ ಎನಿಸುತ್ತದೆ.

ದಾದಾಗಿರಿಯ ದಿನಗಳನ್ನು ದೃಶ್ಯರೂಪದಲ್ಲಿ ನೋಡಬೇಕೆಂದು ಬಯಸುವವರಿಗೆ, ಡಾಲಿ ಧನಂಜಯ ಅವರ ಅಭಿನಯವನ್ನು ಕಣ್ತುಂಬಿಕೊಳ್ಳಲು ಬಯಸುವವರಿಗೆ ಹೆಡ್‌ ಬುಷ್‌ ಇಷ್ಟವಾಗಬಹುದು.

ದೇವರಾಜ್ (ದೇವರಾಜ ಅರಸು), ಪ್ರಕಾಶ್ ಬೆಳವಾಡಿ (ಗರುಡಾಚಾರ್‌), ಧನಂಜಯ (ಜಯರಾಜ್‌), ಶ್ರುತಿ ಹರಿಹರನ್‌ (ಅರಸು ಅವರ ಮಗಳಾದ ನಾಗರತ್ನ), ಲೂಸ್‌ ಮಾದ ಯೋಗಿ (ಗಂಗಾ), ವಶಿಷ್ಟ ಸಿಂಹ (ಕೊಲ್ವಾಲ್ ರಾಮಚಂದ್ರ), ಬಾಲನಾಗೇಂದ್ರ (ಸಾಮ್ಸನ್‌), ರಘು ಮುಖರ್ಜಿ (ನಟರಾಜ್‌), ಪಯಲ್ ರಜಪೂತ್‌ (ಜಯರಾಜ್ ಹೆಂಡತಿ) ಅವರು ಅಭಿನಯದಲ್ಲಿ ಮಿಂಚಿದ್ದಾರೆ. ಬಾದಲ್ ನಂಜುಂಡಸ್ವಾಮಿಯವರ ಕಲಾ ನಿರ್ದೇಶನ ಆ ಕಾಲವನ್ನು ಮರುಸೃಷ್ಟಿಸುವಲ್ಲಿ ಹೆಚ್ಚಿನ ಪಾತ್ರವನ್ನು ವಹಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...