ಈ ವಿಷಮ ಸಮಯದಲ್ಲಿ ಶಿವಮೊಗ್ಗ ಕಡೆಯಿಂದ ಬಂದ ಸುದ್ದಿಗಳು ಶಾನೆ ಕುತೂಹಲಕರವಾಗಿವೆಯಲ್ಲಾ. ಸ್ವಾತಂತ್ರ್ಯ ದಿನಾಚರಣೆಗೆ ಮುನ್ನವೇ ಮುನಿಸಿಪಾಲಿಟಿಯವರು ಬಿದಿರುದಬ್ಬೆ ಮತ್ತು ಖಾದಿಯಲ್ಲದ ನಿಗಿನಿಗಿ ಬಾವುಟ ಹಂಚಿದರು. ಜಿಲ್ಲಾ ಮೈದಾನವಲ್ಲದೆ ಶಾಲಾ ಕಾಲೇಜಿನ ದಿಕ್ಕಿನಿಂದ ದೇಶ ಘೋಷಣೆಗಳು ಮಕ್ಕಳ ಗಂಟಲಿಂದ ಮುಗಿಲು ಮುಟ್ಟಿದವು. ಅಷ್ಟರಲ್ಲಿ ಬಿಜೆಪಿಗಳ ಕಡೆಯವರು ಆಳೆತ್ತರದ ಸಾವರ್ಕರ್ ಪ್ಲೆಕ್ಸ್ ತಂದು ಅಮೀರ್ ಅಹಮದ್ ಸರ್ಕಲ್ಲಲ್ಲಿ ಇಟ್ಟರು. ಟಿಪ್ಪು ಅಭಿಮಾನಿಗಳು ಅದನ್ನ ಕಿತ್ತೆಸೆದರು. ಅವರ ದೃಷ್ಟಿಯಲ್ಲಿ ಟಿಪ್ಪು ಸ್ವಾತಂತ್ರ ಹೋರಾಟಗಾರನಲ್ಲದಿದ್ದರೆ ಸಾವರ್ಕರನು ಸ್ವಾತಂತ್ರ ಹೋರಾಟಗಾರನಲ್ಲ ಎಂಬುದು. ಇದಕ್ಕೂ ಮೊದಲೆ ಶಿವಮೊಗ್ಗದ ಮಾಲ್‌ನಲ್ಲಿ ಅಳವಡಿಸಿದ ಸಾವರಕರನ ಫೋಟೋ ವಿರುದ್ಧ ದೇಶಪ್ರೇಮಿಯೊಬ್ಬ ಪ್ರತಿಭಟಿಸಿದ್ದ. ಇದೇ ಪ್ರತಿಭಟನೆ ಅಮೀರ್ ಅಹಮದ್ ಸರ್ಕಲ್ಲಿಗೂ ಮರುದಿನ ವ್ಯಾಪಿಸಿದ್ದರಿಂದ ಸೆಕ್ಷನ್ 144 ಜಾರಿಯಾಗಿತ್ತು. ಇತ್ತ ಕುವೆಂಪು ರಂಗಮಂದಿರದಲ್ಲಿ ನಾಟಕ ಆಡಲು ಬಣ್ಣ ಬಳಿದುಕೊಂಡು ಕೂತಿದ್ದವರಿಗೆ ಸೆಕ್ಷನ್ 144 ಜಾರಿಯಾಗಿದೆ ಮನೆಗೆ ಹೋಗಿ ಎಂಬ ಅಪ್ಪಣೆ ಬಂತು. ನಾಟಕ ನೋಡಲು ಬಂದಿದ್ದವರೆಲ್ಲಾ, ಈಶ್ವರಪ್ಪ ಮನೆಗೆ ಹೋಗದ ಹೊರತು ಶಿವಮೊಗ್ಗಕ್ಕೆ ನೆಮ್ಮದಿಯಿಲ್ಲ ಎಂದು ಗೊಣಗಿಕೊಂಡು, ಮತಾಂಧ ಮೆದುಳಲ್ಲಿ ಕಲೆ, ಸಾಹಿತ್ಯ, ಸಂಗೀತಕ್ಕೆ ಜಾಗವಿರುವುದಿಲ್ಲ ಎಂದು ಮಾತನಾಡಿಕೊಂಡು ಮನೆಸೇರಿದರಂತಲ್ಲಾ, ಥೂತ್ತೇರಿ.
****
ಶಿವಮೊಗ್ಗದ ಸ್ಥಿತಿ ಕುರಿತು ದೂರದೂರಿನ ಜನಗಳು ಅಲ್ಲಿ ಏನೋ ಆಗಬಾರದ್ದು ಆಗುತ್ತಿದೆ ಎಂದು ಆತಂಕಗೊಂಡಿರುವುದು ಸಹಜವಂತಲ್ಲಾ. ಏಕೆಂದರೆ ಟಿವಿ ಮಾಧ್ಯಮಗಳು ಶಿವಮೊಗ್ಗದ ನಿಗಿನಿಗಿ ಶಿವಮೊಗ್ಗ ಕೊತಕೊತ. ಬೂದಿ ಮುಚ್ಚಿದ ಕೆಂಡ ಶಿವಮೊಗ್ಗ, ಆತಂಕದಲ್ಲಿ ಶಿವಮೊಗ್ಗ ಎಂಬ ಅಬ್ಬರಿಸುತ್ತಿರುವುದನ್ನು ಕೇಳಿ ಹೊರಬಂದು ನೋಡಿದರೆ ಆ ಮಲೆನಾಡಿನ ಹೆಮ್ಮೆಯ ನಗರ ಕಾಡಿನಷ್ಟೇ ಪ್ರಶಾಂತವಾಗಿದ್ದು ಆ ಊರಿನ ಜನಗಳಿಗೆ ಅಚ್ಚರಿ ಮೂಡಿಸಿದೆಯಂತಲ್ಲಾ. ಹಾಗಾದರೆ ಟಿವಿಯವರು ಅರಚುತ್ತಿರುವ ನಿಗಿನಿಗಿ ಕೊತಕೊತ ಎಲ್ಲಿದೆ ಎಂದು ನೋಡಲಾಗಿ ಅದು ಟಿವಿಯವರ ಹೊಟ್ಟೆಪಾಡಿನ ಸದ್ದೆಂಬುದು ಅರಿವಾಗಿ ಶಿವಮೊಗ್ಗದ ಜನ ಬಿದ್ದುಬಿದ್ದು ನಕ್ಕರಂತಲ್ಲಾ. ಮುಖ್ಯವಾಗಿ ಟಿವಿಯವರು ಈವರೆಗೂ ತೋರುತ್ತಿರುವುದು ಅಮೀರ್ ಅಹಮದ್ ಸರ್ಕಲ್ಲಿನಲ್ಲಿ ಪ್ಲೆಕ್ಸ್ ಕಿತ್ತಾಕಿದ ಕಿತ್ತಾಟವನ್ನು. ಅದು ಬಿಟ್ಟರೆ ಎಲ್ಲ ಬಡಾವಣೆಗಳಲ್ಲೂ ಕೂಡ, ಅದೆಲ್ಲೊ ದೂರದಲ್ಲಿ ನಡೆದ ಈಶ್ವರಪ್ಪನ ಕಡೆಯವರು ಮತ್ತು ಕೆಲ ಕಿಡಿಗೇಡಿ ಮುಸ್ಲಿಮರ ಪುಂಡಾಟ ಎನ್ನುತ್ತ ಗೋಬಿ ಮಂಚೂರಿ, ಪಾನಿಪೂರಿ, ಇಡ್ಲಿ ಗಾಡಿಯವರೆಲ್ಲಾ ತಮ್ಮ ಜೀವನಾಧಾರದ ಆ ದಿನದ ಸಾಮಗ್ರಿಯನ್ನ ಚರಂಡಿಗೆ ಸುರಿಯುತ್ತ ಶಾಪ ಹಾಕುತ್ತಿದ್ದಾರಂತಲ್ಲಾ. ಪೊಲೀಸರಿಗೆ ಸಂಬಳ ಬರುತ್ತದೆ, ರಾಜಕಾರಣಿಗಳ ಖಜಾನೆಗೆ ರಾಜ ಕಾಲುವೆಗಳೆ ಇವೆ. ಇವರೆಲ್ಲಾ ಆ ದಿನ ದುಡಿದು ಅದರಲ್ಲಧ ಪಿಗ್ಮಿ ಕಟ್ಟಿ ಉಳಿದುದರಲ್ಲಿ ಜೀವನದ ಗಾಡಿ ಎಳೆಯುವವರಾಗಿದ್ದರೆ ಎಷ್ಟು ಚೆನ್ನಾಗಿತ್ತು ಎಂಬುದು ದುಡಿದು ತಿನ್ನುವವರ ಅಳಲಾಗಿದೆಯಂತಲ್ಲಾ, ಥೂತ್ತೇರಿ.

*****
ಶಿವಮೊಗ್ಗ ಜಿಲ್ಲೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಭದ್ರಾವತಿಯ ಚೂರಿ ಇರಿತದ ವಿಷಯದಲ್ಲಿ ಚೂರಿ ಹಾಕಿದವನು ಮತ್ತು ಹಾಕಿಸಿಕೊಂಡವನು ಜೊತೆಯಲ್ಲಿ ಕುಳಿತು ಜೂಜಾಡುತ್ತಿರುವ ಫೋಟೋ ತೋರಿಸಿದ ಶಾಸಕ ಸಂಗಮೇಶ್ ಇದು ಮತೀಯ ಗಲಭೆ ಎಂದಾದರೆ ನಾನು ಶಾಸಕ ಸ್ಥಾನ ಬಿಡುತ್ತೇನೆ ಎಂದರೂ ಬಿಜೆಪಿಗಳು ಬಿಡುತ್ತಿಲ್ಲವಂತಲ್ಲಾ. ಯಾವತ್ತೂ ಸತ್ಯ ಸಂಗತಿಗಳ ವಿರುದ್ಧವೇ ಹೋರಾಡುವ ಪ್ರವೃತ್ತಿ ಬೆಳೆಸಿಕೊಂಡ ಫಲವಾಗಿ ಮಡಿಕೇರಿಯಲ್ಲಿ ಸಿದ್ದರಾಮಯ್ಯ ಕಳಲೆ ತಿಂದಿದ್ದು ಎಂದು ಗೊತ್ತಾಗಿದ್ದರು ಅದು ಕೋಳಿ ಎಂದು ಕೂಗುತ್ತಿವೆಯಂತಲ್ಲಾ. ಇದನ್ನ ಕೇಳಿಸಿಕೊಂಡ ಕೊಡಗಿನ ಜನ ಒಳಗೊಳಗೇ ನಗುತ್ತ ಆ ಸಿದ್ದರಾಮಯ್ಯ ಏನು ತಿಂದರೆ ನಮಗೇನು ನಮ್ಮ ಸಂಸ್ಕೃತಿಯಲ್ಲೇ ಮಾಂಸ ಮಡ್ಡಿ ಹಾಸುಹೊಕ್ಕಾಗಿದೆ, ಅದರಲ್ಲೂ ನಮ್ಮ ಪ್ರಿಯ ಆಹಾರವಾದ ವರಹ ಮಾಂಸ ಭಕ್ಷಣೆ ಮಾಡಿಲ್ಲವಲ್ಲಾ, ಅಷ್ಟಕ್ಕೂ ಈಗಿನ ಕೋಳಿ ಹಿಂದಿನ ಕೋಳಿಯಂತಲ್ಲಾ ಎಂದರಂತಲ್ಲಾ. ಸಿದ್ದರಾಮಯ್ಯ ತಿಂದ ಮಾಂಸದ ಬಗ್ಗೆ ತೀರಾ ತಲೆಕೆಡಿಸಿಕೊಂಡಿರುವ ಬಿಜೆಪಿಗಳು ಮತ್ತು ಟಿವಿ ಜನರನ್ನ ಕುರಿತೇ ನಮ್ಮ ಸರ್ವಜ್ಞ ಶತಮಾನದ ಹಿಂದೆಯೇ ವಚನ ಕಟ್ಟಿದ್ದಾನೆ. ಅದೇನೆಂದರೆ ಬಾಡ ತಿಂಬಾತಂಗೆ ಆವೇನು ಆಡೇನು ಕಾಡಬಡನರಿಯೇನು ಮನೆಯ ನಾಯೇನು ಸರ್ವಜ್ಞ. ಅದರಂತೆ ಸಿದ್ದು ಏನು ತಿಂದರೆ ಬಿಜೆಪಿಗಳಿಗೇನೋ ಬೋಪಯ್ಯ ಎನ್ನುವಂತಾಗಿದೆಯಲ್ಲಾ, ಥೂತ್ತೇರಿ॒
ಯಾಹೂ


