Homeಮುಖಪುಟಕರಾಳ ದಿನಗಳಲ್ಲಿ ಬರಹಗಾರನ ಕರ್ತವ್ಯಕ್ಕೆ ಕನ್ನಡಿಯಾದ ’ಲೀಗಲ್ ಫಿಕ್ಷನ್'

ಕರಾಳ ದಿನಗಳಲ್ಲಿ ಬರಹಗಾರನ ಕರ್ತವ್ಯಕ್ಕೆ ಕನ್ನಡಿಯಾದ ’ಲೀಗಲ್ ಫಿಕ್ಷನ್’

- Advertisement -
- Advertisement -

ಬರಹಗಾರ ಚಂದನ್ ಪಾಂಡೆ ಅವರೊಂದಿಗೆ ಸಂದರ್ಶನ

ಇಲ್ಲಿಯವರೆಗೂ ಭಾರತದ ಯಾವ ತನಿಖಾ ಏಜೆನ್ಸಿಯೂ ದೃಢಪಡಿಸದ ’ಲವ್ ಜಿಹಾದ್‌’ಅನ್ನು ಭಾರತೀಯ ಬಹುಸಂಖ್ಯಾತ ಜನಸಾಮಾನ್ಯರ ಮನಸ್ಸಿನಲ್ಲಿ ಬಿತ್ತಲು ಒಂದು ರಾಜಕೀಯ ಶಕ್ತಿ ಯಶಸ್ವಿಯಾಗಿದೆ. ಅಷ್ಟು ಸಾಲದು ಎಂಬಂತೆ ಹಲವು ರಾಜ್ಯಗಳು ಈ ಕಲ್ಪಿತ ’ಲವ್ ಜಿಹಾದ್’ಅನ್ನು ನಿಷೇಧಿಸುವ ಕಾನೂನನ್ನು ರಚಿಸಿವೆ. ಒಂದು ಅಲ್ಪಸಂಖ್ಯಾತ ಕೋಮಿನ ಜನರಿಗೆ ಕಿರುಕುಳ ನೀಡಲು ಮಾಡಿರುವ ಕಾನೂನು ಇದು ಎಂದು ಪ್ರತ್ಯೇಕವಾಗಿಯೇನೂ ಹೇಳಬೇಕಿಲ್ಲ. ಈಗ ಕರ್ನಾಟಕವೂ ಅಂತಹ ಕಾಯ್ದೆಯನ್ನು ಪ್ರಸಕ್ತ ಅಧಿವೇಶನದಲ್ಲಿ ಮಂಡಿಸಲು ಹೊರಟಿದೆ ಎಂಬ ಸುದ್ದಿಯಿದೆ. ಇತ್ತೀಚಿಗೆ ಕರ್ನಾಟಕದಲ್ಲಿ ಎರಡು ಕೋಮಿನ ಯುವಕ-ಯುವತಿಯರು ಒಟ್ಟಿಗೆ ಕಂಡಲ್ಲಿ, ಅವರನ್ನು ಹಿಂಸಿಸುವ ಮಾರಲ್ ಪೊಲೀಸಿಂಗ್ ಪ್ರಕರಣಗಳು ತೀವ್ರ ಏರಿಕೆಯಾದದ್ದನ್ನು ಕಂಡಿದ್ದೇವೆ. ಇನ್ನು ಕಳೆದ ಏಳೆಂಟು ವರ್ಷಗಳಲ್ಲಿ ’ಬೀಫ್’ ಮತ್ತಿತರ ನೆಪಗಳಲ್ಲಿ ಅಲ್ಪಸಂಖ್ಯಾತರನ್ನು ಗುಂಪುಕಟ್ಟಿ ಕೊಂದ ಮಾಬ್ ಲಿಂಚಿಂಗ್ ಪ್ರಕರಣಗಳು ಕಣ್ಣಿಗೆ ರಾಚುವಷ್ಟು ನಡೆದಿವೆ. ಇವೆಲ್ಲಾ ಇಂಟಲೆಕ್ಚುಯಲ್ ಸ್ಪೇಸ್‌ನಲ್ಲಿ ಕೆಲಸ ಮಾಡುವ ಜನರಿಗೆ ಕಾಡಬೇಕಲ್ಲವೇ? ಪ್ರಭುತ್ವದ ಬೆಂಬಲದಿಂದ ನಡೆಯುವ ಇಂತಹ ಪ್ರಕರಣಗಳು ಎಷ್ಟೋ ದುರ್ಬಲ ಜನಸಮುದಾಯಕ್ಕೆ ಅಪಾಯ ಉಂಟುಮಾಡುತ್ತಿರುವ ಸಮಯದಲ್ಲಿ ಬುದ್ಧಿಜೀವಿಗಳು-ಬರಹಗಾರರು ಅದಕ್ಕೆ ಪ್ರತಿಕ್ರಿಯಿಸಬೇಕಲ್ಲವೇ? ಈ ಎಲ್ಲಾ ಪ್ರಶ್ನೆಗಳು ಶತಶತಮಾನದಿಂದಲೂ ಕೇಳಿಕೊಂಡು ಬಂದಿರುವಂತಹವೇ ಆಗಿವೆ. ಬರಹಗಾರರು ಮತ್ತು ಬುದ್ಧಿಜೀವಿಗಳು ಅಧಿಕಾರ ಕೇಂದ್ರಗಳನ್ನು ಹೆಚ್ಚೆಚ್ಚು ಪ್ರಶ್ನಿಸುವ ರೀತಿಯಲ್ಲಿ ಬರೆಯಬೇಕಿರುವಂತೆ, ನುಡಿಯಬೇಕಿರುವಂತೆ ಸದ್ಯದ ಭಾರತದ ರಾಜಕೀಯ ಪರಿಸ್ಥಿತಿ ಇದೆ. ಆದರೆ ಅಂತಹ ಬರಹಗಾರರು ವಿರಳವಾಗುತ್ತಿರುವುದು ದುರಂತ.
ಅಲ್ಲೊಂದು ಇಲ್ಲೊಂದು ಮಿಂಚು ಇಲ್ಲವೆಂದಲ್ಲ. ಅಂತಹ ಒಬ್ಬ ಬರಹಗಾರ, ಸುಮಾರು ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಹಿಂದಿ ಲೇಖಕ ಚಂದನ್ ಪಾಂಡೆ. ಮೂಲತಃ ಉತ್ತರಪ್ರದೇಶದ ವಾರಣಾಸಿಯವರಾದ, ಹಿಂದಿಯಲ್ಲಿ ಬರೆಯುವ ಚಂದನ್ ಅವರ ಚೊಚ್ಚಲ ಕಾದಂಬರಿ ಇಂಗ್ಲಿಷ್‌ಗೆ ಅನುವಾದಗೊಂಡು (ಹಾರ್ಪರ್ ಪೆರೆನ್ನಿಯಲ್ ಇಂದ ಪ್ರಕಟಗೊಂಡಿದೆ) ಅಧಿಕಾರಕ್ಕೆ ಅಂಜದ ಜನವರ್ಗದಿಂದ ಪ್ರಶಂಸೆಗೆ ಒಳಗಾಗಿದ್ದರೆ, ಅಧಿಕಾರ ಕೇಂದ್ರಗಳ ಜೊತೆಗೆ ಮುಸುಮುಸು ಒಡನಾಟ ಬೆಳೆಸಿಕೊಳ್ಳುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಉಪೇಕ್ಷೆಗೆ ಗುರಿಯಾಗಿದೆ. ಹಿಂದಿಯಲ್ಲಿ ಮತ್ತು ಇಂಗ್ಲಿಷ್‌ನಲ್ಲಿ ಹಲವು ಸಾವಿರ ಪ್ರತಿಗಳು ಮಾರಾಟವಾಗಿ ಸಾಮಾನ್ಯ ಓದುಗರ ಗಮನ ಸೆಳೆದಿರುವುದು ವಿಶೇಷ.

ಮೂರು ದಿನಗಳ ಅವಧಿಯಲ್ಲಿ ನಡೆಯುವ ’ಲೀಗಲ್ ಫಿಕ್ಷನ್’ನ ಕಥೆ ಇಂದಿನ ಕಾಲಕ್ಕೆ ಕನ್ನಡಿ ಹಿಡಿಯುವುದಲ್ಲದೆ, ಈ ಕಾಲದ ವಿದ್ಯಮಾನಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸದೆ ಹೋದರೆ ಮುಂದಿನ ಡಿಸ್ಟೋಪಿಯನ್-ಇನ್ನೂ ತೀವ್ರ ಕರಾಳ ದಿನಗಳ ಸೂಚನೆಯನ್ನೂ ನೀಡುತ್ತದೆ. ಕಾದಂಬರಿಯಲ್ಲಿ ಇಬ್ಬರು ಬರಹಗಾರರ ಪ್ರಮುಖ ಪಾತ್ರಗಳಿವೆ. ನಾಟಕಕಾರ ರಫೀಕ್ ಗೋರಕ್‌ಪುರದ ನೋಮಾ ಎಂಬ ಒಂದು ಸಣ್ಣ ಪಟ್ಟಣದಿಂದ ಕಾಣೆಯಾಗುತ್ತಾನೆ. ಅಲ್ಲಿ ಯಾವುದೇ ಸಹಾಯ ಸಿಗದ ಆತನ ಗರ್ಭಿಣಿ ಪತ್ನಿ ಅನುಸೂಯಾ, ತನ್ನ ಕಾಲೇಜು ದಿನಗಳ ಪ್ರಿಯಕರ ದೆಹಲಿಯಲ್ಲಿ ನೆಲೆಸಿರುವ ಅರ್ಜುನ್ ಕುಮಾರ್‌ನ ಮೊರೆ ಹೋಗುತ್ತಾಳೆ. ದೆಹಲಿಯಲ್ಲಿ ಪ್ರಕಾಶನ ಸಂಸ್ಥೆಯೊಂದರಲ್ಲಿ ಆರಾಮದಾಯಕವಾಗಿ ಇದ್ದುಕೊಂಡು, ದೇಶದ ಆಗುಹೋಗುಗಳಿಗೆ ಬೆನ್ನು ತಿರುಗಿಸಿಕೊಂಡು ಕುಳಿತಿರುವ ಅರ್ಜುನ್ ಕುಮಾರ್ ಯಾವುದೋ ಒತ್ತಡಕ್ಕೆ ಮಣಿದು ರಫೀಕ್ ಬಗ್ಗೆ ದೂರು ನೀಡಲು ನೋಮಾಗೆ ಹೋಗುತ್ತಾನೆ! ಆಗ ನಡೆಯುವ ಘಟನೆಗಳ ಸರಪಳಿ ’ಲೀಗಲ್ ಫಿಕ್ಷನ್’. ಮಾಬ್ ಲಿಂಚಿಂಗ್, ಲವ್ ಜಿಹಾದ್, ಹಿಂದುತ್ವ ಮತ್ತು ಪ್ರಭುತ್ವದ ವಿಷಯಗಳನ್ನು ಪ್ರಮುಖವಾಗಿ ಈ ಕಾದಂಬರಿ ವಸ್ತುವನ್ನಾಗಿಸಿಕೊಂಡಿದೆ.

ಬೆಂಗಳೂರಿನಲ್ಲಿ ನೆಲೆಸಿರುವ ಕಾದಂಬರಿಕಾರ ಚಂದನ್ ಪಾಂಡೆ ನ್ಯಾಯಪಥದ ಜೊತೆಗೆ ಅವರ ಬರವಣಿಗೆಯ ಪಯಣ ಮತ್ತು ಈ ಕಾದಂಬರಿಯ ಸುತ್ತ ಹುಟ್ಟುವ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ್ದು ಹೀಗೆ..

ಪ್ರಶ್ನೆ: ಚಂದನ್ ಪಾಂಡೆ ನಮಸ್ಕಾರ. ನಿಮ್ಮ ಬಗ್ಗೆ ಹೇಳುವುದರೊಂದಿಗೆ, ನೀವು ಬರಹಗಾರರಾಗಿ ರೂಪುಗೊಂಡಿದ್ದರ ಬಗ್ಗೆ ಮಾತಾಡುವುದರೊಂದಿಗೆ ಪ್ರಾರಂಭಿಸಬಹುದಾ?

ಚಂದನ್ ಪಾಂಡೆ: ನಮಸ್ಕಾರ. ನಾನು ಸದ್ಯಕ್ಕೆ ಟಾಟಾ ಸಮೂಹದ ರ್‍ಯಾಲಿಸ್ ಇಂಡಿಯಾ
ಸಂಸ್ಥೆಯಲ್ಲಿ ಕೆಟಗರಿ ಲೀಡ್ ಆಗಿ ಕೆಲಸ ಮಾಡ್ತಾ ಇದ್ದೀನಿ. 2002-03ರಿಂದ ನಾನು ಬರೀತಾ ಬಂದಿದ್ದೀನಿ. ನನ್ನ ಮೊದಲ ಕಥೆ ಕಲ್ಕತ್ತಾ ಇಂದ ಹೊರಬರುವ ಒಂದು ಹಿಂದಿ ಪತ್ರಿಕೆ ವಾಗರ್ಥದಲ್ಲಿ 2004ರಲ್ಲಿ ಪ್ರಕಟ ಆಯ್ತು. ಅಂದರೆ ಅದು ನನ್ನ ಮೊದಲ ಪ್ರಕಟಿತ ಕಥೆ ಅನ್ನೋ ಅರ್ಥದಲ್ಲಿ. ಅವರು ಹೊಸ ಬರಹಗಾರರ ಒಂದು ಸ್ಪರ್ಧೆ ಏರ್ಪಡಿಸಿದ್ದರು. ಅಲ್ಲಿ ನನ್ನ ಕಥೆ ಆಯ್ಕೆಯಾಗಿತ್ತು. ಅಲ್ಲಿಂದ ಶುರು ಆಯ್ತು. 2006ರಲ್ಲಿ ನನ್ನ ಮೊದಲ ಕಥಾ ಸಂಕಲನ ಹಿಂದಿಯಲ್ಲಿ ಪ್ರಕಟ ಆಯಿತು. ಅದಕ್ಕೆ ಜ್ಞಾನಪೀಠ ಹೊಸ ಲೇಖಕ ಪುರಸ್ಕಾರ ದೊರೆತದ್ದು ಅದೃಷ್ಟ. ಆನಂತರ ಜ್ಞಾನಪೀಠ ಮತ್ತು ಪೆಂಗ್ವಿನ್ (ಹಿಂದಿ) ಪ್ರಕಾಶನಗಳಿಂದ ಒಂದೊಂದು ಕಥಾಸಂಕಲನಗಳು ಹೊರಬಂದವು. ನಂತರ ಈ ಕಾದಂಬರಿ ಬರೆದೆ. ಅದು ಈಗ ಇಂಗ್ಲಿಷ್‌ಗೆ ಅನುವಾದಗೊಂಡಿದೆ.

ಪ್ರ: ನಿಮ್ಮ ಪ್ರಸ್ತುತ ಕಾದಂಬರಿಯಲ್ಲಿ ಪ್ರಧಾನ ಪಾತ್ರ ಬರಹಗಾರನೊಬ್ಬನದ್ದು. ಅದಕ್ಕೂ ಮುಂಚೆ, ನೀವು ಬರಹಗಾರನಾಗಲು ಪ್ರೇರೇಪಣೆ ಕೊಟ್ಟಿದ್ದೇನು? ಕಾರ್ಪೊರೆಟ್ ಕೆಲಸದಲ್ಲಿ ಇದ್ದುಕೊಂಡೇ ಬರಹದ ಕೃಷಿ ಮಾಡಬೇಕೆನಿಸಿದ್ದೇಕೆ?

: ನಾನು ಕಾರ್ಪೊರೆಟ್ ಕೆಲಸಕ್ಕೆ ಬಂದದ್ದು ತಡವಾಗಿ. 2006ರಲ್ಲಿ. ಆ ಕೆಲಸ ನನ್ನ ಕನಸೇನೂ ಆಗಿರಲಿಲ್ಲ. ಆದರೆ ಕುಟುಂಬದ ಜವಾಬ್ದಾರಿಗಳು, ಅಗತ್ಯಗಳ ಸಲುವಾಗಿ ಆ ಕೆಲಸಕ್ಕೆ ಸೇರಿಕೊಂಡೆ. ಅದಕ್ಕಾಗಿ 2006ರಲ್ಲಿ ಎಂಬಿಎ ಕೂಡ ಸೇರಿದ್ದೆ. ಆದರೆ ನನಗೆ ಬರಹದ ಬಗ್ಗೆ ಆಸಕ್ತಿ ಅದಕ್ಕೂ ಮುಂಚಿನದ್ದು. ಓದು ಅದಕ್ಕೂ ಬಹಳ ಮೊದಲಿನದ್ದು. ನಾನು ಹೈಸ್ಕೂಲಿನಲ್ಲಿದ್ದಾಗ ಪಣೀಶ್ವರ್‌ನಾಥ ರೇಣು ಅವರ ’ಮೈಲಾ ಅಂಚಲ್’ ಓದಿದ್ದೆ. ಅದು ಹಿಂದಿಯ ಅದ್ಭುತ ಕಾದಂಬರಿಗಳಲ್ಲಿ ಒಂದು. 1952ರಲ್ಲಿ ಪ್ರಕಟವಾದ ಕಾದಂಬರಿ ಅದು. ಆ ಸಮಯ ಯಾಕೆ ಇಲ್ಲಿ ಹೇಳ್ತಾ ಇದ್ದೀನಿ ಅಂದರೆ, ಸ್ವಾತಂತ್ರ್ಯದ ಬಗ್ಗೆ ಕಂಡಿದ್ದ ಕನಸುಗಳು ನುಚ್ಚುನೂರಾದ ಬಗ್ಗೆ ಆ ಕಾದಂಬರಿ ಮಾತನಾಡತ್ತೆ. 47ರಲ್ಲಿ ಸ್ವಾತಂತ್ರ್ಯ ಬಂದು ನಾಲ್ಕು ವರ್ಷಗಳಲ್ಲಿ ಸಾಗಿದ್ದ ದಾರಿಯ ಬಗ್ಗೆ ಅವರಿಗೆ ನಿರಾಶೆ ಮೂಡಿರತ್ತೆ.

ನಂತರ ಸಾಹಿತ್ಯ ಪತ್ರಿಕೆಗಳನ್ನು ಓದಲು ಪ್ರಾರಂಭಿಸಿದೆ. ಈ ಕಾರ್ಪೊರೆಟ್ ಕೆಲಸ ಎಲ್ಲ ನಂತರದ್ದು. ನನಗೆ ಬರವಣಿಗೆ ಮೊದಲ ಆದ್ಯತೆಯಾಗಿತ್ತು. 1999ರಲ್ಲಿಯೇ ಒದು ಕಥೆ ಬರೆದಿದ್ದೆ. ಆರಂಭಿಕ ಹಂತದ ಕಥೆ. ಈಗಲೂ ಆಗಾಗ ಅದರ ನೆನಪಾಗುತ್ತಿರುತ್ತೆ. ಸೇನೆಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯ ತಾಯಿ, ಮಗ ಕಳುಹಿಸಿರುವ ಪತ್ರ ಓದುತ್ತಾ ಇರ್‍ತಾರೆ, ಓದಿ ಮುಗಿಸುವ ಹೊತ್ತಿಗೆ ಯಾರೋ ಕದ ತಟ್ಟುತ್ತಾರೆ, ಹೊರಗೆ ಬಂದು ನೋಡಿದರೆ ಅಲ್ಲಿ ನಿಂತಿದ್ದ ವ್ಯಕ್ತಿ, ಆಕೆಯ ಮಗನ ಸಾವಿನ ಸುದ್ದಿ ತಂದಿರುತ್ತಾನೆ. ನನ್ನ ಹತ್ತೊಂಭತ್ತನೆ ವಯಸ್ಸಿಗೆ ಇಂತಹ ಕಥೆಗಳನ್ನು ಬರೆಯುತ್ತಿದ್ದೆ. ನನ್ನ ಶಾಲೆಯ ಕಾಲದಿಂದಲೂ ಶಾಲಾ ಪತ್ರಿಕೆಗಳಿಗೆ ಬರೆಯುತ್ತಿದ್ದೆ. ಬರವಣಿಗೆಯ ಬಗ್ಗೆ ಆ ಪ್ಯಾಶನ್ ನನ್ನಲ್ಲಿ ಮೊದಲಿನಿಂದಲೂ ಇತ್ತು.

Maila Anchal

ಪ್ರ: ನಿಮ್ಮ ಸದ್ಯದ ಕಾದಂಬರಿ ’ಲೀಗಲ್ ಫಿಕ್ಷನ್’ ಇಂಗ್ಲಿಷ್‌ನಲ್ಲಿ ಬಹಳ ಚರ್ಚೆಯಾಯಿತು. ಇದರ ಹಿಂದಿ ಮೂಲದ ಹೆಸರೇನು? ಹಿಂದಿಯಲ್ಲಿ ಓದಿದವರ ಪ್ರತಿಕ್ರಿಯೆಗಳು ಹೇಗಿದ್ದವು?

: ಹಿಂದಿಯಲ್ಲಿ ಕಾದಂಬರಿ ಹೆಸರು ’ವೈಧಾನಿಕ ಗಲ್ಪ್’ ಅಂತ. ಆ ಶೀರ್ಷಿಕೆಯ ಸೀದಾಸಾದಾ ಅನುವಾದವೇ ’ಲೀಗಲ್ ಫಿಕ್ಷನ್’. ಹಿಂದಿಯಲ್ಲಿ ಮತ್ತು ಇಂಗ್ಷಿಷ್‌ನಲ್ಲಿ ಓದಿ ಬಂದ ಪ್ರತಿಕ್ರಿಯೆಗಳಿಂದ ಬಹಳ ಖುಷಿ ಆಗಿದೆ. ಯಾರಾದರೂ ಈ ಕಾದಂಬರಿ ಓದುತ್ತಾರೆ ಎಂಬ ನಿರೀಕ್ಷೆ ನನಗಿರಲಿಲ್ಲ. ಆದರೆ ಬಂದ ಪ್ರತಿಕ್ರಿಯಗಳಲ್ಲಿ ಒಂದು ಪ್ಯಾಟರ್ನ್ ಅಂತೂ ಗಮನಿಸಿದ್ದೀನಿ. ಎಷ್ಟೋ ಪತ್ರಿಕೆಗಳಲ್ಲಿ ಕೆಲಸ ಮಾಡುವವರು ವ್ಯಕ್ತಿಗತವಾಗಿ ಕಾದಂಬರಿಯನ್ನು ಇಷ್ಟಪಟ್ಟಿದ್ದಾರೆ. ಎಷ್ಟು ಇಷ್ಟಪಟ್ಟಿದ್ದಾರೆ ಎಂದರೆ ನಾನು ಕಾದಂಬರಿಯಲ್ಲಿ ಮಾಡಿರುವ ತಪ್ಪುಗಳನ್ನು ಉಪೇಕ್ಷೆ ಮಾಡುವಷ್ಟು. ಆದರೆ ಕಾದಂಬರಿಯ ಬಗ್ಗೆ ಚರ್ಚೆ ಮಾಡಬೇಕಿದ್ದ ಸಂಸ್ಥೆಗಳು ಅದನ್ನು ಉಪೇಕ್ಷೆ ಮಾಡಿವೆ. ವಿಶ್ವವಿದ್ಯಾಲಯಗಳು, ಪತ್ರಿಕೆಗಳು, ಸಾಹಿತ್ಯ ಪತ್ರಿಕೆಗಳು ಸಂಪೂರ್ಣ ಉದಾಸೀನ ವಹಿಸಿವೆ. ಇದು ಒಂದು ವಿನ್ಯಾಸವೆಂಬಂತೆ ಗುರುತಿಸುವಷ್ಟು. ನನ್ನ ಇಂಗ್ಲಿಷ್ ಕಾದಂಬರಿಯ ಪ್ರಚಾರಕರಾಗಿ ಕೆಲಸ ಮಾಡುತ್ತಿರುವವರು ಹೇಳಿದ್ದೇನೆಂದರೆ, ಅವರು ಪುಸ್ತಕವನ್ನು ವಿಮರ್ಶೆಗೆ ಕಳುಹಿಸಿದಾಗ, ಈ ಕಾದಂಬರಿಯನ್ನು ನಾವು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದೂ ಇದೆ. ಇದು ಹಿಂದಿಯಲ್ಲೂ ಆಗಿದೆ.

ಪ್ರ: ಇದು ಬಹಳ ಮುಖ್ಯವಾದ ಪ್ರಶ್ನೆಗೆ ನಮ್ಮನ್ನು ಕರೆತರುತ್ತೆ. ಈ ಕಾದಂಬರಿಯ ಪ್ರಧಾನ ವಸ್ತು ಪ್ರಭುತ್ವದ ಕ್ರೌರ್ಯವನ್ನು ಚರ್ಚಿಸಿ ಅದಕ್ಕೆ ಪ್ರತಿರೋಧ ತೋರುವ ಮಹತ್ವವನ್ನು ಎತ್ತಿಹಿಡಿಯುವುದು. ಬರಹಗಾರನಾಗಿ ನಿಮಗೆ ಇದು ಏಕೆ ಮುಖ್ಯ ಎನಿಸಿತು?

: ನಿನ್ನೆ ಒರಿಸ್ಸಾದ ಕಳಿಂಗ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಂಡಿದ್ದೆ. ಅಲ್ಲಿ ಕೂಡ, ’ಇವತ್ತಿನ ಸಮಯವನ್ನು ಹೇಗೆ ನೋಡ್ತೀರಿ’ ಎಂಬ ಪ್ರಶ್ನೆ ನನಗೆ ಕೇಳಲಾಯಿತು. ನನ್ನ ತಿಳಿವಳಿಕೆಯ ಹಿನ್ನೆಲೆಯಲ್ಲಿ, ಸಮೂಹಸನ್ನಿಯ ಲಿಂಚಿಂಗ್‌ಅನ್ನು ನನಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಕೆಲವು ವರ್ಷಗಳಿಂದ ಮಾಬ್ ಲಿಂಚಿಂಗ್ ಇಂದ ಸುಮಾರು ಜನ ಸತ್ತಿದ್ದಾರೆ. ಅದನ್ನು ಹೇಗೆ ಒಪ್ಪಿಕೊಳ್ಳುವುದು? ಸೇಡು ಅಥವಾ ಯಾವುದೋ ಸಿಟ್ಟಿನಲ್ಲಿ ಹೊಡೆದು ಹಾಕುವುದು – ಅದು ಸರಿ ಅಂತ ನಾನು ಹೇಳ್ತಾ ಇಲ್ಲ- ಆದರೆ ಅದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಆದರೆ ಒಬ್ಬ ವ್ಯಕ್ತಿಯನ್ನು ಪ್ರತ್ಯೇಕಗೊಳಿಸಿ, ಯೋಜಿಸಿ, ಗುಂಪುಗಟ್ಟಿ ನಿಮ್ಮ ಯಾವುದೋ ರಾಜಕೀಯ ಹಿತಾಸಕ್ತಿಗೆ ಕೊಲ್ಲುವುದು ಎಂದರೇನು? ಅದು ನನ್ನನ್ನು ಅಲುಗಾಡಿಸಿತು. ಹಿಂದೆ ಕೂಡ ಮಾಬ್ ಲಿಂಚಿಂಗ್‌ಗಳು ಇದ್ದವು. ಆದರೆ ನನಗೆ ದೊಡ್ಡ ಶಾಕ್ ಕೊಟ್ಟಿದ್ದು 2013ರಲ್ಲಿ ಪೂನಾದಲ್ಲಿ ನಡೆದ ಆ ಮಾಬ್ ಲಿಂಚಿಂಗ್ ಘಟನೆ. ಇದು ನಂತರ ಸಾಮಾನ್ಯವಾಯಿತು. ಜಾರ್ಖಂಡದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿತ್ತು. ಯುಪಿ ಮತ್ತು ಹೆಚ್ಚಾಗಿ ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚು ಕಾಣಿಸಿಕೊಳ್ಳತೊಡಗಿತು. 1890ರ ಅಮೆರಿಕವನ್ನು ನಾವು ಅನುಕರಿಸುತ್ತಿದ್ದೇವೆಲ್ಲ ಅನ್ನಿಸುವುದಕ್ಕೆ ಶುರು ಆಯಿತು. ಆ ಕಾಲದಲ್ಲಿ ಅಲ್ಲಿ ಆಗುತ್ತಿದ್ದ ಯಾವುದೇ ಸಣ್ಣ ಸುಧಾರಣೆ ಬ್ಲಾಕ್ ಅಥವಾ ಬಣ್ಣದ ಜನರಿಗೆ ಸಿಂಹಸ್ವಪ್ನವಾಗುತ್ತಿತ್ತು. ಅಮೆರಿಕದ ಆ ನಿರ್ದಿಷ್ಟ ಸಮಯ ನಮ್ಮ ಸಮಾಜವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡಿತು. ನಾವು ಎಷ್ಟು ಕೊಳಕಾಗಿ ಬದಲಾಗಿದ್ದೇವೆ ಅಂತ. ನಾನು ಮಾಬ್ ಲಿಂಚಿಂಗ್ ಬಗ್ಗೆ 2016ರಲ್ಲಿ ಒಂದು ದೊಡ್ಡ ಕಾದಂಬರಿ ಬರೆದು ನನ್ನ ಪ್ರಕಾಶಕರಿಗೆ ಕೊಟ್ಟಿದ್ದೆ. ಆದರೆ ಅದರಲ್ಲಿ ಹಲವು ಸಂಗತಿಗಳನ್ನು ಸೇರಿಸಿಬಿಟ್ಟಿದ್ದೇನೆ ಅನ್ನಿಸಿ ಹಿಂತೆಗೆದುಕೊಂಡೆ. ನಂತರ ಒಂದು ಸಂಗತಿಯ ಸುತ್ತ ಮಾತ್ರ ಕೇಂದ್ರೀಕರಿಸಿ ’ಲೀಗಲ್ ಫಿಕ್ಷನ್’ ಬರೆದೆ. ಹೇಗೆ ಮಾಬ್ ಲಿಂಚಿಂಗ್ ಒಬ್ಬ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತೆ ಅನ್ನೋದನ್ನ ಅನ್ವೇಷಿಸಲು ಪ್ರಯತ್ನಿಸಿದೆ. ರಿಯಾಜ್ ಪತ್ನಿ ಗರ್ಭಿಣಿ ಅನುಸೂಯಳ ಮೂಲಕ ಅದನ್ನು ಪ್ರಯತ್ನಿಸಿದೆ. ಈಗ ಮತ್ತೊಂದು ಕಾದಂಬರಿಯನ್ನು ಬರೆದು ಮುಗಿಸಿದ್ದೇನೆ. ಈ ಮಾಬ್ ಲಿಂಚಿಂಗ್ ವಿಸ್ತಾರ ಎಷ್ಟು ದೊಡ್ಡದು ಮತ್ತು ಅದರ ಪರಿಣಾಮವೇನು ಎಂದು ಶೋಧಿಸಲು ಪ್ರಯತ್ನ ಮಾಡಿದ್ದೇನೆ.

ಪ್ರ: ಈ ಕಾದಂಬರಿಯ ನಿರೂಪಕ ಮತ್ತು ಪ್ರಧಾನ ಪಾತ್ರ ಅರ್ಜುನ್ ಕುಮಾರ್‌ನನ್ನು ಬರಹಗಾರನನ್ನಾಗಿ ಚಿತ್ರಿಸಿದ್ದು ಏಕೆ? ಆತನ ಚಿತ್ರಣ ಇವತ್ತಿನ ಬರಹಗಾರರು ಹೇಗೆ ತಮ್ಮ ಸುತ್ತಲಿನ ಜಗತ್ತಿಗೆ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂಬುದರ ಕಟು ವಿಮರ್ಶೆಯೇ?

: ನಾನು ಅರ್ಜುನ್ ಪಾತ್ರವನ್ನು ಸೃಷ್ಟಿ ಮಾಡಿದ್ದರೂ ಸರಿಯಾಗಿ ಆತನ ಪಾತ್ರದ ಮೂಲಕ ಏನು ಧ್ವನಿಸಬೇಕು ಅಂದುಕೊಡಿದ್ದೇನೋ ಅದು ಮಾಡಲು ಸಾಧ್ಯವಾಗಿದೆಯೇ ಎಂಬುದರ ಬಗ್ಗೆ ಸಂದೇಹ ಇದೆ.

ಇಲ್ಲಿ ಮೂರು ನಾಲ್ಕು ಸಂಗತಿಗಳಿವೆ. ಆತನದ್ದು ಒಂದು ರೀತಿಯ ಕ್ಯಾಶುಯಲ್ ಜೀವನ. ತನ್ನ ಕಂಫರ್ಟ್ ಜೀವನದಿಂದ ಆತನನ್ನು ದೂರ ತರಲು ಪ್ರಯತ್ನಿಸಿದ್ದೇನೆ.

ಎನ್‌ಸಿಆರ್‌ಬಿ (ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ) ಮಾಹಿತಿ ನೋಡಿ. ಅವರ ಅಂಕಿಅಂಶಗಳಲ್ಲಿ ಮಾಬ್ ಲಿಂಚಿಂಗ್‌ಅನ್ನು ಪ್ರತ್ಯೇಕ ಅಪರಾಧವಾಗಿ ಪರಿಗಣಿಸಿಲ್ಲ. ಮರ್ಡರ್ ಎಂದು ಪರಿಗಣಿಸಿಬಿಡುತ್ತಾರೆ. ಆದರೆ ಜೆಎನ್‌ಯುನಲ್ಲಿ ನಡೆದಿದ್ದನ್ನು ಪ್ರತ್ಯೇಕ ಅಪರಾಧ ಎಂದು ಬೇರೆ ಕೆಟಗರಿಯಲ್ಲಿ ನಮೂದಿಸುತ್ತಾರೆ. ಇದು ದೇಶದ ಮೂಡ್‌ಅನ್ನು ಪ್ರತಿನಿಧಿಸುತ್ತದೆ.

ಎರಡನೆಯದಾಗಿ, ಕೆಲವರು, ಬರಹಗಾರರೂ ಸೇರಿದಂತೆ ಏನು ಹೇಳ್ತಾರೆ ಅಂದರೆ ಮಾಬ್ ಲಿಂಚಿಂಗ್ ಬಗ್ಗೆ ಮಾತನಾಡಿದಷ್ಟೂ ಅದು ಕಂದಕವನ್ನು ಹೆಚ್ಚು ಮಾಡುತ್ತದೆ ಎಂದು. ಇಂತಹ ದಾರಿತಪ್ಪಿಸುವ ಮಾತುಗಳು ಅವರಿಗೆ ಕರಗತವಾಗಿವೆ. ಆ ಕಂದಕ ಈಗಾಗಲೇ ಇಲ್ಲದೇ ಮಾಬ್ ಲಿಂಚಿಂಗ್ ಆಗಿರುವಂತೆ ಅವರುಗಳು ಮಾತನಾಡುತ್ತಾರೆ.

ಇದೇ ಗುಂಪಿನ ಕೆಲವು ಜನ, ನನ್ನ ಕಾದಂಬರಿ ಓದಿ, ಮಾಬ್ ಲಿಂಚಿಂಗ್ ಬಗ್ಗೆ ಬರೆಯಲು, ಮಾತನಾಡಲು ಇನ್ನೂ ಸಮಯ ಪಕ್ವವಾಗಿಲ್ಲ ಅಂದದ್ದೂ ಇದೆ. ಕೊರೊನಾ ಬಗ್ಗೆ ಬರೆಯಿರಿ ಎಂದು ಸಲಹೆ ನೀಡಿದವರಿದ್ದಾರೆ.

ಮಾಬ್ ಲಿಂಚಿಂಗ್ ಪ್ರಕರಣಗಳು ಸರ್ವೇಸಾಮಾನ್ಯ ಎಂಬಂತೆ ಬೆಳೆಯುತ್ತಿವೆ. ಅದರ ಬಗ್ಗೆ ಮಾತನಾಡಲು ಪತ್ರಿಕೆಗಳ ಸಂಪಾದಕರು, ಬರಹಗಾರರು, ವಿಶ್ವವಿದ್ಯಾಲಯಗಳ ಉಪನ್ಯಾಸಕರು ಹಿಂಜರಿಯುತ್ತಿದ್ದಾರೆ ಎಂದರೆ ಏನು ಹೇಳುವುದು? ಅರ್ಜುನ್ ಅಂತಹವರನ್ನು ಪ್ರತಿನಿಧಿಸುತ್ತಾನೆ.

ಪ್ರ: ನನ್ನ ಓದಿನಲ್ಲಿ ಕಂಡುಕೊಂಡಂತೆ – ನಾವು ಈ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿರುವುದಕ್ಕೂ ಇದು ಇರಬಹುದು – ಅರ್ಜುನ್ ಪಾತ್ರವನ್ನು ಸೃಷ್ಟಿ ಮಾಡಿರುವುದು ಸ್ವಲ್ಪ ಎಕ್ಸಾಗರೇಶನ್ ಅನ್ನಿಸುವುದಿಲ್ಲವೇ? ಅಂದರೆ ಆತ ತನ್ನ ಸುತ್ತಮುತ್ತ ನಡೆಯುತ್ತಿರುವುದರ ಬಗ್ಗೆ ತಿಳಿದೇ ಇಲ್ಲವೆಂಬಂತೆ ಇನ್ಸುಲೇಟ್ ಆಗಿರುವ ಸಂಗತಿ.. ಅಥವಾ ಅದು ನೀವು ಎಚ್ಚರಿಕೆಯಿಂದ ಬೇಕಂತಲೇ ಹಾಗೆ ಮಾಡಿರುವುದಾ?

: ಹೌದು. ಅದು ಪ್ರಜ್ಞಾಪೂರ್ವಕ ನಿರ್ಧಾರ. ಮೊದಲು ಇದನ್ನು ಹೇಳಿ ಮುಗಿಸ್ತೀನಿ. ರಫೀಕ್ ಪಾತ್ರವನ್ನು ನನಗೆ ನಿಭಾಯಿಸಲು ಕಷ್ಟ ಆಯ್ತು. ಆತ ಕಾದಂಬರಿಯ ಘಟನೆಗಳಲ್ಲಿ ಭೌತಿಕವಾಗಿ ಎಲ್ಲೂ ಇಲ್ಲದೆಯೂ ಅಷ್ಟು ಶಕ್ತಿಯುತವಾಗಿ ಕಟ್ಟಬೇಕಿತ್ತು. ಆತ ಇದ್ದಿದ್ದರೆ ಊಹಿಸಿಕೊಳ್ಳಿ. ಅರ್ಜುನ್ ಪಾತ್ರ ಸೃಷ್ಟಿಸಿದ್ದು ಪ್ರಜ್ಞಾಪೂರ್ವಕವಾದದ್ದು ಅಂತ ಯಾಕೆ ಹೇಳ್ತೀನಿ ಅಂದರೆ, ಈ ಬುದ್ಧಿಜೀವಿಗಳ ಲೋಕ ನಮ್ಮ ಸುತ್ತಲಿನ ಘಟನೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಿತ್ತು ಎಂದು ನಾನು ಗಮನಿಸಿದ್ದೆ. ನಾನು ಸ್ವಲ್ಪ ಹಾರ್ಶ್ ಆಗಿ ಹೇಳಿದರೆ, ಅದರಲ್ಲಿ ನನ್ನನ್ನು ಸೇರಿಸಿಕೊಳ್ಳಬಹುದು. ಏಕೆಂದರೆ ನಾನು ಬರೀ ಚಿಂತಿಸುತ್ತಾ ಇದ್ದೆ. ಏನೂ ಮಾಡ್ತಾ ಇರಲಿಲ್ಲ. ಆದುದರಿಂದ ನಾನು ಆತನನ್ನು ಕಟ್ಟಿರುವ ರೀತಿಯಲ್ಲಿ, ಆ ಕರಾಳ ಘಟನೆಯಿಂದ ದೂರದಲ್ಲಿ ಉಳಿದಿರುವ ಕ್ಯಾಶುಯಲ್ ವ್ಯಕ್ತಿಯಂತೆ ಚಿತ್ರಿಸಿದ್ದೇನೆ. ಆದರೆ ಬರ್ತಾ ಬರ್ತಾ ಆತ ಅದರಲ್ಲಿ ಭಾಗಿಯಾಗಲೇಬೇಕಾಗುತ್ತೆ.

ಪ್ರ: ಈಗ ಕಾದಂಬರಿಯಿಂದ ಸ್ವಲ್ಪ ಡೀವಿಯೇಟ್ ಆಗಿ ಒಂದು ಪ್ರಶ್ನೆ. ನೀವು ಬೆಂಗಳೂರಿನಲ್ಲಿ ಸುಮಾರು ಹತ್ತು ವರ್ಷಗಳಿಂದ ನೆಲೆಸಿದ್ದೀರಿ. ನಿಮ್ಮ ಕಥಾವಸ್ತುವಿನ ಹಿನ್ನೆಲೆಯಲ್ಲೇ ನೋಡಿದರೆ, ಈ ದೇಶದ ಮೂಡ್‌ನಲ್ಲಿ ದಕ್ಷಿಣ ಭಾರತಕ್ಕೂ ಮತ್ತು ಉತ್ತರ ಭಾರತಕ್ಕೂ ವ್ಯತ್ಯಾಸ ಕಾಣುತ್ತಿದೆಯೇ?

: ನಾನು ಈ ಪ್ರಶ್ನೆಗೆ ವಿಭಿನ್ನವಾಗಿ ಉತ್ತರಿಸಲು ಪ್ರಯತ್ನ ಮಾಡ್ತೇನೆ. ಈ ದೇಶದಲ್ಲಿ ಒಂದು ಅಧಿಕಾರ ಕೇಂದ್ರ ಇದ್ದು ದೇಶದೆಲ್ಲೆಡೆ ಒಂದೇ ರೀತಿಯ ಮೂಡ್‌ಅನ್ನು ಹೇರಿಕೆ ಮಾಡಲು ಪ್ರಯತ್ನ ಮಾಡ್ತಾ ಇದೆ. ಹಾಗೆ ಹೇಳುವಾಗ, ಆ ಕೇಂದ್ರಕ್ಕೆ ಎಲ್ಲಾ ಕಡೆಗೆ ಸುಲಭವಾಗಿ ಆ ಮೂಡ್‌ಗೆ ಹೊಂದಾಣಿಕೆ ಆಗುವ ಪರಿಸ್ಥಿತಿ ಇಲ್ಲ. ದಕ್ಷಿಣ ಭಾರತದ ರಾಜಕೀಯ ಉತ್ತರ ಭಾರತಕ್ಕಿಂತಲೂ ಉತ್ತಮ ಅಂತ ನಾನು ಹೇಳದೆ ಹೋದರೂ, ದ್ವೇಷದ ರಾಜಕೀಯಕ್ಕೆ ಬಂದಾಗ, ಖಂಡಿತಾ ವ್ಯತ್ಯಾಸ ಇದೆ ಅನ್ಸತ್ತೆ. ದಕ್ಷಿಣದಲ್ಲಿ ಸಮಾಜ ಇನ್ನೂ ಅಷ್ಟು ಧ್ರುವೀಕರಣಗೊಂಡಿಲ್ಲ ಅನ್ಸತ್ತೆ.

ನಗರವಾಗಿ ಬೆಂಗಳೂರು ಬಹಳ ಸುಂದರವಾದದ್ದು. ಆದರೂ ನನ್ನ ಗೆಳೆಯನೊಬ್ಬ ಕೆಲವು ದಿನಗಳ ಹಿಂದೆ, ಇಂತಹ ಕಾದಂಬರಿ ಬರೆದು ಬೆಂಗಳೂರಿನಲ್ಲಿ ಇದ್ದೀಯಲ್ಲಾ, ಹುಷಾರು ಅಂದಿದ್ದ. ಇದಕ್ಕೆ ವ್ಯತಿರಿಕ್ತ ಉದಾಹರಣೆ ಅಂದರೆ ದೆಹಲಿಯಿಂದ ಬಂದಿದ್ದ ಸಂಬಂಧಿಯೊಬ್ಬರು ಬೆಂಗಳೂರನ್ನು ವಿದೇಶದಲ್ಲಿರುವ ಒಂದು ಸುಂದರ ನಗರದ ರೀತಿಯಲ್ಲಿ ನೋಡಿದ್ದೂ ಇದೆ.

ಪ್ರ: ಧಾರ್ಮಿಕ ಧ್ರುವೀಕರಣದ ಬಗ್ಗೆ ನಿಮ್ಮ ನಿಲುವು, ನಿಮ್ಮ ಪ್ರತಿರೋಧ ಬಹಳ ಅನುಕರಣೀಯವಾದದ್ದೇ.. ಆದರೆ ನಿಮ್ಮ ಹೆಸರಿನಿಂದ ಗೆಸ್ ಮಾಡುವುದಾದರೆ, ನೀವು ಒಂದು ಪ್ರಿವಿಲೆಜ್ ಜಾತಿಗೆ ಸೇರಿರುವುದು ಎಂಬ ಅಸಂಪ್‌ಶನ್ ಇಂದ ಕೇಳ್ತಾ ಇದ್ದೀನಿ. ಹಿಂದೂ ಎಂದು ಕರೆದುಕೊಳ್ಳುವ ಅಸಂಖ್ಯಾತ ಜಾತಿಗಳ ಈ ಸಮೂಹದಲ್ಲಿ ಇರುವ ತಾರತಮ್ಯವನ್ನು ನೀವು ಹೇಗೆ ನೋಡ್ತೀರಿ. ಇದನ್ನು ನಿಮ್ಮ ಕಥೆ-ಕಾದಂಬರಿಗಳಲ್ಲಿ ಹ್ಯಾಂಡಲ್ ಮಾಡಬೇಕು ಅನ್ನಿಸಲಿಲ್ಲವಾ?

: ನೀವು ಪ್ರಸ್ತಾಪ ಮಾಡಿದ್ದಕ್ಕೆ ಹೇಳ್ತೀನಿ. ನಾನು ಬ್ರಾಹ್ಮಣ ಸಮುದಾಯದಿಂದ ಬಂದವನು ಮತ್ತು ಅದೇ ಸಮಯದಲ್ಲಿ, ನಾನು ಆ ಕಾರಣಕ್ಕೆ ಪಡೆದಿರುವ ಪ್ರಿವಿಲೆಜ್ ಬಗ್ಗೆ ನನಗೆ ಅರಿವಿದೆ. ಈ ಇಡೀ ದ್ವೇಷದ ರಾಜಕೀಯ ಪರಿಣಾಮಗಳನ್ನು ಪಕ್ಕಕ್ಕಿಟ್ಟು ನೋಡಿದರೆ, ಅಂತಹ ರಾಜಕೀಯವನ್ನು ಪ್ರಾರಂಭಿಸಿದ್ದೇ ಈ ಹಿಂದೂ ಧರ್ಮದ ತಾರತಮ್ಯಗಳನ್ನು ಜತನವಾಗಿ ಇಟ್ಟುಕೊಳ್ಳಲು. ಹಿಂದೂ ಧರ್ಮದಲ್ಲಿ ತಾರತಮ್ಯಕ್ಕೆ ಒಳಗಾಗಿರುವವರು ಸಿಡಿದೇಳದಂತೆ ಮಾಡಲು, ಮೇಲ್ಜಾತಿಗಳು ಮುಸ್ಲಿಂ ಧರ್ಮದವರನ್ನು ಶತ್ರುಗಳನ್ನಾಗಿ ಕಲ್ಪಿಸಿಕೊಟ್ಟಿರುವ ದೊಡ್ಡ ಅಜೆಂಡಾ ಇದು. ಕಾಂಗ್ರೆಸ್ ಬರಲಿ, ಬಿಜೆಪಿ ಬರಲಿ ಮೇಲ್ಜಾತಿಗಳೇ ಅಧಿಕಾರ ನಡೆಸಿರುವುದು. ಇವರಿಗೆ ತಮ್ಮ ಪ್ರಿವಿಲೆಜ್‌ಅನ್ನು ಕೆಳಗಿನವರಿಗೆ ಬಿಟ್ಟುಕೊಡಲು ಇಷ್ಟ ಇಲ್ಲ. ಅದಕ್ಕಾಗಿಯೇ ಇಂತಹ ಘಟನೆಗಳಲ್ಲಿ ಬ್ಯುಸಿಯಾಗಿರುವಂತೆ ನೋಡಿಕೊಳ್ಳುವುದು. ಸೂಕ್ಷ್ಮವಾಗಿ ಗಮನಿಸಿದರೆ ಹಿಂದೂ-ಮುಸ್ಲಿಂ ಗಲಾಟೆಗಳಿಗೆ ನಿಜವಾದ ಕಾರಣಗಳಿಲ್ಲ. ದೊಡ್ಡ ದೊಡ್ಡ ಕುಟುಂಬಗಳನ್ನು ನೋಡಿ, ಅಲ್ಲಿ ಹಿಂದೂ ಮುಸ್ಲಿಮರ ನಡುವೆ ಮದುವೆ, ಕೊಡುಕೊಳ್ಳುವುದು ಸಾಮಾನ್ಯ. ಮೇಲ್‌ಸ್ತರದಲ್ಲಿ ಯಾವುದೇ ಭಿನ್ನಮತವಿಲ್ಲ. ಅದನ್ನು ಅದು ಕೆಳಗೆ ಇರುವಂತೆ ನೋಡಿಕೊಳ್ಳುತ್ತಾರೆ. ಅವರ ಮುಖ್ಯ ಅಜೆಂಡಾ ಜಾತಿ ವ್ಯವಸ್ಥೆ ಅಲುಗಾಡದಂತೆ ನೋಡಿಕೊಳ್ಳುವುದು. ಅಲ್ಲಿಂದಲೇ, ಆ ಕಾರಣಕ್ಕಾಗಿಯೇ ಈ ಮುಸ್ಲಿಂ ಅಥವಾ ಧಾರ್ಮಿಕ ದ್ವೇಷವನ್ನು ಹುಟ್ಟಿಸಿರುವುದು.


ಪ್ರ: ಈ ದ್ವೇಷದ ರಾಜಕೀಯದಿಂದ ಹೊರಬರಲು ದಾರಿಗಳಿವೆಯೇ?

: ಇದೆ ಅನ್ನಿಸತ್ತೆ. ವಿನಾಶ ಬಹಳ ಸುಲಭ. ಕಟ್ಟುವುದು ಸ್ವಲ್ಪ ಕಷ್ಟ. ತಕ್ಷಣಕ್ಕೆ ಎರಡು ಕೆಲಸಗಳನ್ನು ಮಾಡಬೇಕಿದೆ ಅನ್ಸತ್ತೆ. ಮೊದಲನೆಯದಾಗಿ, ಅವಕಾಶ ವಂಚಿತ ಸಮುದಾಯಗಳಿಗೆ ಹೆಚ್ಚು ಪ್ರತಿನಿಧಿತ್ವ ಕೊಡುವುದು. ಖಾಸಗಿ ವಲಯದಲ್ಲಿ ಮೀಸಲಾತಿ ಏಕೆ ಮುಖ್ಯ ಎಂಬುದು ಇಲ್ಲಿ ತಿಳಿಯತ್ತೆ. ಈ ದ್ವೇಷದ ರಾಜಕೀಯವನ್ನು ರಾಜಕಾರಣಿಗಳಿಗಿಂತಲೂ ಹೆಚ್ಚು ಆಚರಿಸುವುದನ್ನು ಈ ಖಾಸಗಿ-ಕಾರ್ಪೊರೆಟ್ ವಲಯದಲ್ಲಿ ಎಂಬುದನ್ನು ನಾನು ಕಂಡಿದ್ದೇನೆ. ಯಾವ ಹಿಂದಿನ ಸರ್ಕಾರಗಳು ಖಾಸಗಿ ಸಂಸ್ಥೆಗಳಲ್ಲಿ ಪ್ರತಿನಿಧಿತ್ವವನ್ನು ಸರಿಪಡಿಸುವ ಗೋಜಿಗೆ ಹೋಗಲಿಲ್ಲ.

ಎರಡನೆಯದಾಗಿ, ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವುದು. ಎಷ್ಟೋ ವಿಷಯಗಳು ರಾಜ್ಯದ ಅಧಿಕಾರ ವ್ಯಾಪ್ತಿಯಲ್ಲಿ ಬರುವಂತವು. ಈಗ 26 ಬಲಶಾಲಿಯಾದ ರಾಜ್ಯಗಳಿವೆ ಅಂದುಕೊಳ್ಳಿ. ಆಗ ಅವುಗಳಿಗೆಲ್ಲಾ ವಿಭಿನ್ನ ಅಜೆಂಡಾಗಳು ಇರಲಿವೆ. ಎಲ್ಲರಿಗೂ ಈ ಧಾರ್ಮಿಕ ಅಜೆಂಡಾ ಮಾತ್ರ ಮುಖ್ಯವಾಗುವುದಿಲ್ಲ.

ಆದುದರಿಂದ ಈಗ ನೋಡುತ್ತಿರುವ ವಿದ್ಯಮಾನಗಳಿಗೆ ಮುಖ್ಯವಾಗಿ ಸ್ಪಂದಿಸಬೇಕಿರುವುದು ಪ್ರತಿನಿಧಿತ್ವವನ್ನು ಸರಿಪಡಿಸಿಕೊಳ್ಳುವುದು ಮತ್ತು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಎರಡು ಮುಖ್ಯ ಸಂಗತಿಗಳಿಂದ ಎಂದೆನಿಸುತ್ತದೆ.

ಮತ್ತೆ ಈ ಡಿಮಾನೆಟೈಸೇಶನ್, ಜಿಎಸ್‌ಟಿ ಇವುಗಳನ್ನೆಲ್ಲ ತಂದಿದ್ದು ಒಕ್ಕೂಟ ವ್ಯವಸ್ಥೆಯ ಬಲಗುಂದಿಸುವುದಕ್ಕೆ. ಇದರ ಬಗ್ಗೆ ಎಚ್ಚರಿಕೆವಹಿಸಬೇಕು. ಹಾಗೇ ಈಗ ನೆನಪಾಯಿತು, ಜೆಎನ್‌ಯುನಲ್ಲಿ ತಸ್ತರದಿಂದ ಬಂದ ವಿದ್ಯಾರ್ಥಿಗಳು ಬೇರೆಬೇರೆ ಪರೀಕ್ಷೆಗಳಲ್ಲಿ ಚೆನ್ನಾಗಿ ಅಂಕ ಗಳಿಸಿದ್ದರೂ, ಸಂದರ್ಶನದಲ್ಲಿ ಅವರಿಗೆ ಕಡಿಮೆ ಅಂಕ ನೀಡಲಾಗಿದೆ. ಇದು ಜೆಎನ್‌ಯುನಲ್ಲಿ ನಡೆಯುತ್ತಿದೆ ಎಂದರೆ ಅರ್ಥ ಮಾಡಿಕೊಳ್ಳಿ.

ಎಲ್ಲಾ ಜಾತಿಗಳಿಗೂ ಪ್ರತಿನಿಧಿತ್ವ ಸಿಗ್ತಾ ಇಲ್ಲ. ಅದರ ಬಗ್ಗೆ ಗಟ್ಟಿಯಾಗಿ ಮಾತನಾಡಬೇಕು.

ಪ್ರ: ಇಂದು ಭಾರತ ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ಈ ಹಿಂದುತ್ವದ ವಿಷಮತೆಯ ದ್ವೇಷ ರಾಜಕಾರಣ ಮುಖ್ಯ ಎಂದು ಹೇಳಬಹುದಾದರೆ, ಸುಮಾರು 1925ರಲ್ಲಿ ಪ್ರಾರಂಭವಾದ ಆರ್‌ಎಸ್‌ಎಸ್ ಮತ್ತು ಅದರ ಅಂಗಸಂಸ್ಥೆಗಳು ಅದಕ್ಕೆ ನೀರೆರೆದದ್ದು ತಿಳಿದೇ ಇದೆ. ಈ ಸಂಸ್ಥೆಯ ಮುಖ್ಯ ಪಾತ್ರಧಾರಿಗಳೆಲ್ಲಾ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಅದರಲ್ಲೂ ಒಂದು ಪಂಗಡಕ್ಕೆ ಸೇರಿದವರು ಬಹುತೇಕ. ಇದಕ್ಕೆ ಆರ್ಥಿಕ ಮತ್ತು ಸೈದ್ಧಾಂತಿಕ ಬೆಂಬಲಕ್ಕೆ ಕೆಲವೇ ಕೆಲವು ಮೇಲ್ಜಾತಿಗಳು ನಿಂತಿವೆ. ಅಂದರೆ ಈ ಕೆಲವು ಸಮುದಾಯಗಳು ಸುಧಾರಣೆಗೊಂಡರೆ ಹಲವು ಸಮಸ್ಯೆಗಳು ಬಗೆಹರಿಯುತ್ತವೆ ಎಂಬ ಮಾತಿದೆ. ಇದರ ಬಗ್ಗೆ ನಿಮಗೆ ಏನನ್ನಿಸುತ್ತೆ? ಈ ಮೇಲ್ಜಾತಿಗಳು ಈ ಸಮಸ್ಯೆಯನ್ನು ಹೇಗೆ ಎದುರಿಸಬೇಕು. ಅಲ್ಲಿ ಕೆಲವಾದರೂ ವ್ಯಕ್ತಿಗಳು ಈ ದ್ವೇಷದ ಅಜೆಂಡಾ ವಿರೋಧ ಮಾಡುವವರು ಇರ್ತಾರೆ. ಅವರು ಈ ಸಮಸ್ಯೆಯನ್ನು ಹೇಗೆ ಅಡ್ರೆಸ್ ಮಾಡಬೇಕು?

: ಈಗ ನೋಡಿ ದಲಿತ್ ಸ್ಟಡಿ ಸೆಂಟರ್‌ಗಳಿವೆ. ಒಬಿಸಿ ಸ್ಟಡಿ ಸೆಂಟರ್, ವುಮೆನ್ ಸ್ಟಡಿ ಸೆಂಟರ್‌ಗಳು ಇವೆ. ಆದರೆ ಬ್ರಾಹ್ಮಿನ್ ಸ್ಟಡಿ ಸೆಂಟರ್‌ಗಳು ಇಲ್ಲ. ಬ್ರಾಹ್ಮಣ ಸಮಾಜ ಆಗಲೀ, ಬನಿಯಾ ಸಮಾಜ ಆಗಲೀ ಸಮಸ್ಯೆ ಇರುವುದು ಅವರ ಆಂತರಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದರ ಬಗ್ಗೆ ಕೆಲಸ ಮಾಡದೆ ಇರುವುದು. ಒಂದೆರಡು ಪ್ರಶ್ನೆಗಳನ್ನು ಹಾಕಿಕೊಂಡು- ಉದಾಹರಣೆಗೆ ದ್ವೇಷಿಸದೆ ಬದುಕುವುದು ಹೇಗೆ, ಅಸ್ಪೃಶ್ಯತೆ ಆಚರಿಸದೆ ಬದುಕುವುದೆ ಹೇಗೆ ಇಂತಹವು- ಮೇಲ್ಜಾತಿಗಳ ತಮ್ಮ ಅತಿ ದೊಡ್ಡ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬೇಕು. ಹಿಂದೆ ಕೆಲವರು ಆ ಕೆಲಸ ಮಾಡಿದ್ದರು. ಆದರೆ ಇದಕ್ಕೆ ಇನ್ನಷ್ಟು ದಾರಿಗಳು ಬೇಕು, ಯೋಜನೆಗಳು ಬೇಕು, ತಮ್ಮ ಆಂತರಿಕ ತಪ್ಪುಗಳನ್ನು ತಿದ್ದುಕೊಳ್ಳಬೇಕು. ಬ್ರಾಹ್ಮಣ ಸಮುದಾಯ ಆಗಲೀ ಬನಿಯಾ ಸಮುದಾಯ ಆಗಲೀ, ಇಂದು ಸುರಕ್ಷಿತ ಎಂದು ಸುಮ್ಮನೆ ಕುಳಿತೊಂಡರೆ ಉಪಯೋಗವಿಲ್ಲ. ಈ ದ್ವೇಷ ಎಲ್ಲರನ್ನೂ ಆಹುತಿ ತೆಗೆದುಕೊಳ್ಳುತ್ತದೆ. ಕೆಟ್ಟ ಪ್ರಭುತ್ವಗಳು ಎಲ್ಲರಿಗೂ ಅಪಾಯ ತಂದೊಡ್ಡುತ್ತವೆ ಎಂಬುದು ಇತಿಹಾಸ ತಿಳಿಸಿದೆ.


ಹೀಗೆ ’ಕಲೆಗಾಗಿ ಕಲೆ’ ಎಂದು ಬರೆಯುವ ಬಗ್ಗೆ ತನಗೆ ಯಾವುದೇ ಅಸಕ್ತಿ ಇಲ್ಲ ಎಂದು ಹೇಳಿಕೊಳ್ಳುವ ಚಂದನ್ ಪಾಂಡೆ, ಯಾವುದೇ ರಾಜಕೀಯ ವಸ್ತುವಿನ ಕಾದಂಬರಿ ಕೂಡ ಸೃಜನಾತ್ಮಕವಾಗಿ ಅತ್ಯುತ್ತಮವಾಗಿರಬಲ್ಲದು ಎಂಬ ನಂಬಿಕೆ ಉಳ್ಳವರು. ಇವರ ಎರಡನೇ ಹಿಂದಿ ಕಾದಂಬರಿ ಬಿಡುಗಡೆ ಮತ್ತು ಇಂಗ್ಲಿಷ್ ಅನುವಾದಕ್ಕೂ ಸಿದ್ಧಗೊಳ್ಳುತ್ತಿದೆ. ಅದು ಕೂಡ ಅಪಾರ ಓದುಗರನ್ನು ಗಳಿಸಿಕೊಳ್ಳಲಿ, ಶೀಘ್ರದಲ್ಲಿಯೇ ಇಂಗ್ಲಿಷ್ ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಅವರ ಸೃಜನಶೀಲ ಕೃತಿಗಳು ಅನುವಾದಗೊಳ್ಳಲಿ.

ಪರಿಚಯ, ಸಂದರ್ಶನ ಮತ್ತು ನಿರೂಪಣೆ: ಗುರುಪ್ರಸಾದ್ ಡಿ ಎನ್

———————————————————————————————

ಇದನ್ನೂ ಓದಿ: ನೈತಿಕತೆ ಮತ್ತು ಪೊಲೀಸ್‌ಗಿರಿ ಕೂಡಿಕೊಂಡರೆ ಅದು ಅನೈತಿಕ ಮನಸ್ಥಿತಿಗಳ ವಿಕೃತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಇಂದು ಮೊದಲ ಹಂತದ ಮತದಾನ

0
ಬಹು ನಿರೀಕ್ಷಿತ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಏ.19) ನಡೆಯಲಿದೆ. ದೇಶದ 17 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳ 16.63 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ದೇಶದ 107...