ನಮ್ಮ ದೇಶದ ಸಂವಿಧಾನದ 130ನೇ ಪರಿಚ್ಛೇದದ ಅಡಿಯಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ/ಸುಪ್ರೀಂಕೋರ್ಟಿನ ಸ್ಥಾಪನೆ ಆಗಿದ್ದು, ಅದು ದೇಶದ ಸಂವಿಧಾನದ ಮತ್ತು ನಾಗರಿಕರ ಹಕ್ಕುಗಳ ರಕ್ಷಕ ಎಂದು ಶಾಸ್ತ್ರೀಯವಾದ ವಿದ್ಯಾಭ್ಯಾಸ ಮಾಡಿದ ಎಲ್ಲರಿಗೂ ಗೊತ್ತು. ಇನ್ನೂ ಸ್ವಲ್ಪ ಜಾಸ್ತಿ ಓದಿದವರಿಗೆ ಈಗ ಎಷ್ಟು ಜನ ನ್ಯಾಯಮೂರ್ತಿಗಳಾಗಿದ್ದಾರೆ, ಯಾರು ಮುಖ್ಯ ನ್ಯಾಯಮೂರ್ತಿ ಮತ್ತು ಕೆಲವೊಂದು ಐತಿಹಾಸಿಕ ತೀರ್ಪುಗಳ ಬಗ್ಗೆ ಗೊತ್ತಿರಬಹುದು. ಆದರೆ ಸುಪ್ರೀಂಕೋರ್ಟ್ ಎದುರಿಸುತ್ತಿರುವ ಅಡ್ಡಿ ಆತಂಕಗಳು, ಅದರ ಎದುರಿಗೆ ಇರುವ ಸವಾಲುಗಳು, ಅವುಗಳನ್ನು ಎದುರಿಸಲು ಸಾಧ್ಯವಾಗದೆ ಪೇಚಾಡಿದ ನ್ಯಾಯಮೂರ್ತಿಗಳು, ಯಶಸ್ವಿಯಾಗಿ ಎದುರಿಸಿದವರು ಈ ಎಲ್ಲ ವಿವರಣೆಗಳನ್ನು ಅರಿತಿರುವವರು ಬಹಳ ವಿರಳ. ದೇಶದ ಮೂಲೆಮೂಲೆಗಳ ಜನರಿಗೆ ಸುಪ್ರೀಂಕೋರ್ಟು ಎಷ್ಟು ದೂರವೋ, ಅದರ ಒಳಹೋಗುಗಳನ್ನು ತಿಳಿದುಕೊಳ್ಳುವುದು ಅದಕ್ಕಿಂತಲೂ ದೂರ.
ಐತಿಹಾಸಿಕ ತೀರ್ಪುಗಳನ್ನು ನೀಡುವ ಸುಪ್ರೀಂಕೋರ್ಟ್ ಕೆಲವೊಮ್ಮೆ ಐತಿಹಾಸಿಕ ಘಟನೆಗಳಿಗೂ ಸಾಕ್ಷಿಯಾಗಿದೆ. 2018ರಲ್ಲಿ ಮೊಟ್ಟಮೊದಲ ಬಾರಿಗೆ ಸುಪ್ರೀಂಕೋರ್ಟಿನ 5 ಜನ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿಯನ್ನು ಕರೆದು ಅಂದಿನ ಮುಖ್ಯನ್ಯಾಯಮೂರ್ತಿ ಜಸ್ಟಿಸ್ ದೀಪಕ್ ಮಿಶ್ರಾ ಅವರ ಕಾರ್ಯವೈಖರಿಯನ್ನು ಟೀಕಿಸಿದರು. ಇದು ಹಿಂದೆ ಎಂದೂ ನಡೆಯದ ಘಟನೆಯಾಗಿತ್ತು. ಆದರೆ, ಅದೇ ಐವರು ನ್ಯಾಯಮೂರ್ತಿಗಳಲ್ಲಿ ಒಬ್ಬರಾದ ಜಸ್ಟಿಸ್ ರಂಜನ್ ಗೊಗೋಯ್ ಮುಂದೆ ಮುಖ್ಯ ನ್ಯಾಯಮೂರ್ತಿಗಳಾಗಿ ನಿವೃತ್ತಿಯ ನಂತರ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾದರು. ನ್ಯಾಯಮೂರ್ತಿಗಳ ಈ ನಡೆಗಳು ಅನೇಕ ಚರ್ಚೆಗೆ ಎಡೆಮಾಡಿಕೊಟ್ಟವು.

ಸುಪ್ರೀಂಕೋರ್ಟಿನ ಮುಂದೆ ತೀರ್ಪಿಗಾಗಿ ಕಾದಿರುವ ಸಾವಿರಾರು ಅರ್ಜಿಗಳು, ಇತ್ಯರ್ಥವಾಗಲು ಬೇಕಾಗುವ ಕಾಲಾವಕಾಶ ಮುಂತಾದವು ಜನರಿಗೆ ಭರವಸೆ ನೀಡುವಲ್ಲಿ ವಿಫಲವಾಗುತ್ತವೆ ಎನಿಸುವ ಹತಾಶ ವಾತಾವರಣ ಉಂಟಾಗಿತ್ತು. ಆದರೆ ಇತ್ತೀಚೆಗೆ ಜಸ್ಟಿಸ್ ಯು.ಯು ಲಲಿತ್ ಅವರು ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ತೆಗೆದುಕೊಂಡ ಕೆಲವು ನಿರ್ಧಾರಗಳು ಜನರಲ್ಲಿ ಭರವಸೆಯನ್ನು ಮತ್ತೆ ಹುಟ್ಟಿಸುವಂತೆ ಕಾಣುತ್ತಿದೆ.
ಜಸ್ಟಿಸ್ ಯು.ಯು ಲಲಿತ್ 1983ರಿಂದ 1985ರವರೆಗೆ ಬಾಂಬೆ ಕೈಕೋರ್ಟಿನಲ್ಲಿ ಪ್ರಾಕ್ಟಿಸ್ ಮಾಡಿ ನಂತರ ದೆಹಲಿಗೆ ಬಂದವರು. 2014ರಲ್ಲಿ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಅಲ್ಲಿಂದ ಇಲ್ಲಿಯವರೆಗೂ ಅನೇಕ ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಆಗಸ್ಟ್ 27, 2022ರಂದು ಮುಖ್ಯನ್ಯಾಯಮೂರ್ತಿಯಾಗಿ ನೇಮಕಗೊಂಡ ಕೂಡಲೇ ಜಸ್ಟಿಸ್ ಯು.ಯು ಲಲಿತ್ ಒಂದು ಪೂರ್ಣ ಪ್ರಮಾಣದ ಕೋರ್ಟಿನ ಸಭೆಯನ್ನು ನಡೆಸಿ ಎಲ್ಲಾ ನ್ಯಾಯಮೂರ್ತಿಗಳ ಅಭಿಪ್ರಾಯಗಳನ್ನೂ ಸಂಗ್ರಹಿಸಿದರು. ಸುಮಾರು ಮೂರುವರೆ ಗಂಟೆಗಳವರೆಗೆ ನಡೆದ ಈ ಸಭೆ ಅತ್ಯಂತ ಪರಿಣಾಮಕಾರಿಯಾಗಿತ್ತು. ಈ ಸಭೆಯ ನಂತರ ಜಸ್ಟಿಸ್ ಲಲಿತ್ ತೆಗೆದುಕೊಂಡೆ ಕೆಲವು ನಿರ್ಧಾರಗಳು ಬಹುಶಃ ಇಂದಿನ ಸಮಯದ ಅಗತ್ಯಗಳನ್ನು ಒತ್ತಿ ಹೇಳುತ್ತವೆ.
ಜಸ್ಟಿಸ್ ಲಲಿತ್ ತೆಗೆದುಕೊಂಡ ನಿರ್ಧಾರಗಳಲ್ಲಿ ಮುಖ್ಯವಾದದ್ದು ಬಹಳ ದಿನಗಳಿಂದ ಲಿಸ್ಟ್ ಆಗದೆ ಉಳಿದಿದ್ದ ಕೇಸ್‌ಗಳು ಚಾಲ್ತಿಗೆ ಬರುವಂತೆ ವ್ಯವಸ್ಥೆ ಮಾಡಿದ್ದು. ಆದರೆ ಅತ್ಯಂತ ಮಹತ್ವದ ನಿರ್ಧಾರವೆಂದರೆ ’ಸಂವಿಧಾನ ಪೀಠ’ಗಳನ್ನು ರಚಿಸಿದ್ದು.
* 5 ಜನ ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠಗಳು ಆಗಸ್ಟ್ 29ರಿಂದ ಪ್ರಾರಂಭವಾಗಿ 25 ಅರ್ಜಿಗಳನ್ನು ಇತ್ಯರ್ಥಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂವಿಧಾನ ಪೀಠಗಳಲ್ಲಿ ಹಾಲಿ ಇರುವ ಎಲ್ಲಾ ನ್ಯಾಯಮೂರ್ತಿಗಳಿಗೂ ಅವಕಾಶ ಇರುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.
* ಈ ಪ್ರಸಕ್ತ ಪೀಠಗಳಲ್ಲದೆ ಒಂದು ಪೀಠ ವರ್ಷಪೂರ್ತಿ ಅಸ್ತಿತ್ವದಲ್ಲಿದ್ದು ನಿರಂತರವಾಗಿ ಕಾರ್ಯನಿರ್ವಹಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದರಲ್ಲೇನು ವಿಶೇಷ ಎಂದೆನಿಸಬಹುದು; ಆದರೆ ಸಂವಿಧಾನ ಪೀಠಗಳ ಮಹತ್ವ ಏನೆಂದು ತಿಳಿದರೆ ಸ್ಪಷ್ಟವಾಗುತ್ತದೆ.
ಸಂವಿಧಾನದ 145(3)ನೇ ಪರಿಚ್ಛೇದದ ಅನ್ವಯ ಸಂವಿಧಾನದ ಅರ್ಥ ವಿವರಣೆಯಲ್ಲಿ ತೊಂದರೆಯಾದಾಗ, ಇಲ್ಲವೆ ತೊಡಕುಗಳು ಬಂದಾಗ 5,7 ಮತ್ತು 9 ಜನ ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠಗಳನ್ನು ರಚಿಸಬಹುದು. ಅಂದರೆ ನ್ಯಾಯಾಲಯಗಳ ಎದುರು ತೀರ್ಪಿಗಾಗಿ ಕಾಯುತ್ತಿರುವ ಸಾವಿರಾರು ಕೇಸುಗಳ ತೀರ್ಮಾನ ಶೀಘ್ರಗತಿಯಲ್ಲಿ ಆಗುವ ಭರವಸೆ ಈಗ ಮೂಡಿದೆ.
ಕಳೆದ ಎಷ್ಟೋ ವರ್ಷಗಳಿಂದ ಯಾವುದೇ ಪೀಠಗಳು ರಚನೆ ಆಗದೆ ದೇಶದಲ್ಲಿ ಅತ್ಯಂತ ಮಹತ್ವದ್ದು ಆದರೂ ತೀರ್ಪು ಕಾಣದೆ ನೆನೆಗುದಿಗೆ ಬಿದ್ದಿರುವ ಪ್ರಕರಣಗಳು ಬೇಗ ಬಗೆಹರಿಯಬಹುದು.
* 1960ರಲ್ಲಿ ಸುಮಾರು 1434 ಸಂವಿಧಾನ ಪೀಠಗಳು ರಚನೆಯಾಗಿದ್ದರೆ 2021ರಲ್ಲಿ ಕೇವಲ 2 ಪೀಠಗಳು ರಚನೆ ಆಗಿದ್ದವು. ಇದರಿಂದ ಕೋರ್ಟಿನ ಕಾರ್ಯವೈಖರಿಯನ್ನು ಅರ್ಥಮಾಡಿಕೊಳ್ಳಬಹುದು.

* ಇಂದಿಗೆ ಅಂದಾಜು 54 ಪ್ರಮುಖ ಪ್ರಕರಣಗಳು ಮತ್ತು 439ರಷ್ಟು ಅವುಗಳಿಗೆ ಸಂಬಂಧಿಸಿದ ಪ್ರಕರಣಗಳು ಸಂವಿಧಾನ ಪೀಠಗಳು ಮುಂದೆ ಇತ್ಯರ್ಥಗೊಳ್ಳಲು ಕಾಯುತ್ತಿವೆ.
* ಸುಪ್ರೀಂಕೋರ್ಟಿನ ಮುಂದೆ ಇರುವ ಒಟ್ಟು ಪ್ರಕರಣಗಳು 2017ರಲ್ಲಿ 55 ಸಾವಿರದಷ್ಟು ಇದ್ದರೆ ಈಗ ಸುಮಾರು 71 ಸಾವಿರಕ್ಕೆ ಏರಿವೆ. ಈ ಎಲ್ಲ ಪ್ರಕರಣಗಳೂ ಒಂದು ತಾರ್ಕಿಕ ಅಂತ್ಯ ಕಾಣಬೇಕೆಂದರೆ ಜಸ್ಟಿಸ್ ಲಲಿತ್ ಅವರು ತೆಗೆದುಕೊಂಡಂತಹ ನಿರ್ಧಾರಗಳನ್ನು ಮುಂದೆಬರುವ ಎಲ್ಲಾ ನ್ಯಾಯಮೂರ್ತಿಗಳು ತೆಗೆದುಕೊಳ್ಳಬೇಕು ಮತ್ತು ಪರ್ಯಾಯ ನ್ಯಾಯದಾನ ವ್ಯವಸ್ಥೆಯನ್ನು ಕಲ್ಪಿಸಬೇಕು.
ಜಸ್ಟಿಸ್ ಲಲಿತ್ ಅವರ ಅಧಿಕಾರ ಅವಧಿ ಕೇವಲ 3 ತಿಂಗಳಿಗಷ್ಟೆ ಇರುವುದು ಒಂದು ಬೇಸರದ ಸಂಗತಿ. ಕೆಲವೊಮ್ಮೆ ನ್ಯಾಯಮೂರ್ತಿಗಳ ಅಧಿಕಾರದ ಅವಧಿ ಅವರ ಕಾರ್ಯಕ್ಕೆ ಸಾಲುವುದಿಲ್ಲ ಎನಿಸಬಹುದು. ಆದರೆ ನಿಜವಾದ ಕೆಲಸ ಮಾಡುವ ಮನಸ್ಸಿದ್ದರೆ ಅವಧಿ ತೊಡಕಾಗುವುದಿಲ್ಲ ಎಂದು ಜಸ್ಟಿಸ್ ಲಲಿತ್ ತೋರಿಸಿಕೊಟ್ಟಿದ್ದಾರೆ.
ಜಸ್ಟಿಸ್ ಲಲಿತ್ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಕೆಲವೊಂದು ಮೊದಲಗಳನ್ನು ಮಾಡಿದ್ದಾರೆ. ಬೆಳಿಗ್ಗೆ 9:30ಕ್ಕೆ ಕಾರ್ಯ ಪ್ರಾರಂಭಿಸಿ “ನಮ್ಮ ಮಕ್ಕಳು 7ಕ್ಕೆ ಶಾಲೆಗೆ ಹೋಗುವುದಾದರೆ ನಮಗೇಕೆ ಸಾಧ್ಯವಿಲ್ಲ” ಎಂದು ಕೇಳಿದ್ದರು.
ಸಂವಿಧಾನ ಪೀಠಗಳ ಮಹತ್ವ
ಸಂವಿಧಾನವನ್ನು ಅರ್ಥೈಸುವ ಮತ್ತು ವಿವರಿಸುವ ಸಂದರ್ಭ ಬಂದಾಗ ಪೀಠಗಳು ಆ ಕಾರ್ಯವನ್ನು ನಿರ್ವಹಿಸುತ್ತವೆ.
ಕೆಲವೊಮ್ಮೆ ರಾಷ್ಟ್ರಪತಿಗಳು ಸುಪ್ರೀಂಕೋರ್ಟಿನ ಅಭಿಪ್ರಾಯ ಕೇಳಿದಾಗ ಸಂವಿಧಾನದ 143ನೇ ಪರಿಚ್ಛೇದದ ಕೆಳಗೆ ಪೀಠಗಳು ಸಲಹೆ ನೀಡುತ್ತವೆ.
ಇಬ್ಬರು ಅಥವಾ ಮೂವರು ನ್ಯಾಯಮೂರ್ತಿಗಳು ನೀಡಿರುವ ತೀರ್ಪುಗಳಿಗೆ ಭವಿಷ್ಯದಲ್ಲಿ ವಿರುದ್ಧ ಅಭಿಪ್ರಾಯಗಳು ಕೇಳಿ ಬಂದಾಗ ಅಲ್ಲಿನ ತೊಡಕು ನಿವಾರಿಸಲು ಮತ್ತು ನಂತರ ಬಂದಂತಹ ಪೀಠಗಳು ಮೊದಲಿನ ತೀರ್ಮಾನಗಳಿಗೆ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದಾಗ ಅಂತಹ ತೊಡಕುಗಳನ್ನು ನಿವಾರಿಸಲು ಸಂವಿಧಾನ ಪೀಠಗಳು ಅವಶ್ಯವಾಗಿರುತ್ತವೆ.
ಈ ಎಲ್ಲ ಹಿನ್ನೆಲೆಯಲ್ಲಿ ನೋಡಿದಾಗ ಜಸ್ಟಿಸ್ ಲಲಿತ್ ಕೈಗೊಂಡ ನಿರ್ಧಾರ ಬಹಳ ಮಹತ್ವದ್ದಾಗಿದೆ ಎಂಬುದು ಅರ್ಥವಾಗುತ್ತದೆ.
ಅಧಿಕಾರ ಸ್ವೀಕರಿಸಿದ ಕೂಡಲೇ ಸಂವಿಧಾನದ 103ನೇ ತಿದ್ದುಪಡಿಯಾದ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ನೀಡಿದ ಮೀಸಲಾತಿಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಪ್ರಕರಣವನ್ನು ಕೈಗೆತ್ತಿಕೊಂಡು ದಿನದಿಂದ ದಿನಕ್ಕೆ ವಿಚಾರಣೆ ನಡೆಸುತ್ತಿದ್ದಾರೆ.
ಬಾಂಬೆ ಹೈಕೋರ್ಟ್ ನೀಡಿದ್ದ ಅಪಾರವಾದ ಟೀಕೆಗೆ ಒಳಗಾಗಿದ್ದ ಚರ್ಮಕ್ಕೆ ಚರ್ಮ ತಾಗಿದ್ದರೆ ಮಾತ್ರ ಲೈಂಗಿಕ ಶೋಷಣೆ ಅಥವಾ ಅತ್ಯಾಚಾರ ಎಂದಿದ್ದ ತೀರ್ಪನ್ನು ತಿರಸ್ಕರಿಸಿ “ಮಗುವಿನ ದೇಹದ ಯಾವುದೇ ಅಂಗವನ್ನು ಲೈಂಗಿಕ ಶೋಷಣೆಯ ಉದ್ದೇಶದಿಂದ ಮುಟ್ಟಿದರೂ ಅದು POSCO ಕಾಯ್ದೆಯ ಅಡಿ ಅಪರಾಧ” ಎಂದು ಹೇಳಿ ಇಲ್ಲಿ “ಉದ್ದೇಶ ಮುಖ್ಯ ಕ್ರಿಯೆ ಅಲ್ಲ” ಎಂದು ಬಲವಾದ ತೀರ್ಪು ನೀಡಿದರು.
ನ್ಯಾಯಾಲಯ ಮತ್ತು ನ್ಯಾಯಮೂರ್ತಿಗಳು ಒಂದು ದೇಶದ ನ್ಯಾಯವ್ಯವಸ್ಥೆಯಲ್ಲಿ ಸ್ವತಂತ್ರವಾಗಿ, ಸರ್ಕಾರ ಅಥವಾ ಒತ್ತಡ ಗುಂಪುಗಳ ಪ್ರಭಾವಕ್ಕೆ ಒಳಗಾಗದೆ ಕೆಲಸ ಮಾಡಿದರೆ ಮಾತ್ರ ನ್ಯಾಯದಾನ ವ್ಯವಸ್ಥೆಯ ಮೇಲೆ ಜನ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಬರುವ ನ್ಯಾಯಮೂರ್ತಿಗಳೂ ಇದನ್ನು ಅನುಸರಿಸಬಹುದು ಎಂಬ ಭರವಸೆ ಇಟ್ಟುಕೊಳ್ಳಬಹುದು.

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.
ಇದನ್ನೂ ಓದಿ: ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್ ತೇಲಿಬಿಟ್ಟ ಜನಸಂಖ್ಯೆ ಹೆಚ್ಚಳ, ಮತಾಂತರ ಕತೆಯ ವಾಸ್ತವವೇನು?


