Homeಕರ್ನಾಟಕ371J ಹೈದರಾಬಾದ್‌ ಕರ್ನಾಟಕ ಮೀಸಲಾತಿ: ಸಾಧಕ ಬಾಧಕಗಳು - ಡಾ.ರಝಾಕ ಉಸ್ತಾದ

371J ಹೈದರಾಬಾದ್‌ ಕರ್ನಾಟಕ ಮೀಸಲಾತಿ: ಸಾಧಕ ಬಾಧಕಗಳು – ಡಾ.ರಝಾಕ ಉಸ್ತಾದ

ಹೈದ್ರಾಬಾದ ಕರ್ನಾಟಕ ಪ್ರದೇಶವು ಕರ್ನಾಟಕ ರಾಜ್ಯದ ಆಡಳಿತಕ್ಕೆ ಒಳಪಟ್ಟು 70 ವರ್ಷಗಳಾಗುತ್ತ ಬಂದರೂ ಇಂದಿಗೂ ಅಭಿವೃದ್ಧಿ ಮರೀಚಿಕೆಯಾಗಿದೆ. ಈ ಭಾಗವು ವಿಶೇಷವಾಗಿ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ, ಸಾರ್ವಜನಿಕ ಸೇವೆಗಳು, ಮಾನವ ಅಭಿವೃದ್ಧಿ ಪೂರಕ ವಾತಾವರಣದಿಂದ ಹಿನ್ನಡೆ ಅನುಭವಿಸಿದೆ.

- Advertisement -
- Advertisement -

ಮೀಸಲಾತಿ ಕಣ್ಣಗಾಯಕ್ಕೊಂದು ಕನ್ನಡಿ

ಸರಣಿ ಸಂಪಾದಕರು: ವಿಕಾಸ್‌ ಆರ್‌ ಮೌರ್ಯ

ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ 560ಕ್ಕೂ ಹೆಚ್ಚು ರಾಜಮಹಾರಾಜರ ಸಂಸ್ಥಾನಗಳನ್ನು ಹೊಂದಿದ್ದ ಈ ದೇಶದಲ್ಲಿ ಭೌತಿಕ ಅಭಿವೃದ್ಧಿಯಾಗಲೀ, ಸಾಮಾಜಿಕ ವ್ಯವಸ್ಥೆಯಾಗಲಿ, ಸಾಂಸ್ಕøತಿಕವಾಗಿಯಾಗಲಿ, ಶೈಕ್ಷಣಿಕವಾಗಿಯಾಗಲಿ ಏಕರೀತಿಯಾಗಿ ಇರಲಿಲ್ಲ. ಈ ವಿಭಿನ್ನ ದೃಷ್ಟಿಕೋನದ ಭಾರತವು ಒಂದು ಮಾನದಂಡದಲ್ಲಿ ಒಂದಾಗುವದು ಭವಿಷ್ಯದ ದೃಷ್ಟಿಯಿಂದ ಅವಶ್ಯಕತೆಯಿದ್ದ ಕಾರಣ ಸಂವಿಧಾನ ನಿರ್ಮಾತೃಗಳು ಸಂವಿಧಾನ ರಚನೆ ಸಂದರ್ಭದಲ್ಲಿ ಯಾವುದೇ ರಾಜ್ಯದಲ್ಲಿ ಒಂದು ಪ್ರದೇಶ ಮತ್ತೊಂದು ಪ್ರದೇಶಕ್ಕಿಂತ ಅಭಿವೃದ್ಧಿಯಲ್ಲಿ, ಶಿಕ್ಷಣದಲ್ಲಿ ವಿಭಿನ್ನವಾಗಿದ್ದರೆ ಅಂತಹ ರಾಜ್ಯಗಳಲ್ಲಿ ಆ ಒಂದು ಪ್ರದೇಶಕ್ಕೆ ವಿಶೇಷ ಕಾನೂನು ರಚನೆ ಮಾಡುವ ಅಧಿಕಾರವನ್ನು ಸಂವಿಧಾನದ ಅನುಚ್ಛೇದ 371 ರಲ್ಲಿ ನೀಡಲಾಗಿದೆ. ಅದರ ಆಧಾರದಲ್ಲಿ ಈಗಾಗಲೇ ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್, ಅಸ್ಸಾಂ, ನಾಗಾಲ್ಯಾಂಡ, ಒಡಿಸ್ಸಾ, ಮಿಜೋರಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ತ್ರಿಪುರಾ ಹಾಗೂ ಗೋವಾ ರಾಜ್ಯಗಳಿಗೆ ಅನುಚ್ಛೇದ 371ರ ಅಡಿಯಲ್ಲಿ ವಿಶೇಷ ಕಾನೂನು ರಚಿಸಲು ಅವಕಾಶ ನೀಡಲಾಗಿದೆ.

ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಮತ್ತು 1956 ರವರೆಗೆ ಹೈದ್ರಾಬಾದ್ ರಾಜ್ಯದ ಅಧೀನದಲ್ಲಿ ಇದ್ದಂತಹ ಹೈದ್ರಾಬಾದ ಕರ್ನಾಟಕ (ಬೀದರ, ಗುಲ್ಬರ್ಗಾ, ಯಾದಗೀರ, ರಾಯಚೂರು ಮತ್ತು ಕೊಪ್ಪಳ) ಪ್ರದೇಶ ರಾಜ್ಯಗಳ ಪುನರ್ವಿಂಗಡನೆಯ ಸಂದರ್ಭದಲ್ಲಿ ಅಂದಿನ ಮೈಸೂರು ರಾಜ್ಯಕ್ಕೆ ಸೇರಿಸಲಾಗಿತ್ತು. ಹೈದ್ರಾಬಾದ ಸಂಸ್ಥಾನದಲ್ಲಿ ಜಾರಿಯಲ್ಲಿದ್ದಂತಹ ಮುಲ್ಕಿ ಕಾನೂನಿನ ಸಂವಿಧಾನದ ಮಾನ್ಯತೆಯನ್ನು ಆಂಧ್ರಪ್ರದೇಶ ರಾಜ್ಯದ ತೆಲಂಗಾಣ ಪ್ರದೇಶಕ್ಕೆ 1957ರಲ್ಲಿ ಸಂವಿಧಾನ ಅನುಚ್ಛೇದ 371(1) ರ ಅಡಿಯಲ್ಲಿ ನೀಡಲಾಗಿತ್ತು, ಅದರಂತೆ, ಹೈದ್ರಾಬಾದ ಸಂಸ್ಥಾನದ ಭಾಗವಾಗಿದ್ದ ಇಂದಿನ ಮಹಾರಾಷ್ಟ್ರದ ಮರಾಠಾವಾಡ ಪ್ರದೇಶವು ಸೇರಿದಂತೆ ವಿದರ್ಭಾ, ಕಚ್, ಸೌರಾಷ್ಟ್ರ ಪ್ರದೇಶಕ್ಕೆ ಅನುಚ್ಛೇದ 371(2) ಅಡಿಯಲ್ಲಿ ಮುಲ್ಕಿ ಕಾನೂನಿನ ಮಾದರಿಯಲ್ಲಿ ವಿಶೇಷ ಕಾನೂನು ರಚನೆ ಅಧಿಕಾರ ನೀಡಲಾಗಿದೆ. ಆದರೆ, 1956ರಲ್ಲಿ ಮೈಸೂರು ರಾಜ್ಯವನ್ನು ಸೇರಿದ ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ಮುಲ್ಕಿ ಕಾನೂನಿನ ಸೌಲಭ್ಯ ಸಿಗಲಿಲ್ಲವಾದ್ದರಿಂದ ಈಗ ಅನುಚ್ಛೇದ 371ಜೆ ಅಡಿಯಲ್ಲಿ ಮುಲ್ಕಿ ಕಾನೂನಿನ ಸೌಲಭ್ಯವನ್ನು ವಿಶೇಷ ಕಾನೂನು ಮೂಲಕ ರಚಿಸಲು ಅವಕಾಶ ನೀಡಲಾಗಿದೆ.

ಹೈದ್ರಾಬಾದ ಕರ್ನಾಟಕ ಪ್ರದೇಶವು ಈಗ ಆರು ಜಿಲ್ಲೆಗಳನ್ನೊಳಗೊಂಡ ಕಂದಾಯ ವಿಭಾಗವಾಗಿದ್ದು, ಕರ್ನಾಟಕ ರಾಜ್ಯದ ಆಡಳಿತಕ್ಕೆ ಒಳಪಟ್ಟು 70 ವರ್ಷಗಳಾಗುತ್ತ ಬಂದರೂ ಇಂದಿಗೂ ಅಭಿವೃದ್ದಿ ಮರೀಚಿಕೆಯಾಗಿದೆ. ಈ ಭಾಗವು ವಿಶೇಷವಾಗಿ ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ, ಸಾರ್ವಜನಿಕ ಸೇವೆಗಳು, ಮಾನವ ಅಭಿವೃದ್ಧಿ ಪೂರಕ ವಾತಾವರಣದಿಂದ ಹಿನ್ನಡೆ ಅನುಭವಿಸಿದೆ. ಎನ್.ಧರ್ಮಸಿಂಗ ಮುಖ್ಯ ಮಂತ್ರಿಯಾಗುವವರೆಗೆ ಹೈ-ಕ ಪ್ರದೇಶದಲ್ಲಿ ಒಂದೇ ಒಂದು ಸರಕಾರಿ ಮೆಡಿಕಲ್ ಕಾಲೇಜು, ಸರಕಾರಿ ಇಂಜಿನಿಯರಿಂಗ್ ಕಾಲೇಜು ಇರಲಿಲ್ಲ. ಇಂದಿಗೂ ಇಡೀ ಪ್ರದೇಶದಲ್ಲಿ ಒಂದೇ ಒಂದು ಕಾನೂನು ಮಹಾವಿದ್ಯಾಲಯವಿಲ್ಲ, ಯಾವುದೇ ವೃತ್ತಿಪರ ತಾಂತ್ರಿಕ ಅಥವಾ ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳಿಲ್ಲ.

2011 ರವರೆಗೆ ಕೇವಲ ಒಂದೇ ವಿಶ್ವವಿದ್ಯಾಲಯ ಅದು ಗುಲ್ಬರ್ಗಾ ವಿಶ್ವವಿದ್ಯಾಲಯ ಈ ಭಾಗದ ಉನ್ನತ ಶಿಕ್ಷಣ ಪೂರೈಸುವ ಸಂಸ್ಥೆಯಾಗಿತ್ತು. 2015 ರವರೆಗೆ ಈ ಭಾಗದಲ್ಲಿ ಇರುವ ಪದವಿ ಮಹಾವಿದ್ಯಾಲಯಗಳಲ್ಲಿ ಶೇ 50 ರಷ್ಟು ಹುದ್ದೆಗಳು ಖಾಲಿ ಇದ್ದವು. ಗ್ರಾಮೀಣ ಭಾಗದ ಯಾವ ಪದವಿ ಪೂರ್ವ ಕಾಲೇಜುಗಳಲ್ಲಿಯೂ ಇಂದಿಗೂ ಪೂರ್ಣ ಪ್ರಮಾಣದ ಉಪನ್ಯಾಸಕರಿಲ್ಲ. 371ಜೆ ಕಾನೂನು ಜಾರಿಯಾಗಿ ಆರು ವರ್ಷವಾದರೂ ಹೈ-ಕ ಪ್ರದೇಶದಲ್ಲಿ 12,000 ಪ್ರಾಥಮಿಕ ಶಾಲಾಶಿಕ್ಷಕರ ಹುದ್ದೆಗಳು ಖಾಲಿ ಇವೆ, 2000 ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಶೈಕ್ಷಣಿಕ ವ್ಯವಸ್ಥೆ ಇದ್ದೂ ಇಲ್ಲದಂತಾಗಿರುವದು ಈ ಭಾಗದ ದುರಂತವೇ ಸರಿ. ಇಂತಹ ವ್ಯವಸ್ಥೆಯಲ್ಲಿ ಓದಿದಂತಹ ಈ ಭಾಗದ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಾವ ರೀತಿ ಭಾಗವಹಿಸಲು ಸಾಧ್ಯ?

ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಇರುವಂತಹ ಬಡತನ, ನಿರುದ್ಯೋಗ ಮತ್ತು ಉದ್ಯೋಗ ಅವಕಾಶ ಇಲ್ಲದಿರುವ ಕಾರಣದಿಂದ ಬಹುತೇಕ ಗ್ರಾಮೀಣ ಭಾಗದ ಜನ ಪ್ರತಿವರ್ಷ ಮಹಾನಗರಗಳಿಗೆ ಕುಟುಂಬ ಸಮೇತ ಗುಳೆ ಹೋಗುವ ಪರಿಸ್ಥಿತಿ ಇದೆ. ಈ ಗುಳೆ ಹೋಗುವ ಕಾರಣಕ್ಕೆ ತಮ್ಮ ಜೊತೆಗೆ ಪಾಲಕರು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುವುದರಿಂದ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ, ಶಾಲೆಯಿಂದ ಹೊರಗುಳಿದ ಮಕ್ಕಳು, ಉನ್ನತ ಶಿಕ್ಷಣದಿಂದ ವಂಚಿತರಾಗುವ ಮಕ್ಕಳ ಸಂಖ್ಯೆ ಜಾಸ್ತಿಯಾಗುತ್ತ ಬಂದಿದೆ. ಇತ್ತೀಚಿಗೆ ಬಂದ 2018-19ನೇ ಸಾಲಿನ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ವರದಿಯ ಪ್ರಕಾರ ದೇಶದ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಅನುಪಾತ (Gross Enrollment Ratio) ಶೇ 26.3 ರಷ್ಟಿದೆ, ರಾಜ್ಯದ ಉಇಖ ಸರಾಸರಿ ಅನುಪಾತ ಶೇ 28.2 ರಷ್ಟಿದೆ. ಅದೇರೀತಿ ಹೈದ್ರಾಬಾದ ಕರ್ನಾಟಕದ ಈ ಆರು ಜಿಲ್ಲೆಗಳ ಉಇಖ ಕೇವಲ ಶೇ 10.14 ಎಂದು ವರದಿಯಾಗಿದೆ. ಅದರಲ್ಲಿಯೂ ಯಾದಗೀರಿ ಜಿಲ್ಲೆಯ ಉಇಖ ರಾಷ್ಟ್ರಮಟ್ಟದಲ್ಲಿಯೇ ಅತ್ಯಂತ ಕಡಿಮೆ ಅಂದರೆ ಕೇವಲ ಶೇ 4.07 ಇರುವುದು ಸರಕಾರದ ನಡೆಗೆ ಹಿಡಿದ ಕನ್ನಡಿಯಾಗಿದೆ.

ಇದನ್ನೂ ಓದಿ: ಮೀಸಲಾತಿ ಮತ್ತು ಆರ್ಥಿಕತೆ : ಡಾ. ಬಿ.ಸಿ ಬಸವರಾಜ್

ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಮಾನವ ಆರೋಗ್ಯ ಮತ್ತು ಪಶು ಆರೋಗ್ಯ ಸೇವೆಗಳ ಪರಿಸ್ಥಿತಿ ಭಿನ್ನವಾಗಿಲ್ಲ. ಕನಿಷ್ಠ ತಾಲ್ಲೂಕು ಆಸ್ಪತ್ರೆಯಲ್ಲಿಯೂ ಕೂಡ ವೈದ್ಯರಿಲ್ಲದ ಪರಿಸ್ಥಿತಿಯಿದೆ. ಗ್ರಾಮೀಣ ಭಾಗದಲ್ಲಿ ಸ್ಟಾಫ್ ನರ್ಸ್‍ಗಳೇ ವೈದ್ಯರಾಗಿ ಸೇವೆ ಸಲ್ಲಿಸುವಂತಹ ಪರಿಸ್ಥಿತಿಯಿದೆ. ಒಟ್ಟಾರೆಯಾಗಿ ಆರೋಗ್ಯ ಸೇವೆ ಅತ್ಯಂತ ಕೆಳಮಟ್ಟದಲ್ಲಿವೆ ಎಂದು ಹಲವಾರು ವರದಿಗಳು ಸರಕಾರಕ್ಕೆ ಹೇಳಿವೆಯಾದರೂ ಸರಕಾರ ಯಾವುದೇ ಕ್ರಮ ಕೈಗೊಂಡಿರುವ ಉದಾಹರಣೆ ಇಲ್ಲ. ತಾಲ್ಲೂಕು ಕೇಂದ್ರದಲ್ಲಿ ಮಾತ್ರ ಹೆರಿಗೆ ಆಸ್ಪತ್ರೆಯಿರುವುದರಿಂದ ಶೇ.70ರಷ್ಟು ಹೆರಿಗೆಗಳು ಈ ಭಾಗದಲ್ಲಿ ಅಸುರಕ್ಷಿತವಾಗಿ ನಡೆಯುತ್ತಿವೆ ಎಂದು ಹೇಳಲಾಗಿದೆ. ಬಡತನ, ಅನಕ್ಷರತೆ ಕಾರಣದಿಂದ ಶೇ.57ರಷ್ಟು ತಾಯಂದಿರು ಹಾಗೂ ಶೇ.65ರಷ್ಟು ಮಕ್ಕಳು ಅಪೌಷ್ಠಿಕಾಂಶದಿಂದ ಬಳಲುತ್ತಿದ್ದಾರೆ. ಇಂತಹ ಸ್ಥಿತಿ ಇದ್ದಾಗಲೂ ಕರ್ನಾಟಕ ರಾಜ್ಯದ ಘನ ಸರಕಾರ ಯಾವುದೇ ದೂರದೃಷ್ಟಿಯುಳ್ಳ ಕಾರ್ಯಕ್ರಮ, ಯೋಜನೆಗಳನ್ನು ರೂಪಿಸಲಿಲ್ಲ.

ಹೈದ್ರಾಬಾದ ಕರ್ನಾಟಕ ಪ್ರದೇಶವು ನೈಸರ್ಗಿಕವಾಗಿ ಅತ್ಯಂತ ಸಂಪದ್ಭರಿತ ಪ್ರದೇಶವಾಗಿದೆ, ಇಲ್ಲಿ ನೈಸರ್ಗಿಕವಾಗಿ ಸಿಗುವ ಖನಿಜ ಸಂಪತ್ತು ವಿಶೇಷವಾಗಿ ಕಬ್ಬಿಣದ ಅದಿರು, ತಾಮ್ರದ ಅದಿರು, ರಾಜ್ಯದಲ್ಲಿ ಚಿನ್ನದ ಅದಿರು ಸಿಗುವ ಏಕೈಕ ಗಣಿ ಪ್ರದೇಶ ಹಟ್ಟಿ ಚಿನ್ನದ ಗಣಿ, ಗುಲ್ಬರ್ಗಾ ಜಿಲ್ಲೆಯಲ್ಲಿ ಸುಣ್ಣದ ಕಲ್ಲು, ಇತ್ತೀಚಿಗೆ ಶಹಾಪುರ ತಾಲ್ಲೂಕಿನ ಗೋಗಿಯಲ್ಲಿ ಯುರೇನಿಯಂ ಅದಿರು ಸಿಗುತ್ತಿದೆ ಎನ್ನಲಾಗಿದೆ. ಅದೇರೀತಿ ಅತೀಹೆಚ್ಚು ನದಿಗಳು ಈ ಭಾಗದಲ್ಲಿವೆ. ಈ ಪ್ರದೇಶವು ಕೃಷ್ಣ ಮತ್ತು ಗೋದಾವರಿ ನದಿ ಪಾತ್ರ ಹೊಂದಿದ್ದು ಸಾಕಷ್ಟು ನೀರು ಪ್ರತಿವರ್ಷ ಹರಿಯುತ್ತದೆ. ಆದರೆ, ಈ ನೀರು ರೈತರ ಹೊಲಗಳಿಗೆ ಹರಿಯುವಂತಹ ಯೋಜನೆಗಳ ಕುರಿತು ರಾಜಕೀಯ ಪಕ್ಷಗಳು ಮಾತನಾಡುತ್ತವೆ ಹೊರತು ಕಾರ್ಯರೂಪಕ್ಕೆ ತರುವುದಿಲ್ಲ. ಮಳೆಗಾಲದಲ್ಲಿ ಸಾವಿರಾರು ಟಿ.ಎಂ.ಸಿ. ಅಡಿ ನೀರು ನದಿಗಳಲ್ಲಿ ಹರಿಯುವುದನ್ನು ನೋಡಿ ಯಾರಿಗಾದರೂ ಹೊಟ್ಟೆಗೆ ಬೆಂಕಿ ಬೀಳದೆ ಇರಲಿಕ್ಕೆ ಸಾಧ್ಯವಿಲ್ಲ. ಯಾಕೆಂದರೆ ರಾಜ್ಯದ ಇತರೆ ಪ್ರದೇಶದಲ್ಲಿ ಕೇವಲ ಒಂದು-ಎರಡು ಟಿ.ಎಂ.ಸಿ. ಅಡಿ ನೀರಿಗೆ ರಕ್ತಸಿಕ್ತ ಹೋರಾಟ ಮಾಡಿದ್ದನ್ನು ನೋಡಿದ್ದೇವೆ. ಕೃಷ್ಣ ಬಿ-ಸ್ಕೀಂ ಅಡಿಯಲ್ಲಿ 170 ಟಿ.ಎಂ.ಸಿ. ಅಡಿ ನೀರು ಕರ್ನಾಟಕ ರಾಜ್ಯಕ್ಕೆ ಹಂಚಿಕೆ ಮಾಡಿ ತೀರ್ಪು ಪ್ರಕಟವಾಗಿ ದಶಕವಾಗುತ್ತ ಬಂದರೂ ಅದನ್ನು ಗೆಜೆಟ್‍ನಲ್ಲಿ ಇಲ್ಲಿಯವರೆಗೂ ಪ್ರಕಟಿಸದೇ ಇರುವದರಿಂದ ಕೃಷ್ಣ ನದಿ ನೀರು ಬಳಕೆ ಮಾಡಲು ಈ ಭಾಗಕ್ಕೆ ಸಾಧ್ಯವಾಗಿಲ್ಲ.

ರಾಜ್ಯ ಸರಕಾರ ನಿರ್ದಿಷ್ಟ ಯೋಜನೆಯೊಂದನ್ನು ರೂಪಿಸಿ ಇಲ್ಲಿ ಸಿಗುವ ನೈಸರ್ಗಿಕ ಸಂಪನ್ಮೂಲವನ್ನೇ ಸಮರ್ಪಕವಾಗಿ ಬಳಕೆ ಮಾಡಿ ಉದ್ಯೋಗ ಸೃಷ್ಟಿ ಮಾಡಿದಲ್ಲಿ ಗುಳೆ ಹೋಗುವ ವ್ಯವಸ್ಥೆಯನ್ನು ತಡೆಯಬಹುದು, ಅದೇರೀತಿ ಈ ಭಾಗದಲ್ಲಿ ಲಭ್ಯವಿರುವ ನೀರನ್ನು ವಿವಿಧ ನೀರಾವರಿ ಯೋಜನೆಗಳ ಮೂಲಕ ಕಾಲಮಿತಿಯೊಳಗೆ ಪೂರ್ಣಗೊಳಿಸಿದಲ್ಲಿ ರಾಜ್ಯಕ್ಕೆ, ದೇಶಕ್ಕೆ ಆಹಾರ ಉತ್ಪಾದಿಸುವ ಕಣಜವಾಗಿ ಈ ಪ್ರದೇಶ ಬದಲಾಗುವದರ ಜೊತೆಗೆ ಜನರ ಜೀವನಮಟ್ಟ ಸುಧಾರಣೆಯಾಗುವದರಲ್ಲಿ ಸಂಶಯವಿಲ್ಲ.

ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಸರಕಾರ ಹಲವಾರು ಸರಕಾರಿ ಸೌಮ್ಯದ ಕಾರ್ಖಾನೆಗಳನ್ನು ಸ್ಥಾಪಿಸಿದೆ. ಅವುಗಳಲ್ಲಿ ವಿಶೇಷವಾಗಿ ಹಟ್ಟಿ ಚಿನ್ನದ ಗಣಿ, ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ, ಯರಮರಸ್ ಶಾಖೋತ್ಪನ್ನ ವಿದ್ಯುತ ಕೇಂದ್ರ, ಬಳ್ಳಾರಿ ಶಾಖೋತ್ಪನ್ನ ವಿದ್ಯುತ ಕೇಂದ್ರಗಳಿದ್ದು, ಈ ಕೈಗಾರಿಕೆಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿದ್ದರೂ ಬೇರೆ ರಾಜ್ಯ, ಬೇರೆ ಭಾಗದಿಂದ ಬಂದವರಿಗೆ ಇಲ್ಲಿ ಉದ್ಯೋಗ ನೀಡಿರುವುದರಿಂದ ಸ್ಥಳೀಯರೂ ಜಮೀನು, ನೀರು, ವಾತಾವರಣ ಕಳೆದುಕೊಂಡು ಕೂಡುವಂತಾಗಿದೆ. ಹಲವಾರು ಖಾಸಗಿ ಕೈಗಾರಿಕೆಗಳು ಈ ಭಾಗದಲ್ಲಿದ್ದರೂ ಅವುಗಳಲ್ಲಿಯೂ ಕೇವಲ ದಿನಗೂಲಿ ಅಥವಾ ಡಿ-ಗ್ರೂಪ್ ಹುದ್ದೆಗಳಿಗೆ ಮಾತ್ರ ಸ್ಥಳೀಯರಿಗೆ ಅದೂ ಕಡಿಮೆ ಅವಕಾಶ ನೀಡಲಾಗಿದೆ. ಹೀಗಾಗಿ ಉದ್ಯೋಗಾವಕಾಶ ಇಲ್ಲದೇ ಸಾಕಷ್ಟು ಜನ ವಿದ್ಯಾವಂತರೂ ಸಹ ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ಈ ಭಾಗದಲ್ಲಿ ವಿವಿಧ ಇಲಾಖೆಗಳಲ್ಲಿ ಮಂಜೂರಾಗಿರುವ ಸರಕಾರಿ ಹುದ್ದೆಗಳು ಸಹ ಬೇರೆ ಭಾಗದವರ ಪಾಲಾಗಿರುವುದು ಸತ್ಯ. ಪ್ರಾಥಮಿಕ ಶಾಲಾಶಿಕ್ಷಕರ ಹುದ್ದೆಗಳಲ್ಲಿ ಶೇ.80ರಷ್ಟು ಶಿಕ್ಷಕರು, ಪ್ರೌಢ ಶಾಲಾ ವಿಭಾಗದಲ್ಲಿ ಶೇ 51 ರಷ್ಟು ಶಿಕ್ಷಕರು, ವಿಶ್ವವಿದ್ಯಾಲಯಗಳಲ್ಲಿ ಶೇ 75 ರಷ್ಟು ಹುದ್ದೆಗಳು, ಬಹುತೇಕ ಇಲಾಖೆಗಳ ಅಧಿಕಾರಿಗಳು ಬೇರೆ ಭಾಗದವರೇ ಇಲ್ಲಿ ಕೆಲಸ ಮಾಡುತ್ತ ಬಂದಿದ್ದಾರೆ. 2014ಕ್ಕಿಂತ ಮುಂಚೆ ಕರ್ನಾಟಕ ಸರಕಾರದಿಂದ ನೇರವಾಗಿ ಕೆ.ಎ.ಎಸ್ ಪರೀಕ್ಷೆ ಬರೆದು ಕಂದಾಯ ಇಲಾಖೆಯಲ್ಲಿ ತಹಸೀಲ್ದಾರ, ಸಹಾಯಕ ಆಯುಕ್ತ, ಅಪರ ಜಿಲ್ಲಾಧಿಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಹೈ-ಕ ಪ್ರದೇಶದ ಅಧಿಕಾರಿಗಳು ಕೇವಲ 19 ಜನ ಮಾತ್ರ, ಅದೇ ಸಂದರ್ಭದಲ್ಲಿ ಚಿತ್ರದುರ್ಗ ಒಂದು ಜಿಲ್ಲೆಯಿಂದ 21 ಜನ ಅಧಿಕಾರಿಗಳು ಕಂದಾಯ ಇಲಾಖೆಯಲ್ಲಿ ನೇರ ನೇಮಕಾತಿ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವದು ಕಂಡುಬಂದಿದೆ. ಅಂದರೆ, ಕಳೆದ 70 ವರ್ಷಗಳಿಂದ ಈ ಭಾಗ ಎಷ್ಟೊಂದು ನಲುಗಿ ಹೋಗಿದೆ ಎನ್ನುವದಕ್ಕೆ ಇದೊಂದು ಉದಾಹರಣೆ.

ಅದೇರೀತಿ ಕರ್ನಾಟಕ ರಾಜ್ಯದ ಆಡಳಿತ ಕೇಂದ್ರವಾಗಿರುವ ವಿಧಾನಸೌಧ, ವಿಕಾಸಸೌಧ, ಬಹುಮಹಡಿಗಳ ಕಟ್ಟಡ ಇತ್ಯಾದಿ ಸಚಿವಾಲಯಗಳಲ್ಲಿ ಕೆಲಸ ಮಾಡುತ್ತಿರುವ ಒಟ್ಟು ಸಿಬ್ಬಂದಿಗಳ ಸಂಖ್ಯೆ 3885 ಜನ, ಅದರಲ್ಲಿ ಕೇವಲ 37 ಜನ ಮಾತ್ರ ಹೈ-ಕ ಪ್ರದೇಶದ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಅಂದರೆ, ಶೆ 1 ಕ್ಕಿಂತ ಕಡಿಮೆ ನೌಕರರು ಹೈ-ಕ ಭಾಗದವರು. ಈ ಎಲ್ಲ ಕಾರಣಗಳಿಂದಾಗಿ ಸಂವಿಧಾನದ ಅನುಚ್ಛೇದ 371 ತಿದ್ದುಪಡಿಗಾಗಿ ಬಹುದಿನಗಳ ಕಾಲ ಸುದೀರ್ಘ ಹೋರಾಟ ನಡೆದು, ಕೊನೆಗೂ ಡಿಸೆಂಬರ್ 2012ರಲ್ಲಿ ಅನುಚ್ಛೇದ 371ರ ತಿದ್ದುಪಡಿಯ ಮೂಲಕ ಹೈದ್ರಾಬಾದ ಕರ್ನಾಟಕವನ್ನು ಸಂವಿಧಾನದ ಅನುಚ್ಛೇದ 371ಜೆ ಅಡಿಯಲ್ಲಿ ಸೇರಿಸಲಾಯಿತು.

ಕಳೆದ ಆರು ವರ್ಷಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ, ಅದರಂತೆ ಹೈದ್ರಾಬಾದ ಕರ್ನಾಟಕದಲ್ಲಿಯೂ ಬದಲಾವಣೆಗಳಾಗುತ್ತಿವೆ. ಆದರೆ, ಅನುಚ್ಛೇದ 371ಜೆ ಈ ಭಾಗಕ್ಕೆ ಬಂದಿರುವ ಸಂವಿಧಾನಬದ್ದ ಹಕ್ಕು ಎನ್ನುವುದನ್ನು ಮರೆತಿರುವ ಸರಕಾರ ಮತ್ತು ನಾವು ಬಂದಷ್ಟು ಬಂತು ಪಂಚಾಮೃತವೆಂದು ಬಳಸುತ್ತಿದ್ದೇವೆ. ಕನಿಷ್ಠ ಒಂದು 371ಜೆ ಅರ್ಹತಾ ಪ್ರಮಾಣಪತ್ರವೂ ಸಹ ಹಕ್ಕುಬದ್ಧವಾಗಿ ಪಡೆಯಲು ಸಾಧ್ಯವಾಗದೇ ಕಚೇರಿಯಿಂದ ಕಚೇರಿಗೆ ಅಲೆಯುತ್ತ ಮೂರು-ಮೂರು ತಿಂಗಳಾದರೂ ಪಡೆಯದೇ ಕೊರಗುವಂತಾಗಿದೆ ನಮ್ಮ ಪರಿಸ್ಥಿತಿ. ಇದಕ್ಕೆ ಮೂಲಕಾರಣ, ನಮ್ಮ ಭಾಗದ ವಿದ್ಯಾವಂತ ಜನ 371ಜೆ ಕಾನೂನನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿರುವುದು ಮತ್ತು ಯಾವುದೇ ಕಾನೂನು ನಮ್ಮ ದೇಶದಲ್ಲಿ ಸಮರ್ಪಕವಾಗಿ ಜಾರಿಯಾಗಬೇಕೆಂದರೆ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಅದರಲ್ಲಿರುವ ಪ್ರತಿಯೊಂದು ಅಂಶವೂ ಮನವರಿಕೆ ಮಾಡಿಕೊಂಡಾಗ ಮಾತ್ರ ಸಾಧ್ಯವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...