ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಇಂದು (ಭಾನುವಾರ) ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಪ್ರಶ್ನೆಪತ್ರಿಕೆಯಲ್ಲಿ ಹಿಂದಿ ಪ್ರಶ್ನೆಗಳು ನುಸುಳಿದ್ದು ಅಭ್ಯರ್ಥಿಗಳು ಗೊಂದಲಕ್ಕೆ ಸಿಲುಕಿದರು. ತಾಂತ್ರಿಕ ದೋಷದಿಂದಾಗಿ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಹಿಂದಿ ಭಾಷೆಯ ಪ್ರಶ್ನೆಗಳು ಬಂದಿದ್ದು, ಮರು ಪರೀಕ್ಷೆ ನಡೆಸುವುದಾಗಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ತಿಳಿಸಿದೆ.
ಆನ್‌ಲೈನ್‌ನಲ್ಲಿ ಪರೀಕ್ಷೆ ನಿಗದಿಯಾಗಿತ್ತು. ಸಾಮಾನ್ಯಜ್ಞಾನ ಪ್ರಶ್ನೆಪತ್ರಿಕೆ (100 ಅಂಕಗಳು) ಸರಿಯಾಗಿತ್ತು. ಆದರೆ ಕನ್ನಡ ಪ್ರಶ್ನೆಪತ್ರಿಕೆ (200 ಅಂಕ) ಗೊಂದಲವನ್ನು ಉಂಟುಮಾಡಿತು. ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಒಟ್ಟು ನೂರು ಪ್ರಶ್ನೆಗಳು ಇರುತ್ತವೆ. ತಾಂತ್ರಿಕ ದೋಷದಿಂದಾಗಿ ಮೊದಲ ಹತ್ತು ಪ್ರಶ್ನೆಗಳು ಮಾತ್ರ ಕನ್ನಡದಲ್ಲಿದ್ದವು. ಉಳಿದ ಪ್ರಶ್ನೆಗಳೆಲ್ಲ ಹಿಂದಿ ಭಾಷೆಯದ್ದಾಗಿದ್ದವು. ಹೀಗಾಗಿ ಪರೀಕ್ಷಾ ಅಭ್ಯರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ನಾನುಗೌರಿ.ಕಾಂ ಜೊತೆ ಮಾತನಾಡಿದ ಪರೀಕ್ಷಾ ಅಭ್ಯರ್ಥಿ ಹರೀಶ್ ಸಿಂಗ್ರಿಹಳ್ಳಿ, “ಹೆಚ್ಚುವರಿ ಸಮಯವನ್ನು ನೀಡಿ ಕೆಲವು ಕಡೆ ಪರೀಕ್ಷೆ ನಡೆಸಲಾಗಿದೆ. ಆದರೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಪರೀಕ್ಷೆ ನಡೆದಿಲ್ಲ. ನನ್ನ ಪರೀಕ್ಷೆ 9ರಿಂದ 12 ಗಂಟೆಗೆ ಮುಗಿಯಬೇಕಿತ್ತು. ಆದರೆ 2 ಗಂಟೆಗೆ ಮುಗಿಯಿತು” ಎಂದು ತಿಳಿಸಿದರು.
“ಹೆಚ್ಚುವರಿ ಸಮಯ ನೀಡಿ ಪರೀಕ್ಷೆ ನಡೆಸಿದರೂ ಮತ್ತೊಂದು ಸಮಸ್ಯೆಯಾಗಿತ್ತು. ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಪ್ರಶ್ನೆಗಳು ಪುನಾರಾವರ್ತನೆಯಾಗಿದ್ದವು. ಹೀಗಾಗಿ ಪರೀಕ್ಷೆ ಬರೆದವರಿಗೂ ಮರು ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ. ಅಲ್ಲದೆ ತುಮಕೂರಿನಲ್ಲಿ ಪರೀಕ್ಷೆ ಬರೆಯಲು ಬಯಸಿದ್ದ ಅನೇಕರನ್ನು ಬೆಂಗಳೂರಿನ ಪರೀಕ್ಷಾ ಕೇಂದ್ರಗಳಿಗೆ ಹಾಕಲಾಗಿತ್ತು. ಹೀಗಾಗಿ ನಮ್ಮ ಸಮಯ, ಹಣ ಎರಡೂ ವ್ಯರ್ಥವಾಗಿದೆ” ಎಂದರು.
ತುಮಕೂರಿನಲ್ಲಿ ಪ್ರತಿಭಟನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಭ್ಯರ್ಥಿಗಳು, “ಈ ರೀತಿ ಮತ್ತೆ ಆಗಬಾರದು. ಎಲ್ಲರಿಗೂ ಅನ್ಯಾಯವಾಗಿದೆ. ಬೇರೆ ಭಾಷೆಗೆ ಇಲ್ಲದೆ ಇರುವ ಸಮಸ್ಯೆ ಕನ್ನಡಕ್ಕೆ ಮಾತ್ರ ಯಾಕೆ?” ಎಂದು ಪ್ರಶ್ನಿಸಿದರು.
“ಇಲ್ಲಿಯವರೆಗೂ ಬೇರೆ ವಿಷಯಗಳ ಪರೀಕ್ಷೆಗಳು ಸುವ್ಯವಸ್ಥಿತವಾಗಿ ನಡೆದಿವೆ. ಆದರೆ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ದೋಷ ಕಂಡು ಬಂದಿದೆ. ಮುಂದಿನ ಭವಿಷ್ಯದ ಮೇಲೆ ಜಿಗುಪ್ಸೆ ಬರುವ ರೀತಿಯಲ್ಲಿ ಹಿಂದಿ ಆಕ್ರಮಿಸಿದೆ. ಇದು ಕನ್ನಡಿಗರ ದುರಂತ ಸ್ಥಿತಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರೀಕ್ಷಾ ಅಭ್ಯರ್ಥಿಗಳ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಹೊಸ ನೋಟಿಫಿಕೇಷನ್ ಹೊರಡಿಸಿದ್ದು, ಮರು ಪರೀಕ್ಷೆ ನಡೆಸುವುದಾಗಿ ತಿಳಿಸಿದೆ.
“ತಾಂತ್ರಿಕ ದೋಷದಿಂದಾಗಿ ಯುಜಿಸಿ-ಎನ್‌ಇಟಿ ಕನ್ನಡ ಪರೀಕ್ಷೆಯಲ್ಲಿ ತೊಂದರೆಯಾಗಿದ್ದು, ಶೀಘ್ರದಲ್ಲೇ ಮರುಪರೀಕ್ಷೆ ನಡೆಸಲು ಕ್ರಮ ವಹಿಸಲಾಗುವುದು” ಎಂದು ಎನ್‌ಟಿಎ ಹೇಳಿದೆ.

ಇದನ್ನೂ ಓದಿರಿ: ಮಧ್ಯಪ್ರದೇಶ: ಹಿಂದುತ್ವ ಗುಂಪಿನ ರ್‍ಯಾಲಿಯಿಂದಾಗಿ ಕೋಮು ಘರ್ಷಣೆ; 12ಕ್ಕೂ ಹೆಚ್ಚು ಮುಸ್ಲಿಮರ ಬಂಧನ