ತುರ್ತು ಪರಿಸ್ಥಿತಿಯ ಸಮಯದಲ್ಲಿ ದೇಶದಲ್ಲಿ ಸ್ವಾತಂತ್ರ್ಯದ ಹರಣವಾಗಿತ್ತು; ಮಾಧ್ಯಮಗಳ ಕತ್ತು ಹಿಸುಕಲಾಗಿತ್ತು. ಬಲೆ ಹಾಕಿ ಹಂದಿಗಳನ್ನು ಹಿಡಿದಂತೆ ವಿರೋಧ ಪಕ್ಷದವರನ್ನೆಲ್ಲಾ ಅರೆಸ್ಟು ಮಾಡಿ ಜೈಲಿಗೆ ಹಾಕಲಾಗಿತ್ತು; ಇಂಥ ಮಾತುಗಳ ಶಂಖವಾದ್ಯವನ್ನು ತುರ್ತುಪರಿಸ್ಥಿತಿ ತೆರವುಗೊಂಡಾಗಿನಿಂದ ಬಿಜೆಪಿಗಳು ಪ್ರತಿ ವರ್ಷ ಊದೂತ್ತ ಬಂದಿದ್ದಾರೆ. ಒಂದಿಷ್ಟು ಒಳನೋಟ ಬೀರಿ ಗ್ರಹಿಸಿದ್ದಾದರೆ ತುರ್ತು ಸ್ಥಿತಿಯ ಗರ್ಭದಲ್ಲೇ ಬಿಜೆಪಿಯ ಭ್ರೂಣಾವಸ್ಥೆ ಬಲಿತು ಆ ನಂತರ ಅದು ಕಮಲವಾಗಿ ಅರಳಿದ್ದು ಕಟುಸತ್ಯವಾಗಿ ಕಾಣುತ್ತಿದೆಯಲ್ಲಾ. ತುರ್ತುಪರಿಸ್ಥಿತಿಯಲ್ಲಿ ವಿರೋಧಪಕ್ಷದವರೆಲ್ಲಾ ಜೈಲಿನಲ್ಲಿ ಒಟ್ಟಾಗಿ ಕುಳಿತು ಚರ್ಚಿಸಿ ಒಗ್ಗಟ್ಟು ಪ್ರದರ್ಶಿಸಿದ್ದರು. ತುರ್ತುಪರಿಸ್ಥಿತಿ ತೆರವುಗೊಂಡು ಎಲ್ಲರೂ ಹೊರಬಂದಮೇಲೆ ಜೆ.ಪಿ.ಯವರು (ಜಯಪ್ರಕಾಶ ನಾರಾಯಣ) ನೀವೆಲ್ಲಾ ನಿಮ್ಮನಿಮ್ಮ ಚಹರೆ ಮತ್ತು ಬಾವುಟ ಬಿಸಾಡಿ ನೇಗಿಲು ಹೊತ್ತ ರೈತನ ಪಕ್ಷದ ಮುಂದಾಳತ್ವದಲ್ಲಿ ಒಂದಾಗಲು ಕರೆಕೊಟ್ಟ ಕೂಡಲೇ ಬಹುತೇಕ ಎಲ್ಲರೂ ಹಾಗೇ ಮಾಡಿದರು; ಆದರೆ ಬಿಜೆಪಿಗಳು ಜನಸಂಘದ ದೀಪ ಆರಿಸಿ ಬಂದರೂ ಚೆಡ್ಡಿ ದೊಣ್ಣೆಯನ್ನ ಹಾಗೇ ಉಳಿಸಿಕೊಂಡು ಬಂದಿದ್ದರಂತಲ್ಲಾ, ಥೂತ್ತೇರಿ.
****
ಜೆ.ಪಿ. ಕರೆಯಂತೆ ನೇಗಿಲುಹೊತ್ತ ರೈತನ ಪಕ್ಷ ಭಾರತದಲ್ಲಿ ಜಯಭೇರಿ ಭಾರಿಸಿ ಹದಿನೆಂಟು ತಿಂಗಳ ಕಾಲ ಆಡಳಿತ ನಡೆಸಿತು. ಅಷ್ಟರಲ್ಲಿ ದೀಪ ಆರಿಸಿ ಬಂದ ಜನರ ಚೇಷ್ಟೆಗಳು ಆರಂಭವಾದವು. ಅವರು ಜನತಾಪಕ್ಷದ ಸದಸ್ಯತ್ವದ ಜೊತೆಗೇ ಆರೆಸ್ಸೆಸ್ ಸದಸ್ಯತ್ವವನ್ನು ನಿಭಾಯಿಸುತ್ತಾ ಜನತಾ ಪಕ್ಷಕ್ಕೆ ಜನಿವಾರ ತೊಡಿಸಹೊರಟಿದ್ದು ಎಲ್ಲರನ್ನ ದಂಗುಬಡಿಸಿತು. ಈ ಗಲಭೆಯ ಸಮಯವನ್ನು ಸದುಪಯೋಗಪಡಿಸಿಕೊಂಡ ರಾಜನಾರಾಯಣನವರ ಬಣ ಪ್ರಧಾನಿ ಮೊರಾರ್ಜಿ ಅವರನ್ನ ಇಳಿಸಿ ಚರಣಸಿಂಗರನ್ನು ಪ್ರಧಾನಿ ಮಾಡುವಲ್ಲಿ ಯಶಸ್ವಿಯಾಯಿತಾದರೂ, ಅದಕ್ಕೆ ಇಂದಿರಾಗಾಂಧಿ ಬೆಂಬಲ ಬೇಕಾಯಿತು! ಆಗ ಜನತಾ ಪಕ್ಷ ಚಿಂದಿಯಾಗಿ ಹೋಯಿತು. ಇತ್ತ ವಾಜಪೇಯಿ ಟೀಮು ಭಾರತೀಯ ಜನತಾಪಕ್ಷ ಸ್ಥಾಪಿಸಿಕೊಂಡು ಕಮಲ ಚಿಹ್ನೆ ಪಡೆದು ಜನತಾಪಕ್ಷದೊಳಗಡೆ ಪಡೆದುಕೊಂಡ ಶಕ್ತಿಯನ್ನು ವೃದ್ಧಿಸಿಕೊಂಡು ಬೆಳೆಯುತ್ತಲೇ ಹೋಯ್ತು. ಜೆ.ಪಿ. ನೀವೆಲ್ಲಾ ನಿಮ್ಮನಿಮ್ಮ ಪಕ್ಷ ವಿಸರ್ಜಿಸಿ ನೇಗಿಲು ಹೊತ್ತ ರೈತನ ಜೊತೆಗೆ ಬನ್ನಿ ಎಂದು ಕರೆಕೊಡುವಾಗ, ಗಾಂಧಿ ಕೊಂದ ಆಪಾದನೆಯ ಸಂಘಟನೆಯ ಜೊತೆಗೆ ಸಂಬಂಧ ಹೊಂದಿದ್ದ ಜನಸಂಘದ ಹೊರತಾಗಿ ಎಲ್ಲರೂ ಬನ್ನಿ ಎಂದು ಹೇಳಿದ್ದರೆ ಈ ದೇಶದ ಚರಿತ್ರೆಯೇ ಬದಲಾಗುತ್ತಿತ್ತಲ್ಲವಾ, ಥೂತ್ತೇರಿ.
****
ದೇಶದ ಮಹಾನಾಯಕರು ವಿವೇಚನೆಯಿಲ್ಲದೆ ನಡೆದುಕೊಂಡ ತಪ್ಪಿಗೆ ದೇಶವೇ ಪರಿತಪಿಸಬೇಕಾಗುತ್ತದೆ ಎಂಬುದಕ್ಕೆ ಜೆ.ಪಿ. ತೆಗೆದುಕೊಂಡ ಆತುರದ ತೀರ್ಮಾನವೇ ಪ್ರಮುಖ ಉದಾಹರಣೆ. ಅದು ಇಂದು ತನ್ನ ದುಷ್ಪರಿಣಾಮದ ಫಲಕೊಡುತ್ತಿದೆ. ನಿಜವಾಗಿಯೂ ಭಾರತೀಯ ಜನತಾಪಕ್ಷದವರು ತುರ್ತುಸ್ಥಿತಿಯನ್ನ ಸ್ಮರಿಸಿಕೊಳ್ಳಬೇಕು, ಅಲ್ಲದೆ ತಮ್ಮ ಪಾರ್ಟಿ ಆಫೀಸುಗಳಲ್ಲಿ ಮತ್ತು ನಾಗಪುರದ ಕೇಂದ್ರ ಕಚೇರಿಯಲ್ಲಿ ಜೆ.ಪಿ. ಮತ್ತು ಇಂದಿರಾಗಾಂಧಿಯವರ ಫೋಟೋ ಹಾಕಿಕೊಂಡು ಪ್ರಾರ್ಥಿಸಬೇಕು. ಇವರಿಬ್ಬರ ವಿವೇಚನೆಯಿಲ್ಲದ ತೀರ್ಮಾನಗಳಿಂದ ಅರಳಿದ ಕಮಲ ಪಕ್ಷದಿಂದ ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇಂದು ನೆಲೆಸಿದೆ. ಇಡೀ ದೇಶವೇ ಕ್ಷೋಭೆಯಿಂದ ನಲುಗುತ್ತಿದೆ, ಮಣಿಪುರ ಸರ್ವನಾಶದ ದಾರಿಯಲ್ಲಿದೆ. ಇಂತಹ ಘಟನೆಗಳಿಂದ ವಿಚಲಿತರಾಗದ ನಮ್ಮ ಪ್ರಧಾನಿಯವರು ಸ್ಥಿತಪ್ರಜ್ಞತೆಯಿಂದ ಯೋಗ ಮಾಡಿಕೊಂಡು ಇಡೀ ಪ್ರಪಂಚದ ಗಮನ ಸೆಳೆದಿದ್ದಾರೆ. ಮಾರಿಕೊಂಡ ಮಾಧ್ಯಮದವರೂ ವಾರಗಟ್ಟಲೆ ಮೋದಿಯ ಯೋಗ ತೋರಿಸಿ ಎಲ್ಲರೂ ಯೋಗದಿಂದ ವಿಮುಕ್ತರಾಗುವಂತೆ ಮಾಡಿದ್ದಾರಂತಲ್ಲಾ, ಥೂತ್ತೇರಿ.
****
ನಿಜವಾಗಿಯೂ ಒಂದು ಕಾಲದ ಬಿಜೆಪಿಯು ಅಂದರೆ ವಾಜಪೇಯಿ ಕಾಲದ ಬಿಜೆಪಿ ಈಗಿನಂತಿರಲಿಲ್ಲವಂತಲ್ಲಾ. ಕೆಲವರಾದರೂ ಪ್ರಾಮಾಣಿಕರು ಅವರ ಜೊತೆಗೆ ಇದ್ದರಂತಲ್ಲಾ. ಚುನಾವಣೆ ಬಂದರೆ ಕುಬೇರರ ಬಳಿ ಭಿಕ್ಷೆ ಬೇಡಿ ಅದರಲ್ಲೇ ಚಿತ್ರಾನ್ನ ತಿಂದು, ಶರಭತ್ತು ಕುಡಿದು, ಹ್ಯಾಂಡ್ ಬಿಲ್ ಹಾಕಿಸಿಕೊಂಡು ಹಂಚಿ ಚುನಾವಣೆ ಮುಗಿಸುತ್ತಿದ್ದರು. ಫಲಿತಾಂಶ ಬಂದಾಗ “ಈ ಬಾರಿ ಐದುನೂರು ಓಟು ನಮ್ಮ ಪಾರ್ಟಿಗೆ ಜಾಸ್ತಿ ಬಂದಿವೆ” ಎಂದುಕೊಂಡು ಮನೆಗೆ ಹೋಗುತ್ತಿದ್ದರು. ಅದು ಎ.ಕೆ ಸುಬ್ಬಯ್ಯನವರ ಕಾಲ. ಯಾವಾಗ ಎಡೂರಪ್ಪನವರ ಕಾಲ ಶುರುವಾಯಿತೊ ಆಗ ಉದ್ಘಾಟನೆಗೊಂಡ ಭ್ರಷ್ಟಾಚಾರ ಇಡೀ ದೇಶವನ್ನೇ ದಂಗುಬಡಿಸಿತು. ಬಿಜೆಪಿ ಕಚೇರಿಗಳೇ ಮೀಟಿಂಗು ಮಾಡಿ, ನಮ್ಮ ಪಕ್ಷದವರು ಹಣ ಮಾಡುವುದನ್ನು ಯಾರೂ ತಡೆಯಬೇಡಿ, ಅದರ ವಿರುದ್ಧ ಹೇಳಿಕೆ ಕೊಡಬೇಡಿ ಎಂದಕೂಡಲೇ ಎಡೂರಪ್ಪ ಪಾರ್ಟಿ ಹಿತಕ್ಕಾಗಿ ಎರ್ರಾ ಬಿರ್ರಿ ಹಣ ಸಂಗ್ರಹಿಸಿ, ಕೊನೆಗೆ ಆರೋಪ ವಹಿಸಿಕೊಂಡು ಜೈಲಿಗೂ ಹೋಗಿಬಂದರಂತಲ್ಲಾ, ಥೂತ್ತೇರಿ.
****
ಮುಂದೆ ಮೋದಿ ಸರಕಾರವನ್ನು ಕಿತ್ತು ಮಡಗಬೇಕಾದರೆ ನಾವೆಲ್ಲಾ ಒಟ್ಟಾಗಿ ಚುನಾವಣೆ ಎದುರಿಸಬೇಕು ಎಂದು ಇಪ್ಪತ್ತೊಂದು ವಿವಿಧ ಪಕ್ಷಗಳೂ ಒಂದೆಡೆ ಸೇರಿ ಚರ್ಚಿಸಿ ಬರಖಾಸ್ತ ಆದರಂತಲ್ಲಾ. ಈ ಸಭೆಗೆ ಮಾಜಿ ಪ್ರಧಾನಿಗಳಾದ ದೇವೇಗೌಡರು ಗೈರುಹಾಜರಾದದ್ದು ಸುದ್ದಿಯಾಗಲಿಲ್ಲ; ಈಗಿನ ಸರ್ಕಾರ ಕಟ್ಟಿಸಿ ಮೋದಿಯವರು ಉದ್ಘಾಟಿಸಿದ ಹೊಸ ಪಾರ್ಲಿಮೆಂಟ್ ನೋಡಲು ದೇವೇಗೌಡರು ಹೋಗಿದ್ದರು. ಹಿಂದೆ ದೇವೇಗೌಡರನ್ನು ಪ್ರಧಾನಿ ಮಾಡಬೇಕಾದ ಸಮಯದಲ್ಲಿ ಇಷ್ಟೇ ಪಕ್ಷಗಳು ಒಂದೆಡೆ ಸೇರಿ ಚರ್ಚಿಸಿದ್ದವು. ಆ ಸಭೆಯಲ್ಲಿ ಬಿಜೆಪಿ ಇರಲಿಲ್ಲ. ಜ್ಯೋತಿ ಬಸು ಪ್ರಧಾನಿಯಾಗಲು ಪಾರ್ಟಿ ಬಿಡಲಿಲ್ಲ. ವಿ.ಪಿ ಸಿಂಗ್ ತಪ್ಪಿಸಿಕೊಂಡರು. ಆಗ ಎಲ್ಲ ವಿರೋಧಪಕ್ಷಗಳು ಸೇರಿಕೊಂಡು ದೇವೇಗೌಡರನ್ನು ಪ್ರಧಾನಿಯಾಗಿ ಆರಿಸಿದರು. ಇಂತಹ ಯಾವ ಉಪಕಾರದ ಸ್ಮರಣೆಯಿಲ್ಲದ ಗೌಡರ ನಡೆ, ಅವರು ಈ ಹಿಂದೆ ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡಲು ಹಾಕಿದ ಪಾತ್ರಕ್ಕೆ ಸಾಕ್ಷಿ ನುಡಿಯುತ್ತಿದೆಯಂತಲ್ಲಾ, ಥೂತ್ತೇರಿ.
****
ಯಾವಾಗ ದೇವೇಗೌಡರು ಬಹಿರಂಗವಾಗಿಯೇ ಮೋದಿ ಪರವಾಗಿ ಚಾವಲ ಬೀಸತೊಡಗಿದರೋ, ಆ ಕೂಡಲೇ ಕುಮಾರಣ್ಣ ಕಾಂಗೈ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳತೊಡಗಿದ್ದಾರಲ್ಲಾ. ವಾಸ್ತವವಾಗಿ ಪಂಚರತ್ನ ಭಾಗ್ಯ ಪ್ರಕಟಿಸಿ ಕರ್ನಾಟಕವನ್ನು ಗರಗರ ತಿರುಗಿ ಬರಬರ ಬಂದವರು, ತಾವು ಮಾಡಬೇಕಿದ್ದಂತಹ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಪಾರ್ಟಿಯಾದರೂ ತರುತ್ತಿದೆಯಲ್ಲಾ ಎಂದು ಮೆಚ್ಚುಗೆ ಸೂಚಿಸಬಹುದಿತ್ತು. ಆದರೆ ಅದು ಅವರಿಂದ ಸಾಧ್ಯವಾಗುತ್ತಿಲ್ಲ. ದೇವೇಗೌಡರು ಏನೇ ಮಾಡಿದರೂ ಅದು ಮಗನ ರಾಜಕಾರಣದ ಭವಿಷ್ಯ ಕುರಿತ ಹುನ್ನಾರದ ಸೂತ್ರವಿದ್ದಂತೆ. ಅಂತಹ ಸೂತ್ರದಲ್ಲಿ ಸಿಕ್ಕಿ ಒದ್ದಾಡುತ್ತಿರುವ ಕುಮಾರಣ್ಣ ಯಾವ ಮಾತನ್ನಾಡಿದರೂ ಹಾಸ್ಯಾಸ್ಪದವಾಗುತ್ತಿದೆ. ಒಂಥರದಲ್ಲಿ ಅದು ಶೋಭಾ ಕರಂದ್ಲಾಜೆ, ಎಡೂರಪ್ಪ, ಆಶೋಕ್ ಇತ್ಯಾದಿಗಳ ದನಿಯಂತೆಯೂ ಕೇಳುತ್ತಿದೆ. ಹೀಗೇ ಆದರೆ ಕುಮಾರಣ್ಣ ಹಿಂದೆ ಹೋಗುವುದು ಹೇಗೆಂದು ದಳದ ಕೆಲವರು ಯೋಚಿಸುತ್ತಿದ್ದಾರಂತಲ್ಲಾ. ಇಂತಹ ಆಲೋಚನೆ ಮತ್ತು ಕಾರ್ಯಕರ್ತರ ಅಸಮಾಧಾನಗಳ ಕಡೆ ಕಿವಿಗೊಟ್ಟಿದ್ದರೆ ಕುಮಾರಣ್ಣನಿಗೆ ಇಪ್ಪತ್ತೊಂಬತ್ತು ಸೀಟಾದರೂ ಬರುತ್ತಿದ್ದವಂತಲ್ಲಾ ಥೂತ್ತೇರಿ.
ಇದನ್ನೂ ಓದಿ: ಮತದಾರ ಕೊಟ್ಟ ಪೆಟ್ಟು ಮುಟ್ಟಿ ನೋಡಿಕೊಳ್ಳುವಂತಿದೆಯಲ್ಲಾ…


