Homeಅಂಕಣಗಳುಅಪ್ಪನ ಆ ಭಾಷಣ ಮತ್ತು ಜಾಗೃತ ಸಾಹಿತ್ಯ ಸಮಾವೇಶ

ಅಪ್ಪನ ಆ ಭಾಷಣ ಮತ್ತು ಜಾಗೃತ ಸಾಹಿತ್ಯ ಸಮಾವೇಶ

ಓದಿರಿ ಗೌರಿ ಕಣ್ಣೋಟ

- Advertisement -

|ಗೌರಿ ಲಂಕೇಶ್ |

18 ಫೆಬ್ರವರಿ, 2009 (‘ಕಂಡಹಾಗೆ’ ಸಂಪಾದಕೀಯದಿಂದ)

1990ರಲ್ಲಿ ಅಪ್ಪ ಬರೆದಿದ್ದ ‘ಸಾಹಿತ್ಯ ಪರಿಷತ್ತು ಮತ್ತು ಸಾಹಿತಿಗಳು’ ಎಂಬ ಲೇಖನದಲ್ಲಿ ಸಾಹಿತ್ಯ ಪರಿಷತ್ತಿನ ಆರಂಭಿಕ ಆಶಯಗಳನ್ನು ಮೆಚ್ಚಿದ್ದರೂ ಆನಂತರ ಅದರಲ್ಲಿ ನಡೆದ ಸೆಣಸಾಟ, ಹೊಡೆದಾಟ, ಜಾತಿ ರಾಜಕೀಯ ಇತ್ಯಾದಿಗಳ ಬಗ್ಗೆ ಬೇಸರಗೊಂಡಿದ್ದರ ಬಗ್ಗೆ ಹೇಳುತ್ತಾರೆ.

“ಸಾಹಿತ್ಯ ಪರಿಷತ್ತು ಮತ್ತು ಸಮ್ಮೇಳನಗಳಲ್ಲಿ ಆದ ಜಗಳಗಳು, ವಿವಾದ, ಹಗರಣಗಳು ಇವೆಲ್ಲವನ್ನು ನೋಡುತ್ತಿದ್ದ ಸೂಕ್ಷ್ಮ ಮನಸ್ಸಿನ ಸಾಹಿತಿಗಳಲ್ಲಿ ಅಸಹ್ಯ ಹುಟ್ಟಿಸಿದವು. ಸಾಹಿತಿಗಳೆಂದರೆ ಲಜ್ಜೆಯ, ಘನತೆಯ ವ್ಯಕ್ತಿಗಳು ಎಂದು ತಿಳಿದಿದ್ದವರಿಗೆ ದಿಗ್ಭ್ರಮೆಯಾಯಿತು. ಸಾಹಿತ್ಯ ಮೂಲಭೂತವಾಗಿ ನಿಷ್ಪಕ್ಷಪಾತವಾದುದು ಎಂದು ತಿಳಿದವರಿಗೆ ಸಾಹಿತ್ಯದ ಇತರೆ ಮುಖಗಳು ಕಾಣತೊಡಗಿದವು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜಕೀಯ ಮುಖಂಡನಂತೆ ಮೆರೆಯತೊಡಗಿದರೆ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಉತ್ಸವ ಮೂರ್ತಿಯಾಗಿ ವಿಜೃಂಭಿಸತೊಡಗಿದ… ರಾಜಕೀಯ ಚುನಾವಣೆಯ ಕೊಳಕುತನವನ್ನೆಲ್ಲ ಮೀರಿಸತೊಡಗಿದ ಪರಿಷತ್ತು ಎಲ್ಲರ ತಾತ್ಸಾರಕ್ಕೆ ಗುರಿಯಾಗತೊಡಗಿತು”. ಎಂದು ಅಪ್ಪ ಅದೇ ಲೇಖನದಲ್ಲಿ ಬರೆದಿದ್ದಾರೆ.

ಕನ್ನಡಿಗರಲ್ಲಿ ಯಾವುದೇ ಸ್ಫೂರ್ತಿ, ಭರವಸೆ ಮೂಡಿಸಲಾಗದಂತಹ ಅವಸ್ಥೆಯ ಮಟ್ಟಕ್ಕೆ ಪರಿಷತ್ ಇಳಿದಾಗ ಅಪ್ಪ ಮತ್ತು ಇತರ ಸಾಹಿತಿಗಳಿಗೆ ಉಳಿದಿದ್ದ ಮಾರ್ಗ ‘ಜಾಗೃತ ಸಾಹಿತ್ಯ ಸಮಾವೇಶ’ವನ್ನು ಪ್ರತ್ಯೇಕವಾಗಿ ಏರ್ಪಡಿಸುವುದು. ಫೆಬ್ರವರಿ 16, 1990ರಲ್ಲಿ ನಡೆದ ಈ ‘ಜಾಗೃತ ಸಾಹಿತ್ಯ ಸಮಾವೇಶ’ವನ್ನು ಅಪ್ಪ ಉದ್ಘಾಟಿಸಿ ಮಾಡಿದ ಭಾಷಣದ ತುಣುಕು ಹೀಗಿದೆ…

“ರಾಜ್ಯಭಾಷೆ ಬಹುಸಂಖ್ಯಾತ ಜನರ ಮಾತೃಭಾಷೆ. ಆಡಳಿತ ಭಾಷೆ, ವ್ಯವಹಾರ ಭಾಷೆ-ಅದು ನಮ್ಮಲ್ಲಿ ಕನ್ನಡ: ಹಾಗೆಯೇ ಬಳ್ಳಾರಿಯ ಒಂದು ಹಳ್ಳಿಯೊಂದರಲ್ಲಿ ವಾಸಿಸುವ ತೆಲುಗರ ಆಡಳಿತ ಭಾಷೆ, ವ್ಯವಹಾರ ಭಾಷೆ ಕನ್ನಡ: ಅಂತೆಯೇ ಅವರೆಲ್ಲರ ಮಾತೃಭಾಷೆಯನ್ನು ನಾಶಮಾಡುವುದು ಕರ್ನಾಟಕ ಆಡಳಿತದ ಉದ್ದೇಶವಾಗಕೂಡದು.

ಒಂದು ರಾಜ್ಯ ಪೂರ್ಣ ಸಾಕ್ಷರತೆಯತ್ತ ಸಾಗಿದೆ ಎಂದರೆ ಅರ್ಥ, ಇಲ್ಲಿಯ ಎಲ್ಲ, ವರ್ಗ, ಜಾತಿಯ ಜನರಿಗೆ ಹೊಸತೊಂದು ಶಕ್ತಿ, ಹೊಸತೊಂದು ಚೈತನ್ಯ ಬಂದಿದೆ ಎಂಬುದು: ಹಾಗೆಯೇ ಮುಂದುವರಿದ ಜಾತಿಗಳ ಸ್ವತ್ತಾಗಿದ್ದ ನೆನಪನ್ನು ದಾಖಲಿಸುವ, ಅನುಭವವನ್ನು ನಮೂದಿಸುವ, ಗ್ರಂಥಗಳನ್ನು ರಚಿಸುವ ಬರವಣಿಗೆಯ ಸವಲತ್ತು ದಲಿತರಿಗೆ, ಹಿಂದುಳಿದವರಿಗೆ ಕೂಡ ದೊರೆತಿದೆ ಎಂಬುದು; ಹಾಗೆಯೆ ಲಕ್ಷಾಂತರ ವರ್ಷಗಳಿಂದ ನೋವು, ಅವಮಾನ ಅನುಭವಿಸಿದ ಜನತೆಗೆ ಆತ್ಮವಿಶ್ವಾಸ, ಆತ್ಮಗೌರವ ದೊರೆತು ಹಲವಾರು ಅರ್ಥಪೂರ್ಣ ಅನುಭವಸ್ಥರುಗಳೊಂದಿಗೆ ಸಾಂಸ್ಕೃತಿಕ ರಾಜಕೀಯ ಕ್ರಿಯೆಯಲ್ಲಿ ಭಾಗವಹಿಸುವುದು ಸಾಧ್ಯವಾಗಿದೆ ಎಂಬುದು.

ಒಂದು ಅನಕ್ಷರಸ್ಥ ದಲಿತ ಕುಟುಂಬ, ಹಿಂದುಳಿದವರ ಕುಟುಂಬ ಈ ವಲಯಗಳಲ್ಲಿ ಅನುಭವಿಸುವ ದಿಗ್ಭ್ರಮೆ ಅವರಿಗೆ ಮಾತ್ರ ಗೊತ್ತಾಗುವಂಥದು. ಮೀಸಲಾತಿ ವಿರೋಧಿಸುವ, ಇವರ ಕಷ್ಟಗಳನ್ನು ಅರ್ಥಮಾಡಿಕೊಳ್ಳದ ಜನರಿಂದಲೇ ಈ ಬಗೆಯ ದಿಗ್ಭ್ರಮೆ ಹುಟ್ಟಿದೆ ಮತ್ತು ಈ ಜನರಿಂದಲೇ ಇವತ್ತು ಏನನ್ನೂ ಮಾಡಲಾರದ ಸ್ಥಿತಿಯನ್ನು ಸರ್ಕಾರಗಳು ತಲುಪಿವೆ. ಸರ್ಕಾರ, ಸಾಂಸ್ಕøತಿಕ ವ್ಯವಸ್ಥೆ ನೇರಗೊಳ್ಳದೆ ಇಲ್ಲಿ ಅಸಹಾಯಕರಿಗೆ ನೆಮ್ಮದಿ, ಕನ್ನಡದ ಸಂಪೂರ್ಣ ವಿಕಾಸ ಕಷ್ಟಸಾಧ್ಯ.

ಈ ಸಮಾವೇಶ ಐತಿಹಾಸಿಕ ಎಂದು ನಾನಂತೂ ತಿಳಿದಿದ್ದೇನೆ. ನಿಜಕ್ಕೂ ಕ್ರಿಯಾಶೀಲ ಸಾಹಿತಿಗಳಾಗಿರುವ, ಸಂಶೋಧಕರಾಗಿರುವ ಎಲ್ಲ ಜಾತಿ ಹಿನ್ನೆಲೆಯ ಜನ ಒಂದೆಡೆ ಸೇರಿ ಚರ್ಚಿಸುವುದು, ಕೃತಿಗಳ, ಸಂಶೋಧನೆಯ ಬೆಲೆ ಕಟ್ಟುವುದು ಅಗತ್ಯವಾಗಿದೆ. ಹಿಂದುಳಿದವರು, ದಲಿತರು ತಮ್ಮ ತಮ್ಮ ಕೃತಿಗಳನ್ನು ತಮ್ಮ ತಮ್ಮ ಮಾನದಂಡಕ್ಕೆ ತಕ್ಕಂತೆ ನಿರ್ಧರಿಸುವುದಕ್ಕೆ ಬದಲು ತಮ್ಮಿಂದ ಹೊರತಾದ ಮಾಪನದ ಸವಾಲು ಎತ್ತಿಕೊಳ್ಳಬೇಕಾಗಿದೆ. ಅಂತೆಯೇ ಈ ಸಮಾಜಕ್ಕೆ ಪರಂಪರಾಗತವಾಗಿ ಬಂದಿರುವ ಅಂಧತ್ವವನ್ನು ಎಲ್ಲರೂ ಗಮನಿಸಬೇಕಾಗಿದೆ. ಪರಕೀಯರ ಆಕ್ರಮಣ, ದಬ್ಬಾಳಿಕೆಯಿಂದ ತತ್ತಿರಿಸಿಹೋದ ಜನರು ಜಾತೀಯತೆಯ ಸಣ್ಣಪುಟ್ಟ ಗುಂಪಿನ ರಕ್ಷಣೆಯಲ್ಲಿ, ಇದ್ದುದ್ದನ್ನು ಹೇಗಾದರೂ ಮಾಡಿ ಕಾಪಾಡಿಕೊಳ್ಳಲು ಯತ್ನಿಸಿದರು. ಹೊಸಬರ ಅಕ್ಷರಾಭ್ಯಾಸ, ಸಂವೇದನೆಯ ವಿಚಾರವೇ ಅವರನ್ನು ಬೆಚ್ಚಿಸಿತು. ಇದರಿಂದ ಸಾಹಿತ್ಯ, ಛಂದಸ್ಸು, ವ್ಯಾಕರಣಗಳೆಲ್ಲ ಜೀವಂತ ಅನುಭವದೊಂದಿಗಿನ ಪ್ರಯೋಗಗಳಾಗದೆ ಜಡ ಶಾಸ್ತ್ರಗಳಾದವು. ಸಾಹಿತ್ಯವನ್ನು ನೋಡುವ ಕಣ್ಣು ಕುರುಡಾದವು. ಜಾತಿಯ ವಲಯವನ್ನು ಮೀರಿದ ಸತ್ಯ ಇರಬಹುದೆಂಬುದು ಅವರಿಗೆ ತಿಳಿಯಲೇ ಇಲ್ಲ. ಈ ಕಾರಣಕ್ಕಾಗಿಯೇ ದಲಿತರಿಗೆ, ಹಿಂದುಳಿದವರಿಗೆ ಅವರ ಸದ್ಯದ ಅನ್ನಿಸಿಕೆಯನ್ನು ಮೀರಿದ ಮಾಪನ, ಮೌಲ್ಯ ಇರುವುದು ಗೊತ್ತಾಗಬೇಕಾಗಿರುವಂತೆಯೇ ಪರಂಪರಾಗತ ಅನುಭವಗಳ ಕುರುಡರೂ ತಮ್ಮ ಕಣ್ಣು ತೆರೆದು ತಮ್ಮಿಂದ ಹೊರಗಿರುವ ಮಾಪನವನ್ನು ಗಮನಿಸಬೇಕಾಗಿದೆ. ಅರ್ಜುನ, ಏಕಲವ್ಯರ ಪ್ರತಿಭೆ ಈ ಸತ್ಯದೆದುರು ಅರಳಬೇಕಾಗಿದೆ.

ಸಾಹಿತಿ ವಿಚಿತ್ರ ಸಾತಂತ್ರ್ಯ ಪ್ರೇಮಿ. ರಾಜಕೀಯ ಹಂಗುತೊರೆದ ನಿಷ್ಠುರ. ಇಲ್ಲಿ ಕೂಡ ಸಾಹಿತಿಯ ದಿಟ್ಟತನ, ನಿಷ್ಠುರತೆಯನ್ನು ಗಮನಿಸುತ್ತಾ ನಾವು ಆತನ ಅಸಹಾಯಕತೆಯನ್ನು ಮರೆಯದಿರೋಣ. ಸಾಹಿತಿ ಮತ್ತು ಸಹೃದಯನ, ಸಾಹಿತಿ ಮತ್ತು ಸಂಶೋಧಕನ, ಸಾಹಿತಿ ಮತ್ತು ಓದುಗನ ಸಂಬಂಧ ಮುಖ್ಯವಾದುದ್ದು. ಸಾಹಿತಿಗೆ ನಿಜವಾದ ಕೃತಕೃತ್ಮತೆ ದೊರೆಯುವುದು ಆತ ಈ ಸೇತುವೆಗಳನ್ನು ಕಂಡುಕೊಂಡಾಗ. ತನ್ನ ಅಂತರಾಳದಲ್ಲಿ ಸಲ್ಲುವ ಆತ ಸಹೃದಯನ ಆಂತರ್ಯದಲ್ಲಿ ಸಲ್ಲುವಂತಾದಾಗ. ಆದ್ದರಿಂದಲೇ ಈ ಸಾಹಿತ್ಯ ಸಮಾವೇಶ ರಾಜಕೀಯ, ಸಾಂಸ್ಕೃತಿಕ, ಆರ್ಥಿಕ ವಿಷಯಗಳನ್ನೆಲ್ಲ ಒಳಗೊಂಡು ಸಾಹಿತ್ಯದಲ್ಲಿನ ವರ್ಣ, ವರ್ಗವನ್ನೆಲ್ಲ ಧ್ಯಾನಿಸುವಂತಾಗಬೇಕು. ಇಲ್ಲಿಯ ಚರ್ಚೆ ಮತ್ತು ವಾದ ಮೈಲುಗಟ್ಟಲೆ ಬಾಹ್ಯವನ್ನು ಕ್ರಮಿಸುವಾಗಲೇ ಸಾಹಿತಿಯ ಪುಟ್ಟ, ಮನೋಹರ, ವ್ಯಸನಗಳ, ನೋವುಗಳ ಜಗತ್ತನ್ನೂ ನೋಡಬೇಕು. ಆಗಲೇ ಕನ್ನಡ ಸಾಹಿತ್ಯ ಕನ್ನಡ ಭಾಷೆಗೆ ಅಮೂಲ್ಯ ಕೊಡುಗೆ ನೀಡುವ ಶಕ್ತಿ ಪಡೆಯುತ್ತದೆ: ವ್ಯಾಕರಣದ ಬದ್ಧತೆ ಮತ್ತು ಅನುಭವದ ಉಜ್ವಲತೆ ನಮ್ಮದಾಗುತ್ತದೆ. ಎಲ್ಲ ನಿರ್ಜೀವ ಸಂಸ್ಥೆಗಳ ವಿರುದ್ಧ ಸಾಹಿತಿ ಮತ್ತು ಸಾಹಿತ್ಯ ಕೃತಿಗಳ ಸೂಕ್ಷ್ಮಜ್ಞ ಪ್ರತಿಭಟನೆಯಾಗುತ್ತದೆ”.

ಅಪ್ಪ ಈ ಆಶಯಗಳನ್ನು ವ್ಯಕ್ತಪಡಿಸಿ ಹತ್ತಿರತ್ತಿರ ಎರಡು ದಶಕಗಳಾಗಿದ್ದರೂ ಪರಿಸ್ಥಿತಿ ಉದ್ಧಾರವಾಗುವ ಬದಲು ಇನ್ನಷ್ಟು ಕೆಟ್ಟಿದೆ, ಅದು ನಿರುತ್ಸಾಹ ತರುವ ಸಂಗತಿ.

ಇದನ್ನು ಓದಿರಿ ಗೌರಿ ಕಣ್ಣೋಟ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್‌’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ

ಕೋಮು ಪ್ರಚೋದನೆ ಮಾಡಿರುವ ರಿಷಿ ಕುಮಾರ ಸ್ವಾಮೀಜಿ (ಕಾಳಿ ಸ್ವಾಮೀಜಿ) ಈಗ ಸುದ್ದಿಯಲ್ಲಿದ್ದಾರೆ. ಮಸೀದಿ ಒಡೆಯಬೇಕೆಂದು ಕರೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವಬೇಕೆಂದು ಕಾಳಿ...
Wordpress Social Share Plugin powered by Ultimatelysocial