ಇರಾನಿನ ಕುಖ್ಯಾತ ‘ಮೊರಾಲಿಟಿ ಪೊಲೀಸರು’ ಟೆಹ್ರಾನ್‌ನಲ್ಲಿ ಬಂಧಿಸಿದ ನಂತರ ಕೋಮಾಕ್ಕೆ ಹೋದ ಯುವತಿ ಶುಕ್ರವಾರ ಕೊನೆಯುಸಿರೆಳೆದಿದ್ದಾಳೆ. ಸರ್ಕಾರಿ ಮಾಧ್ಯಮ ಹಾಗೂ ಮತ್ತು ಯುವತಿಯ ಕುಟುಂಬವು ಸಾವಿನ ಕುರಿತು ಮಾಹಿತಿ ನೀಡಿವೆ. ಯುವತಿಯ ಅನುಮಾನಾಸ್ಪದ ಸಾವಿಗೆ ಕಾರಣರಾದವರಿಗೆ ಶಿಕ್ಷೆ ವಿಧಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.
22 ವರ್ಷದ ಮಹ್ಸಾ ಅಮಿನಿ ತನ್ನ ಕುಟುಂಬದೊಂದಿಗೆ ಇರಾನ್ ರಾಜಧಾನಿಗೆ ಭೇಟಿ ನೀಡುತ್ತಿದ್ದರು. ಇಸ್ಲಾಮಿಕ್ ಗಣರಾಜ್ಯದಲ್ಲಿ ಮಹಿಳೆಯರಿಗೆ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಜಾರಿಗೊಳಿಸುವ ಹೊಣೆಗಾರಿಕೆಯನ್ನು ಹೊತ್ತಿರುವ ಪೊಲೀಸ್ ಘಟಕವು ಅಮಿನಿ ಅವರನ್ನು ಮಂಗಳವಾರ ಬಂಧಿಸಿತು. ಸಾರ್ವಜನಿಕವಾಗಿ ಹೆಡ್‌ಸ್ಕ್ರಾಪ್ (ಹಿಜಾಬ್) ಧರಿಸಬೇಕೆಂದು ಕಡ್ಡಾಯ ಮಾಡಲಾಗಿದ್ದು, ಯುವತಿ ಧರಿಸಿರಲಿಲ್ಲ ಎಂದು ಆರೋಪಿಸಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ದುರಾದೃಷ್ಟವಶಾತ್ ಯುವತಿ ಕೊನೆಯುಸಿರೆಳೆದಿದ್ದು, ಆಕೆಯ ಮೃತ ದೇಹವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ” ಎಂದು ಇರಾನಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
ಇರಾನ್ ವೈರ್ ವೆಬ್‌ಸೈಟ್ ಮತ್ತು ಶಾರ್ಗ್ ಪತ್ರಿಕೆ ಸೇರಿದಂತೆ ಪರ್ಷಿಯನ್ ಭಾಷೆಯ ಮಾಧ್ಯಮಗಳು ಯುವತಿಯ ಕುಟುಂಬದ ಹೇಳಿಕೆಯನ್ನು ವರದಿ ಮಾಡಿವೆ. ಈ ಹಿಂದೆ ಆರೋಗ್ಯವಾಗಿದ್ದ ಅಮಿನಿ ಅವರು ಬಂಧನದ ಕೆಲವೇ ಗಂಟೆಗಳ ಬಳಿಕ ಕೋಮಾಕ್ಕೆ ಹೋಗಿದ್ದಾರೆ. ನಂತರ ಆಸ್ಪತ್ರೆಗೆ ಸಾಗಿಸಲಾಗಿದೆ. ಈಗ ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬ ದೂರಿದೆ.
ಆಕೆ ಪೊಲೀಸ್ ಠಾಣೆಗೆ ಹೋಗುವ ಮತ್ತು ಆಸ್ಪತ್ರೆಗೆ ತೆರಳುವ ನಡುವೆ ಏನಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇರಾನ್‌ನಲ್ಲಿ ಆಗುತ್ತಿರುವ ದೌರ್ಜನ್ಯಗಳ ಮೇಲ್ವಿಚಾರಣೆ ಮಾಡುವ ‘1500ಟವ್‌ಸಿರ್’ ಚಾನೆಲ್ ವರದಿ ಮಾಡಿದ್ದು, ಯುವತಿಯ ತಲೆಗೆ ಪೆಟ್ಟು ಬಿದ್ದಿದೆ ಎಂದು ಹೇಳಿದೆ.
ಯುವತಿ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯ ಹೊರಗೆ ಜನಸಂದಣಿ ಸೇರಿದ ಪೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಲಾಗಿದೆ. ಜಮಾಯಿಸಿದ ಜನರನ್ನು ಚದುರಿಸಲು ಪೊಲೀಸರು ಪ್ರಯತ್ನಿಸಿದ್ದಾರೆ. ಟೆಹ್ರಾನ್‌ನಲ್ಲಿ ಜನರು ಆಕ್ರೋಶ ಭರಿತರಾಗಿ, ಆಡಳಿತ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ.
“22 ವರ್ಷದ ಯುವತಿ ಮಹ್ಸಾ ಅಮಿನಿಯ ಅವರು ಪೊಲೀಸ್ ಕಸ್ಟಡಿಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿರುವ ಆರೋಪಗಳಿವೆ. ಈ ಕುರಿತು ತನಿಖೆಯಾಗಬೇಕು” ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ ಒತ್ತಾಯಿಸಿದೆ.
“ಬಲವಂತವಾಗಿ ಕಾನೂನುಗಳನ್ನು ಜಾರಿಗೊಳಿಸುವಾಗ ಟೆಹ್ರಾನ್‌ನಲ್ಲಿ ‘ಮೊರಲಿಟಿ ಪೊಲೀಸ್’ ಎಂದು ಕರೆಯಲ್ಪಡುವವರು ಯುವತಿಯನ್ನು ಮೂರು ದಿನಗಳ ಹಿಂದೆ ಬಂಧಿಸಿದ್ದರು. ಈ ಸಾವಿಗೆ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಲಾಗಿದೆ.
ಇದನ್ನೂ ಓದಿರಿ: ಕಲಬುರಗಿ: ಬೊಮ್ಮಾಯಿಗೆ ಕಪ್ಪು ಬಾವುಟ ಪ್ರದರ್ಶನ; ಹೋರಾಟಗಾರರ ಬಂಧನ
2015ರ ಪರಮಾಣು ಒಪ್ಪಂದವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳಲ್ಲಿ ತೊಡಗಿರುವ ಇರಾನ್‌ನ ಯುಎಸ್ ರಾಯಭಾರಿ ರಾಬರ್ಟ್ ಮಾಲ್ಲಿ, “ಆಕೆಯ ಸಾವಿಗೆ ಕಾರಣರಾದವರು ಜವಾಬ್ದಾರರಾಗಿರಬೇಕು” ಎಂದು ಹೇಳಿದ್ದಾರೆ.
“ತಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸಿದ ಕಾರಣಕ್ಕೆ ಮಹಿಳೆಯರ ಮೇಲೆ ಆಗುವ ದೌರ್ಜನ್ಯಗಳನ್ನು ಇರಾನ್ ಕೊನೆಗೊಳಿಸಬೇಕು” ಎಂದು ಒತ್ತಾಯಿಸಲಾಗಿದೆ.
ಇರಾನ್‌ನ ಖ್ಯಾತ ವಕೀಲ ಸಯೀದ್ ದೆಹ್ಘನ್ ಅವರು ಟ್ವೀಟ್ ಮಾಡಿದ್ದು, ಅಮಿನಿಯ ಅವ ಸಾವನ್ನು ‘ಕೊಲೆ’ ಎಂದು ಬಣ್ಣಿಸಿದ್ದಾರೆ. ಆಕೆಯ ತಲೆಗೆ ಪೆಟ್ಟು ಬಿದ್ದಿದೆ ಎಂದು ತಿಳಿಸಿದ್ದಾರೆ.



ನೋ ಕಮೆಂಟ್