Homeದಲಿತ್ ಫೈಲ್ಸ್ಚಿಕ್ಕಮಗಳೂರು: ಗರ್ಭಿಣಿ ಸೇರಿದಂತೆ 14 ದಲಿತ ಕಾರ್ಮಿಕರ ಮೇಲೆ ದೌರ್ಜನ್ಯ; ಎಸ್ಟೇಟ್ ಮಾಲೀಕನ ವಿರುದ್ಧ ಎಫ್‌ಐಆರ್‌

ಚಿಕ್ಕಮಗಳೂರು: ಗರ್ಭಿಣಿ ಸೇರಿದಂತೆ 14 ದಲಿತ ಕಾರ್ಮಿಕರ ಮೇಲೆ ದೌರ್ಜನ್ಯ; ಎಸ್ಟೇಟ್ ಮಾಲೀಕನ ವಿರುದ್ಧ ಎಫ್‌ಐಆರ್‌

ಮಹಿಳೆಯರೂ ಸೇರಿದಂತೆ ಸುಮಾರು 14 ಮಂದಿ ದಲಿತ ಕಾರ್ಮಿಕರನ್ನು ಕೂಡಿ ಹಾಕಿ, ಸವರ್ಣೀಯ ಜಾತಿಯ ಎಸ್ಟೇಟ್ ಮಾಲೀಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ತಾಲೂಕಿನಲ್ಲಿ ನಡೆದಿದೆ.

- Advertisement -
- Advertisement -

ಮಹಿಳೆಯರೂ ಸೇರಿದಂತೆ ಸುಮಾರು 14 ಮಂದಿ ದಲಿತ ಕಾರ್ಮಿಕರನ್ನು ಕೂಡಿ ಹಾಕಿ, ಸವರ್ಣೀಯ ಜಾತಿಯ ಎಸ್ಟೇಟ್ ಮಾಲೀಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ತಾಲೂಕಿನಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಪತ್ರಕರ್ತ ಇಮ್ರಾನ್ ಖಾನ್ ಟ್ವಿಟರ್‌ನಲ್ಲಿ ವೀಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಬೀಗ ಹಾಕಿದ ಮನೆಯೊಂದರೊಳಗೆ ಕಾರ್ಮಿಕರು ಇರುವ ದೃಶ್ಯಗಳು ಕಂಡುಬಂದಿವೆ. ಅಲ್ಲದೆ ಗರ್ಭಿಣಿ ಮಹಿಳೆಯೊಬ್ಬರ ಮೇಲೆ ಹಲ್ಲೆಮಾಡುವ ದೃಶ್ಯಗಳು ಸೆರೆಯಾಗಿವೆ.

ದೌರ್ಜನ್ಯ ಎಸಗಿರುವ ಎಸ್ಟೇಟ್ ಮಾಲೀಕ ಜಗದೀಶ್ ಗೌಡ ಭಾರತೀಯ ಜನತಾ ಪಕ್ಷದ ಸ್ಥಳೀಯ ಮುಖಂಡ ಎಂದು ಹೇಳಲಾಗಿದೆ.

ದೌರ್ಜನ್ಯಕ್ಕೆ ಒಳಗಾದ ಎಲ್ಲಾ ದಲಿತ ಕಾರ್ಮಿಕರನ್ನು ರಕ್ಷಿಸಲಾಗಿದ್ದು ಎಲ್ಲರನ್ನೂ ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಳೇಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ

ಚಿಕ್ಕಮಗಳೂರು ತಾಲ್ಲೂಕು ಠಾಣೆಯಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಹುಣಸೆಹಳ್ಳಿಪುರದಲ್ಲಿ ಘಟನೆ ನಡೆದಿದ್ದು, ಎಸ್ಟೇಟ್‌ ಮಾಲೀಕನಾದ ಜಗದೀಶಗೌಡ ಹಾಗೂ ತಿಲಕ್ ಎಂಬವರು ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿದ್ದಾರೆ.

ಆಲ್ದೂರಿನ ಗಾಳಿಗಂಡಿಯಿಂದ ಬಂದು ಇಲ್ಲಿನ ಲೈನ್‌ಮನೆಯಲ್ಲಿ ವಾಸವಿದ್ದು ಕೆಲಸ ಮಾಡುತ್ತಿದ್ದ ದಲಿತ ಕಾರ್ಮಿಕ ಮಹಿಳೆ ಅರ್ಪಿತಾ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನಲ್ಲಿ ಹೇಳಿದ್ದೇನು?

“ಸುಮಾರು 03 ತಿಂಗಳುಗಳಿಂದ ಹುಣಸೆಹಳ್ಳಿಪುರದಲ್ಲಿ ಜಗದೀಶಗೌಡ ಅವರ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡು ಲೈನ್‌ಮನೆಯಲ್ಲಿ ವಾಸವಾಗಿದ್ದೇವೆ. ಸುಮಾರು 15 ದಿನಗಳ ಹಿಂದೆ ನಮ್ಮ ಗಂಡನ ಸಂಬಂಧಿಯಾದ ಸತೀಶ, ಮಂಜು ಅವರಿಗೂ ಹಾಗೂ ಅಲ್ಲಿಯೇ ಪಕ್ಕದ ಮನೆಯವರಿಗೂ ಮಕ್ಕಳ ವಿಚಾರದಲ್ಲಿ ಗಲಾಟೆಯಾಗಿತ್ತು. ಆ ಸಮಯದಲ್ಲಿ ಎಸ್ಟೇಟ್ ಮಾಲೀಕರಾದ ಜಗದೀಶಗೌಡರು ಮಂಜು ಅವರಿಗೆ ಬೈಯ್ದು ಹೊಡೆದಿದ್ದರು. ಹೀಗಾಗಿ ಮಂಜು ಮತ್ತು ನಮ್ಮ ಕಡೆಯವರು ಬೇರೆಡೆ ಹೋಗಲು ನಿರ್ಧರಿಸಿದೆವು. ನಾವು ಇನ್ನು ಮುಂದೆ ಇಲ್ಲಿ ಕೆಲಸ ಮಾಡುವುದಿಲ್ಲ, ಬೇರೆ ಕಡೆಗೆ ಕೆಲಸಕ್ಕೆ ಹೋಗುವುದಾಗಿ ಹೇಳಿದ್ದೆವು. ಆನಂತರದಲ್ಲಿ ಜಗದೀಶ ಸಿಟ್ಟಾಗಿದ್ದರು” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

“ನಮ್ಮಿಂದ ಪಡೆದ ಸಾಲದ ಹಣವನ್ನು ಕೊಟ್ಟು ಬೇರೆ ಕಡೆಗೆ ಕೆಲಸಕ್ಕೆ ಹೋಗಿ ಎಂದು ಜಗದೀಶಗೌಡ ಹೇಳಿದ್ದರಿಂದ ಹಣವನ್ನು ಹೊಂಚಿಕೊಂಡು ಬರಲು ಮಂಜು ಮತ್ತು ಸತೀಶ ಅವರು ಬೇರೆ ಎಸ್ಟೇಟ್‌ಗೆ ಹೋಗಿದ್ದರು. ಹೀಗಿದ್ದಾಗ ಅಕ್ಟೋಬರ್‌ 08ರಂದು ಬೆಳಿಗ್ಗೆ 10.30ಗಂಟೆ ಸಮಯದಲ್ಲಿ ಹಲ್ಲೆ ಘಟನೆ ನಡೆದಿದೆ. ನಾನು ಮತ್ತು ನನ್ನ ಗಂಡ ವಿಜಯ ಅವರು ಲೈನ್‌ಮನೆಯಲ್ಲಿ ಇರುವಾಗ, ಎಸ್ಟೇಟ್ ಮಾಲೀಕರಾದ ಜಗದೀಶ ಮತ್ತು ಅವರ ಮಗ ತಿಲಕ್ ಮನೆಯ ಹತ್ತಿರ ಬಂದು ಗಲಾಟೆ ಮಾಡಿದ್ದಾರೆ” ಎಂದು ತಿಳಿಸಿದ್ದಾರೆ.

“ಹಣ ತರಲು ಹೋದವರು ಇನ್ನೂ ಬಂದಿಲ್ಲವೆಂದು ನಮಗೆ ಬಾಯಿಗೆ ಬಂದಂತೆ ಕೆಟ್ಟದಾಗಿ ಬೈಯ್ದಿದ್ದಾರೆ. ಮೊಬೈಲ್ ಕಿತ್ತುಕೊಂಡಿದ್ದಾರೆ. ನಾನು ಮೊಬೈಲ್ ಕೊಡುವುದಿಲ್ಲವೆಂದು ಹೇಳಿದಾಗ ಜಗದೀಶ ಗೌಡ ನನ್ನ ಕೆನ್ನೆಗೆ ಹೊಡೆದಿದ್ದಾರೆ. ಗಲಾಟೆ ಬಿಡಿಸಲು ಬಂದ ನನ್ನ ಗಂಡ ವಿಜಯ ಅವರಿಗೂ ಜಗದೀಶ ಮತ್ತು ತಿಲಕ್  ಹಲ್ಲೆ ನಡೆಸಿದ್ದಾರೆ. ಗಲಾಟೆಯನ್ನು ಬಿಡಿಸಲು ಬಂದ ರೂಪಾ ಮತ್ತು ಕವಿತಾ ಎಂಬರಿಗೂ ಬೈಯ್ದು ಹಲ್ಲೆ ನಡೆಸಿದ್ದಾರೆ” ಎಂದು ‘ನಾನುಗೌರಿ.ಕಾಂ’ ಜೊತೆ ಹಂಚಿಕೊಂಡಿದ್ದಾರೆ.

“ಘಟನೆಯ ನಂತರ ನಮ್ಮನ್ನು ಲೈನ್‌ಮನೆಯಲ್ಲಿ ಕೂಡಿ ಹಾಕಿದ್ದರು. ನನಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆಗಾಗಿ ಕಡಬಗೆರೆ ಖಾಸಗಿ ಆಸ್ಪತ್ರೆಗೆ ಜಗದೀಶ ರವರ ಜೀಪಿನಲ್ಲಿಯೇ ಕರೆದೊಯ್ಯಲಾಯಿತು. ನಾನು ಮೂಡಿಗೆರೆಗೆ ಹೋಗಿ ಆಸ್ಪತ್ರೆಯಲ್ಲಿ ತೋರಿಸಿ ನಂತರ ಅಕ್ಟೋಬರ್‌ 9ರಂದು ಮಧ್ಯಾಹ್ನ ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾಗಿದ್ದೆನು” ಎಂದು ಹೇಳಿದ್ದಾರೆ.

ಐಪಿಸಿ ಕಲಂ 504, 323, 342 ಸೇರಿದಂತೆ ವಿವಿಧ ಕಲಂಗಳು ಹಾಗೂ ಎಸ್‌ಸಿ ಎಸ್‌ಟಿ ಸಮುದಾಯಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಬಂಧಿಸಲಾಗುವುದು ಎಂದು ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಇವುಗಳನ್ನು ಓದಿರಿ: ಜಾತಿ ದೌರ್ಜನ್ಯ ಸಂಬಂಧಿತ ಸುದ್ದಿಗಳನ್ನು ‘ದಲಿತ್‌ ಫೈಲ್ಸ್‌’ ಕ್ಯಾಟಗರಿಯಲ್ಲಿ ‌ಓದಬಹುದು- ಕ್ಲಿಕ್‌ ಮಾಡಿರಿ

ಹಲ್ಲೆಗೊಳಗಾದ ಮಹಿಳೆಗೆ ಗರ್ಭಪಾತ

ಹಲ್ಲೆಗೊಳಗಾದ ಗರ್ಭಿಣಿ ಅರ್ಪಿತಾ ಅವರಿಗೆ ಗರ್ಭಪಾತವಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಜಗದೀಶ್‌ ಅವರು ಹೊಡೆದಿರುವುದೇ ಕಾರಣ ಎಂಬ ಆರೋಪವೂ ಕೇಳಿಬರುತ್ತಿದೆ.

ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದ ಬಳಿಕ ಎಸ್ಟೇಟ್‌ ಮಾಲೀಕ ಜಗದೀಶ್ ಮೇಲೆ ವಿವಿಧ ಆರೋಪಗಳು ಬರುತ್ತಿವೆ. “ಕೂಲಿ ಕಾರ್ಮಿಕ ದಲಿತ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಈ ಹಿಂದೆ ಜಗದೀಶ್‌ ಯತ್ನಿಸಿದ್ದ” ಎಂದು ಸಂತ್ರಸ್ತ ಮಹಿಳೆಯೊಬ್ಬರು ಕಣ್ಣೀರು ಹಾಕಿದ್ದಾರೆ. ಈ ಕುರಿತೂ ದೂರು ದಾಖಲಿಸಲು ದಲಿತ ಮುಖಂಡರು ಮುಂದಾಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read