Homeಕರ್ನಾಟಕ'ಜಾಗೃತ ಕರ್ನಾಟಕ' ದುಂಡುಮೇಜಿನ ಸಭೆ; ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಶಾಶ್ವತ ಮುಂದೂಡಿಕೆಗೆ ಒಕ್ಕೊರಲ ಆಗ್ರಹ

‘ಜಾಗೃತ ಕರ್ನಾಟಕ’ ದುಂಡುಮೇಜಿನ ಸಭೆ; ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಶಾಶ್ವತ ಮುಂದೂಡಿಕೆಗೆ ಒಕ್ಕೊರಲ ಆಗ್ರಹ

- Advertisement -
- Advertisement -

‘ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲಿದೆ; ಸಂವಿಧಾನ ಬದಲಾಯಿಸುವ ಬಗ್ಗೆ ಹುನ್ನಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಹಿಂದಿ ಭಾಷಿಕ ರಾಜ್ಯಗಳಲ್ಲಿ ತನ್ನ ಸ್ಥಾನ ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಆದ್ದರಿಂದ, ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯನ್ನೇ ಶಾಶ್ವತವಾಗಿ ಮುಂದೂಡಬೇಕು’ ಎಂದು ಹಲವು ಸಂಘಟನೆಗಳ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದರು.

ಬೆಂಗಳೂರಿನ ಗಾಂಧಿ ಭವನದಲ್ಲಿ ‘ಜಾಗೃತ ಕರ್ನಾಟಕ’ ಸಂಘಟನೆ ಏರ್ಪಡಿಸಿದ್ದ ದುಂಡು ಮೇಜಿನ ಸಭೆಯಲ್ಲಿ ರಾಜ್ಯದ ಹಲವು ಸಂಘಟನೆಗಳ ಮುಖಂಡರು, ಚಿಂತಕರು, ವಕೀಲರು ಹಾಗೂ ಕಾನೂನು ತಜ್ಞರು ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಜಾಗೃತ ಕರ್ನಾಟಕ ಸಂಘಟನೆಯ ಬಿ.ಸಿ. ಬಸವರಾಜು ಮಾತನಾಡಿ, “ಈಗಿರುವ 543 ಲೋಕಸಭಾ ಸೀಟುಗಳಲ್ಲಿ ದಕ್ಷಿಣ ಭಾರತದ ಪಾಲು ಶೇ.24ರಷ್ಟಿದೆ. ಕ್ಷೇತ್ರ ಮರುವಿಂಗಡಣೆಯಾದರೆ ಲೋಕಸಭೆಯಲ್ಲಿ ದಕ್ಷಿಣ ರಾಜ್ಯಗಳ ಪಾಲು ಶೇ.19 ಕ್ಕೆ ಇಳಿಕೆ ಆಗುತ್ತವೆ. ‘ಡಿಲಿಮಿಟೇಷನ್‌ನಿಂದ ದಕ್ಷಿಣ ರಾಜ್ಯಗಳಿಗೆ ಒಂದೇಒಂದು ಸೀಟು ಕಡಿಮೆಯಾಗುವುದಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳುತ್ತಿದ್ದಾರೆ. ಆದರೆ, ಉತ್ತರ ಭಾರತದ ರಾಜ್ಯಗಳ ಲೋಕಸಭಾ ಸ್ಥಾನಗಳು ಹೆಚ್ಚಾಗುವ ಬಗ್ಗೆ ಅವರು ಮಾತನಾಡುತ್ತಿಲ್ಲ” ಎಂದರು.

“ಶೇ.24 ರಷ್ಟು ಸಂಸದರಿದ್ದರೂ ದಕ್ಷಿಣದ ರಾಜ್ಯಗಳಿಗೆ ನ್ಯಾಯಯುತ ತೆರಿಗೆ ಪಾಲು ಸಿಗುತ್ತಿಲ್ಲ; ಬರ ಪರಿಹಾರ ಪಡೆಯಲು ಸುಪ್ರೀಂ ಕೋರ್ಟಿಗೆ ಹೋಗಬೇಕಾಯಿತು. ಈಗಲೇ ಪರಿಸ್ಥಿತಿ ಹೀಗಿದೆ; ಇನ್ನು ಕ್ಷೇತ್ರ ಮರುವಿಂಗಡಣೆಯಿಂದ ನಮ್ಮ ಪ್ರಾತಿನಿಧ್ಯ ಕಡಿಮೆಯಾದರೆದ ನಮ್ಮ ಮುಂದಿನ ಪರಿಸ್ಥಿತಿ ಏನಾಗಬಹುದು ಊಹಿಸಿ. ನಮ್ಮ ತೆರಿಗೆ ಪಾಲು ಬಿಡಿ, 15 ನೇ ಹಣಕಾಸು ಆಯೋಗದ ನಿರ್ಧಾರದಂತೆ ನಮ್ಮ ರಾಜ್ಯಕ್ಕೆ ಕೊಡಬೇಕಾದ ಅನುದಾನವನ್ನೂ ಕೇಂದ್ರ ಸರ್ಕಾರ ಕೊಟ್ಟಿಲ್ಲ. ಈ ಎಲ್ಲ ಅಪಾಯಗಳನ್ನು ನಾವು ಆರ್ಥ ಮಾಡಿಕೊಳ್ಳಬೇಕು; ಈವರೆಗಿನ ಎಲ್ಲ ಅಪಾಯಗಳ ತಾಯಿಯೇ ಈ ಕ್ಷೇತ್ರ ಮರುವಿಂಗಡಣೆ” ಎಂದು ವಿವರಿಸಿದರು.

“ಕ್ಷೇತ್ರ ಮರುವಿಗಂಡಣೆ ಮಾಡಿದ ಬಳಿಕ ತೆರಿಗೆ ಹಾಗೂ ಸೆಸ್‌ನಲ್ಲಿ ಸಮಾನ ಪಾಲು ಹಂಚಿಕೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಭರವಸೆ ನೀಡಬಹುದು. ಒಕ್ಕೂಟ ಸರ್ಕಾರದಲ್ಲಿ ರಾಜ್ಯಕ್ಕೆ ಹೆಚ್ಚಿನ ಅಧಿಕಾರ ನೀಡಿದ ಬಳಿಕವೂ, ನೇರವಾಗಿ ದುಷ್ಪರಿಣಾಮ ಬೀರುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿಯೇ ತೀರುತ್ತದೆ. ಲೋಕಸಭಾ ಸಂಸದರು ಹೆಚ್ಚಿಗೆ ಇಲ್ಲ ಎಂಬ ಕಾರಣಕ್ಕೆ ಕರ್ನಾಟಕಕ್ಕೆ ಬರಬೇಕಿರುವ ಒಳ್ಳೆಯ ಕೈಗಾರಿಕೆಯೊಂದನ್ನು ಹಿಂದಿ ರಾಜ್ಯಕ್ಕೆ ನೀಡಬಹುದು. ಈ ಎಲ್ಲ ಸಂಭವನೀಯ ಅಪಾಯ ಗೊತ್ತಿದ್ದೂ ಸುಮ್ಮನಿದ್ದರೆ, ಮುಂದಿನ ಅಪಾಯಕ್ಕೆ ನಾವೆಲ್ಲರೂ ಹೊಣೆಯಾಗುತ್ತೇವೆ” ಎಂದು ಹೇಳಿದರು.

ಹಿರಿಯ ರಾಜಕಾರಣಿ ರಮೇಶ್ ಬೆಲ್ಲಂಕೊಂಡ ಮಾತನಾಡಿ, “ಕ್ಷೇತ್ರ ಮರುವಿಂಗಡಣೆ ಬಳಿಕ ಕೇಂದ್ರ ಸರ್ಕಾರ ತಾನು ನೀಡಿದ ಭರವಸೆಗಳನ್ನು ಈಡೇರಿಸದೇ ಇರಬಹುದು; ದಕ್ಷಿಣ ಭಾರತದ ಪಾಲಿಗೆ ಇದು ಬಹಳ ಆತಂಕಕಾರಿ ನಿರ್ಧಾರ. ಒಕ್ಕೂಟ ಸರ್ಕಾರದ ಆಡಳಿತ ಸಂಪೂರ್ಣ ವಿಕೇಂದ್ರೀಕರಣ ಆಗಬೇಕು. ಎಲ್ಲ ಪಕ್ಷಗಳಲ್ಲಿ ಹೈಕಮಾಂಡ್ ಸಂಸ್ಕೃತಿ ಹೋಗಬೇಕು; ಹಿಂದಿ ಕೇಂದ್ರಿತ ರಾಜಕೀಯವನ್ನು ಕೊನೆಗಾಣಿಸಬೇಕು” ಎಂದು ಹೇಳಿದರು.

ರಾಜ್ಯಗಳ ಸ್ವಾತಂತ್ರ್ಯದ ಬಗ್ಗೆ ಗಟ್ಟಿಧ್ವನಿಯಲ್ಲಿ ಮಾತನಾಡಬೇಕು

ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸ್ವಾತಂತ್ರ್ಯದ ಬಗ್ಗೆ ನಾವು ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕು ಎಂದು ಹೋರಾಟಗಾರ ನಾಗೇಶ್ ಅರಳಕುಪ್ಪೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

“ನಾವು ಒಕ್ಕೂಟ ವ್ಯವಸ್ಥೆಯನ್ನು ಪ್ರತಿಪಾಡಿಸಬೇಕು. ಜೊತೆಗೆ, ರಾಜ್ಯಗಳ ಸ್ವಾತಂತ್ರ್ಯದ ಬಗ್ಗೆ ಮಾತನಾಡಬೇಕು. ಈ ಬಗ್ಗೆ ತಮಿಳುನಾಡು ಸಂಸದರು ಹಾಗೂ ಸರ್ಕಾರ ಮಾತನಾಡುತ್ತಿದೆ; ನಾವು ಅವರಿಗೆ ಬೆಂಬಲ ನೀಡಬೇಕು” ಎಂದರು.

“ಬಿಜೆಪಿಯ ಕೋಮುವಾದ ಹಾಗೂ ಬಂಡವಾಳಶಾಹಿ ಕಡೆಗೆ ದೇಶ ಸಾಗುತ್ತಿದ್ದು, ಈ ಬಗ್ಗೆಯೂ ನಾವು ಎಚ್ಚರದಿಂದ ಇರಬೇಕು. ತನಿಳುನಾಡು ನೀಟ್ ವಿರೋಧಿಸಿದೆ, ಕರ್ನಾಟಕವೂ ಈ ಬಗ್ಗೆ ಮಾತನಾಡಬೇಕು. ತ್ರಿಭಾಷಾ ವಿವಾದದ ಬಗ್ಗೆ ನಾವು ನಮ್ಮ ಹೋರಾಟದಲ್ಲಿ ಒತ್ತು ನೀಡಬೇಕು; ಇದು ಬಹಳ ಮುಖ್ಯವಾಗುತ್ತದೆ” ಎಂದರು.

ಜನಸಂಖ್ಯೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ಮರುವಿಂಗಡಣೆ ಮಾಡಬೇಕಾಗಿಲ್ಲ

“ಜನಸಂಖ್ಯೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ಕ್ಷೇತ್ರ ಮರುವಿಂಗಡಣೆ ಮಾಡಬೇಕಾಗಿಲ್ಲ; ಈ ಬಗ್ಗೆ ಕೇಂದ್ರ ಸರ್ಕಾರ ನೀಡುತ್ತಿರುವ ಕಾರಣ ಸೂಕ್ತವಾಗಿಲ್ಲ” ಎಂದು ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿ ಡಾ.ಸುನಿಲ್ ಪ್ರತಿಪಾದಿಸಿದರು.

ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಅವರು, “ಯಾವುದೇ ಕಾರಣಕ್ಕೂ ಕ್ಷೇತ್ರ ಮರುವಿಂಗಡಣೆ ಮಾಡಬೇಕಾಗಿಲ್ಲ. ಮುಂದಿನ 25 ವರ್ಷ ಮರುವಿಂಗಡಣೆ ಮಾಡಬಾರದ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ, ಶಾಶ್ವತವಾಗಿ ಇದನ್ನು ಇಷ್ಟಕ್ಕೇ ನಿಲ್ಲಿಸಬೇಕು” ಎಂದರು.

“ಕ್ಷೇತ್ರ ಮರುವಿಂಗಡಣೆಗೆ ಜನಸಂಖ್ಯೆ ಹೆಚ್ಚಳ ಮಾತ್ರ ಮಾನದಂಡವಲ್ಲ; ತೆರಿಗೆ ಸಂಗ್ರಹ ಹಾಗೂ ಒಟ್ಟಾರೆ ರಾಜ್ಯಗಳ ಅಭಿವೃದ್ಧಿಯೂ ಮಾನದಂಡವಾಗಬೇಕು. ಜನಸಂಖ್ಯೆ ಜಾಸ್ತಿ ಆಗಿರುವುದಕ್ಕಾಗಿ ಮರುವಿಂಗಡಣೆ ಮಾಡುತ್ತೇವೆ ಎನ್ನುವುದು ಸರಿಯಲ್ಲ. ಕೇಂದ್ರ ಸರ್ಕಾರ ನೀಡುತ್ತಿರುವ ಕಾರಣ ಸೂಕ್ತವಾಗಿಲ್ಲ” ಎಂದರು.

“848 ಸೀಟು ಹೆಚ್ಚಳ ಮಾಡುವುದಕ್ಕೆ ದೇಶದಲ್ಲಿ ಇನ್ನೂ ಜನಗಣತಿ ಆಗಿಲ್ಲ. ಆದರೆ, ಕೇಂದ್ರ ಸರ್ಕಾರ ಅದಕ್ಕಾಗಿ ಒಂದು ಸಮೀಕ್ಷೆ ಮಾಡಿದೆ. ಅದರ ಆಧಾರದಲ್ಲಿ ಸೀಟು ಹೆಚ್ಚಳ ಮಾಡಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಚುರುಕಾಗಿ ಕೆಲಸ ಮಾಡುತ್ತಿದೆ; ಲೋಕಸಭಾ ಸೀಟುಗಳ ಹೆಚ್ಚಳಕ್ಕೆ ಅವರು ಈಗಾಗಲೇ ಸೂಕ್ತ ತಯಾರಿ ಮಾಡಿಕೊಂಡಿದ್ದು, ಅದಕ್ಕಾಗಿಯೇ ದೊಡ್ಡ ಪಾರ್ಲಿಮೆಂಟ್ ಭವನ ಕಟ್ಟಿದ್ದಾರೆ. ಇದರಿಂದ ದಕ್ಷಿಣ ಭಾರತಕ್ಕೆ ಅನ್ಯಾಯ ಆಗೇ ಆಗುತ್ತದೆ. ಒಕ್ಕೂಟ ಸರ್ಕಾರದಲ್ಲಿ ದಕ್ಷಿಣ ಭಾರತದ ರಾಜ್ಯಗಳನ್ನು ನಾವು ಎರಡನೇ ದರ್ಜೆ ಪ್ರಜೆಗಳು ಎಂದುಕೊಂಡಿದ್ದೇವೆ. ಆದರೆ, ನಾವೀಗಾಗಲೇ ಮೂರನೇ ದರ್ಜೆ ಪ್ರಜೆಗಳಾಗಿದ್ದು, 4ನೇ ದರ್ಜೆಗೆ ಹೋಗುತ್ತೇವೆ” ಎಂದು ಆತಂಕ ವ್ಯಕ್ತಪಡಿಸಿದರು.

“ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಮಾತ್ರವಲ್ಲ, ಹಲವು ಸಣ್ಣಸಣ್ಣ ಜಾತಿಗಳಿಗೆ ನೇರ ಅನ್ಯಾಯ ಆಗುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿಗೆ ಅನುಕೂಲ ಆಗುವಂತೆ ಕ್ಷೇತ್ರ ಮರುವಿಂಗಡಣೆ ಮಾಡುತ್ತಾರೆ. ನಂತರ, ಸಂವಿಧಾನ ತಿದ್ದುಪಡಿ ಮಾಡುತ್ತಾರೆ. ಆದ್ದರಿಂದ, ಈ ಪ್ರಕ್ರಿಯೆಯನ್ನು ಶಾಶ್ವತವಾಗಿ ಮುಂದೂಡಬೇಕು” ಎಂದು ಆಗ್ರಹಿಸಿದರು.

300 ಜನ ಸಂಸದರನ್ನು ಹೆಚ್ಚಿಸಿ ಸಾಧಿಸುವುದೇನೂ ಇಲ್ಲ: ನಗರಗೆರೆ ರಮೇಶ್

“ಈಗಿನ ಲೆಕ್ಕಾಚಾರದ ಪ್ರಾಕಾರ, ಕ್ಷೇತ್ರ ಮರುವಿಂಗಡಣೆಯಾದರೆ 300 ಕ್ಕೂ ಹೆಚ್ಚು ನೂತನ ಸದಸ್ಯರು ಸಂಸತ್ ಪ್ರವೇಶ ಮಾಡುತ್ತಾರೆ. ಯಾವ ಜನಪ್ರತಿನಿಧಿ ಜನರ ಜೊತೆ ನಿಕಟ ಸಂಪರ್ಕದಲ್ಲಿ ಇರುತ್ತಾರೆ ಎಂಬುದು ಮುಖ್ಯ. ಶಾಸಕರು, ಜಿಲ್ಲಾ-ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಜನರ ಜೊತೆಗೆ ನೇರ ಸಂಪರ್ಕದಲ್ಲಿ ಇರುತ್ತಾರೆ. ಲೋಕಸಭಾ ಸದಸ್ಯರು ಕೇಂದ್ರದಲ್ಲಿ ಶಾಸನಗಳನ್ನು ರಚಿಸುವುದಕ್ಕೆ ಮಾತ್ರ ಸೀಮಿತರಾಗಿದ್ದಾರೆ. ಆದ್ದರಿಂದ, 300 ಜನ ಸಂಸದರರನ್ನು ಹೆಚ್ಚಿಸಿ ಸಾಧಿಸುವುದು ಏನು ಇಲ್ಲ” ಎಂದು ಪ್ರಗತಿಪರ ಚಿಂತಕ ನಗರಗೆರೆ ರಮೇಶ್ ಹೇಳಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಹೊಸ ಸಂಸದರಿಗೆ ಹೆಚ್ಚಿನ ವೇತನ ಹಾಗೂ ಸೌಲಭ್ಯ ನೀಡುವುದರಿಂದ ದೇಶಕ್ಕೆ ಆರ್ಥಿಕ ಹೊರೆಯಾಗುತ್ತದೆ. ಇದರಿಂದ ಜನರ ತೆರಿಗೆ ಹಣ ಪೋಲಾಗುತ್ತದೆ. ಕ್ಷೇತ್ರ ಮರು ವಿಂಗಡಣೆಯಿಂದ ಜನರಿಗೆ ಯಾವುದೇ ಪ್ರಯೋಜನ ಇಲ್ಲ. ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆ ಮಾಡುವುದು ಸರಿಯಲ್ಲ” ಎಂದರು.

ಮಾಜಿ ಪೊಲೀಸ್ ಅಧಿಕಾರಿ ಸುಹೇಲ್ ಅಹಮದ್ ಮಾತನಾಡಿ, “ದೇಶದ ಈಗಿನ ಜನಸಂಖ್ಯೆ ಅಂದಾಜು 140 ಕೋಟಿ, ಈ ಜನಸಂಖ್ಯೆ 280 ಕೋಟಿ ಆದರೂ ಅವರಿಗೆಲ್ಲಾ ಒಬ್ಬರೇ ಪ್ರಧಾನಿ ಇರುತ್ತಾರೆ. ಉತ್ತರ ಪ್ರದೇಶದ 20 ಕೋಟಿ ಜನಸಂಖ್ಯೆಗೆ ಒಬ್ಬರೇ ಸಿಎಂ ಇದ್ದಾರೆ. ಒಂದು ಕೋಟಿಗಿಂತ ಕಡಿಮೆ ಜನಸಂಖ್ಯೆ ಇರುವ ಗೋವಾ ಜನರಿಗೆ ಕೂಡಾ ಒಬ್ಬರೇ ಮುಖ್ಯಮಂತ್ರಿ ಇದ್ದಾರೆ. 20 ಕೋಟಿ ಜನಸಂಖ್ಯೆಯನ್ನು ನಿಭಾಯಿಸುವ ಶಕ್ತಿ ಯುಪಿ ಸಿಎಂಗೆ ಇದೆ. ಆದ್ದರಿಂದ, ಯಾವುದೇ ಕಾರಣಕ್ಕೂ ಲೋಸಕಭಾ ಕ್ಷೇತ್ರಗಳ ಮರುವಿಂಗಡಣೆ ಬೇಡ” ಎಂದರು.

“ಒಕ್ಕೂಟ ವ್ಯವಸ್ಥೆಯನ್ನು ನಾವು ಜೀವಂತ ಇಡಬೇಕೆಂದರೆ, ಯಾವುದೇ ಕಾರಣಕ್ಕೂ ಕ್ಷೇತ್ರ ಮರುವಿಂಗಡಣೆ ಮಾಡಬಾರದು. ಲೋಕಸಭಾ ಸದಸ್ಯರ ಸಂಖ್ಯೆ ಹೆಚ್ಚಾದರೆ ದಕ್ಷಿಣ ರಾಜ್ಯಗಳ ಪರಿಸ್ಥಿತಿ ಭೀಕರವಾಗಲಿದೆ. ಸ್ಥಳೀಯಸಂಸ್ಥೆ ಜನಪ್ರತಿನಿಧಿಗಳು ಜನರ ಸಮಸ್ಯೆ ಆಲಿಸುತ್ತಾರೆ. ಪಾರ್ಲಿಮೆಂಟ್ ಸದಸ್ಯರು ಸಂವಿಧಾನ ಕಾಪಾಡುವ ಕೆಲಸ ಮಾಡಲಿ” ಎಂದು ಅವರು ಸಲಹೆ ನೀಡಿದರು.

ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಮುಂದೂಡುವುದಲ್ಲ; ರದ್ದಾಗಬೇಕು: ಡಾ.ವಾಸು

‘ಲೋಕಸಭೆ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಮುಂದೂಡಬೇಕು ಎಂಬುದು ನಮ್ಮ ಅಂತಿಮ ವಾದವಲ್ಲ. ಇಡೀ ಪ್ರಕ್ರಿಯೆ ರದ್ದಾಗಬೇಕು. ಏಕೆಂದರೆ, 25 ವರ್ಷ ಕಳೆದ ಬಳಿಕವೂ ಈ ದೇಶ ಒಕ್ಕೂಟ ವ್ಯವಸ್ಥೆಯೇ ಆಗಿರುತ್ತದೆ’ ಎಂದು ‘ಜಾಗೃತ ಕರ್ನಾಟಕ’ ಡಾ.ವಾಸು ಹೇಳಿದರು.

ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಅವರು, “ಕ್ಷೇತ್ರ ಮರುವಿಂಗಡಣೆ ಸಮರ್ಥನೆಗೆ ‘ಒಂದು ಮತ-ಒಂದು ಮೌಲ್ಯ’ವನ್ನ ಅರ್ಥ ಮಾಡ್ಕೊಳ್ತಿರುವ ರೀತಿಯೇ ತಪ್ಪಿದೆ. ಒಂದು ಮತ-ಒಂದು ಮೌಲ್ಯ ವಿಚಾರ ಬಂದಿರೋದು ಯಾಕೆ ಎಂದರೆ, ಶ್ರೀಮಂತರಿಗೆ ಜಾಸ್ತಿ, ಬಡವರಿಗೆ ಕಡಿಮೆ ಮೌಲ್ಯವಲ್ಲ. ಪ್ರಜಾಪ್ರಭುತ್ವದಲ್ಲಿ ಬಡವರು, ಶ್ರೀಮಂತರ ಮತಕ್ಕೆ ಒಂದೇ ಮೌಲ್ಯ ಇರಬೇಕು ಎನ್ನುವ ಕಾರಣಕ್ಕೆ. ಒಕ್ಕೂಟ ವ್ಯವಸ್ಥೆ ಒಳಗಡೆ ಒಂದೊಂದು ರಾಜ್ಯ ತನಗೆ ಬೇಕಾದ ರೀತಿಯಲ್ಲಿ ವಿಧಾನಸಭಾ ಕ್ಷೇತ್ರಗಳನ್ನು ಪುನರ್ ವಿಂಗಡನೆ ಮಾಡಿಕೊಳ್ಳುವುದಕ್ಕೆ ಈ ಒಂದು ಮತ-ಒಂದು ಮೌಲ್ಯವನ್ನ ಪರಿಗಣಿಸಬೇಕು. ನಾವು ಭಾರತವನ್ನು ಒಕ್ಕೂಟ ಎಂದು ಕರೆದುಕೊಂಡಾಗ, ಅದರ ಮೂಲ ಉದ್ದೇಶವನ್ನು ನ ಬದಲಾಯಿಸೋ ರೀತಿಯಲ್ಲಿ ಇರಬಾರದು” ಎಂದರು.

“ಉತ್ತರ ಪ್ರದೇಶದವರು ಜನಸಂಖ್ಯೆ ನಿಯಂತ್ರಣ ಮಾಡಲಿಲ್ಲ, ಹಾಗಾಗಿ ಅವರು ಅನುಭವಿಸಲಿ ಎಂದು ಹೇಳುವುದು ಸರಿಯಲ್ಲ. ವಿರೋಧಿಸೋದಕ್ಕೂ ಕೂಡಾ ಈ ವಾದ ಮಾಡುವುದು ತಪ್ಪು. ಏಕೆಂದರೆ, ನಮ್ಮಲ್ಲಿ ಮುಸ್ಲಿಂ ಮತ್ತು ದಲಿತ ಸಮುದಾಯ 1951ರಿಂದ 2011ವರೆಗೆ ಇರುವ ಸೆನ್ಸಸ್ ನೋಡಿದ್ರೆ, ಈ ಎರಡು ಸಮುದಾಯಗಳ ಜನಸಂಖ್ಯೆ ಜಾಸ್ತಿ ಆಗಿದೆ. ಅಂದ್ರೆ, ಬೇರೆ ಕಮ್ಯುನಿಟಿಗಿಂತ ಅವರ ಜನಸಂಖ್ಯೆ ಜಾಸ್ತಿ ಇದೆ. ಏಕೆಂದರೆ, ಬಡವರಿಗೆ ಮಕ್ಕಳು ಜಾಸ್ತಿ, ಇದೇ ವಾಸ್ತವ. ಸ್ಥಿತಿವಂತಿಕೆ ಮತ್ತು ಸಾಕ್ಷರತೆ ಜಾಸ್ತಿ ಆಗುತ್ತೆ ಆಗ ಮಕ್ಕಳನ್ನು ಪಡೆಯುವ ಸಂಖ್ಯೆ ಕಡಿಮೆ ಆಗುತ್ತೆ. ಉತ್ತರ ಪ್ರದೇಶದ ವಿರುದ್ಧ ಏನು ವಾದ ಬಳಸ್ತಿದ್ದೀವಿ; ಈ ವಾದ ತಪ್ಪು. ನೀವು ಜಾಸ್ತಿ ಮಕ್ಕಳನ್ನ ಮಾಡಿಕೊಂಡಿದ್ದೀರ ಎಂದು ದೂರಿದರೆ, ನಾವು ಕೂಡಾ ಬಡವರ ವಿರುದ್ಧ ಮಾತನಾಡಿದ ಹಾಗೆ ಆಗುತ್ತೆ. ಇದು ದಲಿತ ಸಮುದಾಯದ ವಿರುದ್ಧ, ಮುಸ್ಲಿಂ ಸಮುದಾಯದ ವಿರುದ್ಧ ಆಗುತ್ತೆ; ಈ ವಾದ ಮಾಡಬಾರದು. ಬದಲಿಗೆ ಒಕ್ಕೂಟದ ತತ್ವ ಏನಿದೆ, ನೀವು ಲಡಾಕ್ ಗೆ ಅಥವಾ ಪಾಂಡಿಚೆರಿಗೆ, ಅಥವಾ ಅಂಡೋಮಾನ್ ನಿಕೋಬಾರ್ ಐವತ್ತು ಸಾವಿರ ಜನಕ್ಕೂ ಒಂದು ಲೋಕಸಭಾ ಕ್ಷೇತ್ರ ಕೊಡ್ತೀವಿ ಅನ್ನೋದರ ಹಿಂದೆ ಒಂದು ಒಕ್ಕೂಟದ ತತ್ವ ಇದೆ. ಏಕೆಂದರೆ, ಅದು ಪ್ರಾತಿನಿಧ್ಯಕ್ಕಾಗಿ ಬೇಕು. ನಾವೀಗ 1951ಗೆ ವಾಪಸ್ ಹೋಗೋದು ಬೇಡ 1971ಗೆ ಫ್ರೀಜ್ ಆಗ್ಬೇಕು. ಎಲ್ಲ ಲೋಕಸಭಾ ಕ್ಷೇತ್ರಗಳ ಮರುವಿಂಗಡನೆ ಈಗ ಫ್ರೀಜ್ ಆಗ್ಬೇಕು” ಎಂದರು.

ಕ್ಷೇತ್ರ ಮರುವಿಂಗಡಣೆ ಮುಂದೂಡಬಾರದುಲ ಇಡೀ ಪ್ರಕ್ರಿಯೆಯನ್ನೇ ರದ್ದು ಮಾಡಬೇಕು. ಏಕೆಂದರೆ, 25 ವರ್ಷ ಹೋದ್ಮೇಲೂ ಈ ದೇಶ ಒಕ್ಕೂಟ ವ್ಯವಸ್ಥೆಯೇ ಆಗಿರುತ್ತದೆ. ಕೇಂದ್ರದ ಪಟ್ಟಿಗೆ 545 ಜನ ಯಾಕೆ ಬೇಕು? ಅವರೆಲ್ಲಾ ಮುನ್ಸಿಪಾಲಿಟಿ ಪ್ರತಿನಿಧಿಗಳಲ್ಲ. ಅವರೆಲ್ಲಾ ದಿನಾ ದಿನ ಹೋಗಿ ರಸ್ತೆ ಹೇಗಿದೆ, ಚರಂಡಿ ಸ್ಥಿತಿ ಏನು ಎಂದು ನೋಡಬೇಕಿರಲ್ಲ. ಸಂಸದರೆಲ್ಲಾ ಕೇಂದ್ರ ಪಟ್ಟಿಯಲ್ಲಿರುವ ವಿಚಾರಗಳ ಬಗ್ಗೆ ಶಾಸನ ಮಾಡೋದಕ್ಕೆ ಮಾತ್ರ ಸೀಮಿತ. ಕೇಂದ್ರ ಪಟ್ಟಿಯಲ್ಲಿರೋ ಸಂಗತಿಗಳನ್ನ ಕಡಿಮೆ ಮಾಡಬೇಕು; ಅಷ್ಟೊಂದು ಯಾಕಿವೆ ಅದರೊಳಗಡೆ. ಶಿಕ್ಷಣಕ್ಕೆ ಕೇಂದ್ರ ಸರ್ಕಾರ ದುಡ್ಡನ್ನು ಯಾಕೆ ಕೊಡಬೇಕು? ಕೇಂದ್ರ ಅದನ್ನೆಲ್ಲಾ ಬಿಟ್ಟುಬಿಟ್ಟರೆ ರಾಜ್ಯ ಸರ್ಕಾರಗಳು ನಿರ್ವಹಿಸುತ್ತವೆ. ನಮ್ಮ ಸಂವಿಧಾನದಲ್ಲಿ ಒಂದಷ್ಟು ಕೇಂದ್ರೀಕರಣ ಇದೆ. ಏಕೆಂದರೆ, ಕೇಂದ್ರದ ಬಳಿ ಅಧಿಕಾರ ಇಲ್ಲವಾದರೆ ದೇಶ ಛಿದ್ರ ಆಗಿಬಿಡುತ್ತೆ. ಹಾಗಾಗಿ, ಒಂದಷ್ಟು ಕೇಂದ್ರೀಕರಣವಾಗಿರಬೇಕು ಎಂಬ ಕಾರಣಕ್ಕೆ. ಆದರೆ, ಇವತ್ತು ಆ ಸ್ಥಿತಿ ಇಲ್ಲ, ಸ್ವಾತಂತ್ರ್ಯ ದೇಶ ಒಂದಾಗಿದೆ. ಇನ್ನಷ್ಟು ವಿಚಾರಗಳನ್ನ ರಾಜ್ಯ ಪಟ್ಟಿಯಲ್ಲಿ ತರಬೇಕು ಎಂದು ನಾವೆಲ್ಲರೂ ಒತ್ತಾಯ ಮಾಡಬೇಕು” ಎಂದು ಹೇಳಿದರು.

ದುಂಡುಮೇಜಿನ ಸಭೆಯಲ್ಲಿ ಕೈಗೊಂಡ ನಿರ್ಣಯಗಳು:

1. ಲೋಕಸಭಾ ಕ್ಷೇತ್ರಗಳ ದೇಶವ್ಯಾಪಿ ಮರುವಿಂಗಡಣೆಯನ್ನು ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ಇದನ್ನು ಎರಡು ಬಾರಿ ಬೇರೆ ಬೇರೆ ರಾಜಕೀಯ ಪಕ್ಷಗಳ (ಕಾಂಗ್ರೆಸ್‌ ಮತ್ತು ಬಿಜೆಪಿ) ನೇತೃತ್ವದ ಕೇಂದ್ರ ಸರ್ಕಾರಗಳು 25 ವರ್ಷಗಳ ಕಾಲ ಮುಂದೂಡಿದ್ದವು. ಈ ಅಸಮಾನ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳು ಹಾಗೂ ಇನ್ನಿತರ ಕೆಲವು ರಾಜ್ಯಗಳ ಪ್ರಾತಿನಿಧ್ಯ ಗಣನೀಯವಾಗಿ ಕಡಿಮಯಾಗಲಿದೆ. ಇದು ದೇಶದ ಒಕ್ಕೂಟ ವ್ಯವಸ್ಥೆಯ ಸ್ವರೂಪವನ್ನೇ ಬದಲಿಸಲಿದೆ. ದೇಶದಲ್ಲಿ ಹತ್ತು ಹಲವು ರೀತಿಯ ಕ್ಷೋಭೆಗೆ ಕಾರಣವಾಗಲಿದೆ. ಒಕ್ಕೂಟ ತತ್ವವು ಈ ದೇಶದ ಹುಟ್ಟಿಗೆ ಕಾರಣವಾದ ಸ್ವಾತಂತ್ರ್ಯ ಆಂದೋಲನ ಮತ್ತು ಸಂವಿಧಾನದ ಮೂಲ ಆಶಯಗಳ ಭಾಗ. ಅದರಲ್ಲಿ ರಾಜಿ ಮಾಡಿಕೊಳ್ಳುವ ಯಾವುದೇ ಸರ್ಕಾರ ಅಥವಾ ಪಕ್ಷದ ಧೋರಣೆಯು ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಅಪಾಯವಿದೆ. ಸಂವಿಧಾನದ ಮೂಲ ಆಶಯಗಳ (ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂಕೋರ್ಟು ಸಹಾ ವ್ಯಾಖ್ಯಾನಿಸಿರುವಂತೆ) ಭಾಗವಾಗಿರುವ ಒಕ್ಕೂಟ ತತ್ವದ ವಿರುದ್ಧ ಈ ಮರುವಿಂಗಡಣೆಯ ಪ್ರಸ್ತಾಪ ಇದೆ. ಅಷ್ಟೇ ಅಲ್ಲದೇ, ಸಂವಿಧಾನವನ್ನೇ ಬದಲಿಸಲು ಅಗತ್ಯವಿರುವ ಮೂರನೇ ಎರಡು ಬಹುಮತವನ್ನು ಪಡೆಯುವುದಕ್ಕೋಸ್ಕರವೇ ಬಿಜೆಪಿ ಪಕ್ಷವು ಇದಕ್ಕೆ ಕೈ ಹಾಕುತ್ತಿದೆ ಎಂಬ ಗುಮಾನಿ ದೇಶದ ಜನತೆಯಲ್ಲಿ ಇದೆ. ಹೀಗಾಗಿ, ಈ ಲೋಕಸಭಾ ಕ್ಷೇತ್ರಗಳ ದೇಶವ್ಯಾಪಿ ಮರುವಿಂಗಡಣೆಯನ್ನು ಶಾಶ್ವತವಾಗಿ ರದ್ದುಗೊಳಿಸಬೇಕೆಂದು ನಾವು ಆಗ್ರಹಿಸುತ್ತೇವೆ.

2. ಈ ವಿಚಾರದಲ್ಲಿ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ನಿಲುವನ್ನು ಬಹಿರಂಗವಾಗಿ ಸ್ಪಷ್ಟಪಡಿಸಬೇಕೆಂದು ನಾವು ಆಗ್ರಹಿಸುತ್ತೇವೆ.

3. ರಾಜ್ಯದ ಎಲ್ಲಾ ಜನತೆಯು ಈ ವಿಚಾರದಲ್ಲಿ ಒಗ್ಗಟ್ಟಾಗಿ ಹೋರಾಡುವ ಅಗತ್ಯವಿದೆ. ಕ್ಷೇತ್ರ ಮರುವಿಂಗಡಣೆಯ ಮಾಹಿತಿ ಮತ್ತು ಸೀಟುಗಳನ್ನು ಹೆಚ್ಚಿಸಿ, ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯದ ಪ್ರಮಾಣ ತಗ್ಗಿಸುವ ಹುನ್ನಾರ ಎಲ್ಲರಿಗೂ ತಿಳಿಸುವ ಅಗತ್ಯವೂ ಇದೆ. ಹಾಗಾಗಿ ಮೊದಲ ಹಂತದಲ್ಲಿ ರಾಜ್ಯದ ಎಲ್ಲಾ ಜನಪ್ರತಿನಿಧಿಗಳು, ಅದರಲ್ಲೂ ಲೋಕಸಭಾ ಸದಸ್ಯರು, ಸಾಹಿತಿಗಳು, ಹೋರಾಟಗಾರರು, ಧಾರ್ಮಿಕ ಮುಖಂಡರು, ಸಮುದಾಯಗಳ ಮುಖಂಡರು ಎಲ್ಲರೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ತಮ್ಮ ವಿರೋಧವನ್ನು ದಾಖಲಿಸಬೇಕೆಂದು ಆಗ್ರಹಿಸುತ್ತೇವೆ. ಅದಕ್ಕಾಗಿ ಒಂದು ಮನವಿ ಪತ್ರದ ಮುಖಾಂತರ ಅಂಥವರನ್ನು ಭೇಟಿ ಮಾಡಿ ಪತ್ರ ಬರೆಯಲು ಒತ್ತಾಯಿಸಲಿದ್ದೇವೆ. ರಾಜ್ಯದ ಎಲ್ಲೆಡೆ ವಿಧಾನಸಭಾ ಕ್ಷೇತ್ರವಾರು ಕಾರ್ಯಕ್ರಮಗಳನ್ನು ಸಂಘಟಿಸಲೂ ಸಮಾನ ಮನಸ್ಕರೊಡಗೂಡಿ ಪ್ರಯತ್ನಿಸಲಿದ್ದೇವೆ.

ವಕ್ಫ್‌ ಮಸೂದೆ ಮುಸ್ಲಿಮರನ್ನು ಎರಡನೇ ದರ್ಜೆ ನಾಗರಿಕರಾಗಿಸುವ ಪ್ರಯತ್ನ: ನಾಸಿರ್ ಹುಸೇನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಾಹಿಲ್ ವಕೋಡ್ ಸಾವಿನ ಪ್ರಕರಣ: ಐಐಟಿ ಬಾಂಬೆ ನಿರ್ದೇಶಕರ ರಾಜೀನಾಮೆಗೆ 84 ಸಂಘಟನೆಗಳ ಆಗ್ರಹ

ಜಾತಿ ತಾರತಮ್ಯದ ಆರೋಪ ಎದುರಿಸುತ್ತಿರುವ ಡೀನ್‌ಗೆ ಸಂಸ್ಥೆಯ ಬೆಂಬಲ, ವಿದ್ಯಾರ್ಥಿಯ ವಿರುದ್ಧ ಮಾಧ್ಯಮಗಳಿಗೆ ಹೇಳಿಕೆ, ಸಿಸಿಟಿವಿ ದೃಶ್ಯಾವಳಿ ಸೋರಿಕೆ ಮತ್ತು ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯದ ಆರೋಪ ಮುಂಬೈ: ಐಐಟಿ ಬಾಂಬೆಯಲ್ಲಿ ವಿದ್ಯಾರ್ಥಿ ಸಾಹಿಲ್...

ಕರ್ನಾಟಕದಲ್ಲಿ ಐದು ವರ್ಷಗಳಲ್ಲಿ 629 ವರದಕ್ಷಿಣೆ ಕಿರುಕುಳದ ಸಾವು; ಶಿಕ್ಷೆಯಾಗಿದ್ದು ಕೇವಲ ಏಳು ಪ್ರಕರಣಗಳಲ್ಲಿ: ವರದಿ 

ವರದಕ್ಷಿಣೆ ಕಿರುಕುಳ ಮತ್ತು ಸಾವುಗಳ ಪ್ರಕರಣಗಳಲ್ಲಿ ಅತ್ಯಂತ ಕಡಿಮೆ ಶಿಕ್ಷೆಯ ಪ್ರಮಾಣ; ತನಿಖೆ, ಸಾಕ್ಷ್ಯ ಸಂಗ್ರಹ ಮತ್ತು ನ್ಯಾಯಾಂಗ ವಿಳಂಬದ ವಿರುದ್ಧ ತಜ್ಞರ ಕಳವಳ ಕರ್ನಾಟಕದಲ್ಲಿ ವರದಕ್ಷಿಣೆ ಕಿರುಕುಳ ಮತ್ತು ಸಾವುಗಳಂತಹ ಗಂಭೀರ ಅಪರಾಧಗಳ...

ಅರುಣಾಚಲ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆ ವಿರುದ್ಧ ಭುಗಿಲೆದ್ದ ಜನಾಕ್ರೋಶ; ಕೇಂದ್ರದಿಂದ ಆರ್‌ಎಎಫ್‌ನ ಎರಡು ತುಕಡಿ ರವಾನೆ

ಪ್ರಸ್ತಾವಿತ 11,200 ಮೆಗಾವ್ಯಾಟ್ ಸಾಮರ್ಥ್ಯದ ಸಿಯಾಂಗ್ ಅಪ್ಪರ್ ಮಲ್ಟಿಪರ್ಪಸ್ ಪ್ರಾಜೆಕ್ಟ್ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಪಾಸಿಘಾಟ್‌ನಲ್ಲಿ ಹಿಂಸಾಚಾರ ಸಂಭವಿಸಿದ ಹಿನ್ನೆಲೆ, ಕೇಂದ್ರ ಸರ್ಕಾರ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್‌) ರಾಪಿಡ್ ಆಕ್ಷನ್...

ನ್ಯಾಯಾಧೀಶರ ನೇಮಕಾತಿಗೆ ಕೊಲಿಜಿಯಂ ಚರ್ಚಿಸುವ ಮುನ್ನವೇ ಸಿಜೆಐ ಚಂದ್ರಚೂಡ್ ಸರ್ಕಾರದ ಪೂರ್ವಾನುಮತಿ ಪಡೆಯುತ್ತಿದ್ದರು: ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್

ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ (ಸಿಜೆಯ) ಡಿ.ವೈ. ಚಂದ್ರಚೂಡ್ ಅವರು ನ್ಯಾಯಾಧೀಶರ ನೇಮಕಾತಿಗಾಗಿ ಪ್ರಸ್ತಾಪಿಸಲಾದ ಹೆಸರುಗಳನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಅಧಿಕೃತವಾಗಿ ಚರ್ಚಿಸುವ ಮುನ್ನವೇ ಸರ್ಕಾರದೊಂದಿಗೆ ಚರ್ಚಿಸುವ ಅಭ್ಯಾಸವನ್ನು ಹೊಂದಿದ್ದರು ಎಂದು...

ಕನ್ನಡಿಗರಿಗೆ ಉದ್ಯೋಗ ನಿರಾಕರಿಸಿದರೆ ಖಾಸಗಿ ಸಂಸ್ಥೆಗಳ ವಿರುದ್ಧ ಕ್ರಮ: ಕರ್ನಾಟಕ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಎಚ್ಚರಿಕೆ

ಬೆಂಗಳೂರಿನ ಐಟಿ ವಲಯ ಸೇರಿದಂತೆ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ದೇಶಪೂರ್ವಕವಾಗಿ ಉದ್ಯೋಗಾವಕಾಶ ನಿರಾಕರಿಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ, ಅಂತಹ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ...

“ಕೇವಲ ದುಷ್ಟರಿಗಷ್ಟೇ ಧರ್ಮ ಬೇಕು”: ಪ್ರಧಾನಿ ಮೋದಿ-ಚಿನ್ಮಯಾನಂದ ಎಐ ಸಂವಾದದ ನಡುವೆ ಸ್ವಾಮಿ ಚಿನ್ಮಯಾನಂದರ ಹಳೆಯ ಕ್ರಾಂತಿಕಾರಿ ಹೇಳಿಕೆ ಈಗ ಮುನ್ನೆಲೆಗೆ!

ದೆಹಲಿಯ ಭಾರತ್ ಮಂಟಪಂನಲ್ಲಿ ಆಯೋಜಿಸಿದ್ದ ‘ಚಿನ್ಮಯ ಅಮೃತ ಮಹೋತ್ಸವ’ ಜಾಗತಿಕ ಸಮ್ಮೇಳನದ ವೇದಿಕೆ ಇತ್ತೀಚೆಗೆ ವಿಶಿಷ್ಟ ತಾಂತ್ರಿಕ ಪ್ರದರ್ಶನವೊಂದಕ್ಕೆ ಸಾಕ್ಷಿಯಾಯಿತು. 1993ರಲ್ಲೇ ಇಹಲೋಕ ತ್ಯಜಿಸಿದ್ದ ಚಿನ್ಮಯ ಮಿಷನ್ ಸಂಸ್ಥಾಪಕ ಸ್ವಾಮಿ ಚಿನ್ಮಯಾನಂದ ಅವರ...

ಜೀವನ ವೆಚ್ಚ, ಶಾಲಾ ನಿಧಿ ಕಡಿತದ ವಿರುದ್ಧ ಫ್ರಾನ್ಸ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ; ಅಶ್ರುವಾಯು, ಜಲಫಿರಂಗಿ ಪ್ರಯೋಗ

ಫ್ರಾನ್ಸ್‌ನಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳ ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ. ರಾಜಧಾನಿ ಪ್ಯಾರಿಸ್ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾಕಾರರನ್ನು...

‘ಒಂದೇ ಹೆಸರಿನಲ್ಲಿ 13 ವೋಟ್’ : ಉತ್ತರ ಪ್ರದೇಶ ಆಝಂಗಢದಲ್ಲಿ ಮತದಾರರ ಪಟ್ಟಿ ಅಕ್ರಮ; 9 ಅಧಿಕಾರಿಗಳ ವಿರುದ್ಧ ಕ್ರಮ

ಆಝಂಗಢ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ 13 ಪ್ರತ್ಯೇಕ ಸ್ಥಳಗಳಲ್ಲಿ ವಿಕಾಸ್ ಯಾದವ್ ಎಂಬ ಹೆಸರು ತಪ್ಪಾಗಿ ದಾಖಲಾಗಿರುವುದು ಆಂತರಿಕ ತನಿಖೆಯಿಂದ ತಿಳಿದುಬಂದ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ)...

ಎಸ್‌ಆರ್‌ಎಫ್‌ಟಿಐ ವಿದ್ಯಾರ್ಥಿಗಳ ಹೋರಾಟಕ್ಕೆ ನಾಸಿರುದ್ದೀನ್ ಶಾ, ಪಾಯಲ್ ಕಪಾಡಿಯಾ ಬೆಂಬಲ; ಬಿಜೆಪಿ ವಿರುದ್ಧ ನಟನ ವಾಗ್ದಾಳಿ

ಕೋಲ್ಕತ್ತಾ: ಕೋಲ್ಕತ್ತಾದ ಸತ್ಯಜಿತ್ ರೇ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (ಎಸ್‌ಆರ್‌ಎಫ್‌ಟಿಐ)ಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ಹಿರಿಯ ನಟ ನಾಸಿರುದ್ದೀನ್ ಶಾ ಮತ್ತು ಖ್ಯಾತ ಚಲನಚಿತ್ರ ನಿರ್ದೇಶಕಿ ಪಾಯಲ್ ಕಪಾಡಿಯಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಂಸ್ಥೆಯ...

ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ: ದೆಹಲಿ ಮೂಲದ ರಿತೇಶ್ ಪಾಂಡೆ ಬಂಧನ: ತನಿಖೆ ಚುರುಕು 

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಆಪಾದಿತ ಕುಟುಕು ಕಾರ್ಯಾಚರಣೆಯ ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸರ ಅಪರಾಧ ವಿಭಾಗದ ವಿಶೇಷ ತಂಡ ದೆಹಲಿ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿದೆ. ಪ್ರಕರಣದಲ್ಲಿ ನಡೆದಿರುವ ಮೊದಲ...