ಮಣಿಪುರದಲ್ಲಿ ಎರಡನೇ ಮತ್ತು ಕೊನೆಯ ಹಂತದ ವಿಧಾನಸಭಾ ಚುನಾವಣೆ ಇಂದು (ಶನಿವಾರ) ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದು, ಈ ಕೊನೆಯ ಹಂತದಲ್ಲಿ 6 ಜಿಲ್ಲೆಗಳ 22 ವಿಧಾನಸಭಾ ಕ್ಷೇತ್ರಗಳಲ್ಲಿ 92 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತೌಬಲ್, ಚಾಂಡೆಲ್, ಉಖ್ರುಲ್, ಸೇನಾಪತಿ, ತಮೆಂಗ್ಲಾಂಗ್ ಮತ್ತು ಜಿರಿಬಾಮ್ ಜಿಲ್ಲೆಗಳಲ್ಲಿ ಈ ಹಂತದಲ್ಲಿ ಒಟ್ಟು 8.38 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ಆಡಳಿತಾರೂಢ ಬಿಜೆಪಿ ಕಠಿಣ ಸವಾಲು ಎದುರಿಸುತ್ತಿರುವ ತೌಬಲ್ ಜಿಲ್ಲೆ ಮತ್ತು ನಾಗಾ ಪ್ರಾಬಲ್ಯದ ಗುಡ್ಡಗಾಡು ಪ್ರದೇಶಗಳಲ್ಲಿಯೂ ಮತದಾನ ನಡೆಯಲಿದೆ. ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ.
ಕೊರೊನಾ ಸುರಕ್ಷತಾ ಮಾರ್ಗಸೂಚಿಗಳನ್ನು ಒಳಗೊಂಡಿರುವ 1,247 ಮತಗಟ್ಟೆಗಳಲ್ಲಿ ಮತದಾನ ನಡೆಸಲು ಎಲ್ಲಾ ವ್ಯವಸ್ಥೆಗಳು ಜಾರಿಯಲ್ಲಿವೆ ಎಂದು ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ರಾಜೇಶ್ ಅಗರ್ವಾಲ್ ಶುಕ್ರವಾರ ತಿಳಿಸಿದ್ದರು.
ಇದನ್ನೂ ಓದಿ: ‘ನನ್ನನ್ನು ಕ್ಷಮಿಸಿ’: ವೇದಿಕೆ ಮೇಲೆಯೆ ಕಿವಿ ಹಿಡಿದು ‘ಬಸ್ಕಿ’ ಹೊಡೆದ ಯುಪಿ ಬಿಜೆಪಿ ಶಾಸಕ ಭೂಪೇಶ್ ಚೌಬೆ
ಬಿಜೆಪಿ 22 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ (18), ನ್ಯಾಷನಲ್ ಪೀಪಲ್ಸ್ ಪಾರ್ಟಿ (11), ಜನತಾ ದಳ (ಯುನೈಟೆಡ್) ಮತ್ತು ನಾಗಾ ಪೀಪಲ್ಸ್ ಫ್ರಂಟ್‌ನ ತಲಾ 10 ಅಭ್ಯರ್ಥಿಗಳು ಸೇರಿದಂತೆ 92 ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಶನಿವಾರ ನಿರ್ಧಾರವಾಗಲಿದೆ.
#ManipurElections2022 | People queue up to cast votes at a polling station in Thoubal district.
"Unemployment is the main issue. We're voting for more opportunities," said young voters.
(ANI) pic.twitter.com/VuQpRhc0wI
— NDTV (@ndtv) March 5, 2022
ಬೆಳಗ್ಗೆ 9 ಗಂಟೆಯವರೆಗೆ ಶೇಕಡಾ 11.40 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಒಕ್ರಾಮ್ ಇಬೋಬಿ ಸಿಂಗ್ ಅವರು ತೌಬಲ್‌ನ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ. ಒಕ್ರಾಮ್ ಇಬೋಬಿ ಸಿಂಗ್ ತೌಬಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಎಎನ್‌ಐ ಜೊತೆ ಮಾತನಾಡಿರುವ ಅವರು, ಈ ಬಾರಿ ತೌಬಲ್‌ನಲ್ಲಿ ನಾವು 10 ರಲ್ಲಿ 9 ಸ್ಥಾನಗಳನ್ನು ಗೆಲ್ಲುತ್ತೇವೆ. ಮಣಿಪುರದಲ್ಲಿ ಸಂಪೂರ್ಣ ಬಹುಮತದಿಂದ ಗೆಲ್ಲಲಿದ್ದೇವೆ ಎಂದು ನನಗೆ ವಿಶ್ವಾಸವಿದೆ ಎಂದಿದ್ದಾರೆ.
2017 ರ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 28 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿ 21 ಸ್ಥಾನಗಳನ್ನು ಪಡೆದಿತ್ತು. ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಮತ್ತು ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ತಲಾ ನಾಲ್ಕು ಸ್ಥಾನಗಳನ್ನು ಗಳಿಸಿದರೆ, ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) ಒಂದು ಕ್ಷೇತ್ರವನ್ನು ಮಾತ್ರ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಬಿಜೆಪಿ 36.28 ರಷ್ಟು ಮತಗಳನ್ನು ಪಡೆದರೆ, ಕಾಂಗ್ರೆಸ್ 35.11 ರಷ್ಟು ಮತಗಳನ್ನು ಪಡೆದಿತ್ತು. ನಂತರ, ಬಿಜೆಪಿ ಎನ್. ಬಿರೇನ್ ಸಿಂಗ್ ನೇತೃತ್ವದಲ್ಲಿ ಸರ್ಕಾರ ರಚಿಸಲು ಎನ್‌ಪಿಪಿ, ಎನ್‌ಪಿಎಫ್ ಮತ್ತು ಎಲ್‌ಜೆಪಿ ಜೊತೆ ಮೈತ್ರಿ ಮಾಡಿಕೊಂಡಿತ್ತು.
ಇದನ್ನೂ ಓದಿ: ಯುಪಿ ಚುನಾವಣೆ: ಅಯೋಧ್ಯೆಯಲ್ಲಿ ಬದಿಗೆ ಸರಿದ ರಾಮಮಂದಿರ; ವ್ಯಾಪಾರಿಗಳ ಕೂಗು ಮುನ್ನಲೆಗೆ


