ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ದೇಶದ ರೈತರು ನಡೆಸುತ್ತಿರುವ ರೈತ ಹೋರಾಟಕ್ಕೆ ವಿಶ್ವದಾದ್ಯಂತ ಬೆಂಬಲ ಹರಿದುಬಂದಿದೆ. ಈಗಲೂ ಬರುತ್ತಲೇ ಇದೆ. ಇದರ ಜೊತೆಗೆ ಆಂದೋಲನದ ಬಗ್ಗೆ ದೇಶದ ಜನರಿಗೆ ಮತ್ತಷ್ಟು ಅರಿವು ಮೂಡಿಸಲು ಯುವಕರ ತಂಡವೊಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸೈಕಲ್ ಜಾಥಾ ನಡೆಸಲು ಸಿದ್ದವಾಗಿದೆ.
ಪಶ್ಚಿಮ ಉತ್ತರಪ್ರದೇಶದ ಮತ್‌ನೌಲಿ ಗ್ರಾಮದ ಸಾಮಾಜಿಕ ಕಾರ್ಯಕರ್ತ ವಿಕಾಸ್ ಎನ್ನುವವರು ಈ ಸೈಕಲ್ ಜಾಥಕ್ಕೆ ಕರೆ ನೀಡಿದ್ದಾರೆ. ರೈತ ಹೋರಾಟದ ಬಗ್ಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ದೇಶದ ಹಳ್ಳಿ ಹಳ್ಳಿಗೂ ಹೋಗಿ ವಿವಾದಿತ ಕಾನೂನುಗಳ ಬಗ್ಗೆ, ರೈತ ಹೋರಾಟ, ಎಂಎಸ್‌ಪಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ತಂಡ ರೆಡಿಯಾಗಿದೆ.
ಮಾರ್ಚ್ 12 ರಂದು ಕನ್ಯಾಕುಮಾರಿಯಲ್ಲಿ ಈ ಜಾಥಕ್ಕೆ ಚಾಲನೆ ಸಿಗಲಿದೆ. ಸುಮಾರು ಐದು ತಿಂಗಳು ಈ ಜಾಥಾ ನಡೆಯಲಿದ್ದು, ದೇಶದ ಹಲವು ಭಾಗಗಳ ಜನರು ಇದರಲ್ಲಿ ಸೇರಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಬಿಜೆಪಿ ಸರ್ಕಾರದ ವೈಫಲ್ಯಗಳ ಪ್ರಚಾರ: 100 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನಿಂದ ’ಜನಧ್ವನಿ’ ಜಾಥಾ
ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಸೈಕಲ್ ಜಾಥದ ಸಂಯೋಜಕ ವಿಕಾಸ್, ’ರೈತ ಹೋರಾಟ ಆರಂಭದಿಂದ ನಾನು ರೈತರಿಗೆ ಬೆಂಬಲ ನೀಡಿದ್ದೇನೆ. ಸದ್ಯ ನಾನೀಗ ರೈತ ಪ್ರತಿಭಟನೆಯ ಟಿಕ್ರಿ ಗಡಿ ಭಾಗದಲ್ಲಿ ರೈತರೊಂದಿಗೆ ಹೋರಾಟ ನಡೆಸುತ್ತಿದ್ದೇನೆ. ಜನರಲ್ಲಿ ಈ ಹೋರಾಟದ ಬಗ್ಗೆ, ಎಂಎಸ್‌ಪಿ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಅದಕ್ಕೆ ಈ ಸೈಕಲ್ ಜಾಥಾ ಮಾಡಲಾಗುತ್ತಿದೆ’ ಎಂದರು.

’ಹೋರಾಟವನ್ನು ದೇಶದ ಒಂದೊಂದು ಊರು, ಹಳ್ಳಿ, ಮನೆ-ಮನೆಗೂ ತೆಗೆದುಕೊಂಡು ಹೋಗಬೇಕು. ಎಂಎಸ್‌ಪಿ ಕಾಯ್ದೆ ಬಗ್ಗೆ ಅತಿ ಹೆಚ್ಚು ಜಾಗೃತಿ ಮೂಡಿಸಬೇಕಾಗಿದೆ. ಮಾರ್ಚ್ 12 ರಂದು ಕನ್ಯಾಕುಮಾರಿಯಿಂದ ಜಾಥಾ ಆರಂಭವಾಗಲಿದೆ. ಈಗಾಗಲೇ 50 ಮಂದಿ ಜೊತೆಯಾಗಿದ್ದಾರೆ. ಆದರೆ ಜಾಥಾಕ್ಕೆ ಬರುವವರ ಸಂಖ್ಯೆ ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು. ಆಯಾ ರಾಜ್ಯದಲ್ಲಿ ಜನ ಸೇರಿಕೊಳ್ಳಬಹುದು. 5 ತಿಂಗಳಿಗಿಂತ ಹೆಚ್ಚು ಕಾಲ ಈ ಜಾಥಾ ನಡೆಯಲಿದೆ’ ಎಂದು ವಿಕಾಸ್ ಮಾಹಿತಿ ನೀಡಿದ್ದಾರೆ.
ಕಳೆದ ತಿಂಗಳು 5 ದಿನಗಳ ಕಾಲ ರೈತ ಹೋರಾಟದಲ್ಲಿ ಭಾಗಿಯಾಗಿ ರೈತರಿಗೆ ಬೆಂಬಲ ನೀಡಿದ್ದ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಂಚಾಲಕ ಸರೋವರ್ ಬೆಂಕಿಕೆರೆ ತಮ್ಮ ತಂಡದೊಂದಿಗೆ ಈ ಸೈಕಲ್ ಜಾಥಾದ ಭಾಗವಾಗಲಿದ್ದಾರೆ.

ಇದನ್ನೂ ಓದಿ: ಇದು ಇಡೀ ದೇಶದ ರೈತ ಹೋರಾಟ: ಟಿಕ್ರಿ ಗಡಿಯಲ್ಲಿ ದಕ್ಷಿಣ ಭಾರತದ ಕಾರ್ಯಕರ್ತರ ಘೋಷಣೆ
’ಮಾರ್ಚ್ 12 ರಂದು ನಾವು ಕನ್ಯಾಕುಮಾರಿಗೆ ಜಾಥಾ ಆರಂಭದ ದಿನವೇ ಅವರನ್ನು ಸೇರಿಕೊಳ್ಳಲಿದ್ದೇವೆ. ಸೈಕಲ್ ಮೂಲಕ ಅಲ್ಲಿಗೆ ತಲುಪುತ್ತೇವೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮಹಾಪಂಚಾಯತ್ ನಡೆಯುವ ದಿನಗಳಂದು ಅಲ್ಲಿಗೆ ಸೇರಿಕೊಳ್ಳುವ ಪ್ರಯತ್ನ ಮಾಡಲಾಗುತ್ತದೆ. ಕನ್ಯಾಕುಮಾರಿಯಿಂದ ಕರ್ನಾಟಕಕ್ಕೆ ಬರುವವರೆಗೂ ರ್‍ಯಾಲಿಯ ಭಾಗವಾಗಿ ಅವರ ಜೊತೆಗೆ ಇರುತ್ತೇವೆ. ರಾಜ್ಯದಲ್ಲಿ ನಡೆಯುವ ಮಹಾ ಪಂಚಾಯತ್‌ನಲ್ಲಿ, ಹಳ್ಳಿ ಹಳ್ಳಿಗಳಿಗೆ ಜಾಥಾದ ಜೊತೆಗೆ ಹೋಗಲಿದ್ದೇವೆ. ಸೈಕಲ್ ಜಾಥಾ ರಾಜ್ಯಕ್ಕೆ ಬಂದ ದಿನ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ನಾನುಗೌರಿ.ಕಾಂಗೆ ಸರೋವರ ಬೆಂಕಿಕೆರೆ ಮಾಹಿತಿ ನೀಡಿದ್ದಾರೆ.
ಈ ಹಿಂದೆ ರಾಜ್ಯದಲ್ಲಿ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಾತ್ಮಕ ಕೃಷಿ ಕಾಯ್ದೆಗಳ ಕುರಿತು ಕರ್ನಾಟಕದ ರೈತರಿಗೆ ಮನವರಿಕೆ ಮಾಡಿಕೊಡಲು ದೇಶಪ್ರೇಮಿ ಯುವಾಂದೋಲನ ಮತ್ತು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸದಸ್ಯರು ಸೈಕಲ್ ಜಾಥಾ ನಡೆಸಿದ್ದರು. ‘ಹಳ್ಳಿಗಳಿಗೆ ಹೋಗೋಣ’ ಹೆಸರಿನಲ್ಲಿ ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ 8 ಜಿಲ್ಲೆಗಳಲ್ಲಿ ಸೈಕಲ್ ಜಾಥಾ ನಡೆದಿತ್ತು.
ಇದನ್ನೂ ಓದಿ: ಬಿಸಿಲಿಗೂ ಬಗ್ಗುವುದಿಲ್ಲ: ಹೋರಾಟನಿರತ ರೈತರ ಟ್ಯ್ರಾಲಿ, ಟೆಂಟ್‌ಗಳಿಗೆ ಬಂದ ಎಸಿ, ಕೂಲರ್‌ಗಳು!


