Homeಅಂಕಣಗಳುಮತದಾರ ಕೊಟ್ಟ ಪೆಟ್ಟು ಮುಟ್ಟಿ ನೋಡಿಕೊಳ್ಳುವಂತಿದೆಯಲ್ಲಾ...

ಮತದಾರ ಕೊಟ್ಟ ಪೆಟ್ಟು ಮುಟ್ಟಿ ನೋಡಿಕೊಳ್ಳುವಂತಿದೆಯಲ್ಲಾ…

- Advertisement -
- Advertisement -

ಕರ್ನಾಟಕದ ಜನಸ್ತೋಮ ಮತಪೆಟ್ಟಿಗೆಯ ಮುಖಾಂತರ ಕೊಟ್ಟ ಏಟು ಮುಟ್ಟಿ ನೋಡಿಕೊಳ್ಳುವಂತಿದೆಯಲ್ಲಾ. ಹಾಗೆ ನೋಡಿದರೆ ಮುಟ್ಟಿ ನೋಡಿಕೊಳ್ಳುವವರ ಪಟ್ಟಿ ದೊಡ್ಡದಾಗಿದೆ. ಈ ಪೈಕಿ ಹೊಟ್ಟೆಪಾಡಿನ ಜ್ಯೋತಿಷಿಗಳು ಫಲಿತಾಂಶ ಬಂದಾಗ ಮನೆ ಬಾಗಿಲು ಹಾಕಿಕೊಂಡವರು ಇನ್ನೂ ತೆಗೆದಿಲ್ಲವಂತಲ್ಲಾ. ಆ ಪೈಕಿ ಪುರೋಹಿತಶಾಹಿ ಜ್ಯೋತಿಷಿಯೊಬ್ಬ ಹಣೆ ಮೈಗೆಲ್ಲಾ ತರೇವಾರಿ ಬಣ್ಣ ಬಳಿದುಕೊಂಡು, ’ಮೋದಿ ಜಾತಕ ಕುಂಡಲಿಯನ್ನು ನಾನು ಪರಿಶೀಲಿಸಿದಾಗ, ಅವರು ಹದಿನೆಂಟು ಗುಣಗಳುಳ್ಳ ನಾಯಕ, ಅವರು ಕರ್ನಾಟಕವನ್ನು ಪ್ರದಕ್ಷಿಣೆ ಮಾಡಿರುವುದರ ಪ್ರಯುಕ್ತ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಗದ್ದುಗೆ ಏರಲಿದೆ’ ಎಂದಿದ್ದ. ಮತ್ತೊಬ್ಬ ನೆಲದ ಜಲ ಪತ್ತೆಹಚ್ಚುವಂತಹ ಸ್ಕೇಲು ತಯಾರಿಸಿಕೊಂಡು ಮೂರೂ ಪಾರ್ಟಿಯ ಚಿಹ್ನೆಯ ಮೇಲೆ ಹಿಡಿದಿದ್ದ ಆ ಸ್ಕೇಲು ಬಿಜೆಪಿಯ ಕಮಲದ ಎದುರು ಬಾಗಿತು ನೋಡಿ, ಬಿಜೆಪಿ ಬಿಟ್ಟು ಇನ್ನಾವ ಪಾರ್ಟಿಯೂ ಮೆಜಾರಿಟಿ ಪಡಿಯೋದಿಲ್ಲ ಎಂದ. ಮತ್ತೊಬ್ಬ ಹುಚ್ಚನಂತಿದ್ದ ಜ್ಯೋತಿಷಿ ಲಡಾಸು ಕಾರಿನ ಲೈಟಿನಂತಿದ್ದ ಎರಡು ಬಲ್ಪುಗಳ ಹಿಡಿಕೆ ತೋರಿಸಿ ತನ್ನ ಕಡೆಗೆ ತಿರುಗಿಸಿಕೊಂಡು ನೋಡಿ, ನನ್ನ ಅಂತರಾತ್ಮದಲ್ಲಿ ಕಮಲ ಮೂಡುತ್ತಿದೆ ಆದ್ದರಿಂದ ಈ ಚುನಾವಣೆ ನಂತರ ಕಮಲ ಅರಳಲಿದೆ ಎಂದ. ಈಗ ಇವರೆಲ್ಲರೂ ಬಾಗಿಲು ಬಂದ್ ಮಾಡಿಕೊಂಡು ಒಳಗಿದ್ದರೂ, ಯಾರಾದರೂ ಬಂದು ಬಾಗಿಲು ತಟ್ಟಿದರೆ ಧ್ವನಿ ಬದಲಿಸಿಕೊಂಡು ಅವರಿಲ್ಲಾ ಎನ್ನುತ್ತಿದ್ದಾರಲ್ಲಾ, ಥೂತ್ತೇರಿ.

*****

ಕರ್ನಾಟಕದ ಮತದಾರ ಕೊಟ್ಟ ಉತ್ತರದಲ್ಲಿ ಪ್ರಧಾನಿಯಾದವರು ಹೀಗೆ ನಡೆದುಕೊಳ್ಳಬಾರದೆಂಬ ಎಚ್ಚರಿಕೆಯಿದ್ದರೆ, ಇನ್ನು ಸರ್ವಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಹಚ್ಚಲು ಬಂದ ಶಾ, ಚುನಾವಣೆ ನಂತರ ಇಲ್ಲಿ ಗಲಭೆ ಏಳುತ್ತದೆ ಎಂದು ಧಮಕಿ ಹಾಕಿದ್ದರು. ಗೆಲ್ಲಲೋಸ್ಕರ ಯಾವ ಮಾತನ್ನಾದರೂ ಆಡುವ, ಏನನ್ನಾದರೂ ಮಾಡುವ ಶಾನ ಮಾತಾಗಲಿ, ತಂತ್ರವಾಗಲಿ ಕರ್ನಾಟಕದಲ್ಲಿ ಕೆಲಸ ಮಾಡಲಿಲ್ಲ. ಇನ್ನು ಚುನಾವಣೆ ಮುಗಿದ ಕೂಡಲೇ ತನ್ನನ್ನು ಯಾರಾದರೂ ಕರೆಸಿಕೊಳ್ಳುತ್ತಾರೆ ಎಂದು ಭಾವಿಸಿ ಸಿಂಗಾಪುರಕ್ಕೆ ಹಾರಿದ್ದ ಕುಮಾರಣ್ಣನಿಗೆ ಯಾವ ಜ್ಞಾನೋದಯವಾಯ್ತೋ ಏನೋ, ಒಂದೇ ಉಸುರಿಗೆ ಓಡಿಬಂದರೆ ಯಾರೂ ಮನೆಬಾಗಿಲಿಗೆ ಬಾರದಂತಾಗಿತ್ತಲ್ಲಾ. ಬಿಜೆಪಿಗಳು ಆಪರೇಷನ್ ಕಮಲದ ಸೊಲ್ಲೆತ್ತದಂತೆ ಮಾಡಿ, ಕುಮಾರಣ್ಣನ ಮನೆ ಬಾಗಿಲಿಗೆ ಯಾರೂ ಬರದಂತೆ ಮಾಡಿರುವ ಕರ್ನಾಟಕದ ಮತದಾರ ಇಡೀ ದೇಶಕ್ಕೆ ಬಂದು ದಿಕ್ಸೂಚಿಯನ್ನೆ ನೀಡಿದ್ದಾನಲ್ಲಾ. ಯಾವುದೇ ಚುನಾವಣೆಯಲ್ಲಿ ಕೆಲ ಅನಾಹುತಗಳು ನಡೆಯುತ್ತವೆ, ಅಂತಹ ಅನಾಹುತಗಳ ಪೈಕಿ ಶೆಟ್ಟರ್, ರಮೇಶ್‌ಕುಮಾರ್ ಮತ್ತು ಕಿಮ್ಮನೆ ರತ್ನಾಕರ್ ಸೋಲು ಕೂಡ ಸೇರಿವೆ. ಹುಬ್ಬಳ್ಳಿಯಲ್ಲಿ ಬಿಜೆಪಿ ಬೇರೂರುವಂತೆ ಮಾಡಿದ ಶೆಟ್ಟರ್‌ಗೆ ಬಿಜೆಪಿ ಬೇರನ್ನು ಅಲ್ಲಾಡಿಸಲಾಗಲಿಲ್ಲ, ಆದರೂ ಅವರ ಬಂಡಾಯ ಬೇರೆ ತರದ ಕೆಲಸ ಮಾಡಿದೆ. ಇನ್ನು ರಮೇಶ್ ಕುಮಾರ್ ಸೋಲಿಸಲು ಬಹಳ ದಿನಗಳಿಂದ ಕೆಲವರು ಕಾಯುತ್ತಿದ್ದರು. ಇನ್ನು ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಸೋಲೂ ಇಡೀ ಕ್ಷೇತ್ರದ ಸೋಲಾಯಿತಂತಲ್ಲಾ, ಥೂತ್ತೇರಿ.

*****

ಈ ಚುನಾವಣೆಯ ಫಲಿತಾಂಶದಲ್ಲಿ ನಗಾಡುವ ಪ್ರಸಂಗಗಳೂ ನಡೆದಿವೆಯಲ್ಲಾ. ಹಿಂದಿನ ಸರಕಾರನ ಹ್ಯಂಗೋ ನಿಭಾಯಿಸಿ ದಡ ಮುಟ್ಟಿಸಿ ಮನಿಗೋಗನ ಎಂದಿದ್ದ ಮಾಧುಸ್ವಾಮಿಯನ್ನು ಜನ ಮನೆಗೆ ಕಳಿಸಿದ್ದಾರೆ. ಹಾಗೆಯೇ ಮುಸ್ಲಿಮರ ವಿಷಯದಲ್ಲಿ ತೀರ ತಲೆಕೆಡಿಸಿಕೊಂಡಿದ್ದ ಸಿ.ಟಿ ರವಿ, ಸಿದ್ದರಾಮಯ್ಯನವರನ್ನ ಸಿದ್ರಾಮುಲ್ಲಖಾನ್ ಎಂದು ಹೋದಲೆಲ್ಲಾ ಟೀಕಿಸಿ ಚಪ್ಪಾಳೆ ಗಿಟ್ಟಿಸುತ್ತಿದ್ದ. ಆ ಸಮಯದಲ್ಲಿ ಯಾರೋ ಒಬ್ಬ, ಕುಡಿದು ಚಿತ್ತಾಗಿ ರಸ್ತೆ ಬದಿಯಲ್ಲಿ ಅಂಗಾತ ಕುಸಿದಿದ್ದ ವ್ಯಕ್ತಿಯೊಬ್ಬನ ತಲೆಗೆ ಸಿ.ಟಿ ರವಿ ತಲೆ ಅಂಟಿಸಿ ವಾಟ್ಸಾಪಿಗೆ ಬಿಟ್ಟು ಮೆಚ್ಚುಗೆಗಳಿಸಿದ್ದ. ಆ ಸಮಯದಲ್ಲೇ ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತನೊಬ್ಬ ಈಗಲೂ ಸಿ.ಟಿ ರವಿ ಆರು ಸಾವಿರ ಓಟಿನಲ್ಲಿ ಗೆಲ್ಲುತ್ತಾರೆ ಎಂದಿದ್ದ. ಅದೇ ಆರುಸಾವಿರ ವೋಟಿನಲ್ಲಿ ಸಿ.ಟಿ ರವಿ ಸೋತಿದ್ದಕ್ಕೆ ಚಿಕ್ಕಮಗಳೂರಿನ ಕಾರ್ಯಕರ್ತರು ಗೆದ್ದ ಅಭ್ಯರ್ಥಿ ತಮ್ಮಯ್ಯನಿಗೆ ಕ್ಷೀರಾಭಿಷೇಕ ಮಾಡುವುದು ಬಿಟ್ಟು, ಭೊಜೇಗೌಡರಿಗೆ ಹಾಲಿನಾಭಿಷೇಕ ಮಾಡಿದ್ದಾರಲ್ಲಾ. ಏಕೆಂದರೆ ಕುಮಾರಣ್ಣನ ಬಲಗೈಯಾಗಿರುವ ಭೊಜೇಗೌಡರಿಗೆ ಚುನಾವಣೆಯಲ್ಲಿ ಗೆಲ್ಲುವ ಶಕ್ತಿಯಿಲ್ಲ, ಆದರೆ ಯಾರನ್ನಾದರೂ ಸೋಲಿಸುವ ಶಕ್ತಿಯಿದೆ. ಇದನ್ನರಿತ ಚಿಕ್ಕಮಗಳೂರು ಜನ ಭೋಜೇಗೌಡರಿಗೆ ಕ್ಷೀರಾಭಿಷೇಕ ಮಾಡಿದ್ದಾರಲ್ಲಾ, ಥೂತ್ತೇರಿ.

ಇದನ್ನೂ ಓದಿ: ಬಿಜೆಪಿ ಯಂಗೆ ಚೊಕ್ಕ ಮಾಡಿವಿ ನೋಡಿ!

ಚಿಕ್ಕಮಗಳೂರು ಪ್ರದೇಶದಲ್ಲಿ ಕುಡಚಿ ಕ್ಷೇತ್ರದ ಶಾಸಕ ಶಾನೆ ಓಡಾಡುತ್ತಿದ್ದ; ಆತನ ಸುದ್ದಿ ಶಾನೆ ಕುತೂಹಲವಾಗಿದೆ. ಕುಡಚಿ ಕ್ಷೇತ್ರದ ರಾಜಕಾರಣ ಗ್ರಹಿಸಿದ ಆತ ತನ್ನ ಪೊಲೀಸ್ ಕೆಲಸಕ್ಕೆ ರಾಜೀನಾಮೆ ಬರೆದು ಚುನಾವಣೆಗೆ ನಿಂತ ಸೋತ ನಂತರ ರಾಮುಲು ಪಕ್ಷದಿಂದ ಗೆದ್ದು ನಂತರ ಬಿಜೆಪಿ ಸೇರಿದ. ಆಗ ಆತನಿಗೆ ಇನ್ನಿಲ್ಲದ ಉತ್ಸಾಹ ಅಮಲೇರಿ ಲಂಬಾಣಿಗರನ್ನೆಲ್ಲಾ ಸಂಘಟಿಸಿ ಬಿಜೆಪಿಗೆ ಎಳೆಯತೊಡಗಿದ. ಇದನ್ನರಿತ ಸಿ.ಟಿ ರವಿ ಕುಡಚಿ ಶಾಸಕನನ್ನು ಚಿಕ್ಕಮಗಳೂರಿಗೆ ಕರೆಸಿ ಲಂಬಾಣಿಗರ ಭೇಟಿ ಮಾಡಿಸಿದ ಮೇಲೆ ಅವರೆಲ್ಲಾ ಬಿಜೆಪಿಗೆ ಓಟು ಮಾಡುತ್ತಾರೆಂದು ಭಾವಿಸಿದ. ಆದರೆ ಈಗ ಕುಡಚಿ ಶಾಸಕ ರಾಜೀವ್‌ನನ್ನು ಜನ ಮನೆಗೆ ಕಳಿಸಿದ್ದಾರೆ. ಶತಮಾನಗಳಿಂದ ಪಾಂಡ್ಯಾದಲ್ಲಿ ಬದುಕಿದ್ದ ಲಂಬಾಣಿಗರ ತಾಂಡಾಗಳನ್ನು ರೆವಿನ್ಯೂ ಗ್ರಾಮ ಮಾಡಿದ್ದು ಕಾಂಗ್ರೆಸ್ ಸರಕಾರ. ಆದರೆ ಎಲ್ಲಾ ದಮನಿತ ಜಾತಿಗಳ ಬಗ್ಗೆಯೂ ಹುಸಿಯಾದ ಕಾಳಜಿ ತೋರಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಬಿಜೆಪಿ ಪಡಸಾಲೆಯಲ್ಲಿ ಮಫ್ತಿ ಪೊಲೀಸನಂತೆ ಓಡಾಡುತ್ತಿದ್ದ ರಾಜೀವನನ್ನು ಜನ ಆತನ ಊರಿಗೆ ಕಳಿಸಿದ್ದಾರೆ. ಏಕೆಂದರೆ ಈತ ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಂಡಿದ್ದು ಸುದ್ದಿಯಾಗಿತ್ತು. ಈತ ಇಷ್ಟು ಬೇಗೆ ಹಾಳಾಗಬಾರದಿತ್ತು ಎಂಬುದು ಕುಡಚಿ ಜನರ ಕುಹಕವಾಗಿದೆಯಲ್ಲಾ, ಥೂತ್ತೇರಿ.

*****

ಈ ನಡುವೆ ಹರಪ್ಪನಹಳ್ಳಿ ಜನ ಎಂ.ಪಿ ಪ್ರಕಾಶ್ ಮಗಳಾದ ಲತಾರನ್ನು ಗೆಲ್ಲಿಸಿ ಪ್ರಾಯಶ್ಚಿತ್ತ ಮಾಡಿಕೊಂಡಿದ್ದಾರೆ. ಹಿಂದೆ ಹರಪ್ಪನಹಳ್ಳಿ ಜನ ಎಂ.ಪಿ ಪ್ರಕಾಶರನ್ನು ಸೋಲಿಸಿದ್ದರು ಅವರ ಮಗ ಎಂ.ಪಿ ರವಿಯನ್ನು ಸೋಲಿಸಿದ್ದರು. ಆಸ್ಪತ್ರೆಯಲ್ಲಿದ್ದರೂ ಹರಪ್ಪನಹಳ್ಳಿಯನ್ನು 371(ಜೆ)ಗೆ ಸೇರಿಸಲು ಹೋರಾಡಿ ಕೊನೆಯುಸಿರೆಳೆದ ರವಿಯ ಬಗ್ಗೆ ಹರಪ್ಪನಹಳ್ಳಿ ಜನಕ್ಕೆ ಏನನ್ನಿಸಿತೋ ಏನೋ ಕಾಂಗ್ರೆಸ್ ಟಿಕೆಟ್ ಸಿಗದೆ ಪಕ್ಷೇತರವಾಗಿ ನಿಂತ ಲತಾರನ್ನ ಗೆಲ್ಲಿಸಿದ್ದಾರೆ. ಹರಪ್ಪನಹಳ್ಳಿ ಸೊಸೆಯಾದ ಲತಾರಲ್ಲಿ ಪ್ರಕಾಶರ ಗುಣಗಳಿವೆ, ಆದ್ದರಿಂದಲೇ ಗೆದ್ದು ಬಂದಿರುವುದು. ಇನ್ನು ಮಡಿಕೇರಿ ವಿರಾಜಪೇಟೆಯ ಜನ ತಕ್ಕ ಉತ್ತರ ಕೊಟ್ಟಿದ್ದಾರೆ. ಈ ನೆಲದಿಂದ ಬಂದ ಅಡ್ಡಂಡ ಹೆಸರಿನ ವ್ಯಕ್ತಿಯೊಬ್ಬ ಆಘಾತಗೊಂಡು ರಾಜೀನಾಮೆ ಬರೆದಿದ್ದಾನೆ. ಮೈಸೂರು ರಂಗಾಯಣದ ಪಾವಿತ್ರ್ಯ ಕಾಪಾಡುವುದು ಕಲಾವಿದರ ಕರ್ತವ್ಯ. ಐದು ವರ್ಷಗಳ ನಂತರ ಮುಸ್ಲಿಂ ರಾಜಕಾರಣಿಗಳು ವಿಧಾನಸೌಧದ ಕಾರಿಡಾರ್‌ನಲ್ಲಿ ಕಾಣುತ್ತಿದ್ದಾರೆ. ಎಲ್ಲರನ್ನೂ ಒಳಗೊಂಡು ಬೆಳೆಸಬೇಕಾದ ಪ್ರಜಾಪ್ರಭುತ್ವದ ಮಹಾವೃಕ್ಷದಲ್ಲಿ ಮುಸ್ಲಿಮರು ಬಾರದಂತೆ ನೋಡಿಕೊಂಡ ಬಿಜೆಪಿಗಳು ಇತಿಹಾಸದಲ್ಲಿ ಅಕ್ಷಮ್ಯ ಅಪರಾಧವೆಸಗಿದ್ದಾರೆ. ಈ ಬಿಜೆಪಿಗಳ ಮನಸ್ಸಿನಾಳದಲ್ಲಿ ದಲಿತರ ದ್ವೇಷವೂ ಇದೆ. ಆದರೆ ಸದ್ಯಕ್ಕೆ ಅದನ್ನ ತೋಗೊಡುವುದಿಲ್ಲ. ಈಗ ಹಠಾತ್ತನೆ ಕಲೆ, ಸಾಹಿತ್ಯ, ಸಂಗೀತ ಪುಸ್ತಕಗಳೆಲ್ಲಾ ಅರ್ಥಪೂರ್ಣವಾಗಿ ಕಾಣತೊಡಗಿವೆಯಲ್ಲಾ, ಈ ಯಕ್ಷಣಿಗೆ ವಿಸ್ಮಯವಾಗುತ್ತಿದೆಯಲ್ಲಾ, ಥೂತ್ತೇರಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಕ್ಷೌರ ಮಾಡಲು ತಡವಾಗಿ ಬಂದ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿದ ಪೊಲೀಸ್‌ ಅಧಿಕಾರಿ

0
ಕ್ಷೌರಕ್ಕಾಗಿ ಮನೆಗೆ ಕ್ಷೌರಿಕ ತಡವಾಗಿ ಬಂದ ಎಂದು ಪೊಲೀಸ್‌ ಅಧಿಕಾರಿಯೋರ್ವ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿರುವ ಅಮಾನವೀಯ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಬುದೌನ್‌ನ ಪೊಲೀಸ್ ಠಾಣೆಯೊಂದರಲ್ಲಿ ನಡೆದಿದೆ. ಸರ್ಕಲ್ ಆಫೀಸರ್(ಸಿಒ) ಸುನೀಲ್ ಕುಮಾರ್...