ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧ ಟೀಕಾಸ್ತ್ರವನ್ನು ಪ್ರಯೋಗಿಸಿದ ಬೆನ್ನಲ್ಲೇ ಬಿಜೆಪಿ ಕೂಡ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸುತ್ತಿದ್ದು, ಅವರನ್ನು ಕಾಂಗ್ರೆಸ್ ’ವಿದೂಷಕ’ ಎಂದು ಕರೆದಿದೆ.
ಸಿದ್ದರಾಮಯ್ಯ ಅವರು ಮಾಡಿದ ಪ್ರತಿ ಪೋಸ್ಟ್‌ಗಳಿಗೂ ಉತ್ತರ ನೀಡುತ್ತಾ ಸರಣಿ ಟ್ವೀಟ್‌ಗಳನ್ನು BJP Karnataka ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಕಾಂಗ್ರೆಸ್ ಪಕ್ಷದ ಇಬ್ಬರು ನಾಯಕರು ಒಂದೊಂದು ಹಾದಿ ಹಿಡಿದಿದ್ದಾರೆ. ಶಿರಾದಲ್ಲಿ ತನ್ನ ಅಭ್ಯರ್ಥಿ ಗೆಲ್ಲಬೇಕು ಎಂದು ಒಬ್ಬರು ಸಾಹಸ ಪಡುತ್ತಿದ್ದರೆ, ರಾಜರಾಜೇಶ್ವರಿ ನಗರದಲ್ಲಿ ತನ್ನ ಅಭ್ಯರ್ಥಿ ಗೆಲ್ಲಬೇಕು ಎಂದು ಮತ್ತೊಬ್ಬರು ಹರಸಾಹಸ ಪಡುತ್ತಿದ್ದಾರೆ ಎಂದು ನಳೀನ್ ಕುಮಾರ್ ಕಟೀಲ್ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ವಿರುದ್ಧ ಮಾತನಾಡಿದ್ದರು.
ಉಪ ಚುನಾವಣೆ ಮುಗಿದ ಮೇಲೆ ಇಬ್ಬರು ತೆರೆಮರೆಗೆ ಸರಿಯಲಿದ್ದಾರೆ ಎಂಬ ಭವಿಷ್ಯ ನುಡಿದು, ಹುಲಿಯಾ, ಬಂಡೆ ಎಂಬ ಪದಗಳ ಬಗ್ಗೆ ವ್ಯಂಗ್ಯ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದರು.
ಇದನ್ನೂ ಓದಿ: ಮಂಗಳೂರಿನಲ್ಲಿ ಬೀದಿ ಅಲೆಯುತ್ತಿದ್ದವ ಬಿಜೆಪಿ ರಾಜ್ಯಾಧ್ಯಕ್ಷ- ಸಿದ್ದರಾಮಯ್ಯ ವ್ಯಂಗ್ಯ
ಕಟೀಲ್ ಅವರನ್ನು ಸಿದ್ದರಾಮಯ್ಯ, ಕಾಡು ಮನುಷ್ಯ, ನಾಲಾಯಕ್, ಬೀದಿ ಅಲೆಯುತ್ತಿದ್ದವ, ಎಲುಬಿಲ್ಲದ ನಾಲಿಗೆ ಮನುಷ್ಯ ಎಂದು ತಮ್ಮ ಟ್ವೀಟ್‌ಗಳಲ್ಲಿ ತಿವಿದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, “ಮಾನ್ಯ ಸಿದ್ದರಾಮಯ್ಯ, ನೀವು ಬಳಸುತ್ತಿರುವ ಪದಗಳೇ ಯಾರು ʼಕಾಡು ಮನುಷ್ಯʼ ಎಂಬುದನ್ನು ಸಾಬೀತು ಪಡಿಸುತ್ತಿದೆ. ಕಾಡುಮನುಷ್ಯ, ನಾಲಾಯಕ್, ಬೀದಿ ಅಲೆಯುತ್ತಿದ್ದವ, ಎಲುಬಿಲ್ಲದವ ಎಂಬ ನಿಮ್ಮ ಮಾತುಗಳೇ ಕಾಂಗ್ರೆಸ್ ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ನೀವು ಕರ್ನಾಟಕ ಕಾಂಗ್ರೆಸ್‌ನ ವಿದೂಷಕ ಇದ್ದ ಹಾಗೆ ಆಗಿದೆ!” ಎಂದು ಕಿಡಿಕಾರಿದೆ.
ಮಾನ್ಯ @siddaramaiah,
ನೀವು ಬಳಸುತ್ತಿರುವ ಪದಗಳೇ ಯಾರು ʼಕಾಡು ಮನುಷ್ಯʼ ಎಂಬುದನ್ನು ಸಾಬೀತು ಪಡಿಸುತ್ತಿದೆ.ಕಾಡುಮನುಷ್ಯ, ನಾಲಾಯಕ್, ಬೀದಿ ಅಲೆಯುತ್ತಿದ್ದವ, ಎಲುಬಿಲ್ಲದವ ಎಂಬ ನಿಮ್ಮ ಮಾತುಗಳೇ @INCIndia ಸಂಸ್ಕೃತಿಯನ್ನು ಬಿಂಬಿಸುತ್ತಿದೆ.
ನೀವು @INCKarnataka ವಿದೂಷಕ ಇದ್ದ ಹಾಗೆ ಹಾಗಿದೆ!#CONgressComedianSiddaramaiah https://t.co/XNArdZ37Cs
— BJP Karnataka (@BJP4Karnataka) October 22, 2020
ಇನ್ನೊಂದು ಟ್ವೀಟ್‌ನಲ್ಲಿ, “ಸಿದ್ದರಾಮಯ್ಯನವರೇ, ಕಾಂಗ್ರೆಸ್ ಸೇರುವುದುಕ್ಕೂ ಮುನ್ನ ಮೊದಲು ಜೆಡಿಎಸ್‌ನಲ್ಲಿ ಸಕಲ ಅಧಿಕಾರ ಭಾಗ್ಯಗಳನ್ನು ಅನುಭವಿಸಿ, ಅವರಿಗೇ ನಾಮ ಹಾಕಿದ ಮಹಾನುಭಾವರು ನೀವೇ ಅಲ್ಲವೇ? ಬಿಜೆಪಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಿದರೆ ಉನ್ನತ ಸ್ಥಾನ ಸಿಗುವುದೆಂದು ನೀವೇ ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು” ಎಂದಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಪಕ್ಷದ ನಾಯಕರೇ ಸಂಚು ರೂಪಿಸುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, “ಚುನಾವಣೆಯಲ್ಲಿ ಸ್ವಾರ್ಥಕ್ಕಾಗಿ ಪರಮೇಶ್ವರರನ್ನೇ ಸೋಲಿಸಿದ ಕುತಂತ್ರಿ ನೀವಲ್ಲವೇ? ಈ ಹಿಂದಿನ ಉಪಚುನಾವಣೆಯಲ್ಲಿ ನಳೀನ್ ಕುಮಾರ್ ಕಟೀಲ್ ಅವರ ನಾಯಕತ್ವದಲ್ಲಿ 15 ಕ್ಷೇತ್ರಗಳಲ್ಲಿ 12 ಸ್ಥಾನ ಗೆದ್ದು ಬಿ.ಎಸ್.ಯಡಿಯೂರಪ್ಪ ಅವರ ಗದ್ದುಗೆ ಬಲಪಡಿಸಿದ್ದೇವೆ. ಈ ಉಪಚುನಾವಣೆಯಲ್ಲೂ ಬಿಜೆಪಿ ಗೆಲ್ಲಲಿದೆ” ಎಂದು ತಿರುಗೇಟು ನೀಡಿದೆ.
ಇದನ್ನೂ ಓದಿ: ಬಿಹಾರ: ನಿಯಮಗಳ ಉಲ್ಲಂಘನೆ, ಪಕ್ಷಗಳಿಗೆ ಚುನಾವಣಾ ಆಯೋಗ ಎಚ್ಚರಿಕೆ
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನಾಲಗೆಯಲ್ಲಿ ಮಾತ್ರ ಅಲ್ಲ, ಬೆನ್ನಿನಲ್ಲಿಯೂ ಎಲುಬಿಲ್ಲ. ಈ ಬೆನ್ನೆಲುಬಿಲ್ಲದ ಅಧ್ಯಕ್ಷನಿಗೆ ತಮ್ಮದೇ ಪಕ್ಷದ ಶಾಸಕರು ಪ್ರತಿದಿನ ತಮ್ಮದೇ ಮುಖ್ಯಮಂತ್ರಿ ವಿರುದ್ಧ ಟೀಕಾಪ್ರಹಾರ ಮಾಡುತ್ತಿದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳುವ ತಾಕತ್ ಇಲ್ಲ. ನಮ್ಮ ಪಕ್ಷದ ಬಗ್ಗೆ ಕೂಗಾಡ್ತಾರೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
ಇದಕ್ಕೆ ಕರ್ನಾಟಕ ಬಿಜೆಪಿ, ನಳೀನ್ ಕುಮಾರ್ ಕಟೀಲ್ ಅವರು 2019 ರಲ್ಲಿ 2 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದರು. ಜನತೆ ನಿಮ್ಮ ಬೆನ್ನುಮೂಳೆ ಮುರಿದ ಇತಿಹಾಸ ನೆನಪಿಸಿಕೊಳ್ಳಿ, ಗೆದ್ದದ್ದು ಕೇವಲ 1,696 ಮತಗಳಿಂದ! ಸ್ವಲ್ಪ ವ್ಯತ್ಯಾಸ ಆಗಿದ್ದರೂ ನೀವು ಕಾಡುಮನುಷ್ಯರಂತೆ ಜೀವನ ಮಾಡಬೇಕಿತ್ತು!” ಎಂದು ಟಾಂಗ್ ನೀಡಿದೆ.
ಕಾಂಗ್ರೆಸ್, ಬಿಜೆಪಿ ಜಗಳ ತಾರಕಕ್ಕೆ ಏರುತ್ತಿದ್ದು, ಇವುಗಳ ನಡುವೆ ಜೆಡಿಎಸ್ ಲಾಭ ಪಡೆಯುವ ನಿರೀಕ್ಷೆಯಿದೆ. ಇಷ್ಟು ದಿನ ಕಾಂಗ್ರೆಸ್-ಬಿಜೆಪಿ ಪರಸ್ಪರ ಕೆಸರೆರಚಾಟ ನಡೆಸುತ್ತಿದ್ದವು. ಪಕ್ಷಗಳ ನಡುವಿನ ಜಗಳ ಏನೇ ಇದ್ದರೂ ಸಹ ಉಪ ಚುನಾವಣೆಯಲ್ಲಿ ಮತದಾರನ ತೀರ್ಪು ಅಂತಿಮವಾಗಿರುತ್ತದೆ.


